ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಮೈತ್ರಿ ತಂದ ಮೂವರು ಮಹಿಳೆಯರು 

ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಿ ಸರ್ಕಾರ ರೂಪಿಸಲು ಕಸರತ್ತು ನಡೆಸುವುದರ ಹಿಂದೆ ಮೂವರು ಮಹಿಳಾ ರಾಜಕಾರಣಿಗಳ ಸಮಾಲೋಚನೆಗಳು ಕೆಲಸ ಮಾಡಿವೆ. ಬಿಜೆಪಿಯನ್ನು ರಾಜ್ಯದಲ್ಲಿ ದೂರವಿಡುವ ಕ್ರಮ ಮೋದಿಗೆ ಸಂದೇಶ ರವಾನಿಸುವುದೇ ಎಂಬುದು ಸದ್ಯದ ಕೂತುಹಲ

ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಅತಂತ್ರವಾದ ಹಿನ್ನೆಲೆಯಲ್ಲಿ ಸರ್ಕಾರ ರಚಿಸಲು ಮೂರು ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಚುನಾವಣಾ ಫಲಿತಾಂಶ ಪೂರ್ತಿ ಪ್ರಕಟವಾಗುವ ಮುನ್ನವೇ ಕಾಂಗ್ರೆಸ್ ಜೆಡಿಎಸ್‌ಗೆ ಬೆಂಬಲ ನೀಡುವುದಾಗಿ ಘೋಷಿಸಿತು. ಇದಾದ ನಂತರದಲ್ಲಿ ರಾಜಕೀಯ ಬೆಳವಣಿಗೆಗಳು ಕ್ಷಣ ಕ್ಷಣಕ್ಕೂ ತಿರುವ ಪಡೆಯುತ್ತಿವೆ. ಇತ್ತ, ೧೦೪ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಹೇಗಾದರೂ ಮಾಡಿ ಸರ್ಕಾರ ರಚಿಸಲೇಬೇಕೆಂದು ಹರ ಸಾಹಸ ಪಡುತ್ತಿದೆ. ರಾಜ್ಯದಲ್ಲಿ ಇಷ್ಟೆಲ್ಲ ಕುತೂಹಲದ ಬೆಳವಣಿಗೆಗಳಿಗೆ ನಡೆಯಲು ಮುನ್ನುಡಿ ಬರೆದವರು ರಾಷ್ಟ್ರ ರಾಜರಾಜಕಾರಣದ ಮೂರು ಮಹಿಳಾ ರಾಜಕಾರಣಿಗಳು ಎಂಬುದು ವಿಶೇಷ.

ಚುನಾವಣೆಗೂ ಮುನ್ನವೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಬಿಎಸ್ ಪಿ ನಾಯಕಿ ಮಾಯವತಿ ಅವರೊಂದಿಗೆ ಸಮಾಲೋಚಿಸಿ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದರು. ಮಂಗಳವಾರ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅತಂತ್ರವಾಗುವ ಲಕ್ಷಣ ಅರಿತ ಮಾಯಾವತಿ ಅವರು ದೇವೇಗೌಡರನ್ನು ಸಂಪರ್ಕಿಸಿ ಕಾಂಗ್ರೆಸ್ಸಿನಿಂದ ಬೆಂಬಲ ಸಿಗುವ ಸಾಧ್ಯತೆ ತಿಳಿಸಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಮಾಯಾವತಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ (ತೃಣ ಮೂಲ ಕಾಂಗ್ರೆಸ್) ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಸಂಪರ್ಕಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಚರ್ಚಿಸಿದ್ದಾರೆ ಎನ್ನುವ ಸುದ್ದಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಖುದ್ದು ಮಮತಾ ಬ್ಯಾನರ್ಜಿ ಅವರೇ ದೇವೇಗೌಡರಿಗೆ ಕರೆ ಮಾಡಿ ಸಲಹೆ ನೀಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ವಿಚಾರವಾಗಿ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಮತಾ ಬ್ಯಾನರ್ಜಿ ಅವರು ಚುನಾವಣೆ ಪ್ರಚಾರದ ವೇಳೆ ಜೆಡಿಎಸ್ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದ್ದನ್ನು ಖಂಡಿಸಿ, “ಬಿಜೆಪಿ ವಿರುದ್ಧ ಹೋರಾಟ ಸೃಷ್ಟಿಯಾಗುತ್ತಿರುವ ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸೂಕ್ತ,” ಎಂದು ಕಿವಿಮಾತು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಅವರು, “ದೇವೇಗೌಡರು ಒಳ್ಳೆಯ ಮನಸ್ಸಿದ್ದವರು. 1996 ರಲ್ಲಿ ಅವರು ಪ್ರಧಾನಿ ಆಗಲು ಕಾಂಗ್ರೆಸ್‌ ಬೆಂಬಲ ನೀಡಿತ್ತು. ಈಗ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕೈಜೋಡಿಸಬೇಕು ಎಂಬುದು ನನ್ನ ಹಾರೈಕೆ. ಉಳಿದ ನಿರ್ಧಾರ ಕಾಂಗ್ರೆಸ್‌ಗೆ ಬಿಟ್ಟಿದ್ದು,” ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ದೇವೇಗೌಡರೊಂದಿಗೆ ಫೋನ್‌ನಲ್ಲಿ ಸಮಾಲೋಚಿಸಿರುವ ಮಮತಾ ಬ್ಯಾನರ್ಜಿ ಅವರು ತೃತೀಯ ರಂಗದ ಕುರಿತು ಚರ್ಚಿಸಿ ಕಾಂಗ್ರೆಸ್ಸಿನ ಬೆಂಬಲವನ್ನು ಪಡಿಯುವುದು ಸೂಕ್ತ ಎಂಬ ಸಲಹೆಯನ್ನು ನೀಡಿದ್ದಾರೆ. ನಂತರ ಖುದ್ದು ಮಮತಾ ಬ್ಯಾನರ್ಜಿ ಅವರೇ ಸೋನಿಯಾ ಗಾಂಧಿ ಅವರಿಗೆ ಕರೆ ಮಾಡಿ ಎಲ್ಲ ವಿಷಯ ತಿಳಿಸಿ ದೇವೇಗೌಡರಿಗೆ ಕರೆ ಮಾಡುವಂತೆ ತಿಳಿಸಿದ್ದಾರೆ ಎನ್ನುವ ವರದಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಿತ್ತರವಾಗಿವೆ.

ಮಮತಾ ಬ್ಯಾನರ್ಜಿ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಎಲ್ಲ ಅಭ್ಯರ್ಥಿಗಳಿಗೆ ಟ್ವಿಟರ್‌ನಲ್ಲಿ ಶುಭ ಕೋರಿ, ಈ ಮೊದಲೇ ಜೆಡಿಎಸ್‌ನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷ ಜೆಡಿಎಸ್ ಗೆ ಬೆಂಬಲ ನೀಡುವುದಾಗಿ ಅಧಿಕೃತವಾಗಿ ತಿಳಿಸಿದೆ,” ಎಂದಿದ್ದಾರೆ.

ಈ ಹಿಂದೆಯೇ ಮಮತಾ ಬ್ಯಾನರ್ಜಿ ಅವರು ಸೋನಿಯಾ ಗಾಂಧಿ ಅವರೊಂದಿಗೆ ತೃತೀಯ ರಂಗದ ಕುರಿತು ಸುಧೀರ್ಘವಾಗಿ ಚರ್ಚಿಸಿದ್ದರು. ಬರುವ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿಯನ್ನು ಸೋಲಿಸಲು ಹೋರಾಟ ರೂಪಿಸುವುದಾಗಿ ಸಮಾಲೋಚಿಸಿದ್ದರು. ಇದಾದ ನಂತರದಲ್ಲಿ ಮಮತಾ ಬ್ಯಾನರ್ಜಿ ಅವರ ಸಲಹೆ ಮೇರೆಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಇತ್ತೀಚೆಗೆ ದೇವೇಗೌಡರ ಮನೆಗೆ ಭೇಟಿ ನೀಡಿ ತೃತೀಯ ರಂಗಕ್ಕೆ ಬೆಂಬಲ ನೀಡುವಂತೆ ಕೋರಿದ್ದರು. ಈ ಎಲ್ಲ ಹಿನ್ನೆಲೆಗಳು ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಅಧಿಕೃತವಾಗಿ ಕರ್ನಾಟಕದಿಂದ ಮುನ್ನುಡಿ ಬರೆದಂತೆ ಕಾಣುತ್ತಿವೆ.

ಇದನ್ನೂ ಓದಿ : ತೃತೀಯ ರಂಗದ ವಿಫಲ ಕಸರತ್ತಿನ ನಡುವೆ ಫೆಡರಲ್ ಫ್ರಂಟ್‌ನ ಕನಸು ಬಿತ್ತಿದ ಮಮತಾ

ಹೀಗಾಗಿ ಸೋನಿಯಾ ಗಾಂಧಿ ಅವರು ದೇವೇಗೌಡರಿಗೆ ಕರೆ ಮಾಡಿ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಈ ವಿಷಯವನ್ನು ಮಂಗಳವಾರ ನಡೆದ ಕಾಂಗ್ರೆಸ್ ನ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಅಶೋಕ ಗೆಲ್ಹೋಟ ಅವರು ಸ್ಪಷ್ಟ ಪಡಿಸಿ, “ಸೋನಿಯಾ ಗಾಂಧಿ ಅವರು ದೇವೇಗೌಡರೊಂದಿಗೆ ಚರ್ಚಿಸಿದ್ದಾರೆ. ನಾವು ಸಂಪೂರ್ಣವಾಗಿ ಜೆಡಿಎಸ್ ಸರ್ಕಾರ ರಚಿಸಲು ಬೆಂಬಲ ನೀಡುವುದಾಗಿ,” ತಿಳಿಸಿದರು.

ಬಿಜೆಪಿ ವಿರುದ್ಧ ತೃತೀಯ ರಂಗ ರೂಪಿಸುವ ಪ್ರಯತ್ನದ ಭಾಗವಾಗಿ ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಕಾಂಗ್ರೆಸ್ ಒಂದಾಗಿ ಸರ್ಕಾರ ರೂಪಿಸಲು ಕಸರತ್ತು ನಡೆಸಿವೆ. ರಾಜ್ಯದಲ್ಲಿ ಈ ಎಲ್ಲ ಕೂತುಹಲ ಸೃಷ್ಟಿಯಾಗಲು ಈ ಮೂರು ಮಹಿಳಾ ರಾಜಕಾರಣಿಗಳ ಸಮಾಲೋಚನೆಗಳು ಕೆಲಸ ಮಾಡಿವೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೋಮುವಾದಿ ಹಣೆ ಪಟ್ಟಿ ಹೊತ್ತಿರುವ ಬಿಜೆಪಿಯನ್ನು ರಾಜ್ಯದಲ್ಲಿ ದೂವಿಡುವ ಮೂಲಕ ಬಿಜೆಪಿಗೆ ಸಂದೇಶ ರವಾಣಿಸುವುದೇ ಎಂಬುದನ್ನು ಕಾದು ನೋಡಬೇಕು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More