೧೫ನೇ ವಿಧಾನಸಭೆ ಪ್ರವೇಶಿಸಲಿರುವ ಹೊಸಬರು ಯಾರ್ಯಾರು, ಹಿನ್ನೆಲೆ ಏನು?

ಕರ್ನಾಟಕದ ೧೫ನೇ ವಿಧಾನಸಭೆ ಅಸ್ತಿತ್ವಕ್ಕೆ ತರುವ ಸಂಬಂಧ ರಾಜಕೀಯ ಜಂಗೀ ಕುಸ್ತಿ ನಡೆಯುತ್ತಿದೆ. ಇದೇ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಲು ಸಜ್ಜಾಗಿರುವ ೫೫ಕ್ಕೂ ಹೆಚ್ಚು ಹೊಸಬರು ಇದೆಲ್ಲವನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಈ ಹೊಸಬರ ಕುರಿತ ಮಾಹಿತಿ ಇಲ್ಲಿದೆ

ಕರ್ನಾಟಕದ ೧೫ನೇ ವಿಧಾನಸಭೆಗೆ ಈ ಬಾರಿ ೫೫ಕ್ಕೂ ಹೆಚ್ಚು ಹೊಸ ಮುಖಗಳು ಪ್ರವೇಶ ಮಾಡುತ್ತಿವೆ. ಈ ಪೈಕಿ ಕೆಲವರು ಯುವಕರು, ತಮ್ಮದೇ ಕನಸು ಹೊಂದಿದವರು. ಈ ಮೊದಲು ಹಲವು ಚುನಾವಣೆಯಲ್ಲಿ ಸೆಣಸಿ, ಸತತ ಸೋಲು ಕಂಡು ಅಂತೂ ಗೆಲುವಿನ ನಗೆ ಬೀರಿದ ಹಿರಿಯರೂ ಇದ್ದಾರೆ. ರಾಜಕಾರಣಿಗಳ ಮಕ್ಕಳು, ಸಂಬಂಧಿಗಳು, ಅನುಕಂಪದ ಆಧಾರದ ಮೇಲೆ ಗೆದ್ದವರು, ಉತ್ಸಾಹಿ ಮಹಿಳೆಯರು, ಪ್ರಬಲ ಸವಾಲೊಡ್ಡಿ ಘಟಾನುಘಟಿಗಳನ್ನು ಸೋಲಿಸಿದವರು, ಹಣ-ಜಾತಿ ಬಲವನ್ನು ಹೇರಳವಾಗಿ ಬಳಸಿ “ಯೋಗ್ಯ’’ರನ್ನು ಮಣಿಸಿದವರು, ವಿವಿಧ ವೃತ್ತಿ ಕಾಳಜಿ ಇರುವವರು, ರಿಯಲ್‌ ಎಸ್ಟೇಟ್, ಮರಳು ಮುಂತಾದ ದಂಧೆಯಲ್ಲಿ ದುಡ್ಡು ಮಾಡಿದವರು ಎಲ್ಲರೂ ಇದ್ದಾರೆ. ಮೈಸೂರು, ದಕ್ಷಿಣ ಕನ್ನಡ ಭಾಗದಿಂದ ಹೆಚ್ಚು “ಹೊಸ ಮುಖ’’ಗಳು ಶಾಸನ ಸಭೆ ಪ್ರವೇಶ ಮಾಡುತ್ತಿರುವುದು ವಿಶೇಷ. ಇವರೆಲ್ಲರ ವೃತ್ತಿ, ಪ್ರವೃತ್ತಿ ಹಿನ್ನೆಲೆ ಏನೇ ಇರಲಿ. ಶಾಸನ ಸಭೆ ಪ್ರವೇಶಿಸಿದ ನಂತರ ಒಳೆಯವರಾಗಿ ಉಳಿಯಲಿ; ಒಳ್ಳೆಯವರಾಗಿ ಬೆಳೆಯಲಿ; ಜನಹಿತದ ಕೆಲಸಕ್ಕೆ ಪ್ರಾಧಾನ್ಯತೆ ನೀಡಲಿ ಎಂದು ಆಶಿಸೋಣ. ಹೊಸ ಶಾಸಕರ ಕುರಿತ ಕಿರು ಮಾಹಿತಿ ಇಲ್ಲಿದೆ:

ಮೈಸೂರು/ ಚಾಮರಾಜನಗರ/ಮಂಡ್ಯ/ ಹಾಸನ

೧. ಆರ್ ಅಶ್ವಿನ್‌ ಕುಮಾರ್ (ಜೆಡಿಎಸ್): ತಿ.ನರಸೀಪುರದಲ್ಲಿ ಸಚಿವ ಎಚ್‌.ಸಿ.ಮಹದೇವಪ್ಪ ಅವರನ್ನು ೨೮,೪೭೮ ಮತಗಳಿಂದ ಮಣಿಸಿದ್ದಾರೆ. ಜಿಪಂ ಸದಸ್ಯರಾಗಿದ್ದವರು. ದುರ್ಬಲ ಅಭ್ಯರ್ಥಿಯಂತೆ ಕಂಡಿದ್ದರಾದರೂ, ಸಚಿವರು ಮತ್ತವರ ಪುತ್ರನ ವಿರುದ್ಧ ಸಿಟ್ಟಿಗೆದ್ದಿದ್ದ ಜನರೇ ಅಶ್ವಿನ್ ಸ್ಪರ್ಧೆಗೆ ಬಲ ತುಂಬಿದ್ದರು.

೨.ಅನಿಲ್‌ ಚಿಕ್ಕಮಾದು (ಕಾಂಗ್ರೆಸ್): ಎಚ್‌.ಡಿ.ಕೋಟೆಯಲ್ಲಿ ಜೆಡಿಎಸ್ ಶಾಸಕರಾಗಿದ್ದ ಚಿಕ್ಕಮಾದು ನಿಧನ ನಂತರ ಅವರ ಪುತ್ರನನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಅನುಕಂಪದ ಲಾಭ ಪಡೆದ ಅನಿಲ್, ಜೆಡಿಎಸ್ ನ ಚಿಕ್ಕಣ ಅವರನ್ನು (೨೨,೦೯೩) ಮಣಿಸಿದರು.

೩.ಹರ್ಷವರ್ಧನ (ಬಿಜೆಪಿ): ಇವರು ವಿ ಶ್ರೀನಿವಾಸ ಪ್ರಸಾದ್ ಅಳಿಯ. ನಂಜನಗೂಡಿನಲ್ಲಿ ಕಳಲೆ ಕೇಶವಮೂರ್ತಿಯವರನ್ನು ೧೨,೪೯೭ ಮತಗಳಿಂದ ಮಣಿಸಿ, ಉಪಚುನಾವಣೆಯಲ್ಲಿ ತಮ್ಮ ಮಾವನ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.

೪. ಡಾ. ಯತೀಂದ್ರ (ಕಾಂಗ್ರೆಸ್): ಸಿದ್ದರಾಮಯ್ಯ ಪುತ್ರ ಯತೀಂದ್ರ ವರುಣಾದಲ್ಲಿ ತಮ್ಮ ಎದುರಾಳಿ ತೋಟದಪ್ಪ ಬಸವರಾಜು (ಬಿಜೆಪಿ) ಅವರಿಗಿಂತ ೫೮,೬೧೬ ಮತ ಹೆಚ್ಚು ಪಡೆದು, ತಂದೆಯ ಸೋಲಿನ ನೋವನ್ನು ತುಸು ಕಡಿಮೆ ಮಾಡಿದ್ದಾರೆ.

೫. ಎಲ್‌.ನಾಗೇಂದ್ರ (ಬಿಜೆಪಿ): ಮೈಸೂರು ನರಸಿಂಹರಾಜ ಕ್ಷೇತ್ರದಲ್ಲಿ ಕಳೆದ ಅವಧಿ ಸ್ಪರ್ಧಿಸಿ ಸೋತಿದ್ದ ನಾಗೇಂದ್ರ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ವಾಸು ಅವರನ್ನು ೧೪,೯೩೬ಮತಗಳಿಂದ ಮಣಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ.

೬. ಕೆ.ಮಹದೇವ ( ಜೆಡಿಎಸ್): ಪಿರಿಯಾಪಟ್ಟಣದಲ್ಲಿ ಸತತವಾಗಿ ಸೋಲುತ್ತಿದ್ದ ಇವರು, ೭,೪೨೪ ಮತಗಳಿಂದ ಮಾಜಿ ಸಚಿವ ಕೆ.ವೆಂಕಟೇಶ್ ಅವರನ್ನು ಮಣಿಸಿದ್ದಾರೆ.

೭.ಎನ್‌ ಮಹೇಶ್( ಬಿಎಸ್ಪಿ): ಕೊಳ್ಳೇಗಾಲದಲ್ಲಿ ನಿರಂತರ ಸೋಲುತ್ತಿದ್ದ ,ತಮ್ಮಂತೇ ಸೋಲಿನ ಸುಳಿಯಲ್ಲಿರುವ ಎ.ಆರ್‌.ಕೃಷ್ಣಮೂರ್ತಿ (ಕಾಂಗ್ರೆಸ್) ಅವರನ್ನು ೧೯,೪೫೪ ಮತಗಳಿಂದ ಮಣಿಸಿ, ಕರ್ನಾಟಕ ವಿಧಾನಸಭೆಗೆ (ಬಿಎಸ್‌ಪಿ) “ಆನೆ’’ ಪ್ರವೇಶ ಮಾಡಿಸಿದ್ದಾರೆ.

೮. ನಿರಂಜನಕುಮಾರ್( ಬಿಜೆಪಿ): ಗುಂಡ್ಲುಪೇಟೆಯಲ್ಲಿ ಮಹದೇವಪ್ರಸಾದ್ ವಿರುದ್ಧ ಮೂರು ಬಾರಿ, ಅವರ ಪತ್ನಿ ಗೀತಾ ವಿರುದ್ಧ ಉಪಚುನಾವಣೆಯಲ್ಲಿ ಸೋತಿದ್ದ ನಿರಂಜನ್ ,೧೬,೬೮೪ ಮತಗಳ ಅಂತರದಿಂದ ಗೆಲುವು ದಕ್ಕಿಸಿಕೊಂಡಿದ್ದಾರೆ.

೯. ಎ.ಎಸ್.ರವೀಂದ್ರ ಶ್ರೀಕಂಠಯ್ಯ(ಜೆಡಿಎಸ್): ಶ್ರೀರಂಗಪಟ್ಟಣದಲ್ಲಿ ಸತತ ಸೋಲುತ್ತಿದ್ದ ರವೀಂದ್ರ ಕುಟುಂಬದ ಸಾಂಪ್ರದಾಯಿಕ ಎದುರಾಳಿ ರಮೇಶ್ ಬಂಡಿಸಿದ್ದೇಗೌಡರನ್ನು ೪೩,೬೮೮ ಮತಗಳ ಭಾರೀ ಅಂತರದಿಂದ ಮಣಿಸಿ ವಿಧಾನಸಭೆ ಪ್ರವೇಶದ ಕನಸು ನನಸು ಮಾಡಿಕೊಂಡಿದ್ದಾರೆ.

೧೦. ಪ್ರೀತಂಗೌಡ (ಬಿಜೆಪಿ): ಹಾಸನದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದ ಎಚ್‌.ಎಸ್. ಪ್ರಕಾಶ್ ಅವರನ್ನು ೧೩,೦೦೬ಮತಗಳಿಂದ ಮಣಿಸಿ, ಜೆಡಿಎಸ್ ಕೋಟೆಯಲ್ಲಿ ಕಮಲ ಅರಳಿಸಿದ್ದಾರೆ.

೧೧. ಕೆ.ಎಸ್.ಲಿಂಗೇಶ್ (ಜೆಡಿಎಸ್): ಬೇಲೂರಿನಲ್ಲಿ ಶಾಸಕರಾಗಿದ್ದ ರುದ್ರೇಶ್ ಗೌಡರ ನಿಧನದ ಅನುಕಂಪ ಇದ್ದರೂ, ಅವರ ಪತ್ನಿ ಕೀರ್ತನಾ (ಕಾಂಗ್ರೆಸ್) ಮತ್ತು ಬಿಜೆಪಿಯ ಹುಲ್ಲಳ್ಳಿ ಸುರೇಶ್ ಅವರನ್ನು ಮಣಿಸಿದ್ದಾರೆ ಲಿಂಗೇಶ್. ಅಂತರ: ೧೯,೫೪೪.

ಇದನ್ನೂ ಓದಿ : ಹೆಚ್ಚು ಮಾತನಾಡದ, ಏನನ್ನೂ ಮರೆಯದ ದೇವೇಗೌಡರ ತಲೆ ಹೇಗೆ ಓಡುತ್ತೆ? 

ದಕ್ಷಿಣ ಕನ್ನಡ /ಉಡುಪಿ ಜಿಲ್ಲೆ/ ಉತ್ತರ ಕನ್ನಡ

೧೨. ಹರೀಶ್ ಪೂಂಜಾ (ಬಿಜೆಪಿ): ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವಸಂತ ಬಂಗೇರ ಅವರನ್ನು ೨೨,೯೭೪ ಮತಗಳಿಂದ ಮಣಿಸಿದ್ದಾರೆ.

೧೩.ಉಮಾನಾಥ್ ಕೋಟ್ಯಾನ್ ( ಬಿಜೆಪಿ): ಮೂಡುಬಿದಿರೆಯಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಅವರನ್ನು ೨೯,೭೯೯ ಮತಗಳಿಂದ ಸೋಲಿಸಿದವರು.

೧೪.ಡಾ ವೈ ಭರತ್‌ ಶೆಟ್ಟಿ (ಬಿಜೆಪಿ): ಕತೂಹಲ ಕೆರಳಿಸಿದ್ದ ಮಂಗಳೂರು ನಗರ ಉತ್ತರದಲ್ಲಿ ಬಿ.ಎ.ಮೊಹಿಯುದ್ದೀನ್‌ ಬಾವ (ಕಾಂಗ್ರೆಸ್)ಗೆ ವಿರಾಮ ನೀಡಿದ್ದಾರೆ. ಅಂತರ:೨೬,೬೪೮.

೧೫. ವೇದವ್ಯಾಸ ಕಾಮತ್( ಬಿಜೆಪಿ): ಮಂಗಳೂರು ನಗರ ದಕ್ಷಿಣದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಜೆ.ಆರ್‌.ಲೋಬೋ ಅವರನ್ನು ೧೬,೦೭೫ ಮತಗಳಿಂದ ಮಣಿಸಿದ್ದಾರೆ.

೧೬. ಯು.ರಾಜೇಶ್ ನಾಯಕ್( ಬಿಜೆಪಿ): ಬಂಟ್ವಾಳದಲ್ಲಿ ಪ್ರಭಾವಿ ಸಚಿವ ಬಿ.ರಮಾನಾಥ ರೈ ಅವರಿಗೆ ೧೫,೯೭೧ ಮತಗಳಿಂದ ಸೋಲುಣಿಸಿದವರು ಈ ಯುವ ಹುರಿಯಾಳು

೧೭. ಸಂಜೀವ ಮಠಂದೂರು( ಬಿಜೆಪಿ): ಪುತ್ತೂರಿನಲ್ಲಿ ಕಾಂಗ್ರೆಸ್‌ನ ಶಕುಂತಳಾ ಟಿ.ಶೆಟ್ಟಿ ಅವರನ್ನು ೧೯,೪೭೭ಮತಗಳಿಂದ ಸೋಲಿಸಿ,ಪರಿವಾರದ ಸಂಭ್ರಮಕ್ಕೆ ಕಾರಣರಾದವರು.

೧೮. ಬಿ ಎಂ ಸುಕುಮಾರ್ ಶೆಟ್ಟಿ (ಬಿಜೆಪಿ): ಬೈಂದೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೋಪಾಲ ಪೂಜಾರಿ ಅವರನ್ನು ೨೪,೩೯೩ ಮತಗಳಿಂದ ಮಣಿಸಿದ್ದಾರೆ.

೧೯. ರೂಪಾಲಿ ನಾಯಕ್ (ಬಿಜೆಪಿ): ಕಾರವಾರದಲ್ಲಿ ಆನಂದ ಅಸ್ನೋಟಿಕರ್‌ (ಜೆಡಿಎಸ್) ಮತ್ತು ಸತೀಶ್ ಸೈಲ್‌ (ಕಾಂಗ್ರೆಸ್) ಅವರಂತ ಪ್ರಬಲರಿಗೆ ಸೋಲುಣಿಸಿದ್ದಾರೆ. ಅಂತರ: ೧೪,೦೬೪. ತಾಲೂಕು ಪಂಚಾಯಿತಿ ರಾಜಕೀಯದಲ್ಲಿದ್ದ ರೂಪಾಲಿ ೬ ತಿಂಗಳ ಹಿಂದಷ್ಟೆ ಬಿಜೆಪಿಗೆ ಸೇರಿದವರು.

ಚಿಕ್ಕಮಗಳೂರು/ ಶಿವಮೊಗ್ಗ/ ದಾವಣಗೆರೆ/ ಚಿತ್ರದುರ್ಗ

೨೦. ಬೆಳ್ಳಿ ಪ್ರಕಾಶ್ (ಬಿಜೆಪಿ): ಕಡೂರಿನಲ್ಲಿ ಇವರು ಎಬ್ಬಿಸಿದ ಅಬ್ಬರಕ್ಕೆ ಸರಳ, ಸಜ್ಜನ ರಾಜಕಾರಣಿ ವೈ.ಎಸ್.ವಿ.ದತ್ತ (ಜೆಡಿಎಸ್)೧೫,೩೭೨ಮತಗಳಿಂದ ಮಣಿದಿದ್ದಾರೆ. ಪ್ರಕಾಶ್ ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದರು.

೨೧. ಟಿ ಡಿ ರಾಜೇಗೌಡ (ಕಾಂಗ್ರೆಸ್): ಶೃಂಗೇರಿಯಲ್ಲಿ ಬಿಜೆಪಿಯ ಡಿ.ಎನ್.ಜೀವರಾಜ್‌ ಅವರನ್ನು ೧,೯೮೯ ಮತ ಅಂತರದಿಂದ ಮಣಿಸಿ ಕಳೆದ ಬಾರಿಯ ಸೋಲಿನ ಕಹಿ ಮರೆತಿದ್ದಾರೆ.

೨೨. ಕೆ ಬಿ ಅಶೋಕ್‌ ನಾಯ್ಕ್ (ಬಿಜೆಪಿ): ಶಿವಮೊಗ್ಗ ಗ್ರಾಮೀಣದಲ್ಲಿ ಜನ ಮನ್ನಣೆ ಗಳಿಸಿದ್ದ ಜೆಡಿಎಸ್ ನ ಶಾರದಾ ಪೂರ್ಯಾನಾಯ್ಕ್ ರನ್ನು ೩,೭೭೭ ಮತಗಳಿಂದ ಸೋಲಿಸಿದ್ದಾರೆ.

೨೩. ಎಸ್ ರಾಮಪ್ಪ (ಕಾಂಗ್ರೆಸ್): ಹರಿಹರದಲ್ಲಿ ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿ ಶಿವಶಂಕರ್‌ ವಿರುದ್ಧ ಸೋತಿದ್ದ ರಾಮಪ್ಪ, ಈ ಬಾರಿ ಬಿಜೆಪಿಯ ಬಿ.ಪಿ.ಹರೀಶ್ ಮತ್ತು ಶಿವಶಂಕರ್‌ ಮಣಿಸಿದ್ದಾರೆ.ಅಂತರ: ೭,೨೬೦.

೨೪. ಪ್ರೊ ಲಿಂಗಣ್ಣ (ಬೆಜೆಪಿ): ಮಾಯಕೊಂಡದಲ್ಲಿ ಕಾಂಗ್ರೆಸ್‌ ನ ಕೆ.ಎಸ್.ಬಸವರಾಜ ಅವರನ್ನು ೬,೪೫೮ ಮತಗಳಿಂದ ಸೋಲಿಸಿದ್ದಾರೆ.

೨೫. ಕೆ ಪೂರ್ಣಿಮಾ ಶ್ರೀನಿವಾಸ್( ಬಿಜೆಪಿ):ಮಾಜಿ ಸಚಿವ ಎ.ಕೃಷ್ಣಪ್ಪ ಪುತ್ರಿ ಪೂರ್ಣಿಮಾ ಹಿರಿಯೂರಿನಲ್ಲಿ ಕಾಂಗ್ರೆಸ್ ನ ಡಿ.ಸುಧಾಕರ್‌ ಅವರನ್ನು ೧೨,೮೭ ೫ಮತಗಳಿಂದ ಮಣಿಸಿದರು.

ಕೊಪ್ಪಳ್ಳ/ ಹಾವೇರಿ/ ರಾಯಚೂರು/ಧಾರವಾಡ

೨೬. ಬಸವರಾಜ ಧಡೇಸುಗೂರು (ಬಿಜೆಪಿ): ಕನಕಗಿರಿಯಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಅವರನ್ನು ೧೪,೨೨೫ ಮತಗಳ ಅಂತರದಿಂದ ಸೋಲಿಸಿದರು.

೨೭. ಆರ್ ಶಂಕರ್ (ಕೆಪಿಜೆಪಿ) ‌:ವಿಧಾನಸಭೆ ಸ್ಪೀಕರ್‌ ಆಗಿದ್ದ ಕೆ.ಬಿ.ಕೋಳಿವಾಡ ಅವರಿಗೆ ೪,೩೩೮ ಮತಗಳಿಂದ ಸೋಲುಣಿಸಿದವರು ಆರ್.ಶಂಕರ್‌ (ಕೆಪಿಜೆಪಿ). ಇವರು ಸಿದ್ದರಾಮಯ್ಯ ಆಪ್ತ ಎನ್ನುವುದು ಈಗ ಕೋಳಿವಾಡರ ಕೋಪಕ್ಕೆ ಕಾರಣವಾಗಿದೆ.

೨೮. ಬಸನಗೌಡ ದದ್ದಲ್ (ಕಾಂಗ್ರೆಸ್): ರಾಯಚೂರು ಗ್ರಾಮೀಣದಲ್ಲಿ ಬಿಜೆಪಿಯ ತಿಪ್ಪರಾಜ ಹವಾಲ್ದಾರ್ (೯,೯೬೪ ಅಂತರ) ಅವರನ್ನು ಮಣಿಸಿದ್ದಾರೆ.

೨೯.ಹಾಲಪ್ಪ ಆಚಾರ್ (ಬಿಜೆಪಿ): ಯಲಬುರ್ಗದಲ್ಲಿ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಅವರನ್ನು ೧೩,೩೧೮ ಮತಗಳಿಂದ ಮಣಿಸಿದ್ದಾರೆ.

೩೦. ವಿರುಪಾಕ್ಷಪ್ಪ ರುದ್ರಪ್ಪ ಬಳ್ಳಾರಿ (ಬಿಜೆಪಿ) :ಬ್ಯಾಡಗಿಯಲ್ಲಿ ಕಾಂಗ್ರೆಸ್ ನ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲರನ್ನು ೨೧,೨೭೧ ಮತಗಳಿಂದ ಮಣಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ.

೩೧.ದುರ್ಗಪ್ಪ ಎಸ್ ಹೊಲಗೇರಿ (ಕಾಂಗ್ರೆಸ್): ಲಿಂಗಸಗೂರಿನಲ್ಲಿ ಜೆಡಿಎಸ್ ನ ಸಿದ್ದು ಬಂಡಿ ಮತ್ತು ಬಿಜೆಪಿಯ ಮಾನಪ್ಪ ವಜ್ಜಲ್‌ ರನ್ನು ಮಣಿಸಿದ್ದಾರೆ. ಅಂತರ:೪,೯೪೬

೩೨. ಅಮೃತ ದೇಸಾಯಿ (ಬಿಜೆಪಿ): ಧಾರವಾಡದಲ್ಲಿ ಪ್ರಭಾವಿ ಸಚಿವ ವಿನಯಕುಲಕರ್ಣಿ ಅವರಿಗೆ ೨೦,೩೪೦ ಮತಗಳಿಂದ ಸೋಲಿನ ನೀರು ಕುಡಿಸಿದವರು.

೩೩. ಜೆ.ಎನ್‌.ಗಣೇಶ್ (ಕಾಂಗ್ರೆಸ್): ಕಂಪ್ಲಿಯಲ್ಲಿ ಗಣಿ ರೆಡ್ಡಿ ಬಳಗದ ಸುರೇಶ್ ಬಾಬು ಯನ್ನು ೫,೫೫೫ ಮತಗಳಿಂದ ಮಣಿಸಿದ್ದಾರೆ.

ತುಮಕೂರು/ ಕೋಲಾರ/ ಬೆಂ.ಗ್ರಾಮಾಂತರ/ ಬೆಂ.ನಗರ/ರಾಮನಗರ

೩೪. ಮಸಾಲ ಜಯರಾಮ್‌ (ಬಿಜೆಪಿ): ತುರುವೇಕೆರೆಯಲ್ಲಿ ಜೆಡಿಎಸ್ ನ ಎಂ.ಟಿ.ಕೃಷ್ಣಪ್ಪ ಸೋಲಿಗೆ ಮಸಾಲೆ ಅರೆದಿದ್ದಾರೆ. ಅಂತರ:೨,೦೪೯

೩೫.ಎಂ ವಿ ವೀರಭದ್ರಯ್ಯ (ಜೆಡಿಎಸ್) : ಮಧುಗಿರಿಯಲ್ಲಿ ಕಾಂಗ್ರೆಸ್ ನ ಕೆ.ಎನ್‌.ರಾಜಣ್ಣ ಗೆ ೧೮,೫೭೪ ಮತಗಳಿಂದ ಸೋಲುಣಿಸಿದ್ದಾರೆ.

೩೬.‌ ಡಾ ಎಚ್‌.ಡಿ. ರಂಗನಾಥ್ (ಕಾಂಗ್ರೆಸ್): ಕುಣಿಗಲ್‌ ನಲ್ಲಿ ಬಿಜೆಪಿ (ಡಿ.ಕೃಷ್ಣಕುಮಾರ್ )ಮತ್ತು ಜೆಡಿಎಸ್‌ ಗೆ (ಡಿ.ನಾಗರಾಜಯ್ಯ)ಗೆ ಸೋಲಿನ ಕುಣಿಕೆ ಹಾಕಿದ್ದಾರೆ. ಅಂತರ:೫,೬೦೦.

೩೭. ಆರ್.ಮಂಜುನಾಥ್ (ಜೆಡಿಎಸ್): ದಾಸರಹಳ್ಳಿಯಲ್ಲಿ ಬಿಜೆಪಿಯ ಎಸ್‌.ಮುನಿರಾಜು ಅವರನ್ನು ೧೦,೬೭೫ ಮತಗಳಿಂದ ಮಣಿಸಿದ್ದಾರೆ.

೩೮. ಉದಯ್‌ ಗರುಡಾಚಾರ್( ಬಿಜೆಪಿ): ಚಿಕ್ಕಪೇಟೆಯಲ್ಲಿ ಪ್ರಭಾವಿ ಕಾಂಗ್ರೆಸ್ ಶಾಸಕ ಆರ್‌.ವಿ.ದೇವರಾಜ್‌ ಅವರನ್ನು ೭,೯೩೪ ಮತಗಳಿಂದ ಸೋಲಿಸಿದ್ದಾರೆ.

೩೯. ಎಚ್ ನಾಗೇಶ್ (ಪಕ್ಷೇತರ/ಕಾಂಗ್ರೆಸ್ ಬೆಂಬಲಿತ) : ಮುಳುಬಾಗಿಲಿನಲ್ಲಿ ಕೊತ್ತನೂರು ಮಂಜುನಾಥ್ ಉಮೇದುವಾರಿಕೆ ತಿರಸ್ಕೃತವಾಗಿದ್ದರಿಂದ ಕಾಂಗ್ರೆಸ್ ಬೆಂಬಲ ಪಡೆದ ನಾಗೇಶ್, ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರನ್ನು ೭,೦೧೧ಮತದಿಂದ ಮಣಿಸಿದ್ದಾರೆ.

೪೦. ರೂಪಕಲಾ ಶಶಿಧರ್ (ಕಾಂಗ್ರೆಸ್): ಕೆಜಿಎಫ್‌ ನಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಪುತ್ರಿ ರೂಪಕಲಾ ಶಶಿಧರ್ ಬಿಜೆಪಿಯ ಅಶ್ವಿನಿ ಸಂಪಂಗಿ ಅವರನ್ನು ೪೦,೭೬೮ ಮತಗಳ ಭಾರೀ ಅಂತರದಿಂದ ಸೋಲಿಸಿದ್ದಾರೆ.

೪೧. ಕೆ ವೈ ನಂಜೇಗೌಡ (ಕಾಂಗ್ರೆಸ್): ಮಾಲೂರಿನಲ್ಲಿ ಜೆಡಿಎಸ್‌ ನ ಮಂಜುನಾಥ ಗೌಡ ಮತ್ತು ಬಿಜೆಪಿಯ ಎಸ್.ಎನ್‌.ಕೃಷ್ಣಯ್ಯ ಶೆಟ್ಟಿ ಅವರಂತ ಪ್ರಬಲರ ತಂತ್ರಗಳನ್ನು ಮಣಿಸಿದ್ದಾರೆ. ಅಂತರ: ೧೭,೮೦೫.

೪೨. ನಿಸರ್ಗ ನಾರಾಯಣಸ್ವಾಮಿ(ಜೆಡಿಎಸ್): ದೇವನಹಳ್ಳಿಯಲ್ಲಿ ಕಾಂಗ್ರೆಸ್ ನ ವೆಂಕಟಸ್ವಾಮಿ ಅವರನ್ನು ೧೭,೦೧೦ ಮತಗಳಿಂದ ಮಣಿಸಿದ್ದಾರೆ.

೪೩. ಎ ಮಂಜುನಾಥ್ (ಜೆಡಿಎಸ್): ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಎಚ್‌.ಸಿ. ಬಾಲಕೃಷ್ಣ ಅವರನ್ನು ೫೧,೪೨೫ ಮತಗಳ ಭಾರೀ ಅಂತರದಲ್ಲಿ ಸೋಲಿಸಿದ್ದಾರೆ.

ಬೆಳಗಾವಿ/ ಬೀದರ್/ ಕಲಬುರಗಿ/ಯಾದಗಿರಿ/ವಿಜಯಪುರ

೪೪. ಲಕ್ಷ್ಮಿ ಹೆಬ್ಬಾಳ್ಕರ್‌ (ಕಾಂಗ್ರೆಸ್): ಕಳೆದ ವಿಧಾನಸಭೆ,ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತಿದ್ದ ಲಕ್ಷ್ಮಿ ಬೆಳಗಾವಿ ಗ್ರಾಮೀಣದಲ್ಲಿ ಬಿಜೆಪಿಯ ಸಂಜಯ್ ಪಾಟೀಲರನ್ನು ೫೦,೭೨೪ ಮತಗಳ ಅಂತರದಿಂದ ಮಣಿಸಿ,ವಿಧಾನಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ.

೪೫. ಡಾ ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್):ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಪತ್ನಿ,ವೈದ್ಯೆ ಅಂಜಲಿ,ಖಾನಾಪುರದಲ್ಲಿ ಬಿಜೆಪಿಯ ವಿಠಲ ಹಲಗೇಕರ ಅವರನ್ನು ೫,೧೩೩ ಮತಗಳಿಂದ ಮಣಿಸಿದ್ದಾರೆ. ಕಳೆದ ಬಾರಿ ಅಂಜಲಿ ಪಕ್ಷೇತರವಾಗಿ ಸ್ಪರ್ದಿಸಿದ್ದರು.

೪೬. ಮಹಾಂತೇಶ್ ಕೌಜಲಗಿ( ಕಾಂಗ್ರೆಸ್): ಬೈಲಹೊಂಗಲದಲ್ಲಿ ಜಗದೀಶ್ ಮೆಟಿಗುಡ್ಡ (ಪಕ್ಷೇತರ) ಮತ್ತು ಜೆಡಿಎಸ್ ನ ವಿಶ್ವನಾಥ ಪಾಟೀಲರನ್ನು ಮಣಿಸಿದ್ದಾರೆ. ಅಂತರ: ೫,೧೨೨.

೪೭.ಮಹೇಶ್ ಕುಮಟಳ್ಳಿ (ಕಾಂಗ್ರೆಸ್): ಅಥಣಿಯಲ್ಲಿ ಜೆಪಿಯ ಲಕ್ಷ್ಮಣ ಸವದಿಯನ್ನು ೨,೩೩೧ ಮತಗಳಿಂದ ಮಣಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ.

೪೮. ಮಹಾಂತೇಶ ದೊಡ್ಡಗೌಡರ( ಬಿಜೆಪಿ): ಪಟ್ಟು ಬಿಡದೆ ಕಿತ್ತೂರಿನಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದ ಡಿ.ಬಿ.ಇನಾಂದಾರ್‌ ಅವರನ್ನು ೩೨,೮೬೨ ಮತಗಳಿಂದ ಮಣಿಸಿದ್ದಾರೆ.

೪೯. ಅನಿಲ್‌ ಬೆನಕೆ( ಬಿಜೆಪಿ): ಬೆಳಗಾವಿ ಉತ್ತರದಲ್ಲಿ ಕಾಂಗ್ರೆಸ್ ನ ಫಿರೋಜ್‌ ಸೇಠ್ ರನ್ನು ೧೭,೨೬೪ ಮತಗಳಿಂದ ಮಣಿಸಿದ್ದಾರೆ.

೫೦. ಬಿ ನಾರಾಯಣರಾವ್‌ (ಕಾಂಗ್ರೆಸ್): ಬಸವಕಲ್ಯಾಣದಲ್ಲಿ ಬಿಜೆಪಿಯ ಮಲ್ಲಿಕಾರ್ಜುನ ಖೂಬಾ, ಜೆಡಿಎಸ್ ನ ಪಿ.ಜಿ.ಆರ್.ಸಿಂಧ್ಯಾ ಅವರಂತ ಘಟಾನುಘಟಿಗಳನ್ನು ಮಣಿಸಿದ್ದಾರೆ. ಅಂತರ: ೧೭,೨೭೨.

೫೧.ನಾಗನಗೌಡ ಕಂದಕೂರ್(ಜೆಡಿಎಸ್): ಗುರುಮಠಕಲ್ ನಲ್ಲಿ “ಬೆಳ್ಳಿ ಗಧೆ’’ ಖ್ಯಾತಿಯ ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್‌ ಚಿಂಚನಸೂರ್ ಅವರನ್ನು ೨೪,೪೮೦ ಮತಗಳಿಂದ ಸೋಲಿಸಿದ್ದಾರೆ.

೫೨. ರಾಜಕುಮಾರ ಪಾಟೀಲ (ಬಿಜೆಪಿ): ವೈದ್ಯಕೀಯ ಸಚಿವರಾಗಿದ್ದ ಡಾ. ಶರಣಪ್ರಕಾಶ್ ಪಾಟೀಲ್ ಅವರನ್ನು ಸೇಡಂನಲ್ಲಿ ೭೨೦೦ ಮತಗಳಿಂದ ಮಣಿಸಿದ್ದಾರೆ.

೫೩. ಬಸವಾಜ ಮಟ್ಟಿಮೋಡ( ಬಿಜೆಪಿ): ಕಲಬುರಗಿ ಗ್ರಾಮೀಣದಲ್ಲಿ ವಿಜಯಕುಮಾರ್ (ಕಾಂಗ್ರೆಸ್ ) ಮತ್ತು ರೇವುನಾಯಕ ಬೆಳಮಗಿ (ಜೆಡಿಎಸ್) ಅವರನ್ನು ಸೋಲಿಸಿದ್ದಾರೆ. ಅಂತರ: ೧೨,೩೮೬

೫೪.ವೆಂಕಟರೆಡ್ಡಿ ಮುದ್ನಾಳ (ಬಿಜೆಪಿ): ಯಾದಗಿರಿಯಲ್ಲಿ ಕಾಂಗ್ರೆಸ್ ನ ಹಿರಿಯ ಧುರೀಣ ಡಾ.ಎ.ಬಿ.ಮಾಲಕರೆಡ್ಡಿ ಅವರಿಗೆ ವಿಶ್ರಾಂತಿ ನೀಡಿದ್ದಾರೆ. ಅಂತರ:೧೨,೮೮೧.

೫೫. ಕನೀಜ್‌ ಫಾತಿಮಾ (ಕಾಂಗ್ರೆಸ್) : ಮಾಜಿ ಸಚಿವ ಖಮರುಲ್‌ ಇಸ್ಲಾಂ ಪತ್ನಿ ಕನೀಜ್ ಅನುಕಂಪದ ಲಾಭ ಪಡೆದು, ಗುಲ್ಬರ್ಗ ಉತ್ತರದಲ್ಲಿ ಬಿಜೆಪಿಯ ಚಂದ್ರಕಾಂತ ಪಾಟೀಲ್‌ ಅವರನ್ನು ಮಣಿಸಿದ್ದಾರೆ. ಅಂತರ: ೫೯೪೦

೫೬. ಸೋಮನಗೌಡ ಪಾಟೀಲ( ಬಿಜೆಪಿ): ದೇವರ ಹಿಪ್ಪರಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ಭೀಮನಗೌಡ ಪಾಟೀಲರ ವಿರುದ್ಧ ೩೬೬೩ ಮತಗಳಿಂದ ಗೆದ್ದಿದ್ದಾರೆ.

೫೭.ದೇವಾನಂದ ಚೌಹಾಣ್‌ (ಜೆಡಿಎಸ್): ನಾಗಠಾಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ವಿಠಲಕಟಕ ದೊಂಡ ಅವರನ್ನು ೫೬೦೧ ಮತಗಳಿಂದ ಮಣಿಸಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More