ಬಿಹಾರ, ಗೋವಾ ರಾಜಕೀಯದಲ್ಲಿ ಸಂಚಲನ ಮೂಡಿಸಿದ ‘ಕರ್ನಾಟಕ‌ ಮಾದರಿ’

ಕರ್ನಾಟಕದಲ್ಲಿ ದೊಡ್ದ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಬಹುಮತ ಕೊರತೆ ನಡುವೆಯೂ ಸರ್ಕಾರ ರಚನೆಗೆ ಆಹ್ವಾನ ಪಡೆದು ಬೀಗಿದೆ. ಈಗ ಇದನ್ನೇ ಮುಂದುಮಾಡಿರುವ ಬಿಹಾರದ ಆರ್‌ಜೆಡಿ ಹಾಗೂ ಗೋವಾದ ಕಾಂಗ್ರೆಸ್, ಕರ್ನಾಟಕ ಮಾದರಿಯಲ್ಲೇ ತಮಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿವೆ!

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯು ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ರಾಜ್ಯಪಾಲ ವಜೂಭಾಯಿ ವಾಲಾ ಅವಕಾಶ ಮಾಡಿಕೊಟ್ಟಿದ್ದಾರೆ. ಸಂಖ್ಯಾಬಲದ ಕೊರತೆ ಎದುರಿಸುತ್ತಿರುವ ಬಿಜೆಪಿ ಇನ್ನಷ್ಟೇ ಬಹುಮತ ಸಾಬೀತುಪಡಿಸಬೇಕಿದೆ. ೧೦೪ ಸ್ಥಾನಗಳನ್ನು ಗೆದ್ದಿರುವ ಬಿಜೆಪಿಯು ತಾನು ಅಧಿಕಾರ ಹಿಡಿಯುವುದು ಸಂವಿಧಾನಾತ್ಮಕವಾದ ಕ್ರಮ ಎನ್ನುತ್ತಿದೆ. ಇತ್ತ, ಪಕ್ಷೇತರರನ್ನು ಸೇರಿ ತಮ್ಮ ಬಳಿ ೧೧೮ ಶಾಸಕರ ಬಲವಿದೆ ಎಂದು ಕಾಂಗ್ರೆಸ್‌-ಜೆಡಿಎಸ್‌ ಹೇಳಿಕೊಂಡಿವೆ. ರಾಜ್ಯದ ಮುಖ್ಯಮಂತ್ರಿಯಾಗಿ ಬಿ ಎಸ್‌ ಯಡಿಯೂರಪ್ಪ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈಗ ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಿದ್ದು, ಜೆಡಿಎಸ್‌-ಕಾಂಗ್ರೆಸ್‌ಗೆ‌ ಬಿಜೆಪಿಯು ಶಾಸಕರನ್ನು ಖರೀದಿಸುವ ಭೀತಿ ಎದುರಾಗಿದೆ.

ಕರ್ನಾಟಕದಲ್ಲಿ ಸರ್ಕಾರ ರಚಿಸುವ ಸಂಬಂಧದ ವಿಚಾರವು ರಾಷ್ಟ್ರದ ಗಮನ ಸೆಳೆದಿದ್ದು, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಕರ್ನಾಟಕ ಮಾದರಿಯನ್ನೇ ಗಮನದಲ್ಲಿಟ್ಟುಕೊಂಡು ಬಿಹಾರದಲ್ಲಿ ಬಹುದೊಡ್ಡ ಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಹಾಗೂ ಗೋವಾದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್‌ ತಮಗೆ ಸರ್ಕಾರ ರಚಿಸಲು ಅವಕಾಶ ಕಲ್ಪಿಸಬೇಕು ಎಂದು ಅಲ್ಲಿನ ರಾಜ್ಯಪಾಲರಿಗೆ ಮನವಿ ಮಾಡುವುದಾಗಿ ಹೇಳಿವೆ. ಆ ಮೂಲಕ ಕರ್ನಾಟಕದಲ್ಲಿ ಅಧಿಕಾರ ಹಿಡಿದೇ ತೀರುವ ಹಠಕ್ಕೆ ಬಿದ್ದಿರುವ ಬಿಜೆಪಿಗೆ ಇಕ್ಕಟ್ಟಿನ ಸಂದರ್ಭ ಸೃಷ್ಟಿಸಿವೆ. ಈ ಸಮಸ್ಯೆಯನ್ನು ಬಿಜೆಪಿ ಯಾವ ರೀತಿ ನಿಭಾಯಿಸಲಿದೆ ಎಂಬುದು ಕುತೂಹಲ ಸೃಷ್ಟಿಸಿದೆ. ರಾಷ್ಟ್ರಮಟ್ಟದಲ್ಲಿ ಈ ಪ್ರಕ್ರಿಯೆ ವ್ಯಾಪಕ ಚರ್ಚೆಗೆ ಅನುವು ಮಾಡಿಕೊಡುವುದರೊಂದಿಗೆ, ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಸವಾಲಾಗಿ ಪರಿಣಿಮಿಸುವ ಸಾಧ್ಯತೆಯೂ ಇದೆ.

2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ‘ಮಹಾಮೈತ್ರಿ’ ಮಾಡಿಕೊಂಡು ಕಣಕ್ಕಿಳಿದಿದ್ದ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು‌ ಹಾಗೂ ಲಾಲೂ ಪ್ರಸಾದ್‌ ಯಾದವ್‌ ನೇತೃತ್ವದ ಆರ್‌ಜೆಡಿ ತಲಾ ೧೦೧ ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ೨೪೩ ಸ್ಥಾನ ಬಲದ ವಿಧಾನಸಭೆಯಲ್ಲಿ ಆರ್‌ಜೆಡಿ ೮೦, ಜೆಡಿಯು ೭೧ ಹಾಗೂ ೪೧ ಸ್ಥಾನದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ೨೭ ಸ್ಥಾನ ಗೆದ್ದಿದ್ದವು. ಸರಳ ಬಹುಮತಕ್ಕೆ ೧೨೨ ಸ್ಥಾನದ ಅಗತ್ಯವಿದ್ದು, ಮಹಾಮೈತ್ರಿಗೆ ೧೭೮ ಸ್ಥಾನಗಳು ಲಭಿಸಿದ್ದವು. ಫಲಿತಾಂಶದ ನಂತರ ಕೆಲ ತಿಂಗಳು ಈ ಒಕ್ಕೂಟ ಅಧಿಕಾರವನ್ನೂ ಅನುಭವಿಸಿತ್ತು. ಆದರೆ, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ದಾಳಿ ಆರಂಭಿಸಿದ್ದ ಲಾಲೂ ಪ್ರಸಾದ್‌ ಯಾದವ್ ಹಾಗೂ ಬಿಹಾರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಲಾಲೂ ಪುತ್ರ ತೇಜಸ್ವಿ ಯಾದವ್‌‌ ಅವರ ವಿರುದ್ಧ ರೈಲ್ವೆ ಹೋಟೆಲ್‌ ಗುತ್ತಿಗೆ ಹಗರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಎಫ್‌ಐಆರ್‌ ದಾಖಲಿಸಿತ್ತು. ಇದೇ ಸಂಬಂಧ, ಭ್ರಷ್ಟಾಚಾರವನ್ನು ಮುಂದು ಮಾಡಿದ್ದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಮಹಾಮೈತ್ರಿಯಿಂದ ಹೊರಬಂದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿಸಿದರು. ಇದೆಲ್ಲದರ ಹಿಂದೆ ಕೇಂದ್ರ ಸರ್ಕಾರದ ಬೆದರಿಕೆ ಹಾಗೂ ಒತ್ತಡದ ತಂತ್ರಗಳು ಕೆಲಸ ಮಾಡಿದ್ದವು ಎನ್ನುವ ಗಂಭೀರ ಆರೋಪಗಳು ಪ್ರತಿಪಕ್ಷಗಳಿಂದ ಕೇಳಿಬರತೊಡಗಿದವು.

ಈಗ ಕರ್ನಾಟಕದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಅನುಸರಿಸಿರುವ ಮಾರ್ಗವನ್ನೇ ಮುಂದುಮಾಡಿರುವ ಆರ್‌ಜೆಡಿ ನಾಯಕ ಹಾಗೂ ಲಾಲೂ ಪ್ರಸಾದ್‌ ಯಾದವ್‌ ಪುತ್ರ ತೇಜಸ್ವಿ ಯಾದವ್ ಅವರು, "ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಆರ್‌ಜೆಡಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಅನುಮತಿ ನೀಡಬೇಕು. ಈ ಸಂಬಂಧ ಶುಕ್ರವಾರ ರಾಜ್ಯಪಾಲ ಸತ್ಯಪಾಲ್ ಮಲಿಕ್‌ಗೆಗೆ ಮನವಿ ಸಲ್ಲಿಸಲಾಗುವುದು,” ಎಂದು ಹೇಳಿದ್ದಾರೆ.

ಈ ಮಧ್ಯೆ, ಗೋವಾದಲ್ಲಿ ದೊಡ್ಡ ಪಕ್ಷವಾಗಿರುವ ತನಗೆ ಸರ್ಕಾರ ರಚಿಸಲು ಅವಕಾಶ ಕಲ್ಪಿಸಬೇಕು ಎಂದು ಕಾಂಗ್ರೆಸ್‌ ರಾಜಕೀಯ ಚಟುವಟಿಕೆ ಆರಂಭಿಸಿದೆ. 40 ಸ್ಥಾನ ಬಲದ ಗೋವಾ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ೨೧ ಶಾಸಕರ ಬೆಂಬಲ ಅಗತ್ಯವಿದೆ. ೨೦೧೭ರ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್‌ ೧೭ ಸ್ಥಾನ ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ ೧೩ ಸ್ಥಾನ ಗೆದ್ದಿದ್ದರೂ ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷ (ಎಂಜಿಪಿ) ಹಾಗೂ ಗೋವಾ ಫಾರ್ವರ್ಡ್‌ ಪಕ್ಷದ (ಜಿಎಫ್‌ಪಿ) ತಲಾ ಮೂವರು ಶಾಸಕರು, ಇಬ್ಬರು ಪಕ್ಷೇತರರು ಮತ್ತು ಎನ್‌ಸಿಪಿಯ ಶಾಸಕರೊಬ್ಬರನ್ನು ಸೇರಿಸಿ ಸರ್ಕಾರ ರಚಿಸಿದೆ. ಈಗ ಇದನ್ನೇ ಮುಂದುಮಾಡಿ‌, ಸರ್ಕಾರ ರಚಿಸಲು ಅವಕಾಶ ಕಲ್ಪಿಸಬೇಕು ಎಂದು ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್‌ ನಾಯಕ ಯತೀಶ್‌ ನಾಯಕ್‌ ಹೇಳಿದ್ದಾರೆ. ಗೋವಾದಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಕಾಂಗ್ರೆಸ್ ಗೋವಾ ಉಸ್ತುವಾರಿ ಚೆಲ್ಲ ಕುಮಾರ್‌ ಅಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ.

ಇದನ್ನೂ ಓದಿ : ಸರ್ಕಾರ ರಚನೆ ಕಸರತ್ತು; ಮಧ್ಯರಾತ್ರಿಯ ಸುಪ್ರೀಂ ವಿಚಾರಣೆಯಲ್ಲಿ ಆಗಿದ್ದೇನು?

ತಮಿಳುನಾಡಿನಲ್ಲಿಯೂ, ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ ಎಂದು ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್‌ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಮಣಿಪುರ, ಮೇಘಾಲಯದಲ್ಲೂ ಬಿಜೆಪಿ ಇದೇ ತಂತ್ರವನ್ನು ಅನುರಿಸುವ ಮೂಲಕ ಅಧಿಕಾರ ಹಿಡಿದಿದೆ. ಈಗ ಈ ಎಲ್ಲ ಚಟುವಟಿಕೆಗಳು ಬಿಜೆಪಿಗೆ ತಿರುಗುಬಾಣವಾಗಿವೆ. ಕರ್ನಾಟಕದಲ್ಲಿ ಸರ್ಕಾರ ರಚಿಸುವ ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದ್ದು, ಶುಕ್ರವಾರ ಮತ್ತೆ ವಿಚಾರಣೆ ನಡೆಯಲಿದೆ. ಗೋವಾ, ಬಿಹಾರ, ಮಣಿಪುರ, ಮೇಘಾಲಯದಲ್ಲೂ ಬಿಜೆಪಿ ಅನುಸರಿಸಿರುವ ಮಾರ್ಗಗಳು ಕೋರ್ಟ್‌ನಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇದೆ.

ಬಿಜೆಪಿಯು ಸಂವಿಧಾನಬಾಹಿರ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವಾಗ ಸಂಖ್ಯಾಬಲ ಇಲ್ಲದೆ ಇರುವ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಿಲು ಮುಂದಾಗಿದೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ವಿರುದ್ಧ ಎಲ್ಲ ಪಕ್ಷಗಳು ಒಂದಾಗಬೇಕು ಎಂಬ ಕೂಗು ಎದ್ದಿದ್ದು, ಸುಪ್ರೀಂ ಕೋರ್ಟ್‌ ನಡೆಯು ಮುಂದಿನ ರಾಜಕೀಯ ಬೆಳವಣಿಗೆಗಳಿಗೆ ದಿಕ್ಸೂಚಿಯಾಗಲಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More