ಪ್ರಧಾನಿ ಮೋದಿ ಹತ್ಯೆ ಸಂಚು ಪ್ರಕರಣ; ಶಂಕೆ ಹುಟ್ಟಿಸಿದ ಪುಣೆ ಪೊಲೀಸರ ತನಿಖೆ

ದೇಶದ ಪ್ರಧಾನಿಯಂತಹ ಅತ್ಯುನ್ನತ ನಾಯಕರೊಬ್ಬರ ಹತ್ಯೆಯ ಸಂಚಿನ ವಿಷಯವನ್ನು ಎರಡು ತಿಂಗಳ ಕಾಲ ಮುಚ್ಚಿಟ್ಟಿದ್ದ ಪುಣೆ ಪೊಲೀಸರು, ಈಗಲೂ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಆ ವಿಷಯ ಬಿಟ್ಟು ಆರೋಪಿಗಳ ವಿರುದ್ಧದ ಇತರ ಸಂಗತಿಗಳನ್ನು ಪ್ರಸ್ತಾಪಿಸಿದ್ದು ಏಕೆ?

ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡುವ ಬಹುದೊಡ್ಡ ಸಂಚೊಂದನ್ನು ಪುಣೆಯ ಪೊಲೀಸರು ಬಯಲು ಮಾಡಿರುವುದು ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗುತ್ತಿದೆ. “ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಮಾದರಿಯಲ್ಲೇ ಹತ್ಯೆ ನಡೆಸಲು ಸಂಚು ನಡೆಸಿದ ಬಗ್ಗೆ ನಕ್ಸಲ್ ನಾಯಕರ ನಡುವಿನ ಪತ್ರವ್ಯವಹಾರದಲ್ಲಿ ಬಹಿರಂಗವಾಗಿದೆ. ಕಳೆದ ವರ್ಷದ ಭೀಮಾ ಕೋರೆಗಾಂವ್ ಘಟನೆಯ ಸಂಬಂಧ ಬಂಧಿತ ವ್ಯಕ್ತಿಗಳ ವಿಚಾರಣೆ ವೇಳೆ, ಅವರ ಲ್ಯಾಪ್‌ಟಾಪ್‌ನಲ್ಲಿ ಈ ಆಘಾತಕಾರಿ ಸಂಚಿನ ವಿವರ ಒಳಗೊಂಡ ಪತ್ರ ದೊರಕಿದೆ,” ಎಂದು ಪುಣೆ ಪೊಲೀಸರು ಹೇಳಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ತಾವು ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳ ಮನೆಗಳ ಮೇಲೆ ನಡೆಸಿದ ದಾಳಿಯ ವೇಳೆ ಈ ಪತ್ರ ಸಿಕ್ಕಿರುವುದಾಗಿ ಪುಣೆ ಪೊಲೀಸರು ಹೇಳಿದ್ದಾರೆ.

ರಾಷ್ಟ್ರೀಯ ಮತ್ತು ಸ್ಥಳೀಯ ಸುದ್ದಿಮಾಧ್ಯಮಗಳು, ಅದರಲ್ಲೂ ವಿಶೇಷವಾಗಿ ಟಿವಿ ಮಾಧ್ಯಮಗಳು ಈ ಪತ್ರದ ಹಿನ್ನೆಲೆಯಲ್ಲಿ ಅತ್ಯುತ್ಸಾಹದಿಂದ ದಿನಗಟ್ಟಲೆ ಭಾರಿ ಸದ್ದು ಮಾಡಿವೆ. ಪುಣೆ ಪೊಲೀಸರು ಪತ್ರದ ಪ್ರತಿಯನ್ನು ನ್ಯಾಯಾಯಲಕ್ಕೆ ಸಲ್ಲಿಸುವ ಮುನ್ನವೇ ಇಂಗ್ಲಿಷ್‌ ವಾಹಿನಿಗಳು ಅದರ ಕೆಲವು ಪ್ರತಿಯನ್ನು ಪ್ರದರ್ಶಿಸಿ ಸ್ವಯಂ ತನಿಖೆಗೂ ಮುಂದಾಗಿವೆ.

ಕಳೆದ ವರ್ಷ ಭಾರಿ ಹಿಂಸಾಚಾರಕ್ಕೆ ಕಾರಣವಾಗಿದ್ದ ಪುಣೆಯ ಭೀಮಾ-ಕೋರೆಗಾಂವ್ ಸಮಾವೇಶ ಮತ್ತು ಆ ಮುನ್ನ ಡಿಸೆಂಬರಿನಲ್ಲಿ ನಡೆದಿದ್ದ ಎಲ್ಗಾರ್ ಪರಿಷತ್ ಸಭೆಯ ಸಂಬಂಧ ಪುಣೆ ಪೊಲೀಸರು ದಲಿತ ಹೋರಾಟಗಾರ ಸುಧೀರ್ ಧವಳೆ, ವಕೀಲ ಸುರೇಂದ್ರ ಗಾದ್ಲಿಂಗ್, ಹೋರಾಟಗಾರ ಮಹೇಶ್ ರೌಟ, ಶೋಮಾ ಸೇನ್ ಮತ್ತು ರೋನಾ ವಿಲ್ಸನ್‌ ಎಂಬುದನ್ನು ಮುಂಬೈ, ನಾಗ್ಪುರ ಮತ್ತು ದೆಹಲಿ ಸೇರಿದಂತೆ ವಿವಿಧ ಕಡೆಯಿಂದ ಬಂಧಿಸಿದ್ದರು. ಬಂಧಿತರನ್ನು ಜೂ.೮ರಂದು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜೂನ್‌ ೧೪ರವರೆಗೆ ಅವರನ್ನು ಪೊಲೀಸ್ ವಶಕ್ಕೆ ವಹಿಸಲಾಗಿದೆ.

“ಬಂಧಿತರ ಪೈಕಿ ರೋನಾ ವಿಲ್ಸನ್‌ಗೆ ಸೇರಿದ ದೆಹಲಿಯ ಮನೆಯೊಂದರಲ್ಲಿ ತಪಾಸಣೆ ನಡೆಸಿದಾಗ, ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಮಾದರಿಯಲ್ಲಿ ಹತ್ಯೆಯೊಂದನ್ನು ನಡೆಸಲು ಸಂಚು ಮಾಡಿದ್ದು, ಅದಕ್ಕಾಗಿ ಎಂ-೪ ರೈಫಲ್ ಮತ್ತು ನಾಲ್ಕು ಲಕ್ಷ ಸುತ್ತು ಗುಂಡುಗಳು ಹಾಗೂ ಅದಕ್ಕಾಗಿ ಒಟ್ಟು ಎಂಟು ಕೋಟಿ ಹಣ ಬೇಕು ಎಂದು ಪ್ರಸ್ತಾಪಿಸಲಾಗಿರುವ ಪತ್ರ ಸಿಕ್ಕಿದೆ,” ಎಂದು ಪ್ರಾಸಿಕ್ಯೂಷನ್ ಪರ ವಕೀಲರಾದ ಉಜ್ವಲಾ ಪವಾರ್ ನೀಡಿರುವ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.

ಅಲ್ಲದೆ, ಇದೊಂದು ನಗರ ನಕ್ಸಲೀಯ ಸಂಘಟನೆಯ ಸಂಚು ಎಂದೂ ಪೊಲೀಸರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಒಕ್ಕರಲಿನಲ್ಲಿ ಹೇಳಿದ್ದಾರೆ. ಎರಡು ದಿನಗಳ ಹಿಂದೆಯೇ ಇಂಗ್ಲಿಷ್ ಸುದ್ದಿವಾಹಿನಿಯೊಂದು ಈ ನಗರ ನಕ್ಸಲ್ ವಾದವನ್ನು ಹರಿಯಬಿಟ್ಟಿದ್ದು, ಜಿಗ್ನೇಶ್ ಮೆವಾನಿಯಿಂದ ಉಮರ್ ಖಾಲಿದ್ ಮತ್ತು ಕಾಂಗ್ರೆಸ್‌ನ ಕೆಲವು ನಕ್ಸಲ್‌ಸ್ನೇಹಿ ನಾಯಕರ ನಂಟನ್ನೂ ಬೆಸೆದು ಸುದ್ದಿ ಮಾಡಿತ್ತು. ಅದಾಗಿ ಒಂದು ದಿನದ ಬಳಿಕ ಪುಣೆ ಪೊಲೀಸರು ಅರ್ಬನ್ ನಕ್ಸಲೀಯರ ಕುರಿತ ತಮ್ಮ ವಾದವನ್ನು ಮುಂದಿಟ್ಟಿದ್ದು, ಅದಕ್ಕೆ ಪೂರಕವಾಗಿ ಆಘಾತಕಾರಿ ಹತ್ಯೆ ಸಂಚಿನ ಪತ್ರಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ.

ಆದರೆ, ಆರೋಪಿಗಳ ಪರ ವಕೀಲರು, ಈಗಾಗಲೇ ಈ ಪತ್ರಗಳನ್ನು ಪೊಲೀಸರ ಸೃಷ್ಟಿ ಎಂದು ಶಂಕಿಸಿದ್ದಾರೆ. ಅಲ್ಲದೆ, ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಸಂಜಯ್‌ ನಿರುಪಮ್ ಕೂಡ, “ಇದು ಸಂಪೂರ್ಣ ಸುಳ್ಳು ಎಂದು ತಳ್ಳಿಹಾಕಲಾಗದು. ಆದರೆ, ಯಾವಾಗೆಲ್ಲ ಪ್ರಧಾನಿ ಮೋದಿಯವರ ಜನಪ್ರಿಯತೆ ಕುಸಿಯುತ್ತದೆಯೋ ಆವಾಗೆಲ್ಲ ಅವರ ಹತ್ಯೆಯ ಸಂಚಿನ ತನಿಖೆ, ಅದರ ಕುರಿತ ಮಾಧ್ಯಮದ ವರದಿಗಳಿಗೆ ರೆಕ್ಕೆ ಬರುತ್ತವೆ. ಹಾಗಾಗಿ, ಈ ಪ್ರಕರಣದ ಸತ್ಯಾಸತ್ಯತೆ ಕುರಿತು ಸರಿಯಾದ ನಿಷ್ಪಕ್ಷಪಾತ ತನಿಖೆಯಾಗಬೇಕಿದೆ,” ಎನ್ನುವ ಮೂಲಕ ಈಗಾಗಲೇ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ಅನುಮಾನಗಳಿಗೆ ಇಂಬು ನೀಡಿದ್ದಾರೆ.

ಈ ನಡುವೆ, ಗುರುವಾರ ನ್ಯಾಯಾಲಯದಲ್ಲಿ ಆರೋಪಿಗಳ ೧೪ ದಿನಗಳ ಪೊಲೀಸ್ ಕಸ್ಟಡಿಗೆ ಕೋರಿ ಪುಣೆ ಪೊಲೀಸರು ಸಲ್ಲಿಸಿದ ವರದಿಯಲ್ಲಿ ಯಾವೆಲ್ಲ ಕಾರಣಗಳಿಗಾಗಿ ಆರೋಪಿಗಳನ್ನು ತಮ್ಮ ವಶಕ್ಕೆ ವಿಚಾರಣೆಗಾಗಿ ವಹಿಸಬೇಕು ಎಂಬುದನ್ನು ನಮೂದಿಸಿದ್ದು, ಆ ವರದಿಯಲ್ಲಿ ಎಲ್ಲಿಯೂ ದೇಶದ ಪ್ರಧಾನಿಯೊಬ್ಬರ ಹತ್ಯೆಯ ಸಂಚಿನ ವಿಷಯವಾಗಲೀ, ಆರೋಪಿಗಳ ನಿವಾಸದಲ್ಲಿ ಸಿಕ್ಕ ಪತ್ರಗಳಲ್ಲಿ ಇರುವ ಅಂಶದ ಬಗ್ಗೆಯಾಗಲೀ ಪ್ರಸ್ತಾಪವನ್ನೇ ಮಾಡಿಲ್ಲ ಎಂದು ‘ನ್ಯೂಸ್‌ಲಾಂಡ್ರಿ’ ತನಗೆ ಲಭ್ಯವಿರುವ ಪೊಲೀಸರ ಆ ವರದಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಆದರೆ, ನಿಜವಾಗಿಯೂ ಪೊಲೀಸರು ಬಂಧಿಸಿರುವ ಭೀಮಾ ಕೋರೆಗಾಂವ್ ಹೋರಾಟಗಾರರಿಗೆ ನಕ್ಸಲೀಯರ ಸಂಪರ್ಕವಿದ್ದು, ಅವರು ಅಂತಹದ್ದೊಂದು ಬೃಹತ್ ಸಂಚನ್ನು ಹೆಣೆದಿದ್ದರೆ, ಪೊಲೀಸರು ಏಕೆ ನ್ಯಾಯಾಲಯದ ಮುಂದಿನ ತಮ್ಮ ವರದಿಯಲ್ಲಿ ಆ ಅಂಶವನ್ನೇ ಪ್ರಧಾನವಾಗಿ ಪ್ರಸ್ತಾಪಿಸಲಿಲ್ಲ? ಏಕೆಂದರೆ, ಪೊಲೀಸರು ಹೇಳಿರುವಂತೆ ಅವರು ಸಂಚು ಹೂಡಿರುವುದು ಒಬ್ಬ ಸಾಮಾನ್ಯ ವ್ಯಕ್ತಿಯ ವಿರುದ್ಧವಲ್ಲ; ಬದಲಾಗಿ ದೇಶದ ಪ್ರಧಾನಿಯ ವಿರುದ್ಧ. ಅಂತಹ ಘನಗಂಭೀರ ಸಂಚಿನ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಯಾಕೆ ಮಾಹಿತಿ ನೀಡಿಲ್ಲ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಅದರಲ್ಲೂ, ಪ್ಯಾಸಿಕ್ಯೂಷನ್ ಪರ ವಕೀಲರು ಸ್ವತಃ ರಾಜೀವ್‌ ಗಾಂಧಿ ಹತ್ಯೆ ಮಾದರಿಯ ಹತ್ಯೆಯ ಸಂಚು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದರೂ, ಪೊಲೀಸರು ಏಕೆ ಈ ವಿಷಯವನ್ನು ನ್ಯಾಯಾಲಯದ ಮುಂದೆ ತರಲಿಲ್ಲ? ಮತ್ತು ತಮ್ಮ ವರದಿಯಲ್ಲಿ ಆ ವಿಷಯವನ್ನು ಯಾಕೆ ಮರೆಮಾಚಿದ್ದಾರೆ? ಎಂಬುದು ಇಡೀ ಪ್ರಕರಣದ ಬಗ್ಗೆಯೇ ಹಲವು ಅನುಮಾನಗಳನ್ನು ಹುಟ್ಟಿಸಿದೆ.

ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಪೊಲೀಸರು ಕೇವಲ, “ತನಿಖೆಯ ವೇಳೆ ಸಿಕ್ಕ ಕೆಲವು ದಾಖಲೆ ಮತ್ತು ಸಾಕ್ಷ್ಯಗಳಿಂದ ಬಂಧಿತ ವಿಲ್ಸನ್, ಗಾದ್ಲಿಂಗ್ ಮತ್ತು ಇತರರು ನಿಷೇಧಿತ ನಕ್ಸಲ್‌ ಸಂಘಟನೆ ಸಿಪಿಐಗೆ (ಮಾವೋವಾದಿ) ಸೇರಿದವರಾಗಿರಬಹುದು ಎಂಬ ಶಂಕೆ ಇದೆ. ಆ ದಾಖಲೆಗಳು ಏನು? ಯಾವ ಮಾಹಿತಿ ಹೊಂದಿವೆ ಎಂಬುದು ಇನ್ನೂ ನಿಖರವಾಗಿಲ್ಲ. ಹಾಗಾಗಿ, ಹೆಚ್ಚಿನ ತನಿಖೆಗಾಗಿ ಅವರನ್ನು ಪೊಲೀಸ್ ಕಸ್ಟಡಿಗೆ ವಹಿಸಬೇಕು,” ಎಂದು ಕೋರಿದ್ದಾರೆ. ಅಲ್ಲದೆ, ಭೀಮಾ ಕೋರೆಗಾಂವ್ ಸಮರದ ೨೦೦ನೇ ವರ್ಷಾಚರಣೆಯ ಅಂಗವಾಗಿ ನಡೆದ ಸಮಾವೇಶಕ್ಕೆ ಮುನ್ನ ನಡೆದ ಎಲ್ಗಾರ್ ಪರಿಷತ್ ಸಭೆಯನ್ನು ಮಾವೋವಾದಿಗಳು ಸಂಘಟಿಸಿದ ಬಗ್ಗೆ ಮಾಹಿತಿ ಇದೆ. ಆ ಪೈಕಿ ಪ್ರಮುಖರಾದ ಬಂಧಿತ ಆರೋಪಿಗಳು ಭೀಮಾ ಕೋರೆಗಾಂವ್ ಸಮರದ ಸ್ಮರಣೆಯ ಹೆಸರಿನಲ್ಲಿ ಸಮಾಜದಲ್ಲಿ ಜಾತಿ ಆಧಾರದ ಮೇಲೆ ಒಡಕು ಸೃಷ್ಟಿಸಲು ಉದ್ದೇಶಿಸಿದ್ದರು ಎಂದು ಹೇಳಿರುವ ಪೊಲೀಸರು, ಆ ಕುರಿತ ಹಣಕಾಸು ವ್ಯವಸ್ಥೆ, ಬ್ಯಾಂಕ್ ವಹಿವಾಟು ಮತ್ತಿತರ ಸಂಗತಿಗಳು ಇನ್ನೂ ತಿಳಿಯಬೇಕಿದೆ ಎಂದೂ ಹೇಳಿದ್ದಾರೆ. ಅಲ್ಲದೆ, ಆರೋಪಿಗಳು ತಮ್ಮ ನಡುವಿನ ಸಂವಹನಕ್ಕೆ ಅತ್ಯಂತ ರಹಸ್ಯ ಸಂಕೇತಗಳನ್ನು ಬಳಸಿದ್ದಾರೆ ಎಂದೂ ಪೊಲೀಸರ ಆ ವರದಿಯಲ್ಲಿ ಹೇಳಲಾಗಿದೆ.

ಹಾಗಿದ್ದರೆ, ತಮ್ಮ ನಡುವಿನ ಸಾಮಾನ್ಯ ಸಂವಹನಕ್ಕೇ ಅತ್ಯಂತ ಕ್ಲಿಷ್ಟಕರ ರಹಸ್ಯ ಸಂಕೇತಗಳನ್ನು ಬಳಸಿದ ಅವರು, ಪ್ರಧಾನಿಯಂತಹ ಅತ್ಯುನ್ನತ ಹುದ್ದೆಯ ವ್ಯಕ್ತಿಯೊಬ್ಬರ ಹತ್ಯೆಯ ಸಂಗತಿಯನ್ನು ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಸರಳವಾಗಿ ಏಕೆ ಬರೆದಿಟ್ಟಿದ್ದರು? ಅದೂ, ತಾವು ವಾಸವಿರುವ ಮನೆಯಲ್ಲಿಯೇ ಸುಲಭವಾಗಿ ಲಭ್ಯವಾಗುವಂತೆ ಅದನ್ನು ಏಕೆ ಇರಿಸಿದ್ದರು? ಅಲ್ಲದೆ, ಪತ್ರದಲ್ಲಿ ಪ್ರಕಾಶ್ ಅಂಬೇಡ್ಕರ್ ಸೇರಿದಂತೆ ಹಲವು ಸಾರ್ವಜನಿಕ ಜೀವನದ ವ್ಯಕ್ತಿಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಪೊಲೀಸರೇ ನೀಡಿರುವ ಮಾಹಿತಿ ಹೇಳಿದೆ. ಹಾಗಾದರೆ, ತಮ್ಮೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳ ಹೆಸರುಗಳನ್ನು ಅಷ್ಟೊಂದು ನೇರವಾಗಿ ಲಿಖಿತವಾಗಿ ಪ್ರಸ್ತಾಪಿಸುವ ಮಟ್ಟಿಗೆ ನಕ್ಸಲರಿಗೆ ದಡ್ಡತನ ಕವಿದಿದೆಯೇ? ಒಂದು ವೇಳೆ, ನಕ್ಸಲರಿಗೆ ಅಂತಹ ಮಂಕು ಕವಿದಿದ್ದರೂ, ಆ ಮಾಹಿತಿ ಪಡೆದ ಪೊಲೀಸರು ಈವರೆಗೆ ಪತ್ರದಲ್ಲಿ ಪ್ರಸ್ತಾಪಿಸಿರುವ ಸಾರ್ವಜನಿಕ ವ್ಯಕ್ತಿಗಳ ವಿಚಾರಣೆ ನಡೆಸಲಿಲ್ಲವೇಕೆ? ಜೊತೆಗೆ, ಪೊಲೀಸರ ಪ್ರಕಾರ, ವಿಲ್ಸನ್ ಲ್ಯಾಪ್‌ಟಾಪ್‌ನಲ್ಲಿ ಈ ಪತ್ರಗಳು ಸಿಕ್ಕಿವೆ. ಅಂದರೆ, ಅತ್ಯಂತ ಅಪಾಯಕಾರಿ ಮಾಹಿತಿಯನ್ನು ಒಳಗೊಂಡ ಅಂತಹ ಪತ್ರವೊಂದನ್ನು ಆತ ತನ್ನ ಲ್ಯಾಪ್‌ಟಾಪ್‌ನಲ್ಲಿ ಹೀಗೆ ಪೊಲೀಸರಿಗೆ ಸುಲಭವಾಗಿ ದಕ್ಕುವ ರೀತಿಯಲ್ಲಿ ಪೇರಿಸಿಟ್ಟಿದ್ದನೇ? ಏಪ್ರಿಲ್‌ನಲ್ಲಿಯೇ ಈ ಪತ್ರ ವಶಪಡಿಸಿಕೊಂಡಿರುವುದಾಗಿ ಹೇಳಿರುವ ಪೊಲೀಸರು, ಪ್ರಧಾನಿಯಂತಹ ಅತ್ಯಂತ ಉನ್ನತ ನಾಯಕರೊಬ್ಬರ ಹತ್ಯೆಯ ಸಂಚಿನ ವಿಷಯ ಗೊತ್ತಿದ್ದರೂ ಯಾಕೆ ಈವರೆಗೆ ಅದನ್ನು ನ್ಯಾಯಾಲಯದ ಗಮನಕ್ಕೆ ತಂದಿರಲಿಲ್ಲ? ಪತ್ರದಲ್ಲಿ ‘ಲಾಲ್‌ ಜೋಹರ್’ ಎಂದು ಪರಸ್ಪರ ಸಂಭೋಧಿಸಲಾಗಿದೆ. ಆದರೆ, ನಕ್ಸಲ್‌ ನಾಯಕರು ಸಾಮಾನ್ಯವಾಗಿ ಪರಸ್ಪರರನ್ನು ಲಾಲ್‌ ಸಲಾ‌ಂ ಮೂಲಕ ಗೌರವಿಸುವುದು ವಾಡಿಕೆ.

ಹೀಗೆ, ಸಾಲು-ಸಾಲು ಪ್ರಶ್ನೆಗಳು ಪುಣೆ ಪೊಲೀಸರು ಮತ್ತು ಅವರ ಮಾಹಿತಿಯನ್ನೇ ಮುಂದಿಟ್ಟುಕೊಂಡು ಹುಯಿಲೆಬ್ಬಿಸುತ್ತಿರುವ ಮುಖ್ಯವಾಹಿನಿ ಮಾಧ್ಯಮಗಳ ವಿರುದ್ಧ ಕೇಳಿಬರತೊಡಗಿವೆ. ಜೊತೆಗೆ, ಇಡೀ ಭೀಮಾ- ಕೋರೆಗಾಂವ್ ಪ್ರಕರಣದ ವಿಷಯದಲ್ಲಿ ಪುಣೆ ಪೊಲೀಸರ ತನಿಖೆಯ ಬಗ್ಗೆಯೇ ರಾಷ್ಟ್ರವ್ಯಾಪಿ ಗಂಭೀರ ಅನುಮಾನಗಳು ಏಳತೊಡಗಿವೆ. ಒಂದು ತುಳಿತಕ್ಕೊಳಗಾದ ಸಮುದಾಯದ ೨೦೦ ವರ್ಷಗಳ ಹಿಂದಿನ ಹೋರಾಟದ ನೆನಪಿನ ಸಮಾವೇಶಕ್ಕೆ ನಕ್ಸಲೀಯ ಸಂಪರ್ಕ ಕಲ್ಪಿಸುವ ಮೂಲಕ ದಮನಿತರ ಸ್ವಾಭಿಮಾನದ ಹೋರಾಟವನ್ನು ಆಡಳಿತರೂಢ ಬಿಜೆಪಿ, ಪೊಲೀಸ್ ವ್ಯಸಸ್ಥೆಯ ಮೂಲಕ ಬಗ್ಗುಬಡಿಯತೊಡಗಿದೆ. ಯಾವಾಗೆಲ್ಲ ಆದಿವಾಸಿಗಳು, ದಲಿತರು ತಮ್ಮ ಹಕ್ಕುಗಳಿಗಾಗಿ ಪಟ್ಟು ಹಿಡಿಯುತ್ತಾರೋ ಆವಾಗೆಲ್ಲ ಅವರಿಗೆ ನಕ್ಸಲರ ಪಟ್ಟ ಕಟ್ಟಿ ಹಣಿಯುವ ವರಸೆಯನ್ನು ಪಕ್ಷಾತೀತವಾಗಿ ಎಲ್ಲ ಸರ್ಕಾರಗಳು ಅನುಸರಿಸಿಕೊಂಡು ಬಂದ ದೊಡ್ಡ ಇತಿಹಾಸವೇ ದೇಶದಲ್ಲಿದೆ. ಆ ಹಿನ್ನೆಲೆಯಲ್ಲಿ, ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿ ಹತ್ಯೆಯ ಬೃಹತ್ ಪಿತೂರಿಯ ಆಯಾಮವನ್ನೂ ನೀಡಲಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಇದನ್ನೂ ಓದಿ : ಗಾಂಧಿ ಹತ್ಯೆ ಸಂಚು | ೧೩ | ಸಂಚುಕೋರರ ಆಮಂತ್ರಣದಲ್ಲಿ ಗೋಡ್ಸೆ ದೇಶಭಕ್ತ!

ಈ ಹಿಂದೆಯೂ ಪ್ರಧಾನಿ ಮೋದಿಯವರ ವಿರುದ್ಧ ಇಂತಹ ಸಂಚಿನ ಪ್ರಯತ್ನಗಳು ವರದಿಯಾಗಿದ್ದವು. ೨೦೦೯ರಲ್ಲಿ ದೂರವಾಣಿ ಮೂಲಕ ಮೋದಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿತ್ತು. ೨೦೧೦ರಲ್ಲಿ ಮೋದಿ ಹತ್ಯೆಯ ಉದ್ದೇಶದಿಂದ ಲಷ್ಕರ್ ಇ ತೊಯ್ಬಾ ಕೇರಳದಲ್ಲಿ ತನ್ನ ರಹಸ್ಯ ನೆಲೆ ಹೊಂದಿದೆ ಎಂಬ ಸಂಗತಿ ವರದಿಯಾಗಿತ್ತು. ಬಳಿಕ ೨೦೧೩ರಲ್ಲಿ ಮೂರು ಬಾರಿ ಇಂತಹ ಮೂರು ಸುದ್ದಿಗಳು ಸದ್ದು ಮಾಡಿದ್ದವು. ಆ ಪೈಕಿ ಒಂದು, ಮೋದಿಯವರ ಹತ್ಯೆಗೆ ಸಂಚು ನಡೆದಿರುವುದಾಗಿ ಕೇಂದ್ರದ ಅಧಿಕಾರಿಗಳು ತಮಗೆ ಹೇಳಿರುವುದಾಗಿ ಮೋದಿಯವರ ಕಟ್ಟಾ ಬೆಂಬಲಿಗರಾಗಿರುವ ಪತ್ರಕರ್ತೆ ಮಧು ಕೀಶ್ವರ್ ಹೇಳಿದ್ದರು. ಅದೇ ವರ್ಷ ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಅವರು, ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಮುಜಾಹಿದೀನ್ ಜೊತೆ ಸೇರಿ ಮೋದಿ ಹತ್ಯೆಗೆ ಸಂಚು ರೂಪಿಸಿದ ಆರೋಪ ಮಾಡಿದ್ದರು. ಆ ವರ್ಷದ ನವೆಂಬರ್‌ನಲ್ಲಿ ಇಂಡಿಯನ್ ಮುಜಾಹಿದೀನ್ ಎಂಬ ಉಗ್ರ ಸಂಘಟನೆಗೆ ಸೇರಿದ ಉಗ್ರನೊಬ್ಬ ಮೋದಿ ಹತ್ಯೆಗೆ ಮಾನವ ಬಾಂಬ್‌ಗಳನ್ನು ಸಜ್ಜುಗೊಳಿಸಿರುವುದಾಗಿ ಹೇಳಿದ್ದಾನೆ ಎಂದು ಗುಜರಾತ್ ಸುದ್ದಿವಾಹಿನಿಯೊಂದು ವರದಿ ಮಾಡಿತ್ತು.

೨೦೧೪ರ ಜನವರಿಯಲ್ಲಿ ಮತ್ತೊಮ್ಮೆ ಇಂಡಿಯನ್ ಮುಜಾಹಿದೀನ್‌ ಸಂಘಟನೆಯ ವ್ಯಕ್ತಿಯೊಬ್ಬ ಮೋದಿ ಹತ್ಯೆಗೆ ಸಂಚು ನಡೆಸಿದ ಬಗ್ಗೆ ವರದಿಯಾಗಿತ್ತು. ಅದೇ ವರ್ಷದ ಏಪ್ರಿಲ್‌ನಲ್ಲಿ ವಾರಾಣಸಿಯಲ್ಲಿ ಮೋದಿ ಮೇಲಿನ ದಾಳಿ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದು ವರದಿಯಾಗಿತ್ತು. ಬಳಿಕ ಕಳೆದ ತಿಂಗಳು, ಐಎಸ್‌ಐಎಸ್‌ ಉಗ್ರನೊಬ್ಬ ಮೋದಿ ಹತ್ಯೆಗೆ ಸಂಚು ಮಾಡಿದ್ದ ಎಂದು ಗುಜರಾತ್ ಎಟಿಎಸ್ ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿತ್ತು. ಇದೀಗ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯ ಸಂಚಿನ ಸುದ್ದಿ ಸದ್ದು ಮಾಡತೊಡಗಿದೆ.

ಆದರೆ, ಈ ಬಾರಿ ಪೊಲೀಸರು ಭೀಮಾ-ಕೋರೆಗಾಂವ್ ಹೋರಾಟ, ನಕ್ಸಲೀಯವಾದ ಎರಡರ ಹಿನ್ನೆಲೆಯಲ್ಲಿ ಈ ಹೊಸ ಸಂಚಿನ ತನಿಖೆ ಆರಂಭಿಸಿದ್ದಾರೆ. ಹಾಗಾಗಿ, ತನಿಖೆಯ ಮುಂದಿನ ದಿಕ್ಕುದೆಸೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಹೆಚ್ಚಿದೆ. ೨೦೧೯ರ ಲೋಕಸಭಾ ಚುನಾವಣೆಗೆ ಮುನ್ನ ಪ್ರಕರಣದ ಸತ್ಯಾಸತ್ಯತೆಗಳು ಬಹಿರಂಗವಾಗುವವೇ ಅಥವಾ ಈ ವಿಷಯ ಕೂಡ ಚುನಾವಣೆಗೆ ರಂಗು ಕೊಡುವುದೇ ಎಂಬುದು ಮಾತ್ರ ಸದ್ಯ ಉಳಿದಿರುವ ಕುತೂಹಲ.

ಬಳ್ಳಾರಿ ಕಣದಲ್ಲಿ ಸಿದ್ದು-ರಾಮುಲು ವಾಕ್ಸಮರದಾಚೆಗೂ ಉಳಿಯುವ ಪ್ರಶ್ನೆಗಳೇನು?
ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?
ಶಿವಮೊಗ್ಗ ಲೋಕಸಭಾ ಉಪ ಚುನಾವಣೆ | ಒಲ್ಲದ ಮದುವೆ ಕಣದಲ್ಲಿ ಬಳುವಳಿಗಳ ಮೇಲಾಟ!
Editor’s Pick More