ಟ್ವಿಟರ್ ಸ್ಟೇಟ್ | ಬಿಜೆಪಿ ನಡೆ ಪ್ರಜಾಪ್ರಭುತ್ವಕ್ಕೆ ಅಪಾಯ ಎಂದ ವಕೀಲರು

ಕರ್ನಾಟಕದಲ್ಲಿ ಸರ್ಕಾರ ರಚಿಸುವ ಕಸರತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. ದೇಶದ ವಕೀಲರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಟ್ವಿಟರ್ ಸಾಮಾಜಿಕ ತಾಣವನ್ನು ಬಳಸಿದ್ದಾರೆ. ಅಂತಹ ಕುತೂಹಲಕ ಚರ್ಚೆಯ ವಿವರವಿದು

ಕರ್ನಾಟಕದಲ್ಲಿ ಯಾರಿಗೂ ಸ್ಪಷ್ಟ ಬಹುಮತ ಲಭಿಸದೆ ಇರುವ ಹಿನ್ನೆಲೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ಬಿಜೆಪಿ, ಕಾಂಗ್ರೆಸ್-ಜೆಡಿಎಸ್ ಮೂತ್ರಿಕೂಟವೆರಡೂ ಮುಂದೆ ಬಂದಿರುವುದು ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿದೆ. ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲ ಅವರು ಅತಿ ಹೆಚ್ಚು ಸ್ಥಾನ ಪಡೆದ ಬಿಜೆಪಿಯನ್ನು ಅಧಿಕಾರ ರಚಿಸಲು ಆಹ್ವಾನಿಸಿದ್ದಾರೆ. ಆದರೆ, ಸರ್ಕಾರ ರಚನೆಗೆ ಅಗತ್ಯ ಬಹುಮತ ಹೊಂದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟವನ್ನು ಆರಿಸದೆ ಇರುವುದು ಸಂವಿಧಾನ ವಿರೋಧಿಯಾಗಿದೆ ಎಂಬ ಕಾರಣಕ್ಕೆ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದೆ. ಈ ಹಿನ್ನೆಲೆಯಲ್ಲಿ ಟ್ವಿಟರ್‌ನಲ್ಲಿ ನಡೆದ ಚರ್ಚೆಯತ್ತ ಇಣುಕುನೋಟ ಇಲ್ಲಿದೆ.

ದೆಹಲಿ ಮೂಲದ ವಕೀಲರಾದ ಸಂಜಯ್ ಹೆಗ್ಡೆ ಟ್ವೀಟ್ ಮಾಡಿ, “ಬೆಳಿಗ್ಗೆ ಎದ್ದಕೂಡಲೇ ಕರ್ನಾಟಕ ವಿಧಾನಸಭೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಆದೇಶ ತಿಳಿಯಿತು. ರಾಜಕಾರಣಿಗಳು ಇನ್ನೂ ನ್ಯಾಯಾಲಯದ ಮೆಟ್ಟಿಲು ಹತ್ತುವ ಅವಶ್ಯಕತೆ ಹೊಂದಿದ್ದಾರೆ ಎನ್ನುವುದು ಸಂತೋಷದ ವಿಚಾರ. ಆದರೆ, ಕಳೆದ ಕೆಲವು ವರ್ಷಗಳಿಂದ ರಾಜಕಾರಣಿಗಳು ನ್ಯಾಯಾಲಯದ ಶಕ್ತಿಯನ್ನು ಕುಂದಿಸುತ್ತಲೇ ಬಂದಿದ್ದಾರೆ. ನೀವೆಷ್ಟೇ ಎತ್ತರವಿದ್ದರೂ, ಕಾನೂನು ನಿಮಗಿಂತ ಮೇಲಿರುತ್ತದೆ,” ಎಂದು ಹೇಳಿದ್ದಾರೆ. “ಎರಡು ಅತಿ ವಿಚಿತ್ರ ಬೆಳವಣಿಗೆಗಳನ್ನು ಇಂದು ಬೆಳಗಿನ ಜಾವದ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ಗುರುತಿಸಬಹುದು. ಮೊದಲನೆಯದು, ಮುಕುಲ್ ರೋಹಟಗಿ ಯಾರನ್ನು ಪ್ರತಿನಿಧಿಸುತ್ತಿದ್ದರು ಎನ್ನುವುದೇ ದೊಡ್ಡ ಪ್ರಶ್ನೆಯಾಗಿತ್ತು. ಎರಡನೆಯದಾಗಿ, ಸರ್ಕಾರಿ ವಕೀಲರು ಪ್ರಮಾಣವಚನ ಸ್ವೀಕಾರ ಮಾಡದೆ ಇರುವ ಕಾರಣ ಮತ್ತೊಂದು ಪಕ್ಷಕ್ಕೆ ಹಾರುವುದರಲ್ಲಿ ತಪ್ಪಿಲ್ಲ ಎಂದು ವಾದಿಸುತ್ತಿದ್ದರು,” ಎಂದು ವಕೀಲ ಸಿದ್ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ವಿಚಾರವಾಗಿ ಸುಪ್ರೀಂ ಕೋರ್ಟ್ ವಿಚಾರಣೆಯ ವಿವರಗಳೇ ಮಾಧ್ಯಮಗಳಲ್ಲಿ ತುಂಬಿಕೊಂಡಿದ್ದ ಸಂದರ್ಭದಲ್ಲಿಯೇ ಹಿರಿಯ ವಕೀಲರಾದ ರಾಮ್ ಜೇಠ್ಮಲಾನಿ ಕರ್ನಾಟಕದ ರಾಜಕೀಯ ಬಿಕ್ಕಟ್ಟಿನ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಮತ್ತೊಂದು ದೊಡ್ಡ ಸುದ್ದಿಯಾಯಿತು. ಎಎನ್ಐ ಟ್ವೀಟ್ ಮಾಡಿ, “ರಾಜ್ಯಪಾಲರು ಭ್ರಷ್ಟಾಚಾರಕ್ಕೆ ಮುಕ್ತ ಆಹ್ವಾನವನ್ನು ನೀಡುವಂತಹ ಕಾರ್ಯ ಮಾಡಿದ್ದಾರೆ. ಹೀಗಾಗಿ ವೈಯಕ್ತಿಕ ನೆಲೆಯಲ್ಲಿ ರಾಜ್ಯಪಾಲರ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇನೆ,” ಎಂಬ, ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರ ಹೇಳಿಕೆಯನ್ನು ಟ್ವೀಟ್ ಮಾಡಿದೆ. ವಕೀಲ ಎನ್‌ ಪಿ ಅಮೃತೇಶ್ ಅವರೂ ರಾಜ್ಯಪಾಲರ ನಿರ್ಧಾರವು ಪಕ್ಷಾಂತರಿಗಳಿಗೆ ಅವಕಾಶ ನೀಡಲಿದೆ ಎನ್ನುವ ಕಾರಣಕ್ಕೆ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ ಎಂದು ಲೈವ್ ಲಾ ಹ್ಯಾಂಡಲ್ ಟ್ವೀಟ್ ಮಾಡಿದೆ.

ಬಹಳಷ್ಟು ವಕೀಲರು ರಾಜ್ಯಪಾಲರ ನಿರ್ಧಾರದಿಂದಾಗಿ ಬಿಜೆಪಿಗೆ ಶಾಸಕರನ್ನು ಖರೀದಿಸಲು ಎರಡು ವಾರಗಳು ಸಿಕ್ಕಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ಮೋದಿಯವರ ರಾಜ್ಯಪಾಲರು ಬಿಜೆಪಿಗೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ೮ ಶಾಸಕರನ್ನು ಖರೀದಿಸಲು ಎರಡು ವಾರಗಳನ್ನು ಕೊಟ್ಟಿದ್ದಾರೆ. ಪಕ್ಷಾಂತರ ವಿರೋಧಿ ಕಾಯ್ದೆ ಪ್ರಕಾರ ಅವರು ಅನರ್ಹಗೊಳ್ಳಬೇಕು. ಆದರೆ, ಅನರ್ಹಗೊಳಿಸುವುದು ಬಿಜೆಪಿ ನೇಮಿಸುವ ಹೊಸ ಸಭಾಪತಿಯ ಕೈಯಲ್ಲಿರುತ್ತದೆ. ನಂತರ ನ್ಯಾಯಾಲಯಗಳು ಈ ವಿಚಾರ ಪರಿಹರಿಸಲು ಬಹಳ ಸಮಯ ತೆಗೆದುಕೊಳ್ಳುತ್ತವೆ. ಕಾನೂನು, ನೈತಿಕತೆ ಎಲ್ಲವೂ ನೀರಿನಲ್ಲಿ ಕರಗಿಹೋಗಲಿದೆ,” ಎಂದು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.

ಸದನದೊಳಗೆ ಬಹುಮತ ಸಾಬೀತು ಮಾಡಲು ನೀಡಲಾಗಿರುವ ಎರಡು ವಾರಗಳ ಅವಧಿಯನ್ನು ಹಲವರು ಶುಕ್ರವಾರದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಮೊಟಕುಗೊಳಿಸಬಹುದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ೩-೪ ದಿನಗಳಲ್ಲೇ ಬಹುಮತ ಸಾಬೀತು ಮಾಡಬೇಕಾಗಿ ಬರಬಹುದು ಎಂದು ವಕೀಲ ಪ್ರಶಾಂತ್ ಪಿ ಉಮ್ರಾವ್ ಟ್ವೀಟ್ ಮಾಡಿದ್ದಾರೆ. ಆದರೆ, ಬಿಜೆಪಿ ಪರವಾಗಿ ಟ್ವೀಟ್ ಮಾಡುವ ವಕೀಲರಾದ ಸುಬ್ರಹ್ಮಣ್ಯನ್ ಸ್ವಾಮಿ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಬಿಜೆಪಿಯನ್ನು ಅಧಿಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿರುವುದಕ್ಕೆ ಕಾಂಗ್ರೆಸ್ ಬಳಿ ಯಾವುದೇ ಉತ್ತರವಿರಲಿಲ್ಲ. ಗೋವಾದ ಉದಾಹರಣೆಯನ್ನು ಅವರು ನೀಡುವುದು ಮಾನ್ಯವಾಗುವುದಿಲ್ಲ,” ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ. ಸೋಲಿ ಸೊರಾಬ್ಜಿ ಅವರ ಅಭಿಪ್ರಾಯವನ್ನು ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ. “ಕರ್ನಾಟಕದ ಪರಿಸ್ಥಿತಿ ಬಹಳ ಭಿನ್ನವಾಗಿದೆ. ರಾಜ್ಯಪಾಲರು ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷವನ್ನು ಅಧಿಕಾರ ರಚಿಸಲು ಆಹ್ವಾನಿಸಿರುವುದರಲ್ಲಿ ತಪ್ಪಿಲ್ಲ. ಪಕ್ಷಕ್ಕೆ ಒಂದು ಅವಕಾಶ ಸಿಕ್ಕಿದೆ. ಅವರನ್ನು ಸದನದಲ್ಲಿ ಸೋಲಿಸಬಹುದು,” ಎಂದು ಸೋಲಿ ಸೊರಾಬ್ಜಿ ಹೇಳಿದ್ದಾರೆ.

ಇದನ್ನೂ ಓದಿ : ಸರ್ಕಾರ ರಚನೆ ಕಸರತ್ತು; ಮಧ್ಯರಾತ್ರಿಯ ಸುಪ್ರೀಂ ವಿಚಾರಣೆಯಲ್ಲಿ ಆಗಿದ್ದೇನು?

ವಕೀಲ ಕಮ್ ರಾಜಕಾರಣಿಗಳು ಕೂಡ ಕರ್ನಾಟಕದ ಸರ್ಕಾರ ರಚನೆ ಕಸರತ್ತು ಕುರಿತಾಗಿ ಸುಪ್ರೀಂ ಕೋರ್ಟ್ ವಿಚಾರಣೆ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಲು ಟ್ವಿಟರ್ ಆಶ್ರಯ ಪಡೆದಿದ್ದಾರೆ. ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ, “ಬೊಮ್ಮಾಯಿ ಪ್ರಕರಣದ ತೀರ್ಪಿನಲ್ಲಿ ಯಾವುದೇ ಪಕ್ಷಕ್ಕೂ ಸರ್ಕಾರ ರಚಿಸಲು ಬಹುಮತ ಸಿಗದೆ ಇದ್ದಾಗ ನ್ಯಾಯಾಲಯ ಹೀಗೆ ಹೇಳಿದೆ: ೧. ರಾಜ್ಯಪಾಲರು ಮೊದಲು ಚುನಾವಣಾ ಪೂರ್ವ ಮೈತ್ರಿಕೂಟವನ್ನು ಕರೆಯಬೇಕು. ೨. ಚುನಾವಣಾ ಪೂರ್ವ ಮೈತ್ರಿಕೂಟ ಇಲ್ಲದಿದ್ದರೆ ಚುನಾವಣಾ ನಂತರದ ಮೈತ್ರಿಕೂಟ ಕರೆಯಬೇಕು. ೩. ಚುನಾವಣಾ ನಂತರದ ಮೈತ್ರಿಕೂಟವೂ ಬಹುಮತ ಸಾಬೀತು ಮಾಡಲು ಸಾಧ್ಯವಾಗದೆ ಇದ್ದಾಗ ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷವನ್ನು ಆಹ್ವಾನಿಸಬೇಕು. ಎಂದಿನಂತೆಯೇ ಈ ಬಾರಿಯೂ ಬಿಜೆಪಿ ಪ್ರಜಾಪ್ರಭುತ್ವವನ್ನು ಅಣಕಿಸಿದೆ,” ಎಂದು ಹೇಳಿದ್ದಾರೆ.

ವಕೀಲ ಸಿದ್ ಅವರು ಟ್ವೀಟ್ ಮಾಡಿ, “ಕರ್ನಾಟಕದಲ್ಲಿ ಬಿಜೆಪಿ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ೧೧೭ ಶಾಸಕರು ಹೊರಗಡೆ ಪ್ರತಿಭಟನೆ ನಡೆಸುತ್ತಿರುವುದು ಪ್ರಜಾಸತ್ತೆಗೆ ಅಪಾಯದ ಸೂಚನೆ ಎನ್ನುವುದು ಪೊಳ್ಳು ವಾದ ಎಂದು ಹೇಳುವವರು ಕೇಳುವುದಿಷ್ಟೇ, ನೆಹರು ಬಗ್ಗೆ ಏನು ಹೇಳುವಿರಿ? ಟಿಪ್ಪು ಬಗ್ಗೆ ಏನು ಹೇಳುವಿರಿ?” ಎಂದಿದ್ದಾರೆ. ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಅವರು ಟ್ವೀಟ್ ಮಾಡಿ, “ಬಿ ಎಸ್ ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ನೀಡಿದ ಪತ್ರ ಅವರ ಭವಿಷ್ಯ ನಿರ್ಧರಿಸಲಿದೆ. ೧೦೪ಕ್ಕಿಂತ ಹೆಚ್ಚಿನ ಸಂಖ್ಯೆಯನ್ನು ಅವರು ಕೊಟ್ಟಿಲ್ಲ. ರಾಜ್ಯಪಾಲರ ಆಹ್ವಾನವೂ ಯಾವುದೇ ಸಂಖ್ಯೆಯನ್ನು ಉಲ್ಲೇಖಿಸುವುದಿಲ್ಲ,” ಎಂದು ಹೇಳಿದ್ದಾರೆ. ಕಪಿಲ್ ಸಿಬಲ್, ಆನಂದ್ ಶರ್ಮಾ ಸೇರಿದಂತೆ ಹಲವು ವಕೀಲ ರಾಜಕಾರಣಿಗಳು ಈ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಬಿಜೆಪಿ ವಕ್ತಾರ ಮತ್ತು ವಕೀಲರಾದ ರವಿಶಂಕರ್ ಪ್ರಸಾದ್ ಅವರು ಈ ಕುರಿತಾಗಿ ತಮ್ಮ ಪತ್ರಿಕಾಗೋಷ್ಠಿಯ ವರದಿಗಳನ್ನೇ ಟ್ವೀಟ್ ಮಾಡಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More