ಪರಿಷತ್ ಫಲಿತಾಂಶ| ಬಿಜೆಪಿ 3, ಜೆಡಿಎಸ್ 2, ಕಾಂಗ್ರೆಸ್ ಅಭ್ಯರ್ಥಿ ಅನಿರೀಕ್ಷಿತ ಜಯ

ಆರು ವಿಧಾನ ಪರಿಷತ್ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆಯ ಫಲಿತಾಂಶ ಮಂಗಳವಾರ ತಡರಾತ್ರಿ ಪ್ರಕಟಗೊಂಡಿದ್ದು, ಬಿಜೆಪಿ ಮೂರು ಕ್ಷೇತ್ರ, ಜೆಡಿಎಸ್ ಎರಡು ಕ್ಷೇತ್ರ ಹಾಗೂ ಕಾಂಗ್ರೆಸ್ ಒಂದು ಕ್ಷೇತ್ರವನ್ನು ಅನಿರೀಕ್ಷಿತವಾಗಿ ಗೆದ್ದು ಕೊಂಡಿದೆ

ಆರು ವಿಧಾನ ಪರಿಷತ್ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆಯ ಫಲಿತಾಂಶ ಮಂಗಳವಾರ ತಡರಾತ್ರಿ ಪ್ರಕಟಗೊಂಡಿದ್ದು, ಬಿಜೆಪಿ ಮೂರು ಕ್ಷೇತ್ರ, ಜೆಡಿಎಸ್ ಎರಡು ಕ್ಷೇತ್ರ ಹಾಗೂ ಕಾಂಗ್ರೆಸ್ ಒಂದು ಕ್ಷೇತ್ರವನ್ನು ಅನಿರೀಕ್ಷಿತವಾಗಿ ಗೆದ್ದು ಕೊಂಡಿದೆ.

ವಿಧಾನ ಪರಿಷತ್ ಪದವೀಧರ ಮೂರು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದರೆ, ಕಾಂಗ್ರೆಸ್ ಈ ಬಾರಿ ಬಿಜೆಪಿಯನ್ನು ಮಣಿಸುವ ಮೂಲಕ ಒಂದು ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ. ಇನ್ನು, ಶಿಕ್ಷಕರ ಕ್ಷೇತ್ರದ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಎರಡು ಕ್ಷೇತ್ರಗಳನ್ನು ಗೆದ್ದುಕೊಂಡಿದ್ದು, ಬಿಜೆಪಿ ಒಂದು ಕ್ಷೇತ್ರದಲ್ಲಿ ಗೆಲವು ಕಂಡಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರು ಗೆಲ್ಲುವ ಮೂಲಕ ಸತತ ನಾಲ್ಕನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದ ಗೆಲುವಿಗಾಗಿ 7,933 ಮತಗಳ ಕೋಟಾ ನಿಗದಿಪಡಿಸಲಾಗಿತ್ತು. ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಮುಗಿದಾಗ ಮರಿತಿಬ್ಬೇಗೌಡ 6,003 ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ 5,514 ಮತಗಳನ್ನು ಪಡೆದಿದ್ದರು.

ತೇರ್ಗಡೆ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ ನಿರಂಜನಮೂರ್ತಿ ಹೊರಗುಳಿದಿದ್ದರಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ಹೆಚ್ಚುತ್ತಾ ಹೋಗಿ ಎರಡನೇ ಸುತ್ತಿನ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಮರಿತಿಬ್ಬೇಗೌಡ 11,022 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಮರಿತಿಬ್ಬೇಗೌಡ ಅವರು 2000 ದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದರು. 2006 ರಲ್ಲಿ ಪಕ್ಷೇತರರಾಗಿ ಹಾಗೂ 2012 ರಲ್ಲಿ ಜೆಡಿಎಸ್ ನಿಂದ ಗೆದ್ದಿದ್ದನ್ನು ಇಲ್ಲಿ ನೆನೆಯಬಹುದು.

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಕೂಡ ಜೆಡಿಎಸ್ ಅಭ್ಯರ್ಥಿ ಎಲ್ ಭೋಜೇಗೌಡ ಅವರು ಗೆಲವು ಕಂಡಿದ್ದಾರೆ. ಗೆಲುವಿಗಾಗಿ 7,846 ಮತಗಳನ್ನು ನಿಗದಿ ಮಾಡಲಾಗಿತ್ತು. ಅದರೆ, 7,310 ಮತಗಳನ್ನು ಭೋಜೇಗೌಡ ಪಡೆದರು. ಆದರೆ, ಹೆಚ್ಚು ಮತಗಳನ್ನು ಬೋಜೇಗೌಡ ಅವರೇ ಪಡೆದಿದ್ದರಿಂದ ಅವರನ್ನು ಜಯಶಾಲಿ ಎಂದು ಘೋಷಿಸಲಾಗಿದ್ದು, ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ ಕೆ ಮಂಜುನಾಥ್ ಪೈಪೋಟಿ ನೀಡುವಲ್ಲಿ ವಿಫಲರಾಗಿರುವರು.

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ವೈ ಎ ನಾರಾಯಣಸ್ವಾಮಿ ಅವರು ಸುಮಾರು 2 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಎಂ ಎ ರಮೇಶ್ ಬಾಬು ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್ ನಿಂದ ಎಂ ರಾಮಪ್ಪ ಇಲ್ಲಿ ಸ್ಪರ್ಧಿಸಿದ್ದರು. ಆದರೆ, ಅವರಿಬ್ಬರಿಗೂ ಪೈಪೋಟಿ ನೀಡುವಲ್ಲಿ ರಾಮಪ್ಪ ಹಿನ್ನಡೆ ಅನುಭವಿಸಿದ್ದಾರೆ.

ಪದವೀಧರ ಕ್ಷೇತ್ರಗಳ ಫಲಿತಾಂಶ

ಮೂರು ದಶಕಗಳಿಂದ ಬಿಜೆಪಿ ವಶದಲ್ಲಿದ್ದ ಈಶಾನ್ಯ ಪದವೀಧರ ಕ್ಷೇತ್ರವನ್ನು ಈ ಬಾರಿ ಕಾಂಗ್ರೆಸ್ ತನ್ನ ತೆಕ್ಕೆಗೆ ತಗೆದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಅವರು ಬಿಜೆಪಿ ಅಭ್ಯರ್ಥಿ ಕೆ ವಿ ಶ್ರೀನಿವಾಸ ವಿರುದ್ಧ 321 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಚಂದ್ರಶೇಖರ್ 18,768 ಮತಗಳನ್ನು ಪಡೆದಿದ್ದರೆ, ಶ್ರೀನಿವಾಸ 18,447 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎನ್ ಆರ್ ಪ್ರತಾಪರೆಡ್ಡಿ ಎರಡನೇ ರನ್ನರ್ ಅಪ್ ಆಗಿದ್ದಾರೆ.

ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ಅವರು ಮೊದಲ ಸುತ್ತಿನಲ್ಲೇ 25,250 ಮತಗಳನ್ನು ಪಡೆಯುವ ಮೂಲಕ ಗೆಲವು ಕಂಡಿದ್ದಾರೆ. ಕಾಂಗ್ರೆಸ್ ನಿಂದ ಎಸ್ ಪಿ ದಿನೇಶ್ ಅವರು ಆಯನೂರು ವಿರುದ್ಧ ಸೋತಿರುವರು. ಜೆಡಿಎಸ್ ಅಭ್ಯರ್ಥಿ ಅರುಣಕುಮಾರ್ ಅವರು ಎರಡು ಪಕ್ಷಗಳಿಗೂ ಪೈಪೋಟಿ ನೀಡುವಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ.

ಇದನ್ನೂ ಓದಿ : ಬಡ್ತಿ ಮೀಸಲಾತಿ; ವಿಧಾನ ಪರಿಷತ್‌ಗೆ ಮಾಹಿತಿ ಒದಗಿಸದ ವಿಧಾನಸಭೆ ಸಚಿವಾಲಯ

ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅ ದೇವೇಗೌಡ 3,864 ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದು, ಈ ಮೂಲಕ ತನ್ನ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಹಾಗೂ ಜೆಡಿಎಸ್ ಅಭ್ಯರ್ಥಿ ಅಚ್ಚೇಗೌಡ ಶಿವಣ್ಣ ಸೋಲು ಕಂಡಿದ್ದಾರೆ.

ಮೂರು ಪದವೀಧರ ಕ್ಷೇತ್ರ ಮತ್ತು ಮೂರು ಶಿಕ್ಷಕರ ಕ್ಷೇತ್ರಗಳ ಸದ್ಯದ ಸದಸ್ಯರು ಜೂ. 21ಕ್ಕೆ ನಿವೃತ್ತರಾಗಲಿದ್ದಾರೆ. ವಿಧಾನ ಪರಿಷತ್ ನ ಈಗಿನ ಬಲಾಬಲ ಗಮನಿಸಿದರೆ 75 ಸ್ಥಾನಗಳ ಪೈಕಿ ಕಾಂಗ್ರೆಸ್ 34, ಬಿಜೆಪಿ 20 ಮತ್ತು ಜೆಡಿಎಸ್ 14 ಸದಸ್ಯರನ್ನು ಒಳಗೊಂಡಿದೆ. ಮೂವರು ಸ್ವತಂತ್ರ ಪಕ್ಷಗಳ ಸದಸ್ಯರಿದ್ದಾರೆ.

ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
ಕೇರಳದಲ್ಲಿ ಬಿಜೆಪಿಗೆ ರಾಜಕೀಯ ನೆಲೆ ಒದಗಿಸಲಿದೆಯೇ ಶಬರಿಮಲೆ ವಿವಾದ?
ಬಳ್ಳಾರಿ ಕಣದಲ್ಲಿ ಸಿದ್ದು-ರಾಮುಲು ವಾಕ್ಸಮರದಾಚೆಗೂ ಉಳಿಯುವ ಪ್ರಶ್ನೆಗಳೇನು?
Editor’s Pick More