೧೦ ವರ್ಷಗಳಲ್ಲಿ ಮೊದಲ ಬಾರಿ ಕನಿಷ್ಠ ಸಂಖ್ಯೆಯ ಅಲ್ಪಸಂಖ್ಯಾತಅಭ್ಯರ್ಥಿಗಳ ಆಯ್ಕೆ

ವಿಧಾನಸಭಾ ಚುನಾವಣೆ ಮುಗಿದಿದೆ. ಈ ಚುನಾವಣೆಯಲ್ಲಿ ೨೨೪ ಸ್ಥಾನಗಳಲ್ಲಿ ೭ ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ೭ ಜನ ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಕಳೆದ ೧೦ ವರ್ಷದಲ್ಲಿ ಇದೇ ಮೊದಲ ಬಾರಿ ಕನಿಷ್ಠ ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ

ರಾಜ್ಯದಲ್ಲಿ ಕನಿಷ್ಠ ೧೯ ಕ್ಷೇತ್ರಗಳಲ್ಲಿ ಒಟ್ಟು ಶೇ ೩೦ರಷ್ಟು ಮುಸ್ಲಿಂ ಜನಸಂಖ್ಯೆ ಇದೆ. ಇಷ್ಟು ದೊಡ್ಡ ಸಂಖ್ಯೆಯ ಸಮುದಾಯವಿದ್ದೂ ಈ ಬಾರಿ ವಿಧಾನಸಭೆಗೆ ಆಯ್ಕೆಯಾದವರ ಸಂಖ್ಯೆ ಅತಿ ಕಡಿಮೆ. ವಿಧಾನಸಭಾ ಚುನಾವಣೆಯ ೨೨೪ ಸ್ಥಾನಗಳಲ್ಲಿ ಮುಸ್ಲಿಂ ಸಮುದಾಯದ ೭ ಜನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇಷ್ಟೂ ಅಭ್ಯರ್ಥಿಗಳೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದವರು.

ಕಳೆದ ೧೦ ವರ್ಷಗಳಲ್ಲಿ ಇದೇ ಮೊದಲ ಬಾರಿ ಇಷ್ಟು ಕಡಿಮೆ ಸಂಖ್ಯೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷ ೧೭ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಜೆಡಿಎಸ್ ಎಂಟು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಅಸಾದುದ್ದೀನ್‌ ಓವೈಸಿ ಅವರ ಆಲ್‌ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದುಲ್‌ ಮುಸ್ಲಿಂಮೀನ್ ಜೆಡಿಎಸ್‌ಗೆ ತನ್ನ ಬೆಂಬಲ ನೀಡಿತ್ತು. ಎಸ್‌ಡಿಪಿ, ಪಿಎಫ್ಐ(ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) ಮೂರು ಸ್ಥಾನಗಳಿಗೆ ಸ್ಪರ್ಧಿಸಿತ್ತು. ಬಿಜೆಪಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿರಲಿಲ್ಲ. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಭಯಚಂದ್ರ ಜೈನ್ ಅವರು ಜೈನ್‌ ಸಮುದಾಯದವರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್‌ ವಿರುದ್ಧ ಸ್ಪರ್ಧಿಸಿದ್ದ ಅವರು ೨೯,೭೯೯ ಮತಗಳ ಅಂತರ ಸೋಲನುಭವಿಸಿದ್ದಾರೆ.

ಉತ್ತರ ಕಲಬುರ್ಗಿಯಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಕಾಂತ ಪಾಟೀಲ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕನೀಜ್‌ ಫಾತಿಮಾ ೫,೯೪೦ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಒಟ್ಟು ೬೪,೩೧೧ ಮತ ಗಳಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಫಾತಿಮಾ ಪತಿ ಖಮರ್‌ ಉಲ್‌ ಇಸ್ಲಾಂ ೨೦೧೩ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಮುಸ್ಲಿಂ ಅಭ್ಯರ್ಥಿಗಳ ನಡುವೆ ಜಮೀರ್‌ ಅಹ್ಮದ್‌ ಖಾನ್ ಅತ್ಯಂತ ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬೆಂಗಳೂರು ನಗರದಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಮೀರ್‌ ಅವರು ಮಾಜಿ ಜೆಡಿಎಸ್‌ ಶಾಸಕ. ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಎಂ ಲಕ್ಷ್ಮೀ ನಾರಾಯಣ ಅವರನ್ನು ೩೩,೧೩೭ ಮತಗಳ ಅಂತರದಿಂದ ಸೋಲಿಸಿದ್ದಾರೆ. ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಪ್ರಾಥಮಿಕ ಹಾಗೂ ಪದವಿಪೂರ್ವ ಶಿಕ್ಷಣ ಸಚಿವರಾಗಿದ್ದ ತನ್ವೀರ್‌ ಸೇಠ್‌, ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಸತತ ಐದನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಸಂದೇಶ್‌ ಸ್ವಾಮಿ ಅವರನ್ನು ೧೮,೧೨೭ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.

ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿದ್ದ ಸಚಿವ ಯು ಟಿ ಅಬ್ದುಲ್ ಖಾದರ್ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸಂತೋ‍ಷ್‌ ಕುಮಾರ್‌ ರೈ ಅವರನ್ನು ೧೯,೭೩೭ ಮತಗಳ ಅಂತದಲ್ಲಿ ಸೋಲಿಸಿದ್ದಾರೆ. ಶಾಂತಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎನ್‌ ಎ ಹ್ಯಾರಿಸ್‌, ಕೆ ವಾಸುದೇವ ಮೂರ್ತಿ ಅವರನ್ನು ೧೮,೨೦೫ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಮತ ಎಣಿಕೆಯ ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ ಹ್ಯಾರಿಸ್ ನಂತರದಲ್ಲಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ವಿರುದ್ಧ ಸ್ಪರ್ಧಿಸಿದ್ದ ರೋಶನ್ ಬೇಗ್‌ ೧೫,೦೪೦ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಬೀದರ್‌ನಲ್ಲಿ ರಹೀಂ ಖಾನ್, ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಅವರನ್ನು ೧೦೨೪೫ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.

ಬೆಳಗಾಂ ಉತ್ತರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಫೈರೂಸ್ ನೂರುದ್ದೀನ್‌ ಸೇಠ್‌, ಬಿಜೆಪಿ ಅಭ್ಯರ್ಥಿ ಅನಿಲ್ ಎಸ್‌ ವಿರುದ್ಧ ಸ್ಪರ್ಧಿಸಿದ್ದರು. ೧೭೨೪೦ ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಬಿ ಎ ಮೊಯಿದಿನ್ ಬಾವಾ ಬಿಜೆಪಿ ಅಭ್ಯರ್ಥಿ ಭರತ್‌ ಶೆಟ್ಟಿ ವಿರುದ್ಧ ಸೋಲನುಭವಿಸಿದ್ದಾರೆ.

೨೦೧೩ರಲ್ಲಿ ಗಂಗಾವತಿಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಇಕ್ಬಾಲ್ ಅನ್ಸಾರಿ, ಬಿಜೆಪಿ ಅಭ್ಯರ್ಥಿ ಪರಣ್ಣ ಈಶ್ವರಪ್ಪ ಅವರೆದುರು ೭,೯೭೩ ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು. ೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ೯ ಹಾಗೂ ೨೦೧೩ರಲ್ಲಿ ೧೧ ಜನ ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇದರಲ್ಲಿ ಒಂಬತ್ತು ಜನ ಕಾಂಗ್ರೆಸ್‌ ಹಾಗೂ ೨ ಅಭ್ಯರ್ಥಿಗಳು ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ೧೯೭೮ರಲ್ಲಿ ೧೬ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಅತ್ಯಂತ ಕಡಿಮೆ ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗಿದ್ದು ೧೯೮೩ರಲ್ಲಿ. ಆ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಮುಸ್ಲಿಂ ಸಮುದಾಯದಿಂದ ಆಯ್ಕೆಯಾಗಿದ್ದರು.

ಮಹಿಳಾ ಅಭ್ಯರ್ಥಿಗಳೂ ಕಡಿಮೆ

ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಒಟ್ಟು ೨೬೫೫ ಅಭ್ಯರ್ಥಿಗಳಲ್ಲಿ ೨೧೯ ಮಹಿಳಾ ಅಭ್ಯರ್ಥಿಗಳಿದ್ದರು. ಅವರಲ್ಲಿ ೭ ಜನ ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ೨೦೧೩ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ೧೭೦ ಮಹಿಳಾ ಅಭ್ಯರ್ಥಿಗಳಿದ್ದರು. ಕಳೆದ ಚುನಾವಣೆಗೆ ಹೋಲಿಸಿದಲ್ಲಿ ಈ ಬಾರಿ ಹೆಚ್ಚಿನ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ ಪುರುಷ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ೨೦೧೩ರಲ್ಲಿ ೨೭೭೮ ಅಭ್ಯರ್ಥಿಗಳಿದ್ದು, ಈ ಬಾರಿ ೨೪೩೬ ಪುರುಷ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಉತ್ತರ ಕಲಬುರ್ಗಿಯಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಕಾಂತ ಪಾಟೀಲ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಖಮರುಲ್‌ ಇಸ್ಲಾಂ ಪತ್ನಿ, ಕನೀಜ್‌ ಫಾತಿಮಾ ೫,೯೪೦ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಒಟ್ಟು ೬೪,೩೧೧ ಮತ ಗಳಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಶಿಕಲಾ ಜೊಲ್ಲೆ ೮೭೦೦೬ ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಾಕಸಾಹೇಬ ಪಾಟೀಲ ಅವರನ್ನು ೮,೫೦೬ ಮತಗಳಿಂದ ಸೋಲಿಸಿದ್ದಾರೆ. ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವು ಸಾಧಿಸಿತ್ತು.

ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ ಸಂಜಯ ಪಾಟೀಲ ಅವರನ್ನು ೫೧೭೨೪ ಮತಗಳ ಅಂತರದಲ್ಲಿ ಸೋಲಿಸಿದ ಲಕ್ಷ್ಮೀ ಅವರು ೧೦೨೦೪೦ ಮತಗಳನ್ನು ಪಡೆದಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಖಾನಾಪುರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಂಜಲಿ ನಿಂಬಾಳ್ಕರ ೩೬೬೪೯ ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ವಿಠ್ಠಲ ಹಲಗೇಕರ ಅವರನ್ನು ೫೧೩೩ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದರು.

ಇದನ್ನೂ ಓದಿ : ಕಾಂಗ್ರೆಸ್ ಮತಬುಟ್ಟಿ ಚುದುರಿಸಲಿವೆಯೇ ಮುಸ್ಲಿಂ ರಾಜಕೀಯ ಪಕ್ಷಗಳು?

ಕಾರವಾರದಲ್ಲಿ ರೂಪಾಲಿ ನಾಯಕ ಬಿಜೆಪಿಯಿಂದ ಸ್ಪರ್ಧಿಸಿದ್ದರು. ೬೦೩೩೯ ಮತಗಳನ್ನು ಪಡೆದ ಅವರು ಪ್ರತಿಸ್ಪರ್ಧಿ ಜೆಡಿಎಸ್‌ನ ಆನಂದ ಅಸ್ನೋಟಿಕರ್ ಅವರನ್ನು ೧೪೦೬೪ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದರು. ಹಿರಿಯೂರಿನಲ್ಲಿ ಬಿಜೆಪಿ ಅಭ್ಯರ್ಥಿ ಕೆ ಪೂಣಿಮಾ ೭೭೭೩೩ ಮತಗಳನ್ನು ಗಳಿಸಿದ್ದು, ೧೨೮೭೫ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ ಸುಧಾಕರ ಅವರನ್ನು ಸೋಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಆಯ್ಕೆಯಾಗಿತ್ತು.

ಕೆಜಿಎಫ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂ ರೂಪಕಲಾ, ೭೦೭೧೫ ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್‌ ಅಶ್ವಿನಿ ವಿರುದ್ಧ ೪೦೭೬೮ ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಆಯ್ಕೆಯಾಗಿತ್ತು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More