ಸಿಎಂ ಎಚ್‌ಡಿಕೆಗೆ ಫಿಟ್‌ನೆಸ್‌ ಸವಾಲು ಎಸೆದ ಪ್ರಧಾನಿ ಮೋದಿ ನಡೆ ಅಮಾನವೀಯವೆ?

ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಹಾಕಿರುವ ಫಿಟ್‌ನೆಸ್‌ ಸವಾಲು ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅಪಹಾಸ್ಯ ಮಾಡುವಂಥದ್ದೇ? ಅಸ್ವಸ್ಥರಾಗಿರುವ ಬಿಜೆಪಿಯ ಹಲವು ನಾಯಕರಿದ್ದರೂ ಸವಾಲಿಗೆ ಕುಮಾರಸ್ವಾಮಿ ಅವರನ್ನೇ ಆಯ್ದುಕೊಂಡಿದ್ದೇಕೆ? 

ಕ್ರಿಕೆಟಿಗ ವಿರಾಟ್‌ ಕೊಹ್ಲಿ ತಮಗೆ ಹಾಕಿದ್ದ ಫಿಟ್‌ನೆಸ್‌‌ ಚಾಲೆಂಜ್ (ಆರೋಗ್ಯ ಕಾಪಾಡಿಕೊಳ್ಳಲು ನಡೆಸುವ ಕಸರತ್ತು)‌ ಸ್ವೀಕರಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅದೇ ಸವಾಲನ್ನು ಕರ್ನಾಟಕ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಟೇಬಲ್‌ ಟೆನಿಸ್‌ ಚಾಂಪಿಯನ್‌ ಮಣಿಕಾ ಬಾತ್ರಾ ಮತ್ತು ೪೦ ವರ್ಷ ತುಂಬಿದ ಐಪಿಎಸ್‌ ಅಧಿಕಾರಿಗಳಿಗೆ ವರ್ಗಾಯಿಸಿದ್ದಾರೆ. ತಮ್ಮ ಫಿಟ್‌ನೆಸ್‌ಗೆ‌ ಪೂರಕವಾಗಿ ತಾವು ಯೋಗ ಮಾಡುತ್ತಿರುವ ವಿಡಿಯೊ ತುಣುಕನ್ನೂ ಪ್ರಧಾನಿ ಅವರ ಟ್ವಿಟರ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರ ಸವಾಲಿಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ಅವರು ‘ನನ್ನ ಆರೋಗ್ಯದ ಬಗೆಗಿನ ನಿಮ್ಮ ಕಾಳಜಿಗೆ ಧನ್ಯವಾದ. ಎಲ್ಲರೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದ್ದು ಫಿಟ್‌ನೆಸ್‌ ಚಾಲೆಂಜ್‌ಗೆ ನನ್ನ ಬೆಂಬಲವಿದೆ. ಯೋಗ ಮತ್ತು ಟ್ರೆಡ್‌ಮಿಲ್ ನನ್ನ ಪ್ರತಿದಿನದ ಫಿಟ್‌ನೆಸ್‌ ಭಾಗವಾಗಿವೆ. ಇದೆಲ್ಲದರ ಮಧ್ಯೆ, ನನಗೆ ನನ್ನ ರಾಜ್ಯದ ಅಭಿವೃದ್ಧಿಯ ಫಿಟ್‌ನೆಸ್‌ ಮುಖ್ಯವಾಗಿದ್ದು, ಅದಕ್ಕಾಗಿ ನಿಮ್ಮ ಬೆಂಬಲ ಕೋರುತ್ತೇನೆ’ ಎಂದು ಘನತೆಯಿಂದ ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ಮೋದಿ ಅವರು ಟ್ವೀಟ್‌ ಮಾಡುವ ಮೊದಲು ಕುಮಾರಸ್ವಾಮಿ ಅವರ ಆರೋಗ್ಯದ ಸೂಕ್ಷ್ಮತೆಯನ್ನು ಸರಿಯಾಗಿ ತಿಳಿದಂತೆ ಕಾಣುತ್ತಿಲ್ಲ. ಎಚ್‌ಡಿಕೆ ಆರೋಗ್ಯಸ್ಥಿತಿ ತಿಳಿದೂ ಫಿಟ್‌ನೆಸ್‌ ಸವಾಲು ಎಸೆದಿದ್ದರೆ ಅದು ಅಮಾನವೀಯವೇ ಸರಿ. ಫಿಟ್‌ನೆಸ್‌ ಸವಾಲು ಹಾಕಲು ಬಿಜೆಪಿಯಲ್ಲಿ ಬೇರೆ ಯಾವುದೇ ನಾಯಕರು ಇರಲಿಲ್ಲವೇ ಎನ್ನುವ ಪ್ರಶ್ನೆಗಳು ಎದ್ದಿವೆ. ಇಂಥ ಪ್ರಶ್ನೆ ಮೂಡಲು ಕಾರಣಗಳಿವೆ. ಕುಮಾರಸ್ವಾಮಿ ಅವರು ೨೦೦೭ ಮತ್ತು ೨೦೧೭ರಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದರ ಜೊತೆಗೆ ಸಕ್ಕರೆ ಕಾಯಿಲೆಯೂ ಅವರನ್ನು ಬಾಧಿಸುತ್ತಿದೆ. ಹಲವು ಸಂದರ್ಭಗಳಲ್ಲಿ ಕುಮಾರಸ್ವಾಮಿ ಅವರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದ್ದಾರೆ. ಮೊನ್ನೆ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ‘ಕುಮಾರಸ್ವಾಮಿ ಅವರು ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ನಾನು ಎಷ್ಟು ದಿನ ಬದುಕುತ್ತೇನೆ ಎಂದು ನನಗೇ ತಿಳಿದಿಲ್ಲ’ ಎಂದು ಹೇಳುವ ಮೂಲಕ ಸಭಿಕರ ಕಣ್ಣು ತೇವಗೊಳ್ಳುವಂತೆ ಮಾಡಿದ್ದರು.

ಇಂಥ ಸೂಕ್ಷ್ಮಗಳನ್ನು ಅರಿಯದೇ ಪ್ರಧಾನಿ ಮೋದಿ ಅವರು ಕುಮಾರಸ್ವಾಮಿ ಅವರಿಗೆ ಫಿಟ್ನೆಸ್‌ ಸವಾಲು ಹಾಕುವ ಮೂಲಕ ಟೀಕೆ ಮತ್ತು ಅಪಹಾಸ್ಯಕ್ಕೆ ಈಡಾಗಿದ್ದಾರೆ. ಪ್ರಧಾನಿ ಅವರು ಟ್ವೀಟ್‌ ಮಾಡುತ್ತಿದ್ದಂತೆ ಅವರ ಹಿಂಬಾಲಕರು ಟ್ವಿಟರ್‌ನಲ್ಲಿ ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ವ್ಯಂಗ್ಯಭರಿತ ಮಾತುಗಳನ್ನಾಡುವ ಮೂಲಕ ಕುಮಾರಸ್ವಾಮಿ ಅವರನ್ನು ಛೇಡಿಸಿದ್ದಾರೆ. ಇದು ಯಾವ ರೀತಿಯ ಸಂದೇಶ ರವಾನಿಸಲಿದೆ? ತಾವು ಟ್ವೀಟ್ ಮಾಡುವುದಕ್ಕೂ ಮುನ್ನ ಮೋದಿಯುವರು ತಮ್ಮ ಸಲಹೆಗಾರರಿಂದ ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಬಹುದಿತ್ತು. ಇದರ ಹೊರತಾಗಿ ರಾಜ್ಯ ಬಿಜೆಪಿಯಲ್ಲಿ ತಮಗೆ ಆಪ್ತರಾದ ನಾಯಕರ ಜೊತೆ ಮಾತನಾಡಿ ಮಾಹಿತಿ ಪಡೆಯಬಹುದಿತ್ತಲ್ಲವೇ? ಇದ್ಯಾವುದನ್ನೂ ಮಾಡದೇ ಟ್ವೀಟ್‌ ಮಾಡಿರುವ ಮೋದಿಯವರ ನಡೆಯು ಹಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಮುದ್ದಿ ಕಿ ಬಾತ್ | ಸಿಎಂ ಎಚ್‌ಡಿಕೆ ಅವರಿಗೆ ಫಿಟ್ನೆಸ್‌ ಚಾಲೆಂಜ್ ಹಾಕಿದ ಪ್ರಧಾನಿಗಳಿಗೊಂದು ಪ್ರಶ್ನೆ

ಮೋದಿ ಅವರ ಸಂಪುಟ ಸಹೋದ್ಯೋಗಿ ಹಾಗೂ ಹಣಕಾಸು ಸಚಿವರಾದ ಅರುಣ್‌ ಜೇಟ್ಲಿ ಅವರು ಕಿಡ್ನಿ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರೂ ಕಿಡ್ನಿ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈಗ ಅವರು ಎಂದಿನಂತೆ ಕರ್ತವ್ಯದಲ್ಲಿದ್ದರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ವಿರಳ. ಗೋವಾ ಮುಖ್ಯಮಂತ್ರಿ ಹಾಗೂ ಮೋದಿ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಮನೋಹರ್‌ ಪರಿಕ್ಕರ್‌ ಅವರು ಕ್ಯಾನ್ಸರ್‌ಗೆ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರುಗಳಿಗೆ ಇದೇ ಸವಾಲು ಹಾಕಿದ್ದರೆ ಹೇಗಿದ್ದಿರಬಹುದು? ಇದರ ಹೊರತಾಗಿಯೂ ಅನಾರೋಗ್ಯದಿಂದ ಇರುವವರು ಫಿಟ್‌ಸ್‌‌ ಕಾಳಜಿ ಹೊಂದಬಾರದು ಎಂದೇನು ಇಲ್ಲ. ಆದರೆ, ಮೋದಿಯುವರು ಸದುದ್ದೇಶದಿಂದ ಟ್ವೀಟ್‌ ಮಾಡಿದ್ದರೂ ಸಹ ಸದ್ಯದ ಸ್ಥಿತಿಯಲ್ಲಿ ಬೇರೆಯದೇ ಅರ್ಥಕ್ಕೆ ಎಡಮಾಡಿಕೊಟ್ಟಂತಿದೆ.

ಕೆಲವು ವಾರಗಳ ಹಿಂದೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ಅವರು ‘ನಾವು ಫಿಟ್‌ ಆಗಿದ್ದರೆ ಭಾರತ ಫಿಟ್‌ ಆಗಿರುತ್ತದೆ’ (ಹಮ್‌ ಫಿಟ್‌ ತೊ ದೇಶ್‌ ಫಿಟ್‌) ಎಂದು ಟ್ವಿಟರ್ ಅಭಿಯಾನ ಆರಂಭಿಸಿದ್ದರು. ಫುಶ್‌ ಅಪ್‌ ಮಾಡುವ ವಿಡಿಯೊ ತುಣುಕು ಹಾಕಿ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಸೇರಿದಂತೆ ಹಲವರಿಗೆ ಇದನ್ನು ಮುಂದುವರಿಸುವಂತೆ ಸವಾಲು ಹಾಕಿದ್ದರು. ಇದನ್ನು ಸ್ವೀಕರಿಸಿದ್ದ ಕೊಹ್ಲಿ ಅವರು ಮೂರು ವಾರಗಳ ಹಿಂದೆ ತಾವು ಜಿಮ್‌ನಲ್ಲಿ ಕಸರತ್ತು ನಡೆಸುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಾಕಿ ಪ್ರಧಾನಿ ಅವರಿಗೆ ಸವಾಲು ಎಸೆದಿದ್ದರು. ಇದರ ಭಾಗವಾಗಿ ಮೋದಿಯವರು ಕುಮಾರಸ್ವಾಮಿ ಅವರಿಗೆ ಸವಾಲು ವರ್ಗಾಯಿಸಿ ಮುಜುಗರದ ಸ್ಥಿತಿ ಸೃಷ್ಟಿಸಿಕೊಂಡಿರಬಹುದೇ?

ಬಳ್ಳಾರಿ ಕಣದಲ್ಲಿ ಸಿದ್ದು-ರಾಮುಲು ವಾಕ್ಸಮರದಾಚೆಗೂ ಉಳಿಯುವ ಪ್ರಶ್ನೆಗಳೇನು?
ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?
ಶಿವಮೊಗ್ಗ ಲೋಕಸಭಾ ಉಪ ಚುನಾವಣೆ | ಒಲ್ಲದ ಮದುವೆ ಕಣದಲ್ಲಿ ಬಳುವಳಿಗಳ ಮೇಲಾಟ!
Editor’s Pick More