ಮೋದಿ, ಅಮಿತ್ ಶಾ ಅನುಪಸ್ಥಿತಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ!

ಯಡಿಯೂರಪ್ಪ ಅವರ ಅಧಿಕಾರ ಸ್ವೀಕಾರ ಸಮಾರಂಭ ನಿರೀಕ್ಷೆಯಂತೆ ಚುಟುಕಾಗಿತ್ತು. ಕೆಲವೇ ಕೆಲವು ಬಿಜೆಪಿ ನಾಯಕರ ಸಮ್ಮುಖದಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದರು. ಶೋಭಾ ಕರಂದ್ಲಾಜೆ, ಪ್ರಕಾಶ್‌ ಜಾವಡೇಕರ್ ಸೇರಿದಂತೆ‌ ಕೆಲವೇ ಕೆಲವರು ಮುಖಂಡರು ಹಾಜರಿದ್ದರು

ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಬಿ ಎಸ್‌ ಯಡಿಯೂರಪ್ಪ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ದೇವರ ಹಾಗೂ ರೈತರ ಹೆಸರಿನಲ್ಲಿ ಬಿಎಸ್‌ವೈ ಪ್ರಮಾಣವಚನ ಸ್ವೀಕರಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌‌ ಶಾ ನೇತೃತ್ವದಲ್ಲಿ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆಂದು ಹೇಳಿದ್ದರು. ಆದರೆ, ರಾಜಭವನದ ಗಾಜಿನ ಗೃಹದಲ್ಲಿ, ಕೆಲವೇ ಜನರ ಮುಂದೆ ತುರಾತುರಿಯಲ್ಲಿ ಪ್ರಮಾಣವಚನ ಸ್ವೀಕರಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಯಾವ ಪಕ್ಷಕ್ಕೂ ಪೂರ್ಣ ಬಹುಮತ ಸಿಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉಂಟಾಗಿರುವ ಅಸ್ಥಿರತೆ ನಡುವೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಡೆ ಪ್ರಜಾಪ್ರಭುತ್ವದ ಆಶಯಗಳ ಪರವಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಯಡಿಯೂರಪ್ಪ ಅವರ ಅಧಿಕಾರ ಸ್ವೀಕಾರ ಸಮಾರಂಭ ನಿರೀಕ್ಷೆಯಂತೆ ಸರಳ ಹಾಗೂ ಚುಟುಕಾಗಿತ್ತು. ಕೆಲವೇ ಕೆಲವು ಬಿಜೆಪಿ ನಾಯಕರ ಸಮ್ಮುಖದಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದರು. ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್‌ ಜಾವಡೇಕರ್, ಅನಂತ್‌ ಕುಮಾರ್‌ ಸೇರಿದಂತೆ‌ ಹಲವು ರಾಜ್ಯ ಬಿಜೆಪಿ ಮುಖಂಡರು ಹಾಜರಿದ್ದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜಭವನದ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಪ್ರಮಾಣವಚನ ಸ್ವೀಕರಿಸಿ ವಿಧಾನಸೌಧಕ್ಕೆ ಆಗಮಿಸಿದ ಯಡಿಯೂರಪ್ಪ ಅವರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಸ್ವಾಗತಿಸಿದರು. ವಿಧಾನಸೌಧ ಪ್ರವೇಶದ ವೇಳೆ ಯಡಿಯೂರಪ್ಪ ಜೊತೆ ಮಾಜಿ ಸಚಿವರುಗಳಾದ ಸಿ ಎಂ ಉದಾಸಿ, ಮುರುಗೇಶ್‌ ನಿರಾಣಿ, ಬಸವರಾಜ ಬೊಮ್ಮಾಯಿ ಹಾಗೂ ಸಿ ಸಿ ಪಾಟೀಲ್‌ ಮುಂತಾದವರಿದ್ದರು.

ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಮತ್ತು ನೇಕಾರರ ಸಾಲ ಮನ್ನಾ ಬಗ್ಗೆ ಪ್ರಸ್ತಾಪಿಸಿದರು. ಪೂರ್ಣ ಬಹುಮತ ಇಲ್ಲದಿದ್ದರೂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಡೆಯ ಬಗ್ಗೆ ಮಾತನಾಡಲು ಬಿಎಸ್‌ವೈ ಹಿಂಜರಿದರು. ಸರ್ಕಾರ ರಚನೆ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣ ಬಹುಮತದ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ಹಾರಿಕೆಯ ಉತ್ತರ ನೀಡಿದರು.

“ರಾಜ್ಯದ ರೈತರು ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದ ಒಂದು ಲಕ್ಷ ರು.ವರೆಗಿನ ಬೆಳೆ ಸಾಲ ಹಾಗೂ ಒಂದು ಲಕ್ಷ ರು.ವರೆಗಿನ ನೇಕಾರರ ಸಾಲ ಮನ್ನಾ ಕುರಿತಂತೆ ಚುನಾವಣಾಪೂರ್ವದಲ್ಲಿ ಬಿಜೆಪಿ ರಾಜ್ಯದ ಜನತೆಗೆ ನೀಡಿದ್ದ ಭರವಸೆಯನ್ನು ಒಂದೆರಡು ದಿನಗಳಲ್ಲಿ ಈಡೇರಿಸಲಾಗುವುದು,” ಎಂದು ಯಡಿಯೂರಪ್ಪ ತಿಳಿಸಿದರು.

ಇದನ್ನೂ ಓದಿ : ಕುತೂಹಲದ ಕೇಂದ್ರವಾದ ರಾಜಭವನ; ಸರ್ಕಾರ ರಚಿಸಲು ಜೆಡಿಎಸ್‌-ಕಾಂಗ್ರೆಸ್‌, ಬಿಜೆಪಿ ಕಸರತ್ತು

ಇತ್ತ ವಿಧಾನಸೌಧದ ಮುಂದಿನ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ಪ್ರತಿಭಟನೆ ಮಾಡಿದರು. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ, ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

ರಾಜ್ಯದಲ್ಲಿ ನಡೆಯುತ್ತಿರುವ ಈ ಎಲ್ಲ ಬೆಳವಣಿಗಳು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಅಧಿಕಾರಕ್ಕೆ ಬರಲು ಬಿಜೆಪಿ ಪಟ್ಟು ಹಿಡಿದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಗೆ ಕಸರತ್ತುಗಳು ನಡೆಯುತ್ತಲೇ ಇವೆ. ರಾಜ್ಯ ರಾಜಕಾರಣ ಸುಪ್ರೀಂ ಕೋರ್ಟ್‌, ರಾಜಭವನ, ವಿಧಾನಸೌಧ ಹಾಗೂ ರೆಸಾರ್ಟ್‌ಗಳ ಸುತ್ತ ಗಿರಕಿ ಹೊಡೆಯುತ್ತಿರುವುದು ರಾಜಕೀಯ ಅಸ್ಥಿರತೆಗೆ ಎಡೆಮಾಡಿಕೊಟ್ಟಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More