ರಾಜಕೀಯ ಸನ್ನಿವೇಶ ಸವಾಲುಗಳು ಕುಮಾರಸ್ವಾಮಿ ಅವರನ್ನು ಬದಲಾಯಿಸಿವೆಯೇ? 

ಮೈತ್ರಿ ಧರ್ಮದ ಸವಾಲುಗಳು, ಪಕ್ಷದೊಳಗಿನ ರಾಜಕೀಯ, ಆಡಳಿತಾತ್ಮಕ ಹೊಣೆಗಾರಿಕೆ ಇವೆಲ್ಲವೂ ಕುಮಾರಸ್ವಾಮಿಯವರ ವ್ಯಕ್ತಿತ್ವದಲ್ಲಿ ಬದಲಾವಣೆಗೆ ಕಾರಣವಾಗಿವೆಯೇ? ಬಿಡುಬೀಸು ಶೈಲಿಯ ಹುಂಬ ರಾಜಕಾರಣವನ್ನು ಬದಿಗೊತ್ತಿ, ಸಮನ್ವಯ ಶೈಲಿಯ ರಾಜಕಾರಣದತ್ತ ಕುಮಾರಸ್ವಾಮಿ ಹೊರಳಿರಬಹುದೆ

ಮುಖ್ಯಮಂತ್ರಿ ಕುಮಾರಸ್ವಾಮಿಯವರ ಇಬ್ಬಂದಿತನಗಳು, ದಿನೇದಿನೇ ಆವರಿಸುತ್ತಿರುವ ಸವಾಲುಗಳು ಅವರನ್ನು ಮೆದುವಾಗಿಸಿವೆಯೇ? ಇಂತಹದೊಂದು ಪ್ರಶ್ನೆ ಅಧಿಕಾರವಹಿಸಿಕೊಂಡ ದಿನದಿಂದಲೂ ಅವರ ನಡೆನುಡಿಗಳನ್ನು ಗಮನಿಸುತ್ತಿರುವವರಲ್ಲಿ ಮೂಡುವ ಪ್ರಶ್ನೆ.

ಮುಖ್ಯಮಂತ್ರಿಯಾದರೂ ಅದು ತಮ್ಮ ಸ್ವಂತ ಬಲದಿಂದ ಅಲ್ಲ ಎನ್ನುವ ಕಾರಣಕ್ಕೆ ಕೇಳುವುದಕ್ಕೂ ಮೊದಲೇ ಮನೆಬಾಗಿಲಿಗೆ ಬಂದು ಅಧಿಕಾರ ದಯಪಾಲಿಸಿದ ಕಾಂಗ್ರೆಸ್‌ನೆಡೆಗೆ ಕೃತಜ್ಞತಾಭಾವ ಹೊಂದಿರಲೇಬೇಕಾದ ಅನಿವಾರ್ಯತೆ ಕುಮಾರಸ್ವಾಮಿಯವರಿಗಿದೆ. ಬಹುಶಃ ಈ ಭಾರವನ್ನು ಕಡಿಮೆ ಮಾಡಿಕೊಳ್ಳಲು ಅವರು ಇತ್ತೀಚಿನ ದಿನಗಳಲ್ಲಿ ಪದೇಪದೇ ಕಾಂಗ್ರೆಸ್‌ಗೆ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತಿರುತ್ತಾರೆ. ಈ ಹಿಂದೆ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ನಡೆಸುವ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಅದನ್ನೊಂದು ಅಧಿಕಾರ ಹಂಚಿಕೆಯ ಭಾಗವಾಗಿ ಪರಿಗಣಿಸಿದ್ದರು. ಪಕ್ಷವನ್ನು ಉಳಿಸಿಕೊಳ್ಳಲು ತಾವು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾಗಿ ಪದೇಪದೇ ನೆನಪಿಸುತ್ತಿದ್ದರು. ಪಕ್ಷ ಹೋಳಾಗದಂತೆ ತಡೆಯಲು ತಂದೆಯ ವಿರುದ್ಧ ಹೋಗಲೇಬೇಕಾದ ಅನಿವಾರ್ಯತೆ ತಮಗಿತ್ತು ಎನ್ನುತ್ತಿದ್ದರು. ಅಧಿಕಾರ ಹಂಚಿಕೆಯ ವಿಚಾರದಲ್ಲಿ ಬಿಜೆಪಿಯೊಂದಿಗೆ ಪೂರ್ವನಿರ್ಧರಿತ ಸಹಮತವಿದ್ದುದರಿಂದ ಅಲ್ಲಿ ‘ಕೃತಜ್ಞತೆ’ ಹಾಗೂ ‘ಹಂಗು’ ಈ ಎರಡೂ ಭಾವನೆಗಳಿಗೆ ಅಸ್ಪದವಿರಲಿಲ್ಲ.

ಆದರೆ, ಸದ್ಯದ ಪರಿಸ್ಥಿತಿ ಭಿನ್ನವಾಗಿದೆ. ಬಿಜೆಪಿ ವಿರೋಧಿ ರಾಜಕಾರಣದ ಭಾಗವಾಗಿ, ಜಾತ್ಯತೀತತೆಯನ್ನು ಎತ್ತಿ ಹಿಡಿಯುವ ಕಾರ್ಯತಂತ್ರದ ಅಂಗವಾಗಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಿಗೇ ಕಾಂಗ್ರೆಸ್‌ ಜೆಡಿಎಸ್‌ಗೆ ಷರತ್ತು ರಹಿತ ಬೆಂಬಲ ಘೋಷಿಸಿತು. ಅದೇ ರೀತಿ, ದೇಶದಲ್ಲಿ ಬಿಜೆಪಿಯೇತರ ರಾಜಕೀಯ ಶಕ್ತಿಗಳನ್ನು ಒಂದು ವೇದಿಕೆಯಲ್ಲಿ ತಂದ, ಬರಲಿರುವ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಒಗ್ಗಟ್ಟು ಪ್ರದರ್ಶಿಸುವ ಉದ್ದೇಶದಿಂದ ಜೆಡಿಎಸ್‌ ಸಹ ಕುಮಾರಸ್ವಾಮಿಯವರ ಪ್ರಮಾಣವಚನದ ಸಮಾರಂಭಕ್ಕೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ ಹಾಗೂ ಎಲ್ಲ ಪ್ರಾಂತೀಯ ರಾಜಕೀಯ ಪಕ್ಷಗಳ ನಾಯಕರನ್ನು ಆಹ್ವಾನಿಸಿತು. ಇದೆಲ್ಲದರ ಪರಿಣಾಮ ಕುಮಾರಸ್ವಾಮಿಯವರ ಮೇಲೆ ಈಗ ನಿರೀಕ್ಷೆಗಳ ಅತಿಯಾದ ಭಾರವಿದೆ. ಅನಪೇಕ್ಷಿತವಾಗಿ ಒದಗಿಬಂದ ಮೈತ್ರಿ ಧರ್ಮವನ್ನು ಪಾಲಿಸುತ್ತಲೇ ಎಲ್ಲರನ್ನೂ ತೂಗಿಸಿಕೊಂಡು ಹೋಗಬೇಕಾದ ತಾಳ್ಮೆಯೂ ಅಗತ್ಯವಿದೆ. ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ‌ಅನ್ನು ನಿಭಾಯಿಸುತ್ತಾ, ಎರಡೂ ಪಕ್ಷಗಳು ಸೇರಿ ಮಾಡಿಕೊಂಡಿರುವ ಸಮನ್ವಯ ಸಮಿತಿಯಲ್ಲಿ ಅಭಿಪ್ರಾಯಭೇದಗಳು ವಿಜೃಂಭಿಸದಂತೆ ಎಚ್ಚರಿಕೆಯ ಹೆಜ್ಜೆಗಳನ್ನಿರಿಸುತ್ತಾ ಅವರು ಸಾಗಬೇಕಿದೆ..

ಇದೆಲ್ಲ ಒಂದು ತೂಕವಾದರೆ, ಮತ್ತೊಂದು ತೂಕ ಅವರೇ ಹೇಳಿಕೊಳ್ಳುತ್ತಿರುವಂತೆ ಅವರ ಅರೋಗ್ಯದ ಸೂಕ್ಷ್ಮತೆ. ಈ ಕಾರಣಕ್ಕಾಗಿಯೇ ಎಂತಹದ್ದೇ ಸಂಕೀರ್ಣ ಸನ್ನಿವೇಶಗಳನ್ನೂ ಒತ್ತಡಕ್ಕೆ, ಉದ್ವೇಗಕ್ಕೆ ಒಳಗಾಗದೆ ನಿಭಾಯಿಸಬೇಕಾಗುತ್ತದೆ. ತಮ್ಮ ಬಳಿ ಹಣಕಾಸು ಖಾತೆಯೂ ಸೇರಿದಂತೆ ಹನ್ನೊಂದು ಪ್ರಮುಖ ಖಾತೆಗಳನ್ನು ಕುಮಾರಸ್ವಾಮಿ ಪ್ರಸ್ತುತ ಹೊಂದಿದ್ದಾರೆ. ಇವೆಲ್ಲವುಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕೆಂದರೆ ಸಾಕಷ್ಟು ಸಿದ್ಧತೆ, ಸಮಯ ಹೊಂದಾಣಿಕೆ ಬಹುಮುಖ್ಯ. ಇದೇ ವೇಳೆ, ಆಡಳಿತಾತ್ಮಕ ವಿಚಾರಗಳಲ್ಲಿ ತಮ್ಮ ತಂದೆಯವರಾದ ಜೆಡಿಎಸ್‌ ವರಿಷ್ಠ ದೇವೇಗೌಡರ ಸಲಹೆ ಸೂಚನೆಗಳನ್ನೂ ಅವರು ಪಡೆಯ ಬೇಕಾಗುತ್ತದೆ, ಹಲ ವಿಷಯಗಳಲ್ಲಿ ಚರ್ಚೆ, ಹಗ್ಗಜಗ್ಗಾಟವನ್ನೂ ನಡೆಸಬೇಕಾಗಬಹುದು.

ಇನ್ನು ಕೃಷಿ ಸಾಲಮನ್ನಾ ವಿಚಾರವಾಗಿ ರೈತರಿಗೆ ನೀಡಿರುವ ಭರವಸೆಯೂ ಸಹ ದುಬಾರಿಯಾದಂತಹದ್ದು. ಅದನ್ನು ಈಡೇರಿಸಲೇಬೇಕಾದ ಅನಿವಾರ್ಯತೆ ಕುಮಾರಸ್ವಾಮಿಯವರ ಮೇಲಿದ್ದು, ರಾಜ್ಯದ ಬೊಕ್ಕಸವನ್ನು ಹೇಗೆ ಹೊಂದಿಕೆ ಮಾಡಬೇಕು, ಸಾಲಮನ್ನಾ ವಿಚಾರದಲ್ಲಿ ವಚನಭ್ರಷ್ಟತೆಯ ಕಳಂಕ ತಮ್ಮನ್ನು ಭಾದಿಸದಂತೆ ಹೇಗೆ ನೋಡಿಕೊಳ್ಳಬೇಕು ಎನ್ನುವ ಬಗ್ಗೆಯೂ ಚಿಂತಿಸಬೇಕಿದೆ.

ಮುಂದಿನ ದಿನಗಳಲ್ಲಿ, ರಾಮನಗರ ಉಪಚುನಾವಣೆ ವಿಚಾರವಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ವಿಧಾನಸಭಾ ಚುನಾವಣೆಯ ವೇಳೆ ಪ್ರಜ್ವಲ್‌ ರೇವಣ್ಣ ಅವರ ಸ್ಪರ್ಧೆಯ ವಿಚಾರವಾಗಿ ದೇವೇಗೌಡರ ಕುಟುಂಬದೊಳಗೆ ಅಪಸ್ವರಗಳು, ಭಿನ್ನಾಭಿಪ್ರಾಯಗಳು ಕೇಳಿಬಂದಿದ್ದವು. ಕಡೆಗೆ ದೇವೇಗೌಡರ ಅಣತಿಯಂತೆ ಕುಮಾರಸ್ವಾಮಿ ಹಾಗೂ ರೇವಣ್ಣ ಮಾತ್ರವೇ ಸ್ಪರ್ಧಿಸುವುದು ಎಂದು ತೀರ್ಮಾನವಾಗಿತ್ತು. ಇದೀಗ ಉಪಚುನಾವಣೆ ವೇಳೆ ಅನಿತಾ ಕುಮಾರಸ್ವಾಮಿ ಅಥವಾ ನಿಖಿಲ್‌ ಕುಮಾರಸ್ವಾಮಿ ಕಣಕ್ಕಿಳಿಯುವ ಮಾತುಗಳು ಕೇಳಿಬರುತ್ತಿವೆ. ಹಾಗಾದಲ್ಲಿ, ಕುಟುಂಬದೊಳಗೆ ಮತ್ತೊಂದು ಸುತ್ತಿನ ಹಗ್ಗಜಗ್ಗಾಟವೂ ನಡೆಯಬಹುದು. ಎರಡು ಖಾತೆಗಳಿಗೆ ಬೇಡಿಕೆಯನ್ನಿರಿಸಿದ್ದರೂ ಅದನ್ನು ಪಡೆಯುವಲ್ಲಿ ರೇವಣ್ಣನವರು ಯಶಸ್ವಿಯಾಗಿಲ್ಲ ಎನ್ನುವ ಅಂಶವನ್ನೂ ಇಲ್ಲಿ ಗಮನಿಸಬೇಕಾಗುತ್ತದೆ. ಈ ಒತ್ತಡಗಳೆಲ್ಲವನ್ನೂ ಕುಮಾರಸ್ವಾಮಿಯವರ ನಿಭಾಯಿಸಬೇಕಿದೆ.

ಇದನ್ನೂ ಓದಿ : ಇಲಾಜು | ನೂತನ ಸಿಎಂ ಕುಮಾರಸ್ವಾಮಿ ಅವರಿಗೆ ವೈದ್ಯರೊಬ್ಬರ ಆರು ಅಹವಾಲು

ಒಮ್ಮೆ ಉಪಚುನಾವಣೆಯನ್ನು ನೀಸಿಕೊಂಡರೆ, ಮುಂದೆ ಲೋಕಸಭಾ ಚುನಾವಣೆಗೆ ಸಜ್ಜಾಗುವುದರತ್ತ ಗಮನಹರಿಸಬೇಕಾಗುತ್ತದೆ. ಪಕ್ಷ ಸಂಘಟನೆ, ಪ್ರಚಾರದ ದೃಷ್ಟಿಯಿಂದ ಜೆಡಿಎಸ್‌ಗೆ ಕುಮಾರಸ್ವಾಮಿಯವರು ಅನಿವಾರ್ಯ. ಅದೇರೀತಿ, ಆಡಳಿತದಲ್ಲಿರುವ ಕಾರಣಕ್ಕೆ ಗೌರವಯುತವೆನಿಸುವಷ್ಟು ಸ್ಥಾನಗಳನ್ನಾದರೂ ಗೆದ್ದು ತೋರಿಸಬೇಕಾದ ಒತ್ತಡ ಕುಮಾರಸ್ವಾಮಿಯವರ ಮೇಲಿರಲಿದೆ. ಚುನಾವಣಾ ಪ್ರಚಾರ ದೈಹಿಕವಾಗಿಯೂ ಅವರನ್ನು ಬಳಲಿಸಬಹುದು. ‌

ಈ ಎಲ್ಲ ಭಾರಗಳು, ಹೊಣೆಗಾರಿಕೆಗಳು ಕುಮಾರಸ್ವಾಮಿಯವರಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಚೈತನ್ಯವನ್ನು ಬೇಡಲಿವೆ. ಈ ಎಲ್ಲ ಒತ್ತಡಗಳಿಂದ ಉಂಟಾಗಬಹುದಾದ ದೈಹಿಕ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕೆಂದರೆ ಹೆಚ್ಚಿನ ಮಾನಸಿಕ ದೃಢತೆ, ಉದ್ವೇಗರಾಹಿತ್ಯತೆಯ ಅತ್ಯಗತ್ಯವಾಗಲಿದೆ. ಹಿಂದೆ ತಮ್ಮ ದುಡುಕು ರಾಜಕೀಯ ನಿರ್ಧಾರಗಳಿಂದ ಸಾಕಷ್ಟು ಸವಾಲುಗಳನ್ನು ಮೈಮೇಲೆ ಎಳೆದುಕೊಂಡಿದ್ದ ಕುಮಾರಸ್ವಾಮಿಯವರು ಬಹುಶಃ ಇದೆಲ್ಲದರಿಂದ ಈಗ ಪಾಠ ಕಲಿತಿದ್ದು, ಸಮನ್ವಯದತ್ತ ತಮ್ಮ ಚಿತ್ತ ಹೊರಳಿಸಿದಂತಿದೆ. ಇದುವೇ ಅವರು ಹೆಚ್ಚು ಮೆದುವಾಗಿ, ತಾಳ್ಮೆಯಿಂದ ವರ್ತಿಸಲು ಕಾರಣವಾಗುತ್ತಿರಬಹುದು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More