ಸಿಎಂ ಎಚ್‌ಡಿಕೆಗೆ 11, ಪರಮೇಶ್ವರ್‌ ಮತ್ತು ಕೃಷ್ಣಬೈರೇಗೌಡಗೆ ತಲಾ 3 ಖಾತೆ

ಸಾಕಷ್ಟು ಪ್ರಯಾಸದ ನಂತರ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಖಾತೆ ಹಂಚಿಕೆ ನಡೆದಿದೆ. ಸಿಎಂ 11 ಖಾತೆಯನ್ನು ಉಳಿಸಿಕೊಂಡಿದ್ದು, ಡಿಸಿಎಂ ಪರಮೇಶ್ವರ್‌ ಹಾಗೂ ಕೃಷ್ಣಬೈರೇಗೌಡಗೆ ತಲಾ 3, 9 ಸಚಿವರಿಗೆ ತಲಾ ಎರಡು ಹಾಗೂ ಉಳಿದವರಿಗೆ ತಲಾ ಒಂದು ಖಾತೆ ಹಂಚಿಕೆ ಮಾಡಲಾಗಿದೆ

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ೧೬ ದಿನಗಳ ನಂತರ ನೂತನ ಸಚಿವರಿಗೆ ಖಾತೆಗಳ ಹಂಚಿಕೆಯಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಣಕಾಸು ಮತ್ತು ಇಂಧನ ಸೇರಿದಂತೆ ೧೧ ಖಾತೆಗಳನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಜಿ ಪರಮೇಶ್ವರ ಅವರಿಗೆ ಗೃಹ ಸೇರಿದಂತೆ ಮೂರು ಖಾತೆಗಳು ಹಂಚಿಕೆಯಾಗಿವೆ. ಕಾಂಗ್ರೆಸ್‌ನ ಕೃಷ್ಣಬೈರೇಗೌಡ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಕಾನೂನು ಮತ್ತು ಸಂಸದೀಯ ವ್ಯವಹಾರಗಳನ್ನೊಳಗೊಂಡು ಮೂರು ಖಾತೆಗಳ ಜವಾಬ್ದಾರಿ ನೀಡಲಾಗಿದೆ. ಉಳಿದಂತೆ ಆರ್‌ ವಿ ದೇಶಪಾಂಡೆ, ಡಿ ಕೆ ಶಿವಕುಮಾರ್‌, ಕೆ ಜೆ ಜಾರ್ಜ್‌, ರಮೇಶ ಜಾರಕಿಹೊಳಿ, ಯು ಟಿ ಖಾದರ್‌, ಸಾ ರಾ ಮಹೇಶ್‌, ಜಮೀರ್‌ ಅಹ್ಮದ್‌ ಖಾನ್‌, ರಾಜಶೇಖರ ಪಾಟೀಲ್ ಮತ್ತು ಜಯಮಾಲಾ ಒಳಗೊಂಡಂತೆ ಒಂಬತ್ತು ಸಚಿವರಿಗೆ ತಲಾ ಎರಡು ಖಾತೆಗಳು ಹಾಗೂ ೧೫ ಮಂದಿಗೆ ತಲಾ ಒಂದು ಖಾತೆಯ ಜವಾಬ್ದಾರಿ ವಹಿಸಲಾಗಿದೆ.

ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ಅವರಿಗೆ ಸಮಾಜ ಕಲ್ಯಾಣ, ಕೃಷ್ಣಬೈರೇಗೌಡ ಅವರಿಗೆ ಗ್ರಾಮೀಣಾಭಿವೃದ್ಧಿಯಂಥ ಮಹತ್ವದ ಖಾತೆಗಳನ್ನು ನೀಡಲಾಗಿದೆ. ಬಿಎಸ್‌ಪಿ ನಾಯಕ ಎನ್‌ ಮಹೇಶ್‌ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಕೆಪಿಜೆಪಿ ಶಾಸಕ ಆರ್ ಶಂಕರ್‌ಗೆ ಅರಣ್ಯ, ಕ್ಯಾಬಿನೆಟ್‌ನ ಏಕೈಕ ಮಹಿಳಾ ಸಚಿವೆ ಜಯಮಾಲಾಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ-ಸಂಸ್ಕೃತಿ ಜವಾಬ್ದಾರಿ ನೀಡಲಾಗಿದೆ.

ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ ಪರಮೇಶ್ವರ ಅವರು ಪ್ರಮಾಣವಚನ ಸ್ವೀಕರಿಸಿದ ೧೫ ದಿನಗಳ ಬಳಿಕ ಕಾಂಗ್ರೆಸ್‌ನ ೧೫, ಜೆಡಿಎಸ್‌ ೧೦ ಶಾಸಕರು ಸೇರಿದಂತೆ ಒಟ್ಟು ೨೫ ಮಂದಿ ಬುಧವಾರ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದರು. ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಸಚಿವ ಆಕಾಂಕ್ಷಿಗಳು ಬಂಡಾಯ ಸಾರಿದ್ದರಿಂದ ಖಾತೆ ಹಂಚಿಕೆಯೂ ತಡವಾಗಿತ್ತು. ಅಂತಿಮವಾಗಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಸಚಿವರಿಗೆ ಹಂಚಿಕೆ ಮಾಡಲಾಗಿರುವ ಖಾತೆಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ರಚಿಸಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕ್ರಮವಾಗಿ ೨೨ ಮತ್ತು ೧೨ ಖಾತೆ ಹಂಚಿಕೊಂಡಿವೆ. ಇವುಗಳಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹುದ್ದೆಗಳೂ ಸೇರಿದ್ದವು. ಇಷ್ಟೆಲ್ಲದರ ನಡುವೆಯೂ ಜೆಡಿಎಸ್‌ ೧ ಮತ್ತು ಕಾಂಗ್ರೆಸ್‌ ತನ್ನ ಪಾಲಿನ ಆರು ಖಾತೆಗಳನ್ನು ಉಳಿಸಿಕೊಂಡಿವೆ. ನೂತನ ಸಚಿವರಿಗೆ ಹಂಚಿಕೆಯಾದ ಖಾತೆಗಳ ಪಟ್ಟಿ ಇಂತಿದೆ:

 1. ಮುಖ್ಯಮಂತ್ರಿ ಕುಮಾರಸ್ವಾಮಿ- ಇಂಧನ, ಹಣಕಾಸು, ವಾರ್ತಾ ಪ್ರಚಾರ, ಗುಪ್ತಚರ, ಯೋಜನೆ, ಸಾಂಖ್ಯಿಕ, ಸಾರ್ವಜನಿಕ ಉದ್ದಿಮೆ ಸೇರಿ 11 ಖಾತೆ
 2. ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್‌- ಗೃಹ, ಬಿಡಿಎ, ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ, ನಗರ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡೆ
 3. ಎಚ್‌ ಡಿ ರೇವಣ್ಣ- ಲೋಕೋಪಯೋಗಿ (ಬಂದರು ಒಳನಾಡು ಸಾರಿಗೆ ಹೊರತುಪಡಿಸಿ)
 4. ಆರ್‌ ವಿ ದೇಶಪಾಂಡೆ- ಕಂದಾಯ (ಮುಜುರಾಯಿ ಹೊರತುಪಡಿಸಿ), ಕೌಶಲ ಜೀವನೋಪಾಯ
 5. ಬಂಡೆಪ್ಪ ಕಾಶೆಂಪೂರ- ಸಹಕಾರ
 6. ಡಿ ಕೆ ಶಿವಕುಮಾರ್‌- ಬೃಹತ್‌, ಮಧ್ಯಮ ನೀರಾವರಿ ಮತ್ತು ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ
 7. ಜಿ ಟಿ ದೇವೇಗೌಡ- ಉನ್ನತ ಶಿಕ್ಷಣ
 8. ಕೆ ಜೆ ಜಾರ್ಜ್- ಬೃಹತ್‌, ಮಧ್ಯಮ ಕೈಗಾರಿಕೆ
 9. ಡಿ ಸಿ ತಮ್ಮಣ್ಣ- ಸಾರಿಗೆ
 10. ಕೃಷ್ಣ ಬೈರೇಗೌಡ- ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ
 11. ಎಂ ಸಿ ಮನಗೂಳಿ- ತೋಟಗಾರಿಕೆ (ರೇ‍ಷ್ಮೆ ಹೊರತುಪಡಿಸಿ)
 12. ಎನ್ ಎಚ್‌ ಶಿವಶಂಕರರೆಡ್ಡಿ- ಕೃಷಿ
 13. ಎಸ್‌ ಆರ್‌ ಶ್ರೀನಿವಾಸ್‌- ಸಣ್ಣ ಕೈಗಾರಿಕೆ
 14. ರಮೇಶ್‌ ಜಾರಕಿಹೊಳಿ- ಪೌರಾಡಳಿತ, ಬಂದರು, ಒಳನಾಡು ಸಾರಿಗೆ
 15. ವೆಂಕಟರಾವ್‌ ನಾಡಗೌಡ- ಪಶುಸಂಗೋಪನೆ, ಮೀನುಗಾರಿಕೆ
 16. ಪ್ರಿಯಾಂಕ್‌ ಖರ್ಗೆ- ಸಮಾಜ ಕಲ್ಯಾಣ
 17. ಸಿ ಎಸ್‌ ಪುಟ್ಟರಾಜು- ಸಣ್ಣ ನೀರಾವರಿ
 18. ಯು ಟಿ ಖಾದರ್‌- ನಗರಾಭಿವೃದ್ಧಿ (ಬಿಬಿಎಂಪಿ, ಬಿಡಿಎ ಹೊರತುಪಡಿಸಿ), ವಸತಿ
 19. ಸಾ ರಾ ಮಹೇಶ್‌- ಪ್ರವಾಸೋದ್ಯಮ, ರೇಷ್ಮೆ
 20. ಜಮೀರ್‌ ಅಹ್ಮದ್‌ ಖಾನ್‌- ಆಹಾರ, ನಾಗರಿಕ ಸರಬರಾಜು
 21. ಎನ್ ಮಹೇಶ್‌- ಪ್ರಾಥಮಿಕ, ಪ್ರೌಢಶಿಕ್ಷಣ
 22. ಶಿವಾನಂದ ಪಾಟೀಲ್- ಆರೋಗ್ಯ ಕುಟುಂಬ ಕಲ್ಯಾಣ
 23. ವೆಂಕಟರಮಣಪ್ಪ- ಕಾರ್ಮಿಕ
 24. ಜಯಮಾಲಾ- ಮಹಿಳಾ ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ
 25. ಆರ್‌ ಶಂಕರ್‌- ಅರಣ್ಯ ಪರಿಸರ, ಜೀವವೈವಿಧ್ಯ
 26. ಸಿ ಪುಟ್ಟರಂಗಶೆಟ್ಟಿ- ಹಿಂದುಳಿದ ವರ್ಗಗಳ ಕಲ್ಯಾಣ
 27. ರಾಜಶೇಖರ ಪಾಟೀಲ್‌- ಗಣಿ ಮತ್ತು ಭೂವಿಜ್ಞಾನ
ಇದನ್ನೂ ಓದಿ : ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಸಚಿವ ಸಂಪುಟ ಹೀಗಿರಬಹುದೇ?
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More