ಮೂರು ತಿಂಗಳಲ್ಲಿ ಮೂರು ಮಸೀದಿಗೆ ಭೇಟಿ ಕೊಟ್ಟು ಪ್ರಧಾನಿ ಸಾರಿದ ಸಂದೇಶವೇನು?

ವಿಪಕ್ಷಗಳು ಒಂದಾಗಿ ಬಿಜೆಪಿಯ ವಿರುದ್ಧ ನಿಂತಿರುವಾಗ ಜಾತ್ಯತೀತ ಮತಗಳ ಬೆಂಬಲವಿಲ್ಲದೆ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ ಎನ್ನುವುದು ಪ್ರಧಾನಿ ಮೋದಿಯವರಿಗೆ ಮನವರಿಕೆಯಾಗಿದೆಯೇ? ಈ ಹಿನ್ನೆಲೆಯಲ್ಲಿ ಮೋದಿಯವರು ‘ಜಾತ್ಯಾತೀತ’ ವರ್ಚಸ್ಸಿಗೆ ಪ್ರಯತ್ನಿಸುತ್ತಿರುವಂತೆ ತೋರುತ್ತದೆ

ಭಾರತದ ರಾಜಕೀಯ ಬೆಳವಣಿಗೆಗಳ ಬಗ್ಗೆ ಏನೂ ತಿಳಿಯದೆ ಕೇವಲ ಟ್ವಿಟರ್ ಮೂಲಕ ಮಾತ್ರವೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ತಿಳಿದಿರುವ ವ್ಯಕ್ತಿಗಳಿಗೆ ಅವರು ಬಹಳ ಜಾತ್ಯತೀತ ಮತ್ತು ಎಲ್ಲ ಧರ್ಮದ ಆಚರಣೆಗಳನ್ನು, ಮಂದಿರಗಳನ್ನು ಗೌರವಿಸುವ ವ್ಯಕ್ತಿಯಾಗಿ ಕಾಣಿಸುವುದರಲ್ಲಿ ಅಚ್ಚರಿಯೇನಿಲ್ಲ! ಹೌದು, ನರೇಂದ್ರ ಮೋದಿಯವರು ಇತ್ತೀಚೆಗೆ ಮಾಡಿರುವ ಎಲ್ಲ ವಿದೇಶ ಪ್ರವಾಸಗಳಲ್ಲೂ ಕಡ್ಡಾಯವಾಗಿ ಒಂದು ಮಸೀದಿಗೆ ಭೇಟಿ ನೀಡಿದ್ದಾರೆ. ಹಾಗೇ ಜಪಾನ್ ಅಧ್ಯಕ್ಷರು ಭಾರತಕ್ಕೆ ಬಂದಾಗ ಅವರನ್ನು ಮಸೀದಿಗೆ ಕರೆದೊಯ್ದದ್ದೂ ಪ್ರಧಾನಿ ನರೇಂದ್ರ ಮೋದಿಯವರೇ. ಅಲ್ಲದೆ ಬೌದ್ಧ ಧರ್ಮದ ಮಂದಿರಗಳು, ಇತರ ಸರ್ವ ಧರ್ಮ ಸಾಮರಸ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗೆ ಸಾಮಾಜಿಕ ತಾಣಗಳಲ್ಲಿ ಜಾತ್ಯಾತೀತವಾಗಿ ಕಾಣಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಆದರೆ, ಭಾರತದಲ್ಲಿ ಮುಸ್ಲಿಂ ಜನಾಂಗದ ವಿರುದ್ಧ ದೊಡ್ಡ ಸಮರವನ್ನೇ ಸಾರಿರುವ ಸಂಘಪರಿವಾರ ಮೂಲದ ಬಿಜೆಪಿಯ ಕಟ್ಟಾ ಹಿಂದುತ್ವವಾದಿ ಪ್ರಧಾನಿ ಎಂದೇ ಜನಜನಿತರಾದವರು ಪ್ರಧಾನಿ ಮೋದಿ. ಗೋಧ್ರಾ ಹತ್ಯಾಕಾಂಡದ ಆರೋಪ ಒತ್ತಟ್ಟಿಗಿರಲಿ, ಉಳಿದಂತೆ ವಿಶ್ಲೇಷಿಸಿದರೂ, ಅವರ ಪ್ರತಿ ಚುನಾವಣಾ ಭಾಷಣದಲ್ಲೂ ಪಾಕಿಸ್ತಾನ, ಮುಸ್ಲಿಂ ಸಮುದಾಯದ ಕಡೆಗೆ ಜನಾಂಗೀಯ ದ್ವೇಷ ಸ್ಫುರಿಸುವಂತಹ ಪರೋಕ್ಷ ಸಂಕೇತಗಳು ಇದ್ದೇ ಇರುತ್ತವೆ. ಅವರ ಪಕ್ಷದ ಮುಖಂಡರೂ ಅಲ್ಪಸಂಖ್ಯಾತ ಮುಸ್ಲಿಂ ಜನಾಂಗದಿಂದ ಬಹುಸಂಖ್ಯಾತ ಹಿಂದೂ ಸಂತತಿ ಅವಸಾನದ ಹಂತ ತಲುಪಿದೆ ಎನ್ನುವ ಭಯವನ್ನು ಬಿತ್ತಿಯೇ ಸತತ ಚುನಾವಣೆಗಳನ್ನು ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಸಮುದಾಯದ ಸಾಕಷ್ಟು ಸಂಖ್ಯಾಬಲವಿರುವ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಒಬ್ಬ ಮುಸ್ಲಿಮರಿಗೂ ಟಿಕೆಟ್ ನೀಡದಿರುವುದು ಉಲ್ಲೇಖನೀಯ. ಗುಜರಾತ್‌ನಲ್ಲಿ ಮುಸ್ಲಿಂ ಜನಾಂಗದವರಿಗಾಗಿ ನೆಪಮಾತ್ರಕ್ಕಾಗಿ ‘ಸೌಹಾರ್ದ’ ಕಾರ್ಯಕ್ರಮವನ್ನು ಆಯೋಜಿಸಿದಾಗಲೂ ಆ ಜನಾಂಗದವರು ತೊಡುವ ತಲೆಟೋಪಿಯನ್ನು ಧರಿಸಲು ಹಿಂಜರಿದವರು.

ಭಾರತದಲ್ಲಿ ಮುಸ್ಲಿಂ ಜನಾಂಗದವರ ವಿರುದ್ಧ ಇಷ್ಟೊಂದು ದ್ವೇಷವನ್ನು ಬಿತ್ತುವ ಅಥವಾ ಇತರರು ಅಂಥ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ತುಟಿ ಬಿಚ್ಚದ ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಲ್ಲಿ ಮಾತ್ರ ಮಸೀದಿಗಳಿಗೆ ಭೇಟಿ ಕೊಡುವುದನ್ನು ತಪ್ಪಿಸುವುದಿಲ್ಲ. ಅವರ ಟ್ವಿಟರ್ ಖಾತೆಗಳೂ ಈ ಭೇಟಿಯನ್ನು ಬಹಳ ಸಂಭ್ರಮದಿಂದ ಮುಂದಿಡುತ್ತಿರುತ್ತವೆ. ಹೀಗಾಗಿ ಪ್ರಧಾನಿ ಮೋದಿಯವರನ್ನು ಟ್ವಿಟರ್ನಲ್ಲಿ ಮಾತ್ರ ಗಮನಿಸಿ ಅವರ ಬಗ್ಗೆ ಅಭಿಪ್ರಾಯ ಮೂಡಿಸಿಕೊಳ್ಳುವವರು ಯುಎಇ, ಒಮನ್, ಸಿಂಗಾಪುರ, ಇಂಡೋನೇಷ್ಯಾಗಳಲ್ಲಿ ಪ್ರಧಾನಿಯವರು ಮಸೀದಿಗಳಿಗೆ ಭೇಟಿ ನೀಡಿರುವುದನ್ನು ನೋಡಿದರೆ ‘ಸರ್ವಧರ್ಮಗಳನ್ನು ಗೌರವಿಸುವ ವ್ಯಕ್ತಿ’ ಎನ್ನುವ ವರ್ಚಸ್ಸು ಆ ದೇಶಗಳಲ್ಲಿ ಕಾಣಿಸುವುದರಲ್ಲಿ ಸಂಶಯವಿಲ್ಲ. ಅಂತಹ ಕೆಲವು ಉದಾಹರಣೆಗಳು ಇಲ್ಲಿವೆ:

  • ಪ್ರಧಾನಿ ನರೇಂದ್ರ ಮೋದಿಯವರು ಜೂನ್ ೨ರಂದು ತಮ್ಮ ಸಿಂಗಾಪುರ ಭೇಟಿಯ ಸಂದರ್ಭದಲ್ಲಿ ಭಾರತದಿಂದ ಕೋರಮಂಡಲ ಕರಾವಳಿಗೆ ವಲಸೆ ಹೋದ ಚೌಲಿಯ ಮುಸ್ಲಿಂ ವ್ಯಾಪಾರಿಗಳು ಕಟ್ಟಿದ ಚೌಲಿಯ ಮಸೀದಿಗೆ ಭೇಟಿ ನೀಡಿದ್ದಾರೆ. ಸಿಂಗಾಪುರದ ಮೊದಲ ಕೆಲವು ಮಸೀದಿಗಳಲ್ಲಿ ಒಂದಾಗಿರುವ ಚೌಲಿಯ ಮಸೀದಿಯನ್ನು ೧೮೨೬ರಲ್ಲಿ ಕಟ್ಟಲಾಗಿದೆ. ಅಲ್ಲಿ ಹಸಿರು ಶಾಲನ್ನು ಅರ್ಪಿಸಿದ ಪ್ರಧಾನಿ ಮೋದಿ ಎರಡು ದೇಶಗಳ ನಡುವಿನ ಜನಸಂಪರ್ಕವನ್ನು ಕೊಂಡಾಡಿದ್ದರು.
  • ಮೇ ೩೦ರಂದು ಇಂಡೋನೇಷ್ಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಗ್ನೇಯ ಏಷ್ಯಾದ ಅತಿ ದೊಡ್ಡ ಮಸೀದಿಯೆಂದು ಖ್ಯಾತಿಪಡೆದಿರುವ ಇಸ್ತಿಖಲ್ ಮಸೀದಿಗೆ ಭೇಟಿ ನೀಡಿದ್ದಾರೆ. ಈ ಮಸೀದಿಗೆ ಭೇಟಿಯಾಗಿ ಬಹಳ ಸಂತೋಷವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಸಂದೇಶ ಹಾಕಿದ್ದರು.
  • ಕಳೆದ ಫೆಬ್ರವರಿಯಲ್ಲಿ ನರೇಂದ್ರ ಮೋದಿಯವರು ಒಮನ್ ದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ಸುಲ್ತಾನ್ ಖಬೂಸ್ ಗ್ರಾಂಡ್ ಮಸೀದಿಗೆ ಭೇಟಿ ನೀಡಿದ್ದರು. ಮಧ್ಯಪ್ರಾಚ್ಯದ ನಾಲ್ಕು ದೇಶಗಳಿಗೆ ಪ್ರವಾಸಗೈದ ಸಂದರ್ಭದಲ್ಲಿ ಪ್ರಧಾನಿ ಮೋದಿ ಓಮನ್‌ನ ಸುಲ್ತಾನ್ ಖಬೂಸ್‌ಗೆ ಭೇಟಿ ನೀಡಿದ್ದರು.
  • ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿಯೇ ಒಂದು ಮಸೀದಿಗೆ ಭೇಟಿ ಕೊಡಲು ವಿದೇಶಿ ಪ್ರಧಾನಿ ಭಾರತಕ್ಕೆ ಆಗಮಿಸಬೇಕಾಗಿ ಬಂದಿತ್ತು! ೨೦೧೭ ಸೆಪ್ಟೆಂಬರ್‌ನಲ್ಲಿ ಜಪಾನ್ ಪ್ರಧಾನಿ ಶಿನ್ಜೋ ಅಬೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅವರ ಜೊತೆಗೂಡಿ ಅಹಮದಾಬಾದಿನ ೧೬ನೇ ಶತಮಾನದ ಮಸೀದಿಯಾಗಿರುವ ಸಿದ್ದಿ ಸಯ್ಯದ್ ಮಸೀದಿಗೆ ಭೇಟಿ ನೀಡಿದ್ದು ದೊಡ್ಡ ಸುದ್ದಿಯಾಗಿತ್ತು. ಭಾರತದಲ್ಲಿ ಪ್ರಧಾನಿ ಮೋದಿ ಭೇಟಿ ನೀಡಿದ ಮೊದಲ ಮಸೀದಿ ಸಿದ್ದಿ ಸಯ್ಯದ್ ಎನ್ನುವ ವಿಚಾರವೂ ಬಹಳ ಚರ್ಚೆಗೆ ಒಳಗಾಗಿತ್ತು.
  • ಪ್ರಧಾನಿ ಮೋದಿಯವರು 2015ರ ಆಗಸ್ಟ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಪ್ರವಾಸ ಹೋದಾಗ ಅಬುದಾಬಿಯಲ್ಲಿ ಶೇಖ್ ಝಾಯೆದ್ ಗ್ರಾಂಡ್ ಮಸೀದಿಗೆ ಭೇಟಿ ನೀಡಿದ್ದರು. ನರೇಂದ್ರ ಮೋದಿಯವರು ತಮ್ಮ ಜೀವಮಾನದಲ್ಲಿ ಭೇಟಿ ನೀಡಿದ ಮೊದಲ ಮಸೀದಿಯಾಗಿತ್ತು ಅಬುಧಾಬಿಯ ಶೇಖ್ ಜಾಯೆದ್ ಗ್ರಾಂಡ್. ಈ ಹಿನ್ನೆಲೆಯಲ್ಲಿ, “ಮೊತ್ತಮೊದಲ ಬಾರಿಗೆ ಮಸೀದಿಗೆ ಭೇಟಿ ಕೊಡಬೇಕಿದ್ದಲ್ಲಿ, ಭಾರತದ ಮಸೀದಿಗೆ ಹೋಗಬಹುದಾಗಿತ್ತು, ಬದಲಾಗಿ ವಿದೇಶದಲ್ಲಿ ಏಕೆ ಮಸೀದಿಗೆ ಭೇಟಿ ಕೊಡಬೇಕು,” ಎಂದು ಬಹಳ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ತಪ್ಪು ತಿದ್ದಿಕೊಳ್ಳಲು ಪ್ರಧಾನಿ ಮೋದಿಯವರು ಜಪಾನ್ ಪ್ರಧಾನಿ ಭಾರತಕ್ಕೆ ಆಗಮಿಸಿದಾಗ ತಮ್ಮ ತವರು ನೆಲ ಅಹಮದಾಬಾದ್‌ನ ಪ್ರಸಿದ್ಧ ಮಸೀದಿಗೆ ಭೇಟಿ ನೀಡಿದ್ದರು.
ಇದನ್ನೂ ಓದಿ : ಉಪಚುನಾವಣೆ ಫಲಿತಾಂಶ: ಮೋದಿ ಅವರ ಉಗ್ರ ಭಾಷಣಗಳೇ ಬಿಜೆಪಿ ಸೋಲಿಗೆ ಕಾರಣವಾದವೇ?

ಆದರೆ, ಪ್ರಧಾನಿಯಾಗಿ ನಾಲ್ಕು ವರ್ಷಗಳಲ್ಲಿ ಎರಡೇ ಮಸೀದಿಗಳಿಗೆ ಭೇಟಿ ನೀಡಿದ್ದ ನರೇಂದ್ರ ಮೋದಿಯವರು ವಿದೇಶಗಳಲ್ಲಿ ಕಳೆದ ಕೆಲವು ತಿಂಗಳಲ್ಲಿ ಕನಿಷ್ಠ ಮೂರು ಮಸೀದಿಗಳಿಗೆ ಭೇಟಿ ನೀಡಿರುವ ಹಿನ್ನೆಲೆಯೇನು? ಪ್ರಧಾನಿ ಭೇಟಿ ನೀಡಿದ ಎಲ್ಲ ಮಸೀದಿಗಳೂ ದೇಶದಿಂದ ಹೊರಗಿವೆ ಎನ್ನುವುದೂ ಮತ್ತೊಂದು ವಿಚಾರ. ಮುಸ್ಲಿಂ ಜನಾಂಗದ ವಿರುದ್ಧ ದ್ವೇಷ ಸ್ಫುರಿಸುವ ರಾಜಕಾರಣಿ ತಾವಲ್ಲ ಎಂದು ಹೊರದೇಶಗಳಿಗೆ ಸಾರುವ ಪ್ರಯತ್ನದಲ್ಲಿದ್ದಾರೆಯೇ ನರೇಂದ್ರ ಮೋದಿ ಎನ್ನುವ ಪ್ರಶ್ನೆಯೂ ಮೂಡಿದೆ. ಭಾರತದಲ್ಲಿ ಮುಂದಿನ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ವಿರೋಧ ಪಕ್ಷಗಳು ಒಂದಾಗಿ ಬಿಜೆಪಿಯ ವಿರುದ್ಧ ಯುದ್ಧ ಸಾರಿರುವಾಗ ಜಾತ್ಯತೀತ ಮತಗಳ ಬೆಂಬಲವಿಲ್ಲದೆ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ ಎನ್ನುವುದು ಪ್ರಧಾನಿ ಮೋದಿಯವರಿಗೆ ಮನವರಿಕೆಯಾಗಿದೆಯೇ ಎಂಬ ಪ್ರಶ್ನೆಯೂ ಹುಟ್ಟಿದೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರು ತಮ್ಮ ವರ್ಚಸ್ಸನ್ನು ‘ಜಾತ್ಯತೀತ’ವಾಗಿ ಬದಲಿಸಿಕೊಳ್ಳುವ ಪ್ರಯತ್ನದಲ್ಲಿ ಇರುವಂತೆ ತೋರುತ್ತದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More