ಚಾಣಕ್ಯಪುರಿ | ಗೆಹ್ಲೋಟ್ ಉಸ್ತುವಾರಿ ಆಗಿದ್ದರೆ ಕಾಂಗ್ರೆಸ್ ಗೆಲ್ಲುತ್ತಿತ್ತೇ?

ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಲು ವೇಣುಗೋಪಾಲ್ ಕೂಡ ಕಾರಣವಂತೆ. ಗುಜರಾತ್‌ನಲ್ಲಿ ಉಸ್ತುವಾರಿ ವಹಿಸಿದ್ದ ಅಶೋಕ್ ಗೆಹ್ಲೋಟ್‌ರಿಗೆ ಉಸ್ತುವಾರಿ ಕೊಟ್ಟಿದ್ದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತಿತ್ತು ಎನ್ನುವ ಮಾತು ಇದೀಗ ಕಾಂಗ್ರೆಸ್ ಪಾಳೆಯದಲ್ಲಿಯೇ ಕೇಳಿಬರುತ್ತಿದೆ

ಕರ್ನಾಟಕದಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ತುಂಬು ವಿಶ್ವಾಸದಲ್ಲಿದ್ದರು ದೆಹಲಿಯ ಕಾಂಗ್ರೆಸ್ ನಾಯಕರು. ಪತ್ರಕರ್ತರ ಬಳಿ ಸವಾಲೆಸೆಯುವ ರೀತಿ ಮಾತನಾಡಿದ್ದರು. "ಅಲ್ಲಿ ನಮಗೊಬ್ಬ ಸಮರ್ಥ ನಾಯಕನಿದ್ದಾನೆ," ಎಂದು ಸಿದ್ದರಾಮಯ್ಯನವರ ಬೆನ್ನು ತಟ್ಟುತ್ತಿದ್ದರು. "ಸಮರ್ಥ ಸಂಘಟಕನಿದ್ದಾನೆ," ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್‌ಗೆ ಬಹುಪರಾಕ್ ಹಾಕುತ್ತಿದ್ದರು. ವೇಣುಗೋಪಾಲ್ ಸಹವರ್ತಿಗಳ ಬಗ್ಗೆಯೂ ಶಹಬ್ಬಾಸ್ ಎನ್ನುತ್ತಿದ್ದರು. ಆದರೆ, ಈಗ ವರಸೆ ಬದಲಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಲು ವೇಣುಗೋಪಾಲ್ ಕೂಡ ಕಾರಣವಂತೆ; ಅಶೋಕ್ ಗೆಹ್ಲೋಟ್ ಅವರಿಗೆ ಉಸ್ತುವಾರಿ ಕೊಟ್ಟಿದ್ದರೆ ಖಂಡಿತವಾಗಿಯೂ ಕಾಂಗ್ರೆಸ್ ಗೆಲ್ಲುತ್ತಿತ್ತಂತೆ ಎಂಬ ಮಾತುಗಳು ಚಾಲ್ತಿಯಲ್ಲಿವೆ. ಗೆಹ್ಲೋಟ್ ಬಗ್ಗೆ ಇಂಥ ಭಾವನೆ ಬರಲು ಬಲವಾದ ಹಿನ್ನೆಲೆ ಇದೆ. ಗೆಹ್ಲೋಟ್ ಗುಜರಾತ್ ಕಾಂಗ್ರೆಸ್ ಉಸ್ತುವಾರಿಯಾಗಿದ್ದರು. ಗುಜರಾತಿನಲ್ಲಿ ಕಾಂಗ್ರೆಸ್ ಸ್ಥಿತಿ ಹೀನಾಯವಾಗಿತ್ತು. ಅಲ್ಲಿ ಬಿಜೆಪಿ ೨೨ ವರ್ಷಗಳಿಂದ ಅಧಿಕಾರದಲ್ಲಿತ್ತು. ಬಿಜೆಪಿಯ ಬೇರುಗಳು ಗುಜರಾತ್ ಎಂಬ ವ್ಯಾಪಾರಿ ನೆಲದಲ್ಲಿ ಆಳಕ್ಕಿಳಿದಿದ್ದವು. ವ್ಯತಿರಿಕ್ತ ಪರಿಸ್ಥಿತಿ ಕಾಂಗ್ರೆಸ್ ಅನ್ನು ಕಾಡುತ್ತಿತ್ತು. ಬೇರೆ ಪಕ್ಷವೇ ಇಲ್ಲದ ಗುಜರಾತಿನಲ್ಲಿ ಜನ ಬಿಜೆಪಿ ವಿರುದ್ಧ ಮತ ನೀಡಬೇಕೆಂದುಕೊಂಡರೂ ಅವಕಾಶವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆ ಇರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ, ಗುಜರಾತಿಯೇ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ, ಆತ ಅತ್ಯಂತ ಪ್ರಭಾವಿಯೂ ಆಗಿದ್ದ ಕಾಲಘಟ್ಟದಲ್ಲಿ, ಆತನೇ ಬಂದು ತಿಂಗಳುಗಟ್ಟಲೆ ಗುಜರಾತ್ ಸುತ್ತಿದ ಸಮಯದಲ್ಲಿ, ಜೊತೆಗೆ 'ಚುನಾವಣಾ ಚಾಣಾಕ್ಯ' ತನ್ನ ತವರಿನಲ್ಲಿ ಗೆಲುವಿಗಾಗಿ ಹಂಬಲಿಸಿ, ವಿಶೇಷ ಮುತುವರ್ಜಿ ವಹಿಸಿ ರಣತಂತ್ರ ರೂಪಿಸುತ್ತಿದ್ದ ಹೊತ್ತಿನಲ್ಲಿ, ಕಮರಿ‌ದ್ದ ಕಾಂಗ್ರೆಸ್ ಪಕ್ಷದಲ್ಲಿ ಭರವಸೆ ಮೂಡಿಸಿದವರು ಅಶೋಕ್ ಗೆಹ್ಲೋಟ್.‌ ಪ್ರಬಲ ಪೈಪೋಟಿ ನಡುವೆಯೂ ೫೮ ಇದ್ದ ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯೆಯನ್ನು ಗೆಲುವಿನ ದಡದವರೆಗೂ (೮೧) ಕೊಂಡೊಯ್ದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಲ್ಲಿ ಭಯ ಸೃಷ್ಟಿಸಿದ್ದು ಅಶೋಕ್ ಗೆಹ್ಲೋಟ್.

ಗುಜರಾತ್ ಚುನಾವಣೆ ವೇಳೆ ಗೆಹ್ಲೋಟ್ ಕಾರ್ಯವೈಖರಿಯನ್ನು ಹತ್ತಿರದಿಂದ ನೋಡಿದ್ದ ರಾಹುಲ್ ಗಾಂಧಿ, ಗೆಹ್ಲೋಟ್ ಅವರನ್ನು ಕರ್ನಾಟಕಕ್ಕೆ ಕಳಿಸುವ ಆಲೋಚನೆ ಮಾಡಿದ್ದರಂತೆ. ಆದರೆ, ನೆರೆಯವರು ಎನ್ನುವ ಕಾರಣಕ್ಕೆ ಮತ್ತು ಕೇಡರ್ ಬೇಸ್ಡ್ ಕಾರ್ಯಶೈಲಿಯುಳ್ಳವರು ಎನ್ನುವ ಕಾರಣಕ್ಕೆ ವೇಣುಗೋಪಾಲ್‌ಗೆ ಉಸ್ತುವಾರಿಯ ಜವಾಬ್ದಾರಿ ನೀಡಿದ್ದರಂತೆ. ಆದರೆ, ವೇಣುಗೋಪಾಲ್ ನಿರೀಕ್ಷಿತ ಮಟ್ಟದಲ್ಲಿ ಸಂಘಟನೆ ಮಾಡಿಲ್ಲ ಎಂದು ಹೇಳಲಾಗುತ್ತಿದೆ.‌ ೫೪ ಸಾವಿರ ಬೂತ್‌ಗಳ ಪೈಕಿ ೫೧ ಸಾವಿರ ಬೂತ್‌ಗಳನ್ನು ಪುನರ್ ರಚಿಸಲಾಗಿದೆ ಎಂದು ವೇಣುಗೋಪಾಲ್ ಮತ್ತು ಅವರ ಕಾರ್ಯದರ್ಶಿಗಳು ಕೊಚ್ಚಿಕೊಳ್ಳುತ್ತಿದ್ದರು. ಕಾಂಗ್ರೆಸ್ ವಾರ್ ರೂಮಿನಲ್ಲಿ, "ಪ್ರತಿ ಬೂತಿನಿಂದ ೧೦ ಹೆಸರುಗಳನ್ನು ಕೊಡಿ," ಎಂದು ಸವಾಲೆಸೆದಾಗ ವೇಣುಗೋಪಾಲ್ ಅಂಡ್ ಟೀಮ್ ನಿರುತ್ತರವಾಗಿತ್ತಂತೆ. ಇದಲ್ಲದೆ, ಕೂತು ರಣತಂತ್ರ ರೂಪಿಸಬೇಕಿದ್ದ ವೇಣುಗೋಪಾಲ್ ಮತ್ತವರ ತಂಡ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಜೊತೆ ಓಡಾಡಿಕೊಂಡಿದ್ದರು. ತೆರೆಯ ಹಿಂದೆ ಸಕ್ರಿಯರಾಗಬೇಕಿದ್ದ ಇವರು ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುವುದರಲ್ಲೇ ಕಾಲ ಕಳೆದರು. ಕಾರ್ಯದರ್ಶಿಗಳ ಪೈಕಿ ಮಧು ಯಾಸ್ಕಿ ಗೌಡ ವಾರ್ ರೂಮಿಗೆ ನೀಡುತ್ತಿದ್ದ ಮಾಹಿತಿಗಳಲ್ಲಿ ತುಂಬಾ ತಪ್ಪು ಇರುತ್ತಿದ್ದವು‌. ನಾಯಕರನ್ನು ದಾರಿ ತಪ್ಪಿಸುವಂತಿದ್ದವು. ಈಗ ಕಾಲ ಮಿಂಚಿಹೋಗಿದೆ ಎನ್ನುವುದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರ ಅಭಿಪ್ರಾಯ.

ಸಿದ್ದರಾಮಯ್ಯ ಒಂದೇ ಒಂದು ಪ್ರೆಸ್ ಮೀಟ್ ಮಾಡಬೇಕಿತ್ತು!

“ಕಡೆಯ ಎರಡು ವಾರದಲ್ಲಿ ಯಾವುದೇ ಮಾಧ್ಯಮದವರಿಗೆ ಸಂದರ್ಶನ ನೀಡಬೇಡಿ. ನಿಮ್ಮ ಪಾಡಿಗೆ ನೀವು ಸಮಾವೇಶಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಷಣ ಮಾಡಿ. ಮತದಾನಕ್ಕೆ ಎರಡು ದಿನ ಇದೆ ಎನ್ನುವಾಗ ಸುದೀರ್ಘವಾದ ಪತ್ರಿಕಾಗೋಷ್ಠಿ ಮಾಡಿ. ಆ ಪತ್ರಿಕಾಗೋಷ್ಠಿಯನ್ನು ಎಲ್ಲ ಮಾಧ್ಯಮಗಳು ನೇರ ಪ್ರಸಾರ ಮಾಡುತ್ತವೆ ಅಥವಾ ನೇರ ಪ್ರಸಾರಕ್ಕೆ ಪಕ್ಷದಿಂದಲೇ ವ್ಯವಸ್ಥೆ ಮಾಡಬಹುದು. ಪತ್ರಿಕಾಗೋಷ್ಠಿಯಲ್ಲಿ ಜನರಿಗೆ ನೇರವಾಗಿ ಮನವಿ ಮಾಡಿಕೊಳ್ಳಿ. ಸರ್ಕಾರದ ಯೋಜನೆಗಳ ಬಗ್ಗೆ ವಿವರಣೆ ನೀಡಿ‌. ಜನರನ್ನು ಭಾವನಾತ್ಮಕವಾಗಿ ಮುಟ್ಟಲು ಪ್ರಯತ್ನಿಸಿ. ರಾಜಕೀಯ ಆರೋಪಗಳಿಗೆ ಪ್ರತ್ಯಾರೋಪ ಮಾಡುವುದು ಬೇಡ. ಕೇವಲ ಸಮರ್ಥನೆ ಮಾಡಿ,” ಎಂದು ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ವಾರ್ ರೂಮ್ ಸಲಹೆ ಮಾಡಿತ್ತಂತೆ. ಆದರೆ, ಈ ಸಲಹೆಯನ್ನು ಸ್ವತಃ ಸಿದ್ದರಾಮಯ್ಯ ಉಪೇಕ್ಷೆ ಮಾಡಿದರೋ ಅಥವಾ ಅವರ ಸುತ್ತ ಇದ್ದವರು ಎಡೆಮಾಡಿಕೊಡಲಿಲ್ಲವೋ, ಇವತ್ತಿಗೂ ವಾರ್ ರೂಮಿಗೆ ಅರ್ಥವೇ ಆಗಿಲ್ಲವಂತೆ!

ಈಗಲೇ ಆತ್ಮಾವಲೋಕನ‌ ಮಾಡಿಕೊಳ್ಳುವ ಅಗತ್ಯ ಇಲ್ಲವಂತೆ!

೧೨೨ ಇದ್ದ ಕಾಂಗ್ರೆಸ್ ಶಾಸಕರ ಸಂಖ್ಯೆ ೭೮ಕ್ಕೆ ಇಳಿದಿದೆ. ೧೮ ಮಂದಿ ಸಚಿವರು ಸೋತು ಸುಣ್ಣವಾಗಿದ್ದಾರೆ. ಕೆಲವರು ಹೀನಾಯವಾಗಿ ಸೋತಿದ್ದಾರೆ. ಕೆಲವರು ಕಷ್ಟಪಟ್ಟು ಮತ್ತೆ ಗೆದ್ದು ಬಂದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ವಲ್ಪ ಶ್ರಮವಹಿಸಿದ್ದರೆ, ಸಂಘಟನೆ ಸರಿ ಇದ್ದಿದ್ದರೆ, ಅತಿ ಉತ್ಸಾಹದಿಂದ ಮೈಮರೆಯದಿದ್ದರೆ ಗೆಲ್ಲಬಹುದಾಗಿತ್ತು.‌ ಈ ಗೆಲುವು‌ ರಾಷ್ಟ್ರ ರಾಜಕಾರಣದ ದೃಷ್ಠಿಯಿಂದ ಅತ್ಯಂತ ಮಹತ್ವದ್ದಾಗಿತ್ತು. ಆದರೂ ಕಾಂಗ್ರೆಸ್ ನಾಯಕರಿಗೆ ಸದ್ಯಕ್ಕೆ, "ಪಕ್ಷ ಸೋತಿದ್ದೇಕೆ?” ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇಲ್ಲವಂತೆ. "ಈಗ ಅವಕಾಶ ಸಿಕ್ಕಿದೆ, ಸರ್ಕಾರ ಮಾಡಿಬಿಡೋಣ, ನಂತರ ನೋಡಿಕೊಳ್ಳೋಣ," ಎನ್ನುತ್ತಾರೆ‌. “ಆದರೂ ಪಕ್ಷದ ಸೋಲಿಗೆ ಕಾರಣ ಹುಡುಕಬೇಕಲ್ಲವೇ? ತಿದ್ದುಕೊಳ್ಳುವ ದೃಷ್ಠಿಯಿಂದ ಅವಲೋಕನ‌ ಅನಿವಾರ್ಯವಲ್ಲವೇ?" ಎಂದರೆ, "ನಿಧಾನಕ್ಕೆ ಮಾಡಿಕೊಳ್ಳಬಹುದು," ಎಂಬ ಸಮಾಧಾನದ ಉತ್ತರ ಬರುತ್ತದೆ‌.

ಇದನ್ನೂ ಓದಿ : ೨೦೧೯ರ ಸಂಸತ್ ಚುನಾವಣೆಗೆ ಹೊಸ ದಿಕ್ಕು ತೋರಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿ

ಈ ಸಲವೂ ಕಾಂಗ್ರೆಸ್ಸನ್ನು ಸೋಲಿಸಿದ್ದು ಕಾಂಗ್ರೆಸ್ ನಾಯಕರೇ?

ಕಾಂಗ್ರೆಸ್ ತುಂಬಾ ಕಷ್ಟದಲ್ಲಿದೆ. ಹಿರಿಯ ನಾಯಕರಿಗೆ ಪರಿಸ್ಥಿತಿ ಅರ್ಥವಾಗಿದೆ. ವಾಸ್ತವ ಅರಿತುಕೊಂಡು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ. ಕಡೇಪಕ್ಷ ಗೆಲ್ಲಿಸದಿದ್ದರೂ ಸ್ವಪಕ್ಷೀಯರನ್ನೇ ಸೋಲಿಸುವ ಕುಕೃತ್ಯ ಮಾಡುವುದಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ವಿಶ್ವಾಸ ಇಟ್ಟಿತ್ತು. ಫಲಿತಾಂಶ ಬಂದ ಬಳಿಕ ಕಾಂಗ್ರೆಸ್ ನಾಯಕರು ಹಳೆಯ ಅಭ್ಯಾಸ ಬಿಟ್ಟಿಲ್ಲ ಎಂಬುದು ಮನವರಿಕೆಯಾಗಿದೆ. "ಸಚಿವ ಸಂಪುಟಕ್ಕೆ ಹಿರಿಯರು ಬೇಡ," ಎಂದು ರಾಹುಲ್ ಗಾಂಧಿ ಹೇಳಲು ಹಿರಿಯ ನಾಯಕರ ಈ ಘನ ‌ಕಾರ್ಯವೈಖರಿಯೂ ಕಾರಣ ಇರಬಹುದು.

ಬಿಜೆಪಿಯ ಡಿ ಬಿ ಚಂದ್ರೇಗೌಡರ ಪುತ್ರಿ ಕಾಂಗ್ರೆಸ್ ವಾರ್ ರೂಂನಲ್ಲಿ!

ಒಂದು ಕಾಲಕ್ಕೆ ಡಿ ಬಿ ಚಂದ್ರೇಗೌಡರ ಕಾಂಗ್ರೆಸ್ ನಿಷ್ಠೆ ಪ್ರಶ್ನಾತೀತವಾಗಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಚಿಕ್ಕಮಗಳೂರಿನಿಂದ ಕಣಕ್ಕಿಳಿಯಲು ಕ್ಷೇತ್ರ ಬಿಟ್ಟುಕೊಟ್ಟವರು ಚಂದ್ರೇಗೌಡ. ನಂತರ ಬದಲಾದ ಕಾಲಘಟ್ಟದಲ್ಲಿ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. ಬಿಜೆಪಿಯಿಂದ ಸಂಸದರೂ ಆದರು. ಕಳೆದ ಬಾರಿ ಮತ್ತೊಮ್ಮೆ ಟಿಕೆಟ್ ಸಿಗದೆ ಈಗ ಸುಮ್ಮನೆ ಮನೆಯಲ್ಲಿದ್ದಾರೆ. ಈಗ ಬರುತ್ತಿರುವ ತಾಜಾ ಮಾಹಿತಿ ಪ್ರಕಾರ, ಡಿ ಬಿ ಚಂದ್ರೇಗೌಡರ ಪುತ್ರಿ ಕಾಂಗ್ರೆಸ್ ವಾರ್ ರೂಮಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಐಐಟಿ ಪದವೀಧರೆಯಾಗಿರುವ ಅವರು, ಕಾಂಗ್ರೆಸ್ ರಣತಂತ್ರ ರೂಪಿಸುವುದರಲ್ಲಿ ನಿರತರಾಗಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More