ಚಾಣಕ್ಯಪುರಿ | ಕಾಂಗ್ರೆಸ್‌ನ ಭವಿಷ್ಯ ಕಟ್ಟಲಿದೆಯೇ ನಗುಮೊಗದ ಈ ಜೋಡೆತ್ತು?

ಕಾಂಗ್ರೆಸ್ ನಾಯಕರಾದ ಕೃಷ್ಣ ಬೈರೇ ಗೌಡ ಮತ್ತು ದಿನೇಶ್ ಗುಂಡೂರಾವ್ ಅವರನ್ನು ದೆಹಲಿ ಪತ್ರಕರ್ತರ ವಲಯದಲ್ಲಿ ‘ಜೋಡೆತ್ತು’ ಎಂದೇ ಕರೆಯಲಾಗುತ್ತದೆ. ಈ ಪೈಕಿ ಒಬ್ಬರು ಮಂತ್ರಿ ಆಗಿಯಾಗಿದೆ. ಇನ್ನೊಬ್ಬರು ಕೆಪಿಸಿಸಿಯತ್ತಲೋ ಅಥವಾ ಎಐಸಿಸಿ ಕಡೆಗೋ ಎಂಬುದು ಬಾಕಿ ಇದೆ

ಕೃಷ್ಣ ಬೈರೇ ಗೌಡ ಮತ್ತು ದಿನೇಶ್ ಗುಂಡೂರಾವ್ ಇಬ್ಬರೂ ರಾಜಕೀಯ ನೇತಾರರ ಮಕ್ಕಳು. ಇಬ್ಬರೂ ಚೆನ್ನಾಗಿ ಓದಿದವರು, ಇಂಗ್ಲಿಷ್-ಹಿಂದಿ ಬಲ್ಲವರು. ಬೆಂಗಳೂರು ಮೂಲದವರು. ದೆಹಲಿ ಮಟ್ಟದಲ್ಲಿ ಸಂಪರ್ಕ ಹೊಂದಿರುವವರು. ಹಿಂದೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿ ಆಗಿದ್ದವರು. ಹಾಗಾಗಿ, ದೆಹಲಿ ಪತ್ರಕರ್ತರು ಇವರನ್ನು 'ಕಾಂಗ್ರೆಸ್ ಜೋಡೆತ್ತುಗಳು' ಎಂದು ಬಣ್ಣಿಸುತ್ತಿದ್ದರು.

ಬದಲಾದ ಪರಿಸ್ಥಿತಿಯಲ್ಲಿ ಇತ್ತೀಚೆಗೆ, "ಇಬ್ಬರೊಳಗೊಬ್ಬರು ಮಂತ್ರಿ ಆಗುತ್ತಾರೆ, ಇನ್ನೊಬ್ಬರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ‌ ಅಥವಾ ಮಂತ್ರಿಯಾಗದೆ ಉಳಿಯುವ ಇನ್ನೊಬ್ಬರು ಎಐಸಿಸಿಗೆ ಪದನ್ನೋತಿ ಪಡೆಯುತ್ತಾರೆ,” ಎನ್ನುವ ಅಭಿಪ್ರಾಯಗಳು ಕೇಳಿಬಂದವು. ಈಗ ಕೃಷ್ಣ ಬೈರೇ ಗೌಡ ಮಂತ್ರಿ ಆಗಿದ್ದಾರೆ. ಅವರು ಮಂತ್ರಿ ಆಗುವ ಮೊದಲೂ ಇಬ್ಬರೂ ಒಟ್ಟಿಗೆ ದೆಹಲಿಗೆ ಬಂದಿದ್ದರು. ಜೊತೆಜೊತೆಯಾಗಿ ಹೋಗಿ ರಾಹುಲ್ ಗಾಂಧಿ ಭೇಟಿ ಮಾಡಿ ಬಂದಿದ್ದರು. ಹೊರಬಂದು ಪತ್ರಕರ್ತರ ಜೊತೆ, "ಒಳಗೆ ನಡೆದದ್ದನ್ನು ಹೇಳಲಾರೆವು,” ಎಂದಿದ್ದರು. ಕೃಷ್ಣ ಬೈರೇ ಗೌಡ ಮಂತ್ರಿ ಆದಮೇಲೆ ಮತ್ತೊಮ್ಮೆ ಜೊತೆಯಾಗಿ ದೆಹಲಿಗೆ ಬಂದಿದ್ದರು. ಜೊತೆಯಾಗಿಯೇ ರಾಹುಲ್ ಗಾಂಧಿ ಭೇಟಿ ಮಾಡಿದ್ದರು. ಹೊರಬಂದು ಮತ್ತೆ, "ಒಳಗೆ ನಡೆದದ್ದನ್ನು ಹೇಳಲಾರೆವು,” ಎಂಬ 'ಅಸಹಾಯಕತೆ' ಮೆರೆದರು. ಜೋಡಿ ಎತ್ತುಗಳ ಪೈಕಿ ಒಂದು ಮಂತ್ರಿ ಸ್ಥಾನದ ತೇರು ಎಳೆಯಲಿದೆ. ಇನ್ನೊಂದು ಎತ್ತಿನ ಹೆಗಲು ಕೆಪಿಸಿಸಿ ಎಂಬ ರಥ ಎಳೆಯಬೇಕೋ? ಎಐಸಿಸಿ ಎಂಬ ಭಾರ ಹೊರಲು ಅಣಿಯಾಗಬೇಕೋ? ಎನ್ನುವುದು ಗೊತ್ತಾಗಿಲ್ಲ. ಜೋಡಿ ಎತ್ತುಗಳದ್ದು ಮಾತ್ರ ಜಾಣನಗೆ.

ಎಂ ಬಿ ಪಾಟೀಲ್‌ಗೆ ಜಲಸಂಪನ್ಮೂಲ ಸಿಗೋಲ್ಲ ಎಂದು ಮೊದಲೇ ಹೇಳಿದ್ದರು ಎಚ್‌ಡಿಕೆ!

೧೦೧೩ರಲ್ಲಿ ಎಂ ಬಿ ಪಾಟೀಲ್ ಅವರಿಗೆ ತಾವು ಮಂತ್ರಿ ಆಗುತ್ತೇವೆ ಎನ್ನುವ ವಿಶ್ವಾಸ ಇತ್ತು. ಆದರೆ, ಜಲಸಂಪನ್ಮೂಲದಂತಹ ಮಹತ್ವದ ಖಾತೆ ಸಿಗುತ್ತದೆಂಬ ವಿಶ್ವಾಸ ಇರಲಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಆರಂಭಿಸಿದಾಗ ಅದು ರಾಜಕೀಯ ಲಾಭ ತಂದುಕೊಡುತ್ತದೆ ಎಂಬ ವಿಶ್ವಾಸ ಇತ್ತು. ಆದರೆ, ತನ್ನನ್ನು ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ನಾಯಕನನ್ನಾಗಿ ರೂಪಿಸುತ್ತದೆ ಎಂಬ ವಿಶ್ವಾಸ ಇರಲಿಲ್ಲ. ನಿರೀಕ್ಷಿಸದೆ ಆದ ಬೆಳವಣಿಗೆಗಳು ಎಂ ಬಿ ಪಾಟೀಲ್ ಮಹತ್ವಾಕಾಂಕ್ಷೆಗೆ ಕಾವು ಕೊಟ್ಟವು- ಮಂತ್ರಿ ಸ್ಥಾನದಿಂದ ಮುಖ್ಯಮಂತ್ರಿ ಸ್ಥಾನದವರೆಗೆ. ಇದರಿಂದಾಗಿ ಪ್ರತ್ಯೇಕ ಲಿಂಗಾಯತ ಧರ್ಮ ಮತ್ತು ಪಕ್ಷ ರಾಜಕಾರಣದಲ್ಲಿ 'ಉದಾರವಾಗಿ' ನಡೆದುಕೊಂಡರು. ರಾಜ್ಯ ನಾಯಕರನ್ನು ಉಪೇಕ್ಷಿಸಿದರು. ಶರವೇಗವನ್ನೂ ಪಡೆದುಕೊಂಡರು. ಕಾಂಗ್ರೆಸ್-ಜೆಡಿಎಸ್ ನಾಯಕರು ಖಾತೆ ಬಗ್ಗೆ ಮಾತುಕತೆ ನಡೆಸುತ್ತಿರುವಾಗ ಪಾಟೀಲ್ ಪ್ರತ್ಯೇಕವಾಗಿ ಎಚ್ ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದರು. "ನನಗೆ ಜಲಸಂಪನ್ಮೂಲ ಖಾತೆಯೇ ಬೇಕು. ನೀರಾವರಿ ಕ್ಷೇತ್ರದಲ್ಲಿ ನನ್ನದೇಯಾದ ಕನಸುಗಳಿವೆ. ಅವುಗಳನ್ನು ಸಿದ್ದಿಸಿಕೊಳ್ಳಬೇಕು. ಅದರಿಂದಾಗಿ ಜಲಸಂಪನ್ಮೂಲ ಖಾತೆ ಜೆಡಿಎಸ್‌ಗೆ ಬೇಕು ಎಂದು ಪಟ್ಟುಹಿಡಿಯಬೇಡಿ. ಈ ವಿಷಯದಲ್ಲಿ ಸಹಕರಿಸಿ, ನಾನು ನಿಮನ್ನು ಎಲ್ಲ ರೀತಿಯಲ್ಲೂ ಬೆಂಬಲಿಸುವೆ,” ಎಂಬ ಪ್ರಸ್ತಾಪವಿಟ್ಟರು. ನಂತರ ಮಾತನಾಡಿದ‌ ಎಚ್‌ಡಿಕೆ, "ನಮ್ಮದೇನೂ ಅಭ್ಯಂತರ‌ ಇಲ್ಲ ಬ್ರದರ್. ಆದರೆ ನಿಮ್ಮ ಪಕ್ಷದವರೇ ನಿಮಗೆ ಮಿಸ್ ಮಾಡುವ ಸಾಧ್ಯತೆ ಇದೆ, ಗಮನಹರಿಸಿ,” ಎಂಬ ಸಲಹೆ ಇತ್ತಿದ್ದರು.‌

ಆನಂತರ ಪಾಟೀಲರು ದೆಹಲಿ ನಾಯಕರ ಕಡೆ ದೃಷ್ಟಿನೆಟ್ಟರು. ದೆಹಲಿ ನಾಯಕರ ಬಳಿ ತನ್ನ 'ಸಂಪನ್ಮೂಲ ಸೇವೆ' ಪರಿಗಣಿಸಿ ಜಲ ಸಂಪನ್ಮೂಲ ಖಾತೆಯನ್ನೊಳಗೊಂಡ ಉಪ ಮುಖ್ಯಮಂತ್ರಿ ಪಟ್ಟವನ್ನು ದಯಪಾಲಿಸಿ ಎಂದು ದುಂಬಾಲು ಬಿದ್ದರು. ಪಾಟೀಲರಿಂದ ಸೇವೆ ಪಡೆದಿದ್ದವರು ಸಹಜವಾಗಿ ಒತ್ತಡ ಹಾಕತೊಡಗಿದರು. ಆದರೆ ಪಾಟೀಲರ ಸ್ವಂತ ಜಿಲ್ಲೆಯಲ್ಲೇ ಅಪಸ್ವರ ಶುರುವಾಯಿತು. ವಿಜಯಪುರ ಮತ್ತು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳು ಪಾಟೀಲರಿಗೆ ಯಾವುದೇ ಕಾರಣಕ್ಕೂ ಮಂತ್ರಿ ಸ್ಥಾನ ಕೊಡಕೂಡದೆಂದು ಆಗ್ರಹಿಸಿದರು. ಕೊಟ್ಟರೆ ತಮ್ಮ‌ ರಾಜೀನಾಮೆ ಅಂಗೀಕರಿಸಲು ಸಿದ್ಧರಾಗಿ ಎಂದು ಎಚ್ಚರಿಸಿದರು. ಪಕ್ಕದ ಜಿಲ್ಲೆಗಳಿಂದಲೂ ಕೆಲ ದೂರುಗಳು ಬಂದವು. ಆಗಲೇ ರಾಜ್ಯದ ಮತ್ತು ಹೈಕಮಾಂಡ್ ನಾಯಕರು, "ಒಬ್ಬ ಎಂ ಬಿ ಪಾಟೀಲ್‌ಗಾಗಿ ಇವರೆಲ್ಲರನ್ನೂ ಕಳೆದುಕೊಳ್ಳುವುದು ಬೇಡ,” ಎಂಬ ತೀರ್ಮಾನಕ್ಕೆ ಬಂದಿದ್ದು. "ಹೇಗೂ ಎಂ ಬಿ ಪಾಟೀಲ್ ಪಕ್ಷ ಬಿಡುವುದಿಲ್ಲ. ಮಂತ್ರಿ ಸ್ಥಾನ ಕೊಡದಿದ್ದರೆ ಶಿವಾನಂದ ಪಾಟೀಲ್ ಪಕ್ಷದಲ್ಲಿ ಉಳಿಯುವುದಿಲ್ಲ,” ಎಂದು ಗೊತ್ತಿದ್ದರಿಂದ ಶಿವಾನಂದ ಪಾಟೀಲ್ ಅವರನ್ನು ಮಂತ್ರಿ ಮಾಡುವ ತೀರ್ಮಾನಕ್ಕೆ ಬಂದಿದ್ದು.

ಬಸವ ಕಲ್ಯಾಣದ ಬಸವಣ್ಣನ ಅನುಯಾಯಿಯ ರಾಜನೀತಿ

ಬಸವ ಕಲ್ಯಾಣದ ಶಾಸಕ ಬಿ ನಾರಾಯಣ್ ಮೊನ್ನೆ, "ಸಿದ್ದರಾಮಯ್ಯ ಮನಸ್ಸು ಮಾಡಿದರೆ ರಾಜ್ಯದ ಸಮ್ಮಿಶ್ರ ಸರ್ಕಾರ ಅರೆಕ್ಷಣವೂ ಇರುವುದಿಲ್ಲ,” ಎಂದು ಹೇಳಿದ್ದಾರೆ. ನಾರಾಯಣ್ ಅವರಿಗೆ ಸಿದ್ದರಾಮಯ್ಯ ಮೇಲೆ ಎಲ್ಲಿಲ್ಲದ ಅಭಿಮಾನ, ಅದನ್ನೂ ಮೀರಿದ ಗೌರವ, ಪ್ರೀತಿ. ನಾರಾಯಣ್ ಕೂಡ ಸಿದ್ದರಾಮಯ್ಯ ಅವರಂತೆ ಜನತಾದಳದಲ್ಲಿದ್ದವರು. ಸಿದ್ದರಾಮಯ್ಯ ಅವರನ್ನು ಹಿಂಬಾಲಿಸಿ ಕಾಂಗ್ರೆಸ್ ಸೇರಿದವರು. ಸಿದ್ದರಾಮಯ್ಯ ಅವರಿಗೂ ನಾರಾಯಣ್ ಬಗ್ಗೆ ವಿಶೇಷ ಪ್ರೀತಿ ಮತ್ತು ಅಭಿಮಾನ. ಅದೇ ಕಾರಣಕ್ಕೆ ೧೯೮೩ರಲ್ಲಿ ಜನತಾ ಪಕ್ಷದಿಂದ ಟಿಕೆಟ್ ಕೊಡಿಸಿದರು. ಆನಂತರವೂ ಹಲವು ಭಾರಿ ನಾರಾಯಣ್ ಪರ ವಕಾಲತ್ತು ವಹಿಸಿದರು. ಕಡೆಗೆ ೨೦೧೩ರಲ್ಲಿ ತೀವ್ರ ವಿರೋಧದ ನಡುವೆಯೂ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸುವಲ್ಲಿ ಸಫಲರಾದರು. ಆದರೆ, ಗಂಗಾಮತಸ್ಥ ಸಮುದಾಯದ ನಾರಾಯಣ್ ಅವರಿಗೆ ಹತ್ತಿರತ್ತಿರ ೭೦ ಸಾವಿರ ಲಿಂಗಾಯತ ಮತಗಳಿರುವ ಬಸವ ಕಲ್ಯಾಣದಲ್ಲಿ ಗೆಲ್ಲಲಾಗಲಿಲ್ಲ, ಗೆಲ್ಲಲು ಸ್ವಪಕ್ಷೀಯರೇ ಬಿಡಲಿಲ್ಲ.

ರಾಜಶೇಖರ ಪಾಟೀಲ್ ಪರವಾಗಿ ಮಂತ್ರಿಗಿರಿ ಲಾಬಿ ಮಾಡಲು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೆಹಲಿಗೆ ಬರುತ್ತಿದ್ದ ಲಿಂಗಾಯತ ಸಮುದಾಯದ ಬೀದರ್ ಜಿಲ್ಲೆಯ ಯುವ ನೇತಾರನೊಬ್ಬ, "ಸಿದ್ದರಾಮಯ್ಯ ಸಾಹೇಬರು ಈ ಗಂಗಾಮತಸ್ಥ ನಾರಾಯಣ್‌ಗೆ ಟಿಕೆಟ್ ಕೊಟ್ಟು ನಮ್ಮ ಕ್ಷೇತ್ರವನ್ನು ಹಾಳು ಮಾಡುತ್ತಿದ್ದಾರೆ. ಬದಲಿಗೆ, ನನ್ನಂಥ ಲಿಂಗಾಯತ ನಾಯಕ ಮತ್ತು ಪ್ರತಿ ಬಾರಿ ನಾಯಕರು ಬಂದಾಗ ಫ್ಲೆಕ್ಸ್ ಹಾಕಿಸುವ ನಿಷ್ಟಾವಂತನಿಗೆ ಟಿಕೆಟ್ ಕೊಟ್ಟರೆ ೭೦ ಸಾವಿರ ಲಿಂಗಾಯತ ಮತಗಳು ಸಾರಾಸಗಟಾಗಿ ಬಂದುಬಿಡುತ್ತವೆ. ಜೊತೆಗೆ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳೆಲ್ಲ ಬಿದ್ದು ನಾನು ಅನಾಯಾಸವಾಗಿ ಶಾಸಕನಾಗಿ ಬಿಡುತ್ತೇನೆ,” ಎಂಬ ತಮ್ಮ‌ ಜಾತ್ಯತೀತ ನಿಲುವು ಹೊರಗೆಡವುತ್ತಿದ್ದರು. "ಲಿಂಗಾಯತ ಮತಗಳನ್ನು ನಿಮ್ಮ ಪಕ್ಷದ ಅಭ್ಯರ್ಥಿಗೆ ಹಾಕಿಸಿ, ನಿಮ್ಮ ನಾಯಕತ್ವ ಮತ್ತು ಪಕ್ಷನಿಷ್ಠೆ ಮೆರೆಯಬಹುದಲ್ಲವೇ? ಎಂಬ ಪ್ರಶ್ನೆಗೆ "ನಾವು ಇಷ್ಟು ದೊಡ್ಡ ಪ್ರಮಾಣದಲ್ಲಿ ಇದ್ದರೂ ಬೇರೆ ಜಾತಿಯವರಿಗೆ ನಾವೇಕೆ ವೋಟು ಹಾಕಬೇಕು ಅಂತ ಕೇಳುತ್ತಾರೆ ಸಾರ್. ಅವರಿಗೆ ಕನ್ವಿನ್ಸ್ ಮಾಡುವುದು ಕಷ್ಟ. ಲಿಂಗಾಯತರಿಗೆ ಟಿಕೆಟ್ ಕೊಟ್ಟರೆ ಅವರೆಲ್ಲ ಕಣ್ಣುಮುಚ್ಚಿಕೊಂಡು ವೋಟ್ ಹಾಕ್ತಾರೆ?” ಎಂಬ ಕಟುವಾಸ್ತವವನ್ನು ಬಿಚ್ಚಿಡುತ್ತಿದ್ದರು.

ಈಗ ೨೦೧೮ರ ಫಲಿತಾಂಶ ಬಂದು ಕ್ಷೇತ್ರದಲ್ಲಿ ಏಳೆಂಟು ಸಾವಿರ ಮತಗಳಿರುವ ಅದೇ ಗಂಗಾಮತಸ್ಥ ಜಾತಿಯ ನಾರಾಯಣ್, ೧೭ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈಗ ಮತ್ತೆ ಅದೇ ರಾಜಶೇಖರ್ ಪಾಟೀಲ್ ಪರವಾಗಿ ಅದೇ ಮಂತ್ರಿಗಿರಿಗೆ ಲಾಭಿ ಮಾಡಲು ಬಂದಿದ್ದ ಅದೇ 'ಲಿಂಗಾಯತ ಮತ್ತು ಪಕ್ಷ ನಿಷ್ಠ ನಾಯಕ' ದೆಹಲಿಗೆ ಬಂದಿದ್ದರು. ವರಸೆ ಬದಲಾಗಿತ್ತು. “ನೋಡಿ ಸಾರ್, ಕಡೆಗೂ ನಾರಾಯಣ್ ಅವರನ್ನ ಗೆಲ್ಲಿಸಿಬಿಟ್ವಿ,” ಅಂತ ಭುಜ ತಟ್ಟಿಕೊಂಡರು. "ಹೇಗೆ?" ಎಂದಿದ್ದಕ್ಕೆ, "ಬಿಜೆಪಿಯಿಂದ ಕಣಕ್ಕಿಳಿದಿದ್ದ ಖೂಬಾ‌ ಲಿಂಗಾಯತ ವೋಟ್ ತೆಗೆದುಕೊಂಡರು. ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಪಿಜಿಆರ್ ಸಿಂಧ್ಯಾ ಮರಾಠ ಮತಗಳನ್ನು ಪಡೆದರು. ನಾರಾಯಣ್‌ಗೆ ಕಾಂಗ್ರೆಸ್ ಪಕ್ಷದ ಅಹಿಂದ ವೋಟುಗಳೆಲ್ಲ ಸಾರಾಸಗಟಾಗಿ ಬಂದವು, ಗೆದ್ದರು,” ಎಂದರು. "ಹಾಗಿದ್ರೆ ನಿಮ್ಮ ನಾರಾಯಣ್ ಗೆಲುವಿಗೆ ನಿಮ್ಮ ಕೊಡುಗೆ ಏನು? ಲಿಂಗಾಯತರನ್ನು ಬಿಟ್ಟು ರಾಜಕಾರಣ ಮಾಡಬಹುದು ಅಂತ ಸಾಬೀತಾಯಿತಲ್ವಾ? ಅಥವಾ ಲಿಂಗಾಯತರು ಮಾತ್ರವೇ ನಿರ್ಣಾಯಕರಲ್ಲವಾ?” ಎಂಬ ಯಾವ ಪ್ರಶ್ನೆಗೂ ಆ ಸ್ವಯಂಘೋಷಿತ ಲಿಂಗಾಯತ ಮತ್ತು ಪಕ್ಷನಿಷ್ಠ ನಾಯಕನ ಬಳಿ ಉತ್ತರವಿರಲಿಲ್ಲ. "ಸಾರ್, ರಾಜಶೇಖರ ಪಾಟೀಲ್ ಅವರನ್ನು ಹೈಕಮಾಂಡ್ ನಾಯಕರೊಂದಿಗೆ ಭೇಟಿ ಮಾಡಿಸಬೇಕು, ಆಮೇಲೆ ಸಿಗೋಣ,” ಎಂದು ಕಾಲುಕಿತ್ತರು.

ಇದನ್ನೂ ಓದಿ : ಚಾಣಕ್ಯಪುರಿ | ಗೆಹ್ಲೋಟ್ ಉಸ್ತುವಾರಿ ಆಗಿದ್ದರೆ ಕಾಂಗ್ರೆಸ್ ಗೆಲ್ಲುತ್ತಿತ್ತೇ?

ಕಾಸ್ಟ್ಲೀ ಕೂಲಿ ಕೇಳುತ್ತಿದ್ದಾರೆ ಡಿ ಕೆ ಶಿವಕುಮಾರ್

ಡಿ ಕೆ ಶಿವಕುಮಾರ್ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಬರಲು ತಮ್ಮದೇ ಅಗ್ರಪಾಲು ಎಂದು ಬಿಂಬಿಸಿಕೊಂಡರು‌. ಉಪ ಮುಖ್ಯಮಂತ್ರಿ ಹುದ್ದೆ ಕೊಡಿ ಎಂದು ಆಗ್ರಹಿಸಿದ್ದರು. ಇಂಧನ‌ ಇಲಾಖೆಯೇ ಬೇಕು ಎಂದು ಹಠ ಹಡಿದಿದ್ದರು. ಕೆಪಿಸಿಸಿ ಪಟ್ಟ ಬೇಕು ಎಂದು ಪಟ್ಟು ಹಾಕಿದ್ದರು. ಈ ವೈಖರಿಯಿಂದ ಕಾಂಗ್ರೆಸ್ ಹೈಕಮಾಂಡಿಗೆ ಕಿರಿಕಿರಿಯಾಗಿದೆಯಂತೆ. ತಾನು ಪಕ್ಷನಿಷ್ಠ, ಪಕ್ಷ ವಹಿಸುವ ಯಾವುದೇ ಕೆಲಸವನ್ನು ಶಿರಸಾವಹಿಸಿ ಮಾಡುವೆ ಎಂದು ಪದೇಪದೇ ಹೇಳುವ ಡಿಕೆಶಿ, "ಮಾಡಿದ ಕೆಲಸಕ್ಕೆ ಕಾಸ್ಟ್ಲಿ ಕೂಲಿ ಕೇಳುತ್ತಿದ್ದಾರೆ,” ಅನಿಸುತ್ತಿದೆಯಂತೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More