ಮತದಾರರಿಗೆ ಪತ್ರ ಬರೆದ ವೈಎಸ್‌ವಿ ದತ್ತಾ ಹತಾಶೆಯಲ್ಲಿ ವಾಸ್ತವ ಮರೆತರೇ?

ತಮ್ಮ ಸೋಲಿನ ಬಗ್ಗೆ ‘ನೊಂದು’ ವೈಎಸ್‌ವಿ ದತ್ತಾ ಕಡೂರಿನ ಮತದಾರರಿಗೆ ಕಟುಮಾತಿನ ಪತ್ರವೊಂದನ್ನು ಬರೆದಿದ್ದಾರೆ. ರಾಜ್ಯದೆಲ್ಲೆಡೆ ಈ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ಹೀಗೆ ಪತ್ರ ಬರೆದಿರುವ ದತ್ತಾ ಪ್ರಶ್ನಿಸಿಕೊಳ್ಳಬೇಕಾದ ಒಂದಷ್ಟು ಸಂಗತಿಗಳು ಇವೆ ಎನ್ನುವುದೂ ಕಟುವಾಸ್ತವ

ಕಡೂರು ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ವೈಎಸ್‌ವಿ ದತ್ತಾ ತಮ್ಮ ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಬರೆದಿರುವ ಪತ್ರ ರಾಜ್ಯದೆಲ್ಲೆಡೆ ಸದ್ದು ಮಾಡುತ್ತಿದೆ. ಹೀಗೆ ಹತಾಶೆಯನ್ನು ಹೊರಹಾಕುವ ಮೂಲಕ ಅವರು ಸಹಾನುಭೂತಿ ಪಡೆಯುವ ಯತ್ನ ಮಾಡುತ್ತಿರುವುದು, ಅನಿರೀಕ್ಷಿತವಾಗಿ ಟೀಕೆಗೆ ಒಳಗಾಗುತ್ತಿರುವುದು ನಿಜ. ಇದರಾಚೆಗೆ ಖುದ್ದು ದತ್ತಾ ಅವರು ಪ್ರಶ್ನಿಸಿಕೊಳ್ಳಬೇಕಾದ ಒಂದಷ್ಟು ಅಂಶಗಳಿವೆ.

ಪತ್ರ ಬರೆಯುವ ನೆಪದಲ್ಲಿ ಪರೋಕ್ಷವಾಗಿ ದತ್ತಾ ವ್ಯಂಗ್ಯದ ಬಾಣಗಳನ್ನು ಮತದಾರರತ್ತ ಪ್ರಯೋಗಿಸಿದ್ದಾರೆ. “ಸಾರ್ವಜನಿಕ ಬದುಕೇ ಅಂತಹುದು. ಅದರಲ್ಲೂ ಬದ್ಧತೆ ಮತ್ತು ಜನನಿಷ್ಠೆಯುಳ್ಳ ಜನಪ್ರತಿನಿಧಿಯೊಬ್ಬ ತನ್ನ ಕರ್ತವ್ಯ, ಜವಾಬ್ದಾರಿ, ಸ್ಪಂದನೆ, ಕ್ರಿಯಾಶೀಲತೆ- ಇಂತಹ ಹತ್ತು ಹಲವು ಕಾರಣಗಳಿಂದಾಗಿ ಉಂಟಾಗುವ ಒತ್ತಡಗಳ ದೆಸೆಯಿಂದ ತಾನು ಇಷ್ಟಪಡುವ ವ್ಯಕ್ತಿಗಳು, ಹವ್ಯಾಸಗಳು, ಅಭಿರುಚಿಗಳು, ಚಟುವಟಿಕೆಗಳಿಂದ ದೂರವಾಗಿ ತನ್ನತನ ಕಳೆದುಕೊಂಡುಬಿಡುತ್ತಾನೆ. ಆದರೆ, ನಾನೀಗ ನಿರಮ್ಮಳನಾಗಿದ್ದೇನೆ ಎಂದು ಹೇಳಲು ಕಾರಣ ನಾನು ಕಳೆದುಕೊಂಡಿರುವ 'ನನ್ನತನ'ವನ್ನು ಮತ್ತೆ ಕುದುರಿಸಿಕೊಳ್ಳಲು ನೀವು ಅಷ್ಟರಮಟ್ಟಿಗೆ ನನ್ನನ್ನು ಒತ್ತಡಮುಕ್ತನನ್ನಾಗಿ ಮಾಡಿ ಉಪಕರಿಸಿದ್ದೀರಿ. ಇದಕ್ಕಾಗಿ ನಾನು ನಿಮಗೆ ಕೃತಜ್ಞ,” ಎಂದಿದ್ದಾರೆ.

ಅಲ್ಲದೆ, “ಕಳೆದ 5 ವರ್ಷಗಳ ಕಾಲ ನಾನು ನಿಮ್ಮ ಶಾಸಕನಾಗಿ ಮಾಡಿದ ಅಪಚಾರ, ನಿಮಗೆ ಮಾಡಿದ ಅನ್ಯಾಯ, ಮಾಡಿರುವ ಪ್ರಮಾದಗಳಿಂದಾಗಿ ನೀವು ದುಷ್ಟನೆಂಬಂತೆ ನನ್ನನ್ನು ಶಿಕ್ಷಿಸಿ, ಶಿಷ್ಟರೆನಿಸಕೊಂಡವರಿಗೆ ಮಾನ್ಯತೆ ಸಿಗುವಂತೆ ಮಾಡಿದ್ದೀರಿ. ಜನತಂತ್ರದ ಧರ್ಮವನ್ನು ಸರಿಯಾಗಿಯೇ ಪಾಲಿಸಿದ್ದೀರಿ. ನಿಮಗೆಲ್ಲ ಒಳ್ಳೆಯದಾಗಲಿ. ನನ್ನನ್ನು ಮತ್ತು ನನ್ನ ತಪ್ಪುಗಳನ್ನು ದಯವಿಟ್ಟು ಕೆಟ್ಟ ಕನಸೆಂದು ಮರೆತುಬಿಡಿ,” ಎಂದು ಹೇಳಿದ್ದಾರೆ. ತಮ್ಮಂತೆಯೇ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಪರಾಭವಗೊಂಡ ರವಿಕೃಷ್ಣಾ ರೆಡ್ಡಿ ಅನುವಾದಿಸಿರುವ, ‘ವಿರೋಧಾಭಾಸದ ಹತ್ತು ಆದರ್ಶಗಳು' ಪುಸ್ತಕದ ಬಗ್ಗೆಯೂ ಉಲ್ಲೇಖಿಸಿದ್ದಾರೆ (ಪುಸ್ತಕದ ಕುರಿತು ಕಡೆಯಲ್ಲಿ ಚರ್ಚಿಸಲಾಗಿದೆ).

ಅಭ್ಯರ್ಥಿತನವನ್ನು ಗಮನಿಸುವಾಗ ರವಿಕೃಷ್ಣಾ ರೆಡ್ಡಿ ಅವರಿಗೂ, ದತ್ತಾ ಅವರಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಮುಖ್ಯವಾಗಿ, ಮತದಾರರು 2013ರಲ್ಲಿ ದತ್ತಾ ಅವರನ್ನು ಗೆಲ್ಲಿಸಿಯೂ ನೋಡಿದ್ದಾರೆ. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಅಂದರೆ, 2008ರಲ್ಲಿ ತಮ್ಮ ಎದುರಾಳಿ ಕೆ ಎಂ ಕೃಷ್ಣಮೂರ್ತಿ (ಪಡೆದ ಮತಗಳು 39,411) ವಿರುದ್ಧ ದತ್ತಾ (ಪಡೆದ ಮತಗಳು 36,000) ಕೇವಲ 3,411 ಮತಗಳ ಅಂತರದಿಂದ ಸೋತಿದ್ದರು ಎಂಬುದನ್ನು ಗಮನಿಸಿದರೆ, ಜಯನಗರದಲ್ಲಿ ರವಿಕೃಷ್ಣಾ ರೆಡ್ಡಿಯವರನ್ನು ನಿರಾಕರಿಸಿದಂತೆ ಇಲ್ಲಿನ ಮತದಾರರು ಇವರನ್ನು ತೀರಾ ನಿರ್ಲಕ್ಷಿಸಿರಲಿಲ್ಲ ಎಂಬುದು ಗಮನಾರ್ಹ ವಿಚಾರ. ಅಲ್ಲದೆ, ಮತಬಲ ಹೊಂದಿರದ ಬ್ರಾಹ್ಮಣ ಸಮುದಾಯದಿಂದ ಬಂದ ಅವರನ್ನು ಎಲ್ಲ ಸಮುದಾಯದವರು ಬೆಂಬಲಿಸಿದ್ದಾರೆ. ಪಕ್ಷ ಕೂಡ ವೈಎಸ್‌ವಿ ದತ್ತಾ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಚೆನ್ನಾಗಿ ನಡೆಸಿಕೊಂಡಿದೆ. ಹಾಗಿದ್ದರೂ ದತ್ತಾ ಅವರು ಹತಾಶೆಯಲ್ಲಿ ನಲುಗುತ್ತಿದ್ದಾರೆ.

ಇದನ್ನೂ ಓದಿ : ಡಾಟಾ ವಿಡಿಯೋ | ಕಡೂರು ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ವೈಎಸ್‌ವಿ ದತ್ತಾ

ದತ್ತಾ ಅವರ ಕ್ಷೇತ್ರದಲ್ಲಿ ಜನರು ಹೇಳುವ ಪ್ರಕಾರ, “ಈ ಬಾರಿ ದತ್ತಾ ಸೋಲಲು ಮತದಾರರು ಕಾರಣವಲ್ಲ. ಬದಲಿಗೆ ಜೆಡಿಎಸ್ ಕಾರಣ. ಪಕ್ಷದ ವರಿಷ್ಠರಾರೂ ಅವರ ಪರ ಪ್ರಚಾರ ನಡೆಸಲಿಲ್ಲ. ದತ್ತಾ ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿದ್ದರೂ ನಾವು ಮತ ಹಾಕುತ್ತೇವೆ. ಪ್ರಶ್ನೆ ಅದಲ್ಲ. ಪಕ್ಷ ಅವರನ್ನು ಕೈಬಿಟ್ಟಿದೆ. ಅವರ ಪಕ್ಷವೇ ಅವರಿಗೆ ಮುಳುವಾಗಿದೆ.”

ಇದಕ್ಕೆ ದತ್ತಾ ಅವರ ಉತ್ತರವೇನು? ದತ್ತ ಹೇಳಿ-ಕೇಳಿ ಮೇಷ್ಟ್ರಾಗಿದ್ದವರು. ಅವರಿಗೆ ಚುನಾವಣೆಗೂ ಪರೀಕ್ಷೆಗೂ ಇರುವ ವ್ಯತ್ಯಾಸ ತಿಳಿದಿರುವಂತೆ ತೋರುತ್ತಿಲ್ಲ. ತಿಳಿದಿದ್ದರೆ ಮತದಾರರತ್ತ ಕಠೋರವಾಗಿ ಪತ್ರಾಸ್ತ್ರ ಎಸೆಯುತ್ತಿರಲಿಲ್ಲ. ಹಣ, ಹೆಂಡ, ಜಾತಿ ಪ್ರಭಾವ ಹಾಗೂ ಚುನಾವಣಾ ಅಕ್ರಮಗಳ ಆಚೆಗೂ ಮತದಾರರಿಗೆ ಒಂದು ಮನಸ್ಸೆಂಬುದಿರುತ್ತದೆ. ಅದನ್ನು ಅರಿಯುವುದು ಅಷ್ಟು ಸುಲಭವಲ್ಲ. “ಕಳೆದ ಬಾರಿ ಅವರಿಗೆ ಮತ ನೀಡಿದ್ದೆವು. ಈ ಬಾರಿ ಇವರಿಗೆ ನೀಡೋಣ,” ಎನ್ನುವವರಿರಬಹುದು ಅಥವಾ “ಕಳೆದ ಬಾರಿ ಸೋತಿದ್ದಾರೆ ಈ ಬಾರಿ ಗೆಲ್ಲಿಸೋಣ,” ಎಂದು ಮನಸ್ಸು ಮಾಡಿದವರೂ ಇರಬಹುದು. ಹೀಗೆ ಚುನಾವಣೆಯಲ್ಲಿ ಬೇರೆ ಬೇರೆ ಅಂಶಗಳು ಕೆಲಸ ಮಾಡುತ್ತಿರುತ್ತವೆ.

ರಾಜ್ಯದ ಮತದಾರರು 224 ಮಂದಿಯನ್ನು ಗೆಲ್ಲಿಸಿದ್ದಾರೆ, ನೂರಾರು ಮಂದಿಯನ್ನು ಸೋಲಿಸಿದ್ದಾರೆ. ಅವರೆಲ್ಲ ಏಕೆ ಹೀಗೆ ಪತ್ರ ಬರೆದಿಲ್ಲ? ಕೆಲವು ರಾಜಕಾರಣಿಗಳಿಗೆ ಸೋಲು, ಗೆಲುವು ಸಾಮಾನ್ಯ. ನೋವು, ಹತಾಶೆಯೂ ಇರುತ್ತದೆ. ಆದರೆ ಬಹುತೇಕರು ಆತ್ಮವಿಮರ್ಶೆ ಮಾಡಿಕೊಳ್ಳುತ್ತಾರೆ. ಮುಂದಿನ ಚುನಾವಣೆಯಲ್ಲಿ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನುಗ್ಗುತ್ತಾರೆ. ಆದರೆ, ದತ್ತಾ ವಿಚಾರ ಬೇರೆ. ಅವರ ಪತ್ರ ಸಂಪೂರ್ಣ ಸಹಾನುಭೂತಿ ಪಡೆಯುವ, ಹತಾಶೆ ವ್ಯಕ್ತಪಡಿಸುವ ಧಾಟಿಯಲ್ಲಿಯೇ ಇದೆ. ಬದಲಿಗೆ, ಅಲ್ಲೊಂದಿಷ್ಟು ಆತ್ಮವಿಮರ್ಶೆಯ ಅಂಶಗಳೂ ಇರಬೇಕಿತ್ತು. ಚುನಾವಣಾ ವಾಸ್ತವ ಏನೆಂಬುದನ್ನು ಅರ್ಥ ಮಾಡಿಕೊಂಡು ಅವರು ತಮ್ಮ ಲೇಖನಿಗೆ ಕೆಲಸ ಕೊಡಬಹುದಿತ್ತು.

ರವಿಕೃಷ್ಣಾ ರೆಡ್ಡಿ ಅವರು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಪ್ರವಚನಕಾರರೊಬ್ಬರ ಮಾತುಗಳನ್ನು ಕೇಳಿ ಕೆಂಟ್ ಎಂ ಕೇತ್ ಅವರ ‘ವಿರೋಧಾಭಾಸದ ಹತ್ತು ಆದರ್ಶಗಳು’ ಕೃತಿಯನ್ನು ಅನುವಾದಿಸಿದ್ದಾರೆ. ಅದರ ಬಗ್ಗೆ ದತ್ತಾ ಅವರು ಬರೆದಿರುವ ಪತ್ರದಲ್ಲಿ ಪ್ರಸ್ತಾಪವಿದೆ. ಹಾರ್ವರ್ಡ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಕೆಂಟ್ (ಮುಂದೆ ಇವರು ಉನ್ನತ ಶಿಕ್ಷಣದ ತಜ್ಞರಾಗಿ, ಅಮೆರಿಕದ ಲೇಖಕರಾಗಿ ಜನಪ್ರಿಯರಾದರು) ಇದನ್ನು ಬರೆದಾಗ ಅವರಿಗೆ ಕೇವಲ 19ರ ಪ್ರಾಯ. ‘The Paradoxical Commandments’ ಎಂಬುದು ಕೆಂಟ್ ಅವರ ‘The Silent Revolution: Dynamic Leadership in the Student Council’ ಕೈಪಿಡಿಯ ಎರಡನೇ ಅಧ್ಯಾಯದಲ್ಲಿ ಬರುವ ಟಿಪ್ಪಣಿ. 1968ರಲ್ಲಿ ಹಾರ್ವರ್ಡ್ ಸ್ಟೂಡೆಂಟ್ಸ್ ಏಜೆನ್ಸೀಸ್ ಇದನ್ನು ಪ್ರಕಟಿಸಿತು. ಕುದಿರಕ್ತದ ಯೌವನ, ನೋಡಿದ್ದೆಲ್ಲವೂ ಆದರ್ಶಮಯವಾಗಿರಬೇಕು ಎಂದು ಭಾವಿಸುವ ಅರೆಬೆಂದ ಮನಸ್ಸಿನ ವಿದ್ಯಾರ್ಥಿಗಳಿಗಾಗಿ ಬರೆದ ಪುಸ್ತಕ. ಟಿಪ್ಪಣಿಯಲ್ಲಿ ಕೆಂಟ್, “ಜನರು ತರ್ಕಹೀನರು, ಯುಕ್ತಾಯುಕ್ತ ಪರಿಜ್ಞಾನ ಇಲ್ಲದವರು ಹಾಗೂ ಸ್ವಕೇಂದ್ರಿತ ಸ್ವಾರ್ಥಿಗಳು. ಏನೇ ಇರಲಿ, ಅವರನ್ನು ಪ್ರೀತಿಸಿ”, “ನೀವು ವರ್ಷಗಳ ಕಾಲ ಕಟ್ಟಿದ್ದು ರಾತ್ರೋರಾತ್ರಿ ನಾಶಗೊಳ್ಳಬಹುದು. ಏನೇ ಆಗಲಿ, ಕಟ್ಟಿಯೇ ಕಟ್ಟಿ”, “ನಿಮ್ಮ ಕೈಲಾದುದನ್ನು ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ; ಆಗಲೂ ಜನ ನಿಮ್ಮ ಹಲ್ಲುದುರಿಸಬಹುದು. ಆದರೂ ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ,” ಇತ್ಯಾದಿ ಹತ್ತು ಅಂಶಗಳನ್ನು ನೀಡಿದ್ದಾರೆ. ವೈಎಸ್‌ವಿ ದತ್ತಾ ಅವರಂತಹ ಮಾಗಿದ ರಾಜಕಾರಣಿಗೆ ರಾಜಕೀಯ ಸಂದರ್ಭವನ್ನಿಟ್ಟುಕೊಂಡು ಮಾತನಾಡದ ಈ ಪುಸ್ತಕ ಆದರ್ಶವಾಗಿದ್ದಾದರೂ ಹೇಗೆ ಎಂಬುದು ಈಗ ಎದ್ದಿರುವ ಪ್ರಶ್ನೆ.

ಮತ್ತೊಂದು ಸಂದರ್ಭದಲ್ಲಿ ಕೆಂಟ್ ಕೈಪಿಡಿ ಬರೆದ ಕಾರಣವನ್ನು ಹೀಗೆ ಹೇಳಿದ್ದಾರೆ: “ಸಾಕಷ್ಟು ಮಂದಿ ಆದರ್ಶಗಳನ್ನು ಹೊತ್ತ ಯುವಜನರು ತಾನು ಅಂದುಕೊಂಡಿದ್ದೇ ಸರಿ, ಒಳ್ಳೆಯದು, ಸತ್ಯ ಎಂದು ಭಾವಿಸಿ ಹೊರಪ್ರಪಂಚಕ್ಕೆ ಕಾಲಿಟ್ಟ ಕೆಲವೇ ಹೊತ್ತಿನಲ್ಲಿ ನಿರೀಕ್ಷಿತ ಫಲಿತಾಂಶ ಸಿಗದೆ, ಯಾರಿಂದಲೂ ಬೆನ್ನು ತಟ್ಟಿಸಿಕೊಳ್ಳದೆ, ನೇತ್ಯಾತ್ಮಕ ಉತ್ತರದೊಂದಿಗೆ ಮರಳಿದ್ದನ್ನು ನೋಡಿದ್ದೇನೆ. ಅವರಿಗೆ ‘ನೀವು ನಿಜವಾಗಿಯೂ ಬದಲಾವಣೆ ಬಯಸುವುದಾದರೆ ಜನರನ್ನು ಪ್ರೀತಿಸಬೇಕು. ಆ ಪ್ರೀತಿಯೇ ನಿಮ್ಮನ್ನು ಕಾಪಾಡುತ್ತದೆ. ಅಲ್ಲದೆ, ನೀವು ಸದಾ ಪ್ರಸಿದ್ಧಿ ಅಥವಾ ವೈಭವದ ಬೆನ್ನು ಬೀಳಬೇಕಿಲ್ಲ.”

ಬಹುಶಃ ಈ ಮಾತು ದತ್ತಾ ಅವರ ಗಮನಕ್ಕೆ ಬಂದಂತಿಲ್ಲ. ಗಮನಿಸಿದ್ದರೆ ಕಾಗದ ಬರೆಯದೆ, ಕೆಂಟ್ ಹೇಳಿದಂತೆ ನಿಜವಾಗಿಯೂ ಜನರನ್ನು ಪ್ರೀತಿಸುತ್ತಲೇ ಇರುತ್ತಿದ್ದರು!

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More