ಬಿಜೆಪಿಯಿಂದ ಜೆಡಿಎಸ್‌ ಶಾಸಕರಿಗೆ ೧೦೦ ಕೋಟಿ ರುಪಾಯಿ ಆಮಿಷ: ಎಚ್‌ಡಿಕೆ ಆರೋಪ

ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿರುವುದರಿಂದ ಮೈತ್ರಿ ಸರ್ಕಾರಕ್ಕೆ ಜೆಡಿಎಸ್‌-ಕಾಂಗ್ರೆಸ್‌ ಯತ್ನ ನಡೆಸುತ್ತಿವೆ. ಇತ್ತ ಬಿಜೆಪಿಯೂ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿದೆ. ಹಣದ ಮೂಲಕ ಜೆಡಿಎಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸಿದರೇ ಬಿಜೆಪಿ ನಾಯಕರು?

ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿರುವುದರಿಂದ ಮೈತ್ರಿ ಸರ್ಕಾರಕ್ಕೆ ಜೆಡಿಎಸ್‌-ಕಾಂಗ್ರೆಸ್‌ ಯತ್ನ ನಡೆಸುತ್ತಿವೆ. ಇತ್ತ ಬಿಜೆಪಿಯೂ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿದೆ. “ಕಾಂಗ್ರೆಸ್‌ ಬೇಷರತ್ತಾಗಿ ಜೆಡಿಎಸ್‌ಗೆ ಬೆಂಬಲ ಘೋಷಿಸಿದೆ. ಆದ್ದರಿಂದ‌, ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬರುವುದರಲ್ಲಿ ಅನುಮಾನವಿಲ್ಲ,” ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಎಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ.

“ಬಿಜೆಪಿಯು ಜೆಡಿಎಸ್‌ ಶಾಸಕರನ್ನು ಸೆಳೆಯಲು ೧೦೦ ಕೋಟಿ ರುಪಾಯಿ ಆಮಿಷ ಒಡ್ಡಿದೆ. ಕಪ್ಪು ಹಣ ಹಾಗೂ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?” ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

“ಬಿಜೆಪಿ ನಾಯಕರು ಜೆಡಿಎಸ್‌ ಶಾಸಕರನ್ನು ಖರೀದಿಸಲು ಮುಂದಾದರೆ ನಾವು ಕೈಕಟ್ಟಿ ಕೂರುವುದಿಲ್ಲ. ನಾವೇನು ಸನ್ಯಾಸಿಗಳಲ್ಲ. ಗೋವಾ, ಮಿಜೊರೋಂ, ನಾಗಾಲ್ಯಾಂಡ್‌ನಲ್ಲಿ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅವರಿಗೆ ಅಧಿಕಾರ ಹಿಡಿಯಲು ಬಿಟ್ಟುಕೊಟ್ಟಿಲ್ಲ. ಈಗ ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ರಚಿಸಲು ಅಪಸ್ವರ ಎತ್ತುತ್ತಿರುವುದು ಏಕೆ?” ಎಂದು ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಕುದುರೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುತ್ತಾರೋ, ಸಾಂವಿಧಾನಿಕ ವ್ಯವಸ್ಥೆ ಬಲಪಡಿಸಲು ಬದ್ಧರಾಗಿರುತ್ತಾರೋ ಎಂಬುದನ್ನು ಮೋದಿಯವರು ಸ್ಪಷ್ಟಪಡಿಸಬೇಕು,” ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

“ಬಿಜೆಪಿ ಆಪರೇಷನ್‌ ಕಮಲಕ್ಕೆ ಮುಂದಾದರೆ ಬಿಜೆಪಿಯಿಂದ ೧೦-೧೫ ಶಾಸಕರು ನಮ್ಮ ಪಕ್ಷಕ್ಕೆ ಬರಲು ಮುಂದಾಗಿದ್ದಾರೆ. ಆದ್ದರಿಂದ, ಇಂಥ ಚಟುವಟಿಕೆಗಳಿಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಅವಕಾಶ ನೀಡಬಾರದು. ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ರಚನೆಗೆ ಅವಕಾಶ ಕಲ್ಪಿಸಬೇಕು,” ಎಂದು ಹೇಳಿದ್ದಾರೆ.

“ಚುನಾವಣೆಯ ಸಂದರ್ಭದಲ್ಲಿ ಪಕ್ಷಗಳ ನಾಯಕರು ಪರಸ್ಪರ ವಾಗ್ದಾಳಿ ನಡೆಸುವುದು ಸಹಜ. ಪ್ರಧಾನಿ ಮೋದಿಯವರು ಸಹ ಜೆಡಿಎಸ್‌ ಎಲ್ಲಿದೆ ಎಂದು ಪ್ರಶ್ನಿಸಿದ್ದರು. ಜೆಡಿಎಸ್‌ ಶಾಸಕರನ್ನು ರೆಸಾರ್ಟ್‌ನಲ್ಲಿಡುವ ಅವಶ್ಯಕತೆ ಇಲ್ಲ. ಆದರೆ, ಬಿಜೆಪಿ ರೆಸಾರ್ಟ್‌ ರಾಜಕೀಯ ಶುರುಮಾಡಿದರೆ ನಾವು ಈ ಕೆಲಸ ಮಾಡುವುದು ಅನಿವಾರ್ಯವಾಗಲಿದೆ,” ಎಂದು ಹೇಳಿದರು.

ಇದನ್ನೂ ಓದಿ : ದಿನವಿಡೀ ನಾಟಕೀಯ ಬೆಳವಣಿಗೆ; ಕೊನೆಗೆ ಕಂಡ ಸಿದ್ದು-ಎಚ್‌ಡಿಕೆ ಚಿತ್ರ ಅಂತಿಮವೇ?

“ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಹಿಂದೊಮ್ಮೆ ಬಿಜೆಪಿಯ ಜೊತೆ ಸೇರಿ ಸರ್ಕಾರ ರಚಿಸುವ ಮೂಲಕ ತಂದೆ ದೇವೇಗೌಡರ ಮನಸ್ಸಿಗೆ ನೋವುಂಟು ಮಾಡಿದ್ದೇನೆ. ಈ ಬಾರಿ ಅದಕ್ಕೆ ಅವಕಾಶ ನೀಡುವುದಿಲ್ಲ. ಸದ್ಯದಲ್ಲಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಯಿಂದ ಎದುರಾಗಿರುವ ಸಂಕಷ್ಟವನ್ನು ದೂರ ಮಾಡಲು ಕಾಂಗ್ರೆಸ್‌ ಜೊತೆ ಹೋಗುತ್ತಿದ್ದೇವೆ. ದೇಶ ರಕ್ಷಣೆಗೆ ಈ ಮೂಲಕ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ. ಜಾತ್ಯತೀತತೆ, ಕೋಮುವಾದದ ಬಗ್ಗೆ ನನಗೆ ನಂಬಿಕೆ ಇಲ್ಲ. ಇಂಥವುಗಳನ್ನು ಸಾಕಷ್ಟು ನೋಡಿದ್ದೇನೆ,” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

“೧೯೯೭ರಲ್ಲಿ ದೇವೇಗೌಡರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್‌ ಬೆಂಬಲ ವಾಪಸ್‌ ಪಡೆದಿತ್ತು. ಆ ಸಂದರ್ಭದಲ್ಲಿ ಬಿಜೆಪಿ ಬೆಂಬಲ ನೀಡುವುದಾಗಿ ಹೇಳಿತ್ತು. ಆದರೆ, ದೇವೇಗೌಡರು ಅದಕ್ಕೆ ಒಪ್ಪಲಿಲ್ಲ. ೨೦೦೪ರಲ್ಲಿ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಸೇರಲು ಯಡಿಯೂರಪ್ಪ ಮುಂದಾಗಿದ್ದರು. ಆದರೆ, ನಾನೇ ಅದಕ್ಕೆ ಒಪ್ಪಿರಲಿಲ್ಲ,” ಎಂದು ಹೇಳಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More