‘ಭಾಗ್ಯ’ ಯೋಜನೆಗಳು ಮುಂದುವರಿಯುವ ಭರವಸೆ ಕೊಟ್ಟ ಸಿದ್ದರಾಮಯ್ಯ

ಬಾದಾಮಿಯಲ್ಲಿ ಪ್ರವಾಸ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮುನಿಸಿಕೊಂಡಿದ್ದ ಎಸ್‌ ಆರ್ ಪಾಟೀಲ್ ಇದೀಗ ಜೊತೆ ಸೇರಿಕೊಂಡಿದ್ದಾರೆ. ಈ ಸಂದರ್ಭ ಕಾಂಗ್ರೆಸ್‌ನ ಜನಪರ ಯೋಜನೆಗಳನ್ನು ನೂತನ ಸರ್ಕಾರ ಮುಂದುವರಿಸುವ ಭರವಸೆಯೂ ಸಿಕ್ಕಿದೆ

ತಮ್ಮ ಐದು ವರ್ಷದ ಆಡಳಿತಾವಧಿಯಲ್ಲಿ ಜಾರಿಗೆ ತಂದ ಜನಪರ ಯೋಜನೆಗಳು ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿಯೂ ಮುಂದುವರಿಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಈ ಬಗ್ಗೆ ಇದ್ದ ಜನರ ಆತಂಕ ನಿವಾರಿಸಿದ್ದಾರೆ. ಬಾದಾಮಿ ಕ್ಷೇತ್ರದ ಹೊಸೂರಿನಲ್ಲಿ ಅವರು ಹೇಳಿರುವ ಈ ಮಾತುಗಳು ಜನರಿಗಿದ್ದ ಆತಂಕ ನಿವಾರಣೆಗೆ ಕಾರಣವಾಗಿದೆ.

“ನಮ್ಮ ಹಿಂದಿನ ಸರಕಾರದಲ್ಲಿ ತಂದಿರುವ ಕಾರ್ಯಕ್ರಮಗಳನ್ನು ಈಗಿರುವ ಸಮ್ಮಿಶ್ರ ಸರ್ಕಾರದಲ್ಲಿಯೂ ಮುಂದುವರಿಸುತ್ತೇವೆ. ಅನ್ನಭಾಗ್ಯ, ಕ್ಷೀರಭಾಗ್ಯ, ಶೂಭಾಗ್ಯ, ಕೃಷಿಭಾಗ್ಯದಂತ ಜನಪ್ರಿಯ ಯೋಜನೆಗಳು ಸೇರಿದಂತೆ ನನ್ನ ಆಡಳಿತದ ಅವಧಿಯಲ್ಲಿ ತಂದಿರುವ ಸಾಕಷ್ಟು ಯೋಜನೆಗಳನ್ನು ಸ್ಥಗಿತಗೊಳಿಸುವುದಕ್ಕೆ ಯಾವ ಕಾರಣಕ್ಕೂ ಬಿಡೋದಿಲ್ಲ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ನಾನೇ ಇರುವುದರಿಂದ ಆ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ,” ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಬಾದಾಮಿ ಪ್ರವಾಸದ ಮೂರನೇ ದಿನ ಇಂಥದ್ದೊಂದು ಭರವಸೆ ಹೊರಬಿದ್ದಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ನೂತನ ಸರ್ಕಾರ ಹಿಂದಿನ ಸರ್ಕಾರದ ಯೋಜನೆಗಳನ್ನು ಮುಂದುವರಿಸುತ್ತದೋ ಅಥವಾ ನಿಲ್ಲಿಸುತ್ತದೋ ಎನ್ನುವ ಆತಂಕ ಜನರಲ್ಲಿ ಮನೆ ಮಾಡಿತ್ತು. ಸಿದ್ದರಾಮಯ್ಯನವರು ಅಂತಹ ಆತಂಕವನ್ನು ನಿವಾರಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೂರನೇ ದಿನದ ಬಾದಾಮಿ ಕ್ಷೇತ್ರ ಪ್ರವಾಸ ಜನರಲ್ಲಿ ಸಂಚಲನ ಮೂಡಿಸಿದೆ. ಕ್ಷೇತ್ರದಲ್ಲಿ ಹೋದ ಕಡೆಯಲ್ಲೆಲ್ಲ ಸಿದ್ದರಾಮಯ್ಯ ಅವರಿಗೆ ಭವ್ಯ ಸ್ವಾಗತ ಸಿಕ್ಕಿತು. ಜೈಕಾರ, ಡೊಳ್ಳು ಕುಣಿತ, ವಾದ್ಯಗಳ ಮೂಲಕ ಅದ್ಧೂರಿ ಸ್ವಾಗತ ಸಿಕ್ಕಿದೆ. ನೆಚ್ಚಿನ ನಾಯಕನ ಆಗಮನಕ್ಕೆ ಇಡೀ ಊರು ಸಿಂಗಾರಗೊಂಡ ದೃಶ್ಯಗಳು ಸಾಮಾನ್ಯವಾಗಿದ್ದವು. ಹೋದಲ್ಲೆಲ್ಲ ಅವರನ್ನು ನೋಡಲು ಹಳ್ಳಿಯ ಗಲ್ಲಿಗಲ್ಲಿಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದರು.

ಇದನ್ನೂ ಓದಿ : ಸಿದ್ದರಾಮಯ್ಯ ಅವರಿಂದಾದರೂ ಅಭಿವೃದ್ಧಿ ಕಾಣುವುದೇ ಐತಿಹಾಸಿಕ ಬಾದಾಮಿ ಕ್ಷೇತ್ರ?

ಸಿದ್ದರಾಮಯ್ಯ ಅವರ ಕ್ಷೇತ್ರ ಪ್ರವಾಸಕ್ಕೆ ಜಿಲ್ಲಾ ಮುಖಂಡರು, ನೂರಾರು ಕಾರ್ಯಕರ್ತರು ಸಾಥ್ ನೀಡಿದ್ದರು. ಮಾಜಿ ಸಚಿವರಾದ ಆರ್ ಬಿ ತಿಮ್ಮಾಪೂರ್, ಎಸ್ ಆರ್ ಪಾಟೀಲ್, ಉಮಾಶ್ರೀ, ಬಿ ಬಿ ಚಿಮ್ಮನಕಟ್ಟಿ ಸೇರಿದಂತೆ ಹಲವರು ಜೊತೆಗಿದ್ದರು.

ಮೂರನೇ ದಿನದ ಪ್ರವಾಸದಲ್ಲಿ ಹತ್ತಕ್ಕೂ ಹೆಚ್ಚು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಸಿದ್ದರಾಮಯ್ಯ ಅವರು ಜನರಿಗೆ ಧನ್ಯವಾದ ಅರ್ಪಿಸಿದರು. ಬೆಳಗ್ಗೆ ನಸಿಬಿ ಗ್ರಾಮದಿಂದ ಆರಂಭಿಸಿ ಗುಡ್ಡನಾಯಕನಹಳ್ಳಿ, ಹೊಸೂರು, ಜಾಲಿಹಾಳ, ಬೇಲೂರು, ಚೊಳಚಗುಡ್ಡ, ಹೆಬ್ಬಳ್ಳಿ, ಸುಳ್ಳ, ಕಿತ್ತಲಿ ಗ್ರಾಮ ಸೇರಿದಂತೆ ಹಲವು ಹಳ್ಳಿಗಳಿಗೆ ತೆರಳಿದರು. ಸಿದ್ದರಾಮಯ್ಯ ಅವರ ಬಾದಾಮಿ ಪ್ರವಾಸದ ಮೂರನೇ ದಿನ ಎಸ್ ಆರ್ ಪಾಟೀಲ್ ಹಾಜರಿದ್ದುದು ವಿಶೇಷವಾಗಿತ್ತು. ಮೊದಲ ದಿನ ಗೈರಾಗಿದ್ದ ಪಾಟೀಲ್ ನಡೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ, ಮೂರನೇ ದಿನದ ಪ್ರವಾಸಕ್ಕೆ ಎಸ್ ಆರ್ ಪಾಟೀಲ್ ಜೊತೆಗೂಡಿದ್ದು, ಸಂಧಾನವಾಗಿರುವ ಭರವಸೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಅವರು ಮಾತುಕತೆಯ ಮೂಲಕ ಎಸ್ ಆರ್ ಪಾಟೀಲ್ ಅವರ ಮುನಿಸನ್ನು ದೂರ ಮಾಡಿದ್ದಾರೆ ಎನ್ನಲಾಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More