ಪುತ್ರನ ಗೆಲುವಿನ ಸಂಭ್ರಮವನ್ನೂ ಆವರಿಸಿದ ಸಿದ್ದರಾಮಯ್ಯ ಪರಾಜಯದ ಪರಾಮರ್ಶೆ

ಪುತ್ರ ಯತೀಂದ್ರ ಅವರನ್ನು ಗೆಲ್ಲಿಸಿದ ವರುಣಾ ಕ್ಷೇತ್ರದ ಮತದಾರರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ, ಖುಷಿ ಮಧ್ಯೆ ನೋವನ್ನೂ ಪ್ರಕಟಿಸಿದರು. ಒಂದು ಹಂತದಲ್ಲಿ ಅತ್ಯಂತ ಭಾವುಕರಾದ ಅವರ ಕಣ್ಣಂಚು ತೇವಗೊಂಡಿತು ಕೂಡ 

ಒಂದು ಕಡೆ ಗೆಲುವಿನ ಸಂತೋಷ. ಮತ್ತೊಂದೆಡೆ, ಸೋಲಿನ ನೋವು. ಒಂದು ಗೆಲುವನ್ನು ಸಂಭ್ರಮಿಸಲು ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಆ ಮತ್ತೊಂದು ಸೋಲಿನ ನೋವೇ ಹೆಚ್ಚು ಕಾಡಿತು. ಸೋಲಿಗೆ ಸಾಂತ್ವನ, “ಧೈರ್ಯಗೆಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ,’’ ಎನ್ನುವ ಅಭಯ. ಹಾರ, ಶಾಲು, ಮೈಸೂರು ಪೇಟ ತೊಡಿಸಿ, ಜೊತೆಗೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಭರಾಟೆ. “ನೀವು ಮಾಜಿ ಆಗಿರಬಹುದು. ಆದರೆ, ನಮ್ಮೆಲ್ಲರ ಮನದಲ್ಲಿ ನೀವೇ ಯಾವತ್ತೂ ಮುಖ್ಯಮಂತ್ರಿ,’’ ಎನ್ನುವ ಅಭಿಮಾನದ ಮಾತು. “ಎಷ್ಟೆಲ್ಲ ಒಳ್ಳೆಯ ಕೆಲಸ ಮಾಡಿಯೂ ಸೋಲಲು ಕಾರಣವೇನು?’’ ಎನ್ನುವ ಜಿಜ್ಞಾಸೆ.

-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲಿನ ನಂತರ ಮೊದಲ ಬಾರಿ ಮೈಸೂರಿಗೆ ಆಗಮಿಸಿದಾಗ ಕಂಡ ನೋಟಗಳಿವು. ಪುತ್ರ ಯತೀಂದ್ರ ಅವರನ್ನು ಗೆಲ್ಲಿಸಿದ ವರುಣಾ ಕ್ಷೇತ್ರದ ಮತದಾರರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ, ಖುಷಿಯ ಮಧ್ಯೆಯೇ ನೋವನ್ನೂ ಪ್ರಕಟಿಸಿದರು. ಒಂದು ಹಂತದಲ್ಲಿ ಅತ್ಯಂತ ಭಾವುಕರಾದ ಅವರ ಕಣ್ಣಂಚು ತೇವಗೊಂಡಿತು ಕೂಡ. ಈ ಮಧ್ಯೆಯೇ ೨೦೧೯ರ ಸಂಸತ್ ಚುನಾವಣೆಗೆ ಸಜ್ಜಾಗುವಂತೆ ಮುಖಂಡರು,ಕಾರ್ಯಕರ್ತರಿಗೆ ಹುರುಪು ತುಂಬಿದರು. ಕೋಮು ಶಕ್ತಿಗಳನ್ನು ಅಧಿಕಾರದಿಂದ ದೂರ ಇಡಲೆಂದೇ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿದ್ದು, ಮುಂದಿನ ಐದು ವರ್ಷ ಅಧಿಕಾರ ನಡೆಸಲಿದೆ; ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಎಲ್ಲಾ ಜನ ಕಲ್ಯಾಣ ಕಾರ್ಯಕ್ರಮಗಳು ಮೈತ್ರಿ ಸರ್ಕಾರದಲ್ಲೂ ಮುಂದುವರಿಯಲಿವೆ ಎಂದು ಭರವಸೆ ನೀಡಿದರು. ಕಾರ್ಯಕ್ರಮಕ್ಕೆ ಮೊದಲು ಮತ್ತು ನಂತರ ಅವರ ನಿವಾಸಕ್ಕೆ ಎಡತಾಕಿದ ನೂರಾರು ಅಭಿಮಾನಿಗಳು, ಹಿತೈಷಿಗಳು, ಹಿಂಬಾಲಕರು ಗೆಲವು-ಸೋಲಿನ ಸಿಹಿ-ಕಹಿಗಳ ಭಾಗವಾದರು. ಹಲವರ ಧ್ವನಿಯಲ್ಲಿ ಸಂತೈಸುವಿಕೆಯಿತ್ತು. ಹೀಗಾಗಬಾರದಿತ್ತು ಎನ್ನುವ ಹಳಹಳಿಕೆಯಿತ್ತು.

ಹೀಗೇ, ಅಭಿಮಾನಿಯೊಬ್ಬ ಹಾರ ಹಾಕಿ ಪೇಟ ತೊಡಿಸಲು ಮುಂದಾದಾಗ ಸಿದ್ದರಾಮಯ್ಯ, “ಜನರೇ ಟೋಪಿ ಹಾಕಿದಾರೆ. ನೀನ್ಯಾಕೆ ಹಾಕ್ತಿಯಪ್ಪ...’’ ಎಂದು ಹೇಳಿದ್ದು ಗಂಭೀರ ವಾತಾವರಣದಲ್ಲೂ ನಗೆಯನ್ನು ಚಿಮ್ಮಿಸಿತು ಮತ್ತು “ಜನರೇ ಟೋಪಿ ಹಾಕಿದಾರೆ,’’ ಎನ್ನುವ ಅವರ ಮಾತನ್ನು ಅಲ್ಲಿದ್ದವರು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಂಡರು. ನಂತರ ಸಾರ್ವಜನಿಕ ಸಮಾರಂಭದಲ್ಲಿ ಕೂಡ ಅಭಿಮಾನಿಗಳಿಂದ ಹಾರ ಸ್ವೀಕರಿಸಿದರೇ ಹೊರತು, ‘ಟೋಪಿ’ (ಪೇಟ) ಹಾಕಿಸಿಕೊಳ್ಳಲು ಅವರು ಸುತರಾಂ ಒಪ್ಪಲಿಲ್ಲ. ಸಿದ್ದರಾಮಯ್ಯ ಅವರನ್ನು ಕಾಣಲು ಬಂದ ನೂತನ ಸಚಿವ ಪುಟ್ಟರಂಗಶೆಟ್ಟರು, “ಪ್ರಮಾಣವಚನ ಸಮಾರಂಭದಲ್ಲಿ ಕಾಣಲಿಲ್ವಲ್ಲ ಸರ್?’’ ಎಂದು ಕೇಳಿದರು. “ಅಧಿಕಾರ ಬಂದಾಗ‌ ನಾವು ಕಾಣಲ್ಲ,’’ ಎಂದು ಶೆಟ್ಟರ ಕಾಲೆಳೆದು ರೇಗಿಸಿದರು ಸಿದ್ದರಾಮಯ್ಯ. ಎಂದಿನಂತೆ ಬಂದು ಹೋಗುವವರ ಸಂಖ್ಯೆ ದೊಡ್ಡದಿತ್ತು. ಆದರೆ, ಯಾವತ್ತೂ ಸಿದ್ದರಾಮಯ್ಯನವರ ಎಡ-ಬಲದಲ್ಲಿರುತ್ತಿದ್ದ ಕೆಲವು ವ್ಯಕ್ತಿಗಳು ಕಾಣದ್ದಿದುದು ಅನೇಕ ರಿತಿ ಚರ್ಚೆಗೂ ಕಾರಣವಾಯಿತು. “ಬಯ್ಯುತ್ತಾರೆ,’’ ಎನ್ನುವ ಭಯದಿಂದ ಕೆಲವರು ದೂರ ಕಾಯ್ದುಕೊಂಡಿದ್ದರಂತೆ.

‘ಶಾಸಕ, ಮಂತ್ರಿ ಸ್ಥಾನ ಸಿದ್ದರಾಮಯ್ಯ ಭಿಕ್ಷೆ’ ಎಂದ ಸಚಿವ

ವರುಣಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅನೇಕ ಮುಖಂಡರು ಸಿದ್ದರಾಮಯ್ಯ ಅವರ ವೈಯಕ್ತಿಕ ಮತ್ತು ಪಕ್ಷದ ಸೋಲಿನ ಬಗ್ಗೆಯೇ ಹೆಚ್ಚು ಪ್ರಸ್ತಾಪಿಸಿದರು. “ಎಷ್ಟೆಲ್ಲ ಒಳ್ಳೆಯ ಕೆಲಸ ಮಾಡಿರುವ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿಲ್ಲ ಎನ್ನುವ ನೋವು ಕಾಡುತ್ತಿದೆ. ದೂರದ ಬಾದಾಮಿಗೆ ಹೋಗಿ ಗೆಲ್ಲುವ ಸ್ಥಿತಿ ಬಂದಿದ್ದು ಮತ್ತೊಂದು ಬೇಸರ,’’ ಎಂದು ಹೇಳಿದ ಕೆಪಿಸಿಸಿ ಕಾರ್ಯದರ್ಶಿ ಎಚ್‌ ಸಿ ಬಸವರಾಜು, “ನಿಮಗೆ ನೋವಾಗಿದೆ ಎನ್ನುವುದು ಗೊತ್ತು. ನಿಮ್ಮ ಜೊತೆ ನಾವಿದ್ದೇವೆ. ನೀವೂ ನಮ್ಮ ಜೊತೆಗಿರಿ,’’ ಎಂದು ಮನವಿ ಮಾಡಿದರು. “ಸಿದ್ದರಾಮಯ್ಯ ಅವರಷ್ಟು ಒಳ್ಳೆಯ ಕೆಲಸ ಮಾಡಿದವರನ್ನು ನಾನು ಕಂಡಿಲ್ಲ. ನಾನು ಶಾಸಕನಾಗಿದ್ದು, ಸಚಿವನಾಗಿದ್ದು ಸಿದ್ದರಾಮಯ್ಯ ಅವರು ನೀಡಿದ ಭಿಕ್ಷೆ. ಹೆಚ್ಚು ಸ್ಥಾನ ಗೆದ್ದ ಜಾತಿಯವರು ಮಂತ್ರಿ ಪದವಿಗೆ ಮೇಲಾಟ ನಡೆಸುತ್ತಿದ್ದಾಗ ಉಪ್ಪಾರ ಸಮುದಾಯದಿಂದ ಒಬ್ಬನೇ ಗೆದ್ದಿದ್ದರೂ ನನ್ನನ್ನು ಮಂತ್ರಿ ಮಾಡಿದ್ದಾರೆ. ನಮ್ಮ ಸಮಾಜ ಅವರಿಗೆ ಕೃತಜ್ಞವಾಗಿರುತ್ತದೆ. ಮಾಜಿ ಆದರೂ ನನಗೆ ಅವರೇ ಯಾವತ್ತೂ ಮುಖ್ಯಮಂತ್ರಿ. ಮತ್ತೊಮ್ಮೆ ಅವರನ್ನು ಆ ಸ್ಥಾನದಲ್ಲಿ ನೋಡಬೇಕು,’’ ಎಂದು ಆಶಿಸಿದವರು ಸಚಿವ ಪುಟ್ಟರಂಗಶೆಟ್ಟಿ.

‘ಜೈ ಹಿಂದ್, ಜೈ ಸಿದ್ದರಾಮಯ್ಯ’ ಎಂದ ಐವಾನ್‌!

“ಪ್ರಭಾವಿ ಪ್ರಧಾನಿ ಎನಿಸಿಕೊಂಡಿರುವ ನರೇಂದ್ರ ಮೋದಿಯವರಿಗೆ ದೊಡ್ಡ ಮಟ್ಟದಲ್ಲಿ ಸವಾಲೊಡ್ಡಿದ ಸಿದ್ದರಾಮಯ್ಯ ಅವರನ್ನು ದೇಶದ ಮಾಧ್ಯಮಗಳು ಭವಿಷ್ಯದ ಪ್ರಧಾನಿ ಎನ್ನುವಂತೆ ಬಿಂಬಿಸಿದವು. ಆದರೆ, ಸ್ವಕ್ಷೇತ್ರದ ಮತ್ತು ನಂಬಿದ ಜನರಿಗೇ ಅವರು ಬೇಡವಾದರು. ಅಕ್ಕಪಕ್ಕದಲ್ಲಿದ್ದವರೇ ಮೋಸ ಮಾಡಿದರು. ತುಂಬಾ ಒಳ್ಳೆಯದು ಆದ ನಂತರ ತುಂಬಾ ಕೆಟ್ಟದಾಗುತ್ತದಂತೆ. ಈಗ ತುಂಬಾ ಕೆಟ್ಟದ್ದಾಗಿದೆ. ಮುಂದೆ ಒಳ್ಳೆಯದೇ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿರೋಣ,’’ ಎಂದದ್ದು ವಿಧಾನ ಪರಿಷತ್‌ ಸದಸ್ಯ ಧರ್ಮಸೇನಾ. ಮತ್ತೊಬ್ಬ ವಿಧಾನ ಪರಿಷತ್‌ ಸದಸ್ಯ ಐವಾನ್‌ ಡಿಸೋಜಾ, “ಸಿದ್ದರಾಮಯ್ಯ ಅವರ ನಾಯಕತ್ವ ರಾಜ್ಯಕ್ಕೆ, ದೇಶಕ್ಕೆ ಅಗತ್ಯವಿದೆ. ಕಾಂಗ್ರೆಸ್ ಪಕ್ಷಕ್ಕೆ ಇಂಥ ಸೋಲು, ನೋವು ಹೊಸತಲ್ಲ. ಮತ್ತೆ ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ನಾವು ನಿಮ್ಮ ಜೊತೆಗಿದ್ದೇವೆ. ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ. ನೀವೇ ನಮ್ಮ ನಾಯಕರು. ಜೈ ಹಿಂದ್, ಜೈ ಸಿದ್ದರಾಮಯ್ಯ,’’ ಎಂದು ಘೋಷಿಸಿ ಗಮನ ಸೆಳೆದರು.

“ಐದು ವರ್ಷ ಸಮರ್ಥ ಆಡಳಿತ ನೀಡಿದ ಮತ್ತು ನರೇಂದ್ರ ಮೋದಿಯ ನಿದ್ರೆಗೆಡಿಸಿದ ಸಿದ್ದರಾಮಯ್ಯ ಸೋಲಿಗೆ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರ ಕಾರಣ,’’ ಎಂದ ಮಾಜಿ ಸಚಿವ ಸಿ ಎಚ್‌ ವಿಜಯಶಂಕರ್, “ ಇದು ಸೋಲೇ ಹೊರತು ಸಾವಲ್ಲ. ಇದೆಲ್ಲ ತಾತ್ಕಾಲಿಕವಾದ ಸೈದ್ಧಾಂತಿಕ ಹಿನ್ನಡೆ. ಪುಲಕೇಶಿ ನಾಡು ಬಾದಾಮಿಯಲ್ಲಿ ಗೆದ್ದಿರುವ ನಿಮಗೆ ಭವಿಷ್ಯದಲ್ಲಿ ಹಿನ್ನಡೆಯಿಲ್ಲ. ಧೈರ್ಯದಿಂದ ಹೆಜ್ಜೆ ಹಾಕಿ,’’ ಎಂದು ಸಿದ್ದರಾಮಯ್ಯ ಅವರನ್ನು ಹುರಿದುಂಬಿಸಿದರು. ಸಂಸದ ಧ್ರುವನಾರಾಯಣ ಮಾತಿನಲ್ಲೂ ಇದೇ ಭಾವ ವ್ಯಕ್ತವಾಯಿತು.

ಸೋಲಿಗೆ ಅಂಜಲ್ಲ, ಟೀಕೆಗೆ ತಲೆ ಕೆಡೆಸಿಕೊಳ್ಳಲ್ಲ ಎಂದ ಸಿದ್ದು

ಕಡಲೆ ಕಾಯಿ ಮೆಲ್ಲುತ್ತ, ಹಾರ ತುರಾಯಿಗೆ ಕೊರಳೊಡ್ಡುತ್ತ ಎಲ್ಲರ ಮಾತುಗಳನ್ನು ಆಲಿಸಿದ ಸಿದ್ದರಾಮಯ್ಯ, “ನಾನು ಸೋತಿರುವುದು ಇದೇ ಮೊದಲೇನಲ್ಲ. ಯಾವತ್ತೂ ಸೋಲು-ಗೆಲುವನ್ನು ಸಮಭಾವದಿಂದ ಸ್ವೀಕರಿಸಿದ್ದೇನೆ. ಈಗಲೂ ಅಷ್ಟೆ, ಜನರು ಕೊಟ್ಟ ತೀರ್ಪನ್ನು ತಲೆಬಾಗಿ ಸ್ವೀಕರಿಸಿದ್ದೇನೆ. ಸೋಲಿಗೆ ಹೆದರಿ ಓಡಿಹೋಗಲ್ಲ. ಮತ್ತೆ ಚುನಾವಣೆಯಲ್ಲಿ ನಿಲ್ಲಲ್ಲ ಎನ್ನುವ ಮಾತಿಗೆ ಬದ್ಧನಾಗಿರುತ್ತೇನೆ. ಆದರೆ, ನನ್ನನ್ನು ಬೆಂಬಲಿಸಿದವರನ್ನು ಕೈಬಿಡಲ್ಲ. ಯಾರ ಟೀಕೆಗೂ ತಲೆ ಕೆಡಿಸಿಕೊಳ್ಳುವುದಿಲ್ಲ,’’ ಎಂದು ಸ್ಪಷ್ಟಪಡಿಸಿದರು.

ಕಳೆದ ಐದು ವರ್ಷಗಳಲ್ಲಿ ತಮ್ಮ ಸರ್ಕಾರ ನೀಡಿದ ಜನಪರ ಕಾರ್ಯಕ್ರಮ, ರೂಪಿಸಿದ ಕ್ರಾಂತಿಕಾರಕ ಕಾನೂನು ಮತ್ತು ಹಗರಣಮುಕ್ತ ಸರ್ಕಾರದ ಕಾರ್ಯವೈಖರಿಯನ್ನು ಪಟ್ಟಿ ಮಾಡಿದ ಮಾಜಿ ಸಿಎಂ, “ಅನ್ನಭಾಗ್ಯದಿಂದ ರಾಜ್ಯದಲ್ಲಿ ಬರ ಇದ್ದರೂ ಜನ ಗುಳೆ ಹೋಗುವುದು ತಪ್ಪಿದೆ. ಭಿಕ್ಷೆ ಬೇಡುವ ಸ್ಥಿತಿ ಇಲ್ಲವಾಗಿದೆ. ಇದಕ್ಕಿಂತ ಒಳ್ಳೆಯ ಕಾರ್ಯಕ್ರಮ ನೀಡಲು ಸಾಧ್ಯವೇ? ಬೇರೆ ಯಾವ ರಾಜ್ಯಗಳು ಇಂಥ ಕಾರ್ಯಕ್ರಮ ನೀಡಿವೆ? ಎಷ್ಟೆಲ್ಲ ಒಳ್ಳೆ ಕೆಲಸ ಮಾಡಿಯೂ ಯಾಕೆ ಜನ ಕೈಹಿಡಿಯಲಿಲ್ಲ?’’ ಎನ್ನುವ ಯಕ್ಷ ಪ್ರಶ್ನೆಯನ್ನು ಮುಂದಿಟ್ಟರು. ತುತ್ತು ಅನ್ನಕ್ಕೂ ಸಮಸ್ಯೆ ಇದ್ದ ತಮ್ಮ ಬಾಲ್ಯದ ಅನುಭವದ ಹಿನ್ನೆಲೆಯಲ್ಲಿ ಅನ್ನಭಾಗ್ಯ ಜಾರಿಗೆ ತಂದಿದ್ದನ್ನು ನೆನೆದ ಅವರು, “ಈಗ ಎಲ್ಲರ ಮನೆಯಲ್ಲೂ ಅನ್ನ ಮಾಡ್ತಾರೆ,’’ ಎಂದು ಭಾವುಕರಾದರು. “ಅನ್ನಭಾಗ್ಯ ವಿಷಯದಲ್ಲಿ ಬಿಜೆಪಿ ಸುಳ್ಳು ಹರಡಿತು. ‘ಸಿದ್ದರಾಮಯ್ಯ ಹಿಂದೂಗಳನ್ನು ಒಡೆದರು’ ಎಂದು ಸುಳ್ಳು ಪ್ರಚಾರ ಮಾಡಿದರು. ಲಿಂಗಾಯತ ಪ್ರತ್ಯೇಕ ಧರ್ಮ ವಿಷಯದಲ್ಲೂ ಸುಳ್ಳು ಹೇಳಲಾಯಿತು. ‘ಸರಿಯಾಗಿ ಮಾತನಾಡಿಸಲ್ಲ. ಮಾತನಾಡಿಸಲು ಹೋದರೆ ಪೊಲೀಸರು ತಡೆದರು’ ಮುಂತಾದ ಸಣ್ಣ ಸಂಗತಿಗಳನ್ನೇ ದೊಡ್ಡದು ಮಾಡಿ, ಸೋಲಿಗೆ ಕಾರಣರಾದರು. ಜನ ಸತ್ಯ ಯಾವುದು, ಸುಳ್ಳು ಯಾವುದು ಎನ್ನುವುದನ್ನು ಒರೆಗೆ ಹಚ್ಚದಿದ್ದರೆ ಸುಳ್ಳರು, ಡೋಂಗಿಗಳು ಮೆರೆಯುವಂತಾಗುತ್ತದೆ,’’ ಎಂದು ವಿಷಾದಿಸಿದರು. ಮೋದಿ, ಅಮಿತ್‌ ಶಾ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು. “ಬಿಜೆಪಿಯ ಸುಳ್ಳು, ಡೋಂಗಿತನವನ್ನು ಮನೆಮನೆಗೆ ಮುಟ್ಟಿಸಿ,’’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಬಾದಾಮಿಯಲ್ಲೇ ಮನೆ ಮಾಡಲಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ

ಮಾತಿನ ಮಧ್ಯೆ ಸುಳಿದುಹೋದ ಕ್ಷೇತ್ರಾಂತರ ವಿಷಾದ

೨೦೦೮ ಮತ್ತು ೨೦೧೩ರಲ್ಲಿ ತಮಗೆ ನೀಡಿದ್ದಕ್ಕಿಂತ ಹೆಚ್ಚು ಮತಗಳ ಅಂತರದಿಂದ ಪುತ್ರ ಯತೀಂದ್ರ ಅವರನ್ನು ಗೆಲ್ಲಿಸಿದ ವರುಣಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಹೇಳಿದ ಸಿದ್ದರಾಮಯ್ಯ, “ಇಬ್ಬರೂ ಸೇರಿ ಕ್ಷೇತ್ರದ ಜನರ ಋಣ ತೀರಿಸುತ್ತೇವೆ,’’ ಎಂದು ಅಭಯ ನೀಡಿದರು. “ನನ್ನನ್ನು ಎರಡು ಬಾರಿ ಗೆಲ್ಲಿಸಿದಾಗ ಒಮ್ಮೆ ಪ್ರತಿಪಕ್ಷ ನಾಯಕ, ಮತ್ತೊಮ್ಮೆ ಮುಖ್ಯಮಂತ್ರಿಯಾದೆ. ಈ ಬಾರಿ ಇಲ್ಲೇ ನಿಂತಿದ್ದರೂ ನನ್ನನ್ನು ಆಯ್ಕೆ ಮಾಡುತ್ತಿದ್ದಿರಿ,’’ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರ ಮಾತಿನಲ್ಲಿ, ಈ ಬಾರಿ ಚಾಮುಂಡೇಶ್ವರಿಗೆ ಹೋಗಿ ತಪ್ಪು ಮಾಡಿದೆ ಎನ್ನುವ ಭಾವ ಕ್ಷಣ ಹಾದುಹೋಯಿತಾದರೂ ಅದನ್ನು ತೋರಗೊಡಲಿಲ್ಲ. ಬಹಿರಂಗ ಕಾರ್ಯಕ್ರಮ ಮತ್ತು ಸುದ್ದಿಗಾರರೊಂದಿಗೆ ಅವರು ಆಡಿದ ಮತ್ತಷ್ಟು ಮಾತಿನ ಮುಖ್ಯಾಂಶಗಳು ಹೀಗಿದ್ದವು:

  • ಐದು ವರ್ಷಗಳಲ್ಲಿ ಆರೂವರೆ ಕೋಟಿ ಕನ್ನಡಿಗರಿಗೆ ಒಂದಿಲ್ಲೊಂದು ಕಾರ್ಯಕ್ರಮವನ್ನು ನೀಡಲಾಗಿದೆ. ರಾಜ್ಯದ ಸಂಪತನ್ನು ೧.೬ ಲಕ್ಷ ಕೋಟಿಯಷ್ಟು ಹೆಚ್ಚಿಸಲಾಗಿದೆ. ರಾಜ್ಯವನ್ನು ಲೂಟಿ ಹೊಡೆದಿದ್ದರೆ ಇದನ್ನೆಲ್ಲ ಮಾಡುವುದು ಸಾಧ್ಯವಾಗುತ್ತಿತ್ತೇ?
  • ಎಟಿಪಿ, ಟಿಎಸ್ಪಿ ಅನುದಾನ ಬಳಕೆಗೆ ಕಾನೂನು ಮಾಡಿದ್ದು ಮತ್ತು ಗುತ್ತಿಗೆಯಲ್ಲಿ ಮೀಸಲಾತಿ ತಂದದ್ದರ ಹಿಂದಿನ ಆಶಯವನ್ನು ದಲಿತ ಸಮುದಾಯ ಅರ್ಥ ಮಾಡಿಕೊಳ್ಳಬೇಕಿತ್ತು. ದುರ್ಬಲರಿಗೆ ಆರ್ಥಿಕ ಶಕ್ತಿಯನ್ನು ನೀಡಿದರಷ್ಟೆ ಅವರು ಮುಖ್ಯವಾಹಿನಿಗೆ ಬರುವುದು ಸಾಧ್ಯ ಎನ್ನುವ ಕಾರಣಕ್ಕೆ ಇಂಥ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ರೂಪಿಸಿತ್ತು. ಅಪಪ್ರಚಾರ ಅದನ್ನೆಲ್ಲ ಮರೆಗೆ ಸರಿಸಿತು. ಆದರೂ, ಬಡವರು, ದಲಿತರು, ಹಿಂದುಳಿದ ವರ್ಗದ ಜನರು ಮತ್ತು ರೈತ ಸಮುದಾಯಕ್ಕೆ ಆರ್ಥಿಕ, ಸಾಮಾಜಿಕ ಶಕ್ತಿ ನೀಡಿದ ತೃಪ್ತಿ ಇದೆ.
  • ರಾಜಕೀಯ ಎನ್ನುವುದು ನಿಂತ ನೀರಲ್ಲ. ಕೂಡುವುದು, ಕಳೆಯುವುದೂ ಅಲ್ಲ. ಅಂಬೇಡ್ಕರ್‌‌, ಇಂದಿರಾ ಗಾಂಧಿ, ದೇವರಾಜ ಅರಸು ಅವರಂಥವರನ್ನೇ ಜನ ಸೋಲಿಸಿದ್ದರು. ಇತಿಹಾಸವನ್ನು ನೋಡಿದರೆ, ಒಳ್ಳೆಯವರಿಗೇ ಕಷ್ಟಗಳು ಬರುವುದು ಜಾಸ್ತಿ. ಆ ಕಷ್ಟಗಳನ್ನು ಎದುರಿಸುವಂಥ ಶಕ್ತಿಯನ್ನು ನೀಡುವವರು ನೀವು.
  • ಯಾರೂ ಧೃತಿಗೆಡಬೇಕಿಲ್ಲ. ಮೊದಿ ಅಲೆ ಎಲ್ಲೆಡೆ ಮಾಯವಾಗಿದೆ. ೨೦೧೯ರಲ್ಲಿ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ರಾಹುಲ್‌ ಗಾಂಧಿ ಪ್ರಧಾನಿಯಾಗುತ್ತಾರೆ. ಬಿಜೆಪಿಯವರು ಹೇಳುವ ಸುಳ್ಳುಗಳು ಹೆಚ್ಚು ಕಾಲ ನಡೆಯುವುದಿಲ್ಲ. ಜನ ಬದಲಾವಣೆಯ ತೀರ್ಪು ಕೊಟ್ಟೇ ಕೊಡುತ್ತಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು.
  • ಲೋಕಸಭಾ ಚುನಾವಣಾಗೆ ಸ್ಪರ್ಧಿಸುತ್ತೇನೆನ್ನುವುದು ಮಾಧ್ಯಮಗಳ ಸೃಷ್ಟಿ. ಮತ್ತೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವ ಹೇಳಿಕೆಗೆ ಬದ್ಧನಾಗಿದ್ದೇನೆ.
  • ನಾನಂತೂ ವಿಧಾನಸೌಧದಲ್ಲಿ ಭ್ರಷ್ಟಾಚಾರ ಕಂಡಿಲ್ಲ. ಅವರ ಕಣ್ಣಿಗೆ (ಎಚ್‌ ಡಿ ಕುಮಾರಸ್ವಾಮಿ) ಕಂಡರೆ ನಿಯಂತ್ರಿಸಲಿ. ಚಾಮುಂಡೇಶ್ವರಿಯಲ್ಲಿ ನನ್ನ ಸೋಲು ಮಾಧ್ಯಮಗಳಿಗೆ ಅಚ್ಚರಿಯಾಗಿರಬಹುದು, ನನಗಲ್ಲ. ಜನರ ತೀರ್ಪನ್ನು ಸ್ವೀಕರಿಸಿದ್ದೇನೆ. ಬಾದಾಮಿ ಕ್ಷೇತ್ರದ ಜನ ನನ್ನ ಕೈಹಿಡಿದಿದ್ದಾರೆ. ಚಾಮುಂಡೇಶ್ವರಿ ಜನ ನನ್ನ ಕೈಹಿಡಿದಿಲ್ಲ, ಅಷ್ಟೆ. ಸೋಲು ಹೇಗಾಯ್ತು ಎನ್ನುವುದನ್ನೆಲ್ಲ ವಿಶ್ಲೇಷಿಸಲ್ಲ.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More