ರಾಜ್ಯ ರಾಜಕಾರಣದ ಏಳುಬೀಳಿನ ಹಾದಿಯ ರೂಪಕ ಯಡಿಯೂರಪ್ಪ

ತತ್ವ ಸಿದ್ಧಾಂತ, ಜನಪರ ಕಾಳಜಿಯ ರಾಜಕಾರಣದೊಂದಿಗೆ ಆರಂಭವಾದ ರಾಜ್ಯ ರಾಜಕಾರಣದ ಚರಿತ್ರೆ, ಇದೀಗ ಕಾರ್ಪೊರೆಟ್ ಉದ್ಯಮದ ಸ್ವರೂಪಕ್ಕೆ ಹೊರಳಿದೆ. ಸಿಎಂ ಯಡಿಯೂರಪ್ಪ ಅವರ ರಾಜಕೀಯ ಬದುಕು ಕೂಡ ಇಂಹದ್ದೇ ಹೊರಳುಹಾದಿಯ ಪಯಣ ಎಂದರೆ ತಪ್ಪಾಗಲಾರದು

ರಾಜ್ಯ ರಾಜಕಾರಣ ಕಳೆದ ಎರಡು ದಶಕಗಳಲ್ಲಿ ಕಂಡಿರುವ ‘ವ್ಯಾಪಾರಿ ರಾಜಕಾರಣಿ’ಗಳಿಗೆ ಹೊರತಾದ, ಹೋರಾಟ, ಜನಪರ ಕಾಳಜಿ, ಕನಿಷ್ಠ ತತ್ವ-ಸಿದ್ಧಾಂತದ ಹಿನ್ನೆಲೆಯ ಅಳಿವಿನಂಚಿನಲ್ಲಿರುವ ರಾಜಕೀಯ ನೇತಾರರ ಅಪರೂಪದ ಸಾಲಿನಲ್ಲಿ ನಿಲ್ಲುವ ನಾಯಕ ಬಿ ಎಸ್ ಯಡಿಯೂರಪ್ಪ.

ಜೀತ ವಿಮುಕ್ತಿ ಹೋರಾಟದಿಂದ ಬಗರ್‌ಹುಕುಂ ರೈತರ ಪರ ಪಾದಯಾತ್ರೆಯವರೆಗೆ ಸಾಕಷ್ಟು ಹೋರಾಟಗಳ ಮೂಲಕವೇ ರಾಜಕೀಯ ಅಸ್ತಿತ್ವ ರೂಪಿಸಿಕೊಂಡ ಯಡಿಯೂರಪ್ಪ, ಶಿಕಾರಿಪುರದಿಂದ ಅತ್ಯಂತ ಹಿಂದುಳಿದ ಪ್ರದೇಶದ ಜನಸಾಮಾನ್ಯರ ಪಾಲಿಗೆ ನಿಜವಾದ ನಾಯಕತ್ವವನ್ನು ಕೊಟ್ಟ ಹೆಮ್ಮೆಯ ನಾಯಕ ಎಂಬುದು ಎಷ್ಟು ದಿಟವೋ, ಸ್ವಯಂಕೃತ ಅಪರಾಧಗಳ ಮೂಲಕ ರಾಜಕೀಯ ಜೀವನದ ಔನತ್ಯದ ಹೊತ್ತಲ್ಲಿ ಅದೇ ಜನಸಮುದಾಯವನ್ನು ಮುಜುಗರಕ್ಕೀಡುಮಾಡಿದ ದುರಂತ ನಾಯಕ ಎಂಬುದು ಕೂಡ ಅಷ್ಟೇ ವಾಸ್ತವ.

ರಾಜ್ಯ ರಾಜಕಾರಣದ ಕೆಲವೇ ಮಂದಿ ಜನನಾಯಕರ (ಮಾಸ್ ಲೀಡರ್) ಪೈಕಿ ಒಬ್ಬರಾದ ಯಡಿಯೂರಪ್ಪ ಅವರ ರಾಜಕೀಯ ಜೀವನವೇ ಒಂದು ರೀತಿಯಲ್ಲಿ ಕರ್ನಾಟಕದ ರಾಜಕಾರಣದ ಏಳುಬೀಳಿನ ಚರಿತ್ರೆ ಕೂಡ. ತತ್ವ, ಸಿದ್ಧಾಂತದ ಸ್ವಾತಂತ್ರ್ಯದ ಬಳಿಕದ ಆರಂಭದ ರಾಜಕಾರಣ, ನಂತರದ ಸಮಾಜವಾದಿ ಚಳವಳಿಯ ರಾಜಕಾರಣ, ಬಳಿಕ ರೈತ-ದಲಿತ-ಬಂಡಾಯ ಚಳವಳಿಗಳ ಪ್ರಭಾವ, ನಂತರ ಉದ್ಯಮ-ಕಾರ್ಪೋರೆಟ್ ಹಿಡಿತದ ರಾಜಕಾರಣವನ್ನು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಹೀಗೆ ವರ್ಗೀಕರಿಸುವ ಕ್ರಮ ರಾಜ್ಯದ ಇಡೀ ರಾಜಕಾರಣಕ್ಕೆ ಎಷ್ಟು ಸ್ಪಷ್ಟವಾಗಿ ಅನ್ವಯವಾಗುತ್ತದೆಯೋ, ಅಷ್ಟೇ ಮಾರ್ಮಿಕವಾಗಿ ಯಡಿಯೂರಪ್ಪ ಅವರ ವೈಯಕ್ತಿಕ ರಾಜಕೀಯ ಬದುಕಿಗೂ ಅನ್ವಯವಾಗದೆ ಇರದು.

೧೯೪೩ರಲ್ಲಿ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಜನಿಸಿದ ಯಡಿಯೂರಪ್ಪ, ಸ್ಥಳೀಯ ಶಿಕ್ಷಣದ ಬಳಿಕ ಆಯ್ದುಕೊಂಡದ್ದು ಸರ್ಕಾರಿ ನೌಕರಿ. ಸಮಾಜ ಕಲ್ಯಾಣ ಇಲಾಖೆಯ ಗುಮಾಸ್ತಗಿರಿಯಿಂದ ಬೇಸತ್ತು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಚಟುವಟಿಕೆಗಳಲ್ಲಿ ಪೂರ್ಣಾವಧಿ ಕಾರ್ಯಕರ್ತನಾಗಿ ಗುರುತಿಸಿಕೊಂಡ ಅವರು, ನಂತರ ಸಂಘದ ವಿಸ್ತರಣಾ ಕಾರ್ಯದ ಸಲುವಾಗಿ ೧೯೬೦ರ ದಶಕದಲ್ಲಿ ಬಯಲುನಾಡಿನಿಂದ ಬಂದದ್ದು ಮಲೆನಾಡಿನ ಅಂಚಿನ ಶಿಕಾರಿಪುರಕ್ಕೆ. ಅಲ್ಲಿಯೂ ಬದುಕಿಗಾಗಿ ಆಶ್ರಯಿಸಿದ್ದು ಅದೇ ಗುಮಾಸ್ತಗಿರಿಯನ್ನೇ. ಶಿಕಾರಿಪುರದ ಶಂಕರ್ ರೈಸ್ ಮಿಲ್ ರೈಟರ್ ಆಗಿ ಕೆಲಸ ಮಾಡತೊಡಗಿದ ಅವರು, ಆರಂಭದಲ್ಲಿ ಆರ್‌ಎಸ್‌ಎಸ್ ಮೂಲಕವೇ ಗಳಿಸಿದ ಜನಸಂಪರ್ಕ ಅವರಲ್ಲಿ ರಾಜಕೀಯ ಮಹತ್ವಾಕಾಂಕ್ಷೆ ಬಿತ್ತಿದ್ದು ನಿಜ.

೭೦ರ ದಶಕದ ಹೊತ್ತಿಗೆ ಅಂತಹ ಜನಸಂಪರ್ಕದ ಬಲದ ಮೇಲೆಯೇ ಶಿಕಾರಿಪುರ ಪುರಸಭೆಯ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಕ್ರಿಯ ರಾಜಕಾರಣ ಆರಂಭಿಸಿದ ಅವರು, ಬಳಿಕ ಪುರಸಭೆಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದರು. ಈ ನಡುವೆ, ರಾಜಕೀಯ ಕಾರಣಕ್ಕೆ ವಿರೋಧಿಗಳಿಂದ ಬೆದರಿಕೆ, ಹಲ್ಲೆಗಳಿಗೂ ಒಳಗಾದರು. ಆದರೆ, ಸದಾ ಚಟುವಟಿಕೆಯ, ಜನರ ನಡುವಿನ ನಿರಂತರ ಸಂಪರ್ಕದ ಯಡಿಯೂರಪ್ಪ, ೧೯೭೫ರ ತುರ್ತುಪರಿಸ್ಥಿತಿಯ ದಿನಗಳಲ್ಲಿ ಕಾಂಗ್ರೆಸ್ ಮತ್ತು ಇಂದಿರಾ ಗಾಂಧಿ ವಿರುದ್ಧ ಶಿವಮೊಗ್ಗದಲ್ಲಿ ನಡೆದ ದೊಡ್ಡ ಪ್ರಮಾಣದ ಹೋರಾಟದ ಪ್ರಮುಖ ಸಂಘಟಕರಲ್ಲಿ ಒಬ್ಬರಾಗಿದ್ದರು. ಆ ಕಾರಣಕ್ಕಾಗಿ ಅವರು ಜೈಲುವಾಸವನ್ನೂ ಅನುಭವಿಸಿದ್ದರು. ಆದರೆ, ಯಾವ ವ್ಯಕ್ತಿ ನಿರಂಕುಶ ಪ್ರಭುತ್ವ, ಭ್ರಷ್ಟ ಆಡಳಿತದ ವಿರುದ್ಧ ಸಿಡಿದೆದ್ದು ಹೋರಾಡಿ ಜೈಲು ಕಂಡುಬಂದಿದ್ದರೋ, ಅದೇ ವ್ಯಕ್ತಿ ತಾನು ಉಗ್ರವಾಗಿ ವಿರೋಧಿಸಿದ್ದ ಅದೇ ಭ್ರಷ್ಟಾಚಾರದ ಆರೋಪದ ಮೇಲೆ ಮುಖ್ಯಮಂತ್ರಿ ಹುದ್ದೆಯಿಂದ ನೇರವಾಗಿ ಜೈಲಿಗೆ ಹೋದದ್ದು ವಿಪರ್ಯಾಸ. ಅಂತಹ ವೈರುಧ್ಯದ ಕಾರಣಕ್ಕಾಗಿಯೇ ಅವರು ಬಿಜೆಪಿಯ ಪಾಲಿಗಷ್ಟೇ ಅಲ್ಲ; ರಾಜ್ಯದ ಅಸಲಿ ರಾಜಕಾರಣದ ಪಾಲಿಗೂ ದುರಂತ ನಾಯಕ!

ತುರ್ತು ಪರಿಸ್ಥಿತಿಯ ಹೋರಾಟದ ವರ್ಚಸ್ಸನ್ನೇ ಬಳಸಿಕೊಂಡು ಅವರು, ಬಳಿಕ ಜಿಲ್ಲೆಯಾದ್ಯಂತ ಭಾರತೀಯ ಜನತಾ ಪಕ್ಷದ ಪೂರ್ವಾಶ್ರಮ ಜನಸಂಘದ ಸಂಘಟನೆಯಲ್ಲಿ ತೊಡಗಿಕೊಂಡರು. ಜನಸಂಘದ ಜಿಲ್ಲಾ ನಾಯಕರಾಗಿ ಹೊರಹೊಮ್ಮಿದ ಅವರು, ನಂತರ ೧೯೮೩ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಶಾಸಕರಾಗಿ ರಾಜ್ಯ ವಿಧಾನಸಭೆಯಲ್ಲಿ ಪಕ್ಷದ ಖಾತೆ ತೆರೆದರು. ಬಳಿಕ ೧೯೯೯ರವರೆಗೆ ನಿರಂತರವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಅವರು, ಆ ಬಾರಿ ಮಾತ್ರ ಶಿವಮೊಗ್ಗ ಜಿಲ್ಲೆಯ ಅವರ ರಾಜಕೀಯ ಎದುರಾಳಿ ಎಸ್ ಬಂಗಾರಪ್ಪ ಅವರ ತಂತ್ರಗಾರಿಕೆಯ ಮುಂದೆ ಸೋಲು ಕಂಡರು. ಆದರೆ, ಆ ಸೋಲಿನ ಸೇಡನ್ನು ಮರೆತು, ೨೦೦೪ರಲ್ಲಿ ಅದೇ ಬಂಗಾರಪ್ಪ ಅವರಿಗೇ ಕೇಸರಿ ಶಾಲು ಹೊದೆಸಿ, ರಾಜ್ಯಾದ್ಯಂತ ಬಿಜೆಪಿ ಮೊಟ್ಟಮೊದಲ ಬಾರಿಗೆ ಭಾರಿ ಸ್ಥಾನ ಗಳಿಸುವಂತೆ ಮಾಡಿದರು ಎಂಬುದು ಕುತೂಹಲಕಾರಿ. ಬಳಿಕ ೨೦೦೪ರಲ್ಲಿ ಮತ್ತೊಮ್ಮೆ ಗೆಲುವು ಪಡೆದ ಅವರು ನಂತರದಲ್ಲಿ ಆ ಕ್ಷೇತ್ರದಲ್ಲಿ ಸೋಲು ಕಂಡಿಲ್ಲ.

ಆ ನಡುವೆ ಅವರು ಪಕ್ಷದ ಜಿಲ್ಲಾಧ್ಯಕ್ಷರಾಗಿ, ರಾಜ್ಯಾಧ್ಯಕ್ಷರಾಗಿ, ಪ್ರತಿಪಕ್ಷ ನಾಯಕರಾಗಿ ಹಲವು ಹಂತಗಳಲ್ಲಿ ಬಿಜೆಪಿ ಪಕ್ಷದ ವರ್ಚಸ್ಸನ್ನೂ, ವೈಯಕ್ತಿಕವಾಗಿ ತಮ್ಮ ಪ್ರಭಾವನ್ನೂ ವೃದ್ಧಿಸಿಕೊಂಡರು. ಈ ನಡುವೆ, ಶಿಕಾರಿಪುರದಂಥ, ಅಂದು ಎಲ್ಲ ರೀತಿಯಲ್ಲೂ ಹಿಂದುಳಿದ ಕಡುಬಡತನ, ಜೀತ, ಜಮೀನ್ದಾರಿಕೆಯ ಊರಲ್ಲಿ ಆರ್‌ಎಸ್‌ಎಸ್‌ನಂತಹ ಮತೀಯ ಸಂಘಟನೆಯನ್ನು ಕಟ್ಟುವಾಗ ಕೂಡ ಯಡಿಯೂರಪ್ಪ ಕಟ್ಟರ್‌ ಮೇಲ್ಜಾತಿಯ ಮನಸ್ಥಿತಿಗೆ ಹೊರತಾಗಿ ಯೋಚಿಸುತ್ತಿದ್ದರು ಎಂಬುದಕ್ಕೆ ೭೦ರ ದಶಕದ ಅಂತ್ಯದ ಹೊತ್ತಿಗೆ ಅವರು ಆ ಭಾಗದಲ್ಲಿ ಕಟ್ಟಿದ ಜೀತ ವಿಮುಕ್ತಿ ಹೋರಾಟವೇ ನಿದರ್ಶನ. ಜೀತ ವಿಮುಕ್ತಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಅವರು ಇಡೀ ರಾಜ್ಯದಲ್ಲೇ ಮುಂಚೂಣಿಯಲ್ಲಿದ್ದರು.

ಇಂತಹ ಜನಪರ ಕಾಳಜಿ ಮತ್ತು ಸಾಮಾಜಿಕ ಕಳಕಳಿಯ ಮೇಲೆಯೇ ಶಿಕಾರಿಪುರದಂತಹ ಹಿಂದುಳಿದವರು ಮತ್ತು ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ನಿರಂತರ ಜನಾರ್ಶೀವಾದ ಪಡೆಯುವುದು ಅವರಿಗೆ ಸಾಧ್ಯವಾಯಿತು ಎಂಬುದನ್ನು ಅವರ ವಿರೋಧಿಗಳೂ ಒಪ್ಪುತ್ತಾರೆ. ಆದರೆ, ನಾಲ್ಕು ದಶಕದ ಸುದೀರ್ಘ ರಾಜಕೀಯ ಬದುಕಿನ ಅವರ ಈ ಹೆಚ್ಚುಗಾರಿಕೆ, ನಿರಂತರ ಪ್ರತಿಪಕ್ಷದ ಸ್ಥಾನದಿಂದ ಅಧಿಕಾರದ ಕುರ್ಚಿಗೆ ಏರಿದ ಕೆಲವೇ ವರ್ಷಗಳಲ್ಲಿ ಮಣ್ಣುಪಾಲಾಯಿತು ಎಂಬುದು ರಾಜಕೀಯ ವ್ಯವಸ್ಥೆಯ ಅಧಃಪತನದ ಫಲವೋ ಅಥವಾ ಬದಲಾದ ಕಾಲದ ಅನಿವಾರ್ಯವೋ ಅಥವಾ ಯಡಿಯೂರಪ್ಪ ಅವರ ಆಳದ ವೈಯಕ್ತಿಕ ಮಿತಿಗಳ ಪರಿಣಾಮವೋ ಎಂಬುದನ್ನು ಸರಳವಾಗಿ ಹೇಳಲಾಗದು.

ಇದನ್ನೂ ಓದಿ : ಮೋದಿ, ಅಮಿತ್ ಶಾ ಅನುಪಸ್ಥಿತಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ!

೨೦೦೬ರಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಅವರೊಂದಿಗೆ ಕೈಕುಲುಕಿ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದೇ ಯಡಿಯೂರಪ್ಪ ಅವರ ಆವರೆಗಿನ ರಾಜಕೀಯ ಬದುಕಿನಲ್ಲಿ ಅಧಿಕಾರ ಅನುಭವಿಸಿದ ಮೊದಲ ಅನುಭವ (ಸ್ಥಳೀಯ ಸಂಸ್ಥೆ ಅಧ್ಯಕ್ಷ ಸ್ಥಾನ ಹೊರತುಪಡಿಸಿ). ಹಾಗೇ, ಸುದೀರ್ಘ ಹೋರಾಟದ ಬದುಕಿನಲ್ಲಿ ಅಧಿಕಾರದ ಪರ್ವ ಆರಂಭವಾಗುವ ಹೊತ್ತಿಗೆ ಅವರ ವೈಯಕ್ತಿಕ ಬದುಕಿನಲ್ಲೂ ಸಾಕಷ್ಟು ಹೊಯ್ದಾಟಗಳು ಆರಂಭವಾಗಿದ್ದವು. ಅವರು ರೈಸ್‌ಮಿಲ್ ರೈಟರಾಗಿದ್ದಾಲೇ ಮಿಲ್ ಮಾಲೀಕರ ಮಗಳನ್ನೇ ಮೆಚ್ಚಿ ಮದುವೆಯಾಗಿದ್ದರು. ಅಧಿಕಾರ ಹಿಡಿಯುವ ಹೊತ್ತಿಗೆ ಅಂತಹ ಪ್ರೀತಿಯ ಮಡದಿ ದಿಢೀರ್ ಸಾವು ಕಂಡಿದ್ದರು. ಆ ಸಾವಿನ ಕುರಿತೂ ಹಲವು ಸಂಶಯಗಳು, ಅನುಮಾನಗಳು ಹಬ್ಬಿದ್ದವು. ಮಡದಿಯ ಸಾವಿನೊಂದಿಗೇ ಯಡಿಯೂರಪ್ಪ ಅವರ ಮಕ್ಕಳು ರಾಜಕೀಯವಾಗಿ ಸಕ್ರಿಯವಾಗತೊಡಗಿದರು.

ಆ ನಡುವೆ, ಕೊಟ್ಟಮಾತಿನಂತೆ ೨೦ ತಿಂಗಳ ಬಳಿಕ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಮುಖ್ಯಮಂತ್ರಿ ಗಾದಿಯನ್ನು ತಮಗೆ ಬಿಟ್ಟುಕೊಡಲಿಲ್ಲ ಎಂದು ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ಮೊಟ್ಟಮೊದಲ ಬಾರಿಗೆ ದೊಡ್ಡ ಹೈಡ್ರಾಮಕ್ಕೆ ಕಾರಣರಾದರು. ನಂತರ ಏಳು ದಿನಗಳ ಅವಧಿಗೆ ಮುಖ್ಯಮಂತ್ರಿಯಾಗಿ, ಬಹಮತ ಸಾಬೀತು ಮಾಡಲಾಗದೆ, ‘ಸಾತ್ ದಿನ್‌ ಕಾ ಸುಲ್ತಾನ್’ ಎಂಬ ಕುಹಕದೊಂದಿಗೆ ಅಧಿಕಾರ ಕಳೆದುಕೊಂಡರು. ಕುಮಾರಸ್ವಾಮಿಯ ವಚನಭ್ರಷ್ಟತೆಯನ್ನೇ ಮುಂದಿಟ್ಟುಕೊಂಡು ರಾಜ್ಯಾದ್ಯಂತ ಸುತ್ತಿದ ಅವರು, ಆಗಲೇ ಮೊದಲ ಬಾರಿಗೆ ರಾಜ್ಯದ ಲಿಂಗಾಯಿತ ನಾಯಕರಾಗಿ ಹೊರಹೊಮ್ಮಿದರು.

೨೦೦೮ರಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ದಕ್ಷಿಣ ಭಾರತದಲ್ಲಿ ಕೇಸರಿ ಪಡೆಗೆ ಹೆಬ್ಬಾಗಿಲು ತೆರೆದ ಯಡಿಯೂರಪ್ಪ, ಕೇವಲ ಎರಡೂವರೆ ವರ್ಷದಲ್ಲೇ ಗಣಿ ಮತ್ತು ಡಿನೋಟಿಫಿಕೇಶನ್ ಹಗರಣಗಳಲ್ಲಿ ಸಿಲುಕಿ, ದೇಶದ ಇತಿಹಾಸದಲ್ಲೇ ಅಧಿಕಾರರೂಢ ಮುಖ್ಯಮಂತ್ರಿಯೊಬ್ಬ ಜೈಲಿಗೆ ಹೋದ ಹೀನಾಯ ಕಳಂಕಕ್ಕೆ ಕಾರಣವಾದರು. ರಾಜ್ಯದ ಇತಿಹಾಸದಲ್ಲೇ ಕಂಡುಕೇಳರಿಯದ ಪ್ರಮಾಣದ ತೀವ್ರಗತಿಯ ಅಭಿವೃದ್ಧಿ ಕಾರ್ಯಗಳನ್ನು ನೀಡಿದ ಸಿಎಂ ಯಡಿಯೂರಪ್ಪ, ಹಾಗೇ ಸರಣಿ ಹಗರಣಗಳು, ರೆಸಾರ್ಟ್ ರಾಜಕಾರಣ, ಭ್ರಷ್ಟಾಚಾರ ಕಾರಣಕ್ಕೂ ಇಡೀ ದೇಶದ ಗಮನ ಸೆಳೆದರು. ಆ ಮೂಲಕ, ಬಿಜೆಪಿ ಮತ್ತು ಕರ್ನಾಟಕದ ರಾಜಕೀಯ ಪರಂಪರೆಯ ಅವಮಾನಕರ ಅಧ್ಯಾಯವನ್ನೂ ಬರೆದರು. ಇಂತಹ ಒಬ್ಬ ಜನನಾಯಕನ ಅಧಃಪತನಕ್ಕೆ ಮನೆಮಂದಿ ಮತ್ತು ಪಕ್ಷದ ಆಪ್ತರ ಮೇಲಿನ ಹಿಡಿತ ಕಳೆದುಕೊಂಡದ್ದೇ ಕಾರಣ ಎಂಬ ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತಿನಲ್ಲಿ ನಿಜವಿರದೆ ಇಲ್ಲ. ಬಳಿಕ ಸ್ವತಃ ಬಿಜೆಪಿಯಿಂದಲೇ ತಿರಸ್ಕಾರಕ್ಕೆ, ಅವಮಾನಕ್ಕೆ ಗುರಿಯಾದ ಯಡಿಯೂರಪ್ಪ, ನಾಲ್ಕು ದಶಕ ಕಾಲ ಹಗಲಿರುಳು ಶ್ರಮಿಸಿ ಕಟ್ಟಿದ ಬಿಜೆಪಿಗೆ ಗುಡ್‌ಬೈ ಹೇಳಿ ಕೆಜೆಪಿ ಪಕ್ಷ ಘೋಷಿಸಿದರು.

೨೦೧೩ರ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಪೆಟ್ಟು ಕೊಡುವ ಮೂಲಕ ತಮ್ಮ ಶಕ್ತಿ ತೋರಿಸಿದರು. ಬಳಿಕ ಚುನಾವಣೆ ಮುಗಿಯುತ್ತಲೇ ಮತ್ತೆ ಬಿಜೆಪಿಗೆ ಮರಳಿದ ಅವರು, ಈ ಬಾರಿ ಕೂಡ ಪಕ್ಷಕ್ಕೆ ನಿಚ್ಚಳ ಬಹುಮತ ಪಡೆಯಲಾಗದೆ ಮತ್ತೆ ಸಂದಿಗ್ಧತೆಯ ರಾಜಕಾರಣಕ್ಕೆ ಅನಿವಾರ್ಯವಾಗಿ ತಲೆಯೊಡಿದ್ದಾರೆ. ಇರದ ಬಹುಮತವನ್ನು ಸಾಧಿಸುವ ಹುಮ್ಮಸ್ಸಿನಲ್ಲಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿಯೂ ಇದೀಗ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಏಕಾಂಗಿ ಹೋರಾಟ ಮತ್ತು ಜನಸಂಪರ್ಕದ ಮೂಲಕವೇ ಬೆಳೆದುಬಂದ ನಾಯಕನೊಬ್ಬ, ತನ್ನ ಸುದೀರ್ಘ ರಾಜಕೀಯ ಅನುಭವವನ್ನು ಬಳಸಿ ರಾಜ್ಯದ ಒಳಿತಿಗೆ ಕೊಡುಗೆ ಕೊಟ್ಟಂತೆಯೇ, ಕಳಂಕಕ್ಕೂ ಕಾರಣವಾದದ್ದು ಮತ್ತು ವೈಯಕ್ತಿಕವಾಗಿಯೂ ಸಾಕಷ್ಟು ನೋವು-ಅವಮಾನಗಳನ್ನು ಅನುಭವಿಸಿದ್ದು ಮನುಷ್ಯನ ಆಳದ ಮಿತಿಯ ಒಂದು ಅತ್ಯುತ್ತಮ ಉದಾಹರಣೆ.

ಇದೀಗ ಹೊಸ ಭರವಸೆಯೊಂದಿಗೆ, ಇಚ್ಛಾಶಕ್ತಿಯೊಂದಿಗೆ ಅಧಿಕಾರದ ಗದ್ದುಗೆಗೇರಿರುವ ಯಡಿಯೂರಪ್ಪ, ಹಿಂದಿನ ತಪ್ಪುಗಳು ಮರುಕಳಿಸದಂತಹ ಆಡಳಿತ ನೀಡುತ್ತಾರೆಯೇ? ಬಹುಮತ ಸಾಬೀತುಪಡಿಸಿ ಅಧಿಕಾರದಲ್ಲಿ ಮುಂದುವರಿಯುತ್ತಾರೆಯೇ ಕಾದುನೋಡಬೇಕಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More