ಉನ್ನತ ಶಿಕ್ಷಣ ಖಾತೆ ಬೇಡವೇ ಬೇಡವೆಂದು ಜಿಟಿಡಿ ಹಠಕ್ಕೆ ಬೀಳಲು ಕಾರಣವೇನು?

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ೩೬ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಬೀಗಿದ್ದ ಜಿ ಟಿ ದೇವೇಗೌಡ, ಉನ್ನತ ಶಿಕ್ಷಣ ಖಾತೆ ನೀಡಿದ್ದಕ್ಕೆ ಸಿಎಂ ಮೇಲೆ ಮುನಿಸಿಕೊಂಡಿದ್ದಾರೆ. ಕೆ ಎಸ್ ರಂಗಪ್ಪ ಖಾತೆಯನ್ನು ನಿಯಂತ್ರಿಸುತ್ತಾರೆನ್ನುವ ಆತಂಕ ಈ ಮುನಿಸಿಗೆ ಕಾರಣವೇ?

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ೩೬ ಸಾವಿರಕ್ಕೂ ಅಧಿಕ ಮತಗಳಿಂದ ಮಣಿಸಿ ಬೀಗಿದ್ದ ಜಿ ಟಿ ದೇವೇಗೌಡರು, ಈಗ ಒಲ್ಲದ ಖಾತೆ ನೀಡಿದ್ದಕ್ಕಾಗಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ವಿರುದ್ಧ ಮುನಿಸಿಕೊಂಡಿದ್ದಾರೆ. ವಾರಾಂತ್ಯದ ಎರಡು ದಿನ ಸಿಎಂ ಕುಟುಂಬ ಸಮೇತ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭ ಜಿಟಿಡಿ ಸೌಜನ್ಯಕ್ಕೂ ಅವರನ್ನು ಭೇಟಿ ಮಾಡಲಿಲ್ಲ. ದೂರವಾಣಿ‌ ಸಂಪರ್ಕಕಕ್ಕೂ ಸಿಗಲಿಲ್ಲ. ಉನ್ನತ ಶಿಕ್ಷಣ ಖಾತೆಯನ್ನು ನೀಡಿದ್ದು ಅವರ ಕೋಪಕ್ಕೆ ಕಾರಣ.

ಹಾಗೆ ನೋಡಿದರೆ, ಗೃಹ, ಇಂಧನ, ಕಂದಾಯ ಮುಂತಾದ ಖಾತೆಗಳಂತೆ ಬಿಸಿ ಕಜ್ಜಾಯ ಅಲ್ಲವಾದರೂ, ಅವರಿಗೆ ಕೊಟ್ಟಿರುವುದು ಕಡಿಮೆ ಬಾಬತ್ತಿನ ಖಾತೆಯೇನಲ್ಲ. ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯ, ಪದವಿ ಕಾಲೇಜುಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ತಿರ್ಮಾನಗಳನ್ನು ಕೈಗೊಳ್ಳುವ, ಶೈಕ್ಷಣಿಕ, ಬೌದ್ಧಿಕ ವಲಯದ ಜೊತೆ ನಿರಂತರ ಒಡನಾಡುವ ಘನವಾದ ಹೊಣೆಗಾರಿಕೆ. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಸಮಕುಲಾಧಿಪತಿಯ ಗೌರವ ಸ್ಥಾನವಿದೆ. ಈ ಮುಂಚೆ ಅನೇಕ ಘಟಾನುಘಟಿ ರಾಜಕಾರಣಿಗಳು ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ ಕೂಡ.

ಅಷ್ಟೇ ಅಲ್ಲ, “ಖಾತೆ ಯಾವುದಾದರೇನು, ಸಚಿವ ಹುದ್ದೆ ಸಿಕ್ಕರಷ್ಟೆ ಸಾಕು,” ಎಂದು ಮಿತ್ರಪಕ್ಷ ಕಾಂಗ್ರೆಸ್‌ನಲ್ಲಿ ಅನೇಕರು ಕಾದು ಕುಳಿತಿದ್ದಾರೆ. ಕೆಲವರು ಆಕ್ರೋಶವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಜೆಡಿಎಸ್‌ನಲ್ಲೂ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ವಸ್ತುಸ್ಥಿತಿ ಹೀಗಿರುವಾಗ ಜಿಟಿಡಿ, ಕೊಟ್ಟ ಕುದುರೆ ಏರಲರಿಯದೆ ಮತ್ತೊಂದು ಕುದುರೆಯನ್ನು ಯಾಕೆ ಬಯಸುತ್ತಿದ್ದಾರೆನ್ನುವುದು ಕುತೂಹಲ. ಈ ಕುರಿತ ಎರಡು ಚರ್ಚೆ, ಅದರ ಕಾರ್ಯಕಾರಣ ಸಂಬಂಧಗಳು ಹೀಗಿವೆ:

  1. ಎಂಟನೇ ತರಗತಿ ಓದಿರುವ ತಮಗೆ ಉನ್ನತ ಶಿಕ್ಷಣ ಇಲಾಖೆ ನಿರ್ವಹಣೆ ಸುಲಭವಲ್ಲ. ಆದ್ದರಿಂದ, ‘ಸರಿಹೊಂದುವ’ ಖಾತೆ ನೀಡಿ ಎನ್ನುವುದು ಜಿಟಿಡಿ ಪರೋಕ್ಷ ಬೇಡಿಕೆ. “೮ನೇ ತರಗತಿ ಓದಿದವರಿಗೆ ಬೌದ್ಧಿಕ ವಲಯವನ್ನು ನಿರ್ವಹಿಸುವ ಹೊಣೆ ವಹಿಸಿದ್ದೆಷ್ಟು ಸರಿ?’’ಎನ್ನುವ ಚರ್ಚೆಗಳು ಟೀಕೆ, ವ್ಯಂಗ್ಯದ ನೆಲೆಯಲ್ಲಿ ನಡೆದಿವೆ ಕೂಡ.
  2. ಮೈಸೂರು ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಗೌಡರ ಬೀಗರಾದ ಪ್ರೊ.ಕೆ ಎಸ್‌ ರಂಗಪ್ಪ ಗೆದ್ದಿದ್ದರೆ ಈ ಸರ್ಕಾರದಲ್ಲಿ ಅವರೇ ಉನ್ನತ ಶಿಕ್ಷಣ ಸಚಿವರಾಗಿರುತ್ತಿದ್ದರು. ಸೋತರೂ, ತೆರೆಮರೆಯಲ್ಲಿ ನಿಂತು ಉನ್ನತ ಶಿಕ್ಷಣ ಇಲಾಖೆಯನ್ನು ಅವರೇ ನಿರ್ವಹಿಸಬೇಕೆನ್ನುವುದು ಗೌಡರ ಕುಟುಂಬದ ಇಚ್ಛೆ ಇದ್ದಂತಿದೆ. ಅದಕ್ಕೇ ಜಿ ಟಿ ದೇವೇಗೌಡರಿಗೆ ಆ ಖಾತೆ ನೀಡಲಾಗಿದೆ, ಅಧಿಕಾರ ನಿಯಂತ್ರಣದ ಈ ಹೊಂಚನ್ನು ಅರಿತೇ ಜಿಟಿಡಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

ಈ ಎರಡು ಕಾರಣಗಳ ಪೈಕಿ ಮೊದಲನೆಯದು, ಈ ಕಾಲ ಮತ್ತು ಸಂದರ್ಭಕ್ಕೆ ಯೋಗ್ಯ ಚರ್ಚೆಯಲ್ಲ. ಕುಮಾರಸ್ವಾಮಿ ಸಂಪುಟದಲ್ಲೇ ಹೈಸ್ಕೂಲ್, ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ಅನೇಕರಿದ್ದಾರೆ. ಕಾರ್ಯಭಾರದ ಗಂಧ-ಗಾಳಿ ಗೊತ್ತಿಲ್ಲದಿದ್ದರೂ ಮಹತ್ವದ ಖಾತೆಗಳನ್ನು ವಹಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಹುದ್ದೆ ಜೊತೆ ಹಲವು ಖಾತೆ ಹೊಂದಿರುವ ಕುಮಾರಸ್ವಾಮಿ ಅವರದ್ದೇ ಪದವಿ ಅಪೂರ್ಣ. ಪಿಯುಸಿಗೇ ಗುಡ್‌ ಬೈ ಹೇಳಿರುವ ಸಹೋದರ ರೇವಣ್ಣ ಸಚಿವರಾದಾಗಲೆಲ್ಲ ಲೋಕೊಪಯೋಗಿ ಖಾತೆಯನ್ನೇ ಹಠ ಹಿಡಿದು ಪಡೆಯುತ್ತಾರೆ. ಈ ಇಲಾಖೆಯಲ್ಲಿ ಅವರಿಗೇನು ತಜ್ಞತೆ ಎಂದೂ ಕೇಳಬಹುದು. ಮಾತ್ರವಲ್ಲ, ದೇಶದ ಮಹೋನ್ನತ ಶೈಕ್ಷಣಿಕ ಸಂಸ್ಥೆಗಳ ಆಡಳಿತವನ್ನು ನಿರ್ವಹಿಸುವ ಕೇಂದ್ರದ ಮಾನವ ಸಂಪನ್ಮೂಲ ಖಾತೆಗೆ ಈ ಹಿಂದೆ ಸಚಿವೆಯಾಗಿದ್ದ ಸ್ಮೃತಿ ಇರಾನಿ ಅವರ ಶೈಕ್ಷಣಿಕ ಅರ್ಹತೆ ಏನೆನ್ನುವುದೇ ಸ್ಪಷ್ಟ ಇರಲಿಲ್ಲ. ಪ್ರಧಾನಿ ಮೋದಿಯವರ ಶೈಕ್ಷಣಿಕ ಅರ್ಹತೆ ಕುರಿತಂತೆಯೂ ಅನೇಕ ಗೊಂದಲಗಳಿವೆ.

ಇದರರ್ಥ ಇಷ್ಟೆ; ನಮ್ಮ ಸಂದರ್ಭದಲ್ಲಿ ಯಾವುದೇ ವ್ಯಕ್ತಿಯ ವ್ಯಾಸಂಗಕ್ಕೂ ಆತ ಶಾಸಕ, ಸಂಸದ, ಮಂತ್ರಿ ಮಹೋದಯ ಎನ್ನಿಸಿಕೊಳ್ಳುವುದಕ್ಕೂ ಸಂಬಂಧವೇ ಇಲ್ಲ. ಜನಪ್ರತಿನಿಧಿಯಾಗುವವರಿಗೆ ತಕ್ಕ ಶೈಕ್ಷಣಿಕ ಅರ್ಹತೆ ಇರಬೇಕು ಎನ್ನುವ ಆಶಯ ಬೇಡಿಕೆಯ ರೂಪದಲ್ಲಿ ಇದೆಯಾದರೂ ಅದೇನೂ ಕಡ್ಡಾಯವಾಗಿಲ್ಲ. ಶೈಕ್ಷಣಿಕವಾಗಿ ಯಾವುದೇ ಪದವಿ ಪಡೆಯದವರೂ ಲೋಕಜ್ಞಾನದ ಮೂಲಕವೇ ವಹಿಸಿದ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಿದ ಅನೇಕ ಉದಾಹರಣೆಗಳಿವೆ. ವಿಷಯ ತಜ್ಞತೆ ಪಡೆದವರು ಭ್ರಷ್ಟಾತಿಭ್ರಷ್ಟರಾಗಿ, ಇಲಾಖೆಯನ್ನು ಹದಗೆಡಿಸಿದ್ದಕ್ಕೂ ನಿದರ್ಶನಗಳಿವೆ. ಈ ನಿಟ್ಟಿನಲ್ಲಿ ನೋಡಿದರೆ, “೮ನೇ ತರಗತಿ ಓದಿದವರಿಗೆ ಉನ್ನತ ಶಿಕ್ಷಣ ಖಾತೆ ನೀಡಬಾರದಿತ್ತು,’’ಎನ್ನುವ ವಾದಕ್ಕೆ ಅರ್ಥವೇ ಇಲ್ಲ. ಜಿಟಿಡಿ ಬಯಸಿದಂತೆ ಕಂದಾಯ ಖಾತೆಯನ್ನೋ, ಸಹಕಾರ ಇಲಾಖೆಯನ್ನೋ ನೀಡಿದರೆ, 'ಅವರ ೮ನೇ ತರಗತಿಯ ಜ್ಞಾನ' ಆ ಇಲಾಖೆಗಳ ನಿರ್ವಹಣೆಗೆ ಹೇಗೆ ಪೂರಕವಾದೀತು? ಲೋಕಜ್ಞಾನ ಅಥವಾ ಅನುಭವ ಆಧಾರದ ಮೇಲೆ ಈ ಯಾವುದೇ ಇಲಾಖೆಯನ್ನು ನಿಭಾಯಿಸಬಹುದೆಂದಾದರೆ, ಉನ್ನತ ಶಿಕ್ಷಣ ಇಲಾಖೆ ನಿರ್ವಹಣೆಯೂ ಕಷ್ಟವಲ್ಲ. ಅಷ್ಟಕ್ಕೂ, ಸಚಿವರಾದವರು ಹೇಗೆ ಕಾರ್ಯನಿರ್ವಹಿಸುತ್ತಾರೆ, ಹೆಚ್ಚಿನ ರಾಜಕಾರಣಿಗಳ ಕಾರ್ಯವೈಖರಿ ಯಾವುದನ್ನು ಕೇಂದ್ರೀಕರಿಸಿರುತ್ತದೆ ಎನ್ನುವುದು ಗೊತ್ತಿಲ್ಲದ ಸಂಗತಿಯೇನಲ್ಲ.

ಈ ನಿಟ್ಟಿನಲ್ಲಿ ನೋಡಿದರೆ, ಜಿಟಿಡಿ ಅಸಮಾಧಾನಕ್ಕೆ ೨ನೇ ಕಾರಣವೇ ಪ್ರಬಲವಾಗಿರುವಂತಿದೆ. ಜೆಡಿಎಸ್ ಪಾಲಿಗೆ ಬಂದ ಖಾತೆಗಳಲ್ಲಿ ಇರುವುದರಲ್ಲೇ ಲಾಭದಾಯಕ ಎನ್ನುವ (ಇಂಧನ, ಲೋಕೋಪಯೋಗಿ, ಸಾರಿಗೆ ಇತ್ಯಾದಿ) ಖಾತೆಗಳು ಎಚ್‌ ಡಿ ದೇವೇಗೌಡರ ಕುಟುಂದವರ ಬಳಿಯೇ ಇವೆ. ಸಿದ್ದರಾಮಯ್ಯನವರಂಥ ಸಿದ್ದರಾಮಯ್ಯನವರನ್ನೇ ಸೋಲಿಸಿ, 'ಶಿಕಾರಿ ವೀರ’ ಎನಿಸಿಕೊಂಡಿರುವ ತಮಗೆ ಈ ಪೈಕಿ ಒಂದು ಪ್ರಬಲ ಖಾತೆ ಸಿಗಬಹುದೆಂದು ಜಿಡಿಟಿ ನಿರೀಕ್ಷಿಸಿದ್ದರು. ಅದಕ್ಕಾಗಿ ಪಕ್ಷದ ವಲಯದಲ್ಲಿ ಹಕ್ಕು ಸ್ಥಾಪಿಸಿದ್ದರು. ಆದರೆ, ಜಿಟಿಡಿಯನ್ನು ಅಷ್ಟು ಸನಿಹಕ್ಕೆ ಬಿಟ್ಟುಕೊಳ್ಳಲು ಗೌಡರಾಗಲೀ, ಕುಮಾರಸ್ವಾಮಿಯಾಗಲೀ ತಯಾರಿದ್ದಂತಿಲ್ಲ. ಬೀಗರಾದ ಕೆ ಎಸ್‌ ರಂಗಪ್ಪ ಸೋಲಿನಲ್ಲಿ ಪಕ್ಷದ ಒಳಗಿನವರ ಚಿತಾವಣೆಯೂ ಇದೆ ಎನ್ನುವುದು ಈ ಕುಟುಂಬದ ಪ್ರಬಲ ಸಂಶಯ. “ರಂಗಪ್ಪ ಗೆದ್ದರೆ ಜಿಲ್ಲೆಯ ನಾಯಕರಾಗಿ ಬೆಳೆದುಬಿಡುತ್ತಾರೆ,’’ ಎಂದು ಆತಂಕಗೊಂಡಿದ್ದವರಲ್ಲಿ ಜಿಟಿಡಿ ಕೂಡ ಇದ್ದರೆನ್ನುವುದನ್ನು ಪಕ್ಷದ ಮೂಲಗಳೇ ದಳಪತಿಗಳಿಗೆ ಮನದಟ್ಟು ಮಾಡಿರುವುದು ಅವರ ಕುರಿತ ಸಂಶಯಕ್ಕೆ ಒಂದು ಕಾರಣ. ಆದರೆ, ಸಿದ್ದರಾಮಯ್ಯ ಅವರಂಥ ಪ್ರಭಾವಿಯನ್ನು ಮಣಿಸಿದ ಜಿಟಿಡಿಗೆ ಸಚಿವ ಸ್ಥಾನವನ್ನು ನಿರಾಕರಿಸುವಂತಿರಲಿಲ್ಲ. ಅಷ್ಟೇ ಅಲ್ಲ, ಈ ಹಿಂದೆ ಬಿಜೆಪಿಗೆ ಹೋಗಿಬಂದಿರುವ ಮತ್ತು ಕಳೆದ ಚುನಾವಣೆಯಲ್ಲಿ ಆ ಪಕ್ಷದ ಎಲ್ಲ ಹಂತದ ನಾಯಕರ ಜೊತೆ ನಿಕಟ ಸಂಪರ್ಕ ಇರಿಸಿಕೊಂಡೇ ಸಿದ್ದರಾಮಯ್ಯ ಸೋಲಿಗೆ ರಣತಂತ್ರ ಹೊಸೆದಿದ್ದ ಜಿಟಿಡಿ, ಮಂತ್ರಿ ಸ್ಥಾನ ತಪ್ಪಿದ್ದೇ ಆದರೆ ಬಿಜೆಪಿ ತೆಕ್ಕೆಗೆ ಹಾರಬಹುದೆನ್ನುವ ಮಾತುಗಳು ಕೇಳಿಬಂದಿದ್ದವು.

ಇದನ್ನರಿತೇ ದಳಪತಿಗಳು ಜಿಟಿಡಿಗೆ ಉನ್ನತ ಶಿಕ್ಷಣ ಖಾತೆ ನೀಡುವ ಮೂಲಕ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆಯುವ ತಮ್ಮ ಎಂದಿನ ಚಾಣಾಕ್ಷತನ ಮೆರೆದಿದ್ದಾರೆ ಎನ್ನಲಾಗಿದೆ. ಜಿಟಿಡಿ ಹೆಸರಿಗಷ್ಟೇ ಉನ್ನತ ಶಿಕ್ಷಣ ಸಚಿವರಾಗಿರುತ್ತಾರೆ. ಎರಡೆರಡು ವಿವಿಗಳ ಕುಲಪತಿಯಾಗಿ, ಆ ಸಂದರ್ಭ ಉನ್ನತ ಶಿಕ್ಷಣ ಇಲಾಖೆ, ರಾಜಭವನ ಮತ್ತು ಯುಜಿಸಿವರೆಗೆ ಎಲ್ಲವನ್ನೂ ನಿಭಾಯಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಕೆ ಎಸ್‌ ರಂಗಪ್ಪ ಅವರೇ ತೆರೆಯ ಮರೆಯಲ್ಲಿದ್ದು ಈ ಖಾತೆಯನ್ನು ನಿರ್ವಹಿಸುತ್ತಾರೆ. ಜಿಟಿಡಿಗೆ ಇದರ ಜೊತೆ ಮೈಸೂರು ಜಿಲ್ಲಾ ಉಸ್ತುವಾರಿ ನೀಡಿದರೆ, ಆ ಉಸ್ತುವಾರಿ ಲಾಭಕ್ಕಷ್ಟೇ ಜಿಟಿಡಿ ಸಮಾಧಾನ ಕಂಡುಕೊಳ್ಳಲಿ ಎನ್ನುವುದು ದೊಡ್ಡ ಗೌಡರ ಕುಟುಂಬದ ಲೆಕ್ಕಾಚಾರ ಆಗಿತ್ತೆನ್ನಲಾಗಿದೆ. ಖಾತೆ ಹಂಚಿಕೆಯಾದ ತಕ್ಷಣವೇ ಇಂಥ ವಾಸನೆಯನ್ನು ಅರಿತ ಜಿಟಿಡಿ ಅಸಮಾಧಾನ ಪ್ರಕಟಿಸಿದರು. “ಅವರಿಗೆ ಹೊಂದುವ ಖಾತೆಯನ್ನು ಕೊಡಿ,’’ ಎಂದು ಆಗ್ರಹಿಸಿ ಅವರ ಬೆಂಬಲಿಗರು ಪ್ರತಿಭಟನೆಗಿಳಿದರು. ಮೈಸೂರಿಗೆ ಬಂದ ಮುಖ್ಯಮಂತ್ರಿಯನ್ನು ಎದುರುಗೊಳ್ಳಬೇಕಿದ್ದ ಜಿಟಿಡಿ, ಕೊಡಗಿನ ರೆಸಾರ್ಟಿಗೆ ಹೋಗಿ ಕುಳಿತರು. ಈ ಮೂಲಕ, “ಕೆ ಎಸ್ ರಂಗಪ್ಪ ಕೈಗೊಂಬೆಯಾಗಿ ಅಥವಾ ಹೆಸರಿಗಷ್ಟೇ ಸಚಿವನಾಗಿ ಕಾರ್ಯನಿರ್ವಹಿಸಲು ಇಷ್ಟವಿಲ್ಲ,’’ ಎನ್ನುವುದನ್ನು ಗೌಡರು, ಕುಮಾರರಿಗೆ ಸ್ಪಷ್ಟಪಡಿಸಲು ಯತ್ನಿಸಿದರು.

ಇದನ್ನೂ ಓದಿ : ವೈರಲ್ ವಿಡಿಯೋ | ಬಿಜೆಪಿ-ಜೆಡಿಎಸ್ ಒಪ್ಪಂದ ಕುರಿತು ಜಿ ಟಿ ದೇವೇಗೌಡ ಮಾತು

ಇಷ್ಟೆಲ್ಲ ಆದರೂ, ಜಿಟಿಡಿ ಅದನ್ನು ಬಹಿರಂಗವಾಗಿ ಯಾಕೆ ಹೇಳುತ್ತಿಲ್ಲ ಎನ್ನುವುದು ಪ್ರಶ್ನೆ. ಅದನ್ನೆಲ್ಲ ಬಹಿರಂಗಪಡಿಸಲಾಗದ ಸ್ಥಿತಿಯನ್ನು ಅವರೇ ಮೈಮೇಲೆ ಎಳೆದುಕೊಂಡಿದ್ದಾರೆ ಎನ್ನುವ ಮಾತೂ ಇದೆ. ಖಾತೆ ಹಂಚಿಕೆ ವಿಷಯ ಪ್ರಕಟವಾಗುತ್ತಿದ್ದಂತೆ ಜಿಟಿಡಿ, “ಕಳೆದ ಚುನಾವಣೆಯಲ್ಲಿ ಕೋಟ್ಯಂತರ ರು. ಖರ್ಚು ಮಾಡಿದ್ದೇನೆ. ವಿಪರೀತ ಸಾಲವಾಗಿದೆ. ಇಂಥ ಖಾತೆ ಕೊಟ್ಟರೆ ನಾನೇನು ಮಾಡಲಿ?’’ ಎಂದು ಆಪ್ತರೆದುರು ಆಕ್ರೋಶ ವ್ಯಕ್ತಪಡಿಸಿದರಂತೆ. ಅಲ್ಲೇ ಇದ್ದವರು ಅದನ್ನೆಲ್ಲ ವೀಡಿಯೋ ಮಾಡಿ ಕುಮಾರಸ್ವಾಮಿ, ಎಚ್‌ ಡಿ ದೇವೇಗೌಡರಿಗೆ ರವಾನಿಸಿದ್ದಾರಂತೆ. ಆ ಸಾಕ್ಷ್ಯವನ್ನಿಟ್ಟುಕೊಂಡಿರುವ ಗೌಡರ ಕುಟುಂಬ, ಜಿಟಿಡಿ ಬಾಲ ಬಿಚ್ಚಿದರೆ ಆ ವೀಡಿಯೋವನ್ನು ಸಾರ್ವಜನಿಕವಾಗಿ ಬಿಚ್ಚಿಡುವ ಉದ್ದೇಶ ಹೊಂದಿದೆಯಂತೆ. ಅಂದರೆ, “ಉನ್ನತ ಶಿಕ್ಷಣ ಖಾತೆಯನ್ನು ತಮ್ಮ ಮೂಲಕ ರಂಗಪ್ಪ ನಿರ್ವಹಿಸುತ್ತಾರೆ,’’ ಎನ್ನುವ ಆತಂಕವನ್ನು ಜಿಟಿಡಿ ಹೇಳಿಕೊಂಡರೆ, “ನಿರಾಕರಣೆಗೆ ಅದಲ್ಲ ಕಾರಣ. ಮಾಡಿಕೊಂಡಿರುವ ಕೋಟ್ಯಂತರ ರು. ಸಾಲ ತೀರಿಸಲು ಅನುಕೂಲವಾಗುವಂಥ ಖಾತೆ ಅವರಿಗೆ ಬೇಕಿದೆಯಂತೆ. ಅದಕ್ಕೆ ಇಲ್ಲಿದೆ ಪುರಾವೆ,’’ ಎಂದು ದಳಪತಿಗಳು ಪ್ರತ್ಯಸ್ತ್ರ ಪ್ರಯೋಗಿಸಲು ಸಜ್ಜಾಗಿದ್ದಾರೆನ್ನುತ್ತವೆ ಮೂಲಗಳು.

ಈ ಸಂಗತಿಯನ್ನು ಅರಿತಿರುವ ಜಿಟಿಡಿ, ಅಸಮಾಧಾನವನ್ನು ಸ್ಫೋಟದ ಹಂತಕ್ಕೆ ಕೊಂಡೊಯ್ಯದೆ, “ಸಹಕಾರ ಖಾತೆಯನ್ನಾದರೂ ಕೊಡಿ. ಉನ್ನತ ಶಿಕ್ಷಣ ಮಾತ್ರ ಬೇಡ,’’ ಎನ್ನುವ ಸಂಧಾನ ಸಂದೇಶವನ್ನು ಸಿಎಂಗೆ ರವಾನಿಸಿದ್ದಾರೆ ಎನ್ನಲಾಗಿದೆ. ಹಾಗೆಂದೇ, ಸೋಮವಾರ ಬೆಳಗ್ಗೆ ಮೈಸೂರಿನಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, “ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜೊತೆ ಈ ಸಂಬಂಧ ಮಾತನಾಡಿ ಅಂತಿಮ ತೀರ್ಮಾನ ಕೈಗೊಳ್ಳುವೆ,’’ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ, ಅದು ಕೂಡ ಸುಲಭವಿಲ್ಲ. “ಸಹಕಾರ ಖಾತೆ ಬಂಡೆಪ್ಪ ಕಾಶೆಂಪೂರ್‌ ಅವರಿಗೆ ಹಂಚಿಕೆಯಾಗಿದೆ. ಅದನ್ನು ಅವರಿಂದ ಕಿತ್ತು ಜಿಟಿಡಿಗೆ ನೀಡಿದರೆ, ಎಲ್ಲ ಪ್ರಬಲ ಖಾತೆಗಳನ್ನು ಒಕ್ಕಲಿಗರೇ ಇಟ್ಟುಕೊಂಡಿದ್ದಾರೆ,’’ ಎನ್ನುವ ತಪ್ಪು ಸಂದೇಶ ರವಾನೆಯಾಗುತ್ತದೆ ಎನ್ನುವ ಆತಂಕವನ್ನು ಸಿಎಂ ತಮ್ಮ ಆಪ್ತರ ಬಳಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಖಾತೆ ಕಗ್ಗಂಟು ಸದ್ಯ ಹಾಗೇ ಮುಂದುವರಿದಿದೆ. ಹರದನಹಳ್ಳಿ ದೊಡ್ಡಗೌಡರ (ಎಚ್‌ಡಿಡಿ) ರಾಜಕೀಯ ಚದುರಂಗದಲ್ಲಿ ಮೈಸೂರಿನ ಮರಿಗೌಡರು (ಜಿಟಿಡಿ) ಸದ್ಯ ಒಂದು ದಾಳವಾಗಿ ಪರಿಣಮಿಸಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More