ಟ್ವಿಟರ್ ಸ್ಟೇಟ್ | ಎಲ್‌ಜಿ- ಆಪ್ ಸರ್ಕಾರದ ಸಂಘರ್ಷಕ್ಕೆ ದೆಹಲಿ ಜನತೆ ಬಲಿ?

ದೆಹಲಿ ಸರ್ಕಾರ ಟ್ವಿಟರ್ ಮತ್ತು ಮಾಧ್ಯಮಗಳ ಮೂಲಕವೇ ಆಡಳಿತ ನಡೆಸುತ್ತಿದೆ. ಹೊಂದಾಣಿಕೆಯ ಬದಲಾಗಿ ಧರಣಿಯನ್ನೇ ಮಾರ್ಗವಾಗಿಸಿದೆ. ಆಪ್ ಸರ್ಕಾರದ ಇಂತಹ ಧೋರಣೆ ಮೀರಿಸುವಂತೆ ಕೇಂದ್ರ ಸರ್ಕಾರದ ಕೈಗೊಂಬೆ ಎನ್ನಲಾಗುವ ಲೆಫ್ಟಿನೆಂಟ್ ಗವರ್ನರ್‌ರ ಅಸಹಕಾರ ಸಾಗಿದೆ

ದೆಹಲಿಯ ಸರ್ಕಾರದ ನೇತೃತ್ವ ವಹಿಸಿಕೊಂಡವರು ಟ್ವಿಟರ್‌ನಲ್ಲಿಯೇ ಆಡಳಿತ ನಡೆಸುತ್ತಾರೆಯೇ? ಸರ್ಕಾರಕ್ಕೆ ಸಂಬಂಧಿಸಿದ ವ್ಯಕ್ತಿಗಳು ಇತ್ತೀಚೆಗೆ ಹಾಕಿದ ಟ್ವೀಟ್‌ಗಳು ಅಥವಾ ಮಾಧ್ಯಮ ಹೇಳಿಕೆಗಳನ್ನು ಅವಲೋಕಿಸಿದಲ್ಲಿ, ಪರಸ್ಪರರ ಜೊತೆಗೆ ಮಾತುಕತೆಯ ಮೂಲಕ ಪರಿಹರಿಸಬೇಕಾದ ವಿಚಾರವೊಂದನ್ನು ಮಾಧ್ಯಮಗಳಲ್ಲಿ ‘ರಾಮಾಯಣ’ ಮಾಡಿಯೇ ಪರಿಹರಿಸುತ್ತೇವೆ ಎನ್ನುವ ನಿರ್ಧಾರಕ್ಕೆ ಬಂದಂತೆ ಕಾಣಿಸುತ್ತದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬಾಯ್‌ಜಾಲ್‌ ಅವರ ಮನೆಯಲ್ಲಿ ರಾತ್ರಿಯಿಡೀ ಧರಣಿ ಕೂರುತ್ತಾರೆ. ಆದರೆ, ಸರ್ಕಾರದ ಜೊತೆಗೆ ಮಾತುಕತೆಯ ಮೂಲಕ ಸಮಸ್ಯೆ ಪರಿಹರಿಸುವ ಬದಲಾಗಿ ಲೆಫ್ಟಿನೆಂಟ್ ಗವರ್ನರ್ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಸಮಸ್ಯೆ ಪರಿಹರಿಸಲು ದೆಹಲಿ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಆರೋಪಿಸುತ್ತಾರೆ! ಆಡಳಿತ ಪಕ್ಷ ಹಾಗೂ ಲೆಫ್ಟಿನೆಂಟ್ ಗವರ್ನರ್ ಇಬ್ಬರಿಗೂ ದೆಹಲಿಯ ಆಡಳಿತ ಸುಸೂತ್ರವಾಗಿ ನಡೆಯುವುದಕ್ಕಿಂತ ಹೆಚ್ಚಾಗಿ ಸ್ವಪ್ರತಿಷ್ಠೆಯೇ ಮುಖ್ಯವಾದಂತೆ ಕಾಣಿಸುತ್ತದೆ. ದೆಹಲಿ ಸರ್ಕಾರದ ಉಪ ಮುಖ್ಯಮಂತ್ರಿ ಮನೀಷ್ ಸಿಸೊಡಿಯ ಅವರು ಟ್ವಿಟರ್‌ನಲ್ಲಿ ಸಂದೇಶ ಹಾಕುತ್ತಾರೆ. “ಗುಡ್ ಮಾರ್ನಿಂಗ್ ಲೆಫ್ಟಿನೆಂಟ್ ಗವರ್ನರ್ ಸರ್! ದೆಹಲಿ ಮುಖ್ಯಮಂತ್ರಿ ಮತ್ತು 3 ಸಚಿವರು ನಿಮ್ಮ ಮನೆಯ ವೀಕ್ಷಣಾ ಕೊಠಡಿಯಲ್ಲಿ ಸೋಮವಾರ ಸಂಜೆಯಿಂದ ಕಾಯುತ್ತಿದ್ದೇವೆ. ಇಂದಾದರೂ ನಿಮ್ಮ ಬ್ಯುಸಿ ವೇಳಾಪಟ್ಟಿಯ ನಡುವೆ ನಮ್ಮನ್ನು ಭೇಟಿಯಾಗಲು ಸಮಯ ಕೊಟ್ಟು ಮೂರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸುವ ನಿರೀಕ್ಷೆ ಇದೆ. ಅಲ್ಲಿವರೆಗೂ ನಿಮಗಾಗಿ ಕಾಯುತ್ತೇವೆ,” ಎನ್ನುವುದು ಸಿಸೊಡಿಯ ಟ್ವೀಟ್ ಸಾರಾಂಶ.

ಇಂದು (ಮಂಗಳವಾರ) ಬೆಳಗ್ಗೆ ಲೋಕೋಪಯೋಗಿ ಸಚಿವರಾದ ಸತ್ಯೇಂದ್ರ ಜೈನ್ ಅವರು ಟ್ವಿಟರ್ ಮೂಲಕ ಲೆಫ್ಟಿನೆಂಟ್ ಗವರ್ನರ್‌ಗೆ ಸಂದೇಶವೊಂದನ್ನು ಕಳುಹಿಸುತ್ತಾರೆ. “94 ಪಾಲಿ ಕ್ಲಿನಿಕ್‌ಗಳ ನಿರ್ಮಾಣ ಕಾರ್ಯವನ್ನು 7ನೇ ಫೆಬ್ರವರಿಯಂದೇ ಇಎಫ್ಸಿ ಕ್ಲಿಯರ್ ಮಾಡಿದೆ. ಆದರೆ, ಐಎಎಸ್ ಅಧಿಕಾರಿಗಳ ಮುಷ್ಕರದಿಂದಾಗಿ ಪ್ರಸ್ತಾಪವನ್ನು ಸಚಿವ ಸಂಪುಟದ ಮುಂದೆ ಕಳೆದ ನಾಲ್ಕು ತಿಂಗಳಿಂದ ಇಡಲಾಗಿಲ್ಲ,” ಎಂದು ಸತ್ಯೇಂದ್ರ ಜೈನ್ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟನ್ನು ಅಟ್ಯಾಚ್ ಮಾಡಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೂ “ಸರ್, ದಯವಿಟ್ಟು ಪ್ರತಿಕ್ರಿಯಿಸಿ,” ಎಂದು ಲೆಫ್ಟಿನೆಂಟ್ ಗವರ್ನರ್‌ಗೆ ಸಂದೇಶ ಹಾಕುತ್ತಾರೆ. ದೆಹಲಿ ಸರ್ಕಾರದ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯ ಅವರೂ, ಇಂದು ಬೆಳಿಗ್ಗೆ ಟ್ವಿಟರ್ ಮೂಲಕ ದೆಹಲಿಯ ಸಿಗ್ನೇಚರ್ ಸೇತುವೆಯ ಕಾಮಗಾರಿ ಐಎಎಸ್ ಅಧಿಕಾರಿಗಳ ಮುಷ್ಕರದಿಂದಾಗಿ ಹೇಗೆ ನಿಲುಗಡೆಯಾಗಿದೆ ಎನ್ನುವ ವಿವರವನ್ನು ನೀಡಿದ್ದಾರೆ.

ಇದನ್ನೂ ಓದಿ : ಲೆಪ್ಟಿನೆಂಟ್ ಗವರ್ನರ್ ವಿರುದ್ಧ ದೆಹಲಿ ಸಿಎಂ ಕೇಜ್ರಿವಾಲ್ ಪ್ರತಿಭಟನೆ

ಈ ‘ಟ್ವೀಟ್ ಆಡಳಿತ’ದ ಹಿನ್ನೆಲೆ, ದೆಹಲಿಯ ಐಎಎಸ್ ಅಧಿಕಾರಿಗಳು ಮತ್ತು ಆಪ್ ಸರ್ಕಾರದ ನಡುವೆ ಕಳೆದ ನಾಲ್ಕು ತಿಂಗಳಿನಿಂದ ಇರುವ ಅಭಿಪ್ರಾಯಭೇದ. ದೆಹಲಿಯಲ್ಲಿ ಸುಸೂತ್ರವಾಗಿ ಆಡಳಿತ ಸಾಗದೆ ಇರುವುದು, ಲೆಫ್ಟಿನೆಂಟ್ ಗವರ್ನರ್ ಮತ್ತು ಸರ್ಕಾರದ ನಡುವೆ ಸದಾ ಹಗ್ಗಜಗ್ಗಾಟವಾಗುವುದು ಆರಂಭದಿಂದಲೇ ಇತ್ತು. ಕೇಂದ್ರದ ಬಿಜೆಪಿ ಸರ್ಕಾರ ನೇಮಿಸಿರುವ ಲೆಫ್ಟಿನೆಂಟ್ ಗವರ್ನರ್ ದೆಹಲಿ ಸರ್ಕಾರದ ಆಡಳಿತದ ನಡುವೆ ಮೂಗು ತೂರಿಸುತ್ತಿದ್ದಾರೆ ಎನ್ನುವುದು ಮುಖ್ಯಮಂತ್ರಿ ಮತ್ತು ಸಚಿವರ ಆರೋಪ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಐಎಎಸ್ ಅಧಿಕಾರಿಯೊಬ್ಬರ ಕೆನ್ನೆಗೆ ಹೊಡೆದಿದ್ದಾರೆ. ಅದೇ ಕಾರಣದಿಂದ ಇಂತಹ ಸಂದಿಗ್ಧ ಬಂದೊದಗಿದೆ ಎಂದು ಮೋದಿ ಸರ್ಕಾರದ ಪರವಾಗಿ ವಾದಿಸುವವರು ಹೇಳುತ್ತಾರೆ.

ಈ ಹಿನ್ನೆಲೆಯಲ್ಲಿ ಟ್ವಿಟರ್‌ನಲ್ಲಿಯೂ ಸಾಕಷ್ಟು ಚರ್ಚೆಯಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಷ್ ಸಿಸೊಡಿಯ ಮತ್ತು ಇನ್ನೂ ಹಲವರು ಸೋಮವಾರ ರಾತ್ರಿಯಿಡೀ ಲೆಫ್ಟಿನೆಂಟ್ ಗವರ್ನರ್ ಅವರ ಮನೆಮುಂದೆ ಧರಣಿ ಕುಳಿತು ಐಎಎಸ್ ಅಧಿಕಾರಿಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಅಗತ್ಯವಿದೆಯೇ ಎನ್ನುವುದು ಹಲವು ಟ್ವೀಟಿಗರ ಪ್ರಶ್ನೆಯಾಗಿದೆ. ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರು ಟ್ವೀಟ್ ಮಾಡಿ, “ದೆಹಲಿಯಲ್ಲಿ ಆಡಳಿತಶಾಹಿ ಮತ್ತು ಸರ್ಕಾರದ ನಡುವೆ ಸಮಸ್ಯೆ ಏರ್ಪಟ್ಟಿದೆ. ಅಧಿಕಾರಿಗಳು ಕಳೆದ ಮೂರು ತಿಂಗಳಿಂದ ಸರ್ಕಾರದ ಜೊತೆಗೆ ಅಸಹಕಾರ ಚಳವಳಿ ನಡೆಸುತ್ತಿದ್ದಾರೆ ಎನ್ನುವುದನ್ನು ಮಾಧ್ಯಮದವರು ಮತ್ತು ಜನತೆ ತಿಳಿದುಕೊಳ್ಳಲು ದೆಹಲಿ ಮುಖ್ಯಮಂತ್ರಿ ಲೆಫ್ಟಿನೆಂಟ್ ಗವರ್ನರ್ ಮನೆ ಮುಂದೆ 15 ಗಂಟೆಗೂ ಮೀರಿ ಧರಣಿ ಕುಳಿತುಕೊಳ್ಳಬೇಕಾಯಿತು. ಈಗಲೂ ಸಮಸ್ಯೆ ಬಗೆಹರಿದಿಲ್ಲ. ಎಲ್ಲಾದರೂ ಇಂತಹ ಪ್ರಕರಣವನ್ನು ಕೇಳಿದ್ದಿದೆಯೇ? ದೆಹಲಿ ಲೆಫ್ಟಿನೆಂಟ್ ಗವರ್ನರ್ ಶೀಘ್ರವೇ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು,” ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಪತ್ರಕರ್ತ ಸುನೀಲ್ ಜೈನ್ ಅವರು, “ಅರವಿಂದ ಕೇಜ್ರಿವಾಲ್ ಅವರು ಮುಖ್ಯ ಕಾರ್ಯದರ್ಶಿಗೆ ಹೊಡೆದಿರುವ ಸಣ್ಣ ವಿಚಾರವೂ ಸಮಸ್ಯೆಗೆ ಕಾರಣವಾಗಿರಬಹುದು. ಇತರ ಕಡೆಯಲ್ಲಿ ಇಂತಹ ಘಟನೆಗಳು ನಡೆಯುವುದೂ ಸಾಧ್ಯವಿಲ್ಲವೇನೋ,” ಎಂದು ಟ್ವೀಟ್ ಮಾಡಿದ್ದಾರೆ. ಆದರೆ, ಪತ್ರಕರ್ತೆ ಸ್ವಾತಿ ಚತುರ್ವೇದಿ ಟ್ವೀಟ್ ಮಾಡಿ, “ಅರವಿಂದ ಕೇಜ್ರಿವಾಲ್ ಅವರು ಮುಖ್ಯಕಾರ್ಯದರ್ಶಿಗೆ ಹೊಡೆದಿರುವುದು ಸಾಬೀತಾಗಿದೆಯೇ? ಈ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆಯೇ? ಐಎಎಸ್ ಅಧಿಕಾರಿಗಳು ತಿಂಗಳಾನುಗಟ್ಟಲೆ ಮುಷ್ಕರ ಹೂಡಿ ದೆಹಲಿ ಜನರು ಏಕೆ ಪರಿತಪಿಸಬೇಕು? ಇದು ನಿಯಮಗಳಿಗೆ ವಿರುದ್ಧ. ಲೆಫ್ಟಿನೆಂಟ್ ಗವರ್ನರ್ ಅವರ ಪ್ರಚೋದನೆಯ ಹಿನ್ನೆಲೆ ಇದಕ್ಕಿರಬಹುದು,” ಎಂದಿದ್ದಾರೆ. ಪತ್ರಕರ್ತ ಆಶುತೋಶ್ ಮಿಶ್ರಾ ಟ್ವೀಟ್ ಮಾಡಿ, “ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ನಾಲ್ಕು ತಿಂಗಳ ಅವಧಿ ಸಾಕಷ್ಟಾಯಿತು. ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ಮಾಡಿದ ಶಾಸಕರ ಮೇಲೇಕೆ ಕ್ರಮ ಕೈಗೊಳ್ಳಲಾಗಿಲ್ಲ? ಆದರೆ, ಇತರ ಅಧಿಕಾರಿಗಳು ಕೆಲಸಕ್ಕೆ ಏಕೆ ಹಾಜರಾಗಿಲ್ಲ? ಯಾವ ಆಡಳಿತ ನಿಯಮದ ಅಡಿಯಲ್ಲಿ ಅವರು ಅಘೋಷಿತ ಮುಷ್ಕರ ಹೂಡುವ ಅವಕಾಶ ಹೊಂದಿದ್ದಾರೆ,” ಎಂದು ಪ್ರಶ್ನಿಸಿದ್ದಾರೆ. ಪತ್ರಕರ್ತೆ ನಿಧಿ ರಾಜ್ದಾನ್, “ಐಎಎಸ್ ಅಧಿಕಾರಿಗಳು ಏಕೆ ಮುಷ್ಕರ ಹೂಡಿದ್ದಾರೆ? ಮುಖ್ಯ ಕಾರ್ಯದರ್ಶಿಯವರ ಮೇಲೆ ಹಲ್ಲೆಯಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿರುವುದು ನಿಜ. ಆ ಬಗ್ಗೆ ಪೊಲೀಸರು ವಿಚಾರಣೆ ನಡೆಸಿ ಆಗಿದೆ. ಈ ವಿಚಾರಣೆ ಕೇಂದ್ರದ ಅಡಿಯಲ್ಲಿ ಬರುತ್ತದೆ. ಹೀಗಿರುವಾಗ ಮುಷ್ಕರ ಏಕೆ? ದೆಹಲಿ ಜನರಿಗೇಕೆ ಸಮಸ್ಯೆ ಒಡ್ಡಬೇಕು? ಪೊಲೀಸರು ಅವರ ಕೆಲಸ ಮಾಡಲಿ,” ಎಂದು ಟ್ವೀಟ್ ಮಾಡಿದ್ದಾರೆ.

ಅಧಿಕಾರಿಗಳು ಮೂರು ತಿಂಗಳಿಂದ ಅಸಹಕಾರ ತೋರುತ್ತಿದ್ದರೂ ಅರವಿಂದ ಕೇಜ್ರಿವಾಲ್ ಅವರು ಇಷ್ಟು ತಡವಾಗಿ ಲೆಫ್ಟಿನೆಂಟ್ ಜನರಲ್ ಅವರ ಬಳಿಗೆ ಹೋಗಿದ್ದೇಕೆ ಎನ್ನುವ ಪ್ರಶ್ನೆಗಳೂ ಎದ್ದಿವೆ. ಮಾಧ್ಯಮ ಸಲಹೆಗಾರ ನಿಖಿಲ್ ಖಾರೂ ಅವರು ಇದೇ ಪ್ರಶ್ನೆ ಎತ್ತಿದ್ದಾರೆ. “ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜಾಗೃತರಾಗಲು ಮೂರು ತಿಂಗಳು ಹಿಡಿಯಿತು. ಐಎಎಸ್ ಅಧಿಕಾರಿಯನ್ನು ಮನೆಗೆ ಕರೆದು ಹೊಡೆಯದೆ ಇದ್ದಿದ್ದರೆ ಈಗಿನ ಬೆಳವಣಿಗೆ ಆಗುತ್ತಲೇ ಇರಲಿಲ್ಲ. ಇದನ್ನು ಲೆಫ್ಟಿನೆಂಟ್ ಗವರ್ನರ್ ಜವಾಬ್ದಾರಿಯಾಗಿ ಈಗ ಮುಂದಿಡಲಾಗುತ್ತದೆ. ಬಹಳ ಉತ್ತಮ ತಂತ್ರಗಾರಿಕೆ,” ಎಂದು ನಿಖಿಲ್ ಟ್ವೀಟ್ ಮಾಡಿದ್ದಾರೆ. ಆದರೆ, ಎಲ್ಲ ಟ್ವೀಟಿಗರೂ ಈ ವಾದವನ್ನು ಒಪ್ಪುತ್ತಿಲ್ಲ. “ಲೆಫ್ಟಿನೆಂಟ್ ಗವರ್ನರ್ ಅವರು ನೀಡಿರುವ ಮಾಧ್ಯಮ ಹೇಳಿಕೆಯು ಐಎಎಸ್ ಅಧಿಕಾರಿಗಳು ಅಸಹಕಾರ ಹೂಡಿರುವುದು ಅವರಿಗೆ ಗೊತ್ತಿದೆ ಎನ್ನುವುದನ್ನು ತಿಳಿಸುತ್ತದೆ. ಈ ಸಮಸ್ಯೆ ಪರಿಹರಿಸುವುದು ಲೆಫ್ಟಿನೆಂಟ್ ಗವರ್ನರ್‌ ಸಾಂವಿಧಾನಿಕ ಜವಾಬ್ದಾರಿ. ದೆಹಲಿ ಜನತೆಗಾಗಿಯಾದರೂ ಸಮಸ್ಯೆ ಬಗೆಹರಿಸಿ,” ಎಂದು ಆಪ್ ಪಕ್ಷದ ಆತಿಶಿ ಮಾರ್ಲೆನಾ ಟ್ವೀಟ್ ಮಾಡಿದ್ದಾರೆ. ಆಶುತೋಶ್ ಮಿಶ್ರಾ ಅವರು ಲೆಫ್ಟಿನೆಂಟ್ ಗವರ್ನರ್ ಅವರಿಂದಲೇ ಈಗಿನ ಸಮಸ್ಯೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಆಪ್ ಸರ್ಕಾರವು ಐಎಎಸ್ ಅಧಿಕಾರಿಗಳ ಅಸಹಕಾರ ಚಳವಳಿಗೆ ಅಂತ್ಯ ಹಾಡಲು ಮೂರು ತಿಂಗಳಿನಿಂದ ಸಾಕಷ್ಟು ಪ್ರಯತ್ನ ನಡೆಸಿದೆ ಎಂದೂ ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ದಾಖಲೆಗಳನ್ನೂ ಟ್ವೀಟ್ ಮಾಡಿದ್ದಾರೆ.

ಬಹಳಷ್ಟು ಮಂದಿ ಅಧಿಕಾರಿಗಳು ಮತ್ತು ಸರ್ಕಾರದ ಸಂಘರ್ಷದ ನಡುವೆ ದೆಹಲಿಯ ಜನರು ಹೆಣಗುತ್ತಿದ್ದಾರೆ ಎನ್ನುವ ವಿಷಯವನ್ನೇ ಮುಖ್ಯವಾಗಿ ಟ್ವಿಟರ್‌ನಲ್ಲಿ ಚರ್ಚಿಸಲಾಗಿದೆ. ಪತ್ರಕರ್ತೆ ಸಾಗರಿಕಾ ಘೋಷ್ ಟ್ವೀಟ್ ಮಾಡಿ, “ಪ್ರಿಯ ದೆಹಲಿ ಅಧಿಕಾರಿಗಳೇ, ನಿಮ್ಮ ಅಲ್ಪಾವಧಿ ಸಂಘರ್ಷಕ್ಕಾಗಿ ದೆಹಲಿಯ ಜನತೆ ಧೀರ್ಘಾವಧಿ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ. ನಿಮ್ಮ ಸೇವೆಯ ಉನ್ನತ ಮೌಲ್ಯಗಳನ್ನು ನೆನಪಿಸಿಕೊಳ್ಳಿ,” ಎಂದಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More