ಭ್ರಷ್ಟಾಚಾರ ಕುರಿತ ಸಿಎಂ ಕುಮಾರಸ್ವಾಮಿ ಹೇಳಿಕೆ ಹುಟ್ಟಿಸಿದ ಪ್ರಶ್ನೆಗಳು ಏನು?

ಸರ್ಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಯೇ ಭ್ರಷ್ಟಾಚಾರದ ಎದುರು ತಾನು ಅಸಹಾಯಕ ಎಂಬಂತಹ ಹೇಳಿಕೆ ನೀಡಿದರೆ, ಅದು ಅವರನ್ನು ಆರಿಸಿ ಕಳಿಸಿದ ಮತದಾರನಿಗೆ ಮತ್ತು ಎಲ್ಲಾ ಸಾರ್ವಜನಿಕರಿಗೆ ರವಾನಿಸುವ ಸಂದೇಶ ಎಂಥದ್ದು?

“ಸರ್ಕಾರಿ ಅಧಿಕಾರಿಗಳ ಮಟ್ಟದಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರ ಕಂಡು ಬೆಚ್ಚಿಬಿದ್ದಿದ್ದೇನೆ. ಆ ಭ್ರಷ್ಟಾಚಾರವನ್ನು ಒಂದೇ ಬಾರಿಗೆ ತೊಲಗಿಸಲು ಮುಂದಾದರೆ ಅಧಿಕಾರಿಗಳು, ಒಂದು ಕ್ಷಣವೂ ಕುರ್ಚಿಯಲ್ಲಿರಲು ಬಿಡದೆ ನನ್ನನ್ನೇ ಕೆಳಗಿಳಿಸಲೂಬಹುದು. ವಿಧಾನಸೌಧದ ಮೂರನೇ ಮಹಡಿ ಮಧ್ಯವರ್ತಿಗಳಿಂದ ತುಂಬಿಹೋಗಿದೆ. ಅವರಿಂದಲೇ ಭ್ರಷ್ಟಾಚಾರದ ಪಿಡುಗು ಆರಂಭವಾಗುತ್ತದೆ”.

ರಾಜ್ಯ ಸರ್ಕಾರಿ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಭ್ರಷ್ಟಾಚಾರದ ಅಗಾಧತೆಯ ಕುರಿತ ಸ್ವತಃ ನೂತನ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ಈ ಹೇಳಿಕೆ ಇದೀಗ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.

ಭ್ರಷ್ಟಾಚಾರದ ವಿಷಯದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಸಾಕಷ್ಟು ಕುಖ್ಯಾತಿಗೆ ಪಾತ್ರವಾಗಿದ್ದ ರಾಜ್ಯ, ಸಾಲು-ಸಾಲು ಹಗರಣಗಳು, ಹಗರಣಗಳಲ್ಲಿ ಸಿಲುಕಿ ಜೈಲು ಸೇರಿದ ಸಾಲು ಸಾಲು ಸಚಿವರು, ಮತ್ತು ಮುಖ್ಯಮಂತ್ರಿಯ ಕಾರಣಕ್ಕೂ ಇಡೀ ದೇಶದ ಗಮನ ಸೆಳೆದಿತ್ತು. ಭ್ರಷ್ಟಾಚಾರ ಮತ್ತು ಅದು ಹುಟ್ಟಿಸಿದ ರಾಜಕೀಯ ವಿಪ್ಲವದ ಅಲೆಗಳ ಕಾರಣದಿಂದಾಗಿಯೇ ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಲ್ಕೂವರೆ ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳು ಬದಲಾಗಿದ್ದರು.

ಆ ಬಳಿಕ ಬಿಜೆಪಿಯ ಆ ಭ್ರಷ್ಟಾಚಾರ, ಹಗರಣಗಳನ್ನೇ ಮುಂದಿಟ್ಟುಕೊಂಡು ಹೋರಾಟ ನಡೆಸುವ ಮೂಲಕ, ದುರಾಡಳಿತದ ವಿರುದ್ಧದ ಆಡಳಿತ ವಿರೋಧಿ ಅಲೆಯ ಲಾಭ ಪಡೆದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಐದು ವರ್ಷಗಳ ಅವಧಿ ಪೂರ್ಣಗೊಳಿಸಿದ ಹೆಗ್ಗಳಿಕೆಯೊಂದಿಗೆ, ಭಾರೀ ಭ್ರಷ್ಟಾಚಾರದ ಹಗರಣಗಳಿಂದಲೂ ಮುಕ್ತ ಆಡಳಿತ ನೀಡಿದ ಹೆಗ್ಗಳಿಕೆ ತನ್ನದು ಎಂದು ಕಳೆದ ಚುನಾವಣೆಯಲ್ಲಿ ಬೀಗಿತ್ತು.

ಆದರೆ, ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಬಿಜೆಪಿಯ ಸ್ಟಾರ್ ಪ್ರಚಾರಕರ ಕಾಂಗ್ರೆಸ್ ಟೀಕೆಯ ಪ್ರಬಲ ಅಸ್ತ್ರಗಳಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರವೂ ಒಂದಾಗಿತ್ತು. ಹತ್ತು ಪರ್ಸೆಂಟ್ ಸರ್ಕಾರ ಎಂಬ ಮೋದಿ ಹೇಳಿಕೆ ಕಾಂಗ್ರೆಸ್ ಅಥವಾ ಸಿದ್ದರಾಮಯ್ಯಗೆ ಮುಜುಗರ ತರುವ ಬದಲು, ಸ್ವತಃ ಮೋದಿಯವರಿಗೇ ಇರಿಸುಮುರಿಸು ತಂದಿತ್ತು. ಬಳಿಕ, ತಮ್ಮ ಆರೋಪವನ್ನು ಶೇ.೪೦ಕ್ಕೂ, ನಂತರ ಶೇ.೯೦ಕ್ಕೂ ಹೆಚ್ಚಿಕೊಂಡಿದ್ದ ಮೋದಿಯವರು, ಒಟ್ಟಾರೆ ತಮ್ಮ ಪ್ರಚಾರಭಾಷಣಗಳುದ್ದಕ್ಕೂ ಭ್ರಷ್ಟಾಚಾರದ ಬಾಣವನ್ನು ಪ್ರಯೋಗಿಸುತ್ತಲೇ ಇದ್ದರು. ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಗ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. ಆದರೆ, ಜನಾದೇಶದ ಫಲಿತಾಂಶ ಬಂದಾಗ, ಅಂತಹ ಆರೋಪ-ಪ್ರತ್ಯಾರೋಪಗಳಿಗೆ ರಾಜ್ಯದ ಮತದಾರ ಅಷ್ಟೇನೂ ಸೊಪ್ಪುಹಾಕಿಲ್ಲ ಎಂಬುದು ನಿಜವಾಗಿತ್ತು!

ಇದೀಗ ಸ್ವತಃ ತಾವೇ ಸರ್ಕಾರದ ಚುಕ್ಕಾಣಿ ಹಿಡಿದಿರುವಾಗ; ಅದರಲ್ಲೂ ತಾವು ಯಾರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರೋ ಅದೇ ಕಾಂಗ್ರೆಸ್ಸಿನೊಂದಿಗೆ ಕೈಜೋಡಿಸಿ ಮೈತ್ರಿ ಮೂಲಕ ಅಧಿಕಾರ ಹಂಚಿಕೊಂಡಿರುವಾಗ, ಮತ್ತೆ ಭ್ರಷ್ಟಾಚಾರ ಅವರಿಗೆ ದುಃಸ್ವಪ್ನವಾಗಿ ಕಾಡತೊಡಗಿದೆ.

ಸರ್ಕಾರಿ ಆಡಳಿತಶಾಹಿಯಲ್ಲಿ ಭ್ರಷ್ಟಾಚಾರದ ಪ್ರಮಾಣ ಏರಿಕೆಯಾಗುತ್ತಲೇ ಇದೆ ಎಂಬುದನ್ನು ಪ್ರತಿ ವರ್ಷ ಪ್ರಕಟವಾಗುವ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಮತ್ತಿತರ ಸ್ವಾಯತ್ತ ಸಂಸ್ಥೆಗಳ ವರದಿಗಳು ಬಹಿರಂಗಪಡಿಸುತ್ತಿವೆ. ರಾಜ್ಯದ ಸರ್ಕಾರಿ ವ್ಯವಸ್ಥೆಯಲ್ಲಿ ನೆಮ್ಮದಿ ಕೇಂದ್ರದ ಮಟ್ಟದಿಂದ ವಿಧಾನಸೌಧದ ಮೂರನೇ ಮಹಡಿಯವರೆಗೆ ಭ್ರಷ್ಟಾಚಾರದ ಹಣದ ಹರಿವಿನ ವ್ಯವಸ್ಥಿತ ಜಾಲ ಎಷ್ಟು ಕರಾರುವಾಕ್ಕಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಹೊಸ ವಿಷಯವೇನಲ್ಲ. ಆದರೆ, ಪ್ರತಿ ಬಾರಿಯೂ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ, ಜನಸಾಮಾನ್ಯರಲ್ಲಿ ಮೂಡುವ ಮೊದಲ ನಿರೀಕ್ಷೆಯೇ ತಮ್ಮೂರಿನ ಸರ್ಕಾರಿ ಕಚೇರಿ-ಇಲಾಖೆಗಳಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಎಷ್ಟರಮಟ್ಟಿಗೆ ಕಡಿವಾಣ ಬೀಳುವುದು ಎಂಬುದು.

ಆ ಹಿನ್ನೆಲೆಯಲ್ಲಿ ಸರ್ಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಯೇ ಭ್ರಷ್ಟಾಚಾರದ ಎದುರು ತಾನು ಅಸಹಾಯಕ ಎಂಬಂತಹ ಹೇಳಿಕೆ ನೀಡಿದರೆ, ಅದು ಅವರನ್ನು ಆರಿಸಿಕಳಿಸಿದ ಮತದಾರನಿಗೆ ಮತ್ತು ಎಲ್ಲಾ ಸಾರ್ವಜನಿಕರಿಗೆ ರವಾನಿಸುವ ಸಂದೇಶ ಏನು? ಭ್ರಷ್ಟಾಚಾರ ತನ್ನ ಕೈಮೀರಿ ಬೆಳೆದುಬಿಟ್ಟಿದೆ. ಹಾಗಾಗಿ ಅದರೊಂದಿಗೇ ಹೊಂದಿಕೊಂಡುಹೋಗುವುದು ಜನತೆಗೆ ಅನಿವಾರ್ಯ ಎಂಬುದು ಮುಖ್ಯಮಂತ್ರಿಗಳ ಮಾತಿನ ಮರ್ಮವೇ? ಅಲ್ಲದೆ, ಇಂತಹ ತಮ್ಮ ಹೇಳಿಕೆ, ಭ್ರಷ್ಟ ವ್ಯವಸ್ಥೆಗೆ ಒಂದು ಬಗೆಯಲ್ಲ ಪರೋಕ್ಷವಾಗಿ ಕುಮ್ಮಕ್ಕು ನೀಡುವುದಿಲ್ಲವೇ? ಸ್ವತಃ ಮುಖ್ಯಮಂತ್ರಿಯೇ ಅಸಹಾಯಕತೆ ವ್ಯಕ್ತಪಡಿಸಿದ ಮೇಲೆ ತಮ್ಮನ್ನು ಕೇಳುವವರಾರು ಎಂಬ ಉಮೇದಿಗೆ ಭ್ರಷ್ಟರು ಒಳಗಾಗುವುದಿಲ್ಲವೇ?.

ಇಂತಹ ಬಿಡುಬೀಸಿನ ಹೇಳಿಕೆಗಳು ಕುಮಾರಸ್ವಾಮಿಯವರಿಗೆ ಹೊಸದೇನೂ ಅಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಅವರು ಇಂತಹ ಹಲವು ಹೇಳಿಕೆಗಳನ್ನು ನೀಡಿ, ಅನಾವಶ್ಯಕವಾಗಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಜೊತೆಗೆ, ಹಲವು ಬಾರಿ ಅಂದಿನ ಬಿಜೆಪಿಯೊಂದಿಗಿನ ಮೈತ್ರಿಗೂ ಅಂತಹ ಮಾತುಗಳೇ ಕಂಟಕ ತಂದಿದ್ದವು. ಈಗಲೂ ಅವರು ಅಧಿಕಾರ ನಡೆಸುತ್ತಿರುವುದು ಮತ್ತೊಂದು ಮೈತ್ರಿ ಸರ್ಕಾರದಲ್ಲಿಯೇ. ಹಿಂದಿನ ಅವಧಿಯಲ್ಲಿ ಅಧಿಕಾರದಲ್ಲಿದ್ದದ್ದು ಕೂಡ ಕಾಂಗ್ರೆಸ್ ಸರ್ಕಾರವೇ. ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರದ ಪ್ರಮಾಣದಲ್ಲಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ, ಅಂತಿಮವಾಗಿ ಯಾರತ್ತ ಬೆರಳು ಮಾಡುತ್ತದೆ?. ಇಂತಹ ಹೇಳಿಕೆಗಳು ಸ್ವತಃ ಮೈತ್ರಿ ಸರ್ಕಾರದಲ್ಲೂ ಮತ್ತು ಮುಖ್ಯಮಂತ್ರಿಗಳ ಅಧಿಕಾರದ ಕುರ್ಚಿಗೂ ಕಂಟಕ ತರಲಾರದೆ?.

ಇದನ್ನೂ ಓದಿ : ಅತಂತ್ರ ಸ್ಥಿತಿಯ ನೆರಳಲ್ಲೇ ಅರಳಿದ ರಾಜಕಾರಣಿ ಎಚ್ ಡಿ ಕುಮಾರಸ್ವಾಮಿ

ಈಗಾಗಲೇ ಕಾಂಗ್ರೆಸ್ ಕಡೆಯಿಂದ ಮುಖ್ಯಮಂತ್ರಿಯವರ ಹೇಳಿಕೆಗೆ ಪ್ರತಿಕ್ರಿಯೆಗಳು ಬಂದಿವೆ. ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ, “ವಿಧಾನಸೌಧದಲ್ಲಿ ಭ್ರಷ್ಟಾಚಾರ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಅವರ(ಕುಮಾರಸ್ವಾಮಿ) ಗಮನಕ್ಕೆ ಬಂದಿದ್ದರೆ, ಅವರು ಕ್ರಮಕೈಗೊಳ್ಳಲಿ” ಎನ್ನುವ ಮೂಲಕ ಭ್ರಷ್ಟಾಚಾರ ತೊಲಗಿಸುವ ಹೊಣೆಗಾರಿಕೆಯನ್ನು ನೂತನ ಸಿಎಂ ಹೆಗಲಿಗೆ ದಾಟಿಸುವ ಪ್ರಯತ್ನ ಮಾಡಿದ್ದಾರೆ. ಅದೇ ಹೊತ್ತಿಗೆ, ಸಚಿವ ಕೃಷ್ಣ ಭೈರೇಗೌಡ ಅವರೂ ಪ್ರತಿಕ್ರಿಯೆ ನೀಡಿ, “ರಾಜಕಾರಣದಲ್ಲಿ ಯಾರೂ ನೂರಕ್ಕೆ ನೂರರಷ್ಟು ಪ್ರಾಮಾಣಿಕ ಎಂದು ಹೇಳಿಕೊಳ್ಳಲಾಗದು. ನಮ್ಮ ನಮ್ಮ ಮಟ್ಟದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಪ್ರಯತ್ನಿಸಬಹುದು ಅಷ್ಟೇ” ಎಂದಿದ್ದಾರೆ.

ಸಾರ್ವಜನಿಕ ವಲಯದಲ್ಲಿಯೂ, ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಸಿಎಂ ಹೇಳಿಕೆಗೆ ಪ್ರತಿಕ್ರಿಯೆಗಳು ವ್ಯಾಪಕವಾಗಿದ್ದು, ಸರ್ಕಾರಿ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ.

ಬಳ್ಳಾರಿ ಕಣದಲ್ಲಿ ಸಿದ್ದು-ರಾಮುಲು ವಾಕ್ಸಮರದಾಚೆಗೂ ಉಳಿಯುವ ಪ್ರಶ್ನೆಗಳೇನು?
ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?
ಶಿವಮೊಗ್ಗ ಲೋಕಸಭಾ ಉಪ ಚುನಾವಣೆ | ಒಲ್ಲದ ಮದುವೆ ಕಣದಲ್ಲಿ ಬಳುವಳಿಗಳ ಮೇಲಾಟ!
Editor’s Pick More