ಲೋಕಸಭಾ ಉಪಚುನಾವಣೆ; ಬಿಜೆಪಿ ಜೊತೆಗೆ ಕಾಂಗ್ರೆಸ್‌-ಜೆಡಿಎಸ್‌ಗೂ ಅಗ್ನಿಪರೀಕ್ಷೆ

ಇತ್ತೀಚಿನ ಉಪಚುನಾವಣೆಗಳಲ್ಲಿ ಸರಣಿ ಸೋಲು ಕಂಡಿರುವ ಬಿಜೆಪಿಗೆ ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆ ನಿರ್ಣಾಯಕವಾಗಲಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ಮತದಾರನ ನಿಲುವು ಅರಿಯಲು ಇದು ವೇದಿಕೆಯಾಗಿದ್ದು, ಕುತೂಹಲ ಕೆರಳಿಸಿದೆ

ರಾಷ್ಟ್ರ ರಾಜಕಾರಣಕ್ಕೆ ಹೊಸ ದಿಕ್ಕು ತೋರಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಬೆನ್ನಿಗೇ, ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳಿಗೆ ಕೆಲವೇ ತಿಂಗಳಲ್ಲಿ ಉಪಚುನಾವಣೆ ನಡೆಯಲಿದೆ. ಮಂಡ್ಯ ಲೋಕಸಭಾ ಸದಸ್ಯರಾಗಿದ್ದ ಜೆಡಿಎಸ್‌ನ ಸಿ ಎಸ್‌ ಪುಟ್ಟರಾಜು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿಯ ಬಿ ಎಸ್‌ ಯಡಿಯೂರಪ್ಪ ಮತ್ತು ಬಳ್ಳಾರಿ ಸಂಸದರಾಗಿದ್ದ ಬಿ ಶ್ರೀರಾಮುಲು ಅವರು ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಾಗಿ ೨೦೧೯ರ ಲೋಕಸಭಾ ಚುನಾವಣೆ ಎದುರಿಸುವುದಾಗಿ ಘೋಷಿಸುವುದರಿಂದ ಈ ಉಪಚುನಾವಣೆಗಳು ಭಾರಿ ಪ್ರಾಮುಖ್ಯ ಪಡೆದುಕೊಂಡಿವೆ.

ಉಪಚುನಾಣೆಯಲ್ಲೂ ಮೈತ್ರಿಕೂಟದ ಅಭ್ಯರ್ಥಿ ಕಣಕ್ಕಿಳಿದರೆ, ಮಂಡ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ಸುಲಭ ಜಯ ದಕ್ಕಲಿದೆ. ಆದರೆ, ಶಿವಮೊಗ್ಗ ಮತ್ತು ಬಳ್ಳಾರಿಯ ಬಗ್ಗೆ ಇದೇ ಮಾತು ಹೇಳಲಾಗದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಅಭ್ಯರ್ಥಿಗಳು ಬಿಜೆಪಿ ಉಮೇದುವಾರರಿಗೆ ಹೋಲಿಕೆ ಮಾಡಿದರೆ ಪಡೆದ ಮತಗಳ ನಡುವೆ ಸಾಕಷ್ಟು ಅಂತರವಿದೆ. ಈ ಪ್ರತಿಷ್ಠೆಯ ಕದನದಲ್ಲಿ ಗೆಲ್ಲಲು ಕಾಂಗ್ರೆಸ್‌-ಜೆಡಿಎಸ್‌ ವರಿಷ್ಠರು ಭಾರಿ ರಾಜಕೀಯ ಚಾಣಾಕ್ಷತೆ ತೋರಬೇಕಿದೆ. ಇತ್ತ ಮುಂದಿನ ವರ್ಷ ಲೋಕಸಭೆಗೆ ಅಣಿಯಾಗಬೇಕಿರುವ ಬಿಜೆಪಿಗೆ ತನ್ನ ಸ್ಥಾನಗಳನ್ನು ಉಳಿಸಿಕೊಂಡು ಎದೆಯುಬ್ಬಿಸಿ ಸಾರ್ವತ್ರಿಕ ಚುನಾವಣೆ ಎದುರಿಸಲು ಇದು ಅತ್ಯವಶ್ಯ. ಇಲ್ಲಿನ ಸೋಲು ಪಕ್ಷವನ್ನು ಭಾರಿ ಮುಜುಗರಕ್ಕೆ ಈಡುಮಾಡಬಹುದು.

೨೦೧೪ರ ಲೋಕಸಭಾ ಚುನಾವಣೆಯ ನಂತರ ದೇಶದ ವಿವಿಧೆಡೆ ನಡೆದ ೨೭ ಲೋಕಸಭಾ ಉಪಚುನಾವಣೆಗಳ ಪೈಕಿ ಕೇವಲ ಐದು ಸ್ಥಾನಗಳನ್ನು ಮಾತ್ರ ಬಿಜೆಪಿ ಗೆದ್ದಿದೆ. ಬಿಜೆಪಿ ಅಭ್ಯರ್ಥಿಗಳನ್ನು ಮಣಿಸುವ ಉದ್ದೇಶದಿಂದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಹಾಗೂ ಇತರ ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿವೆ. ಈ ಕಾರ್ಯತಂತ್ರ ಯಶಸ್ವಿಯಾಗಿದ್ದು, ಬಿಜೆಪಿ ಅಭ್ಯರ್ಥಿಗಳು ಬಹುತೇಕ ಕ್ಷೇತ್ರಗಳಲ್ಲಿ ಮಂಡಿಯೂರಿದ್ದಾರೆ. ಇದೇ ಕಾರಣಕ್ಕೆ ರಾಜ್ಯದಲ್ಲೂ ಬಿಜೆಪಿ-ಜೆಡಿಎಸ್‌ ಒಂದಾಗಲು ನಿರ್ಧರಿಸಿವೆ. ಉಪಚುನಾವಣೆಯಲ್ಲಿ ಆಯ್ಕೆಯಾಗುವ ಸಂಸದರ ಅವಧಿ ಅತ್ಯಲ್ಪವಾದರೂ ೨೦೧೯ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಈ ಉಪಚುನಾವಣೆ ನಿರ್ಣಾಯಕವಾದದ್ದು. ಉಪಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯ ಪ್ರಭಾವ ಅರ್ಥವಾಗಲಿದ್ದು, ತನ್ನ ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳುವ ಅಗ್ನಿಪರೀಕ್ಷೆಗೆ ಬಿಜೆಪಿ ಎದುರಾಗಲಿದೆ.

ವಿಶಿಷ್ಟ ರಾಜಕೀಯಕ್ಕೆ ಹೆಸರಾದ ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಮ್ಯಾ ಅವರನ್ನು ಮಣಿಸಿದ ಜೆಡಿಎಸ್‌ನ ಪುಟ್ಟರಾಜು ಸಂಸದರಾಗಿ ಆಯ್ಕೆಯಾಗಿದ್ದರು. ಸದ್ಯ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವುದರಿಂದ ಮಂಡ್ಯದಲ್ಲಿ ಯಾವ ಪಕ್ಷದ ಅಭ್ಯರ್ಥಿ ಹೆಸರು ಅಂತಿಮವಾಗಲಿದೆ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಜೆಡಿಎಸ್‌ನಿಂದ ಯುವಮುಖವಾದ ಲಕ್ಷ್ಮಿ ಅಶ್ವಿನ್‌ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದ್ದು, ಹಿರಿಯ ನಾಯಕರಾದ ಜಿ ಬಿ ಶಿವಕುಮಾರ್‌ ಹಾಗೂ ಎಲ್‌ ಆರ್‌ ಶಿವರಾಮೇಗೌಡ ಅವರ ಹೆಸರು ಚಲಾವಣೆಯಲ್ಲಿವೆ. ಕಾಂಗ್ರೆಸ್‌ನಿಂದ ರಮ್ಯಾ ಅವರು ಸ್ಪರ್ಧೆಗೆ ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್‌ನ ಪುಟ್ಟರಾಜು ಶೇ. ೪೩.೯೫, ಕಾಂಗ್ರೆಸ್‌ನ ರಮ್ಯಾ ಶೇ.೪೩.೪೯, ಬಿಜೆಪಿ ಅಭ್ಯರ್ಥಿ ಬಿ ಶಿವಲಿಂಗಯ್ಯ ಅವರು ಶೇ.೭.೨೯ ಮತ ಪಡೆದಿದ್ದರು. ಉಪಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಒಟ್ಟಾಗಿ ಅಭ್ಯರ್ಥಿ ಕಣಕ್ಕಿಳಿಸಿದರೆ ಭಾರಿ ಅಂತರದಿಂದ ಮೈತ್ರಿಕೂಟದ ಅಭ್ಯರ್ಥಿ ಗೆಲ್ಲುವು ನಿಶ್ಚಿತ.

ಭಾರತೀಯ ಕಂದಾಯ ಸೇವೆಯ (ಐಆರ್‌ಎಸ್‌) ತರಬೇತಿ ಪೂರ್ಣಗೊಳಿಸಿರುವ ಲಕ್ಷ್ಮಿ ಅಶ್ವಿನ್‌ ಅವರನ್ನು ಅಭ್ಯರ್ಥಿಯನ್ನಾಗಿಸಲು ಜೆಡಿಎಸ್‌ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೋಡಿಯಳ್ಳಿ ಅವರಾದ ಲಕ್ಷ್ಮಿ ಅವರು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಸಂಸ್ಥೆಯಲ್ಲಿ (ಕಿಮ್ಸ್‌) ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಲಕ್ಷ್ಮಿ ಅವರ ತಂದೆ ಕೆಂಚೇಗೌಡ ಅವರು ನಾಲ್ಕು ದಶಕಗಳಿಂದ ಜೆಡಿಎಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಪತಿ ಅಶ್ವಿನ್‌ಗೌಡ ಅವರು ಐಆರ್‌ಎಸ್‌ ಅಧಿಕಾರಿಯಾಗಿದ್ದಾರೆ. ಲಕ್ಷ್ಮಿ-ಅಶ್ವಿನ್‌ ದಂಪತಿಗೆ ಎರಡು ವರ್ಷದ ಪುತ್ರನಿದ್ದಾನೆ. ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅವರು ನಾಗಮಂಗಲ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದ ಚೆಲುವರಾಯಸ್ವಾಮಿಯನ್ನು ಸೋಲಿಸುವುದನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಜೆಡಿಎಸ್‌ ಸುರೇಶ್‌ಗೌಡ ಅವರಿಗೆ ಮಣೆ ಹಾಕಿದ್ದರಿಂದ ಲಕ್ಷ್ಮಿ ಅವರಿಗೆ ಅವಕಾಶ ಕೈತಪ್ಪಿತು. ಆಗಲೇ ಜೆಡಿಎಸ್‌ ವರಿಷ್ಠರು ಲೋಕಸಭಾ ಉಪಚುನಾವಣೆಗೆ ತಯಾರಿ ನಡೆಸುವಂತೆ ಸೂಚಿಸಿದ್ದರು ಎನ್ನಲಾಗಿದೆ. “ರಾಜಕಾರಣದ ಬಗ್ಗೆ ಮೊದಲಿನಿಂದಲೂ ಒಲವು ಇದೆ. ಜೆಡಿಎಸ್‌ ವರಿಷ್ಠರ ಸೂಚನೆಯ ಮೇರೆಗೆ ಐಆರ್‌ಎಸ್‌ ತ್ಯಜಿಸಿ ರಾಜಕೀಯಕ್ಕೆ ಬಂದಿದ್ದೇನೆ. ಜನರ ಮಧ್ಯದಲ್ಲಿದ್ದು ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವುದು ಇಷ್ಟ. ಅದಕ್ಕಾಗಿಯೇ ರಾಜಕಾರಣ ಆಯ್ಕೆ ಮಾಡಿಕೊಂಡಿದ್ದೇನೆ. ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಗೆಲ್ಲುವುದು ನಿಶ್ಚಿತ,” ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ೩೩ ವರ್ಷದ ಲಕ್ಷ್ಮಿ.

ಕಳೆದ ಒಂದು ವರ್ಷದಿಂದ ಮಂಡ್ಯ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಅವರು ಅಲ್ಲಿಯೇ ಮನೆ ಮಾಡಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಎಂಟು ವಿಧಾನಸಭಾ ಕ್ಷೇತ್ರಗಳು ಸೇರುತ್ತವೆ. ಸುಶಿಕ್ಷಿತ ಮತ್ತು ಯುವ ಮುಖವಾದರೂ ಲಕ್ಷ್ಮಿ ಅವರ ಹಾದಿ ಸರಳವಾಗಿಲ್ಲ. ಲಕ್ಷ್ಮಿ ಅವರಿಗೆ ಮಾಜಿ ಶಾಸಕರಾದ ಜಿ ಬಿ ಶಿವಕುಮಾರ್‌ ಹಾಗೂ ಎಲ್‌ ಆರ್‌ ಶಿವರಾಮೇಗೌಡರು ಸ್ಪರ್ಧೆ ಒಡ್ಡುತ್ತಿದ್ದಾರೆ. “ತಳಮಟ್ಟದಲ್ಲಿ ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿರುವುದರಿಂದ ಗೆಲುವು ಸುಲಭವಾಗುತ್ತದೆ. ಅದೇ ಕಾರಣಕ್ಕಾಗಿ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಹಿರಿಯ ನಾಯಕರು ನನ್ನ ಬೆಂಬಲಕ್ಕಿದ್ದಾರೆ. ಏನೇ ಆದರೂ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದೇನೆ,” ಎನ್ನುತ್ತಾರೆ ಶಿವಕುಮಾರ್‌.

ಮಾಜಿ ಶಾಸಕ ಜಿ ಎಸ್‌ ಬೊಮ್ಮೇಗೌಡ ಅವರ ಪುತ್ರನಾದ ಶಿವಕುಮಾರ್‌ ಅವರು ತಲಾ ಒಂದು ಬಾರಿ ಶಾಸಕ ಮತ್ತು ವಿಧಾನ ಪರಿಷತ್‌ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಮೆಕ್ಯಾನಿಕಲ್‌ ಇಂಜಿನಿಯರಿಂಗ್ ಪದವೀಧರರಾದ ಅವರಿಗೆ ೭೧ ವರ್ಷ ವಯಸ್ಸು. ಒಮ್ಮೆ ಬಿಜೆಪಿಯ ಕದತಟ್ಟಿಯೂ ಬಂದಿದ್ದಾರೆ. ಇದು ಅವರಿಗೆ ಮುಳುವಾಗಬಹುದು ಎಂಬುದು ಜೆಡಿಎಸ್‌ ಆಂತರಿಕ ವಲಯದ ವಿಶ್ಲೇಷಣೆ. ಮತ್ತೊಂದು ಕಡೆ ಎಲ್‌ ಆರ್‌ ಶಿವರಾಮೇಗೌಡ ಅವರಿಗೆ ಪದವೀಧರರ ಕ್ಷೇತ್ರದ ಟಿಕೆಟ್‌ ಕೈತಪ್ಪಿರುವುದರಿಂದ ಅವರು ಲೋಕಸಭೆಯ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿ ಎನ್ನಲಾಗಿದೆ. ಬಿಜೆಪಿಯ ಅಭ್ಯರ್ಥಿ ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಶಿವಮೊಗ್ಗ ಲೋಕಸಭಾ ಸ್ಥಾನಕ್ಕೆ ಯಡಿಯೂರಪ್ಪ ಅವರ ಪುತ್ರ ಬಿ ವೈ ರಾಘವೇಂದ್ರ ಅವರಿಗೆ ಖಾತ್ರಿ ಎನ್ನಲಾಗುತ್ತಿದೆ. ಹಿರಿಯ ನಾಯಕ ಆಯನೂರು ಮಂಜುನಾಥ್‌ ಅವರಿಗೆ ನೈರುತ್ಯ ಪದವೀಧರರ ಕ್ಷೇತ್ರದ ಟಿಕೆಟ್‌ ನೀಡುವ ಮೂಲಕ ರಾಘವೇಂದ್ರ ಎದುರಾಗಬಹುದಾಗಿದ್ದ ಸಂಭಾವ್ಯ ಅಡ್ಡಿಯನ್ನು ಯಡಿಯೂರಪ್ಪ ನಿವಾರಿಸಿಕೊಂಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.೫೩.೬೩ರಷ್ಟು ಮತ ಪಡೆದು ಗೆದ್ದಿದ್ದ ಯಡಿಯೂರಪ್ಪ ಅವರಿಗೆ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ (ಶೇ.೨೧.೪೯), ಜೆಡಿಎಸ್‌ನ ಗೀತಾ ಶಿವರಾಜ್‌ಕುಮಾರ್‌ (ಶೇ.೨೧.೨೯) ಸವಾಲೇ ಆಗಿರಲಿಲ್ಲ. ಮೈತ್ರಿಕೂಟದಿಂದ ಒಮ್ಮತದ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಬೇಳೂರು ಗೋಪಾಲಕೃಷ್ಣ ಅಥವಾ ಜೆಡಿಎಸ್‌ನ ಗೀತಾ ಶಿವರಾಜ್‌ಕುಮಾರ್‌ ಸ್ಪರ್ಧೆ ಸಾಧ್ಯತೆ ಇದೆ. ಏಳು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಶಿವಮೊಗ್ಗದಲ್ಲಿ ಸುಮಾರು ನಾಲ್ಕು ಕ್ಷೇತ್ರಗಳಲ್ಲಿ ಈಡಿಗ ಸಮುದಾಯದ ಮತಗಳು ಸಾಕಷ್ಟಿವೆ. ಈಡಿಗ ಸಮುದಾಯದ ಗೋಪಾಲಕೃಷ್ಣ ಅಥವಾ ಗೀತಾ ಸ್ಪರ್ಧಿಸಿದರೆ ಅನುಕೂಲವಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ : ಉತ್ತರ-ದಕ್ಷಿಣ ಹೊಯ್ದಾಟಕ್ಕೆ ಸಿಲುಕಿರುವ ಕೆಪಿಸಿಸಿ ಅಧ್ಯಕ್ಷ ಗಾದಿ ಯಾರಿಗೆ?

ಮೀಸಲು ಲೋಕಸಭಾ ಕ್ಷೇತ್ರವಾದ ಬಳ್ಳಾರಿಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಡುವುದು ನಿಶ್ಚಿತ. ಐದು ಪರಿಶಿಷ್ಟ ಪಂಗಡ, ಎರಡು ಪರಿಶಿಷ್ಟ ಜಾತಿ ಹಾಗೂ ಎರಡು ಸಾಮಾನ್ಯ ಕ್ಷೇತ್ರ ಸೇರಿದಂತೆ ಒಂಬತ್ತು ವಿಧಾನಸಭಾ ಕ್ಷೇತ್ರಗಳನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿವೆ. ಬಿಜೆಪಿಯಿಂದ ಶ್ರೀರಾಮುಲು ಸಹೋದರಿಯಾದ ಮಾಜಿ ಸಂಸದೆ ಜಿ ಶಾಂತಾ ಅಥವಾ ಅಳಿಯ ಸುರೇಶ್‌ ಬಾಬು ಸ್ಪರ್ಧಿಸುವ ಸಾಧ್ಯತೆ ಇದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀರಾಮುಲು ಅವರು ಶೇ. ೫೧.೦೯ ಮತ ಪಡೆದು ಕಾಂಗ್ರೆಸ್‌ (ಶೇ.೪೨.೯೫) ಅಭ್ಯರ್ಥಿಯನ್ನು ಪರಾಭವಗೊಳಿಸಿದ್ದರು. ಜೆಡಿಎಸ್‌ ಅಭ್ಯರ್ಥಿ ಕೇವಲ ಶೇ. ೧.೨೧ ಮತ ಪಡೆದಿದ್ದರು. ಇಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಾದರೂ ಗೆಲುವಿಗೆ ಉಭಯ ಪಕ್ಷಗಳು ಸಾಕಷ್ಟು ಪ್ರಯಾಸಪಡಬೇಕಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರವೂ ೨೦ನೇ ಶತಮಾನದ ಅಂತ್ಯದಲ್ಲಿ ರಾಷ್ಟ್ರದ ಗಮನ ಸೆಳೆದ ಕ್ಷೇತ್ರ. ೧೯೯೯ರ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿದ್ದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸದ್ಯ ವಿದೇಶಾಂಗ ಸಚಿವೆಯಾಗಿರುವ ಬಿಜೆಪಿ ಅಭ್ಯರ್ಥಿಯಾಗಿದ್ದ ಸುಷ್ಮಾ ಸ್ವರಾಜ್‌ ಅವರನ್ನು ಮಣಿಸಿದ್ದರು. ಒಡಲಲ್ಲಿ ರೋಚಕ ಇತಿಹಾಸ ಇಟ್ಟುಕೊಂಡಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ‌ ಪ್ರಬಲ ಅಭ್ಯರ್ಥಿಯೇ ಇಲ್ಲವಾಗಿದ್ದಾರೆ. ವಿಧಾನಸಭೆಗೆ ಆಯ್ಕೆಯಾಗಿರುವ ಬಿ ನಾಗೇಂದ್ರ ಅವರನ್ನೇ ಕಣಕ್ಕಿಳಿಸುವ ಮಾತುಗಳು ಕಾಂಗ್ರೆಸ್‌ ವಲಯದಿಂದ ಕೇಳಿಬರುತ್ತಿವೆ. ಅನಿಲ್‌ ಮತ್ತು ಸಂತೋಷ್‌ ಲಾಡ್‌ ಸಹ ಸೋಲನುಭವಿಸಿರುವುದರಿಂದ ಕಾಂಗ್ರೆಸ್‌ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಇನ್ನಷ್ಟೇ ಸಮ್ಮಿಶ್ರ ಸರ್ಕಾರದ ಸಂಪುಟ ರಚನೆಯಾಗಬೇಕಿದ್ದು, ಜಿಲ್ಲೆಯ ಸಾಕಷ್ಟು ಶಾಸಕರು ಕ್ಷೇತ್ರದ ಕಡೆ ಇನ್ನೂ ಮುಖ ಮಾಡಿಯೇ ಇಲ್ಲವಾದ್ದರಿಂದ ಲೋಕಸಭಾ ಉಪಚುನಾವಣೆಯ ಬಗ್ಗೆ ಹೆಚ್ಚಿನ ಚರ್ಚೆಯಾಗುತ್ತಿಲ್ಲ ಎನ್ನಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಿದೆ. ಆದರೆ, ಕಾಂಗ್ರೆಸ್‌-ಜೆಡಿಎಸ್‌ ಮತಗಳು ಒಂದಾದರೆ ಬಿಜೆಪಿಯ ಗೆಲುವಿನ ಹಾದಿ ತ್ರಾಸದಾಯಕ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More