ಬಿಜೆಪಿಯೇತರ ಒಕ್ಕೂಟ ರಚನೆಗೆ ಇಂಬು ನೀಡಿದ ಕಾಂಗ್ರೆಸ್- ಜೆಡಿಎಸ್ ಮೈತ್ರಿ

ಸದ್ಯ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್-ಬಿಎಸ್‌ಪಿ ಮೈತ್ರಿ ರಾಜಕಾರಣವು ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ರಾಜ್ಯದ ಈ ಕುತೂಹಲಕರ ಬೆಳವಣಿಗೆಯು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೇತರ ಪಕ್ಷಗಳ ಒಕ್ಕೂಟ ರಚನೆಗೆ ಇಂಬು ನೀಡಿದೆ

ಕರ್ನಾಟಕದ ರಾಜಕೀಯ ಬೆಳವಣಿಗೆ ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಿದೆ. ಬಿ ಎಸ್ ಯಡಿಯೂರಪ್ಪ ಅವರು ತಾವು ಅಂದುಕೊಂಡ ತಾರೀಖಿನಂದೇ ಬಹುಮತ ಸಾಬೀತುಪಡಿಸುವ ಭರವಸೆಯೊಂದಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇತ್ತ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಗೆ ಮುಂದಾಗಿ ಸರ್ಕಾರ ರಚಿಸಲು ತುದಿಗಾಲ ಮೇಲೆ ನಿಂತಿವೆ. ರಾಜ್ಯದಲ್ಲಿ ಇಷ್ಟೆಲ್ಲ ಕುತೂಹಲಕಾರಿ ರಾಜಕೀಯ ಬೆಳವಣಿಗೆಗಳು ಘಟಿಸಲು ಬಿಜೆಪಿಯೇತರ ಶಕ್ತಿಗಳು ಕಾರಣ ಎಂಬುದು ಗುಟ್ಟಾಗಿ ಉಳಿದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ ಮುಂದಾಗಿರುವುದರ ಹಿಂದೆ ೨೦೧೯ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಹೊತ್ತಿಗೆ ರಾಜ್ಯ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನ ಗಟ್ಟಿಗೊಳ್ಳುತ್ತಿದೆ. ಈ ಮೂಲಕ ಬಿಜೆಪಿಯೇತರ ಶಕ್ತಿಗಳ ಧ್ರುವೀಕರಣಕ್ಕೆ ಕರ್ನಾಟಕದಲ್ಲಾದ ಜೆಡಿಎಸ್, ಬಿಎಸ್ ಪಿ ಹಾಗೂ ಕಾಂಗ್ರೆಸ್ ಮೈತ್ರಿ ಮುನ್ನುಡಿ ಬರೆದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

೨೦೧೯ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆ ತೃತೀಯ ರಂಗದ ಚಟುವಟಿಕೆಗಳು ಹಿನ್ನಡೆಗೆ ಸರಿದಂತೆ ಕಾಣುತ್ತಿದ್ದು, ಆ ಸ್ಥಾನದಲ್ಲಿ ಕೇಂದ್ರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯ ವಿರುದ್ಧ ಪ್ರತಿಪಕ್ಷಗಳೆಲ್ಲವೂ ಒಗ್ಗೂಡಿ ಸೆಣೆಸುವ ತಂತ್ರ ಮುನ್ನಲೆಗೆ ಬರುತ್ತಿದೆ. ಚುನಾವಣೆಗೂ ಮುನ್ನವೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಬಿಎಸ್ ಪಿ ನಾಯಕಿ ಮಾಯವತಿ ಅವರೊಂದಿಗೆ ಸಮಾಲೋಚಿಸಿ ಬಿಎಸ್ ಪಿ ಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಕಣಕ್ಕೆ ಇಳಿದಿದ್ದರು. ಮಂಗಳವಾರ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅತಂತ್ರ ವಿಧಾನಸಭೆಯ ಲಕ್ಷಣ ಅರಿತ ಮಾಯಾವತಿ ಅವರು ದೇವೇಗೌಡರನ್ನು ಸಂಪರ್ಕಿಸಿ ಕಾಂಗ್ರೆಸ್ಸಿನೊಂದಿಗೆ ಸಾಗುವ ಅಗತ್ಯದ ಮಾತುಗಳನ್ನು ಹೇಳಿದ್ದರು ಎನ್ನಲಾಗಿದೆ.

ಬಿಜೆಪಿ ವಿರುದ್ಧ ಸೆಣಸುವ ಹೋರಾಟಕ್ಕೆ ಬಲ ತುಂಬಲು ಮಾಯಾವತಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ (ತೃಣ ಮೂಲ ಕಾಂಗ್ರೆಸ್) ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಕೂಡಲೇ ಸಂಪರ್ಕಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಚರ್ಚಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಖುದ್ದು ಮಮತಾ ಬ್ಯಾನರ್ಜಿ ಅವರೇ ದೇವೇಗೌಡರಿಗೆ ಕರೆ ಮಾಡಿ ಸಲಹೆ ನೀಡಿದ್ದಾರೆ.

ಇದಕ್ಕೂ ಮೊದಲು ಮಮತಾ ಬ್ಯಾನರ್ಜಿ ಅವರು ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಿ, ಬರುವ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿಯನ್ನು ಸೋಲಿಸಲು ಹೋರಾಟ ರೂಪಿಸುವ ಭಾಗವಾಗಿ ಕರ್ನಾಟಕದಲ್ಲಿ ಜೆಡಿಎಸ್ ಗೆ ಬೆಂಬಲ ನೀಡಲು ಸೂಚಿಸಿದ್ದರು ಎನ್ನಲಾಗಿದೆ. ಹೀಗಾಗಿ ಸೋನಿಯಾ ಗಾಂಧಿ ಅವರೇ ದೇವೇಗೌಡರಿಗೆ ಕರೆ ಮಾಡಿ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಈ ವಿಷಯವನ್ನು ಕಾಂಗಸ್ಸಿನ ಹಿರಿಯ ಮುಖಂಡ ಅಶೋಕ ಗೆಹ್ಲೋಟ ಅವರು ಸ್ಪಷ್ಟ ಪಡಿಸಿ, “ಸೋನಿಯಾ ಗಾಂಧಿ ಅವರು ದೇವೇಗೌಡರೊಂದಿಗೆ ಚರ್ಚಿಸಿದ್ದಾರೆ. ನಾವು ಸಂಪೂರ್ಣವಾಗಿ ಜೆಡಿಎಸ್ ಸರ್ಕಾರ ರಚಿಸಲು ಬೆಂಬಲ ನೀಡುವುದಾಗಿ,” ತಿಳಿಸಿದ್ದನ್ನು ಇಲ್ಲಿ ನೆನೆಯಬಹುದು.

ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮಧ್ಯಾಹ್ನದ ಮೇಲೆ ಮಮತಾ ಬ್ಯಾನರ್ಜಿ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಎಲ್ಲ ಅಭ್ಯರ್ಥಿಗಳಿಗೆ ಟ್ವಿಟರ್ ನಲ್ಲಿ ಶುಭ ಕೋರುತ್ತ, ಚುನಾವಣೆಗೂ ಮೊದಲೇ ಜೆಡಿಎಸ್ ನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಈಗ ಕಾಂಗ್ರೆಸ್ ಪಕ್ಷ ಜೆಡಿಎಸ್ ಗೆ ಬೆಂಬಲ ನೀಡಿದೆ ಎಂದು ತಿಳಿಸಿದ್ದರು.

ಹಾಗೆಯೇ ಮಮತಾ ಬ್ಯಾನರ್ಜಿ ಅವರು ಕರ್ನಾಟಕ ರಾಜಕಾರಣ ವಿಚಾರವಾಗಿ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ, “ಬಿಜೆಪಿ ವಿರುದ್ಧ ಸೃಷ್ಟಿಯಾಗುತ್ತಿರುವ ಹೋರಾಟಕ್ಕೆ ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸೂಕ್ತ,” ಎಂದಿದ್ದರು. ಮುಂದುವರೆದು, ದೇವೇಗೌಡರು ಒಳ್ಳೆಯ ಮನಸ್ಸಿನವರು. 1996 ರಲ್ಲಿ ಅವರು ಪ್ರಧಾನಿ ಆಗಲು ಕಾಂಗ್ರೆಸ್‌ ಬೆಂಬಲ ನೀಡಿತ್ತು. ಈಗ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕೈಜೋಡಿಸಬೇಕು ಎಂಬುದು ನನ್ನ ಹಾರೈಕೆ,” ಎಂದು ತಿಳಿಸಿದ್ದರು.

ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ನಡೆಯುವ ಹೊತ್ತಿನಲ್ಲಿ ಜೆಡಿಯು ನಾಯಕ ಶರದ್ ಯಾದವ್ ಮಾದ್ಯಮದೊಂದಿಗೆ ಮಾತನಾಡಿ, “ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ತೃತೀಯ ರಂಗ ಗಟ್ಟಿಯಾಗಿ ನೆಲೆ ನಿಲ್ಲುವ ಭರವಸೆ ಮೂಡುತ್ತಿಲ್ಲ. ಹೀಗಾಗಿ ಬಿಜೆಪಿಯನ್ನು ಮಣಿಸಲು ಎಲ್ಲ ಪ್ರತಿಪಕ್ಷಗಳು ಒಂದಾಗಬೇಕಿದೆ,” ಎಂದು ಸಲಹೆ ನೀಡಿದ್ದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕಿದೆ.

೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದೇಶಾದ್ಯಂತ ದಲಿತ ಹಾಗೂ ಮುಸ್ಲಿಂ ಸಮುದಾಯದ ಜನರ ಮೇಲೆ ಕ್ರೂರವಾದ ಹಲ್ಲೆಗಳು ನಡೆಯುತ್ತಿರುದು ಬಿಜೆಪಿಯೇತರ ಶಕ್ತಿಗಳ ಕಣ್ಣನ್ನು ಕೆಂಪಾಗಿಸಿದೆ. ಇದರಿಂದಾಗಿ ಬಿಜೆಪಿಯೇತರ ಪಕ್ಷಗಳು ಒಕ್ಕೂಟ ಸ್ಥಾಪಿಸುವ ಮಾತುಗಳು ಈಗ ಹೆಚ್ಚು ಬಲಗೊಳ್ಳುತ್ತಿವೆ. ಈ ಹಿಂದೆಯೇ ಮಹಾರಾಷ್ಟ್ರದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ‘ಸಂವಿಧಾನ ದಿನ’ ಆಚರಿಸುವ ಮೂಲಕ ಬಿಜೆಪಿಯನ್ನು ದೂರವಿಡಲು ನಾಂದಿ ಹಾಡಿದ್ದರು.

ಒಡಿಶಾದಲ್ಲಿ ಬಿಜೆಡಿಯ ನವೀನ್ ಪಟ್ನಾಯಕ್ ಇದಕ್ಕೆ ಮತ್ತಷ್ಟು ಜೀವ ತುಂಬಿದ್ದರು. ಪಟ್ನಾಯಕ್ ಏರ್ಪಡಿಸಿದ ಖಾಸಗಿ ಕಾರ್ಯಕ್ರಮಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಪಾಲ್ಗೊಂಡಿದ್ದು ಗಮನಾರ್ಹವಾಗಿತ್ತು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣ ಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಕೂಡ ಬಿಜೆಪಿಯನ್ನು ದೂರವಿಡಲು ಕಾಂಗ್ರೆಸ್ಸಿನ ನೆರಳಿನಡಿ ‘ಫೆಡರಲ್ ಫ್ರಂಟ್’ ಕುರಿತು ಹೊಸ ಚರ್ಚೆ ಹುಟ್ಟುಹಾಕಿದ್ದರು. ನಂತರದಲ್ಲಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಚುನಾವಣೆಗೂ ಮುನ್ನ ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ‘ಪಿಪಲ್ ಫ್ರಂಟ್’ ಬಗ್ಗೆ ಚರ್ಚಿಸಿ ಬೆಂಬಲ ಕೋರಿದ್ದರು.

ಈಗ ರಾಜ್ಯ ಚುನಾವಣೆ ಫಲಿತಾಂಶ ಅತಂತ್ರವಾದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಅವರು ಖುದ್ದು ರಂಗ ಪ್ರವೇಶಿಸಿ ಸೋನಿಯಾ ಗಾಂಧಿ ಹಾಗೂ ಎಚ್ ಡಿ ದೇವೇಗೌಡರೊಂದಿಗೆ ಸಮಾಲೋಚಿಸಿ ಕಾಂಗ್ರೆಸ್ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಕೊಡಬೇಡಿ ಎಂದು ಆಂಧ್ರದ ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ಕಾಂಗ್ರೆಸ್‌– ಜೆಡಿಎಸ್ ಗೆ ಕಿವಿಮಾತು ಕೂಡ ಹೇಳಿದ್ದಾರೆ. ಬಿಜೆಪಿ ವಿರುದ್ಧ ಹೋರಾಟದ ಕುರಿತು ರಾಜ್ಯ ಚುನಾವಣೆ ನಂತರ ಮಾತನಾಡುವೆ ಎಂದಿದ್ದ ದೇವೇಗೌಡರು ಈಗ ಕಾಂಗ್ರೆಸ್ಸಿನ ಬೆಂಬಲ ಒಪ್ಪಿಕೊಂಡಿರುವುದು ಬಿಜೆಪಿಯೇತರ ಶಕ್ತಿಗಳಿಗೆ ಬಲತುಂಬವ ನಡೆಯಾಗಿ ರೂಪುಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಮೈತ್ರಿ ತಂದ ಮೂವರು ಮಹಿಳೆಯರು 

ಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರನ್ನು ಸೋಲಿಸಲು ರಣತಂತ್ರ ಹೆಣೆಯುತ್ತಿರುವ ದಿಗ್ಗಜ ರಾಜಕಾರಣಿಗಳಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಹೊಸ ಸಾಧ್ಯತೆ ತೆರೆದಿದ್ದು, ಈಗಾಗಲೇ ರಾಮ್ ವಿಲಾಸ್‌ ಪಾಸ್ವಾನ್‌, ನಿತೀಶ್‌ ಕುಮಾರ್‌, ಲಾಲು ಪ್ರಸಾದ್‌ ಅವರು ಬಿಹಾರದಲ್ಲಿ ಒಂದಾಗುವ ಮಾತುಕತೆಗಳು ಗರಿಗೆದರಿವೆ. ಇತ್ತ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಹಾಗೂ ಎಸ್‌ಪಿ ಮೈತ್ರಿ ಇನ್ನಷ್ಟು ಗಟ್ಟಿಗೊಳ್ಳಲಿದೆ. ಹಾಗೆಯೇ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ಶರದ್‌ ಪವಾರ್‌, ಶರದ್‌ ಯಾದವ್‌, ನವೀನ್‌ ಪಟ್ನಾಯಕ್‌ ಸೇರಿದಂತೆ ಹಲವು ಪ್ರತಿಪಕ್ಷಗಳ ಮುಖಂಡರಲ್ಲಿ ಮಹಾಮೈತ್ರಿಯ ಆಸೆ ಹುಟ್ಟುತ್ತಿದೆ. ಕಾಂಗ್ರೆಸ್ ಸಹ ಪ್ರಾದೇಶಿಕ ಪಕ್ಷಗಳ ಕಡೆ ಹೆಚ್ಚು ವಾಲುತ್ತಿದ್ದು, ಇದಕ್ಕೆ ಕರ್ನಾಟಕದ ಮೂಲಕ ಚಾಲನೆ ನೀಡಿದೆ.

ಒಟ್ಟಾರೆ ಸದ್ಯದ ಕರ್ನಾಟಕದ ರಾಜಕಾರಣದ ಬೆಳವಣಿಗೆ ರಾಷ್ಟ್ರರಾಜಕಾರಣದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗುವ ಲಕ್ಷಣ ಕಾಣುತ್ತಿದೆ. ಅದು ರಾಷ್ಟ್ರಮಟ್ಟದಲ್ಲಿ ಬಿಜೆಪಿಯೇತರ ಪಕ್ಷಗಳ ಒಕ್ಕೂಟ ರಚನೆಗೆ ಇಂಬು ನೀಡಿದೆ.

ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
ಕೇರಳದಲ್ಲಿ ಬಿಜೆಪಿಗೆ ರಾಜಕೀಯ ನೆಲೆ ಒದಗಿಸಲಿದೆಯೇ ಶಬರಿಮಲೆ ವಿವಾದ?
ಬಳ್ಳಾರಿ ಕಣದಲ್ಲಿ ಸಿದ್ದು-ರಾಮುಲು ವಾಕ್ಸಮರದಾಚೆಗೂ ಉಳಿಯುವ ಪ್ರಶ್ನೆಗಳೇನು?
Editor’s Pick More