ವಿಡಿಯೋ ಸ್ಟೋರಿ | ಬಾದಾಮಿಯಲ್ಲೇ ಮನೆ ಮಾಡಲಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ

ಸಚಿವ ಸಂಪುಟದ ಜಂಜಾಟ, ಭಿನ್ನಾಭಿಪ್ರಾಯ ಶಮನ ಮುಂತಾಗಿ ಒಂದರ ಹಿಂದೊಂದರಂತೆ ಪಕ್ಷದ ಹಲವು‌ ಸಮಸ್ಯೆಗಳನ್ನು ತಕ್ಕಮಟ್ಟಿಗೆ ನಿವಾರಿಸಿದ ಸಿದ್ದರಾಮಯ್ಯ ಈಗ ನಿರಾಳರಾದಂತೆ ಕಾಣುತ್ತಿದ್ದಾರೆ. ಅವರ ಐದು ದಿನಗಳ ಬಾದಾಮಿ ಭೇಟಿ, ಜನರೊಂದಿಗೆ ಬೆರೆಯುತ್ತಿರುವ ರೀತಿ ಇದಕ್ಕೆ ಸಾಕ್ಷಿ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರ ರಾಷ್ಟ್ರದ ಗಮನ ಸೆಳೆದಿತ್ತು. ತೀವ್ರ ಜಿದ್ದಾಜಿದ್ದಿಗೆ ಕಾರಣವಾದ ಕ್ಷೇತ್ರದ ಈ ಬಾರಿಯ ಚುನಾವಣೆ ಇತಿಹಾಸದಲ್ಲಿ ದಾಖಲೆ. ಅಲ್ಪ ಮತಗಳ ಅಂತರದಿಂದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಮತದಾರರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೈಹಿಡಿದರು. ಈ ಮೂಲಕ, ಚಾಮುಂಡೇಶ್ವರಿಯಲ್ಲಿನ ಸೋಲಿನ ನೋವನ್ನು ಈ ಕ್ಷೇತ್ರದ ಜನ ನಿವಾರಿಸಿದರು. ಆದರೆ ಚುನಾವಣಾ ಫಲಿತಾಂಶ ಪ್ರಕಟವಾಗಿ ತಿಂಗಳಾಗುತ್ತ ಬಂದರೂ ಸಿದ್ದರಾಮಯ್ಯ ಕ್ಷೇತ್ರ ಭೇಟಿ ಸಾಧ್ಯವಾಗಿರಲಿಲ್ಲ.

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಅತ್ಯಂತ ಮಹತ್ವದ ಪಾತ್ರ ಸಿದ್ದರಾಮಯ್ಯ ಅವರದ್ದೇ ಆಗಿತ್ತು. ಇದೀಗ ಸಚಿವ ಸಂಪುಟದ ಜಂಜಾಟ, ಅಸಮಾಧಾನ, ಭಿನ್ನಾಭಿಪ್ರಾಯ ಶಮನ ಹೀಗೆ ಒಂದರ ಹಿಂದೊಂದರಂತೆ ಪಕ್ಷದಲ್ಲಿನ ಹಲವು‌ ಸಮಸ್ಯೆಗಳನ್ನು ನಿವಾರಿಸಿದ ಸಿದ್ದರಾಮಯ್ಯ, ನಿರಾಳರಾದಂತೆ ಕಾಣುತ್ತಿದೆ. ಹೀಗಾಗಿ, ಜೂ.೭ರಿಂದ ಐದು ದಿನಗಳ ಕಾಲ ತಮ್ಮನ್ನು ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ತಿಳಿಸಲು ಬಾದಾಮಿಗೆ ಆಗಮಿಸಿದ್ದಾರೆ.

ಕ್ಷೇತ್ರದ ಜನರು ಫಲಿತಾಂಶದ ನಂತರದ ದಿನಗಳಿಂದ ಬೆಂಗಳೂರಿನತ್ತ ಮುಖ ಮಾಡಿಯೇ ಕುಳಿತಿದ್ದರು. ಯಾವಾಗ ಸರ್ಕಾರ ರಚನೆ ಪ್ರಕ್ರಿಯೆ ಮುಗಿಯುತ್ತದೋ, ತಮ್ಮ ನೆಚ್ಚಿನ ನಾಯಕ ಕ್ಷೇತ್ರಕ್ಕೆ ಯಾವಾಗ ಬರುತ್ತಾರೋ ಎನ್ನುವ ಕಾತರ ಮತದಾರರದ್ದಾಗಿತ್ತು. ಹಾಗಾಗಿ, ಸಿದ್ದರಾಮಯ್ಯ ಅವರ ಬಾದಾಮಿ ಭೇಟಿ ಜನರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಅವರು ಕಾಲಿಟ್ಟ ಕಡೆಯೆಲ್ಲ ಭಾರಿ ಅಭಿಮಾನ ವ್ಯಕ್ತವಾಯಿತು. ಜನರ ಅಭಿಮಾನಕ್ಕೆ ಸಿದ್ದರಾಮಯ್ಯ ಖುಷಿಯಾದರು. ಮೊದಲು ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು, ನಂತರ ಜಮ್ಮನಕಟ್ಟಿ, ಹುಲಸಗೇರಿ, ಹಂಗರಗಿ, ಕೆಲೂಡಿ, ಹಾನಾಪೂರ್ ಸೇರಿ ಒಟ್ಟು 8 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಜನರೊಂದಿಗೆ ಬೆರೆತರು.

ಬಾದಾಮಿ ಅಭಿವೃದ್ಧಿಗೆ ಪಣ

ಇನ್ನು ಭೇಟಿ ನೀಡಿದ ಕಡೆಗಳಲ್ಲೆಲ್ಲ ಸಿದ್ದರಾಮಯ್ಯ, ಬಾದಾಮಿಯಲ್ಲಿ ಮನೆ ಮಾಡುವ ವಿಚಾರ ಪ್ರಾಸ್ತಾಪಿಸಿದರು. “ನಾನೂ ಇಲ್ಲೇ ಮನೆ ಮಾಡುತ್ತೇನೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಎಲ್ಲರೂ ಸೇರಿ ಬಾದಾಮಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡೋಣ,” ಎಂದರು. ಪ್ರವಾಸಿ ತಾಣಗಳ ಪೈಕಿ ಬಾದಾಮಿಗೆ ಸಿಗಬೇಕಾದ ಸೌಲಭ್ಯ ಹಾಗೂ ಸ್ಥಾನಮಾನ ಸಿಕ್ಕಿಲ್ಲ ಎನ್ನುವ ಅಸಮಾಧಾನ ಈ ಭಾಗದ ಜನರಲ್ಲಿದೆ. ಜೊತೆಗೆ ಅನೇಕ ಅಭಿವೃದ್ಧಿ ಕಾರ್ಯಗಳ ನಿರೀಕ್ಷೆಯೂ ಇದೆ. ಹೀಗಾಗಿ, ಸಿದ್ದರಾಮಯ್ಯ ಅವರ ಮಾತು ಜನರ ವಿಶ್ವಾಸ ಹೆಚ್ಚಿಸಿತು.

ಎಸ್ ಆರ್ ಪಾಟೀಲ್ ಅನುಪಸ್ಥಿತಿ

ಕ್ಷೇತ್ರದ ಜಮ್ಮನಕಟ್ಟಿ ಗ್ರಾಮದಲ್ಲಿ ಆತ್ಮಹತ್ಯೆ ‌ಮಾಡಿಕೊಂಡ ರೈತ ರಾಜಪ್ಪನ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಜೊತೆಗೆ ಮೃತ ರೈತ ಕುಟುಂಬಕ್ಕೆ ಸಕಾ೯ರದಿಂದ 5 ಲಕ್ಷ, ವೈಯಕ್ತಿಕವಾಗಿ 1 ಲಕ್ಷ ಪರಿಹಾರದ ಚೆಕ್ ನೀಡಿದರು. ಇಷ್ಟೆಲ್ಲ ಕಾರ್ಯಕ್ರಮಗಳಿದ್ದರೂ ಕಾಂಗ್ರೆಸ್‌ನ ಸ್ಥಳೀಯ ನಾಯಕ ಎಸ್ ಆರ್ ಪಾಟೀಲ್ ಗೈರು ಎದ್ದುಕಾಣುತ್ತಿತ್ತು.

ಸಚಿವ ಸಂಪುಟದಲ್ಲಿ ಸ್ಥಾನಮಾನ ಸಿಗದ ಕಾರಣ ಪಾಟೀಲ್ ಅತೃಪ್ತರಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಹಾಗಾಗಿ, ಜಿಲ್ಲೆಗೆ ಸಿದ್ದರಾಮಯ್ಯ ಬಂದರೂ ಪಾಟೀಲ್ ಮಾತ್ರ ಸುಳಿಯಲಿಲ್ಲ. ಇದು ಅವರ ಅಸಮಾಧಾನ ಬಹಿರಂಗಗೊಳಿಸಿತು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನಮ್ಮಲ್ಲಿ ಯಾವುದೇ ರೀತಿಯ ಅಸಮಾಧಾನಗಳಿಲ್ಲ. ಪಕ್ಷದಲ್ಲಿರುವವರೆಲ್ಲ ನನಗೆ ಪರಮಾಪ್ತರೇ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು, ಸಮ್ಮಿಶ್ರ ಸರ್ಕಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಸರ್ಕಾರದಲ್ಲಿ ನನ್ನನ್ನು ಕಡೆಗಣಿಸಿಲ್ಲ. ಸಾಮಾಜಿಕ ನ್ಯಾಯದಡಿ ಎಲ್ಲರಿಗೂ ಸಚಿವ ಸ್ಥಾನ ನೀಡಲಾಗಿದೆ. ಇನ್ನೂ 6 ಖಾತೆ ಬಾಕಿ ಇವೆ. ಅವುಗಳನ್ನು ಸೂಕ್ತ ವ್ಯಕ್ತಿಗಳಿಗೆ ಕೊಡಲಾಗುವುದು,” ಎಂದರು.

ಲೋಕಸಭಾ ಚುನಾವಣೆಗೆ ತಯಾರಿ?

ಇದನ್ನೂ ಓದಿ : ಸಿದ್ದರಾಮಯ್ಯ ಅವರಿಂದಾದರೂ ಅಭಿವೃದ್ಧಿ ಕಾಣುವುದೇ ಐತಿಹಾಸಿಕ ಬಾದಾಮಿ ಕ್ಷೇತ್ರ?

ಕ್ಷೇತ್ರದ ಶಾಸಕರಾಗಿ ಮತದಾರರಿಗೆ ಕೃತಜ್ಞತೆ ಹೇಳಬೇಕಾಗಿರೋದು ಸಿದ್ದರಾಮಯ್ಯ ಕರ್ತವ್ಯ. ಆದರೆ, ಸಿದ್ದರಾಮಯ್ಯ ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ವರ್ಚಸ್ಸಿರುವ ನಾಯಕ. ಹೀಗಾಗಿ ಈ ಭೇಟಿಯಲ್ಲಿ ಹಲವು ಉದ್ದೇಶ ಇದೆ ಎಂಬ ಮಾತು ಕೇಳಿಬಂದಿದೆ. ಭೇಟಿಯ ನೆಪದಲ್ಲಿ ಆಂತರಿಕ ಭಿನ್ನಾಭಿಪ್ರಾಯ, ಮುನಿಸಿಗೆ ಮುಕ್ತಿ ನೀಡುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಅದೆಲ್ಲದಕ್ಕಿಂತ ಮುಖ್ಯವಾಗಿ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ದೆಹಲಿ ರಾಜಕಾರಣಕ್ಕೆ‌ ಕರೆಸಿಕೊಳ್ಳುವ ಇರಾದೆ ಇಟ್ಟುಕೊಂಡಿರುವುದರಿಂದ, ಈ ಬಾರಿ ಬಾಗಲಕೋಟೆ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತಾರೆ ಎನ್ನುವ ವದಂತಿ ಕೂಡ ಹರಡಿದೆ. ಸಿದ್ದರಾಮಯ್ಯ ಅವರ ಉತ್ತರ ಕರ್ನಾಟಕ ಸ್ಪರ್ಧೆ ಪಕ್ಷಕ್ಕೆ ಲಾಭ ತಂದಿಲ್ಲ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಿದವರಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವ ತಯಾರಿ ಈಗಿನಿಂದಲೇ ನಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಅವರ ಮುಂದಿನ ರಾಜಕೀಯ ಪ್ರಯೋಗಕ್ಕೆ ಬಾಗಲಕೋಟೆ ಜಿಲ್ಲೆ ವೇದಿಕೆಯಾಗಲಿದೆ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More