ಧಾರ್ಮಿಕ ಆಚರಣೆ ಕೈಬಿಟ್ಟ ರಾಷ್ಟ್ರಪತಿ ನಿರ್ಧಾರ ವಿಧಾನಸೌಧಕ್ಕೂ ಮೇಲ್ಪಂಕ್ತಿ ಆಗಲಿ

ರಾಜ್ಯಗಳ ಆಡಳಿತ ಸೌಧ, ಸರ್ಕಾರಿ ಕಚೇರಿಗಳು ಧಾರ್ಮಿಕ ಕೇಂದ್ರಗಳಂತೆ ಕಾಣುತ್ತಿರುವ ಹೊತ್ತಿನಲ್ಲೇ, ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಸೇರಿದಂತೆ ಯಾವುದೇ ಧಾರ್ಮಿಕ ಆಚರಣೆ ನಡೆಸದಿರಲು ರಾಷ್ಟ್ರಪತಿ ಕೋವಿಂದ್ ಅವರು ತೆಗೆದುಕೊಂಡ ನಿರ್ಧಾರ ನಿಜಕ್ಕೂ ಮೇಲ್ಪಂಕ್ತಿ ಹಾಕಿಕೊಟ್ಟದಂತಾಗಿದೆ

ನಮ್ಮ ವಿಧಾನಸೌಧವೂ ಸೇರಿದಂತೆ ಬಹುತೇಕ ರಾಜ್ಯಗಳ ಆಡಳಿತ ಸೌಧಗಳು ಹಾಗೂ ಸರ್ಕಾರಿ ಕಚೇರಿಗಳು ಧಾರ್ಮಿಕ ಕೇಂದ್ರಗಳಂತೆ ಕಾಣುತ್ತಿರುವ ಹೊತ್ತಿದು. ಈ ನಡುವೆ, ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಸೇರಿದಂತೆ ಯಾವುದೇ ಧಾರ್ಮಿಕ ಆಚರಣೆಗಳನ್ನು ನಡೆಸದಿರಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಎಲ್ಲ ರಾಜ್ಯಗಳ ಸರ್ಕಾರಿ ಕಚೇರಿಗಳಿಗೆ ಮೇಲ್ಪಂಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ.

ರಾಷ್ಟ್ರಪತಿ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಸೇರಿದಂತೆ ಯಾವುದೇ ಧಾರ್ಮಿಕ ಆಚರಣೆ ಆಚರಿಸಲು ನಿರಾಕರಿಸಿದ್ದಾರೆ. ಈ ಮೂಲಕ, ದಶಕಗಳ ಬಳಿಕ ಐತಿಹಾಸಿಕ ನಿರ್ಧಾರವೊಂದನ್ನು ಅವರು ಕೈಗೊಂಡಿದ್ದಾರೆ. ರಾಷ್ಟ್ರಪತಿ ನಿರ್ಧಾರ ಕುರಿತು ಅವರ ಮಾಧ್ಯಮ ಕಾರ್ಯದರ್ಶಿ ಅಶೋಕ್ ಮಲ್ಲಿಕ್ ಸ್ಪಷ್ಟನೆ ನೀಡಿದ್ದು, “ರಾಷ್ಟ್ರಪತಿ ಭವನ ಸಾರ್ವಜನಿಕ ಕಟ್ಟಡವಾಗಿದೆ. ಇಂಥ ಜಾಗದಲ್ಲಿ ಜನರ ತೆರಿಗೆ ಹಣದ ಮೂಲಕ ಧಾರ್ಮಿಕ ಆಚರಣೆ ಅಥವಾ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳದಿರಲು ರಾಷ್ಟ್ರಪತಿಯವರು ತೀರ್ಮಾನಿಸಿದ್ದಾರೆ. ಅವರ ನಿರ್ಧಾರ ದೇಶದ ಜಾತ್ಯತೀತ ತತ್ವಕ್ಕೆ ಹಿಡಿದ ಕೈಗನ್ನಡಿ,” ಎಂದಿದ್ದಾರೆ.

ಮುಂದುವರಿದು, “ರಾಷ್ಟ್ರಪತಿ ಕೋವಿಂದ್ ಅವರು ಕಳೆದ ಜುಲೈನಲ್ಲಿ ಅಧಿಕಾರ ಸ್ವೀಕರಿಸಿದ ಮೇಲೆ ಯಾವುದೇ ತರಹದ ಧಾರ್ಮಿಕ ಆಚರಣೆಗಳನ್ನು ರಾಷ್ಟ್ರಪತಿ ಭವನದಲ್ಲಿ ಆಚರಿಸಲು ಪ್ರೋತ್ಸಾಹಿಸಿಲ್ಲ. ಅಂದಿನಿಂದ ದೀಪಾವಳಿ, ಕ್ರಿಸ್ಮಸ್, ಹೋಳಿ ಸೇರಿದಂತೆ ಯಾವುದೇ ಧಾರ್ಮಿಕ ಹಬ್ಬಗಳನ್ನು ರಾಷ್ಟ್ರಪತಿ ಭವನದಲ್ಲಿ ಆಚರಿಸಲಾಗಿಲ್ಲ. ಈಗ ಅದೇ ಸಾಲಿಗೆ ಇಫ್ತಾರ್ ಕೂಟವನ್ನೂ ರಾಷ್ಟ್ರಪತಿ ಅವರು ಪರಿಗಣಿಸಿದ್ದಾರೆ. ಆದರೆ, ಎಲ್ಲ ಧಾರ್ಮಿಕ ಹಬ್ಬಗಳ ವೇಳೆ ರಾಷ್ಟ್ರಪತಿ ಅವರು ದೇಶದ ಜನತೆಗೆ ಶುಭಾಶಯ ಕೋರುವರು,” ಎಂದು ವಿವರಿಸಿದ್ದಾರೆ.

ರಂಜಾನ್ ಹಬ್ಬದ ಮುನ್ನಾದಿನ ಮುಸ್ಲಿಮರಿಗಾಗಿ ಹಲವು ಧಾರ್ಮಿಕ ಮುಖಂಡರು ಹಾಗೂ ಸಾಮಾಜಿಕ ವ್ಯಕ್ತಿಗಳನ್ನು ಆಹ್ವಾನಿಸಿ ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಏರ್ಪಡಿಸುತ್ತ ಬರಲಾಗಿದೆ. ಆದರೆ, ಕಲಾಂ ಅವರು ರಾಷ್ಟ್ರಪತಿ ಆಗಿದ್ದ ಅವಧಿಯಲ್ಲಿ (೨೦೦೨-೨೦೦೭) ಇಫ್ತಾರ್ ಕೂಟ ನಿರಾಕರಿಸಿ, ಅದಕ್ಕೆ ವೆಚ್ಚವಾಗುತ್ತಿದ್ದ ಹಣವನ್ನು ಅನಾಥಾಶ್ರಮಗಳಿಗೆ ನೀಡಿದ್ದರು. ಹಾಗೆ ನೋಡಿದರೆ, ರಾಷ್ಟ್ರಪತಿ ಭವನವನ್ನು ನಿಜವಾದ ಅರ್ಥದಲ್ಲಿ ಜಾತ್ಯತೀತ ಸ್ಥಳವನ್ನಾಗಿ ನೋಡಿದವರಲ್ಲಿ ಕಲಾಂ ಕೂಡ ಒಬ್ಬರು. ಈಗ ಇದೇ ಮಾರ್ಗವನ್ನು ಕೋವಿಂದ್ ಅವರು ಅನುಸರಿಸಿದ್ದಾರೆ ಎನ್ನಲಾಗಿದೆ.

ರಾಷ್ಟ್ರಪತಿ ಭವನದಲ್ಲಿ ಧಾರ್ಮಿಕ ಆಚರಣೆಗಳನ್ನು ಆಚರಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ನಿಖರ ಶಿಷ್ಟಾಚಾರಗಳಿಲ್ಲ. ಅದು ಮೊದಲಿಂದಲೂ ರಾಷ್ಟ್ರಪತಿ ಅವರ ವಿವೇಚನೆ ಮೇಲೆ ನಿರ್ಧಾರವಾಗುತ್ತ ಬಂದಿದೆ. ಆದರೆ, ನಿಜಾರ್ಥದಲ್ಲಿ ಸರ್ಕಾರಿ ಜಾಗಗಳು ಧಾರ್ಮಿಕ ಆಚರಣೆ ಹಾಗೂ ಜಾತ್ಯತೀತ ಭಾವನೆಗಳಿಂದ ಮುಕ್ತವಾಗಿರಬೇಕು. ಇಂಥ ದೃಢ ನಿಲುವನ್ನು ಅಬ್ದುಲ್ ಕಲಾಂ ನಂತರ ರಾಮನಾಥ ಕೋವಿಂದ್ ಅವರು ಪ್ರದರ್ಶಿಸಿದ್ದಾರೆ.

ರಾಷ್ಟ್ರಪತಿ ಅವರ ಈ ಆದರ್ಶ ರಾಜ್ಯಪಾಲರ ಭವನ, ವಿಧಾನಸೌಧ ಹಾಗೂ ಸರ್ಕಾರಿ ಕಚೇರಿಗಳಿಗೂ ವಿಸ್ತರಿಸಬೇಕಿದೆ. ಈಗಾಗಲೇ ನಮ್ಮ ವಿಧಾನಸೌಧ ಧಾರ್ಮಿಕ ಅಚರಣೆಯ ಸ್ಥಳವಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ. ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ವಿಧಾನಸೌಧದೊಳಗಿನ ತಮ್ಮ ಕಚೇರಿಯಲ್ಲಿ ಪತ್ನಿ ಕನ್ನಿಕಾ ಹಾಗೂ ಸಂಬಂಧಿಕರ ನೇತೃತ್ವದಲ್ಲಿ ನಡೆಸಿದ ಹೋಮ, ಹವನ ಇದಕ್ಕೆ ತಾಜಾ ಉದಾಹರಣೆ.

ಹೀಗಾಗಿ, ರಾಷ್ಟ್ರಪತಿ ಅವರು ಸರ್ಕಾರಿ ಜಾಗಗಳಲ್ಲಿ ಜಾತ್ಯತೀತ ತತ್ವವನ್ನು ಬಲಪಡಿಸುವ ಉದ್ದೇಶದೊಂದಿಗೆ ಒಂದು ಆದೇಶವನ್ನು ಜಾರಿ ಮಾಡುವ ಮೂಲಕ, ಸಾರ್ವಜನಿಕ ಜಾಗಗಳಲ್ಲಿ ವೈಯಕ್ತಿಕ ನಂಬಿಕೆಯ ಪೂಜೆ, ಹೋಮ ಮಾಡುವ ರಾಜಕಾರಣಿಗಳಿಗೆ ಸಾಂವಿಧಾನಿಕ ಗೆರೆ ಹಾಕಿ, ಇಂಥ ಧಾರ್ಮಿಕ ಆಚರಣೆ ತಡೆಗೆ ನಾಂದಿ ಹಾಡಬೇಕು ಎಂಬುದು ಪ್ರಜ್ಞಾವಂತರ ಆಶಯ.

ಇದೇ ತರಹದ ಕೂಗುಗಳು ಕೂಡ ಅಮೆರಿಕದಲ್ಲೂ ಕೇಳಿಬರುತ್ತಿವೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಕಳೆದ ಬಾರಿ ಇಫ್ತಾರ್ ಕೂಟ ಏರ್ಪಡಿಸಲು ನಿರಾಕರಿಸಿದ್ದರು. ಆದರೆ, ಈ ಬಾರಿ ತಮ್ಮ ನಿಲುವು ಬದಲಿಸಿಕೊಂಡಿರುವ ಅವರು, ಹಿಂದಿನ ಅಧ್ಯಕ್ಷರು ಹೇರಿದ್ದ ದಶಕದ ನಿರ್ಬಂಧವನ್ನು ಮುರಿದು, ಗುರುವಾರ ಶ್ವೇತಭವನದಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದಾರೆ.

ಅಲ್ಲಿಯ ಜಾತ್ಯತೀತವಾದಿಗಳು ಟ್ರಂಪ್ ನಡೆಯನ್ನು ಟೀಕಿಸಿದ್ದು, “ಸರ್ಕಾರಿ ಕಚೇರಿಗಳಲ್ಲಿ ಒಂದು ಕೋಮಿನ ಆಚರಣೆಯನ್ನು ಆಚರಿಸುವುದು ಸೂಕ್ತವಲ್ಲ. ಅಷ್ಟಕ್ಕೂ ವೈಯಕ್ತಿಕವಾಗಿ ಆಚರಿಸಬೇಕು ಇಚ್ಛೆ ಇದ್ದರೆ ಖಾಸಗಿಯಾಗಿ ಆಚರಿಸಿಕೊಳ್ಳಲಿ,” ಎಂದಿದ್ದಾರೆ.

ರಾಜಕೀಯ ಅಂಗಳಕ್ಕೆ ಇಫ್ತಾರ್

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಮಾವತಿ ನಂದನ್ ಬಹುಗುಣ ಅವರು 1973ರಲ್ಲಿ ಇಫ್ತಾರ್ ಕೂಟವನ್ನು ರಾಜಕೀಯ ಮಡಿಲಿಗೆ ತಂದರು ಎನ್ನಲಾಗಿದೆ. ಅದಕ್ಕೂ ಮೊದಲು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಖಾಸಗಿಯಾಗಿ ಇಫ್ತಾರ್ ಕೂಟ ಏರ್ಪಡಿಸುತ್ತಿದ್ದರು. ನಂತರ 1980 ರಲ್ಲಿ ಅಧಿಕಾರಕ್ಕೆ ಮರಳಿದ ಅವರ ಮಗಳು ಇಂದಿರಾ ಗಾಂಧಿ ಅವರು ಮುಸ್ಲಿಂ ಸಮುದಾಯ ಒಳಗೊಳ್ಳಲು ಇಫ್ತಾರ್ ಕೂಟವನ್ನು ಪಕ್ಷದ ಕಚೇರಿಯಲ್ಲಿ ಮುಂದುವರೆಸಿದರು. ತರುವಾಯ ಅಟಲ್ ಬಿಹಾರಿ ವಾಜಪೇಯಿ ಹಾಗೂ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ ಅಧಿಕಾರವಧಿಯಲ್ಲಿ ಈ ಸಂಪ್ರದಾಯ ಮುಂದುವರೆದಿದೆ.

ಇದನ್ನೂ ಓದಿ : ವೈಚಾರಿಕತೆಯಿಂದ ವಿಮುಖರಾಗಿಬಿಟ್ಟರೇ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್?

ರಾಷ್ಟ್ರಪತಿ ಭವನಕ್ಕೆ ಇಫ್ತಾರ್

ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಯಾವಾಗ ಮತ್ತು ಯಾರಿಂದ ಆರಂಭವಾಯಿತು ಎಂಬುದಕ್ಕೆ ನಿಖರ ಮಾಹಿತಿ ಇಲ್ಲ. 1960 ದಶಕದಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿ ಆಗಿದ್ದಾಗ ಇದು ಪ್ರಾರಂಭವಾಗಿರಬಹುದೆಂಬ ಊಹೆ ಇದೆ. ಆದರೆ ಇಫ್ತಾರ್ ಕೂಟ ಆಚರಣೆಯನ್ನು ರಾಷ್ಟ್ರಪತಿ ಭವನದಲ್ಲಿ ಅಬ್ದುಲ್ ಕಲಾಂ ಸ್ಥಗಿತಗೊಳಿಸಿದವರು. ನಂತರ ಯುಪಿಎ ಅವಧಿಯಲ್ಲಿ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಅಧಿಕಾರಕ್ಕೆ ಬಂದ ಪ್ರತಿಭಾ ಪಾಟೀಲ್ ಅವರು ಇಫ್ತಾರ್ ಕೂಟವನ್ನು ಪುನರಾಂಭಿಸಿದರು. ಇದನ್ನು ಪ್ರಣಬ್ ಮುಖರ್ಜಿ ಕೂಡ ತಮ್ಮ ಅವಧಿ ಉದ್ದಕ್ಕೂ ಮುಂದುವರಿಸಿದರು.

ಕ್ರಿಸ್ಮಸ್ ಆಚರಣೆಗೂ ತಡೆ

ದೀಪಾವಳಿ, ರಕ್ಷಾ ಬಂದನ್, ಹೋಳಿ ಹಾಗೂ ಕ್ರಿಸ್ಮಸ್ ಆಚರಣೆಗಳನ್ನು ಹಿಂದೆ ರಾಷ್ಟ್ರಪತಿ ಭವನದಲ್ಲಿ ಆಚರಿಸಲಾಗುತ್ತಿತ್ತು. ಆದರೆ, ರಾಮನಾಥ ಕೋವಿಂದ್ ಅವರು ತಾವು ಅಧಿಕಾರ ವಹಿಸಿಕೊಂಡಾನಿಂದ ಈವರೆಗೂ ಯಾವುದೇ ಧಾರ್ಮಿಕ ಆಚರಣೆಗಳನ್ನು ಪ್ರೋತ್ಸಾಹಿಸಿಲ್ಲ. ಹಾಗೆಯೇ ಕ್ರಿಸ್ಮಸ್ ಆಚರಣೆ ಕೂಡ ಕೋವಿಂದ್ ಅವರು ಆಚರಿಸಲು ಹಿಂದೆ ನಿರಾಕರಿಸಿದ್ದಾರೆ. ಹಾಗೆಯೇ, ಪ್ರತಿಭಾ ಪಾಟೀಲ್ ಕೂಡ ತಮ್ಮ ಅವಧಿಯಲ್ಲಿ ಕ್ರಿಸ್ಮಸ್ ಆಚರಣೆಯನ್ನು ರಾಷ್ಟ್ರಪತಿ ಭವನದಲ್ಲಿ ಆಚರಿಸಲು ಅನುಮತಿ ನೀಡದೆ, ಆ ಹಣವನ್ನು 2008ರ ನವೆಂಬರ್ 26ರ ಮುಂಬೈ ದಾಳಿಯ ಸಂತ್ರಸ್ತರಿಗೆ ನೀಡಿದ್ದನ್ನು ಇಲ್ಲಿ ನೆನೆಯಬಹುದು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More