ಪ್ರಣಬ್‌ - ಭಾಗವತ್‌ ಭೇಟಿ | ‘ರಾಷ್ಟ್ರೀಯ ಸರ್ಕಾರ’ದ ಅಸ್ತ್ರ ಪ್ರಯೋಗದ ಸಾಧ್ಯತೆ ಇದೆಯೇ?

ಪ್ರಣಬ್‌‌ ಮುಖರ್ಜಿ ಅವರು ಆರ್‌‌ಎಸ್‌ಎಸ್‌‌ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸಾಕಷ್ಟು ರಾಜಕೀಯ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಬರಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಣಬ್‌ರನ್ನು ಮುಂದಿರಿಸಿಕೊಂಡು‌ ಹೊಸ ರಾಜಕೀಯ ಪ್ರಯೋಗಕ್ಕೆ ಆರ್‌ಎಸ್‌ಎಸ್‌ ಕೈ ಹಾಕಲು ನಿರ್ಧರಿಸಿರಬಹುದೇ?

ಮಾಜಿ ರಾಷ್ಟ್ರಪತಿ ಪ್ರಣಬ್‌‌ ಮುಖರ್ಜಿ ಅವರು ಆರ್‌ಎಸ್‌ಎಸ್‌ನ ‘ತೃತೀಯ ಶಿಕ್ಷಾ ವರ್ಗ್’‌ ತರಬೇತಿ ಮುಗಿಸಿದ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್‌ ಕಚೇರಿಗೆ ತೆರಳಿದ್ದರ ಬಗ್ಗೆ ಹತ್ತಾರು ಚರ್ಚೆಗಳು ನಡೆಯುತ್ತಿವೆ. ಬಹುಮುಖ್ಯವಾಗಿ ಈ ಭೇಟಿಯು ಹೊಸದೊಂದು ರಾಜಕೀಯ ಪ್ರಯೋಗಕ್ಕೆ ಕಾರಣವಾಗಬಹುದು ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿದೆ. ಇದಾಗಲೇ ಶಿವಸೇನೆಯು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಆರ್‌ಎಸ್ಎಸ್‌ ಪ್ರಣಬ್ ಮುಖರ್ಜಿಯವರನ್ನು ಪ್ರಧಾನಿಯಾಗಿ ಬಿಂಬಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದಿದೆ.

ಪ್ರಣಬ್‌ರ ಭೇಟಿಯ ಮಹತ್ವವನ್ನು ಅರಿಯಬೇಕೆಂದರೆ ಪ್ರಸಕ್ತ ರಾಜಕೀಯ ಸನ್ನಿವೇಶವನ್ನು ಅವಲೋಕಿಸಬೇಕಾಗುತ್ತದೆ. ದೇಶದಲ್ಲಿ ಬಿಜೆಪಿ ವಿರೋಧಿ ರಾಜಕಾರಣ ಮುನ್ನೆಲೆಗೆ ಬರುತ್ತಿದೆ. ಇದಾಗಲೇ ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳು ಒಂದಾಗಿ ಉತ್ತರ ಪ್ರದೇಶ ಗೋರಖ್‌ಪುರ, ಫೂಲ್‌ಫುರ್‌, ಕೈರಾನಾ ಸೇರಿದಂತೆ ಹಲವು ಉಪಚುನಾವಣೆಗಳಲ್ಲಿ ಬಿಜೆಪಿಯನ್ನು ಮಣಿಸುವಲ್ಲಿ ಸಫಲವಾಗಿವೆ. ಮತ್ತೊಂದೆಡೆ ಎನ್‌ಡಿಎ ಒಳಗಿನ ಮಿತ್ರಪಕ್ಷಗಳು ಪ್ರಧಾನಿ ಮೋದಿ ಹಾಗೂ ಬಿಜೆಪಿಯ ರಾಷ್ಟ್ರೀಯ ಆಧ್ಯಕ್ಷ ಅಮಿತ್‌ ಶಾ ಅವರ ಧೋರಣೆಯಿಂದ ಬೇಸತ್ತು ಒಂದಿಲ್ಲೊಂದು ಕಾರಣ ನೀಡಿ ಬಿಜೆಪಿಯಿಂದ ದೂರ ಸರಿಯುತ್ತಿವೆ. ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ) ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯು ಬಿಜೆಪಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದೆ. ಬಿಹಾರದಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ರಾಜ್ಯದಲ್ಲಿ ತಾವೇ ಎನ್‌ಡಿಎ ನೇತೃತ್ವ ವಹಿಸುವುದಾಗಿ ಹೇಳಿದ್ದಾರೆ. ರಾಮವಿಲಾಸ್‌ ಪಾಸ್ವಾನ್‌ ನೇತೃತ್ವದ ಲೋಕ ಜನಶಕ್ತಿ ಪಕ್ಷದ ಸಂಬಂಧವೂ ಬಿಜೆಪಿಯೊಂದಿಗೆ ಹಳಸಿದೆ. ಇದರ ಮಧ್ಯೆ, ಚಂದ್ರಶೇಖರ್‌ ರಾವ್‌ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಹಾಗೂ ಬಿಜು ಜನತಾ ದಳದ (ಬಿಜೆಡಿ) ಮುಖ್ಯಸ್ಥ ನವೀನ್‌ ಪಟ್ನಾಯಕ್‌ ಅವರು ಕಾಂಗ್ರೆಸ್‌-ಬಿಜೆಪಿ ಹೊರತಾದ ತೃತೀಯ ರಂಗದ ಬಗ್ಗೆ ಮಾತನಾಡುತ್ತಿದ್ದಾರೆ.

ಇದೆಲ್ಲವೂ ಬರಲಿರುವ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳು ಒಗ್ಗೂಡುವ ಮುನ್ಸೂಚನೆಯನ್ನು ನೀಡಿವೆ. ಬಹುಮುಖ್ಯವಾಗಿ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಜನತೆಯಲ್ಲಿ ಮೊದಲಿನ ಆಶಾಭಾವ, ಭರವಸೆಗಳು ಉಳಿದಂತೆ ಕಾಣುತ್ತಿಲ್ಲ. ಮೋದಿಯವರ ವರ್ಚಸ್ಸು ಸಹ ಕುಂದಿದೆ. ಕಳೆದ ಚುನಾವಣೆಯಲ್ಲಿ ಮೋದಿ ಅಲೆಯ ಮೇಲೆ ೨೮೨ ಸ್ಥಾನ ಗಳಿಸಿ (ಲೋಕಸಭಾ ಉಪಚುನಾವಣೆಗಳ ಬಳಿಕ ಬಿಜೆಪಿಯ ಸ್ಥಾನ ಬಲವು ೨೭೨ಕ್ಕೆ ಕುಸಿದಿದೆ), ಸರಳ ಬಹುಮತ ಪಡೆದು ಅಧಿಕಾರ ಹಿಡಿದಿದ್ದ ಬಿಜೆಪಿಗೆ ಪ್ರಸಕ್ತ ಸಂದರ್ಭದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ವಿಶ್ವಾಸ ಉಳಿದಂತೆ ಕಾಣುತ್ತಿಲ್ಲ. ಬಿಜೆಪಿಯು 200 ಸ್ಥಾನಗಳ ಆಸುಪಾಸು ಸುಳಿಯುವುದು ದುರ್ಲಭ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಮಿತ್ರಪಕ್ಷಗಳು ದೂರ ಸರಿಯಲು ಸಹ ಇದುವೇ ಪ್ರಮುಖ ಕಾರಣ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.

ಸದ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ೨೦೧೯ರಲ್ಲಿ ಯಾವುದೇ ಒಂದು ಪಕ್ಷ ಸ್ವಂತ ಬಹುಮತದ ಮೇಲೆ ಸರ್ಕಾರ ರಚಿಸುವ ಸಾಧ್ಯತೆ ಕ್ಷೀಣ ಎನ್ನಲಾಗುತ್ತಿದೆ. ವಿಪರ್ಯಾಸವೆಂದರೆ, ಬಿಜೆಪಿ ವಿರೋಧಿಸುವ ಪಕ್ಷಗಳಲ್ಲಿ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು. ಇದೆಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸಿರುವ ಆರ್‌ಎಸ್ಎಸ್ ಒಂದೊಮ್ಮೆ‌ ಅತಂತ್ರ ಲೋಕಸಭೆ ಸೃಷ್ಟಿಯಾದರೆ ಆಗ ಬಿಜೆಪಿಯ ನಡೆ ಹೇಗಿರಬೇಕು ಎನ್ನುವ ಬಗ್ಗೆ ತನ್ನದೇ ಆದ ಚಿಂತನೆ ಹೊಂದಿರುವಂತಿದೆ. ಅಂತಹ ಸಂದರ್ಭದಲ್ಲಿ ‘ರಾಷ್ಟ್ರೀಯ ಸರ್ಕಾರ’ದ ಮಾದರಿಯನ್ನು ಮುಂದೆ ಮಾಡುವ ಮೂಲಕ ಬಿಜೆಪಿಯನ್ನು ಮತ್ತೆ ಅಧಿಕಾರದ ಪರಿಧಿಯಲ್ಲಿ ಇರಿಸುವುದು ಆರ್‌ಎಸ್‌ಎಸ್‌ನ ಕಾರ್ಯತಂತ್ರವಾಗಿರಬಹುದೇ? ಈಗಾಗಲೇ ಪ್ರಸ್ತಾಪವಾಗಿರುವ ಹಲವು ಸಾಧ್ಯತೆಗಳ ನಡುವೆ ಇದನ್ನು ಗಮನಿಸಬಹುದಾಗಿದೆ.

ರಾಷ್ಟ್ರೀಯ ಸರ್ಕಾರದ ಮಾದರಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೂ ಸರ್ಕಾರದಲ್ಲಿ ಪ್ರಾತಿನಿಧ್ಯ ಕಲ್ಪಿಸುವ ಪ್ರಸ್ತಾವ ಇಟ್ಟರೆ ಹೇಗೆ? ಇದು ಆರ್‌ಎಸ್‌ಎಸ್‌ನ ರಾಷ್ಟ್ರೀಯವಾದದ ಕಲ್ಪನೆಗೆ ಪೂರಕವಾಗಬಹುದು. ಎಲ್ಲ ಪಕ್ಷಗಳಿಂದಲೂ ಅವುಗಳ ಸ್ಥಾನಬಲದ ಆಧಾರದಲ್ಲಿ ರಾಷ್ಟ್ರೀಯ ಸರ್ಕಾರದಲ್ಲಿ ಪಾಲ್ಗೊಳ್ಳಲು ಪ್ರತಿನಿಧಿಗಳನ್ನು ನೇಮಿಸುವಂತೆ ಆರ್‌ಎಸ್‌ಎಸ್‌ ಸಲಹೆ ನೀಡಬಹುದು. ಒಂದೊಮ್ಮೆ ರಾಷ್ಟ್ರೀಯ ಸರ್ಕಾರದ ಭಾಗವಾಗಲು ಮನಸ್ಸು ಮಾಡದ ಪಕ್ಷಗಳು ವಿರೋಧ ಪಕ್ಷವಾಗಿ ಕುಳಿತು ಕಾರ್ಯನಿರ್ವಹಿಸಬಹುದಾಗಿರುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈ ರಾಜಕೀಯ ಪರಿಕಲ್ಪನೆ ವಿಕಸಿತಗೊಂಡಿದೆ, ನೆರೆಯ ಪಾಕಿಸ್ತಾನದಲ್ಲಿಯೂ ಸಹ ಪ್ರಸಕ್ತ ಇದೇ ಮಾದರಿಯ ಸರ್ಕಾರ ಅಸ್ತಿತ್ವದಲ್ಲಿದೆ. ಇಲ್ಲಿ ಇರುವ ಪ್ರಮುಖ ಪ್ರಶ್ನೆ ಅಂತಹ ರಾಷ್ಟ್ರೀಯ ಸರ್ಕಾರವನ್ನು ಮುನ್ನಡೆಸುವವರು ಯಾರು? ಯಾರ ಹೆಸರು ಎಲ್ಲ ಪಕ್ಷಗಳಿಗೂ ಪಥ್ಯವಾಗಬಹುದು? ಯಾರನ್ನು ಮುಂದೆ ಮಾಡಿದರೆ ಪಕ್ಷಾತೀತವಾಗಿ ಒಮ್ಮತ ಮೂಡಬಹುದು ಎನ್ನುವುದು. ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಯವರಲ್ಲಿ ಅಂತಹ ರಾಜಕೀಯ ಹಿರಿತನ, ಮುತ್ಸದ್ದಿತನ, ಎಲ್ಲ ಪಕ್ಷಗಳನ್ನೂ ಜೊತೆಗೆ ಒಯ್ಯಬಲ್ಲ ಸಾಮರ್ಥ್ಯವಿದೆ ಎಂದು ಆರ್‌ಎಸ್‌ಎಸ್‌‌ ನಂಬಿರಬಹುದು.

ಮತ್ತೊಂದು ಪ್ರಮುಖ ಕಾರಣ ರಾಷ್ಟ್ರೀಯ ಮಾದರಿ ಸರ್ಕಾರಕ್ಕೆ ಕಾಂಗ್ರೆಸ್‌ ಉತ್ಸಾಹ ತೋರಿಸದೆ ಹೋದರೂ, ಪ್ರಣಬ್‌ ಮುಖರ್ಜಿಯವರನ್ನು ಮುಂದೆ ಮಾಡಿದರೆ ಅದು ಅತೀವ ಪ್ರತಿರೋಧವನ್ನು ತೋರಲಾರದು ಎನ್ನುವ ವಿಶ್ವಾಸ ಆರ್‌ಎಸ್‌ಎಸ್‌ಗೆ ಇದ್ದಂತಿದೆ. ಹಾಗೆ ಮಾಡಲು ಮುಂದಾದಲ್ಲಿ ಇದಾಗಲೇ ಹಿಂದೊಮ್ಮೆ ಪ್ರಣಬ್‌ ಅವರಿಗೆ ಪ್ರಧಾನ ಮಂತ್ರಿ ಹುದ್ದೆಯನ್ನು ತಪ್ಪಿಸಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ಮತ್ತೊಮ್ಮೆ ಅದೇ ಅಪಾದನೆಗೆ ಸಿಲುಕಿಕೊಳ್ಳಬಹುದು. ಈ ಮೂಲಕ ಪ್ರಣಬ್‌ ಅವರ ಉಮೇದುವಾರಿಯನ್ನು ಕಾಂಗ್ರೆಸ್‌ ಒಪ್ಪಲೂ ಅಥವಾ ಒಪ್ಪದೇ ಇರಲು ಸಾಧ್ಯವಿಲ್ಲದಂಥ ಸಂದಿಗ್ಧಕ್ಕೆ ಸಿಲುಕಿಕೊಳ್ಳಬಹುದು. ಕಾಂಗ್ರೆಸ್‌ನ ಹಿರಿಯ ನಾಯಕರಾದ ಪ್ರಣಬ್‌ರನ್ನು ಪಕ್ಷ ವಿರೋಧಿ ಎಂದು ಜರೆಯಲು ಮುಂದಾಗುವುದೂ ಸಹ ಕಾಂಗ್ರೆಸ್‌ಗೆ ಕಷ್ಟವಾಗುವ ಸ್ಥಿತಿ ನಿರ್ಮಾಣವಾಗಬಹುದು. ಹೀಗಾಗಿ ಕಾಂಗ್ರೆಸ್ ‌ಅನ್ನು ಪ್ರಣಬ್‌ರ ಮೂಲಕವೇ ಕಟ್ಟಿಹಾಕುವ ಚಿಂತನೆ ಆರ್‌ಎಸ್‌ಎಸ್‌ಗಿರುವಂತಿದೆ. ಪ್ರಣಬ್‌ ಪ್ರಧಾನಿಯಾಗುತ್ತಾರೆ ಎಂದಾದಲ್ಲಿ ಬಹುತೇಕ ಪ್ರಾಂತೀಯ ಪಕ್ಷಗಳಿಗೆ ಅವರ ನಾಯಕತ್ವವನ್ನು ಒಪ್ಪಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಬಹುದು. ಪ್ರಣಬ್‌ ಅವರ ಕಾರಣಕ್ಕೆ ಎನ್‌ಡಿಎಯಲ್ಲಿನ ಮೈತ್ರಿ ಪಕ್ಷಗಳು ಅವರನ್ನು ಒಪ್ಪಿದರೆ, ಅವರ ರಾಜಕೀಯ ಜೀವನದುದ್ದಕ್ಕೂ ಜಾತ್ಯತೀತ ಪಕ್ಷದಲ್ಲಿದ್ದರು ಎಂಬುದು ಬಿಜೆಪಿಯನ್ನು ವಿರೋಧಿಸುವ ಪಕ್ಷಗಳೂ ಸಹ ಅವರ ನಾಯಕತ್ವವನ್ನು ಒಪ್ಪಿಕೊಳ್ಳಬಹುದು.

ಇದನ್ನೂ ಓದಿ : ಹಿಂದೂ ರಾಷ್ಟ್ರೀಯವಾದಿ ಆರೆಸ್ಸೆಸ್‌ಗೆ ಜಾತ್ಯತೀತತೆಯ ಪಾಠ ಮಾಡಿದ ಪ್ರಣಬ್‌

ಹಾಗೆ ಸುಮ್ಮನೆ ಕೆಲವೊಂದು ಪ್ರಾಂತೀಯ ಪಕ್ಷಗಳ ನಡೆ ಹೇಗಿರಬಹುದು ಎಂದು ಊಹಿಸುವುದಾದರೆ, ಹೆಚ್ಚೆಂದರೆ ಎನ್‌ಸಿಪಿಯ ಶರದ್‌ ಪವಾರ್‌‌ ಅವರು ಉಪ ಪ್ರಧಾನಿ ಸ್ಥಾನಕ್ಕೆ ಬೇಡಿಕೆ ಇಡಬಹುದು. ಅಧಿಕಾರ ರಾಜಕಾರಣದಲ್ಲಿ ಹಿನ್ನೆಡೆ ಅನುಭವಿಸಿರುವ ಶಿವಸೇನೆಯೂ ಸಹ ಈ ಪ್ರಯೋಗಕ್ಕೆ ಜೊತೆಯಾಗಬಹುದು. ತಮಿಳುನಾಡಿನ ಎಐಎಡಿಎಂಕೆ ಮತ್ತು ಆಂಧ್ರಪ್ರದೇಶದ ಟಿಡಿಪಿಯು ಬಹುಕಾಲದಿಂದಲೂ ರಾಜ್ಯದ ಹಿತಾಸಕ್ತಿಯ ಹೆಸರಿನಲ್ಲಿ ಅನುಕೂಲಸಿಂಧು ರಾಜಕಾರಣ ಮಾಡುತ್ತಿದ್ದು ಅದನ್ನೇ ಮುಂದುವರೆಸಬಹುದು. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್ ಪಕ್ಷವನ್ನು ಪ್ರಣಬ್‌ ಮುಖರ್ಜಿಗೆ ಬೆಂಬಲ ಸೂಚಿಸುವಂತೆ ಮಾಡುವುದು ಕಷ್ಟವಾಗದೇ ಇರಬಹುದು. ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ಪ್ರಣಬ್‌ ಮುಖರ್ಜಿ ಅವರ ಉಮೇದುವಾರಿಕೆಯನ್ನು ವಿರೋಧಿಸುವ ಮಟ್ಟಕ್ಕೆ ಇಳಿಯದೇ ಇರಬಹುದು.

ತಮ್ಮದೇ ರಾಜ್ಯದವರು ಪ್ರಧಾನಿಯಾಗುತ್ತಾರೆ ಎನ್ನುವ ಕಾರಣಕ್ಕೆ ಪಶ್ಚಿಮ ಬಂಗಾಳದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಾಗಲಿ, ಎಡಪಕ್ಷಗಳಾಗಲಿ ಈ ಪ್ರಯತ್ನಕ್ಕೆ ಪ್ರತಿರೋಧಿಸದೇ ಇರಬಹುದು. ಎಡಪಕ್ಷಗಳು ಒಪ್ಪದೇ ಇದ್ದರೂ ಕಾಂಗ್ರೆಸ್‌ ಜೊತೆ ಸೇರಿ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಬಹುದು. ಇನ್ನು ಎಸ್‌ಪಿ, ಬಿಎಸ್‌ಪಿ, ಆರ್‌ಜೆಡಿಯಂತಹ ಪಕ್ಷಗಳೂ ಸಹ ವಿರೋಧ ಪಕ್ಷಗಳ ಸಾಲಿನಲ್ಲಿ ಕೂರದೆ ಸರ್ಕಾರದ ಭಾಗವಾಗುವುದಕ್ಕೇ ಹೆಚ್ಚಿನ ಒಲವು ತೋರಬಹುದು. ಹೀಗಾದಲ್ಲಿ, ಕಾಂಗ್ರೆಸ್ ‌ಅನ್ನು ರಾಜಕೀಯವಾಗಿ ಒಂಟಿ ಹಾಗೂ ಅಸಹಾಯಕವನ್ನಾಗಿಸಿ, ಬಿಜೆಪಿಯು ಅಧಿಕಾರದ ಆವರಣದಲ್ಲಿಯೇ ಉಳಿಯಬಹುದು. ಅತ್ತ ಪ್ರಣಬ್‌ ಮುಖರ್ಜಿಯವರಿಗೂ ಸಹ ತಮಗೆ ಈ ಹಿಂದೆ ಪಕ್ಷದಿಂದ ಆದ ಅನ್ಯಾಯಕ್ಕೆ ಜವಾಬು ನೀಡಿದಂತೆ ಆಗುತ್ತದೆ ಎನ್ನುವ ಲೆಕ್ಕಾಚಾರಗಳೆಲ್ಲವೂ ಪ್ರಣಬ್‌ - ಭಾಗವತ್‌ ಅವರು ನಾಗಪುರದಲ್ಲಿ ನಡೆಸಿದ ಜುಗಲ್‌ಬಂದಿಯ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ರವಾನಿಸಿರಬಹುದೇ? ಕಾಂಗ್ರೆಸ್‌ನ ಬಿಜೆಪಿ ವಿರೋಧಿ ಒಕ್ಕೂಟದ ದಾಳಕ್ಕೆ ಪ್ರತಿಯಾಗಿ, ಆರ್‌ಎಸ್‌ಎಸ್‌ ‘ರಾಷ್ಟ್ರೀಯ ಸರ್ಕಾರ’ದ ತಂತ್ರ ಹೆಣೆದಿರಬಹುದು. ಕಾಂಗ್ರೆಸ್‌ ಮುಕ್ತ ಎಂದು ಘಂಟಾಘೋಷವಾಗಿ ಹೇಳದೇ ಕಾಂಗ್ರೆಸ್ ಅನ್ನು‌ ಏಕಾಂಗಿಗೊಳಿಸುವ ತಂತ್ರದ ಭಾಗವಾಗಿ ಪ್ರಣ‌ಬ್‌ ಅವರ ಆರ್‌ಎಸ್ಎಸ್‌ ಭೇಟಿಯನ್ನು ನೋಡಲೂ ಸಾಧ್ಯವಿದೆ.

ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?
ಶಿವಮೊಗ್ಗ ಲೋಕಸಭಾ ಉಪ ಚುನಾವಣೆ | ಒಲ್ಲದ ಮದುವೆ ಕಣದಲ್ಲಿ ಬಳುವಳಿಗಳ ಮೇಲಾಟ!
ಲಿಂಗಾಯತ ಧರ್ಮ ಕುರಿತ ಸಚಿವ ಡಿಕೆಶಿ ಕ್ಷಮಾಪಣೆ ಹಿಂದಿನ ಒಳಗುಟ್ಟುಗಳೇನು?
Editor’s Pick More