ವಿದೇಶಗಳಲ್ಲಿ ಮಿಂಚಿದರೆ ದೇಶದ ಜನಸಾಮಾನ್ಯರ ಅಸಮಾಧಾನ ತಗ್ಗುವುದೇ? | ಭಾಗ 2

ಜಾಗತಿಕ ನಾಯಕರೊಂದಿಗೆ ಕೈಕೈಜೋಡಿಸಿ ನಗೆಬೀರುವ, ಜಗತ್ತಿನ ಉದ್ದಗಲದ ಅನಿವಾಸಿ ಭಾರತೀಯರ ಸಮಾವೇಶಗಳ ಝಗಮಘಿಸುವ ಮೋದಿ ಸರ್ಕಾರದ ವೈಭವೋಪೇತ ಕಾರ್ಯಕ್ರಮಗಳು ದೇಶದೊಳಗೆ ಜನಸಾಮಾನ್ಯರ ಅಸಮಾಧಾನದ ಅಲೆಯನ್ನು ತಡೆಯಲು ಸಾಧ್ಯವಾಗದು

ಸ್ವಾತಂತ್ರ್ಯಪೂರ್ವದಿಂದಲೂ ಕಾಂಗ್ರೆಸ್ ನಾಯಕರ ಅಜೆಂಡಾದ ಪ್ರಮುಖಾಂಶವಾಗಿದ್ದ ‘ಎಲ್ಲರನ್ನೂ ಒಳಗೊಳ್ಳುವ ಸಮಗ್ರ ಪ್ರಗತಿ’ ಮತ್ತು ಆ ಮೂಲಕ ಬಡತನ ನಿರ್ಮೂಲನೆ ಎಂಬ ಅಂಶವನ್ನೇ ಮೋದಿಯವರ ನೇತೃತ್ವದ ಬಿಜೆಪಿ ಅನಾಮತ್ತಾಗಿ ತನ್ನ ಅಜೆಂಡಾವಾಗಿ ಅಳವಡಿಸಿಕೊಂಡಿತು. ಆ ಬದಲಾವಣೆ ತಂದ ಹೊಸ ಸಂಚಲನ ೨೦೧೪ರ ಏಪ್ರಿಲ್-ಮೇ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿಂದೆಂದೂ ಕಂಡರಿಯದ ಮಟ್ಟಿಗಿನ ಜಯವನ್ನು ತಂದುಕೊಟ್ಟಿತು.

ಆ ಅಭೂತಪೂರ್ವ ಚುನಾವಣಾ ಸಾಧನೆಯ ಬಳಿಕ ಬಿಜೆಪಿಯ ಆ ಹೊಸ ಅವತಾರ, ಆ ವರ್ಷದ ಅಂತ್ಯದ ಹೊತ್ತಿಗೆ ನಡೆದ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಪಕ್ಷಕ್ಕೆ ಜಯ ತಂದುಕೊಟ್ಟಿತು. ಆದರೆ, ಅದರ ಮೊದಲ ರಾಜಕೀಯ ಹಿನ್ನಡೆ ಎದುರಾಗಿದ್ದು ಸಂಸತ್ತಿನ ಒಳಗೇ! ಏಕೆಂದರೆ, ಬಿಜೆಪಿ ಸರ್ಕಾರ ಅತ್ಯುತ್ಸಾಹದಿಂದ ಅನುಮೋದನೆಗೆ ಮಂಡಿಸಿದ ಭೂಸ್ವಾಧೀನ ಮಸೂದೆ ಸೇರಿದಂತೆ ಕೆಲವು ಮಸೂದೆಗಳು ಕಾಂಗ್ರೆಸ್ ಮತ್ತು ಇತರ ಕೆಲವು ಪ್ರತಿಪಕ್ಷಗಳ ವಿರೋಧದ ಕಾರಣಕ್ಕೆ ಸಂಸತ್ತಿನಲ್ಲಿ ಬಿದ್ದುಹೋದವು. ಆಗ ಅನಿವಾರ್ಯವಾಗಿ ಭೂಸ್ವಾಧೀನದ ಕುರಿತ ನಿರ್ಧಾರದ ಹೊಣೆಗಾರಿಕೆಯನ್ನು ರಾಜ್ಯಗಳ ಹೆಗಲಿಗೆ ದಾಟಿಸಿ ಬಿಜೆಪಿ ಹೆಚ್ಚಿನ ಮುಜುಗರದಿಂದ ಪಾರಾಯಿತು.

ಆ ಬಳಿಕ ಬಿಜೆಪಿಗೆ ಮತ್ತೊಂದು ಆಘಾತ ನೀಡಿದ್ದು, ದೆಹಲಿ ವಿಧಾನಸಭಾ ಚುನಾವಣೆ. ಆ ಚುನಾವಣೆಯಲ್ಲಿ ರಾಜಕೀಯವಾಗಿ ಆಗ ತಾನೆ ಅಂಬೆಗಾಲಿಡುತ್ತಿದ್ದ ಎಎಪಿಯ ಎದುರು ಬಿಜೆಪಿಗೆ ಆದ ಮುಖಭಂಗ ಪಕ್ಷದ ಹಿಂದಿನ ಲೋಕಸಭಾ ಜಯಭೇರಿಯ ಅಹಂಗೆ ಭಾರೀ ಪೆಟ್ಟು ನೀಡಿತು. ಬಳಿಕ ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಮತ್ತೆ ಸೋಲು ಎದುರಾಯಿತು. ಆದರೆ, ನೋಟು ಅಮಾನ್ಯ, ಆಡಳಿತ ಪಕ್ಷದ ವಿರುದ್ಧದ ಆಡಳಿತ ವಿರೋಧಿ ಅಲೆ, ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಆಂತರಿಕ ಒಡಕು ಮುಂತಾದ ಅನುಕೂಲಕರ ವಾತಾವರಣದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಕಳೆದುಹೋಗಿದ್ದ ತನ್ನ ವರ್ಚಸ್ಸಿನಲ್ಲಿ ಒಂದಷ್ಟನ್ನು ಗಳಿಸುವುದು ಬಿಜೆಪಿಗೆ ಸಾಧ್ಯವಾಯಿತು. ಆ ನಡುವೆ, ಅಸ್ಸಾಂ, ತ್ರಿಪುರಾಗಳಲ್ಲಿ ತನ್ನ ಸ್ವಂತ ಬಲ ಮತ್ತು ಮೈತ್ರಿಕೂಟಗಳ ಮೂಲಕ ಜಯಗಳಿಸುವಲ್ಲಿ ಅದು ಸಫಲವಾಯಿತು. ಹಾಗೇ ಗೋವಾ ಮತ್ತು ಮೇಘಾಲಯ ಸೇರಿದಂತೆ ಕೆಲವು ಕಡೆ ಪ್ರಶ್ನಾರ್ಹ ತಂತ್ರಗಾರಿಕೆಯ ಮೂಲಕ ಸರ್ಕಾರ ರಚಿಸುವಲ್ಲಿಯೂ ಅದು ಯಶಸ್ವಿಯಾಯಿತು. ಆದರೆ, ಗುಜರಾತಿನಲ್ಲಿ ಪಕ್ಷದ ತೀರಾ ಅತ್ಯಲ್ಪ ಅಂತರದ ಜಯ, ಸರಳ ಬಹುಮತ ಮತ್ತು ಕಾಂಗ್ರೆಸ್ಸಿನ ಅನಿರೀಕ್ಷಿತ ಸಾಧನೆಗಳು ಬಿಜೆಪಿಗೆ ಮರ್ಮಾಘಾತ ನೀಡಿದವು. ಗುಜರಾತಿನ ಈ ಪೆಟ್ಟು, ಮೋದಿಯವರ ತವರು ರಾಜ್ಯ ಎಂಬ ಕಾರಣಕ್ಕಾಗಿ ಮಾತ್ರವಲ್ಲದೆ, ದೇಶವ್ಯಾಪಿ ಅವರ ಬೆಂಬಲದ ನೆಲೆಗೆ ಬುನಾದಿಯಾಗಿದ್ದ ಅವರ ರಾಜಕೀಯ ವರ್ಚಸ್ಸು, ಭರವಸೆ ಮತ್ತು ಚುನಾವಣಾ ಜಯಗಳ ಅಡಿಪಾಯವೇ ಆ ರಾಜ್ಯ ಎಂಬ ಕಾರಣಕ್ಕಾಗಿಯೂ ಮಹತ್ವದ್ದು. ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಜಯಿಸಲಾಗದ ಸೋಲು ಕೂಡ ಅದೇ ಹಿನ್ನೆಡೆಯ ಹವಾದ ಮುಂದುವರಿಕೆಯೇ.

ತನ್ನ ಚುನಾವಣಾ ಭರವಸೆಗಳನ್ನು ನಿಜ ಮಾಡಲಾಗದ ಸರ್ಕಾರದ ವೈಫಲ್ಯದ ಬಗೆಗಿನ ಆಕ್ರೋಶ ಮತ್ತು ಹೆಚ್ಚುತ್ತಿರುವ ಭ್ರಮನಿರಸನ, ಅತೃಪ್ತಿಯ ಪರಿಣಾಮವೇ ಈ ಎಲ್ಲ ಚುನಾವಣಾ ಹಿನ್ನಡೆಗಳು ಎಂಬುದು ಗುಟ್ಟೇನೂ ಅಲ್ಲ. ಶ್ರೀಮಂತರ ಅಕ್ರಮ ವಿದೇಶಿ ಖಾತೆಗಳಲ್ಲಿರುವ ಹಣವನ್ನು ತಂದು ಪ್ರತಿ ಭಾರತೀಯನ ಖಾತೆಗೆ ೧೫ ಲಕ್ಷ ರೂ. ಜಮಾ ಮಾಡುತ್ತೇವೆ ಎಂಬಂತಹ ಪ್ರಾಯೋಗಿಕವಾಗಿ ಅಸಾಧ್ಯವಾದ ಭರವಸೆಗಳಷ್ಟೇ ಅಲ್ಲದೆ, ಉದ್ಯೋಗಾವಕಾಶ, ಸಮೃದ್ಧಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಗ್ರ ಆರ್ಥಿಕ ಪ್ರಗತಿಯಂತಹ ಅನುಷ್ಠಾನ ಸಾಧ್ಯವಿದ್ದ ಭರವಸೆಗಳ ವಿಷಯದಲ್ಲೂ ಸರ್ಕಾರ ತನ್ನ ಮಾತನ್ನು ಉಳಿಸಿಕೊಳ್ಳಲಾಗಿಲ್ಲ. ಮುಂದಿನ ಕೆಲವೇ ವರ್ಷಗಳಲ್ಲಿ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಮೋದಿಯವರ ಭರವಸೆಯ ಹೊರತಾಗಿಯೂ ಗ್ರಾಮೀಣ ಪ್ರದೇಶದ ಬಿಕ್ಕಟ್ಟು ಮತ್ತು ರೈತ ಆತ್ಮಹತ್ಯೆಗಳು ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ. ಆ ಭರವಸೆಗಳು ಜನರ ಬದುಕಿನಲ್ಲಿ ಪೂರಕ ಬದಲಾವಣೆಯನ್ನೂ ತಂದಿಲ್ಲ ಎಂಬುದನ್ನು ಸಾರಿಹೇಳುತ್ತಿವೆ. ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳ ರೈತರು ಸರ್ಕಾರದ ವಿರುದ್ಧ ಬೀದಿಗಿಳಿದು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಪ್ರಭಾವಿ ಭೂಮಾಲೀಕ ಮೇಲ್ಜಾತಿಗಳು, ಅದರಲ್ಲೂ ವಿಶೇಷವಾಗಿ ಬಿಜೆಪಿ ಆಡಳಿತದ ಹರ್ಯಾಣದ ಜಾಟರು, ಗುಜರಾತಿನ ಪಟೇಲರು, ಮಹಾರಾಷ್ಟ್ರದ ಮರಾಠರು ಸಂಘಟಿತರಾಗಿ ಮೀಸಲಾತಿ ಮತ್ತಿತರ ಸೌಲಭ್ಯ ಹಾಗೂ ಕೆಳಜಾತಿ ಮತ್ತು ವರ್ಗಗಳ ವಿರುದ್ಧದ ರಕ್ಷಣೆಗಾಗಿ ಚಳವಳಿ ನಡೆಸುತ್ತಿವೆ. ಹಾಗೇ ದಲಿತರು ಕೂಡ, ಇತ್ತೀಚಿನ ಭಾರತ್ ಬಂದ್ ಸೇರಿದಂತೆ ಹಲವು ಹೋರಾಟ, ಆಂದೋಲನಗಳ ಮೂಲಕ ಪ್ರಮುಖವಾಗಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತಾವು ಎದುರಿಸುತ್ತಿರುವ ಮೇಲ್ಜಾತಿ ದಬ್ಬಾಳಿಕೆ, ಹೀನಾಯ ದೌರ್ಜನ್ಯಗಳ ವಿರುದ್ಧ ಸಿಡಿದೆದ್ದಿದ್ದಾರೆ. ಹಾಗಾಗಿ ಈ ಬಾರಿ, ಜಾಗತಿಕ ನಾಯಕರೊಂದಿಗೆ ಕೈಕೈಜೋಡಿಸಿ ನಗೆಬೀರುವ, ಜಗತ್ತಿನ ಉದ್ದಗಲದ ಎನ್‌ಆರ್‌ಐ ಸಮಾವೇಶಗಳ ಝಗಮಘಿಸುವ ವೈಭವೋಪೇತ ಕಾರ್ಯಕ್ರಮಗಳು ಜನಸಾಮಾನ್ಯರ ಅಸಮಾಧಾನದ ಅಲೆಯನ್ನು ತಡೆಯದಾದವು. ಪಾಕಿಸ್ತಾನದ ವಿಷಯದಲ್ಲಿ ಶೌರ್ಯದ ಮಾತುಗಾರಿಕೆ ಮತ್ತು ಸರ್ಜಿಕಲ್ ದಾಳಿಯಂತಹ ವಿಷಯಗಳನ್ನು ಕೂಡ; ಹಿಂದಿನ ಸರ್ಕಾರಗಳ ರೀತಿಗೆ ವಿರುದ್ಧವಾಗಿ, ಡಂಗುರ ಹೊಡೆದು ರಾಜಕೀಯ ಲಾಭಕ್ಕೆ ಹವಣಿಸಿದರೂ, ಅಂತಿಮವಾಗಿ ಆ ಯಾವುವೂ ಅಂತಹ ಪರಿಣಾಮ ಬೀರಿಲ್ಲ ಎಂಬುದು ಮತ್ತೆಮತ್ತೆ ಸಾಬೀತಾಗುತ್ತಲೇ ಇದೆ.

ಇದನ್ನೂ ಓದಿ : ಮೋದಿ ವಿರೋಧಿ ಅಲೆಯು ೧೯೭೪ರ ಇಂದಿರಾ ವಿರೋಧಿ ಅಲೆಯ ಪುನರಾವರ್ತನೆಯೇ? | ಭಾಗ ೧

ಇನ್ನು, ನ್ಯಾಯಾಂಗ ಕೂಡ ೧೯೭೪ರ ಮಾದರಿಯಲ್ಲೇ ದಾಳಿಗೆ ಒಳಗಾಗಿದೆ. ಸರ್ಕಾರದ ಹಿರಿಯ ಸಚಿವರು ಮತ್ತು ಸರ್ಕಾರಿ ವಕೀಲರು ತಮ್ಮ ಮಿತಿಯನ್ನು ಮೀರಿ ಕಾರ್ಯಾಂಗದ ವ್ಯಾಪ್ತಿಯಲ್ಲಿ ಮೂಗು ತೂರಿಸುತ್ತಿದ್ದಾರೆ. ಜೊತೆಗೆ ಕೊಲಿಜಿಯಂ ಶಿಫಾರಸಿನ ಹೊರತಾಗಿಯೂ ನ್ಯಾಯಾಂಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಸರ್ಕಾರದ ವಿಳಂಬ ನೀತಿ ಸಹಜವಾಗೇ ನ್ಯಾಯಾಂಗದ ಕಾರ್ಯನಿರ್ವಹಣೆಯ ಮೇಲೆ ಒತ್ತಡ ಹೇರಿದೆ. ಈ ವಿಷಯದಲ್ಲಿ; ಮುಖ್ಯ ನ್ಯಾಯಮೂರ್ತಿಯೊಬ್ಬರು ಸ್ವತಃ ಪ್ರಧಾನಿಯ ಎದುರಲ್ಲೇ ಸಾರ್ವಜನಿಕ ವೇದಿಕೆಯಲ್ಲಿ ಕಣ್ಣೀರಿಟ್ಟರು. ಆ ಬಳಿಕ ನಾಲ್ಕು ದಶಕದ ಹಿಂದಿನ ಮಾದರಿಯಲ್ಲೇ ಸುಪ್ರೀಂಕೋರ್ಟಿನ ನಾಲ್ವರು ನ್ಯಾಯಮೂರ್ತಿಗಳು, ದೇಶದ ನ್ಯಾಯಾಂಗದ ಅತ್ಯುನ್ನತ ವ್ಯಕ್ತಿಯಾದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧವೇ ಸಾರ್ವಜನಿಕವಾಗಿ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿ ಕಣ್ಣೀರಿಟ್ಟರು. ಆ ಮೂಲಕ ಮುಖ್ಯ ನ್ಯಾಯಮೂರ್ತಿಗಳೇ ರಾಜಕೀಯ ವಿವಾದದ ಕೇಂದ್ರಬಿಂದುವಾದರು ಮತ್ತು ಅವರ ನ್ಯಾಯಾಂಗದ ಪಾತ್ರದ ಸಾರ್ವಜನಿಕ ಶಂಕೆಗೆ ಒಳಗಾಯಿತು. ನಿರ್ಣಾಯಕ ವಿಷಯಗಳಲ್ಲಿ ಅವರು ಸರ್ಕಾರ ಪರ ನಿಲುವು ತಳೆಯಬಹುದು ಎಂಬ ಆತಂಕ ಕೆಲವು ಪ್ರತಿಪಕ್ಷಗಳು ಅವರ ವಿರುದ್ಧ ವಾಗ್ದಂಡನೆ ನಿರ್ಣಯ ಮಂಡಿಸಲು ಕಾರಣವಾಯಿತು. ಮತ್ತೊಂದು ಕಡೆ, ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅವರನ್ನು ಸುಪ್ರೀಂಕೋರ್ಟಿಗೆ ನೇಮಕ ಮಾಡುವ ವಿಷಯದಲ್ಲಿ ಕೊಲಿಜಿಯಂ ಸಲಹೆಯನ್ನು ತಿರಸ್ಕರಿಸಿದ ತನ್ನ ನಿಲುವಿಗೆ ಕಾರಣವೇನು ಎಂಬ ಬಗ್ಗೆ ಕೇಂದ್ರ ಸರ್ಕಾರ ಲಿಖಿತ ಸಮಜಾಯಿಷಿ ನೀಡುವಂತಾಯಿತು. ಅದಕ್ಕೂ ಮುನ್ನ, ನ್ಯಾಯಾಂಗ ನೇಮಕಾತಿ ಸಂಬಂಧ ಸುಪ್ರೀಂ ಕೋರ್ಟ್ ಮೆಮೋರಾಂಡಮ್ ಆಫ್ ಪ್ರೊಸೀಜರ್ ಅಂತಿಮಗೊಳಿಸುವಾಗ, ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಯಾವುದೇ ಕಾರಣ ನೀಡದೆ ಕೊಲಿಜಿಯಂ ಶಿಫಾರಸು ಮಾಡಿದ ಹೆಸರನ್ನು ತಿರಸ್ಕರಿಸುವ ಅಧಿಕಾರ ಬೇಕು ಎಂದು ಕೇಂದ್ರ ಸರ್ಕಾರ ಹೇಳಿತ್ತು.

ಇಂದಿರಾ ಗಾಂಧಿಯವರ ಅವಧಿಗೆ ಹೋಲಿಸಿದರೆ, ಈ ಬಾರಿ ಇಕ್ಕಟ್ಟಿಗೆ ಸಿಲುಕಿರುವ ಪ್ರಜಾಪ್ರಭುತ್ವದ ಮತ್ತೊಂದು ಅಂಗಸಂಸ್ಥೆಯೆಂದರೆ, ಚುನಾವಣಾ ಆಯೋಗ. ಮಾಜಿ ಮುಖ್ಯ ಚುನಾವಣಾ ಆಯುಕ್ತರು ಒಕ್ಕೊರಲಿನಿಂದ, “ಚುನಾವಣಾ ಆಯೋಗ ವಿಶ್ವಾಸಾರ್ಹತೆಯ ಬಿಕ್ಕಟ್ಟು ಎದುರಿಸುತ್ತಿದೆ. ಅದರ ಮೇಲಿನ ಜನರ ವಿಶ್ವಾಸಕ್ಕೆ ಅಪಾಯ ಎದುರಾಗಿದೆ,” ಎಂದು ಎಚ್ಚರಿಸಿದರು. ಆಯೋಗದ ಕೆಲವು ಮಹತ್ವದ ನಿರ್ಧಾರಗಳು ಆಳುವ ಸರ್ಕಾರದ ಪರವಿರುವುದು ಕಣ್ಣಿಗೆ ರಾಚುತ್ತಿದೆ ಎಂದ ಮಾಜಿ ಮುಖ್ಯ ಚುನಾವಣಾ ಆಯುಕ್ತರು, ಹಿಮಾಚಲ ಪ್ರದೇಶ ಮತ್ತು ಗುಜರಾತಿನ ವಿಧಾನಸಭಾ ಚುನಾವಣೆಗಳನ್ನು ಪ್ರತ್ಯೇಕವಾಗಿ ಘೋಷಣೆ ಮಾಡಿದ್ದನ್ನು ತಮ್ಮ ಆತಂಕಕ್ಕೆ ಸಾಕ್ಷಿಯಾಗಿ ನೀಡಿದರು. ಎರಡನೆಯದಾಗಿ, ಎಎಪಿ ಶಾಸಕರ ಲಾಭದಾಯಕ ಹುದ್ದೆ ಪ್ರಕರಣದಲ್ಲಿ ದೂರಿನ ಕಾನೂನು ಸಾಧ್ಯಾಸಾಧ್ಯತೆಯ ಕುರಿತು ಮೌಖಿಕ ವಿಚಾರಣೆಯನ್ನೇ ನಡೆಸದೆ ಅಯೋಗ ರಾಷ್ಟ್ರಪತಿಗಳಿಗೆ ತನ್ನ ಅಭಿಪ್ರಾಯವನ್ನು ನೀಡಿದ್ದು ಕೂಡ ಆಯೋಗದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿತು. ಹಾಗೇ ಚುನಾವಣಾ ಪ್ರಚಾರದ ದ್ವೇಷ ಕಾರುವ ಮಾತಿಗೆ ಕಡಿವಾಣ ಮತ್ತು ಮತ ಎಣಿಕೆಯ ವೇಳೆ ವಿವಿಪ್ಯಾಟ್ ಕಾಗದ ಪ್ರತಿಗಳ ತಾಳೆ ನೋಡುವ ಪ್ರಸ್ತಾವನೆಯ ಬಗ್ಗೆಯೂ ಆಯೋಗ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ ಎಂಬುದು ಆ ಮಾಜಿ ಮುಖ್ಯ ಚುನಾವಣಾ ಆಯುಕ್ತರ ಆತಂಕಕ್ಕೆ ಕಾರಣವಾಗಿದ್ದವು. ಮಾಜಿ ಆಯುಕ್ತರ ಈ ಮಾತುಗಳಿಗೆ ಮುನ್ನ, ಇತ್ತೀಚಿನ ತಮ್ಮ ನಿವೃತ್ತಿಯವರೆಗೆ ಸುಮಾರು ೫೩ ವರ್ಷಗಳ ಕಾಲ ಚುನಾವಣಾ ಆಯೋಗದ ಕಾನೂನು ಸಲಹೆಗಾರರಾಗಿ ಕೆಲಸ ಮಾಡಿದ ಎಸ್ ಕೆ ಮೆಂದಿರಟ್ಟಾ ಕೂಡ, ಎಎಪಿ ಶಾಸಕರ ಪ್ರಕರಣ ಮತ್ತು ಹಿಮಾಚಲ ಹಾಗೂ ಗುಜರಾತ್ ಚುನಾವಣಾ ದಿನಾಂಕ ನಿಗದಿ ವಿಷಯದಲ್ಲಿ ಆಯೋಗ ತಮ್ಮ ಅಭಿಪ್ರಾಯವನ್ನು ಪಡೆದೇ ಇರಲಿಲ್ಲ ಎಂದಿದ್ದರು. ಅಲ್ಲದೆ, ಈ ಕೆಲವು ವಿಷಯಗಳ ಕುರಿತ ಆಯೋಗದ ನಿಲುವುಗಳು ಅದರ ಪ್ರತಿಷ್ಠೆಗೆ ಮಸಿ ಬಳಿದವು ಎಂದೂ ಅವರು ಹೇಳಿದ್ದರು.

ಈ ನಡುವೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮೋದಿ ಸರ್ಕಾರದ ಕೆಲವು ರಾಜಕೀಯ ತಂತ್ರಗಾರಿಕೆಗಳು ಕೂಡ ಆತಂಕ ಹುಟ್ಟಿಸಿವೆ. ಗೋವಾ, ಮಣಿಪುರ ಮತ್ತು ಮೇಘಾಲಯದಂತಹ ಕಡೆ ಬಿಜೆಪಿ ಬಹುಮತವಿರಲಿ, ಕನಿಷ್ಠ ಅತಿದೊಡ್ಡ ಪಕ್ಷವಾಗಿ ಕೂಡ ಹೊರಹೊಮ್ಮದ ಕಡೆಯೂ, ಒಪ್ಪಿತವಲ್ಲದ ರೀತಿಯ ತಂತ್ರಗಾರಿಕೆಯ ಮೂಲಕ ಬಹುಮತ ಪಡೆದು ಸರ್ಕಾರ ರಚಿಸಿತು. ಇನ್ನು ಅರುಣಾಚಲಪ್ರದೇಶದಂತಹ ಈಶಾನ್ಯರಾಜ್ಯಗಳಲ್ಲಿ ಪ್ರತಿಪಕ್ಷ ಶಾಸಕರನ್ನು ಸಾರಾಸಗಟಾಗಿ ಪಕ್ಷಾಂತರ ಮಾಡಿಸುವ ಮೂಲಕ ಅದು ಅಧಿಕಾರ ಹಿಡಿಯಿತು. ಬಿಹಾರದಲ್ಲಿ ಆಡಳಿತರೂಢ ಮೈತ್ರಿಕೂಟವನ್ನು ಒಡೆದು, ತನ್ನದೇ ಷಢ್ಯಂತ್ರದ ಮೂಲಕ ಮೈತ್ರಿಕೂಟದ ಒಂದು ಪಕ್ಷದೊಂದಿಗೆ ಕೈಜೋಡಿಸಿ ಅಧಿಕಾರ ಪಡೆಯಿತು. ತಮಿಳುನಾಡಿನಲ್ಲಿ ರಾಜಕೀಯ ಮತ್ತು ಕಾನೂನು ಕುತಂತ್ರಗಳ ಮೂಲಕ, ಜನಾದೇಶವಿಲ್ಲದಿದ್ದರೂ ತನಗೆ ಬೇಕಾದ ದುರ್ಬಲ ಸರ್ಕಾರವನ್ನು ಸ್ಥಾಪಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಕರ್ನಾಟಕದಲ್ಲಿ ಮಾತ್ರ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ರಾಜ್ಯಪಾಲರ ಕಚೇರಿಯ ದುರ್ಬಳಕೆ ಮತ್ತು ಪಕ್ಷಾಂತರದ ತಂತ್ರಗಾರಿಕೆಯ ಮೂಲಕ ಅಧಿಕಾರ ಹಿಡಿಯಲು ನಡೆಸಿದ ಅದರ ಪ್ರಯತ್ನ ಕೈಗೂಡಲಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವದ ಅಪರೂಪದ ಜಾಣ್ಮೆ ಮತ್ತು ಚುರುಕಿನ ನಿರ್ಧಾರದ ಫಲವಾಗಿ ಬಿಜೆಪಿಗೆ ಅಲ್ಲಿ ಭಾರೀ ಹಿನ್ನಡೆಯಾಯಿತು.

ಈ ವೈಫಲ್ಯ, ಮೋದಿಯವರ ವ್ಯಕ್ತಿತ್ವದ ಸುತ್ತ ಹಬ್ಬಿದ್ದ ಪ್ರಭಾವಳಿಯನ್ನು ಕರಗಿಸುವ ನಿಟ್ಟಿನಲ್ಲಿ ಮತ್ತೊಂದು ಬಲವಾದ ಪೆಟ್ಟು ನೀಡಿತು ಮತ್ತು ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷಗಳಿಗೆ ೨೦೧೯ರ ಲೋಕಸಭಾ ಚುನಾವಣೆಗೆ ಮುನ್ನ ಒಗ್ಗಟ್ಟು ಪ್ರದರ್ಶಿಸುವ ಅವಕಾಶವನ್ನೂ ನೀಡಿತು. ರಾಷ್ಟ್ರಮಟ್ಟದಲ್ಲಿ ಕೂಡ, ಇತ್ತೀಚಿನ ಲೋಕಸಭಾ ಅಧಿವೇಶನದಲ್ಲಿ ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿಗೆ ಅವಕಾಶ ನೀಡದ ಸಭಾಧ್ಯಕ್ಷರ ವೈಫಲ್ಯ ಹಾಗೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧದ ಪ್ರತಿಪಕ್ಷಗಳ ವಾಗ್ದಂಡನೆ ಗೊತ್ತುವಳಿ ನೊಟೀಸನ್ನು ಮೇಲ್ನೋಟದ ತೀರ್ಮಾನದ ಮೇಲೆ ತಿರಸ್ಕರಿಸಿದ ರಾಜ್ಯಸಭೆಯ ಸಭಾಧ್ಯಕ್ಷರ ನಿಲುವುಗಳು ಕೇಂದ್ರ ಸರ್ಕಾರದ ಉದ್ದೇಶಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುವಂತೆ ಮಾಡಿವೆ. ಹಾಗೇ ಸಿಬಿಐ ಮತ್ತು ಭ್ರಷ್ಟಾಚಾರ ನಿಗ್ರಹ ತನಿಖಾ ವ್ಯವಸ್ಥೆಯನ್ನು ಬಳಸಿಕೊಂಡು ಕೇಂದ್ರ ಮತ್ತು ರಾಜ್ಯಮಟ್ಟದ ಪ್ರತಿಪಕ್ಷ ಮುಖಂಡರ ವಿರುದ್ಧ ದಾಳಿ ನಡೆಸಿದ ರೀತಿ ಕೂಡ ಮತ್ತೊಂದು ಆತಂಕದ ಸಂಗತಿ. ಶ್ರೀಮತಿ ಇಂದಿರಾಗಾಂಧಿ ಅವರ ಅವಧಿಯಲ್ಲಿಯೂ- ತುರ್ತುಪರಿಸ್ಥಿತಿಯ ಸಂದರ್ಭವನ್ನು ಹೊರತುಪಡಿಸಿಯೂ- ಪ್ರಜಾಸತ್ತಾತ್ಮಕ ಮತ್ತು ಸಂವಿಧಾನಿಕ ರೀತಿರಿವಾಜುಗಳನ್ನು ಬದಿಗೊತ್ತಿ ಇಂತಹದ್ದೇ, ಅಥವಾ ಇದಕ್ಕಿಂತ ಹೀನಾಯವಾದ ಹಲವು ರಾಜಕೀಯ ಸೇಡಿನ ಕ್ರಮಗಳನ್ನು ಅನುಸರಿಸಲಾಗಿತ್ತು. ಕೆಲಮಟ್ಟಿಗೆ ಇತರ ಸರ್ಕಾರಗಳ ಅವಧಿಯಲ್ಲೂ ಅಂತಹದ್ದು ನಡೆದಿತ್ತು. ಆದರೆ, ಈಗ, ಮೋದಿ ಸರ್ಕಾರದ ಈ ವರಸೆಗಳು ಒಟ್ಟಾಗಿ ಅಥವಾ ಸಾಂದರ್ಭಿಕವಾಗಿ ಕೆಲವು ರಾಜಕೀಯ ವಿಶ್ಲೇಷಕರಲ್ಲಿ ಗಂಭೀರ ಶಂಕೆಗಳನ್ನು ಹುಟ್ಟುಹಾಕಿವೆ. ಮೋದಿ ಸರ್ಕಾರ ಚುನಾವಣೆಗಳನ್ನು ಎದುರಿಸಲು ಅಥವಾ ಸೋಲನ್ನು ಎದುರಿಸಲು ಆಗದೆ, ಅಧಿಕಾರವನ್ನು ಉಳಿಸಿಕೊಳ್ಳಲು ಏನುಬೇಕಾದರೂ ಮಾಡುವ ಮಟ್ಟಕ್ಕೆ ಇಳಿದಿದೆಯೇ? ಅಧಿಕೃತವಾಗಿ ತುರ್ತುಪರಿಸ್ಥಿತಿಯನ್ನು ಘೋಷಿಸದೆಯೂ ಅಘೋಷಿತ ತುರ್ತುಪರಿಸ್ಥಿತಿ ಜಾರಿಗೊಳಿಸಿದೆಯೇ? ಎಂಬ ಆ ಅನುಮಾನಗಳು ಈಗ ಜೋರಾಗಿಯೇ ಕೇಳಿಬರುತ್ತಿವೆ.

ಮುಂದುವರಿಯುವುದು...

ಲೇಖಕರು ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಪ್ರಜಾವಾಣಿ’ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕರು

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More