ಎಲ್ಲರ ಖಾತೆಗೂ ೧೫ ಲಕ್ಷ ರು. ಹಾಕುವುದಾಗಿ ಮೋದಿ ಹೇಳಿಲ್ಲವೆಂದ ಬಿಎಸ್‌ವೈ!

ಕೇಂದ್ರ ಸರ್ಕಾರದ ಸಾಧನೆಗಳ ಕಿರುಹೊತ್ತಿಗೆ ಬಿಡುಗಡೆ ವೇಳೆ, ಕೇಂದ್ರ ಸರ್ಕಾರಕ್ಕೆ ಬಹುಪರಾಕ್‌ ಹಾಕುತ್ತಲೇ ಮಾತು ಆರಂಭಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ, ಹಜ್ ಭವನಕ್ಕೆ ಟಿಪ್ಪು ನಾಮಕರಣ ವಿವಾದ, ಕಾವೇರಿ ವಿವಾದ, ಡಿ ಕೆ ಶಿವಕುಮಾರ್ ಆರೋಪದ ಕುರಿತು ಮಾತನಾಡಿದರು

“ಸ್ವಾಮಿ, ದಯಮಾಡಿ ಕೇಳಿ. ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಮುಖಂಡರು ಮಾತನಾಡಿದ ಹಾಗೆ ನೀವು ಮಾತನಾಡಬೇಡಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏನು ಹೇಳಿದರು? ಯಾವ ಅರ್ಥದಲ್ಲಿ ಹೇಳಿದರು? ಯಾವ ರೀತಿ ದೇಶದ ಆರ್ಥಿಕತೆ ಸುಧಾರಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳದೆ ರಾಜಕೀಯ ಮಾಡಲು ಅವರು ಮಾತನಾಡುತ್ತಿದ್ದಾರೆ. ಅದರಲ್ಲಿ ಸತ್ಯಾಂಶವಿಲ್ಲ..."

- "ನಾಲ್ಕು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ರುಪಾಯಿ ಜಮೆ ಮಾಡುವುದಾಗಿ ಮೋದಿ ಹೇಳಿದ್ದರಲ್ಲವೇ?” ಎಂಬ ಪತ್ರಕರ್ತರ ಪ್ರಶ್ನೆಗೆ ಬಿ ಎಸ್‌ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ ಬಗೆ ಇದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನಾಲ್ಕು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಭಾನುವಾರ ಕೇಂದ್ರ ಸರ್ಕಾರದ ಸಾಧನೆಗಳ ‘ಶುದ್ಧ ನಡೆ ಸೂಕ್ತ ವಿಕಾಸ’ ಕಿರುಹೊತ್ತಿಗೆ ಬಿಡುಗಡೆ ಸಮಾರಂಭದಲ್ಲಿ ಯಡಿಯೂರಪ್ಪ ಅವರು ಮಾತನಾಡಿದರು.

ಹಿಂದೆ ಇದೇ ರೀತಿಯ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೂ ನೀಡಿದ್ದರು. "ವಿದೇಶದಲ್ಲಿ ಭಾರತೀಯರು ಕೂಡಿಟ್ಟಿರುವ ಕಪ್ಪು ಹಣವನ್ನು ದೇಶಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ರುಪಾಯಿ ಹಾಕುವುದಾಗಿ ಪ್ರಧಾನಿ ಮೋದಿ ಹೇಳಿದ್ದು ಜುಮ್ಲಾ (ಸುಳ್ಳು),” ಎಂದಿದ್ದ ಅಮಿತ್‌ ಶಾ ಅವರು, ಅದು ಅವಾಸ್ತವಿಕ ಎಂದು ನುಣಿಚಿಕೊಂಡಿದ್ದರು. ಆನಂತರ ಇದೇ ರೀತಿಯ ಹೇಳಿಕೆಯನ್ನು ಹಲವು ಬಿಜೆಪಿ ನಾಯಕರು ಹೇಳಿದ್ದಾರೆ. ಈಗ ಗುಂಪಿಗೆ ಯಡಿಯೂರಪ್ಪ ಅವರು ಸೇರ್ಪಡೆಯಾಗಿದ್ದಾರೆ.

ಇದೇ ವೇಳೆ, ಹಜ್‌ ಭವನಕ್ಕೆ ಟಿಪ್ಪು ಹೆಸರು ಇಡುವುದಕ್ಕೆ ಬಿಎಸ್‌ವೈ ವಿರೋಧ ವ್ಯಕ್ತಪಡಿಸಿದರು. "ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಜ್‌ ಭವನ ನಿರ್ಮಾಣಕ್ಕೆ ನಿವೇಶನ ಮತ್ತು ಹಣ ಮಂಜೂರು ಮಾಡಿದ್ದೇನೆ. ಈಗ ಇರುವಂತೆ ಹಜ್‌ ಭವನ ಎಂದು ಇದ್ದರೆ ಸಾಕು. ಇದನ್ನು ಬಿಟ್ಟು ಟಿಪ್ಪು ಹೆಸರು ಇಡಬೇಕು ಎನ್ನುವ ಹಜ್‌ ಸಚಿವರಾದ ಜಮೀರ್ ಅಹ್ಮದ್‌ ಖಾನ್‌ ಅವರ ನಿರ್ಧಾರ ಸರಿಯಲ್ಲ. ಅಷ್ಟಕ್ಕೂ ಅವರಿಗೆ ಹೆಸರಿಡಲೇಬೇಕು ಎಂದಾದರೆ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ಹೆಸರಿಡಬಹುದು,” ಎಂದು ಸಲಹೆ ನೀಡಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಟಿಪ್ಪು ಜಯಂತಿ ಆಚರಿಸುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಸುದೀರ್ಘ ಸಂಘರ್ಷ ನಡೆದಿತ್ತು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಟಿಪ್ಪು ಜಯಂತಿ ಆಚರಿಸುವ ನಿರ್ಧಾರಕ್ಕೆ ಬದ್ಧವಾಗಿತ್ತು. ಈ ಸಂದರ್ಭದಲ್ಲಿ ಹಿಂಸಾಚಾರ ಉಂಟಾಗಿ ಹಲವು ಸಾವು-ನೋವುಗಳೂ ಸಂಭವಿಸಿದ್ದವು.

ಜೂ.೨೯ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ

ಬೆಂಗಳೂರಿನಲ್ಲಿ ಇದೇ ೨೯ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಇಲ್ಲಿ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಕಾರ್ಯಕಾರಿಣಿಯಲ್ಲಿ ಪಕ್ಷದ ಹಿರಿಯ ನಾಯಕರು, ಸಂಸದರು ಹಾಗೂ ಶಾಸಕರು ಪಾಲ್ಗೊಳ್ಳಲಿದ್ದಾರೆ. ಜಯನಗರ ವಿಧಾನಸಭಾ ಕ್ಷೇತ್ರದ ಸೋಲಿನ ಆತ್ಮಾವಲೋಕನ, ಹಿರಿಯ ಮುಖಂಡ ಕೆ ಎಸ್‌ ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಚಟುವಟಿಕೆ ಚರುಕುಗಳಿಸಲು ಯತ್ನಿಸುತ್ತಿರುವುದು, ಜುಲೈನಲ್ಲಿ ಬಜೆಟ್‌ ಅಧಿವೇಶನ ಆರಂಭವಾಗುವುದರಿಂದ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧದ ಹೋರಾಟದ ಹಾದಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸುಪ್ರೀಂ ಕೋರ್ಟ್‌ ಸೂಚನೆಯಂತೆ ಮಂಡಳಿ ರಚನೆ

“ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಗೆ ಸಂಬಂಧಿಸಿದಂತೆ ಹಿಂದಿನ ಸರ್ಕಾರವು ಸರಿಯಾದ ರೀತಿಯಲ್ಲಿ ನಡೆದುಕೊಂಡಿಲ್ಲ. ಈಗ ಸಮ್ಮಿಶ್ರ ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ರೈತರ ಹಿತದೃಷ್ಟಿಯಿಂದ ಸರ್ಕಾರದ ಜೊತೆ ಕೆಲಸ ಮಾಡಲು ಬಿಜೆಪಿ ಬದ್ಧವಾಗಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕೇಂದ್ರ ಸರ್ಕಾರ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸಿದೆ. ಇದರಲ್ಲಿ ರಾಜಕೀಯ ಮಾಡುವುದು ಸಲ್ಲದು. ಮಂಡಳಿಗೆ ರಾಜ್ಯದ ಪ್ರತಿನಿಧಿಯ ಹೆಸರನ್ನು ಇದುವರೆಗೂ ರಾಜ್ಯ ಸರ್ಕಾರ ಸೂಚಿಸಿಲ್ಲ ಎಂಬುದು ಯಾಕೆ ಎಂದು ತಿಳಿದಿಲ್ಲ. ತಕ್ಷಣ ತಜ್ಞರನ್ನು ರಾಜ್ಯ ಸರ್ಕಾರ ನೇಮಿಸಬೇಕು,” ಎಂದು ಆಗ್ರಹಿಸಿದರು. ಆದರೆ, “ನೀರು ಬಳಕೆ ಮತ್ತಿತರ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುತ್ತದೆ. ಏಕಪಕ್ಷೀಯವಾಗಿ ಮಂಡಳಿ ರಚಿಸಲಾಗಿದೆ. ರಾಜ್ಯದ ರೈತರಿಗೆ ಸೂಚನೆ ನೀಡುವುದು ಕೇಂದ್ರದ ಕೆಲಸವಲ್ಲ,” ಎಂದು ಸಿಎಂ ಕುಮಾರಸ್ವಾಮಿ ಅವರು ತಗಾದೆ ತೆಗೆದಿದ್ದಾರೆ.

ಇದನ್ನೂ ಓದಿ : ಮೋದಿ ಆಡಳಿತದ ನಾಲ್ಕು ವರ್ಷ | ಹೇಳಿದ್ದೇನು? ಮಾಡಿದ್ದೇನು? ವಿಶ್ಲೇಷಣೆಗಳ ಸರಣಿ ಲೇಖನಗಳು

ಸಿಎಂ ಆಗುವುದಕ್ಕೂ ಮುನ್ನ ಷರತ್ತು ವಿಧಿಸಬೇಕಿತ್ತು

“ಕಾಂಗ್ರೆಸ್-ಜೆಡಿಎಸ್‌ ಚುನಾವಣಾ ಭರವಸೆಗಳನ್ನು ಕುಮಾರಸ್ವಾಮಿ ಜಾರಿಗೊಳಿಸಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಭರವಸೆ ಈಡೇರಿಕೆ ಕಷ್ಟ. ಜೆಡಿಎಸ್‌ಗೆ ಬಹುಮತ ಬಂದಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳುತ್ತಿರುವುದು ಸರಿಯಲ್ಲ. ಸರ್ಕಾರ ರಚಿಸುವುದಕ್ಕೂ ಮುನ್ನ ಅವರು ಕಾಂಗ್ರೆಸ್‌ಗೆ ಷರತ್ತು ವಿಧಿಸಬೇಕಿತ್ತು. ನಮ್ಮ ಚುನಾವಣಾ ಭರವಸೆಗಳನ್ನು ಈಡೇರಿಸುವುದಾದರೆ ಮಾತ್ರ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಬೇಕಿತ್ತು. ಈಗ ಅವರು ತಪ್ಪಿಸಿಕೊಳ್ಳಲಾಗದು,” ಎಂದು ಯಡಿಯೂರಪ್ಪ ಹೇಳಿದ್ದಾರೆ. ಈ ಮೂಲಕ ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿಲು ರಣತಂತ್ರ ರೂಪಿಸಲಾಗುತ್ತಿದೆ ಎಂಬ ಸೂಚನೆಯನ್ನೂ ರವಾನಿಸಿದ್ದಾರೆ.

ಡಿಕೆಶಿಗೆ ಸವಾಲು

ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಿ ಕೆ ಶಿವಕುಮಾರ್‌ ಅವರ ಮೇಲಿನ ಐಟಿ ದಾಳಿಯು ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಶಿವಕುಮಾರ್‌ ಅವರು ಬಿಜೆಪಿ ನಾಯಕರ ದಾಖಲೆಗಳನ್ನು ಬಿಚ್ಚಡಬೇಕಾಗುತ್ತದೆ ಎಂದು ಈಚೆಗೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, “ಅಕ್ರಮದ ಬಗ್ಗೆ ದಾಖಲೆಗಳಿದ್ದರೆ ಡಿ ಕೆ ಶಿವಕುಮಾರ್‌ ಅವರು ಬಿಡುಗಡೆ ಮಾಡಬಹುದು. ಅವರದ್ದೇ ಸರ್ಕಾರವಿದ್ದು, ರಾಜ್ಯದ ಹಲವು ತನಿಖಾ ಸಂಸ್ಥೆಗಳಿವೆ. ಇವುಗಳಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿ. ಇದನ್ನು ಬಿಟ್ಟು ತಮ್ಮಲ್ಲಿನ ಹುಳುಕು ಮುಚ್ಚಿಕೊಳ್ಳಲು ಆರೋಪ ಮಾಡುವುದು ಸಲ್ಲದು,” ಎಂದು ಗುಡುಗಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More