ಸರ್ಕಾರ ರಚನೆ ಕಸರತ್ತು; ಮಧ್ಯರಾತ್ರಿಯ ಸುಪ್ರೀಂ ವಿಚಾರಣೆಯಲ್ಲಿ ಆಗಿದ್ದೇನು?

ಮಧ್ಯರಾತ್ರಿ 2ರಿಂದ ಮುಂಜಾನೆ 5 ಗಂಟೆವರೆಗೆ ವಾದ-ಪ್ರತಿವಾದ ಆಲಿಸಿದ ತ್ರಿಸದಸ್ಯರ ಸುಪ್ರೀಂ ಕೋರ್ಟ್ ನ್ಯಾಯಪೀಠ, ಕರ್ನಾಟಕ ರಾಜ್ಯಪಾಲರ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದಿದೆ. ಆದರೆ, ಈ ಕುರಿತು ವಿಚಾರಣೆ ಮುಂದುವರಿಸುವುದಾಗಿಯೂ ತಿಳಿಸಿದೆ

ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುವ ವಿಚಾರ ಮಧ್ಯರಾತ್ರಿಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು. ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದ ಮುಂದೆ ಕಾಂಗ್ರೆಸ್-ಜೆಡಿಎಸ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಮತ್ತು ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಬಿಜೆಪಿ ಪರ ವಾದ ಮಂಡಿಸಿದರು.

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದರೂ ಉಪಸ್ಥಿತರಿರಲಿಲ್ಲ. ಮುಕುಲ್ ರೋಹಟ್ಗಿ ಅವರು ತಾವು ಕೆಲವು ಬಿಜೆಪಿ ಶಾಸಕರ ಪರವಾಗಿ ವಾದ ಮಂಡಿಸುತ್ತಿದ್ದೇವೆ ಎಂದು ನ್ಯಾಯಾಲಯದ ಮುಂದೆ ಹೇಳಿಕೊಂಡರು. ಅಲ್ಲದೆ, ಯಡಿಯೂರಪ್ಪ ಪರವಾಗಿ ತಾವು ವಾದ ಮಂಡಿಸುತ್ತಿಲ್ಲ ಎನ್ನುವುದನ್ನೂ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು. ವಾದಗಳನ್ನು ಆಲಿಸಿದ ನ್ಯಾ.ಎ ಕೆ ಸಿಕ್ರಿ, ನ್ಯಾ.ಅಶೋಕ್ ಭೂಷಣ್ ಮತ್ತು ನ್ಯಾ.ಬೋಡ್ಬೆ ಅವರಿದ್ದ ಪೀಠವು, ರಾಜ್ಯಪಾಲರ ನಿರ್ಧಾರದಲ್ಲಿ ಮಧ್ಯಪ್ರವೇಶಿಸಿ ಬಿಜೆಪಿಯ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿತು. ಆದರೆ, ಈ ಕುರಿತು ವಿಚಾರಣೆ ಮುಂದುವರಿಸುವುದಾಗಿ ತಿಳಿಸಿತು.

ಈ ಸಂಬಂಧ ಟ್ವೀಟ್ ಮಾಡಿರುವ ಬಾರ್ ಆಂಡ್ ಬೆಂಚ್ ಟ್ವಿಟರ್ ಹ್ಯಾಂಡಲ್, ವಿಚಾರಣೆಯ ಸಂಪೂರ್ಣವಿವರ ನೀಡಿದೆ. “ರಾಜ್ಯಪಾಲರು ಯಾವುದೇ ಒಂದು ನಿರ್ಧಾರಕ್ಕೆ ಸಹಿ ಹಾಕುವುದನ್ನು ತಡೆಯಲು ಸಾಧ್ಯವಿಲ್ಲ,” ಎಂದು ಬಿಜೆಪಿ ಪರ ವಕೀಲ ಮುಕುಲ್ ರೋಹಟ್ಗಿ ವಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ರಚಿಸಲು ಆಹ್ವಾನಿಸುವ ವಿಚಾರವಾಗಿ ರಾಜ್ಯಪಾಲರಿಗೆ ಇರುವ ಅಧಿಕಾರದ ಕುರಿತು ಸಾರ್ವಜನಿಕ ಚರ್ಚೆ ಬಿರುಸಾಗಿದೆ.

ಅಭಿಷೇಕ್ ಸಿಂಗ್ವಿ ಅವರು ಟ್ವೀಟ್ ಮಾಡಿ, “ಸುಪ್ರೀಂ ಕೋರ್ಟ್ ರಾತ್ರಿ ೨ ಗಂಟೆಗೆ ವಿಚಾರಣೆ ಆರಂಭಿಸಿ ಸುಮಾರು ಮೂರು ಗಂಟೆಗಳ ಕಾಲ ಸಹನೆಯಿಂದ ವಾದ-ಪ್ರತಿವಿವಾದ ಆಲಿಸಿರುವುದನ್ನು ಗೌರವಿಸಬೇಕು. ಪ್ರಮಾಣವಚನಕ್ಕೆ ತಡೆಯಾಜ್ಞೆ ನೀಡದೆ ಇದ್ದರೂ ಮುಂದಿನ ಆದೇಶಗಳನ್ನು ಕಾದಿರಿಸಿದೆ. ಯಡಿಯೂರಪ್ಪ ಅವರು ತಾತ್ಕಾಲಿಕವಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ದಾಖಲೆಗಳನ್ನು ನೋಡಿದ ನಂತರ ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶವನ್ನು ಬದಲಿಸಬಹುದು. ಸದನದಲ್ಲಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ನೀಡಿರುವ ಕಾಲಾವಕಾಶವನ್ನು ಕಡಿಮೆ ಮಾಡಬಹುದು,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಪತ್ರಕರ್ತೆ ಮತ್ತು ವಕೀಲೆ ಅಪೂರ್ವ ವಿಶ್ವನಾಥ್ ಪ್ರಕಾರ, “ಒಟ್ಟಾರೆ ವಿಚಾರಣೆಯ ಸಂದರ್ಭದಲ್ಲಿ ಅಭಿಷೇಕ್ ಸಿಂಘ್ವಿ ಅವರು ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದರು; ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು, ಬಹುಮತ ಸಾಬೀತಿನ ಅವಧಿ ಕಡಿಮೆ ಮಾಡಬೇಕು ಮತ್ತು ಯಡಿಯೂರಪ್ಪ ಅವರ ಪ್ರಮಾಣವಚನಕ್ಕೆ ಅವಕಾಶ ನೀಡಬಾರದು.”

ಇನ್ನು, ರಾಜ್ಯಪಾಲರು ಬಹುಮತ ಸಾಬೀತಿಗೆ ೧೫ ದಿನಗಳ ಅವಕಾಶ ಕೊಟ್ಟಿರುವುದು ಏಕೆ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಬಿಜೆಪಿ ಪರ ವಕೀಲರ ಬಳಿ ಉತ್ತರವಿರಲಿಲ್ಲ. “ಅದಕ್ಕೆ ರಾಜ್ಯಪಾಲರೇ ಉತ್ತರಿಸಬೇಕು. ನ್ಯಾಯಾಲಯ ಅವರನ್ನು ಇಲ್ಲಿಗೆ ಕರೆತರಲು ಸಾಧ್ಯವಿಲ್ಲ,” ಎಂದು ರೋಹಟ್ಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ರಾಜ್ಯಪಾಲರು ನ್ಯಾಯಾಲಯಕ್ಕೆ ಬರಲು ಸಾಧ್ಯವಿಲ್ಲದೆ ಇದ್ದರೂ ಅವರ ಕಾರ್ಯಗಳ ವಿಶ್ಲೇಷಣೆಗೆ ಅವಕಾಶವಿದೆ,” ಎಂದಿತು.

ಪಕ್ಷಾಂತರ ವಿರೋಧಿ ಕಾಯ್ದೆ ಬಗ್ಗೆ ಚರ್ಚೆ ನಡೆದರೂ, ಈ ಕಾಯ್ದೆ ಶಾಸಕರು ಪ್ರಮಾಣವಚನ ಸ್ವೀಕರಿಸಿದ ನಂತರವಷ್ಟೇ ಅನ್ವಯವಾಗುತ್ತದೆ ಎಂದು ರೋಹಟ್ಗಿ ವಾದಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ನ್ಯಾ.ಸಿಕ್ರಿ ಮತ್ತು ಭೂಷಣ್ ಅವರು, “ಹಾಗೆಂದು ಪ್ರಮಾಣವಚನಕ್ಕೆ ಮೊದಲು ಸೂಟ್‌ಕೇಸ್‌ಗಳು ಅದಲು ಬದಲಾಗುವುದಿಲ್ಲವೇ? ಇದಕ್ಕೆ ಅವಕಾಶವಿರಬಾರದು,” ಎಂದು ಹೇಳಿದ್ದಾರೆ.

ಗೋವಾ ಮತ್ತು ಇತರ ರಾಜ್ಯಗಳಲ್ಲಿ ಬಹುಮತವಿರುವ ಪಕ್ಷವನ್ನು ಅಧಿಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸದೆ ಇರುವ ವಿಚಾರವಾಗಿಯೂ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು. ಈ ಹಿನ್ನೆಲೆಯಲ್ಲಿ ಸ್ವಲ್ಪ ಹೊತ್ತು ವಾದ-ಪ್ರತಿವಾದ ನಡೆದರೂ, ಮಧ್ಯರಾತ್ರಿಯಲ್ಲಿ ವಿಚಾರಣೆ ನಡೆಸುವ ತುರ್ತು ಈಗಿಲ್ಲ ಎಂದು ಮುಕುಲ್ ರೋಹಟ್ಗಿ ಅವರು ವಿಚಾರಣೆ ಮುಂದೂಡಿಕೆಗೆ ಪ್ರಯತ್ನಿಸಿದರು. ಪತ್ರಕರ್ತ ಜಿ ಅನಂತಕೃಷ್ಣನ್ ಪ್ರಕಾರ, “ನ್ಯಾಯಾಲಯವು ಮೇ ೧೫ ಮತ್ತು ೧೬ರಂದು ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ಸರ್ಕಾರ ರಚಿಸುವುದಾಗಿ ನೀಡಿದ ಪತ್ರಗಳನ್ನು ವಿಶ್ಲೇಷಿಸಲು ಬಯಸಿದೆ. ಶುಕ್ರವಾರ (ಮೇ ೧೮) ಬೆಳಗ್ಗೆ ೧೦:೩೦ಕ್ಕೆ ಮತ್ತೆ ಸೇರಲಿರುವ ಪೀಠ, ಈ ಪತ್ರಗಳ ಬಗ್ಗೆ ವಿಚಾರಣೆ ನಡೆಸಲಿದೆ.”

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More