೧೮ ಶಾಸಕರ ಅನರ್ಹತೆ ಪ್ರಕರಣ; ಸದ್ಯಕ್ಕೆ ಬಚಾವಾದ ಪಳನಿಸ್ವಾಮಿ ಸರ್ಕಾರ

ತಮಿಳುನಾಡಿನ ಎಐಎಡಿಎಂಕೆ ಪಕ್ಷದ ೧೮ ಶಾಸಕರ ಅನರ್ಹತೆ ಪ್ರಶ್ನಿಸಿದ್ದ ಅರ್ಜಿ ಕುರಿತಂತೆ ಮದ್ರಾಸ್ ಹೈಕೋರ್ಟ್ ದ್ವಿಸದಸ್ಯ ಒಂದು ಅಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ. ಈ ಮೂಲಕ ಈ ಪ್ರಕರಣ ಈಗ ಮೂರನೇ ನ್ಯಾಯಾಧೀಶರ ಅಂಗಳಕ್ಕೆ ಹೋಗಲಿದ್ದು, ತೀವ್ರ ಕುತೂಹಲ ಮೂಡಿಸಿದೆ

ತಮಿಳುನಾಡಿನ ಎಐಎಡಿಎಂಕೆ ಪಕ್ಷದ ೧೮ ಶಾಸಕರ ಅನರ್ಹತೆ ಪ್ರಶ್ನಿಸಿದ್ದ ಅರ್ಜಿ ಕುರಿತಂತೆ ಮದ್ರಾಸ್ ಹೈಕೋರ್ಟ್ ದ್ವಿಸದಸ್ಯ ಪೀಠ ಒಂದು ಅಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ. ಇಬ್ಬರೂ ನ್ಯಾಯಮೂರ್ತಿಗಳು ಎರಡು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಈ ಪ್ರಕರಣ ಈಗ ಮೂರನೇ ನ್ಯಾಯಾಧೀಶರ ಅಂಗಳಕ್ಕೆ ಹೋಗಲಿದೆ. ೩ನೇ ನ್ಯಾಯಾಧೀಶರ ಅಭಿಪ್ರಾಯ ಪ್ರಾಮುಖ್ಯ ಪಡೆದಿದ್ದು, ಅವರಿಂದ ಹೊರಬೀಳುವ ತೀರ್ಪಿನ ಸುತ್ತ ತಮಿಳುನಾಡು ರಾಜಕೀಯ ವಲಯ ಕುತೂಹಲದ ದೃಷ್ಟಿ ನೆಟ್ಟಿದೆ.

ಗುರುವಾರ ನಡೆದ ವಿಚಾರಣೆ ವೇಳೆ, ೧೮ ಶಾಸಕರನ್ನು ಅನರ್ಹಗೊಳಿಸಿದ ತಮಿಳುನಾಡು ಸ್ಪೀಕರ್ ಪಿ ಧನಪಾಲ್ ಅವರ ಆದೇಶವನ್ನು ಮುಖ್ಯ ನಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ಎತ್ತಿಹಿಡಿದು ತೀರ್ಪು ನೀಡಿದರು; ಆದರೆ, ಇನ್ನೋರ್ವ ನ್ಯಾಯಮೂರ್ತಿ ಎಂ ಸುಂದರ್ ಅವರು ಸ್ಪೀಕರ್ ಆದೇಶವನ್ನು ವಜಾಮಾಡಿ ತೀರ್ಪಿತ್ತರು. ಹಾಗಾಗಿ ಸರ್ಕಾರ ಸದ್ಯಕ್ಕೆ ಬಚಾವಾಗಿದೆ.

ಪಳನಿಸ್ವಾಮಿ ಸರ್ಕಾರ ಗುರುವಾರ ಬೀಳಬಹುದು ಎನ್ನುವ ನಿರೀಕ್ಷೆ ತಮಿಳುನಾಡು ರಾಜಕೀಯ ವಲಯದಲ್ಲಿ ಇತ್ತು. ಆದರೆ, ಮದ್ರಾಸ್ ಹೈಕೋರ್ಟ್ ದ್ವಿಸದಸ್ಯ ಪೀಠ ನೀಡಿದ ಭಿನ್ನ ಅಭಿಪ್ರಾಯ ಸಹಜವಾಗಿಯೇ ಪಳನಿಸ್ವಾಮಿ ನೇತೃತ್ವದ ಸರ್ಕಾರಕ್ಕೂ ತುಸು ನಿರಾಳತೆ ತಂದಿದೆ.

ಎಐಎಡಿಎಂಕೆ ಪಕ್ಷದ ೧೮ ಶಾಸಕರ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ವಿಚಾರಣೆ ನಡೆಸಿದ್ದರಿಂದ ಈಗ ಮತ್ತೆ ಹೈಕೋರ್ಟ್ ಈ ವಿಚಾರಣೆ ಕೈಗೆತ್ತಿಕೊಳ್ಳುವುದು ಅನುಮಾನ. ಹೀಗಾಗಿ, ಈ ಪ್ರಕರಣ ಸುಪ್ರೀಂ ಕೋರ್ಟ್‌ ನ ಏಕಪೀಠ ಸದಸ್ಯಕ್ಕೆ ವರ್ಗಾವಣೆ ಆಗುವ ನಿರೀಕ್ಷೆ ಇದೆ. ಅಂತಿಮ ತೀರ್ಪು ಬರುವರೆಗೂ ಶಾಸಕರ ಅನರ್ಹತೆ ಮುಂದುವರಿಯಲಿದೆ.

ಪ್ರಕರಣದ ಹಿನ್ನೆಲೆ

ಕಳೆದ ವರ್ಷ ಎಐಎಡಿಎಂಕೆ ಪಕ್ಷದ ೧೮ ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿ ಪಳನಿಸ್ವಾಮಿ ಸರ್ಕಾರಕ್ಕೆ ನಮ್ಮ ಬೆಂಬಲವಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ, ಎಐಎಡಿಎಂಕೆ ಪಕ್ಷದ ಮುಖಂಡ ಎಸ್‌ ರಾಜೇಂದ್ರನ್‌ ಅವರು ಸ್ಪೀಕರ್ ಪಿ ಧನಪಾಲ್ ಬಳಿ ಪಕ್ಷವಿರೋಧಿ ಚಟುವಟಿಕೆಗಳಲ್ಲಿ ಆ ೧೮ ಶಾಸಕರು ತೊಡಗಿದ್ದಾರೆ ಎಂಬ ಆರೋಪದ ಮೇಲೆ ಅವರ ಶಾಸಕತ್ವ ಅನರ್ಹಗೊಳಿಸಲು ಮನವಿ ಮಾಡಿದ್ದರು.

ತಮಿಳುನಾಡು ವಿಧಾನಸಭೆಯ ಪಕ್ಷಾಂತರ ಕಾಯ್ದೆ ೧೯೮೬ರ ನಿಯಮಾವಳಿಗಳ ಪ್ರಕಾರ ಸ್ಪೀಕರ್ ಧನಪಾಲ್ ಆ ೧೮ ಶಾಸಕರ ಶಾಸಕತ್ವ ಅನರ್ಹಗೊಳಿಸಿ ಆದೇಶಿಸಿದ್ದರು. ಸ್ಪೀಕರ್ ಆದೇಶ ತಪ್ಪುಗಳಿಂದ ಕೂಡಿದ್ದು ಅವರ ಆದೇಶವನ್ನು ರದ್ದುಗೊಳಿಸಲು ಕೋರಿ ಆ ೧೮ ಶಾಸಕರು ಹೈಕೋರ್ಟ್ ಮೆಟ್ಟಿಲು ಏರಿದರು. ೨೦೧೭ರ ಸೆಪ್ಟೆಂಬರ್ 20ರಂದು ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ಸದನದಲ್ಲಿ ಬಲಾಬಲ ಪರೀಕ್ಷೆಗೆ ತಡೆಯೊಡ್ಡಿತ್ತು. ಹಾಗೆಯೇ, ೧೮ ಶಾಸಕರ ಅನರ್ಹತೆ ಮೇಲೆ ಮರುಚುನಾವಣೆ ನಡೆಸದಂತೆ ತಮಿಳುನಾಡು ಚುನಾವಣೆ ಆಯೋಗಕ್ಕೂ ಸೂಚಿಸಿತ್ತು.

ಇದನ್ನೂ ಓದಿ : ಆಪ್‌ ಶಾಸಕರ ಅನರ್ಹ ಪ್ರಕರಣ; ಚುನಾವಣಾ ಆಯೋಗದ ವಿರುದ್ಧ ಎದ್ದ ಪ್ರಶ್ನೆಗಳೇನು?

ಮುಂದೇನಾಗಬಹುದು?

ಮೂರನೇ ನ್ಯಾಯಮೂರ್ತಿಗಳಿಂದ ಈ ಪ್ರಕರಣ ಕುರಿತು ತೀರ್ಪು ಹೇಗೇ ಬಂದರೂ ಪಳನಿಸ್ವಾಮಿ ಸರ್ಕಾರ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ. ನ್ಯಾಯಮೂರ್ತಿಗಳು ಶಾಸಕರ ಅನರ್ಹತೆ ಎತ್ತಿಹಿಡಿದರೆ ಆ 18 ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ಮತ್ತೆ ಚುನಾವಣೆ ನಡೆಯಲಿದೆ. ಆಗ ಎಐಎಡಿಎಂಕೆ ಮತ್ತೆ ಈ ೧೮ ಸ್ಥಾನಗಳನ್ನು ಗೆಲ್ಲುವುದು ತುಂಬಾ ಕಷ್ಟ.

ಕರ್ನಾಟಕದಲ್ಲೂ ೨೦೧೧ರಲ್ಲಿ ಇದೇ ತರಹದ ಬೆಳವಣಿಗೆ ನಡೆದಿತ್ತು. ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ೧೬ ಶಾಸಕರು ವಾಪಸ್ ಪಡೆದಿದ್ದರು. ಆಗ ಸ್ಪೀಕರ್ ಬೋಪಯ್ಯ ಆ ೧೬ ಶಾಸಕರ ಶಾಸಕ ಸ್ಥಾನವನ್ನು ಅನರ್ಹಗೊಳಿಸಿದ್ದರು. ಆಗ ಎಲ್ಲ ಶಾಸಕರು ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದ ೧೬ ಶಾಸಕರ ಅನರ್ಹಗೊಳಿಸಿದ್ದನ್ನು ತಪ್ಪು ಎಂದು ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ, ಒಂದು ವೇಳೆ ತಮಿಳುನಾಡು ಶಾಸಕರ ಅನರ್ಹತೆಯನ್ನು ಮೂರನೇ ನ್ಯಾಯಮೂರ್ತಿಗಳು ರದ್ದುಪಡಿಸಿದರೆ ಆಗ ಶಾಸಕರು ಡಿಎಂಕೆ ಜೊತೆ ಕೈಜೋಡಿಸಿ ಪಳನಿಸ್ವಾಮಿ ಸರ್ಕಾರ ಕೆಳಗಿಳಿಸಲು ಮುಂದಾಗಬಹುದು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More