ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಸ್ಥಾನ ತುಂಬಲಿದ್ದಾರೆ ಆಜಾದ್‌?

ರಾಜ್ಯ ಕಾಂಗ್ರೆಸ್‌ ಹೊಣೆ ಹೊತ್ತಿರುವ ಕೇರಳದ ಕೆ ಸಿ ವೇಣುಗೋಪಾಲ್‌ ಅವರ ಬದಲಾವಣೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಗುಂಪು ಒತ್ತಡ ಆರಂಭಿಸಿದೆ. ಈ ಸ್ಥಾನಕ್ಕೆ ರಾಜ್ಯಸಭಾ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ತರಲು ಯತ್ನ ನಡೆದಿದೆ ಎನ್ನಲಾಗುತ್ತಿದೆ. ಈ ಆಗ್ರಹಕ್ಕೆ ಕಾರಣವೇನಿರಬಹುದು?

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಹೊಣೆ ಹೊತ್ತಿರುವ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್‌ ಅವರ ಸ್ಥಾನಕ್ಕೆ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರನ್ನು ತರಲು ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರು ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. 2019ರಲ್ಲಿ ಲೋಕಸಭಾ ಚುನಾವಣೆ ನಡೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ ವಿವಿಧ ರಾಜ್ಯಗಳಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದರ ಭಾಗವಾಗಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೆರೆಯ ಮಹಾರಾಷ್ಟ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಅದೇ ಮಾದರಿಯಲ್ಲಿ ಗುಲಾಂ ನಬಿ ಆಜಾದ್‌ ಅವರನ್ನು ರಾಜ್ಯ ಉಸ್ತುವಾರಿಯನ್ನಾಗಿ ನೇಮಿಸಬೇಕು ಎಂದು ಹೈಕಮಾಂಡ್‌ ಮೇಲೆ ಒತ್ತಡ ತರಲು ಕಾಂಗ್ರೆಸ್‌ನ ಹಿರಿಯ ನಾಯಕರ ಗುಂಪು ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿರುವುದರಿಂದ ಕೇರಳ ಮೂಲದ ವೇಣುಗೋಪಾಲ್ ಅವರ ಬಗ್ಗೆ ರಾಜ್ಯ ಕಾಂಗ್ರೆಸ್‌ ನಾಯಕರು ಅಸಮಾಧಾನ ಹೊಂದಿದ್ದಾರೆ. ವೇಣುಗೋಪಾಲ್‌ ಅವರಿಂದ ತೆರವಾಗುವ ಸ್ಥಾನಕ್ಕೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರನ್ನು ತರಲು ಯತ್ನ ನಡೆದಿದೆ ಎನ್ನಲಾಗಿದೆ. ಸದ್ಯ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾದ ಜೆಡಿಎಸ್‌ ರಾಷ್ಟ್ರಾಧ್ಯಕ್ಷ ದೇವೇಗೌಡರ ಜೊತೆ ಗುಲಾಂ ನಬಿ ಆಜಾದ್‌ ಅವರು ಉತ್ತಮ ಸಂಬಂಧ ಹೊಂದಿದ್ದಾರೆ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಜಾದ್‌ ಅವರನ್ನು ರಾಜ್ಯ ಉಸ್ತುವಾರಿಯನ್ನಾಗಿ ನೇಮಕ ಮಾಡಿದರೆ ಟಿಕೆಟ್‌ ಹಂಚಿಕೆ, ಸಮ್ಮಿಶ್ರ ಸರ್ಕಾರ ನಿಭಾಯಿಸುವುದು ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾರ್ಯತಂತ್ರ ರೂಪಿಸಲು ಹೆಚ್ಚಿನ ಅನುಕೂಲವಾಗಲಿದೆ ಎನ್ನುವುದು ಇದರ ಹಿಂದಿನ ವಾದ ಎನ್ನಲಾಗುತ್ತಿದೆ.

ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ನಡೆದ ಮೈತ್ರಿ ಸರ್ಕಾರ ರಚನೆಯ ಜವಾಬ್ದಾರಿಯನ್ನು ರಾಜ್ಯಸಭಾ ಪ್ರತಿಪಕ್ಷದ ನಾಯಕರಾದ ಆಜಾದ್‌ ಯಶಸ್ವಿಯಾಗಿ ನಿಭಾಯಿಸಿದ್ದರು. ಗುಲಾಂ ನಬಿ ಆಜಾದ್‌ ಅವರ ಕಾರ್ಯವೈಖರಿ, ಹಿರಿತನ ಹಾಗೂ ಅನುಭವಗಳನ್ನು ಹತ್ತಿರದಿಂದ ನೋಡಿರುವ ಹಿರಿಯ ಕಾಂಗ್ರೆಸ್ಸಿಗರು ಆಜಾದ್‌ ಅವರನ್ನೇ ಉಸ್ತುವಾರಿಯನ್ನಾಗಿ ನೇಮಿಸುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಂಥ ಬಲಿಷ್ಠ ನಾಯಕರನ್ನು ನಿಭಾಯಿಸುವುದು ಆಜಾದ್‌ ಅವರಂಥವರಿಗೆ ಸುಲಭ ಎಂಬುದು ಇದರ ಹಿಂದಿನ ಮರ್ಮವಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ : ಚಾಣಕ್ಯಪುರಿ | ಗೆಹ್ಲೋಟ್ ಉಸ್ತುವಾರಿ ಆಗಿದ್ದರೆ ಕಾಂಗ್ರೆಸ್ ಗೆಲ್ಲುತ್ತಿತ್ತೇ?

ವೇಣುಗೋಪಾಲ್‌ ಅವರು‌ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದ ನೈಜ ಪರಿಸ್ಥಿತಿಯನ್ನು ಹೈಕಮಾಂಡ್‌ಗೆ ತಿಳಿಸಲಿಲ್ಲ. ಪಕ್ಷ ಸಂಘಟನೆಗೆ ಅವಕಾಶವಿದ್ದರೂ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದ್ದ ಬಿಜೆಪಿಗೆ ಸೂಕ್ತ ಮಾರ್ಗದರ್ಶನ ಮತ್ತು ರಣತಂತ್ರ ರೂಪಿಸಿ ಪಕ್ಷವು ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮಟ್ಟಿಗೆ ತಂದು ನಿಲ್ಲಿಸಿದರು. ಆದರೆ, ಸಿದ್ದರಾಮಯ್ಯನವರ ಮಾತಿಗೆ ಹೆಚ್ಚಿನ ಮನ್ನಣೆ ನೀಡಿದ್ದ ವೇಣಗೋಪಾಲ್‌ ಅವರು ಹಿರಿಯ ಕಾಂಗ್ರೆಸ್ಸಿಗರನ್ನು ಕಡೆಗಣಿಸಿದ್ದರು. ಟಿಕೆಟ್‌ ಹಂಚಿಕೆ ಹಾಗೂ ಚುನಾವಣೆಗೂ ಮುನ್ನ ತೆಗೆದುಕೊಂಡ ಹಲವು ಪ್ರಮುಖ ನಿರ್ಧಾರಗಳಲ್ಲಿ ಸಿದ್ದರಾಮಯ್ಯನವರ ಕೈ ಮೇಲಾಗುವಂತೆ ವೇಣುಗೋಪಾಲ್‌ ನೋಡಿಕೊಂಡಿದ್ದರು. ಸಚಿವ ಸಂಪುಟ ರಚನೆ ವೇಳೆ ಕಾಣಿಸಿಕೊಂಡ ಭಿನ್ನಮತವನ್ನು ಶಮನ ಮಾಡಲು ಅವರು ತಕ್ಷಣ ಮುಂದಾಗಲಿಲ್ಲ ಎನ್ನುವ ಆರೋಪಗಳನ್ನು ಮುಂದಿರಿಸಿಕೊಂಡು ಅವರ ಬದಲಾವಣೆಗೆ ತಂತ್ರ ಹೆಣೆಯಲಾಗಿದೆ ಎನ್ನಲಾಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More