ಕೊಡಗಿನಲ್ಲಿ ಬಿಜೆಪಿ ಶಾಸಕದ್ವಯರು ನಿರ್ಮಿಸಿದ ದಾಖಲೆ

ಪುಟ್ಟ ಜಿಲ್ಲೆ ಕೊಡಗು ಮೊದಲಿನಿಂದಲೂ ಬಿಜೆಪಿಯ ಭದ್ರ ಕೋಟೆ. ಆದರೆ ಈ ಬಾರಿ ವೀರಾಜಪೇಟೆಯ ಹಾಲಿ ಶಾಸಕರಾಗಿರುವ ಕೆ ಜಿ ಬೋಪಯ್ಯ ಮತ್ತು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ ಎಂ ಪಿ ಅಪ್ಪಚ್ಚು ರಂಜನ್ ಅವರ ಸ್ಪರ್ಧೆಗೆ ಬಿಜೆಪಿ ಪಕ್ಷದೊಳಗಿನಿಂದಲೇ ತೀವ್ರ ವಿರೋಧ ಕಂಡು ಬಂದಿತ್ತು

ಪುಟ್ಟ ಜಿಲ್ಲೆ ಕೊಡಗು ಮೊದಲಿನಿಂದಲೂ ಬಿಜೆಪಿಯ ಭದ್ರ ಕೋಟೆ ಎಂದೇ ಹೆಸರಾಗಿದೆ. ಆದರೆ ಈ ಬಾರಿ ವೀರಾಜಪೇಟೆಯ ಹಾಲಿ ಶಾಸಕರಾಗಿರುವ ಕೆ ಜಿ ಬೋಪಯ್ಯ ಮತ್ತು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ ಎಂ ಪಿ ಅಪ್ಪಚ್ಚು ರಂಜನ್ ಅವರ ಸ್ಪರ್ದೆಗೆ ಬಿಜೆಪಿ ಪಕ್ಷದೊಳಗಿನಿಂದಲೇ ತೀವ್ರ ವಿರೋಧ ಕಂಡು ಬಂದಿತ್ತು. ಸಂಘ ಪರಿವಾರ ಮತ್ತು ಆರ್‌ಎಸ್‌ಎಸ್ ನಾಯಕರು ಕೂಡ ಅಭ್ಯರ್ಥಿಗಳ ಬದಲಾವಣೆಗಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು.

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರ ಬೆಂಬಲಿಗನೊಬ್ಬ ಆರ್‌ಎಸ್‌ಎಸ್ ವಿರುದ್ದ ಬಹಿರಂಗ ಪತ್ರಿಕಾ ಹೇಳಿಕೆ ನೀಡಿದ ನಂತರ ಆಂತರಿಕ ಭಿನ್ನಮತ ಮತ್ತಷ್ಟು ಉಲ್ಬಣಿಸಿತ್ತು. ಆದರೆ ಬಿಜೆಪಿ ಮೊದಲ ಪಟ್ಟಿಯಲ್ಲೇ ಅಪ್ಪಚ್ಚು ರಂಜನ್ ಟಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಿದ್ದರೆ ಕೆ ಜಿ ಬೋಪಯ್ಯ ಅವರು ಪರದಾಟ ಅನುಭವಿಸಿ ಕೊನೆಗೂ ಟಿಕೆಟ್‌ ಪಡೆಯುವಲ್ಲಿ ಯಶಸ್ವಿ ಆಗಿದ್ದರು.

ಪಕ್ಷದೊಳಗಿನ ಭಿನ್ನಮತದಿಂದಾಗಿ ಮಡಿಕೇರಿ ಕ್ಷೇತ್ರದಲ್ಲಿ ಅಪ್ಪಚ್ಚು ರಂಜನ್ ಸೋಲನ್ನು ಅನುಭವಿಸಲಿದ್ದಾರೆ ಎಂದೇ ಭಾವಿಸಲಾಗಿತ್ತು ಅಷ್ಟೇ ಅಲ್ಲ ಪತ್ರಿಕಾ ವರದಿ, ಟಿವಿಗಳ ಸಮೀಕ್ಷೆಯಲ್ಲೂ ಜೆಡಿಎಸ್‌ನ ಬಿ ಎ ಜೀವಿಜಯ ಅವರೇ ಗೆಲ್ಲುವ ಅಭ್ಯರ್ಥಿ ಎಂದು ಹೇಳಲಾಗಿತ್ತು. ಆದರೆ ಅಚ್ಚರಿ ಎಂಬಂತೆ ಈರ್ವರೂ ಶಾಸಕರೂ ಭಾರಿ ಅಂತರದೊಂದಿಗೆ ಗೆದ್ದು ಅಚ್ಚರಿ ಮೂಡಿಸಿದ್ದೇ ಅಲ್ಲದೆ ಜಿಲ್ಲೆಯ ಚುನಾವಣಾ ಇತಿಹಾಸದಲ್ಲಿ ಇದೊಂದು ದಾಖಲೆ ಕೂಡ ಆಗಿದೆ.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ ಜಿ ಬೋಪಯ್ಯ ಅವರು ೭೭,೯೪೪ ಮತಗಳನ್ನು ಪಡೆದರೆ ಸಮೀಪ ಸ್ಪರ್ದಿ ಕಾಂಗ್ರೆಸ್ ಅರುನ್ ಮಾಚಯ್ಯ ಅವರು ೬೪,೫೯೧ ಮತ ಪಡೆದಿದ್ದಾರೆ. ಜೆಡಿಎಸ್ ನ ಸಂಕೇತ್ ಪೂವಯ್ಯ ಅವರು ೧೧,೨೨೪ ಮತಗಳನ್ನು ಪಡೆದರು. ಬೋಪಯ್ಯ ಅವರು ೧೩,೩೩೫ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ೨೦೧೩ ರ ಚುನಾವಣೆಯಲ್ಲಿ ಬೋಪಯ್ಯ ಅವರು ೬೭,೨೫೦ ಮತಗಳನ್ನೂ ಇವರ ಸಮೀಪ ಸ್ಪರ್ದಿ ಕಾಂಗ್ರೆಸ್ ನ ಬಿದ್ದಾಟಂಡ ಪ್ರದೀಪ್ ಅವರು ೬೩,೮೩೬ ಮತಗಳನ್ನು ಪಡೆದಿದ್ದರು. ಗೆಲುವಿನ ಅಂತರ ಕೇವಲ ೩೪೧೪ ಆಗಿದ್ದು ಈ ಬಾರಿ ಗೆಲುವಿನ ಅಂತರ ೧೩,೩೩೫ ಆಗಿರುವುದು ಉತ್ತಮ ಸಾಧನೆ ಎಂದೇ ಹೇಳಬಹುದು.

ಇದನ್ನೂ ಓದಿ : ಚುನಾವಣಾ ಕಣ | ಬಿಜೆಪಿ ಟಿಕೆಟ್ ಸಿಗದೆ ಕೆ ಜಿ ಬೋಪಯ್ಯ ಅಸಮಾಧಾನ

ಮಡಿಕೇರಿ ಕ್ಷೇತ್ರದಲ್ಲಿ ೨೦೧೩ ರಲ್ಲಿ ಎಂ ಪಿ ಅಪ್ಪಚ್ಚು ರಂಜನ್ ಅವರು ೫೬,೬೯೬ ಮತಗಳನ್ನು ಪಡೆದಿದ್ದರೆ ಇವರ ಸಮೀಪ ಸ್ಪರ್ದಿ ಜೆಡಿಎಸ್ ನ ಬಿ ಏ ಜೀವಿಜಯ ಅವರು ೫೨೦೬೭ ಮತಗಳನ್ನು ಪಡೆದಿದ್ದರು. ಗೆಲುವಿನ ಅಂತರ ೪೬೨೯ ಆಗಿತ್ತು. ಆದರೆ ಮಹದಚ್ಚರಿ ಎಂಬಂತೆ ಈ ಬಾರಿ ಅಪ್ಪಚ್ಚು ರಂಜನ್ ಅವರು ೧೬,೩೨೨ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರಂಜನ್ ಅವರು ಒಟ್ಟು ೭೧,೩೦೮ ಮತ ಪಡೆದಿದ್ದರೆ, ಇವರ ಸಾಮಪ್ರದಾಯಿಕ ಎದುರಾಳಿ ಜೆಡಿಎಸ್ ನ ಬಿಏ ಜೀವಿಜಯ ಅವರು

೫೪,೯೮೬ ಮತಗಳನ್ನು ಪಡೆದರು. ಕಾಂಗ್ರೆಸ್ ನ ಕೆ ಪಿ ಚಂದ್ರಕಲಾ ಅವರು ೩೮,೩೫೯ ಮತ ಪಡೆದಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More