ಸಿಎಸ್‌ಡಿಎಸ್ ಸಮೀಕ್ಷೆ | ಕುಸಿದ ಮೋದಿ ಅಲೆ, ಏರಿದೆ ರಾಹುಲ್ ಜನಪ್ರಿಯತೆ

ಮೋದಿ ಅಲೆ ದೇಶದಾದ್ಯಂತ ಕಡಿಮೆಯಾಗಿರುವ ಸಂಕೇತವನ್ನು ಸಿಎಸ್‌ಡಿಎಸ್ ಸಮೀಕ್ಷೆ ಹೇಳಿದೆ. ಹಾಗೆಯೇ ಮೋದಿ ಸರ್ಕಾರದ ಬಗ್ಗೆ ಜನರಲ್ಲಿ ಹತಾಶಭಾವ ಮೂಡಿದೆ. ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವುದು ಬೇಡ ಎಂದು ಹೇಳುವವರ ಸಂಖ್ಯೆ ಹೆಚ್ಚಾಗಿದೆ

2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೇ ಬಿಜೆಪಿಯ ಪ್ರಭಾವ ದೇಶದಲ್ಲಿ ಕಡಿಮೆಯಾಗುತ್ತಿರುವುದು ಕಂಡು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಪ್ರಗತಿ ಕುಂಠಿತವಾಗಿದೆ ಎಂಬ ಭಾವನೆ ಬಹಳಷ್ಟು ಮಂದಿಯಲ್ಲಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಷ್ಟಸಾಧ್ಯವಾಗಲಿದೆ ಎಂದು ಸಿಎಸ್‌ಡಿಎಸ್-ಲೋಕನೀತಿ ನಡೆಸಿರುವ ಸಮೀಕ್ಷೆ ತಿಳಿಸಿದೆ. ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕ್ರಮವಾಗಿ ಶೇ. ೫ ಮತ್ತು ಶೇ. ೧೫ರಷ್ಟು ಬಿಜೆಪಿಗಿಂತ ಮುಂದಿದೆ. ಈ ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ದ್ವಿಪಕ್ಷೀಯ ಸ್ಪರ್ಧೆ ಇರುವ ಕಾರಣದಿಂದ ಮತಪ್ರಮಾಣದಲ್ಲಿ ಸಣ್ಣ ಅಂತರವೂ ಸ್ಥಾನಗಳ ವಿಚಾರದಲ್ಲಿ ದೊಡ್ಡ ವ್ಯತ್ಯಾಸ ತರುವ ಸಾಧ್ಯತೆಯಿದೆ.

ಸಿಎಸ್ಡಿಎಸ್-ಲೋಕನೀತಿ ಸಮೀಕ್ಷೆಯಲ್ಲಿ ೧೯ ರಾಜ್ಯಗಳಲ್ಲಿ ಏಪ್ರಿಲ್ ೨೦ರಿಂದ ಮೇ ೧೭ರ ನಡುವೆ ಐವತ್ತು ಸಾವಿರ ಜನರನ್ನು ಸಂದರ್ಶಿಸಲಾಗಿದೆ. ಇದೇ ಸಂಸ್ಥೆ 2017 ಮೇ ಮತ್ತು 2018 ಜನವರಿಯಲ್ಲಿ ನಡೆಸಿದ ಸಮೀಕ್ಷೆಯ ಜೊತೆಗೆ ಈಗಿನ ಸಮೀಕ್ಷೆಯನ್ನು ಹೋಲಿಸಿ ನೋಡಿದಾಗ ದೇಶವಾಸಿಗಳ ಅಭಿಪ್ರಾಯದಲ್ಲಿ ದೊಡ್ಡ ಮಟ್ಟಿನ ಬದಲಾವಣೆಯಾಗಿರುವುದು ಕಂಡುಬಂದಿದೆ. ಇತ್ತೀಚೆಗಿನ ಮೂರು ಸಮೀಕ್ಷೆಗಳನ್ನು ಹೋಲಿಸಿ ನೋಡಿದಾಗ ಕಂಡುಬಂದ ಪ್ರಮುಖ ಬದಲಾವಣೆಗಳು ಹೀಗಿವೆ:

ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕುಸಿತ

ಮೋದಿ ಅಲೆ ದೇಶದಾದ್ಯಂತ ಕಡಿಮೆಯಾಗಿರುವ ಸಂಕೇತವನ್ನು ಸಿಎಸ್‌ಡಿಎಸ್ ಸಮೀಕ್ಷೆಯಿಂದ ಬಹಿರಂಗವಾಗಿದೆ. ಹಾಗೆಯೇ ಮೋದಿ ಸರ್ಕಾರದ ಬಗ್ಗೆ ಜನರಲ್ಲಿ ಹತಾಶಭಾವ ಮೂಡಿದೆ. ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವುದು ಬೇಡ ಎಂದು ಹೇಳುವವರ ಸಂಖ್ಯೆ ಹೆಚ್ಚಾಗಿದೆ. ಸಮೀಕ್ಷೆಯಲ್ಲಿ ೧೯ ರಾಜ್ಯಗಳ ೧೭೫ ಲೋಕಸಭಾ ಕ್ಷೇತ್ರಗಳ ೧೫,೮೫೯ ಜನರನ್ನು ಮಾತನಾಡಿಸಿದಾಗ ಸುಮಾರು ಶೇ. ೪೭ರಷ್ಟು ಮಂದಿ ಮೋದಿ ಸರ್ಕಾರವನ್ನು ಮತ್ತೊಮ್ಮೆ ಆರಿಸುವುದಿಲ್ಲ ಎಂದು ಹೇಳಿದ್ದಾರೆ. ಹಾಗೆ ನೋಡಿದರೆ ಬಿಜೆಪಿ ಮಟ್ಟಿಗೆ ಈ ಸಂಖ್ಯೆ ನಿರಾಶಾದಾಯಕ. ೨೦೧೪ರ ಚುನಾವಣೆಗೆ ಮೊದಲು ೨೦೧೩ರ ಜುಲೈನಲ್ಲಿ ನಡೆದ ಸಮೀಕ್ಷೆಯಲ್ಲಿ ಯುಪಿಎ ಸರ್ಕಾರ ಶೇ.೩೯ರಷ್ಟು ಮಂದಿ ಮಾತ್ರ ಯುಪಿಎ ಸರ್ಕಾರಕ್ಕೆ ಮತ್ತೊಂದು ಬಾರಿ ಅವಕಾಶ ಕೊಡುವ ವಿರುದ್ಧ ಅಭಿಪ್ರಾಯವ್ಯಕ್ತಪಡಿಸಿದ್ದರು. ಅಷ್ಟು ಪ್ರಮಾಣದ ಆಕ್ರೋಶವಿದ್ದಾಗಲೇ ಕಾಂಗ್ರೆಸ್ ಅತೀ ಕಡಿಮೆ ಸ್ಥಾನಗಳಿಗೆ ಸೀಮಿತವಾಗಿದ್ದು ಈಗ ಇತಿಹಾಸ. ಹಿಂದೂ ಮತದಾರರಲ್ಲಿ ಶೇ. ೪೨ರಷ್ಟು ಮಂದಿ ಮೋದಿ ಸರ್ಕಾರಕ್ಕೆ ಮತ್ತೊಂದು ಬಾರಿ ಅವಕಾಶ ಕೊಡಲು ಸಿದ್ಧರಿಲ್ಲ. ಮುಖ್ಯವಾಗಿ ದಲಿತ ಮತ್ತು ಆದಿವಾಸಿ ಹಿಂದೂಗಳಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಅತೀವ ಆಕ್ರೋಶವಿದೆ. ೨೦೧೮ರ ಮೇನಿಂದ ಜೂನ್ ನಡುವೆ ಬಿಜೆಪಿ ಶೇ.೫ರಷ್ಟು ಪಾಯಿಂಟುಗಳ ಬೆಂಬಲವನ್ನು ಕಳೆದುಕೊಂಡಿದೆ. ಇದೇ ವೇಗದಲ್ಲಿ ಬೆಂಬಲ ಕಳೆದುಕೊಂಡಲ್ಲಿ ೨೦೧೯ರ ಚುನಾವಣೆಯ ಹೊತ್ತಿನಲ್ಲಿ ಬಿಜೆಪಿಯ ಬೆಂಬಲಿಗರ ಪ್ರಮಾಣ ಶೇ. ೩೦ರ ಆಸುಪಾಸಿನಲ್ಲಿರಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.

ಪ್ರಾದೇಶಿಕವಾಗಿ ಪ್ರಬಲವಾಗುತ್ತಿದೆ ಕಾಂಗ್ರೆಸ್

ಪ್ರಾದೇಶಿಕವಾಗಿ ನೋಡಿದಲ್ಲಿ ದಕ್ಷಿಣಭಾರತದಲ್ಲಿ ಬಿಜೆಪಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಉತ್ತರ ಭಾರತವೂ ಈ ಆಕ್ರೋಶಕ್ಕೆ ಹೊರತಾಗಿಲ್ಲ. ಐದು ದಕ್ಷಿಣ ರಾಜ್ಯಗಳಲ್ಲಿ ಶೇ. ೧೮ರಷ್ಟು ಮಾತ್ರ ಮತಪ್ರಮಾಣವನ್ನು ಬಿಜೆಪಿ ಹೊಂದಿದೆ. ಕಳೆದ ಜನವರಿಯಿಂದ ಜೂನ್ ನಡುವೆ ಈ ಪ್ರಮಾಣದಲ್ಲಿ ಶೇ. ೭ರಷ್ಟು ತೀವ್ರ ಕುಸಿತವಾಗಿದೆ. ಟಿಡಿಪಿ, ಡಿಎಂಕೆ, ಜೆಡಿಎಸ್ ಮತ್ತು ಎಡಪಕ್ಷಗಳ ರಾಜಕೀಯ ಕುಶಲತೆ ಬಿಜೆಪಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಉತ್ತರ ಭಾರತದಲ್ಲಿಯೂ ಬಿಜೆಪಿ ಐದು ತಿಂಗಳ ಹಿಂದಿನ ಜನಪ್ರಿಯತೆಯನ್ನು ಈಗ ಉಳಿಸಿಕೊಂಡಿಲ್ಲ. ಜನವರಿಯಲ್ಲಿ ಎನ್ಡಿಎಗೆ ಶೇ. ೪೫ರಷ್ಟು ಬೆಂಬಲವಿದ್ದರೆ, ಈಗ ಶೇ. ೩೯ರಷ್ಟೇ ಬೆಂಬಲ ವ್ಯಕ್ತವಾಗುತ್ತಿದೆ. ಈ ಹಠಾತ್ ಕುಸಿತಕ್ಕೆ ಮುಖ್ಯ ಕಾರಣ ಬಿಜೆಪಿ ಅತೀ ಪ್ರಮುಖ ರಾಜ್ಯವಾಗಿರುವ ಉತ್ತರಪ್ರದೇಶದಲ್ಲಿ ಪ್ರಾಬಲ್ಯ ಕಳೆದುಕೊಂಡಿರುವುದು. ಎರಡು ತಿಂಗಳ ಹಿಂದಿನ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಯೇ ಬಿಜೆಪಿಗಿಂತ ಮುಂದಿದೆ. ರಾಜಸ್ಥಾನದಲ್ಲಿ ಬಿಜೆಪಿ ಸ್ವಲ್ಪ ಮಟ್ಟಿಗೆ ಹಿಡಿತ ಉಳಿಸಿಕೊಂಡಿದ್ದರೂ, ಕಳೆದ ಜನವರಿಯಿಂದ ಕಾಂಗ್ರೆಸ್ ತನ್ನ ಪ್ರಭಾವವನ್ನು ವೇಗವಾಗಿ ವಿಸ್ತರಿಸಿಕೊಂಡಿದೆ. ವಿಧಾನಸಭಾ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಸ್ಪಷ್ಟ ಮುನ್ನಡೆ ಸಾಧಿಸುವ ಸಾಧ್ಯತೆಯಿದೆ. ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಎನ್‌ಡಿಎ ಮತ್ತು ಯುಪಿಎ ಪ್ರಭಾವದಲ್ಲಿ ಇದ್ದ ಅಂತರ ಕಡಿಮೆಯಾಗುತ್ತಲೇ ಬಂದಿದೆ. ೨೦೧೭ ಮೇನಲ್ಲಿ ಈ ಪ್ರಾಂತದಲ್ಲಿ ಎನ್‌ಡಿಎ ಮತ್ತು ಯುಪಿಎ ನಡುವೆ ಶೇ. ೨೪ರಷ್ಟು ಪಾಯಿಂಟುಗಳ ಅಂತರವಿತ್ತು. ೨೦೧೮ ಜನವರಿಗೆ ಈ ಅಂತರ ೮ ಪಾಯಿಂಟುಗಳಿಗೆ ಇಳಿದಿದೆ. ಈಗ ಅದು ೫ ಪಾಯಿಂಟುಗಳಿಗೆ ಕುಸಿದಿದೆ. ಗುಜರಾತ್ ಹೊರತಾಗಿ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಪ್ರಭಾವ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಗೆ ಕಾಂಗ್ರೆಸ್- ಎಸ್‌ಪಿ ಮೈತ್ರಿ ಕಠಿಣ ಸವಾಲನ್ನೊಡ್ಡಿದೆ. ಬಿಹಾರ ಮತ್ತು ಒಡಿಶಾದಲ್ಲಿ ಎನ್‌ಡಿಎ ಪ್ರಭಾವ ಚೆನ್ನಾಗಿದೆ. ಆದರೆ ತೃಣಮೂಲ ಕಾಂಗ್ರೆಸ್ ಎದುರು ಪಶ್ಚಿಮ ಬಂಗಾಳದಲ್ಲಿ ತಣ್ಣಗಿದೆ. ಜಾರ್ಖಂಡ್ ಮತ್ತು ಅಸ್ಸಾಂನಲ್ಲಿ ಕಾಂಗ್ರೆಸ್ ಮರುಜೀವ ಪಡೆದುಕೊಳ್ಳುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಮೋದಿ ಜನಪ್ರಿಯತೆ ಕುಸಿದಂತೆ ಹೆಚ್ಚಾಗುತ್ತಿದೆ ರಾಹುಲ್ ಪ್ರಭಾವ

ಎನ್‌ಡಿಎ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಡುವಿನ ಜನಪ್ರಿಯತೆಯ ಅಂತರ ನಿಧಾನವಾಗಿ ಕಡಿಮೆಯಾಗುತ್ತಿದೆ. ದೇಶದ ದಲಿತರು ಮತ್ತು ಆದಿವಾಸಿಗಳು ಬಿಜೆಪಿಯಿಂದ ದೂರವಾಗಿರುವುದು ಮಾತ್ರವಲ್ಲ, ತಮ್ಮ ನಾಯಕನ ಆದ್ಯತೆಯನ್ನೂ ಬದಲಿಸಿಕೊಳ್ಳುತ್ತಿದ್ದಾರೆ. ೨೦೧೮ ಜನವರಿಯಲ್ಲಿ ಸುಮಾರು ಶೇ. ೧೮ರಷ್ಟು ದಲಿತರು ಮತ್ತು ಶೇ. ೨೭ರಷ್ಟು ಆದಿವಾಸಿಗಳು ರಾಹುಲ್ ಗಾಂಧಿಯನ್ನು ತಮ್ಮ ನಾಯಕನೆಂದು ಹೇಳಿದ್ದರೆ, ಈಗ ಶೇ. ೨೫ರಷ್ಟು ದಲಿತರು ಮತ್ತು ಶೇ. ೩೦ರಷ್ಟು ಆದಿವಾಸಿಗಳು ರಾಹುಲ್‌ರನ್ನು ಪ್ರಧಾನಿಯಾಗಿ ಬಯಸಿದ್ದಾರೆ. ಪ್ರಧಾನಿ ಮೋದಿಯವರನ್ನು ಬಯಸುವವರ ಸಂಖ್ಯೆ ಇದೇ ಅವಧಿಯಲ್ಲಿ ಕುಸಿದಿದೆ. ಜನವರಿಯಲ್ಲಿ ಶೇ. ೩೫ರಷ್ಟು ದಲಿತರು ಮೋದಿಯನ್ನು ಬಯಸಿದರೆ, ಈಗ ಶೇ. ೨೫ರಷ್ಟು ಮಂದಿ ಮಾತ್ರ ಮೋದಿಯವರನ್ನು ಪ್ರಧಾನಿಯಾಗಿ ಬಯಸಿದ್ದಾರೆ. ಹಾಗೆಯೇ ಆದಿವಾಸಿಗಳಲ್ಲೂ ಮೋದಿ ಜನಪ್ರಿಯತೆ ಶೇ. ೪೭ರಿಂದ ಶೇ. ೩೭ಕ್ಕೆ ಇಳಿದಿದೆ. ಇತರ ಸಮುದಾಯಗಳಲ್ಲೂ ರಾಹುಲ್ ಗಾಂಧಿಯವರನ್ನು ನಾಯಕರನ್ನಾಗಿ ನೋಡುವವರ ಪ್ರಮಾಣ ಹೆಚ್ಚಾಗಿರುವಂತೆಯೇ, ಮೋದಿ ಜನಪ್ರಿಯತೆ ಇಳಿದಿದೆ. ಹೀಗಾಗಿ ರಾಷ್ಟ್ರವಾರು ಅಂಕಿ ಅಂಶಗಳನ್ನು ನೋಡಿದಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವೆ ಜನವರಿಯಲ್ಲಿ ಜನಪ್ರಿಯತೆಯ ವ್ಯತ್ಯಾಸ ಶೇ. ೧೭ರಷ್ಟು ಇದ್ದರೆ, ಈಗ ಅದು ಶೇ. ೧೦ ಪಾಯಿಂಟುಗಳಿಗೆ ಇಳಿದಿದೆ. ಲೋಕಸಭಾ ಚುನಾವಣೆಯ ಆಯ್ಕೆಯಲ್ಲಿಯೂ ಪ್ರಧಾನಿಯಾಗಿ ಮೋದಿ ಜನಪ್ರಿಯತೆ ಕುಸಿದಿದೆ. ೨೦೧೪ರಲ್ಲಿ ಶೇ. ೩೬ರಷ್ಟು ಮತದಾರರು ಮೋದಿಯವರನ್ನು ಪ್ರಧಾನಿಯಾಗಿ ಬಯಸಿದರೆ, ಶೇ.೮ರಷ್ಟು ಮತದಾರರು ರಾಹುಲ್ ಗಾಂಧಿಯವರನ್ನು ಪ್ರಧಾನಿಯಾಗಿ ಬಯಸಿದ್ದರು. ಜನವರಿಯ ಸಮೀಕ್ಷೆಗೆ ಹೋಲಿಸಿದಲ್ಲಿ ಮೋದಿಯವರನ್ನು ಪ್ರಧಾನಿಯಾಗಿ ಬಯಸುವವರ ಸಂಖ್ಯೆ ಕಡಿಮೆಯಾದರೆ, ರಾಹುಲ್ ಗಾಂಧಿಯವರನ್ನು ಆರಿಸುವವರ ಸಂಖ್ಯೆ ಹೆಚ್ಚಾಗಿದೆ. ಈಗಲೂ ಮತದಾರರ ನಡುವೆ ನರೇಂದ್ರ ಮೋದಿಯವರೇ ರಾಹುಲ್ ಗಾಂಧಿಗಿಂತ ಹೆಚ್ಚು ಜನಪ್ರಿಯರು. ಆದರೆ ಸಮೀಕ್ಷೆಯಲ್ಲಿ ಇಬ್ಬರೂ ನಾಯಕರನ್ನು ಸಮಾನ ಅಂದರೆ ಶೇ. ೪೩ರಷ್ಟು ಪ್ರಮಾಣದಲ್ಲಿ ಜನರು ಇಷ್ಟಪಡುತ್ತಿರುವುದು ಪತ್ತೆಯಾಗಿದೆ. ನಾವು ಇಷ್ಟಪಡದವರ ಪ್ರಮಾಣವನ್ನು ಪರಿಗಣಿಸಿದರೂ ಸಹ ರಾಹುಲ್ ಗಾಂಧಿ ಅವರ ಜನಪ್ರಿಯತೆಯಲ್ಲಿ ಏರಿಕೆ ಕಾಣುತ್ತಿದೆ. ರಾಹುಲ್ ಗಾಂಧಿಯವರ ಸಂಖ್ಯೆ ಶೇ. ೧೧ (ಶೇ. ೪೩ರಿಂದ ಶೇ. ೩೨ ಕಳೆದರೆ) ಪಾಯಿಂಟುಗಳು. ಆದರೆ ನರೇಂದ್ರ ಮೋದಿಯವರ ಸಂಖ್ಯೆ ಶೇ.೭ (ಶೇ. ೪೩ರಿಂದ ಶೇ. ೩೬ ಕಳೆದರೆ) ಪಾಯಿಂಟುಗಳು.

ಮೋದಿ ಸರ್ಕಾರದ ಬಗ್ಗೆ ಜನ ಭರವಸೆ ಕಳೆದುಕೊಳ್ಳಲು ಕಾರಣ

  • ಆರ್ಥಿಕ ಪ್ರಗತಿಗೆ ಸಂಬಂಧಿಸಿ ಮೋದಿ ಸರ್ಕಾರದ ಮೇಲೆ ಜನರ ಭರವಸೆ ಕುಸಿಯುತ್ತಲೇ ಇದೆ. ಉದ್ಯೋಗ, ತೆರಿಗೆ ಮತ್ತು ಖಾಸಗಿ ಹಣಕಾಸು ಭದ್ರತೆ ವಿಚಾರವಾಗಿ ಸರ್ಕಾರ ಜನರ ಭರವಸೆ ಕಳೆದುಕೊಂಡಿದೆ. ಸಂದರ್ಶಿಸಿದ ನಾಲ್ಕು ವ್ಯಕ್ತಿಗಳಲ್ಲಿ ಒಬ್ಬರು ನಿರುದ್ಯೋಗವನ್ನೇ ದೊಡ್ಡ ಸಮಸ್ಯೆ ಎಂದು ಹೇಳಿದ್ದಾರೆ. ಜಿಎಸ್ಟಿ ಮತ್ತು ಸರ್ಕಾರದ ತೆರಿಗೆ ನೀತಿಯ ಬಗ್ಗೆಯೂ ಜನಸಾಮಾನ್ಯರು ಅಸಮಾಧಾನ ಹೊಂದಿದ್ದಾರೆ.
  • ದಲಿತ ಸಮುದಾಯ ಬಿಜೆಪಿಯ ಬಗ್ಗೆ ಅಸಮಧಾನ ಹೊಂದಿದ್ದಾರೆ. ದಲಿತರ ಮೇಲೆ ದೇಶಾದ್ಯಂತ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಬಿಜೆಪಿ ಸರ್ಕಾರದ ಮೌನ ಮತ್ತು ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯ್ದೆಯನ್ನು ಮೃದುಗೊಳಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಆಕ್ರೋಶ ದಲಿತ ಸಮುದಾಯವು ಬಿಜೆಪಿಯಿಂದ ದೂರವಾಗಲು ಕಾರಣವಾಗಿದೆ. ಸಮೀಕ್ಷೆಯಲ್ಲಿ ಶೇ. ೬೦ರಷ್ಟು ದಲಿತರು ಮತ್ತು ಶೇ. ೫೪ರಷ್ಟು ಆದಿವಾಸಿಗಳು ತಮ್ಮ ಸಮುದಾಯದ ಕುರಿತು ಬಿಜೆಪಿಯ ಅಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
  • ಸರ್ಕಾರದ ಕಾರ್ಯವೈಖರಿಯ ಬಗ್ಗೆಯೂ ಜನರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ೨೦೧೭ ಮೇನಿಂದ ೨೦೧೮ ಜನವರಿ ನಡುವೆ ಈ ಅಸಮಾಧಾನ ಶೇ. ೨೭ರಿಂದ ಶೇ. ೪೦ಕ್ಕೇರಿದೆ. ಮೇ ಅಂತ್ಯಕ್ಕಾಗುವಾಗ ಈ ಅಸಮಧಾನದ ಪ್ರಮಾಣ ಶೇ. ೪೭ರಷ್ಟಿತ್ತು. ಒಂದೇ ವರ್ಷದಲ್ಲಿ ಶೇ. ೨೦ ಪಾಯಿಂಟುಗಳ ಪ್ರಮಾಣದಲ್ಲಿ ಅಸಮಧಾನ ಏರಿರುವುದು ಕಂಡುಬಂದಿದೆ. ಇದೇ ಅವಧಿಯಲ್ಲಿ ಸರ್ಕಾರದ ಬಗ್ಗೆ ತೃಪ್ತಿ ವ್ಯಕ್ತಪಡಿಸುವವರ ಪ್ರಮಾಣ ಶೇ. ೬೪ರಿಂದ ಶೇ. ೪೭ಕ್ಕೆ ಇಳಿದಿದೆ. ಮುಖ್ಯವಾಗಿ ದಕ್ಷಿಣದ ರಾಜ್ಯಗಳಲ್ಲಿ ಈ ಪ್ರಮಾಣ ವ್ಯಾಪಕವಾಗಿದೆ.
  • ದೇಶ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅಭಿಪ್ರಾಯಪಡುತ್ತಿರುವವರ ಪ್ರಮಾಣವೂ ಹೆಚ್ಚಾಗಿದೆ. ಕಟುವಾ ಮತ್ತು ಉನ್ನಾವೋದಂತಹ ಪ್ರಕರಣಗಳ ಬಗ್ಗೆಯೂ ಜನರಲ್ಲಿ ಜಾಗೃತಿ ಅಧಿಕವಾಗಿದೆ. ಪ್ರತೀ ಮೂವರು ಪ್ರತಿಸ್ಪಂದಿಗಳಲ್ಲಿ ಒಬ್ಬರು ನ್ಯಾಯಮೂರ್ತಿ ಲೋಯಾ ಮರಣದ ವಿವಾದದ ಬಗ್ಗೆಯೂ ತಿಳಿದಿರುವುದಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ ಶೇ. ೪೪ರಷ್ಟು ಪ್ರತಿಸ್ಪಂದಿಗಳು ದೇಶ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದರೆ, ಶೇ. ೩೫ರಷ್ಟು ಮಂದಿ ಮಾತ್ರ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದ್ದಾರೆ.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More