ಮೋದಿ ವಾಗ್ದಾಳಿಗೆ ಗುರಿಯಾದ ಮೂವರು ನಾಯಕರು ಭಾರಿ ಅಂತರದಿಂದ ಗೆದ್ದರು!

ಬಿಜೆಪಿ ಪರ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಧಾನಿ ಮೋದಿಯವರು, ಬೆಂಗಳೂರಿನ ಮೂವರು ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಯಾರ ವಿರುದ್ಧ ಮೋದಿಯವರು ವಾಗ್ದಾಳಿ ನಡೆಸಿದ್ದರೋ ಅವರು ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ ಎಂಬುದು ಗಮನಾರ್ಹ!

ಕೆಲ ದಿನಗಳ ಹಿಂದೆ ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿಯವರು, ಕಾಂಗ್ರೆಸ್‌ ಪಕ್ಷದ ಮೂವರು ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬೆಂಗಳೂರನ್ನು ಗಾರ್ಡನ್‌ ಸಿಟಿಯಿಂದ ಗಾರ್ಬೇಜ್ ಸಿಟಿ ಮಾಡಿರುವುದಾಗಿ ಆರೋಪಿಸಿದ್ದರು. ಆದರೆ, ಮೋದಿಯವರ ತೀವ್ರ ವಾಗ್ದಾಳಿಗೆ ಗುರಿಯಾದ ಕಾಂಗ್ರೆಸ್‌ನ ಮೂವರು ನಾಯಕರೂ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿಯವರು, ಎನ್‌ ಎ ಹ್ಯಾರಿಸ್, ರೋಷನ್ ಬೇಗ್‌, ಕೆ ಜೆ ಜಾರ್ಜ್‌ ಅವರನ್ನು ಬೆಂಗಳೂರಿನ ಶತ್ರುಗಳೆಂದು ಕರೆದಿದ್ದರು. ಬೆಂಗಳೂರಿನ ವಿಚಾರಗಳನ್ನು ನೋಡಿಕೊಳ್ಳಲು ಈ ಮೂವರ ಕೈಗೆ ಅಧಿಕಾರ ಕೊಟ್ಟಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ್ದರು. “ಮೂವರು ತ್ರಿವಳಿಗಳ ಕೈಗೆ ಅಧಿಕಾರ ಕೊಟ್ಟು ಜಗತ್ತೇ ಮೆಚ್ಚುವ ಬೆಂಗಳೂರನ್ನು ಹಾಳುಮಾಡಿದ್ದಾರೆ. ಈ ಮೂವರು ಕಾಂಗ್ರೆಸ್ ನಾಯಕರೂ ಒಬ್ಬರಿಗಿಂತ ಒಬ್ಬರು ಹೆಚ್ಚು ಕುಖ್ಯಾತಿ ಗಳಿಸಿದವರು. ಈ ಮೊದಲು ಗೃಹಸಚಿವರಾಗಿದ್ದವರು ಹಿರಿಯ ಪೊಲೀಸ್ ಅಧಿಕಾರಿ (ಎಂ ಕೆ ಗಣಪತಿ) ಸಾವಿನಲ್ಲಿ ಸಂಬಂಧ ಹೊಂದಿದ್ದ ಆರೋಪಕ್ಕೊಳಗಾದವರು. ಅಂಥವರು ಜೈಲಿನಲ್ಲಿರಬೇಕಿತ್ತು. ಆದರೆ, ವಿಧಾನಸಭೆಯಲ್ಲಿದ್ದಾರೆ,” ಎಂದು ಮೋದಿ ಕೆ ಜೆ ಜಾರ್ಜ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು.

“ಭೂ ಮಾಫಿಯಾದಲ್ಲಿ ಸಕ್ರಿಯರಾಗಿರುವ ಹಾಗೂ ಗಲ್ಫ್‌ ರಾಷ್ಟ್ರಗಳಿಂದ ಅಕ್ರಮ ಹಣ ವರ್ಗಾವಣೆ ಮಾಡುವ ‘ಹೊಳೆಯುವ’ ಹೆಸರನ್ನಿರಿಸಿಕೊಂಡವರ ವಿರುದ್ಧ ಗಂಭೀರ ಪ್ರಕರಣಗಳು ದಾಖಲಾಗಿವೆ,” ಎನ್ನುವ ಮೂಲಕ ರೋಷನ್ ಬೇಗ್‌ ವಿರುದ್ಧವೂ ಮೋದಿ ವಾಗ್ದಾಳಿ ನಡೆಸಿದ್ದರು. “ಶಾಂತಿನಗರವನ್ನು ಪ್ರತಿನಿಧಿಸುವ ವ್ಯಕ್ತಿ ಶಾಂತಿಯೊಂದನ್ನು ಬಿಟ್ಟು ಉಳಿದೆಲ್ಲ ವಿಚಾರಗಳಲ್ಲಿ ತೊಡಗಿಕೊಂಡಿದ್ದಾರೆ,” ಎಂದು ಎನ್‌ ಎ ಹ್ಯಾರಿಸ್‌ ವಿರುದ್ಧ ಮಾತನಾಡಿದ್ದರು. ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಗೂಂಡಾಗಿರಿಯ ಕುರಿತು ಪ್ರಸ್ತಾಪಿಸಿದ್ದ ಮೋದಿ, ಈ ಕುರಿತು ಸರಕಾರ ಕಣ್ಮುಚ್ಚಿ ಕುಳಿತಿದೆ ಎಂದು ದೂಷಿಸಿದ್ದರು. ಇಂತಹ ನಾಯಕರ ಕೈಯಲ್ಲಿ ಅಧಿಕಾರವಿದ್ದರೆ ಬೆಂಗಳೂರಿನ ಅಭಿವೃದ್ಧಿ ಹೇಗೆ ಸಾಧ್ಯ ಎಂದೂ ಪ್ರಶ್ನಿಸಿದ್ದರು. ಮೋದಿಯವರಿಂದ ಟೀಕೆಗೊಳಗಾದ ಮೂವರೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೆಂಬುದು ಗಮನಾರ್ಹ. ಮೋದಿಯವರ ಟೀಕೆ ಏನೇ ಇದ್ದರೂ, ಇದೀಗ ಈ ಮೂವರೂ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಮತದಾರರ ಒಲವು ತಮಗಿದೆ ಎಂದು ನಿರೂಪಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬೆಂಗಳೂರು ನಗರದಿಂದ ನಾಲ್ಕು ಮಂದಿ ಅಲ್ಪಸಂಖ್ಯಾತ ಅಭ್ಯರ್ಥಿಗಳು ಆಯ್ಕೆಯಾಗಿರುವುದು ವಿಶೇಷ.

ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪ್ರಧಾನಿ ಮೋದಿ ಯಾರ ವಿರುದ್ಧ ವಾಗ್ದಾಳಿ ನಡೆಸಿದ್ದರೋ ಆ ಮೂವರು ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸರ್ವಜ್ಞ ನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ ಜೆ ಜಾರ್ಜ್‌ 1,09,955 ಮತ ಗಳಿಸಿ, ಬಿಜೆಪಿ ಅಭ್ಯರ್ಥಿ ಎಂ ಎನ್ ರೆಡ್ಡಿಯವರನ್ನು 53,304 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಕಳೆದ ಚುನಾವಣೆಯಲ್ಲಿಯೂ ಸರ್ವಜ್ಞ ನಗರದಲ್ಲಿ ಗೆಲುವು ಕಾಂಗ್ರೆಸ್ ಕಡೆಗಿತ್ತು.

ಇದನ್ನೂ ಓದಿ : ಸಿದ್ದರಾಮಯ್ಯ ವಿರುದ್ಧ ನೇರ ದಾಳಿ ಮಾಡದೆ ಜಾರುತ್ತಿದ್ದಾರೆಯೇ ಮೋದಿ

ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹ್ಯಾರಿಸ್, 60,009 ಮತ ಗಳಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ ವಾಸುದೇವಮೂರ್ತಿ ಅವರನ್ನು 18,205 ಮತಗಳ ಅಂತರದಲ್ಲಿ ಹ್ಯಾರಿಸ್ ಸೋಲಿಸಿದ್ದಾರೆ. ಕಳೆದ ಬಾರಿಯೂ ಶಾಂತಿನಗರದಲ್ಲಿ ಕಾಂಗ್ರೆಸ್‌ ಗೆದ್ದಿತ್ತು.

ಇನ್ನು, ರೋಷನ್ ಬೇಗ್ ಅವರು ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 59,742 ಮತಗಳನ್ನು ಗಳಿಸಿದ್ದಾರೆ. ಬೇಗ್, ಬಿಜೆಪಿ ಅಭ್ಯರ್ಥಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಸ್ಪರ್ಧಿಸಿದ್ದರು. ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿಯವರ ತೀವ್ರ ವಾಗ್ದಾಳಿಗೆ ಗುರಿಯಾಗಿಯೂ 15,040 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
ಕೇರಳದಲ್ಲಿ ಬಿಜೆಪಿಗೆ ರಾಜಕೀಯ ನೆಲೆ ಒದಗಿಸಲಿದೆಯೇ ಶಬರಿಮಲೆ ವಿವಾದ?
ಬಳ್ಳಾರಿ ಕಣದಲ್ಲಿ ಸಿದ್ದು-ರಾಮುಲು ವಾಕ್ಸಮರದಾಚೆಗೂ ಉಳಿಯುವ ಪ್ರಶ್ನೆಗಳೇನು?
Editor’s Pick More