ಏಕಾಂಗಿಯಾದ ಸಿದ್ದರಾಮಯ್ಯ; ಕಮರಿದ ಹಿಂದುಳಿದ ವರ್ಗದ ಮತಗಳು

ತನ್ನ ನೆಚ್ಚಿನ ನಾಯಕ ದೇವರಾಜ್ ಅರಸ್ ಅವರಂತೆಯೇ ಈಗ ಮೋದಿ ಯುಗದಲ್ಲಿ ರಾಷ್ಟ್ರೀಯ ರಾಜಕೀಯ ನಿರೂಪಣೆಯನ್ನು ಬದಲಿಸುವುದಕ್ಕೆ ತನ್ನನ್ನೇ ಆಯ್ಕೆ ಮಾಡಲಾಗಿದೆ ಎಂದು ಸಿದ್ದರಾಮಯ್ಯನವರಂತಹ ಸ್ಥಳೀಯ ನಾಯಕರು ನಂಬುವುದಕ್ಕೆ ಹಲವು ವಂಚಕ ಸಾದೃಶ್ಯಗಳಿದ್ದವು

ಕರ್ನಾಟಕದ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಬಾರಿ ತಮ್ಮನ್ನು ಕರ್ನಾಟಕದಲ್ಲಿ ಅತ್ಯಂತ ದೀರ್ಘ ಅವಧಿಯ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ದೇವರಾಜ ಅರಸು ಅವರೊಂದಿಗೆ ಹೋಲಿಸಿಕೊಂಡಿದ್ದಾರೆ. ಎರಡನೇ ಅವಧಿಗೂ ಮುಖ್ಯಮಂತ್ರಿಯಾಗುವ ಮೂಲಕ ಅರಸು ಅವರ ಪರಂಪರೆಯನ್ನು ತಾನು ಮುಂದುವರೆಸುತ್ತೇನೆ ಎಂದು ಸಿದ್ದರಾಮಯ್ಯನವರು ಅಂದುಕೊಂಡಿದ್ದಿರಬಹುದು.

ವಾಸ್ತವದಲ್ಲಿ, 2015ರಲ್ಲಿ ನಡೆದ ದೇವರಾಜ ಅರಸು ಅವರ ಜನ್ಮಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಅರಸು ಅವರು ಬಳಸಿದ್ದ ಸರ್ಕಾರಿ ಮರ್ಸಿಡೆಸ್ ಕಾರಿನಲ್ಲಿ (ಈಗ ಅದು ಸರ್ಕಾರದ ಸಂಗ್ರಹಾಲಯದ ಅಮೂಲ್ಯ ವಸ್ತುವಾಗಿದೆ) ಸಿದ್ದರಾಮಯ್ಯನವರು ತುಸು ದೂರ ಪ್ರಯಾಣಿಸಿದ್ದರು. ಕೆಲವರು ಅದನ್ನು ಅವಿವೇಕ ಎಂದು ವಿಮರ್ಶಿಸಿದ್ದರೆ, ಇನ್ನು ಅನೇಕರು ಅವರ ಈ ಪೊಳ್ಳುಜಂಬವನ್ನು ಕ್ಷಮಿಸಿದ್ದರು. ವಿನಯಪೂರ್ಣ ಆರಂಭದಿಂದ ಮೊದಲುಗೊಂಡು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುವ ತನಕ ಸಿದ್ದರಾಮಯ್ಯ ಸುದೀರ್ಘ ಪಯಣವನ್ನು ಮಾಡಿಬಂದಿದ್ದಾರೆ ಎಂದು ಅವರು ಯೋಚಿಸಿದ್ದರು. ಅಷ್ಟಕ್ಕೂ ಅರಸು ಅವರ ಸಾಮಾಜಿಕ ನ್ಯಾಯದ ವಾರಸುದಾರನಾಗಬೇಕೆಂದು ಬಯಸುವುದು ಕೆಟ್ಟ ವಿಷಯವೇನಲ್ಲ.

ಕಾಂಗ್ರೆಸ್ ಕೂಡ ಅದ್ಭುತ ಹೋರಾಟ ನಡೆಸುತ್ತಿದ್ದಾಗ ಹಾಗೂ ಚುನಾವಣೆಯ ದಿನ ಮತದಾನವು ದಾಖಲೆಯ ಶೇಕಡ 72.36ಕ್ಕೆ ಮುಟ್ಟಿದಾಗ, ಇದು 1978ರ ಪುನರಾವರ್ತನೆ ಎಂದು ಜನರಿಗೆ ಅನ್ನಿಸುತ್ತಿತ್ತು. ಆ ವರ್ಷ ಅರಸು ಅವರು ಆಡಳಿತವಿರೋಧಿ ಅಲೆ ಹಾಗೂ ದೇಶದಾದ್ಯಂತ ಬೀಸುತ್ತಿದ್ದ ತುರ್ತುಪರಿಸ್ಥಿತಿ ವಿರೋಧಿ ಅಲೆಗಳನ್ನು ಮಣಿಸಿ ಅಮೋಘ 149 ಸ್ಥಾನಗಳ ಬಹುಮತದೊಂದಿಗೆ ತಮ್ಮ ಅಧಿಕಾರ ಉಳಿಸಿಕೊಂಡಿದ್ದರು. ತನ್ನ ನೆಚ್ಚಿನ ನಾಯಕ ದೇವರಾಜ ಅರಸು ಅವರಂತೆಯೇ ಈಗ ಮೋದಿ ಯುಗದಲ್ಲಿ ರಾಷ್ಟ್ರೀಯ ರಾಜಕೀಯ ನಿರೂಪಣೆಯನ್ನು ಬದಲಿಸುವುದಕ್ಕೆ ಹಾಗೂ ಅದೇ ವೇಳೆಯಲ್ಲಿ ಗಾಂಧಿ ಕುಟುಂಬವನ್ನು ಪುನಶ್ಚೇತನಗೊಳಿಸುವುದಕ್ಕೆ (ಇಂದಿರಾ ಗಾಂಧಿಯವರು ಅರಸು ಕಣ್ಗಾವಲಿನಲ್ಲಿ ಪುನಶ್ಚೇತನಗೊಂಡಂತೆ) ತನ್ನನ್ನೇ ಆಯ್ಕೆ ಮಾಡಲಾಗಿದೆ ಎಂದು ಸಿದ್ದರಾಮಯ್ಯನವರಂತಹ ಸ್ಥಳೀಯ ನಾಯಕರು ನಂಬುವುದಕ್ಕೆ ಹಲವು ವಂಚಕ ಸಾದೃಶ್ಯಗಳಿದ್ದವು.

ಆದರೆ ದುರಾದೃಷ್ಟವಶಾತ್ ಸಿದ್ದರಾಮಯ್ಯನವರ ಪಯಣ ಹಠಾತ್ತನೆ ಕೊನೆಯಾಯಿತು. ಅವರು ಈ ಚುನಾವಣೆಯನ್ನು ಗೆದ್ದಿದ್ದರೆ ಅಥವಾ ಕಾಂಗ್ರೆಸ್ ಸರಳ ಬಹುಮತದ ಗಡಿಯ ಹತ್ತಿರ ಬಂದಿದ್ದರೂ ಅವರು ರಾಷ್ಟ್ರೀಯ ನಾಯಕರಾಗಿಬಿಡುತ್ತಿದ್ದರು. ಅವರು ಸೋಲಿನ ದುಃಖವನ್ನು ಅದುಮಿಡುವ ಒತ್ತುಪಟ್ಟಿಯಂತೆ ತಮ್ಮೆರಡೂ ಕೈಗಳನ್ನು ಎದೆಗವಚಿಕೊಂಡು ನಿಂತಿದ್ದ ದೃಶ್ಯವನ್ನು ನೋಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅಂತಹ ದುಸ್ಥಿತಿಯಲ್ಲಿ ಅವರನ್ನು ಎಂದೂ ಯಾರೂ ನೋಡಿರಲಿಲ್ಲ.

ಅವರನ್ನು ಅವರ ಸ್ಥಾನದಿಂದ ದೂಡಿದ ಶಕ್ತಿಯಾದರೂ ಯಾವುದು?

ಸಿದ್ದರಾಮಯ್ಯನವರ ನೆಚ್ಚಿನ ನಾಯಕ ದೇವರಾಜು ಅರಸು ಅವರು ನೀಡಿದ್ದ ಎಚ್ಚರಿಕೆಯನ್ನು ಸಿದ್ದರಾಮಯ್ಯನವರು ಅಧಿಕಾರದಲ್ಲಿರುವಾಗಲೇ ಗಂಭೀರವಾಗಿ ಪರಿಗಣಿಸಬೇಕಿತ್ತು. ಅರಸು ಅವರು ಅಧಿಕಾರ ಕಳೆದುಕೊಂಡ ಮೇಲೆ ಹಾಗೂ ಯಾವ ಹಿಂದುಳಿದ ವರ್ಗಗಳನ್ನು ಅನಿಯಮಿತವಾಗಿ ಸಶಕ್ತಗೊಳಿಸಬೇಕು ಎಂದು ಅವರು ಸುಮಾರು ಒಂದು ದಶಕದ ಕಾಲ ಹೋರಾಡಿದರೋ ಅದೇ ಹಿಂದುಳಿದ ವರ್ಗಗಳ ಜನತೆ ಮತ್ತು ನಾಯಕರು ಅವರನ್ನು ತೊರೆದ ನಂತರ ಏಕಾಂಗಿಯಾಗಿದ್ದ ಅರಸು ಈ ರೀತಿ ನೋವಿನಿಂದ ಹೇಳಿದ್ದರು: ಹಿಂದುಳಿದ ಜಾತಿಗಳು ಹೆಚ್ಚೆಂದರೆ ಆರ್ಥಿಕ ಪ್ರಯೋಜನಗಳನ್ನು ಪಡೆಯುವುದಕ್ಕಾಗಿ ಒಂದು 'ವರ್ಗ'ವಾಗಿ ಒಗ್ಗೂಡಿ ಮುಂದೆ ಬರುತ್ತವೆಯೇ ಹೊರತು ತಮ್ಮ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವವರಿಗೆ ನಿರಂತರ ರಾಜಕೀಯ ಬೆಂಬಲ ನೀಡುವುದಕ್ಕೆ ಒಂದು 'ಜಾತಿ'ಯಾಗಿ ಒಗ್ಗೂಡಿ ನಿಲ್ಲುವುದಿಲ್ಲ.

ಅರಸು ಅವರು ಮೈಸೂರು ರಾಜಾಡಳಿತದಲ್ಲಿದ್ದ ತೀರಾ ಚಿಕ್ಕದಾದ ಕ್ಷತ್ರಿಯ ಸಮುದಾಯದಿಂದ ಬಂದವರು. ಆದರೆ, ಸಿದ್ದರಾಮಯ್ಯ ಸಂಖ್ಯಾತ್ಮಕವಾಗಿ ಬಹಳಷ್ಟು ದೊಡ್ಡದಾಗಿರುವ ಕುರುಬ ಸಮುದಾಯದಿಂದ ಬಂದವರು. ಈ ಸಮುದಾಯಕ್ಕೆ ತಮ್ಮ ಜನಸಂಖ್ಯಾ ಶಕ್ತಿಯ ಮತ್ತು ಸ್ವತಂತ್ರ ಅಸ್ಮಿತೆಯ ಅರಿವಾಗಿದ್ದು 1980ರ ದಶಕದಲ್ಲಿ. ಒಕ್ಕಲಿಗರು ಮತ್ತು ಲಿಂಗಾಯತರು ಕ್ರಮವಾಗಿ ದಕ್ಷಿಣ ಮತ್ತು ಉತ್ತರ ಕರ್ನಾಟಕದ ವಿಶಾಲ ಪ್ರದೇಶದಲ್ಲಿ ಕೇಂದ್ರೀಕೃತವಾಗಿದ್ದರೆ ಅದಕ್ಕೆ ವ್ಯತಿರಿಕ್ತವಾಗಿ ಕುರುಬರು ಇಡೀ ರಾಜ್ಯಾದ್ಯಂತ ಚದುರಿದ್ದಾರೆ. ಚುನಾವಣಾ ಗೆಲುವುಗಳಲ್ಲಿ ಅವರು ಬೆಂಬಲ ಜಾತಿಯಾಗಿ ಪ್ರವರ್ತಿಸುತ್ತಾರೆ. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಎಲ್ಲಾ ಹಿಂದುಳಿದ ಜಾತಿಗಳನ್ನು, ದಲಿತರನ್ನು ಮತ್ತು ಅಲ್ಪಸಂಖ್ಯಾತರನ್ನು (ಅಹಿಂದ) ಒಂದೇ ವೇದಿಕೆ ಮೇಲೆ ತಂದು ಪ್ರಬಲ ಜಾತಿಗಳಾದ ಒಕ್ಕಲಿಗ ಮತ್ತು ಲಿಂಗಾಯತರಿಗೆ ಇದಿರಾಗಿ ಒಂದು ಬಲಿಷ್ಠ ಶಕ್ತಿಯನ್ನು ರೂಪಿಸುವುದಕ್ಕೆ ಪ್ರಯತ್ನಿಸಿದ್ದು.

ಹಾಗೆ ಕಲ್ಪನೆಯಾಧಾರದಲ್ಲಿ ಲೆಕ್ಕಾಚಾರ ಮಾಡಿದರೆ ಈ ಅಹಿಂದ ವರ್ಗ ರಾಜ್ಯದ ಇಡೀ ಜನಸಂಖ್ಯೆಯ ಅರ್ಧ ಭಾಗದಷ್ಟಾಗುತ್ತದೆ. ಆದರೆ, ಏಕೈಕ ಸಮಸ್ಯೆಯೆಂದರೆ, ಈ ಗುಂಪು ಚರಿತ್ರೆಯ ಎಲ್ಲಾ ಕಾಲಘಟ್ಟದಲ್ಲೂ, ಎಲ್ಲಾ ಸಂದರ್ಭದಲ್ಲೂ ಒಂದು ಗಟ್ಟಿ ಗುಂಪಾಗಿ ಇರುವುದಕ್ಕೆ ಆಗುತ್ತಿಲ್ಲ. ಏಕೆಂದರೆ ಇಲ್ಲಿ ಬಹಳಷ್ಟು ವೈರುಧ್ಯಗಳಿವೆ, ಬಹು ಲೋಕದೃಷ್ಟಿಗಳಿವೆ ಹಾಗೂ ವೈವಿಧ್ಯಮಯ ದೃಷ್ಟಿಕೋನಗಳಿವೆ. 2013ರಲ್ಲಿ ಸಿದ್ದರಾಮಯ್ಯ 122 ಸ್ಥಾನಗಳನ್ನು ಗೆದ್ದಾಗ ಇದು ಒಂದು ಗಟ್ಟಿ ಗುಂಪಾಗಿ ಒಂದುಗೂಡಿದೆ ಎಂಬಂತೆ ಕಂಡಿತ್ತು. ಆದರೆ, ಅದೇ ವೇಳೆಯಲ್ಲಿ ಬಿಜೆಪಿ ಸರ್ಕಾರದ ಆಡಳಿತವಿರೋಧಿ ಅಲೆಯೂ ಎದ್ದುಕಾಣುತ್ತಿತ್ತು.

ಈ ಬಾರಿ, ಸಿದ್ದರಾಮಯ್ಯ ತಮ್ಮ ಪಕ್ಷದ ಚುನಾವಣಾ ರಣನೀತಿಯ ಭಾಗವಾಗಿ ಅಹಿಂದ ವರ್ಗಗಳು ತಮ್ಮೊಂದಿಗೆ ಹೇಗೂ ಇರುತ್ತವೆ ಎಂದು ಪರಿಭಾವಿಸಿಕೊಂಡು, ಯಡ್ಯೂರಪ್ಪ ಬಿಜೆಪಿಗೆ ಮರಳಿದ ಪರಿಣಾಮವಾಗಿ ಲಿಂಗಾಯತರು ಮತ್ತೆ ಬಿಜೆಪಿ ಕಡೆಗೆ ಮುಖಮಾಡಿದಂತೆ ತೋರಿದ್ದರಿಂದ ಆ ಲಿಂಗಾಯತ ಮತಗಳನ್ನು ಒಡೆಯುವ ಕಡೆಗೆ ಗಮನ ಕೊಟ್ಟರು. ಶತಶತಮಾನಗಳಿಂದ ಲಿಂಗಾಯತ ಸಮುದಾಯದ ಒಳಗಿದ್ದ ಪುರೋಹಿತವರ್ಗ ಮತ್ತು ಅನೇಕ ಉಪಜಾತಿಗಳ ರೂಪದಲ್ಲಿದ್ದ ದುಡಿಯುವ ವರ್ಗಗಳ ನಡುವಿನ ವಿಭಜನೆಯನ್ನು ಬಳಸಿಕೊಂಡು ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಗೆ ಇಂಬು ಕೊಡುವ ಮೂಲಕ ಅದಕ್ಕೊಂದು ಔಪಚಾರಿಕ ಸ್ವರೂಪ ಕೊಟ್ಟರು. ಅಲ್ಲೂ ಕೂಡ, ಲಿಂಗಾಯತರೊಳಗಿನ ಹಿಂದುಳಿದ ಉಪಜಾತಿಗಳನ್ನು ಒಂದೆಡೆಗೆ ತರುವ ಪ್ರಯತ್ನವನ್ನೇ ಮಾಡಲಾಗಿತ್ತು. ಅಹಿಂದ ಪರಿಕಲ್ಪನೆಯಲ್ಲಿ ಕೆಲಸ ಮಾಡಿದ ಸೂತ್ರವೇ ಇಲ್ಲೂ ಕೂಡ ಕೆಲಸ ಮಾಡಿತ್ತು. ಅರಸು ಅವರೂ ಕೂಡ ತಮ್ಮ ಮೀಸಲಾತಿ ನೀತಿಯ ಮೂಲಕ ಲಿಂಗಾಯತರೊಳಗಿನ ಅನೇಕ ವಂಚಿತ ಉಪಜಾತಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದರು. ಈ ಪ್ರಯತ್ನವೇ ಸಿದ್ದರಾಮಯ್ಯನವರಿಗೆ ತಿರುಗುಬಾಣವಾಯಿತು ಎಂದು ಹೇಳಲಾಗುವುದಿಲ್ಲವಾದರೂ ಇದನ್ನು ತುಂಬಾ ಅವಸರದಲ್ಲಿ, ಚುನಾವಣೆಗಿಂತ ಕೆಲವೇ ತಿಂಗಳುಗಳ ಮುಂಚೆ ಮಾಡಲಾಗಿತ್ತು. ದೇವರಾಜ ಅರಸರಂತೆ ಸಿದ್ದರಾಮಯ್ಯನವರನ್ನೂ ಭವಿಷ್ಯದಲ್ಲಿ ಅವಲೋಕನ ಮಾಡುವಾಗ ಇದೊಂದು ರಾಜಕೀಯ ತಿವಿಗೋಲಾಗಿ ಬಳಕೆಯಾಗುತ್ತಲೇ ಇರುತ್ತದೆ.

ಸಿದ್ದರಾಮಯ್ಯನವರನ್ನು ಅವರ ಕಲ್ಪನೆಯೇ ಕೆಡವಿತು ಎಂಬ ಅಭಿಪ್ರಾಯಕ್ಕೆ ಬರುವುದು ಅವಸರದ ತೀರ್ಮಾನವಾದೀತು. ಒಕ್ಕಲಿಗರು ದೇವೇಗೌಡರಿಗೆ ನಿಷ್ಠರಾಗಿರುವಂತೆ, ಲಿಂಗಾಯತರು ಯಡ್ಯೂರಪ್ಪನವರಿಗೆ ನಿಷ್ಠರಾಗಿರುವಂತೆ ಹಿಂದುಳಿದ ವರ್ಗಗಳು ಸಿದ್ದರಾಮಯ್ಯನವರಿಗೆ ನಿಷ್ಠರಾಗಿದ್ದಾರೆ ಎಂದು ಹೇಳಿರಲಿಲ್ಲ.

ಮೂಲ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ: How Siddaramaiah was felled by his own imagination in Karnataka elections

ಅದೇನೇ ಇರಲಿ, ಲಿಂಗಾಯತ ವ್ಯೂಹತಂತ್ರದಲ್ಲಿ ಮಾತ್ರವಲ್ಲ, ಅಹಿಂದ ಮತಗಳ ವಿಷಯದಲ್ಲೂ ಕೂಡ ಎಲ್ಲವೂ ಅಂದುಕೊಂಡಂತೆ ಆಗಲಿಲ್ಲ. ದಲಿತ (ಎಡಗೈ) ಗುಂಪುಗಳು ವಿಭಜನೆಯಾದವು, ಹಿಂದುಳಿದ ವರ್ಗಗಳ ಗುಂಪುಗಳು ವಿಭಜನೆಯಾದವು ಮತ್ತು ಮುಸ್ಲಿಮರೂ ವಿಭಜನೆಯಾದರು. ಪ್ರಮುಖ ಸಮುದಾಯಗಳು ಸಿದ್ದರಾಮಯ್ಯನವರ ವಿರುದ್ಧ ಕೆಂಡಕಾರುತ್ತಿದ್ದರಿಂದ ಈ ಹಿಂದುಳಿದ ಸಮುದಾಯಗಳು ಅವರ ಪರವಾಗಿ ಸದೃಢೀಕರಣಗೊಂಡು ನಿಲ್ಲುತ್ತವೆ ಎಂದು ಅಂದಾಜಿಸಲಾಗಿತ್ತು. ದುರಾದೃಷ್ಟವಶಾತ್ ಹಾಗಾಗಲಿಲ್ಲ. ಸಿದ್ದರಾಮಯ್ಯನವರಿಗೆ ಅಂತಿಮವಾಗಿ ಉಳಿದದ್ದು ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಮುದಾಯಗಳಲ್ಲೂ ಇರುವ ಸಾಂಪ್ರದಾಯಿಕ ಮತಗಳು ಮಾತ್ರ. ಅವುಗಳಿಂದ ಬರಬೇಕಾದಷ್ಟು ಸ್ಥಾನಗಳು ಬರಲಿಲ್ಲ.

ಇದು ‘ದಿ ಸ್ಟೇಟ್’ನ ಸೋದರ ಸಂಸ್ಥೆ ‘ಸೌತ್‌ ವರ್ಡ್’ನಲ್ಲಿ ಪ್ರಕಟವಾದ ಲೇಖನ

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More