ಪೇಜಾವರ ಶ್ರೀಗಳ ಇಫ್ತಾರ್ ವಿವಾದವನ್ನು ಅರ್ಥ ಮಾಡಿಕೊಳ್ಳಬೇಕಾದ ತುರ್ತು

ಮೋದಿಯವರನ್ನು ನಯವಾಗಿ ಟೀಕಿಸಿ ಚರ್ಚೆಯ ಕೇಂದ್ರಬಿಂದುವಾಗಿದ್ದ ಪೇಜಾವರ ಶ್ರೀ ಈ ಬಾರಿಯೂ ಇಫ್ತಾರ್ ಔತಣಕೂಟದ ದಾಳ ಉರುಳಿಸಿದ್ದಾರೆ. ಇದರಿಂದ ಯಾರಿಗೆ ಎಷ್ಟು ಲಾಭ, ಯಾರಿಗೆ ಎಷ್ಟು ನಷ್ಟ? ಇದರ ಸುತ್ತ ‘ಕೃಷ್ಣನೂರಿನಲ್ಲಿ’ ಚರ್ಚೆಗಳು ನಡೆಯುತ್ತಿವೆ. ಆ ಚರ್ಚೆಯ ಸಾರಾಂಶ ಇಲ್ಲಿದೆ

ವಿವಾದಗಳ ಸುತ್ತ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ಸುತ್ತುತ್ತಿದ್ದಾರೆಯೇ ಅಥವಾ ವಿವಾದಗಳೇ ಅವರ ಸುತ್ತ ಸುತ್ತುತ್ತಿವೆಯೇ ಎಂಬುದು ಉಡುಪಿಗೆ ಹೊಸತೇನೂ ಅಲ್ಲ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವರಾಡಿದ ಎರಡು ಮಾತುಗಳು ವಿವಾದದ ಅಲೆಯನ್ನು ಎಬ್ಬಿಸಿದವು. ಈಗ ಇಫ್ತಾರ್ ಕೂಟದ ವಿವಾದದೊಂದಿಗೆ ಮತ್ತೆ ಸುದ್ದಿಯಾಗಿದ್ದಾರೆ.

ಮೋದಿಯವರು ಕಪ್ಪುಹಣ ತರದಿರುವುದನ್ನು, ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಭರವಸೆ ಈಡೇರದೆ ಇರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ರಾಮಮಂದಿರ ನಿರ್ಮಾಣಕ್ಕಿಂತಲೂ ಗಂಗಾನದಿ ಶುದ್ಧೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವ ಮೂಲಕ ಅಚ್ಚರಿ ಮೂಡಿಸಿದರು. ಆದರೆ, ಉಡುಪಿಯನ್ನು ಹಾಗೂ ಪೇಜಾವರ ಶ್ರೀಗಳನ್ನು ಹತ್ತಿರದಿಂದ ಬಲ್ಲವರ ಪ್ರಕಾರ, ಮೋದಿ ಅವರ ಬಗ್ಗೆ ಅವರಾಡಿದ ಮಾತುಗಳಲ್ಲಿ ಯಾವುದೇ ವಿಶೇಷ ಇರಲಿಲ್ಲ (ಮೇಲಾಗಿ ಅದು ಮೋದಿ ವಿರುದ್ಧ ಮಾತನಾಡಬೇಕೆಂದು ಕರೆದಿದ್ದ ಪತ್ರಿಕಾಗೋಷ್ಠಿಯಾಗಿರಲಿಲ್ಲ ಎನ್ನಲಾಗುತ್ತಿದೆ). ಅಲ್ಲಿಗೆ ಮೋದಿ ವಿರುದ್ಧ ವಿಶೇಷ ವಾಗ್ದಾಳಿ ನಡೆಸುವ ಉದ್ದೇಶ ಅವರಿಗಿರಲಿಲ್ಲ. ಬದಲಿಗೆ, ತಮ್ಮ ಶಿಷ್ಯನನ್ನು ಸರಿದಾರಿಯಲ್ಲಿ ನಡೆ ಎಂಬಂತೆ ಸೂಚಿಸುವ ಹೂರಣ ಅವರ ಮಾತಿನಲ್ಲಿತ್ತು. ಇದನ್ನು ಬೆಂಬಲಿಸುವಂತೆ ಅವರ ಗಂಗಾನದಿ ಶುದ್ಧೀಕರಣದ ಜಪ ಇದೆ. ಕೆಲ ತಿಂಗಳ ಹಿಂದೆ ಉಡುಪಿಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆದಾಗ ಇದೇ ಪೇಜಾವರರು, "ನನ್ನ ಜೀವಿತದ ಅವಧಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು,” ಎಂಬ ಮಾತುಗಳನ್ನು ಆಡಿದ್ದರು. ಅದಾದ ನಂತರ ಚುನಾವಣೆ ಹತ್ತಿರವಾಯಿತು. ಮೋದಿ ಉಡುಪಿಗೆ ಬಂದರು. ರಾಹುಲ್ ಗಾಂಧಿ ಅವರಂತೆ ಮೋದಿ ಕೂಡ ಮಠಕ್ಕೆ ಭೇಟಿ ನೀಡಲಿಲ್ಲ. ಅವರು ಬರಬೇಕಿತ್ತು ಎಂದು ಪೇಜಾವರರು ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದೂ ಆಯಿತು.

ಈಗ ಗಂಗಾ ಶುದ್ಧೀಕರಣದ ನೆಪದಲ್ಲಿ ರಾಮಮಂದಿರ ನಿರ್ಮಾಣ ಪ್ರಸ್ತಾವನೆಯನ್ನು ತೆರೆಮರೆಗೆ ತಳ್ಳುತ್ತಿರುವುದು ಏಕೆ ಎಂಬ ಪ್ರಶ್ನೆ ಎದ್ದಿದೆ. ಇದು ಮೋದಿಯವರನ್ನು ರಕ್ಷಿಸುವ ತಂತ್ರವೇ ಹೊರತು ಬೇರೇನೂ ಅಲ್ಲ ಎಂಬ ಮಾತುಗಳಿವೆ. ರಾಮಮಂದಿರ ನಿರ್ಮಾಣ ವಿಚಾರ ಸಂಘಪರಿವಾರದ ವಿವಿಧ ಸಂಘಟನೆಗಳಿಗೆ ಮೋದಿಯವರನ್ನು ಹಣಿಯಲು ಇರುವ ಒಳ್ಳೆಯ ಅಸ್ತ್ರ ಎನ್ನಲಾಗುತ್ತಿದೆ. ಆದರೆ, ರಾಮಮಂದಿರ ನಿರ್ಮಾಣ ವಿಚಾರದ ಬಗ್ಗೆ ಹೆಬ್ಬಯಕೆ ವ್ಯಕ್ತಪಡಿಸಿದ್ದ ಪೇಜಾವರರ ಮೂಲಕವೇ ವಿವಾದ ಬಗೆಹರಿಸಿದರೆ ಮೋದಿಯವರ ಚುನಾವಣೆ ಹಾದಿ ಸುಗಮವಾಗಲಿದೆ ಎಂಬ ಮಾತುಗಳೂ ಇವೆ. ಹಾಗಾಗಿ, ಪತ್ರಿಕಾಗೋಷ್ಠಿಯಲ್ಲಿ ಗಂಗಾ ನದಿ ಶುದ್ಧೀಕರಣವಾಗಿಲ್ಲ ಎಂಬುದನ್ನು ದೊಡ್ಡದು ಮಾಡಿ ಮೋದಿಯವರತ್ತ ತಿರುಗಿದ್ದ ರಾಮಮಂದಿರ ನಿರ್ಮಾಣ ವಿಚಾರವನ್ನು ದೂರ ಸರಿಸಿದರು ಎನ್ನಲಾಗುತ್ತಿದೆ. ಅಲ್ಲದೆ, ರಾಮಮಂದಿರ ವಿವಾದವನ್ನು ಮತ್ತಷ್ಟು ದಿನಗಳ ಕಾಲ ಜೀವಂತವಾಗಿಡುವ ತಂತ್ರದ ಭಾಗವಾಗಿಯೂ ಅವರ ಮಾತುಗಳು ಹೊರಬಿದ್ದಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಳೆದ ಬಾರಿ ಇಫ್ತಾರ್ ಕೂಟದ ವಿವಾದದಲ್ಲಿ ಉಡುಪಿಯ ರಂಜಾನ್ ಮುಗಿದುಹೋಗಿತ್ತು. ಮಠದಲ್ಲಿ ಮುಸ್ಲಿಂ ಸಮುದಾಯಕ್ಕೆ ರಂಜಾನ್ ಮಾಸದ ಔತಣಕೂಟ ಆಯೋಜಿಸುವುದರ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಪ್ರಮೋದ್ ಮುತಾಲಿಕ್ ರೀತಿಯ ಹಿಂದೂವಾದಿಗಳು ಅದನ್ನು ಉಗ್ರವಾಗಿ ವಿರೋಧಿಸಿದ್ದರು. ಈ ಬಾರಿಯೂ ಅದೇ ವಿವಾದದ ಹುತ್ತಕ್ಕೆ ಪೇಜಾವರ ಶ್ರೀಗಳು ಕೈ ಹಾಕಿದ್ದಾರೆ. ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಮತ್ತೆ ಗುಡುಗಿದ್ದಾರೆ. ಪೇಜಾವರ ಶ್ರೀಗಳಿಂದ ಸೌಹಾರ್ದತೆ, ಭ್ರಾತೃತ್ವ ಸೃಷ್ಟಿಯಾಗಲಿದೆ ಎಂಬುದರ ಆಚೆಗೆ ಹಲವು ವಿಷಯಗಳನ್ನು ಗಮನಿಸಬೇಕು. ಉಡುಪಿ ನಗರದಲ್ಲಿರುವ ಪೇಜಾವರ ಮಠದ ಬಹುತೇಕ ಆಸ್ತಿಯನ್ನು ಭೋಗ್ಯಕ್ಕೋ, ಬಾಡಿಗೆಗೋ ಪಡೆದಿರುವವರು ಮುಸ್ಲಿಮರು, ಕ್ರೈಸ್ತರು. ಉಡುಪಿ ಮಠ ಹೇಳಿದ್ದನ್ನು ಆಸ್ಕರ್ ಫರ್ನಾಂಡಿಸ್ ರೀತಿಯ ಅಲ್ಪಸಂಖ್ಯಾತ ರಾಜಕೀಯ ನಾಯಕರು, ಕಾಂಗ್ರೆಸ್ಸಿನಲ್ಲಿರುವ ಪ್ರಮೋದ್ ಮಧ್ವರಾಜ್ ರೀತಿಯ ಮುಖಂಡರು ಸುಲಭವಾಗಿ ತೆಗೆದುಹಾಕುವುದಿಲ್ಲ. ಅಂತಹ ಬಾಂಧವ್ಯ ಎಲ್ಲ ಊರುಗಳಲ್ಲಿ ಇದ್ದಂತೆ ಇಲ್ಲಿಯೂ ಇದೆ. ಆದರೆ, ಕರಾವಳಿ ಭಾಗದಲ್ಲಿ ಕೆಲ ವರ್ಷಗಳಿಂದ ವಿಚಿತ್ರ ಬೆಳವಣಿಗೆಯೊಂದು ನಡೆಯುತ್ತಿದೆ. ಜಾತ್ರೆಗಳ ಸಂದರ್ಭದಲ್ಲಿ ಮುಸ್ಲಿಮರು ಅಂಗಡಿ ಮುಂಗಟ್ಟುಗಳನ್ನು ತೆರೆಯಲು ನಿರಾಕರಿಸುವುದು (ಕುಂದಾಪುರದ ಒಂದೆರಡು ಜಾತ್ರೆಗಳಲ್ಲಿ ಮುಸ್ಲಿಮರನ್ನು ಹೀಗೆ ಹೊರಗಿಟ್ಟ ಪ್ರಕರಣಗಳು ಹೊರಜಗತ್ತಿಗೆ ಹೆಚ್ಚು ಪ್ರಚಾರವಾಗಲಿಲ್ಲ), ಅವರ ಆರ್ಥಿಕತೆಗೆ ಧಕ್ಕೆ ತರುವಂತೆ ನಡೆದುಕೊಳ್ಳುವ ಪರಿಪಾಠ ಆರಂಭವಾಗಿದೆ. ಅದರ ಮತ್ತೊಂದು ಆವೃತ್ತಿಯೇ ಇಫ್ತಾರ್ ಕೂಟಕ್ಕೆ ವಿರೋಧ ಎಂಬ ವಿವಾದ.

ಇದನ್ನೂ ಓದಿ : ಧರ್ಮ ಸಂಸತ್ ಆಯೋಜಿಸುವ ಮೂಲಕ ಪೇಜಾವರ ಶ್ರೀ ಹೊಡೆದ ಹಕ್ಕಿಗಳೆಷ್ಟು?

ಪೇಜಾವರರೇ ಎಷ್ಟೋ ಬಾರಿ ಹೇಳಿರುವಂತೆ ಪರ್ಯಾಯ ಸಂದರ್ಭದಲ್ಲಿ, ಮಠದ ಆಗುಹೋಗುಗಳಲ್ಲಿ ಉಡುಪಿ ಮುಸ್ಲಿಮರ ಪಾತ್ರವಿದೆ. ಅದಕ್ಕೆ ಋಣ ಸಂದಾಯವೆಂಬಂತೆ ಇಫ್ತಾರ್ ಆಯೋಜಿಸುತ್ತಿರುವುದೂ ಅಷ್ಟೇ ನಿಜ. ಆದರೆ ಈ ಬಾರಿ ಪೇಜಾವರರು, “ಮುಸ್ಲಿಂ ನಾಯಕರಿಗೆ ಈ ಬಗ್ಗೆ ಹೆಚ್ಚು ಉತ್ಸಾಹ ಇದ್ದಂತಿಲ್ಲ. ಮೂರ್ತಿ ಪೂಜೆ ನಡೆಯುವ ಕಡೆ ಕಾರ್ಯಕ್ರಮ ಆಯೋಜಿಸಲು ಒಪ್ಪುತ್ತಿಲ್ಲ,” ಎಂಬರ್ಥದ ಮಾತುಗಳನ್ನು ಆಡಿದ್ದಾರೆ. ಇಲ್ಲಿ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಇಡೀ ಔತಣಕೂಟದ ಸೂತ್ರಧಾರರು ಪೇಜಾವರ ಶ್ರೀಗಳು. ಔತಣಕೂಟದ ರೂಪುರೇಷೆ ಅವರನ್ನು ಮೀರಿ ನಡೆಯದು. ಇಷ್ಟಾದರೂ ಮುಸ್ಲಿಂ ನಾಯಕರ ಮೇಲೆ ಗೂಬೆ ಕೂರಿಸುತ್ತಿರುವುದೇಕೆ? ವೃಥಾ ಅವರನ್ನು ಋಣಾತ್ಮಕವಾಗಿ ಬಿಂಬಿಸುತ್ತಿರುವುದೇಕೆ? ಅಲ್ಲದೆ, ಹೀಗೆ ಮುಸ್ಲಿಮರ ಮೇಲೆ ಅಸ್ತ್ರ ಪ್ರಯೋಗಿಸುವ ಮೂಲಕ ಹಿಂದುತ್ವವಾದಿಗಳ ಕರುಣೆ ಗಿಟ್ಟಿಸಿಕೊಳ್ಳಲು ಶ್ರೀಗಳು ಯತ್ನಿಸುತ್ತಿರುವಂತಿದೆ (ಕಳೆದ ಬಾರಿಯ ಇಫ್ತಾರ್ ವಿವಾದವನ್ನೇ ಮುಂದುಮಾಡಿ ಮಠದ ಅನೇಕರು ಮುನಿಸಿಕೊಂಡಿದ್ದಾರೆ). ಈ ಮೂಲಕ ಮಠದೊಳಗಿನ ಶಿಷ್ಯಗಣ, ಸಂಘಪರಿವಾರದ ಕೆಲವು ಮುಖಂಡರಲ್ಲಿ ಎದ್ದಿರುವ ಅಸಮಾಧಾನವನ್ನು ‘ನೈಸರ್ಗಿಕವಾಗಿ’ ನಿವಾರಿಸಲು ಶ್ರೀಗಳು ಯತ್ನಿಸುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ವಿವಾದವಿರಬೇಕು; ಆದರೆ ಅದು ಇದ್ದೂ ಇಲ್ಲದಂತಿರಬೇಕು ಎಂಬಂತೆ ಹಲವು ಸಂದರ್ಭಗಳಲ್ಲಿ ಅವರು ನಡೆದುಕೊಂಡಿದ್ದಾರೆ. ಇದು ಈ ಬಾರಿಯೂ ಸಾಬೀತಾಗಿದೆ. ಆ ಮೂಲಕ ಚರ್ಚೆಯ ಕೇಂದ್ರ ಭಾಗವಾಗುವ ಅವರ ಯತ್ನ ಯಶಸ್ವಿಯಾಗಿದೆ. ಮೋದಿ ಟೀಕಿಸುವ ಪ್ರಕರಣದಲ್ಲಾಗಲೀ ಅಥವಾ ಇಫ್ತಾರ್ ವಿವಾದದ ವಿಚಾರದಲ್ಲಾಗಲೀ ಅವರು ಪ್ರಾಮಾಣಿಕವಾಗಿ ವರ್ತಿಸುತ್ತಿಲ್ಲ ಎನ್ನಲಾಗುತ್ತಿದೆ. ಮೋದಿಯವರನ್ನು ಟೀಕಿಸುತ್ತಲೇ ಅವರನ್ನು ಸಮರ್ಥಿಸುವ ಜಾಣ್ಮೆ, ಇಫ್ತಾರ್ ಅನ್ನು ರಾಜಕೀಯಕರಣಗೊಳಿಸುವ ಮೂಲಕ ಪಡೆಯುತ್ತಿರುವ ಲಾಭದಲ್ಲಿ ಹಲವು ಪದರಗಳಿವೆ. ಅದನ್ನು ಅರ್ಥ ಮಾಡಿಕೊಳ್ಳುವಷ್ಟು ಜನ ಸೂಕ್ಷ್ಮವಾಗಿರಬೇಕು. ಹಿರಿಯಡ್ಕದ ದನದ ವ್ಯಾಪಾರಿ ಹುಸೈನಬ್ಬ ಅವರ ಸಾವಿನ ವಿಚಾರವನ್ನು ಪ್ರಸ್ತಾಪಿಸಿರುವ ಅನೇಕರು ಪೇಜಾವರರಿಗೆ ನಿಜವಾದ ಕಾಳಜಿ ಇದ್ದರೆ ಇಫ್ತಾರ್ ವಿವಾದದ ಬದಲು ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯನ್ನು ತಡೆಯಲಿ ಎಂದು ಆಗ್ರಹಿಸಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More