10 ಹುದ್ದೆ ನೆಪದಲ್ಲಿ 10 ಮಿಲಿಯನ್‌ ಉದ್ಯೋಗ ಸೃಷ್ಟಿ ವೈಫಲ್ಯ ಮರೆಸಹೊರಟ ಮೋದಿ

ಆಡಳಿತದಲ್ಲಿ ಚುರುಕು, ದೂರದೃಷ್ಟಿಯಿಂದ ವಿಮುಖವಾಗಿರುವ ಕೇಂದ್ರ ಸರ್ಕಾರ ಇದೀಗ ‘ಹಿರಿಯ ಹುದ್ದೆಗಳಿಗೆ ನೇರ ನೇಮಕಾತಿ’ ಮಾಡಲು ಮುಂದಾಗಿದೆ. ಆದರೆ, ಭಾರತದ ಆಡಳಿತ ವ್ಯವಸ್ಥೆಯಲ್ಲಿ ಇದೇನೂ ಹೊಸತಲ್ಲ. ಇದು ಹಳೆಯ ನಡೆಗೆ ಹೊಸ ಹೆಸರಿಟ್ಟು ಪ್ರಚಾರಗಿಟ್ಟಿಸಿಕೊಳ್ಳುವ ಜಾಣ್ಮೆಯಷ್ಟೆ!

ಲೋಕಸಭಾ ಚುನಾವಣೆಯ ವೇಳೆ ಮುಂದಿನ ಐದು ವರ್ಷಗಳಲ್ಲಿ ಹತ್ತು ಮಿಲಿಯನ್‌ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದ ಮೋದಿಯವರು ಇದೀಗ ಹತ್ತು ‘ಹೈಪ್ರೊಫೈಲ್‌’ ಉದ್ಯೋಗಗಳನ್ನು ನೀಡುವ ಮಾತನಾಡುತ್ತಿದ್ದಾರೆ, ಅದೂ ಅನುಭವಿಗಳಿಗೆ!

ಕಂದಾಯ, ವಿಮಾನಯಾನ, ವಾಣಿಜ್ಯ, ವಿತ್ತಸೇವೆ, ಆರ್ಥಿಕ ವ್ಯವಹಾರ, ಕೃಷಿ ಮತ್ತು ರೈತ ಕಲ್ಯಾಣ ಮುಂತಾದ ಹತ್ತು ಮಹತ್ವದ ಕ್ಷೇತ್ರಗಳಲ್ಲಿನ ಹತ್ತು ಅನುಭವಿ ತಜ್ಞರನ್ನು ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿರುವ ಕ್ರಮ ಚರ್ಚೆಯ ವಿಷಯವಾಗಿದೆ. ಇದೊಂದು ಕ್ರಾಂತಿಕಾರಕ ಬೆಳವಣಿಗೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ. ಇದೇ ವೇಳೆ, “ಈ ಬಗೆಯ ನೇಮಕಾತಿಗಳು ಹೊಸದಲ್ಲ, ದೇಶದ ಮೊದಲ ಪ್ರಧಾನಿ ನೆಹರು ಅವರ ಕಾಲದಿಂದಲೂ ಪರಿಣತರನ್ನು ಅಗತ್ಯವಿರುವ ಕ್ಷೇತ್ರಗಳಿಗೆ ತರುವ ಪ್ರಕ್ರಿಯೆ ನಡೆದು ಬಂದಿದೆ. ಇದನ್ನೊಂದು ಚರ್ಚೆಯ ವಿಷಯವಾಗಿಸುವ ಮೂಲಕ ಆಡಳಿತದಲ್ಲಿ ಗಂಭೀರ ಸುಧಾರಣೆಯನ್ನು ತರುವ ಯತ್ನಕ್ಕೆ ಮುಂದಾಗಿರುವುದಾಗಿ ಪ್ರಸ್ತುತ ಸರ್ಕಾರ ಬಿಂಬಿಸಿಕೊಳ್ಳಲು ಹೊರಟಿದೆ,” ಎನ್ನುವ ಅಭಿಪ್ರಾಯಗಳಿವೆ.

ನೇರ ನೇಮಕಾತಿಯ ಬಗ್ಗೆ ಪ್ರಕಟಣೆ ನೀಡಿರುವ ಕೇಂದ್ರದ ಆಡಳಿತ ಮತ್ತು ಸಿಬ್ಬಂದಿ ತರಬೇತಿ ಇಲಾಖೆ, ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ೧೫ ವರ್ಷ ಸೇವಾ ಅನುಭವ ಹೊಂದಿರುವ, ೨೦೧೮ರ ಜುಲೈಗೆ ೪೦ ವರ್ಷ ಮೀರದ ಅಭ್ಯರ್ಥಿಗಳು ಹುದ್ದೆಗೆ ಅರ್ಹರು ಎಂದಿದೆ. ಖಾಸಗಿ ವಲಯದಿಂದ ಈ ನೇರ ನೇಮಕಾತಿಗೆ ಪರಿಗಣಿಸುವಾಗ ಜಂಟಿ ಕಾರ್ಯದರ್ಶಿ ಹುದ್ದೆಗೆ ತತ್ಸಮಾನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವವರನ್ನು ಇಲಾಖೆ ಪರಿಗಣಿಸಲಿದೆ.

ಸಾಮಾನ್ಯವಾಗಿ ವಿವಿಧ ಸಚಿವಾಲಯಗಳು ನೀತಿನಿರೂಪಣೆಯಲ್ಲಿ ಅನುಭವವಿರುವ ತಜ್ಞರನ್ನು, ಪರಿಣತರನ್ನು, ಅನುಭವಿಗಳನ್ನು ಸಲಹಾಕಾರರಾಗಿ, ಸಮಾಲೋಚಕರನ್ನಾಗಿ ನೇರವಾಗಿ ನೇಮಿಸಿಕೊಳ್ಳುತ್ತಾರೆ. ಸಾರ್ವಜನಿಕ ವಲಯದ ಉದ್ದಿಮೆಗಳು, ಸ್ವಾಯತ್ತ ಸಂಸ್ಥೆಗಳು, ಸಾಂವಿಧಾನಿಕ ಸಂಸ್ಥೆಗಳಲ್ಲಿನ ಪರಿಣತರನ್ನು ಆಯೋಗಗಳ ಮುಖ್ಯಸ್ಥರನ್ನಾಗಿ, ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿಯೋ ಸಚಿವಾಲಯದ ವಿಶೇಷ ಅಧಿಕಾರಿಗಳನ್ನಾಗಿಯೋ ನೇಮಿಸುವುದು ಮೊದಲಿನಿಂದಲೂ ನಡೆದುಬಂದಿದೆ. ಹಾಗೆ ನೋಡಿದರೆ, ಎರಡು ಅವಧಿಗೆ ಪ್ರಧಾನಿಯಾದ ಮನಮೋಹನ್‌ ಸಿಂಗ್ ಅವರು ರಾಜಕೀಯಕ್ಕೆ ಬರುವುದಕ್ಕೂ ಮುನ್ನ ಆರ್‌ಬಿಐ ಮುಖ್ಯಸ್ಥರಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅದಕ್ಕೂ ಮುನ್ನ ಡೆಲ್ಲಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಪ್ರಾಚಾರ್ಯರಾಗಿ, ನಂತರದಲ್ಲಿ ಮುಖ್ಯ ವಿತ್ತೀಯ ಸಲಹಾಗಾರರಾಗಿ, ಆನಂತರ ಆರ್ಥಿಕ ಇಲಾಖೆಯ ಕಾರ್ಯದರ್ಶಿಯಾಗಿ ಅವರು ಸೇವೆ ಸಲ್ಲಿಸಿದ್ದರು.

ಯೋಜನಾ ಅಯೋಗದ ಉಪಾಧ್ಯಕ್ಷರಾಗಿ ದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಮಾಂಟೆಕ್‌ ಸಿಂಗ್‌ ಅಹ್ಲುವಾಲಿಯಾ, ದೂರಸಂಪರ್ಕ ಸಲಹಾಕಾರರಾಗಿ ವಿದ್ಯುನ್ಮಾನ ಕ್ರಾಂತಿಗೆ ಕಾರಣರಾದ ಸ್ಯಾಮ್‌ ಪಿತ್ರೋಡಾರನ್ನೂ ಇಲ್ಲಿ ನೆನೆಯಬಹುದು. ಇತ್ತೀಚಿನ ವರ್ಷಗಳಲ್ಲಿ ಆಧಾರ್ ಯೋಜನೆಯ ಜಾರಿ ಹಾಗೂ ಅನುಷ್ಠಾನದ ಹೊಣೆ ಹೊತ್ತಿದ್ದ ನಂದನ್‌ ನಿಲೇಕಣಿ ಜೊತೆಗೆ, ಇತಿಹಾಸದ ಪುಟಗಳನ್ನು ಅವಲೋಕಿಸಿದರೆ ಲವ್‌ರಾಜ್‌ ಸಿಂಗ್‌, ಮಂತೋಷ್‌ ಸೋಂಧಿ, ವಿ ಕೃಷ್ಣಮೂರ್ತಿ, ಡಿ ವಿ ಕಪೂರ್‌, ಆರ್‌ ವಿ ಶಾಹಿ ಅಂತಹ ಅನೇಕರು ನೀತಿನಿರೂಪಣೆಯ ವಿಷಯದಲ್ಲಿ, ಆಡಳಿತಾತ್ಮಕ ಹಾಗೂ ಅನುಷ್ಠಾನದ ವಿಚಾರದಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿರುವುದು ಕಂಡುಬರುತ್ತದೆ. ಇವರಾರೂ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ, ವಿವಿಧ ಹಂತಗಳಲ್ಲಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಆಡಳಿತಶಾಹಿಯ ಕೇಂದ್ರಕ್ಕೆ ಬಂದವರಲ್ಲ. ಬದಲಿಗೆ ತಮ್ಮ ಸುದೀರ್ಘ ಅನುಭವ, ಉತ್ತಮ ಸಾಧನೆ, ಪರಿಣತಿಗಳ ಮೂಲಕವೇ ಮಹತ್ವದ ಹುದ್ದೆಗಳನ್ನು ನಿಭಾಯಿಸಿದವರು.

ಈ ಹಿನ್ನೆಲೆಯಲ್ಲಿ ಗಮನಿಸಿದಾಗ, ಕೇಂದ್ರ ಸರ್ಕಾರ ಪ್ರಸ್ತುತ ಪ್ರಸ್ತಾಪಿಸಿರುವ ‘ಹಿರಿಯ ಹುದ್ದೆಗಳಿಗೆ ನೇರ ನೇಮಕಾತಿ’ ಎನ್ನುವ ವಿಚಾರ ಸುದ್ದಿಗಾಗಿ ಎತ್ತಿಕೊಂಡಂತೆ ಭಾಸವಾಗುತ್ತದೆ. ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಆಡಳಿತದಲ್ಲಿ ಮಹತ್ವದ ಸುಧಾರಣೆಗಳನ್ನು ಮಾಡುವಲ್ಲಿ ಎಡವಿರುವ ಮೋದಿ ನೇತೃತ್ವದ ಸರ್ಕಾರ, ತನ್ನ ನೀತಿನಿರೂಪಣೆಯ ವಿಷಯಗಳಿಗಾಗಿ ಹಾಗೂ ಕೃತಿಗಿಂತ ಮಾತಿನಲ್ಲಿಯೇ ಹೆಚ್ಚು ಸಮಯವನ್ನು ವ್ಯಯ ಮಾಡಿರುವ ಕಾರಣಕ್ಕಾಗಿ ಟೀಕೆಗಳನ್ನು ಎದುರಿಸುತ್ತಿದೆ. ಮೋದಿ ನೇತೃತ್ವದ ಸರ್ಕಾರದ ಆಡಳಿತದಿಂದ ಅಪಾರವಾದುದನ್ನು ನಿರೀಕ್ಷಿಸಿದ್ದ ಜನತೆ ಹಾಗೂ ಖಾಸಗಿ ವಲಯಗಳ ಗಣ್ಯರು ಸರ್ಕಾರಕ್ಕೆ ನಿರ್ದಿಷ್ಟ ಗುರಿಯಿಲ್ಲ ಹಾಗೂ ಆಡಳಿತದಲ್ಲಿ ನಿರೀಕ್ಷಿಸಿದ್ದ ಚುರುಕುತನ ಕಾಣುತ್ತಿಲ್ಲ ಎನ್ನುವ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸಹಜವಾಗಿಯೇ ಮೋದಿಯವರ ಮುಂದೆ ತಮ್ಮ ಸರ್ಕಾರದ ಅವಧಿಯಲ್ಲಿ ಆಡಳಿತಶಾಹಿಯಲ್ಲಿ ಉತ್ತಮ ಸುಧಾರಣೆಯಾಯಿತು ಎಂದು ಹೇಳಿಕೊಳ್ಳುವಂತಹ ತೋರಿಕೆಯ ಕ್ರಮಗಳಾದರೂ ಈಗ ಅಗತ್ಯವಿದೆ. ‘ಹಿರಿಯ ಹುದ್ದೆಗಳಿಗೆ ನೇರ ನೇಮಕಾತಿ’ ಎನ್ನುವುದು ಹೀಗಾಗಿಯೇ ನೂತನ ಪ್ರಚಾರ ತಂತ್ರದ ಭಾಗದಂತೆ ತೋರುತ್ತದೆ.

ಇದನ್ನೂ ಓದಿ : ಮೋದಿ ಆಡಳಿತದ ನಾಲ್ಕು ವರ್ಷ | ಹೇಳಿದ್ದೇನು? ಮಾಡಿದ್ದೇನು? ವಿಶ್ಲೇಷಣೆಗಳ ಸರಣಿ ಲೇಖನಗಳು

ಮೋದಿಯವರಿಗೆ ಆಡಳಿತದಲ್ಲಿ ನಿಜಕ್ಕೂ ಉತ್ತಮ ಸುಧಾರಣೆಗಳನ್ನು ತರುವ ಮನಸ್ಸಿದ್ದಿದ್ದರೆ ತಮ್ಮ ಆಡಳಿತದ ಆರಂಭದಿಂದಲೇ ಸಾಂಪ್ರದಾಯಿಕ ಆಡಳಿತ ವ್ಯವಸ್ಥೆಯ ಭಾಗವಾಗಿರುವವರ ಬದಲಿಗೆ, ಸಾರ್ವಜನಿಕವಾಗಿ ಈಗಾಗಲೇ ತಮ್ಮ ಕೆಲಸಗಳ ಮೂಲಕ ದೇಶ-ವಿದೇಶಗಳ ಗಮನ ಸೆಳೆದಿದ್ದ ವಿವಿಧ ವಲಯಗಳ ಸಾಧಕರನ್ನು ಆಡಳಿತದ ವಿವಿಧ ಹಂತದಲ್ಲಿ ಬಳಸಿಕೊಳ್ಳುವ ಯತ್ನ ಮಾಡಬಹುದಿತ್ತು. ವಿಪರ್ಯಾಸವೆಂದರೆ, ಮೋದಿ ಸರ್ಕಾರ ವಿವಿಧ ಸಾಂವಿಧಾನಿಕ ಸಂಸ್ಥೆಗಳಿಗೆ ಮಾಡಿದ ನೇಮಕಾತಿಗಳೆಲ್ಲವೂ ಚರ್ಚೆಯಾಗಿರುವುದು ಅವುಗಳಿಗೆ ಆಯ್ಕೆಯಾದ ವಿವಾದಾಸ್ಪದ ವ್ಯಕ್ತಿಗಳಿಂದ. ಈ ಕಾರಣಕ್ಕಾಗಿಯೇ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳಲ್ಲಿ ಚಿಂತಕರು, ಅನುಭವಿಗಳು, ತಜ್ಞರನ್ನು ತರುವ ಬದಲಿಗೆ ಬಲಪಂಥೀಯ ವಿಚಾರಧಾರೆಯ, ಆಡಳಿತಾತ್ಮಕವಾಗಿ ದೂರದೃಷ್ಟಿ ಇಲ್ಲದ ವ್ಯಕ್ತಿಗಳ ನೇಮಿಸುವ ಮೂಲಕ ಆ ಸಂಸ್ಥೆಗಳ ಘನತೆಗೆ ಧಕ್ಕೆ ತಂದಿದೆ ಎನ್ನುವ ಟೀಕೆಗಳನ್ನು ವಿಪಕ್ಷಗಳು ಅಡಿಗಡಿಗೂ ಮಾಡಿದವು. ತಮಗಿದ್ದ ಅವಕಾಶವನ್ನು ಕೈಚೆಲ್ಲಿದ ಪ್ರಧಾನಿಯವರು ಇದೀಗ ತೋರಿಕೆ ಕ್ರಮದ ಮೂಲಕ ಜನರ ಗಮನ ಸೆಳೆಯಲು ಮುಂದಾಗಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More