ವಾಗ್ಮಿ ನರೇಂದ್ರ ಮೋದಿಯವರು ನಿಜಕ್ಕೂ ರಾಹುಲ್ ಗಾಂಧಿಗಿಂತ ಪ್ರಬುದ್ಧರೇ?

ರಾಹುಲ್ ಗಾಂಧಿ ದಡ್ಡ ಮತ್ತು ಅಜ್ಞಾನಿ ಹಾಗೂ ಮೋದಿಯವರು ಬುದ್ಧಿವಂತ ಮತ್ತು ಜ್ಞಾನಿ ಎಂಬುದು ಪ್ರಚಲಿತದಲ್ಲಿದೆ. ಆದರೆ, ಇದು ಪ್ರಜಾಸತ್ತಾತ್ಮಕ ಭಾರತ ನೋಡಿದ ಅತ್ಯಂತ ದೊಡ್ಡ ಪ್ರಚಾರ ಕಸರತ್ತಿನ ಫಲಶ್ರುತಿ ಎಂದಿದೆ ‘ದಿ ವೈರ್‌’ ವಿಶ್ಲೇಷಣೆ. ಇದರ ಭಾವಾನುವಾದ ಇಲ್ಲಿದೆ

ಕಳೆದ ನಾಲ್ಕು ವರ್ಷಗಳಲ್ಲಿ, ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ಮೇಲೆ, ಯಾವುದಾದರೂ ಒಂದು ನಿರೂಪಣೆ ದೇಶದಾದ್ಯಂತ ಸಾಮಾನ್ಯ ಚರ್ಚಾ ವಿಷಯ ಆಗಿದೆ ಎಂದರೆ ಅದು- ‘ರಾಹುಲ್ ಗಾಂಧಿಯು ಒಬ್ಬ ದಡ್ಡ ಮತ್ತು ಅಜ್ಞಾನಿ 'ಪಪ್ಪು’ ಆಗಿದ್ದು, ಅವರು ಸಹಜವಾಗಿ ದೇಶದ ಪ್ರಧಾನಮಂತ್ರಿಯಾಗುವುದಕ್ಕೆ ಅನರ್ಹರು’ ಎಂಬುದು.

ಅದಕ್ಕೆ ಇತ್ತೀಚಿನ ಉದಾಹರಣೆ ಎಂದರೆ, ಅಮೆರಿಕದಲ್ಲಿ ಕೊಕಾ ಕೋಲ ಸ್ಥಾಪನೆ ಮಾಡಿದವರು ಮೂಲತಃ ನಿಂಬೆ ಪಾನೀಯ ಮಾರಾಟಗಾರರಾಗಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದನ್ನೇ ಇಟ್ಟುಕೊಂಡು ಟ್ವಿಟರ್‌ನಲ್ಲಿ ಹರಿದುಬರುತ್ತಿರುವ ಜೋಕ್‌ಗಳ ಮಹಾಪೂರ ಮತ್ತು #AccordingToRahulGandhi ಹ್ಯಾಷ್‌ಟ್ಯಾಗ್‌ನಲ್ಲಿ ಮೂಡಿಬರುತ್ತಿರುವ ಅಭಿಪ್ರಾಯಗಳ ಸರಣಿ.

ರಾಹುಲ್ ಗಾಂಧಿಯ ಬೌದ್ಧಿಕ ಸಾಮರ್ಥ್ಯವನ್ನು ಕೊನೆಮೊದಲಿಲ್ಲದಂತೆ ಅಣಕಿಸುತ್ತಿರುವ ಈ ವಿದ್ಯಮಾನದ ಇನ್ನೊಂದು ಮಗ್ಗಲಿನ ಪರಿಣಾಮ ಏನೆಂದರೆ, ರಾಹುಲ್ ಗಾಂಧಿ ಯಾರನ್ನು ಉಚ್ಛಾಟಿಸಬೇಕು ಎಂದು ಬಯಸುತ್ತಿದ್ದಾರೋ ಆ ವ್ಯಕ್ತಿ (ಮೋದಿ) ಅದ್ಭುತ ಭಾಷಣಕಾರ ಮಾತ್ರವಲ್ಲ ತೀಕ್ಷ್ಣಮತಿಯ ಬುದ್ಧಿವಂತ ಕೂಡ ಎಂದು ಬಿಂಬಿತವಾಗುವುದು.

ವಾಸ್ತವದಲ್ಲಿ ಈ ಜೋಡಿ ಸಾದೃಶ್ಯ ನಿರೂಪಣೆಯ ಹಿಂದಿನ ಚಾಲಕಶಕ್ತಿ ಎಂದರೆ, ಸಂಘದ ಪ್ರಚಾರ ಯಂತ್ರಾಂಗ (ರಾಹುಲ್ ಅವರ ಬೌದ್ಧಿಕ ಸಾಮರ್ಥ್ಯವನ್ನು ಅವಹೇಳನ ಮಾಡುವುದಕ್ಕೆ ಬಳಸಲಾದ ‘ಆಲೂಗಡ್ಡೆ ಕಾರ್ಖಾನೆ’, ‘ಎಳೆನೀರು’, ‘ಒಂದು ಕೆಜಿ ಪೆಟ್ರೋಲಿಗೆ ೮೦ ರೂಪಾಯಿ’ ಮುಂತಾದವುಗಳೆಲ್ಲವೂ ಸುಳ್ಳು ಅಥವಾ ತಿರುಚಿ ಸೃಷ್ಟಿಸಿದ ನಿರೂಪಣೆಗಳಾಗಿವೆ). ಒಂದು ಕಡೆ, ಮೋದಿ ಪ್ರಭಾಮಂಡಲವನ್ನು ಸೃಷ್ಟಿಸುವುದಕ್ಕೆ ಬಿಜೆಪಿ ಸರ್ಕಾರದ ಪ್ರಚಾರ ಇಲಾಖೆ ೪,೦೦೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ಇನ್ನೊಂದು ಕಡೆ, ಮೋದಿಯೇ ಖುದ್ದಾಗಿ ರಾಹುಲ್ ಅವರನ್ನು 'ಬಲೂನ್ ಮತ್ತು ಮಿಠಾಯಿ'ಗೆ ಹಾತೊರೆಯುವ ಮಗು ಎಂದು ಕರೆಯುತ್ತಾರೆ. ಮತ್ತೊಂದೆಡೆ ಅಂತಹ ಮಾತುಗಳನ್ನು ಯಾವ ವಿಮರ್ಶೆಯೂ ಇಲ್ಲದೇ ಯಥಾವತ್ತಾಗಿ ವರದಿ ಮಾಡುವ ಮುಖ್ಯವಾಹಿನಿಯ ಸಂಪೂರ್ಣ ಶರಣಾಗತ ಮಾಧ್ಯಮವಿದೆ.

ಈ ನಿರೂಪಣೆಯಲ್ಲಿ, ಮೋದಿ ಒಬ್ಬ ಫೇಕು (ಅಂಗೈಯಲ್ಲಿ ಆಕಾಶ ತೋರಿಸುವ ಅಥವಾ ಮಾಡಿದ ಸಣ್ಣ ಕೆಲಸವನ್ನೇ ಭೂತಗನ್ನಡಿಯಲ್ಲಿ ದೊಡ್ಡದಾಗಿ ತೋರಿಸುವ ವ್ಯಕ್ತಿ) ಎಂದು ಒಪ್ಪಿಕೊಳ್ಳುವ ಸಾಧ್ಯತೆಯಿದೆಯಾದರೂ ರಾಹುಲ್ ಒಬ್ಬ ಪಪ್ಪು ಎಂದು ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಉದಾಹರಣೆಗೆ, ರಾಹುಲ್ ಗಾಂಧಿಯ ಕೊಕಾಕೋಲಾ ಯಡವಟ್ಟನ್ನು ಚೆನ್ನಾಗಿ ವರದಿ ಮಾಡಿದ ಇದೇ ಮುಖ್ಯವಾಹಿನಿಯ ಮಾಧ್ಯಮಗಳು ಮೋದಿಯವರು ಚೀನಾದಲ್ಲಿ ಇತ್ತೀಚೆಗೆ ಸ್ಟ್ರೆಂಥ್ ಎಂಬ ಸಂಕ್ಷೇಪರೂಪವನ್ನು ಸ್ಟ್ರೀನ್ ಎಂದು ಉಚ್ಛರಿಸುವ ಗಂಭೀರ ತಪ್ಪೆಸಗಿದರೂ ಅದನ್ನು ಪ್ರಜ್ಞಾಪೂರ್ವಕವಾಗಿ ವರದಿಯಾಗದಂತೆ ತಡೆಹಿಡಿದಿದ್ದು ಮಾತ್ರವಲ್ಲದೆ, ವರದಿ ಮಾಡಿದಾಗ ಮೋದಿ ಮಾಡಿದ ತಪ್ಪನ್ನು ಮಾಧ್ಯಮಗಳೇ ತಿದ್ದಿದವು (ಮೋದಿಯವರು ಎರಡು ಬಾರಿ ಇದನ್ನು ತಪ್ಪಾಗಿ ಉಚ್ಛರಿಸಿದರು; ಎರಡನೇ ಬಾರಿ ಸ್ಟ್ರೇಂಗತ್ ಎಂದಿದ್ದರು).

ಮೋದಿಯವರಿಗೆ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಇಲ್ಲದಿರುವುದರಿಂದ ಈ ರೀತಿ ತಪ್ಪಾಗುವುದು ಸಹಜ (ಶ್ರೀಲಂಕಾದ ಅಧ್ಯಕ್ಷ ಸಿರಿಸೇನ ಅವರ ಪತ್ನಿಯನ್ನು ಸಂಬೋಧಿಸುವಾಗ ಮಿಸಸ್ ಸಿರಿಸೇನ - Mrs Sirisena - ಎನ್ನುವುದರ ಬದಲಿಗೆ ಎಂಆರ್‌ಎಸ್ ಸಿರಿಸೇನ - M.R.S. Sirisena- ಎಂದಿದ್ದರು). ಭಾರತದ ಪ್ರಧಾನಮಂತ್ರಿಯಾಗುವುದಕ್ಕೆ ಇಂಗ್ಲಿಷ್ ಭಾಷೆಯ ಪಾಂಡಿತ್ಯ ಅವಶ್ಯವೇನಲ್ಲ; ಅಸಲಿಗೆ ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಮಾತಾಡುವ ದೇಶದ ಕುಲೀನ ವರ್ಗದ ಹೊರಗೆ ಹೆಚ್ಚೆಚ್ಚು ಪ್ರಧಾನಮಂತ್ರಿ ಅಭ್ಯರ್ಥಿಗಳು ಬರುವ ಅಗತ್ಯವಿದೆ. ಇಲ್ಲಿ ಬಹಳವಾಗಿ ಕಾಡುವ ಸಮಸ್ಯೆ ಏನೆಂದರೆ ಬಹಿರಂಗ ಜನಸ್ತೋಮಗಳನ್ನು ಉದ್ದೇಶಿಸಿ ಮಾತಾಡುವಾಗ ಮಾತ್ರವಲ್ಲದೇ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಗಂಭೀರವಾದ ಅಧ್ಯಕ್ಷೀಯ ಮಟ್ಟದ ಮಾತುಕತೆ ನಡೆಸುವಾಗಲೂ ಮೋದಿಯವರು ದಡ್ಡನಂತೆ, ಶಾಲಾ ಬಾಲಕರ ಮಟ್ಟದ ಅಕ್ಷರಗಳ ಸಂಕ್ಷೇಪ ರೂಪಗಳನ್ನು ಸೃಷ್ಟಿಸುವ ಗೀಳಿಗೆ ಬಿದ್ದಿರುವುದು.

ಕರ್ನಾಟಕದ ಚುನಾವಣಾ ಪ್ರಚಾರಾಭಿಯಾನದ ಸಮಯದಲ್ಲಿ ರಾಹುಲ್ ಗಾಂಧಿ ವಿಶ್ವೇಶ್ವರಾಯ ಅವರ ಹೆಸರನ್ನು ಸರಿಯಾಗಿ ಉಚ್ಛಾರಣೆ ಮಾಡದಿದ್ದುದೆ ಸಾಮಾಜಿಕ ಜಾಲತಾಣದ ಜೋಕ್ಸುಗಳಿಗೆ ಮತ್ತು ಮಾಧ್ಯಮ ವರದಿಗಳಿಗೆ ಬಹಳ ಸಮಯ ಮುಖ್ಯ ಆಹಾರವಾಗಿತ್ತು. ಆ ಹೆಸರನ್ನು 'ಕನಿಷ್ಠ ಐದು ಬಾರಿ' ಪುರುಚ್ಚರಿಸುವ ಮೂಲಕ ಸರಿಯಾಗಿ ಉಚ್ಛಾರ ಮಾಡುವುದನ್ನು ಕಲಿ ಎಂದು ಮೋದಿಯೇ ಖುದ್ದಾಗಿ ಹೇಳಿದ್ದರು. ಆದರೆ, ಮೋದಿಯೇ ಕೂಡಲಸಂಗಮವನ್ನು ಕುಂದಲಸಂಗಮ ಎಂದು ಉಚ್ಚರಿಸಿದರು. ಆದರೆ, ನಿರೀಕ್ಷೆಯಂತೆ ಅದನ್ನು ಯಾವ ಮಾಧ್ಯಮಗಳೂ ವರದಿ ಮಾಡಲಿಲ್ಲ.

ಇಲ್ಲಿಯ ತನಕ ಮೋದಿಯವರೂ ಎಲ್ಲ ರೀತಿಯ ಯಡವಟ್ಟುಗಳನ್ನು ಬೇಕಾದಷ್ಟು ಮಾಡಿದ್ದಾರೆ. ಆದರೆ, ೨೦೧೪ರಿಂದ ಈಚೆಗೆ ಮಾಧ್ಯಮಗಳ ಪೂರ್ಣವಾಗಿ ಒಂದುಕಡೆ ಜಾರಿರುವುದರಿಂದ ಈ ಪ್ರಮಾದಗಳು ಅಷ್ಟಾಗಿ ಪ್ರಚಾರ ಪಡೆದಿಲ್ಲ. ಇತ್ತೀಚೆಗಷ್ಟೇ, ಮೋದಿಯವರು ಗಾಂಧಿಗೆ 'ಮೋಹನ್‌ಲಾಲ್' ಗಾಂಧಿ ಎಂದಿದ್ದರು. ಯಾವಾಗಲೋ ಒಮ್ಮೆ ನಾಲಿಗೆ ತಪ್ಪಿ ಇಂತಹ ಸಣ್ಣಪುಟ್ಟ ಉಚ್ಛಾರ-ದೋಷಗಳು ಆಗುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ, ರಾಷ್ಟ್ರಪಿತನ ಹೆಸರನ್ನು ಅವರು ಈ ರೀತಿ ತಪ್ಪು ತಪ್ಪಾಗಿ ಉಚ್ಛರಿಸಿದ್ದು ಇದು ಮೂರನೇ ಸಲ. ಅದು ದೇಶದ ಪ್ರಧಾನಮಂತ್ರಿಯೊಬ್ಬರು ಹೀಗೆ ಮಾಡಿದ್ದು ತೀರಾ ಅಸಹಜವಾಗಿತ್ತು.

ಚಾರಿತ್ರಿಕ ಮತ್ತು ಅಭಿವೃದ್ಧಿ ಅಂಶಗಳ ವಿಷಯದಲ್ಲೂ ಮೋದಿ ದೊಡ್ಡ ಪ್ರಮಾದಗಳನ್ನೇ ಎಸಗಿದ್ದಾರೆ: ಚಂದ್ರಗುಪ್ತ ಗುಪ್ತ ರಾಜವಂಶಕ್ಕೆ ಸೇರಿದವನು ಎಂದು ಹೇಳಿದ್ದು, ತನ್ನ ಸೈದ್ಧಾಂತಿಕ ಗುರು ಮತ್ತು ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿಯವರನ್ನು ಇನ್ಯಾರ ಜೊತೆಗೋ ತಳುಕು ಹಾಕಿ ಗೊಂದಲ ಸೃಷ್ಟಿಸಿದ್ದು, ಅಲೆಕ್ಸಾಂಡರ್ನನ್ನು ಸೋಲಿಸಿದ್ದು ಬಿಹಾರಿಗಳು ಎಂದಿದ್ದು, ತಕ್ಷಿಲ (ತಕ್ಷಶಿಲ) ಬಿಹಾರದಲ್ಲಿದೆ ಎಂದಿದ್ದು, ಕೋನಾರ್ಕ ದೇವಾಲಯ ೨೦೦೦ ವರ್ಷಗಳಷ್ಟು ಹಳೆಯದಾಗಿದ್ದು ಆವಾಗಲೇ ತುಂಡು ಲಂಗಗಳು ಇದ್ದವು ಎಂದಿದ್ದು, ಚೀನಾವು ಶಿಕ್ಷಣಕ್ಕಾಗಿ ತನ್ನ ಜಿಡಿಪಿಯ ಶೇ.೨೦ರಷ್ಟನ್ನು ವ್ಯಯಿಸುತ್ತಿದೆ ಎಂದಿದ್ದು, ಶಾಂಘೈ ಮತ್ತು ದೆಹಲಿಗಳ ಗಾತ್ರವನ್ನು ಮನಸೋಯಿಚ್ಚೆ ಹೇಳಿ ಗೊಂದಲ ಉಂಟುಮಾಡಿದ್ದು ಇತ್ಯಾದಿ ಇತ್ಯಾದಿ. ಜವಾಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲ್ ಬಗ್ಗೆ ಅವರು ನಿರಂತರವಾಗಿ ತಪ್ಪು ತಪ್ಪು ಮಾತಾಡಿದ್ದನ್ನು ಬಿಟ್ಟು (ಪ್ರಾಯಶಃ ಬೇಕಂತಲೇ) ಇಷ್ಟೆಲ್ಲ ತಪ್ಪು ಮಾತಾಡಿದ್ದಾರೆ.

ಅಲ್ಲಿಗೇ ಮುಗಿಯುವುದಿಲ್ಲ. ಪುರಾತನ ಭಾರತದಲ್ಲಿ ಶಿರ ಕಸಿ ಮಾಡುವುದಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನಗಳು ಅಭಿವೃದ್ಧಿಯಾಗಿದ್ದವು ಎಂದು ಮೋದಿ ಹೇಳುತ್ತಾರೆ. ಮೊಟ್ಟಮೊದಲ ವಿಮಾನವನ್ನು ರಾಮನೇ ನಡೆಸಿದ್ದು ಎನ್ನುವ ಹಾಗೂ ಪುರಾತನ ಭಾರತದಲ್ಲಿ ಕಾಂಡಕೋಶ (ಸ್ಟೆಮ್ ಸೆಲ್) ತಂತ್ರಜ್ಞಾನ ಅಸ್ತಿತ್ವದಲ್ಲಿತ್ತು ಎನ್ನುವ ಗುಜರಾತಿ ಶಾಲಾ ಪಠ್ಯಪುಸ್ತಕಗಳಿಗೆ ಮುನ್ನುಡಿ ಬರೆಯುತ್ತಾರೆ. ಮೂಢನಂಬಿಕೆಗಳನ್ನು ಉತ್ತೇಜಿಸುವ ಇಂತಹ ಅವೈಜ್ಞಾನಿಕ ವಿಷಯಗಳನ್ನು ಇಷ್ಟೊಂದು ಲಜ್ಜೆಗೆಟ್ಟು ಭಾರತದ ಯಾವ ಪ್ರಧಾನಮಂತ್ರಿಯೂ ಹೇಳಿರಲಿಲ್ಲ.

ಅಷ್ಟೇ ಗಂಭೀರವೂ ಮತ್ತು ಕಸಿವಿಸಿ ಮಾಡುವಂತಹದ್ದು ಎಂದರೆ ಭೂಗ್ರಹದ ಅತಿದೊಡ್ಡ ಸವಾಲಾಗಿರುವ ಹವಾಮಾನ ವೈಪರೀತ್ಯದ ಬಗ್ಗೆ ಮೋದಿಯವರಿಗೆ ಜ್ಞಾನವೇ ಇಲ್ಲದಿರುವುದು: "ಹವಾಮಾನ ವೈಪರಿತ್ಯ? ಈ ಪಾರಿಭಾಷಿಕ ಪದ ಸರಿಯಾಗಿದೆಯೇ? ವಾಸ್ತವ ಏನೆಂದರೆ, ನಮ್ಮ ಕುಟುಂಬದಲ್ಲಿ ಕೆಲವರಿಗೆ ವಯಸ್ಸಾಗಿದೆ... ಅವರು ಈ ಸಲ ಚಳಿ ಜಾಸ್ತಿ ಇದೆ ಅಂತಾರೆ. ಚಳಿಯನ್ನು ತಾಳಿಕೊಳ್ಳುವ ಶಕ್ತಿ ಜನರಲ್ಲಿ ಕಡಿಮೆಯಾಗಿದೆ." ಇದಕ್ಕಿಂತ ಆಘಾತಕಾರಿ ವಿಷಯ ಏನೆಂದರೆ, ಮೋದಿಯವರು ಗುಜರಾತಿನ ಅಪೌಷ್ಟಿಕತೆಯನ್ನು ಹುಡುಗಿಯರ ಮೈಮಾಟ ಪ್ರಜ್ಞೆಗೆ ಹೋಲಿಸಿದ್ದು, "ಬಾಂಗ್ಲಾದೇಶದ ಪ್ರಧಾನಮಂತ್ರಿ ಮಹಿಳೆಯಾಗಿದ್ದರೂ ಭಯೋತ್ಪಾದನೆಯನ್ನು ಎಳ್ಳಷ್ಟೂ ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದು ನನಗೆ ಸಂತಸ ತಂದಿದೆ," ಎಂಬ ಸ್ತ್ರೀದ್ವೇಷಿ ಮಾತುಗಳನ್ನು ಆಡಿದ್ದು ಹಾಗೂ ಮಹಿಳೆ ಮತ್ತು ಚಿನ್ನದ ಬಗೆಗಿರುವ ಪುರುಷಾಧಿಪತ್ಯ ಭಾವನೆಗಳನ್ನು ವ್ಯಕ್ತಪಡಿಸಿದ್ದು.

ಹಾಗೆ ನೋಡಿದರೆ, ರಾಹುಲ್ ಗಾಂಧಿ ಆತ್ಮವಿಶ್ವಾಸವಿಲ್ಲದೆ ಸಾರ್ವಜನಿಕ ಭಾಷಣ ಮಾಡುವುದರಿಂದ ಹಾಗೂ ಅವರಿಗೆ ಹಿಂದಿ ಭಾಷೆಯ ಮೇಲಿನ ಹಿಡಿತ ಅಷ್ಟಕ್ಕಷ್ಟೇ ಇರುವುದರಿಂದ ಕೆಲವು ತಪ್ಪುಗಳು ಉಂಟಾಗಿ ಒಂದಿಷ್ಟು ಹಾಸ್ಯಾಸ್ಪದ ಎನ್ನಿಸುವುದು ನಿಜವಾದರೂ ಈ ತಪ್ಪುಗಳು ಯಾವ ದಿಕ್ಕಿನಿಂದ ನೋಡಿದರೂ ಮೋದಿಯ ಮಾತು ಮತ್ತು ಅಭಿಪ್ರಾಯಗಳಲ್ಲಿನ ತಪ್ಪುಗಳಷ್ಟು ಗಂಭೀರವಾಗಿರುವುದಿಲ್ಲ.

'ಪಕೋಡ ಮಾರುವುದೂ' ಒಂದು ಉದ್ಯೋಗ ಎಂದು ಮೋದಿಯವರು ಹೇಳಿದ್ದು ಸಹ ಅವರು ಭಾರತದಲ್ಲಿ ದೈತ್ಯಾಕಾರವಾಗಿ ಬೆಳೆದುನಿಂತಿರುವ ನಿರುದ್ಯೋಗ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದನ್ನು ತೋರಿಸುತ್ತದೆ.

ಮೋದಿಯವರು ಸ್ವಯಂಪ್ರೇರಿತವಾಗಿ ಮಾತಾಡುತ್ತಾರೆ ಮತ್ತು ಬರೆದಿಟ್ಟುಕೊಳ್ಳದೇ ಸಂವಾದ ನಡೆಸುತ್ತಾರೆ ಎಂದು ಸರ್ಕಾರ ಮತ್ತು ಮಾಧ್ಯಮಗಳು ದಣಿವರಿಯದಂತೆ ಮಾರ್ಕೆಟಿಂಗ್ ಮಾಡುತ್ತಿದ್ದರೂ, ಇತ್ತೀಚೆಗೆ ಕೆಲವು ದಿನಗಳ ಹಿಂದೆ ಸಿಂಗಪುರದಲ್ಲಿ ಮೋದಿಯ ವಿವರಣೆಗಾರ ಮೋದಿಯ ಪೂರ್ವಲಿಖಿತ ಸಂದರ್ಶನದ ಉತ್ತರಗಳನ್ನು ಓದಿ ಹೇಳುವುದರೊಂದಿಗೆ ವಾಸ್ತವ ಬಟಾಬಯಲಾಗಿ ನಿಂತಿತು. ಇಂತಹ ಪ್ರಮುಖ ವಿದ್ಯಮಾನದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದರೂ ಅದರ ಬಗ್ಗೆ ವರದಿ ಮಾಡುವ ಅಥವಾ ಅದನ್ನು ವಿಮರ್ಶಿಸುವ ಯಾವುದೇ ಆಸಕ್ತಿ ಮುಖ್ಯವಾಹಿನಿಯ ಮಾಧ್ಯಮದಲ್ಲಿ ಇಲ್ಲ.

ಎಲ್ಲದಕ್ಕಿಂತ ಕಣ್ಣು ಕೋರೈಸುವಂತೆ ಮಾಡಿದ್ದು ಎಂದರೆ ಏಷ್ಯಾದ ಪ್ರಮುಖ ಸವಾಲು ಯಾವುದು ಮತ್ತು ಅದನ್ನು ನಿವಾರಿಸುವ ಬಗೆ ಏನು ಎಂಬ ಪ್ರಶ್ನೆಗೆ ಮೋದಿ ನೀಡಿದ ಉತ್ತರ: "ನಾವು ಏಶಿಯನ್ನರಿಗೆ ಅದರ ಅನುಭವ ಆಗಿದೆಯೇ ಅಥವಾ ಇಲ್ಲವೇ ಎಂಬುದೇ ಪ್ರಮುಖ ಸವಾಲು." ವಿಷಯ ಏನಪ್ಪ ಅಂದರೆ, ಮೋದಿವಯರ ವಿವರಣೆಗಾರ ಏಶಿಯಾ ಎದುರಿಸುತ್ತಿರುವ ಸುಮಾರು ೧೫ ಪ್ರಮುಖ ಸವಾಲುಗಳನ್ನು ಪಟ್ಟಿ ಮಾಡಿದರೂ ಅವುಗಳನ್ನು ನೆನಪಿಸಿಕೊಂಡು ಹೇಳುವುದಕ್ಕೆ ಮೋದಿ ಮರೆತುಬಿಟ್ಟರು.

ಇದನ್ನೂ ಓದಿ : ಬಿಜೆಪಿಯು ದೇಶದೆಲ್ಲೆಡೆ ದ್ವೇಷ ಹುಟ್ಟುಹಾಕುತ್ತಿದೆ ಎಂದ ರಾಹುಲ್ ಗಾಂಧಿ

ಮೋದಿ ಭಾಷಣಗಳ ತಿರುಳನ್ನು ಅವರ ನಾಟಕೀಯ ಅಭಿವ್ಯಕ್ತಿ ಚೌಕಟ್ಟಿನಾಚೆಗೆ ವಿಶ್ಲೇಷಣೆ ಮಾಡಿದರೆ, ಸಾಮಾನ್ಯ ಸಂಗತಿಗಳ ಮತ್ತು ಮೇಲ್ಪದರದ ತಿಳಿವಳಿಕೆಗಳಷ್ಟೇ ಇರುವ ಖಾಲಿ ಡಬ್ಬದಂತೆ ಕಾಣುತ್ತದೆ. ಅವರು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾಡಿದ ಭಾಷಣಗಳಲ್ಲಿರುವಂತೆ ಕಾಂಗ್ರೆಸ್ ಆಡಳಿತವನ್ನು ಅಣಕಿಸಿ ಹೀಗಳೆಯುವುದು ("ನಾವು ಯಾವ ಪಾಪ ಮಾಡಿ ಹಿಂದೂಸ್ತಾನದಲ್ಲಿ ಹುಟ್ಟಿದ್ದೇವೆ?"), "ಹಗರಣಗಳ ಭಾರತವನ್ನು (ಸ್ಕ್ಯಾಮ್ ಇಂಡಿಯ) ಕುಶಲ ಭಾರತವನ್ನಾಗಿ (ಸ್ಕಿಲ್ ಇಂಡಿಯ) ಪರಿವರ್ತಿಸಲು ಬಯಸಿದ್ದೇನೆ," ಎಂದು ಹೇಳುವ ಅತಿ ಸರಳೀಕೃತ ಮಾತುಗಳು ಅಥವಾ ಅವರ ಸ್ಥಳೀಯ ಚುನಾವಣಾ ಭಾಷಣಗಳಲ್ಲಿ ಎದ್ದುಕಾಣುವಂತೆ ವಿಭಜನಕಾರಿ ರಾಜಕೀಯದ ಮಾತುಗಳು- ಇಂಥವೇ ಅವರ ಭಾಷಣಗಳಲ್ಲಿ ತುಂಬಿ ತುಳುಕುತ್ತಿರುತ್ತವೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಅವರ ಮಾತುಗಳೂ ಕೂಡ ಪೂರ್ಣ ಆಕ್ರಮಣಕಾರಿಯೂ, ವ್ಯಂಗ್ಯವಾಗಿಯೂ, ಪೂರ್ಣ ರಾಜಕೀಯವಾಗಿಯೂ ಆಗಿದ್ದು ನೆಹರೂ, ಕಾಂಗ್ರೆಸ್ ಮತ್ತು ‘ವಂಶಾಡಳಿತ’ ವಿರೋಧಿ ಗೀಳಿನಿಂದ ಕೂಡಿರುತ್ತದೆಯೇ ಹೊರತು ಅದರಲ್ಲಿ ಬೌದ್ಧಿಕವಾಗಿ ಅಥವಾ ನೀತಿ ದೃಷ್ಟಿಕೋನದಲ್ಲಿ ಯಾವುದೇ ಒಳನೋಟಗಳಿರುವುದಿಲ್ಲ. ಭಾರತದಲ್ಲಿ ಜಾತಿಯಾಧಾರಿತ ದಮನ ಹೇಗಿದೆ ಎಂಬುದನ್ನು ತಿಳಿಸುವ ಒಳನೋಟಗಳನ್ನು ಅವರ ಭಾಷಣದಲ್ಲಿ ಎಂದಾದರೂ ನೋಡಿದ್ದೇವೆಯೇ?

ದುರದೃಷ್ಟವಶಾತ್ ಮೋದಿಯವರಿಗೆ ಪೂರ್ವಲಿಖಿತವಲ್ಲದ ಪ್ರಶ್ನೆಯನ್ನು ಕೇಳುವ ಅವಕಾಶ ನಮಗಿಲ್ಲವಾದ್ದರಿಂದ ರಾಹುಲ್ ಹೋಲಿಕೆಯಲ್ಲಿ ಮೋದಿಯವರ ಬುದ್ದಿಮತ್ತೆಯನ್ನು ಹೇಗೆ ಅಳೆಯುವುದು? ಪ್ರಜಾತಾಂತ್ರಿಕ ದೇಶದ ನಾಯಕರೊಬ್ಬರು ತಮ್ಮ ನಾಲ್ಕು ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡದಿರುವುದು ಪ್ರಾಯಶಃ ವಿಶ್ವದಾಖಲೆ ಎನ್ನಿಸುತ್ತದೆ. ಲಂಡನ್ ಟೌನ್ ಹಾಲ್ ಗೋಷ್ಠಿಯಲ್ಲಿ ಹೊಗಳುಭಟ್ಟರು ಮೋದಿಯ ಶಕ್ತಿಯಯನ್ನು, ಅವರ ಕೌಟುಂಬಿಕ ವೈರಾಗ್ಯವನ್ನು ಹಾಗೂ ದೇಶಕ್ಕಾಗಿನ ಅವರ ಸಮರ್ಪಣೆಯನ್ನು ಹಾಡಿ ಕೊಂಡಾಡಿದರು. ಅವರನ್ನು ಸಂದರ್ಶಿಸುತ್ತಿದ್ದ ಸಂದರ್ಶಕನೂ ಚಪ್ಪಾಳೆ ತಟ್ಟಿದ. ಹೀಗೆ ಮೋದಿಯ ಬಗ್ಗೆ ಕೇವಲ ಪೂರ್ವನಿರ್ಧರಿತ ಪ್ರಸಂಶೆಗಳೇ ನಮಗೆ ಸಿಗುವುದರಿಂದ ಅವರ ಬುದ್ಧಿಮತ್ತೆಯನ್ನು ಅಳೆಯುವುದಾದರೂ ಹೇಗೆ?

ಅದಕ್ಕೆ ವ್ಯತಿರಿಕ್ತವಾಗಿ ನಾವು ರಾಹುಲ್ ಸಂವಾದಗಳನ್ನು ನೋಡಿದ್ದೇವೆ. ಅಲ್ಲಿ ಪೂರ್ವಲಿಖಿತವಲ್ಲದ ಪ್ರಶ್ನೆಗಳಿರುತ್ತವೆ. ಮಾತ್ರವಲ್ಲ, ಬೇಕಂತಲೇ ಹಾದಿತಪ್ಪಿಸುವ ಅಸಂಗತ ಪ್ರಶ್ನೆಗಳನ್ನು ಹಾಗೂ ಅವರನ್ನು ಮತ್ತು ಅವರ ಕುಟುಂಬವನ್ನು ವೈಯಕ್ತಿಕವಾಗಿ ಗುರಿಮಾಡಿ ದಾಳಿಮಾಡುವ ಆಕ್ರಮಣಕಾರಿ ಪ್ರಶ್ನೆಗಳನ್ನು ರಾಹುಲ್ ಎದುರಿಸುತ್ತಾರೆ. ಮರುದಿನ ‘ಮಾಧ್ಯಮ' ಸಂಸ್ಥೆಗಳಲ್ಲಿ 'ಸಿಂಗಪೂರ್‌ನಲ್ಲಿ ಬೃಹತ್ ಜನಸಮೂಹದೆದುರು ಅವಮಾನಕ್ಕೀಡಾದ ರಾಹುಲ್ ಗಾಂಧಿ' ಎಂಬ ತಲೆಬರೆಹ ಅದೂ ಹೊತ್ತು ಸುದ್ದಿಯಾಗುತ್ತದೆ.

೨೦೦೮ರಲ್ಲಿ, ತನಗೆ ಸ್ಫೂರ್ತಿ ನೀಡಿದ ೧೬ ಜನರ ಬಗ್ಗೆ ಮೋದಿಯವರು ಪುಸ್ತಕವೊಂದನ್ನು ಬರೆದರು. ಆ ಎಲ್ಲ ಹದಿನಾರು ಜನರೂ ಆರೆಸ್ಸೆಸ್‌ಗೆ ಸೇರಿದ ಸಂಕುಚಿತ ಲೋಕದೃಷ್ಟಿಕೋನ ಹೊಂದಿದ ಪುರುಷರಾಗಿದ್ದರು. ಮೋದಿಯವರು ದೇಶದ ಪ್ರಧಾನಿಯಾಗಿ ಮಾಡಿದ ಭಾಷಣಗಳನ್ನು, ಪೂರ್ವಲಿಖಿತ ಸಂವಾದಗಳನ್ನು ನೋಡಿದರೆ ಇಡೀ ಪ್ರಪಂಚವನ್ನು ವ್ಯಾಪಕವಾಗಿ ಸುತ್ತಿ ಬಂದ ನಂತರವೂ ಅವರ ಲೋಕದೃಷ್ಟಿ ಬದಲಾಗಿದೆ ಎನ್ನಿಸುವುದಿಲ್ಲ. ಅವರ ಭಾಷಣ ಮತ್ತು ಸಂವಾದಗಳಲ್ಲಿ ಅವರ ಬುದ್ಧಿಮತ್ತೆ ರಾಹುಲ್ ಬುದ್ದಿಮತ್ತೆಗಿಂತ ಉತ್ತಮವಾಗಿದೆ ಎಂದು ತೋರಿಸುವಂತಹ ಯಾವೊಂದು ವಿಷಯವೂ ಸಿಗುವುದಿಲ್ಲ (ಏನೇ ಆದರೂ, ಮೋದಿಯವರು ತಮ್ಮ ಬೌದ್ಧಿಕ ಸಾಮರ್ಥ್ಯದಿಂದ ದೇಶದ ಪ್ರಧಾನಿಯಾದರು ಎಂಬ ಭ್ರಮೆಯನ್ನು ನಾವು ಹೋಗಲಾಡಿಸಬೇಕಿದೆ).

ಕೊನೆಯದಾಗಿ, ದಡ್ಡ ಮತ್ತು ಅಜ್ಞಾನಿ ರಾಹುಲ್ ಗಾಂಧಿ ಹಾಗೂ ಬುದ್ದಿವಂತ ಮತ್ತು ಜ್ಞಾನಿ ನರೇಂದ್ರ ಮೋದಿ ನಡುವಿನ ತುಲನಾತ್ಮಕ ಸಾದೃಶ್ಯವು ಪ್ರಜಾತಾಂತ್ರಿಕ ಭಾರತವು ನೋಡಿದ ಅತ್ಯಂತ ದೊಡ್ಡ ಸಾರ್ವಜನಿಕ ಸಂಬಂಧವೃದ್ಧಿ ಕಸರತ್ತಿನ ಫಲಶ್ರುತಿ. ನಿಜ, ಮೋದಿಯವರು ತನ್ನ ಏಕತಾನ ರಾಜಕೀಯದಿಂದ ಹೊರಬಂದು ತನ್ನ ವಿಮರ್ಶಕರ ಪೂರ್ವಲಿಖಿತವಲ್ಲದ ಕಠಿಣ ಪ್ರಶ್ನೆಗಳನ್ನು ಎದುರುಗೊಳ್ಳುವುದಕ್ಕೆ ಮುಂದಾದರೆ ತನ್ನ ಬಗ್ಗೆ ಕಟ್ಟಿಕೊಂಡಿರುವ ಮರೀಚಿಕೆ ಒಡೆದುಹೋಗುತ್ತದೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ಬುದ್ಧಿವಂತ (ಕರಣ್ ಥಾಪರ್ ಮತ್ತು ರಾಜದೀಪ್ ಸರ್ದೇಸಾಯಿಯವರು ಕಠಿಣ ಪ್ರಶ್ನೆ ಕೇಳಿದಾಗ ಮೋದಿಯವರು ಸಂದರ್ಶನದಿಂದಲೇ ಹೊರನಡೆದದ್ದು ಅಥವಾ ಗಾಢ ಮೌನ ತಾಳಿದ್ದು ಗೊತ್ತೇ ಇದೆ). ಅಲ್ಲಿಯತನಕ, ನಾವು ಮೋಮ್, ಎಕೆ-೪೯, ಟಾಪ್, ಎಬಿಸಿಡಿ, ಆರ್‌ಎಸ್‌ವಿಪಿ, ಮೋಮ್, ಐಟಿ+ಐಟಿ=ಐಟಿ, ವಿಕಾಸ್, ೩ಎಸ್, ಜಾಮ್, ಸ್ಮಾರ್ಟ್, ಬಿ೨ಬಿ (SCAM, AK-49, TOP, ABCD, RSVP, MOM, IT+IT=IT, VIKAS, 3S, JAM, SMART, B2B) ) ಮುಂತಾದ ಸಂಕ್ಷೇಪಗಳು ಹಾಗೂ ’ಪರೀಕ್ಷಾ ಯೋಧರು’ (Exam Warriors) ಎಂಬ ಪುಸ್ತಕ ಭಾರತದ ೧೪ನೇ ಪ್ರಧಾನಮಂತ್ರಿಯ ಅತ್ಯುನ್ನತ ಬೌದ್ಧಿಕ ಕೊಡುಗೆಗಳು ಎಂದುಕೊಂಡಿರಬೇಕಷ್ಟೆ.

ಲೇಖಕ ನಿಸಿಮ್ ಮನ್ನತುಕ್ಕರೇನ್ ಅವರು ಕೆನಡಾದ ಡಾಲ್ಹೌಸಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More