ಇನ್ಫೊಸಿಸ್‌ ನಾರಾಯಣಮೂರ್ತಿ- ಎಚ್‌ಡಿಕೆ ಭೇಟಿ ಕುತೂಹಲ ಹುಟ್ಟಿಸಲು ಕಾರಣವೇನು?

೧೫ ವರ್ಷಗಳ ಹಿಂದೆ ಇನ್ಫೊಸಿಸ್‌ ಸಂಸ್ಥಾಪಕ ಎನ್‌ ಆರ್‌ ನಾರಾಯಣಮೂರ್ತಿ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ ಬಹಿರಂಗ ವಾಗ್ದಾಳಿ ನಡೆಸಿದ್ದರು. ಬದಲಾದ ಕಾಲಮಾನದಲ್ಲಿ ಸಿಎಂ ಎಚ್‌ಡಿಕೆ-ನಾರಾಯಣ ಮೂರ್ತಿ ಅವರ ಭೇಟಿ, ಬಾಂಧವ್ಯ ಸಾರ್ವಜನಿಕವಾಗಿ ಅಸಹಜವಾಗಿ ಭಾಸವಾಗುತ್ತಿದೆ

ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಈಚೆಗೆ ಇನ್ಫೊಸಿಸ್‌ ಸ್ಥಾಪಕ ಎನ್‌ ಆರ್‌ ನಾರಾಯಣ ಮೂರ್ತಿ ಅವರನ್ನು ಅವರ ಮನೆಯಲ್ಲೇ ಭೇಟಿ ಮಾಡಿ, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ ಮತ್ತು ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದರು. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯಮಂತ್ರಿ ಅವರು ಖ್ಯಾತನಾಮರ ಸಲಹೆ ಪಡೆಯುವುದು ನಿಜಕ್ಕೂ ಉತ್ತಮ ಬೆಳವಣಿಗೆಯೇ. ಆದರೆ, ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರ ಎರಡನೇ ಸಿನಿಮಾದ ಚಿತ್ರೀಕರಣವು ಮೈಸೂರಿನ ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿ ನಡೆಯುತ್ತಿದ್ದು, ಜೂ.೯ರಂದು ಮೈಸೂರಿನ ಇನ್ಫೊಸಿಸ್‌ ಕ್ಯಾಂಪಸ್‌ನ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಕುಮಾರಸ್ವಾಮಿ ಅದರಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ತಮಗೆ ಹಂಚಿಕೆಯಾಗಿದ್ದ ಸಣ್ಣ ನೀರಾವರಿ ಖಾತೆಯ ಬಗ್ಗೆ ಅಸಮಾಧಾನಗೊಂಡಿದ್ದ ಸಚಿವ ಸಿ ಎಸ್‌ ಪುಟ್ಟರಾಜು ಅವರನ್ನು ಇನ್ಫೊಸಿಸ್‌ ಕ್ಯಾಂಪಸ್‌ ಅತಿಥಿಗೃಹಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಈ ಬೆಳವಣಿಗೆ ಕುಮಾರಸ್ವಾಮಿ ಮತ್ತು ನಾರಾಯಣ ಮೂರ್ತಿ ಅವರ ಬಾಂಧವ್ಯದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ.

ಹಾಗೆ ನೋಡಿದರೆ, ಕುಮಾರಸ್ವಾಮಿ ಕುಟುಂಬ ಹಾಗೂ ನಾರಾಯಣ ಮೂರ್ತಿ ಅವರ ಸಂಬಂಧವು ಹಲವು ವಿರೋಧಭಾಸಗಳಿಂದ ಕೂಡಿದೆ. ೨೦೦೫ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭದಲ್ಲಿ ನಾರಾಯಣ ಮೂರ್ತಿ ಅವರ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರು ಭೂಕಬಳಿಕೆ ಆರೋಪ ಹೊರಿಸಿದ್ದರು. ಇನ್ಫೊಸಿಸ್‌ಗೆ ಸಾಫ್ಟವೇರ್ ಅಭಿವೃದ್ಧಿ ಕೇಂದ್ರ ಮತ್ತು ವಸತಿ ಸಮುಚ್ಚಯ ಅಭಿವೃದ್ಧಿಪಡಿಸಲು ನೂರಾರು ಎಕರೆ ಭೂಮಿ ಹಂಚಿಕೆ ಮಾಡುವ ಪ್ರಸ್ತಾವವನ್ನು ಪರಿಶೀಲಿಸುವಂತೆ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್‌ ಅವರನ್ನು ದೇವೇಗೌಡರು ಆಗ್ರಹಿಸುವ ಮೂಲಕ, ನಾರಾಯಣ ಮೂರ್ತಿ ಅವರ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದರು. ಕಡಿಮೆ ದರದಲ್ಲಿ ಭೂಮಿ ಖರೀದಿಸಿರುವ ಇನ್ಫೊಸಿಸ್‌, ಉದ್ಯಮಕ್ಕೆ ಎಷ್ಟು ಬಂಡವಾಳ ತೊಡಗಿಸಿದೆ ಮತ್ತು ಎಷ್ಟು ಮಂದಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದೂ ಒತ್ತಾಯಿಸಿದ್ದರು. ದೇವೇಗೌಡರ ಮಾತಿನ ದಾಳಿಗೆ ಸಿಲುಕಿದ್ದ ನಾರಾಯಣ ಮೂರ್ತಿ ಅವರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಕಾರಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಮಾಜಿ ಪ್ರಧಾನಿ ಹಾಗೂ ಜಾಗತಿಕ ಖ್ಯಾತಿ ಪಡೆದ ಉದ್ಯಮಿಯ ನಡುವಿನ ಈ ಸಂಘರ್ಷ ಭಾರಿ ಸುದ್ದಿ ಮಾಡಿತ್ತು.

ದೇವೇಗೌಡ ಮತ್ತು ನಾರಾಯಣಮೂರ್ತಿ ನಡುವಿನ ವಾಗ್ವಾದದ ಬೆಳವಣಿಗೆ ನಡೆದ ದಶಕದ ನಂತರ ನಾರಾಯಣ ಮೂರ್ತಿ ಅವರನ್ನು ಭೇಟಿ ಮಾಡಿದ್ದ ಕುಮಾರಸ್ವಾಮಿ ಅವರು, ಪುತ್ರ ನಿಖಿಲ್‌ ಅವರ ಮೊದಲ ಚಿತ್ರವಾದ ‘ಜಾಗ್ವಾರ್‌’ ಚಿತ್ರೀಕರಣವನ್ನು ಮೈಸೂರಿನ ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿ ನಡೆಸಲು ಅನುಮತಿ ಪಡೆದಿದ್ದರು. ಇದರ ಬೆನ್ನಿಗೇ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರನ್ನು ಜೆಡಿಎಸ್‌ನಿಂದ ರಾಜ್ಯಸಭೆಗೆ ಕಳುಹಿಸಿಕೊಡಲು ದೇವೇಗೌಡರು ಮುಂದಾಗಿದ್ದರು; ಈ ಮೂಲಕ, ನಾರಾಯಣ ಮೂರ್ತಿ ಅವರ ವಿರುದ್ಧ ಕಟ್ಟಿಕೊಂಡಿದ್ದ ವಿರಸವನ್ನು ತಿಳಿಗೊಳಿಸುವ ಯತ್ನ ನಡೆಸಲಾಗಿತ್ತು ಎನ್ನಲಾಗಿದೆ. ಆದರೆ, ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ಕಳುಹಿಸುವ ಯತ್ನ ಕೈಗೂಡಲಿಲ್ಲ.

ಇದನ್ನೂ ಓದಿ : ಸಿಎಂ ಕುಮಾರಸ್ವಾಮಿ ಅವರಿಗೆ ಎಚ್‌ ನರಸಿಂಹಯ್ಯ ಹೀಗೆ ದಾರಿದೀಪ ಆಗಬಲ್ಲರು!

ಈಗ ಮುಖ್ಯಮಂತ್ರಿಯಾದ ಬೆನ್ನಿಗೇ ಕುಮಾರಸ್ವಾಮಿ ಅವರು ನಾರಾಯಣ ಮೂರ್ತಿ ಅವರನ್ನು ಭೇಟಿ ಮಾಡಿರುವುದು ಮತ್ತು ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿ ಉಳಿದುಕೊಂಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಹಿಂದೆ, ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರೂ ನಾರಾಯಣ ಮೂರ್ತಿ ಅವರ ಜೊತೆ ನಿಕಟ ಸಂಪರ್ಕ ಹೊಂದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಸಾಮಾನ್ಯವಾಗಿ ರಾಜಕಾರಣಿಗಳು ಉದ್ಯಮಿಗಳಿಂದ ನಾನಾ ರೀತಿಯಲ್ಲಿ ಸಹಾಯ ಪಡೆಯುವ ಮೂಲಕ ಅವರ ದಾಕ್ಷಿಣ್ಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಈ ಮೂಲಕ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅವರ ಋಣ ಸಂದಾಯ ಮಾಡುವ ಒತ್ತಡಕ್ಕೆ ಸಿಲುಕಿಕೊಳ್ಳುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರದ ಜವಾಬ್ದಾರಿ ಹೊತ್ತಿರುವ ಕುಮಾರಸ್ವಾಮಿ ಅವರು ಉದ್ಯಮಿಗಳ ಸಲಹೆ, ಸೂಚನೆ ಪಡೆಯುವುದರಾಚೆಗೆ ವೈಯಕ್ತಿಕ ಮಟ್ಟದಲ್ಲಿ ಅಂತರ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡುವುದು ಉತ್ತಮ.

ಬಳ್ಳಾರಿ ಕಣದಲ್ಲಿ ಸಿದ್ದು-ರಾಮುಲು ವಾಕ್ಸಮರದಾಚೆಗೂ ಉಳಿಯುವ ಪ್ರಶ್ನೆಗಳೇನು?
ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?
ಶಿವಮೊಗ್ಗ ಲೋಕಸಭಾ ಉಪ ಚುನಾವಣೆ | ಒಲ್ಲದ ಮದುವೆ ಕಣದಲ್ಲಿ ಬಳುವಳಿಗಳ ಮೇಲಾಟ!
Editor’s Pick More