ಸಾಲಮನ್ನಾದ ನಂತರವೂ ಮುಖ್ಯಮಂತ್ರಿ ಕುಮಾರಸ್ವಾಮಿ ಹತಾಶರಾಗುತ್ತಿರುವುದೇಕೆ?

ಕೃಷಿ ಸಾಲಮನ್ನಾ ಕುರಿತು ದೊರೆತಿರುವ ನೀರಸ ಪ್ರತಿಕ್ರಿಯೆ ಎಚ್‌ಡಿಕೆ ಅವರನ್ನು ಕಂಗೆಡಿಸಿರುವಂತಿದೆ. ಈ ಹಿಂದೆ ೫೦ ಸಾವಿರ ರು.ವರೆಗಿನ ಕೃಷಿ ಸಾಲ ಮನ್ನಾ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ದೊರೆತ ಸ್ಪಂದನೆಗೆ ಹೋಲಿಸಿದರೆ ಈಗಿನ ಸ್ಪಂದನೆ ಉತ್ತಮವಾಗಿಯೇನೂ ಇಲ್ಲ. ಹೀಗೇಕೆ?

ಸಾಲಮನ್ನಾದಂತಹ ಮಹತ್ವದ ಘೋಷಣೆಯ ನಂತರದ ದಿನಗಳಲ್ಲಿ ಸಾಧಾರಣವಾಗಿ ಅದಕ್ಕೆ ಮುಂದಾದ ಯಾವುದೇ ರಾಜಕೀಯ ನಾಯಕರು ಹೆಚ್ಚು ಆತ್ಮವಿಶ್ವಾಸದಿಂದಲೂ, ವಿಪಕ್ಷ ನಾಯಕರ ಎದುರಿನಲ್ಲಿ ಹೆಚ್ಚು ಬಲಿಷ್ಠನಾಗಿಯೂ ಕಾಣಿಸತೊಡಗುತ್ತಾರೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿಚಾರದಲ್ಲಿ ಇದೇಕೋ ತಿರುವುಮುರುವು ಆಗಿರುವಂತಿದೆ. ಸಾಲಮನ್ನಾದ ವಿಷಯದಲ್ಲಿ ತಾವಿರಿಸಿದ ಹೆಜ್ಜೆಗೆ ವ್ಯಾಪಕ ಜನಸ್ಪಂದನೆ ದೊರೆಯಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಮುಖ್ಯಮಂತ್ರಿಯವರಿಗೆ ಎಲ್ಲ ದಿಕ್ಕುಗಳಿಂದಲೂ ವ್ಯತಿರಿಕ್ತವೆನಿಸುವ ಸಂದೇಶಗಳು ರವಾನೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿರುವಂತಿದೆ.

ಇದಕ್ಕೆ ಉದಾಹರಣೆ ಎನ್ನುವಂತೆ ಜೆಡಿಎಸ್‌ನ ರೈತ ವಿಭಾಗ ಈಚೆಗೆ ರೈತರಿಗೆ ಮನವಿ ಮಾಡಿ ದಿನಪತ್ರಿಕೆಗಳಲ್ಲಿ ನೀಡಿರುವ ಒಂದು ಪುಟದ ಜಾಹಿರಾತನ್ನು ಗಮನಿಸಬಹುದು. ಈ ಜಾಹಿರಾತಿನಲ್ಲಿ, “ಸಾಲ ಮನ್ನಾ ಪ್ರಕಟಣೆಯ ನಂತರ ಹತ್ತು ಹಲವು ಸಂಶಯಗಳನ್ನು ಹುಟ್ಟುಹಾಕಲಾಗುತ್ತಿದೆ. ಸಾಮಾಜಿಕ ಜಾಲತಾಣ, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳನ್ನು ಕೆಲವರು ಈ ನಿಟ್ಟಿನಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲವೇ ವರ್ಗಕ್ಕೆ ಅನುಕೂಲ ಮಾಡಿಕೊಡುವ ದುರುದ್ದೇಶವಿದೆ ಎಂಬ ಕುಹಕದ ಮಾತೂ ಕೇಳಿ ಬರುತ್ತಿದೆ. ಇದರ ಹಿಂದೆ ರೈತರನ್ನು ದಾರಿ ತಪ್ಪಿಸುವ ಹುನ್ನಾರವಿದೆ. ಕುಮಾರಣ್ಣ ರೈತಬದ್ಧತೆ ಪ್ರಶ್ನಾತೀತ. ರೈತರ ಹಿತ ಕಾಯುವ ವಿಷಯದಲ್ಲಿ ಕುಮಾರಣ್ಣನದು ಜಾತಿ-ಜನಾಂಗ ಮೀರಿದ ವ್ಯಕ್ತಿತ್ವ. ಅವರದು ಅನ್ನದಾತನ ಜಾತಿ,” ಎಂದು ಹೇಳಲಾಗಿದೆ.

ಈ ಸಾಲುಗಳನ್ನು ಗಮನಿಸಿದರೆ, ಇದರ ಹಿಂದೆ ಸಾಲಮನ್ನಾದ ವಿಚಾರದಲ್ಲಿ ಕುಮಾರಸ್ವಾಮಿಯವರು ಕೈಗೊಂಡಿರುವ ನಿರ್ಧಾರವನ್ನು ಮಾಧ್ಯಮಗಳು ಸೂಕ್ತವಾಗಿ ಬಿಂಬಿಸುತ್ತಿಲ್ಲ. ಬದಲಿಗೆ ಅವರ ನಿರ್ಧಾರದ ಬಗ್ಗೆ ಸಂಶಯಗಳನ್ನು ಹುಟ್ಟಿಹಾಕುವಂತಹ ಕೆಲಸವನ್ನು ಮಾಡುತ್ತಿವೆ ಎನ್ನುವ ಅಭಿಪ್ರಾಯ ಕಾಣಿಸುತ್ತಿದೆ. ಇದು ಕೇವಲ ಪಕ್ಷದ ರೈತ ವಿಭಾಗದ ಅಭಿಪ್ರಾಯವೇ ಆಗಿದ್ದಲ್ಲಿ ಅದು ಮುಖಪುಟದ ಜಾಹಿರಾತಿಗೆ ಬರುವಂತಹ ವಿಷಯವಾಗುತ್ತಿರಲಿಲ್ಲವೇನೋ. ಆದರೆ ಅಂತಹದೊಂದು ಭಾವನೆ ಜನರಲ್ಲಿ ದಟ್ಟವಾಗುತ್ತಿದೆ ಎನ್ನುವ ಅನಿಸಿಕೆ ಪಕ್ಷದ ವರಿಷ್ಠರಿಗೂ ಇರುವ ಕಾರಣಕ್ಕೆ ಈ ಜಾಹಿರಾತಿನ ಮೂಲಕ ಉತ್ತರವೊಂದನ್ನು ಹೇಳುವ ಪ್ರಯತ್ನವನ್ನು ಪಕ್ಷದ ರೈತ ವಿಭಾಗ ಮಾಡುತ್ತಿರಬಹುದು. ಇದರರ್ಥ ಸಾಲಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಜನತೆಗೆ, ಅದರಲ್ಲಿಯೂ ಕೃಷಿಕರಿಗೆ ತಮ್ಮ ನಿಲುವನ್ನು ವಿವರಿಸುವುದು, ಸಮರ್ಥಿಸಿಕೊಳ್ಳುವುದು ಸಾಧ್ಯವಾಗಿಲ್ಲ ಎನ್ನುವ ಭಾವನೆ ಮೂಡಿರಬಹುದು.

ಮೇಲಿನ ಅಭಿಪ್ರಾಯಕ್ಕೆ ಇಂಬು ನೀಡುವಂತೆ ಜಾಹಿರಾತಿನಲ್ಲಿರುವ ಮತ್ತೊಂದು ಸಾಲು ಹೀಗಿದೆ: “ರೈತರ ಸಾಲ ಮನ್ನಾ ವಿಚಾರದಲ್ಲಿ ಕುಮಾರಣ್ಣನನ್ನು ನಂಬೋಣ; ಯಾವುದೇ ಅಪಪ್ರಚಾರ, ವದಂತಿಗಳಿಗೆ ಕಿವಿಗೊಡುವುದು ಬೇಡ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ವಿಧಾನಮಂಡಲದ ಉಭಯ ಸದನಗಳಲ್ಲಿ ನೀಡಬಹುದಾದ ಸಾಲಮನ್ನಾ, ಪ್ರಕ್ರಿಯೆ ಕುರಿತ ವಿವರ, ಫಲಾನುಭವಿಗಳ ಜಿಲ್ಲಾವಾರು ಅಂಕಿಅಂಶ ಮತ್ತಿತರ ಮಾಹಿತಿಯನ್ನು ನಿರೀಕ್ಷಿಸೋಣ. ಎಲ್ಲ ಪ್ರಶ್ನೆಗಳಿಗೆ ಉತ್ತರ ಒದಗಿಸುವ ಸಮರ್ಥ ನಾಯಕತ್ವ ಕುಮಾರಣ್ಣನದು.” ಇದು ಪರೋಕ್ಷವಾಗಿ ದನಿಸುವುದು, ಸಾಲಮನ್ನಾ ವಿಚಾರವಾಗಿ ಕೃಷಿಕರಲ್ಲಿ, ಜನತೆಯಲ್ಲಿ ಎದ್ದಿರುವ ಅನುಮಾನಗಳನ್ನು ಕುಮಾರಸ್ವಾಮಿಯವರು ಇನ್ನು ಮುಂದಷ್ಟೇ ಪರಿಹರಿಸಬಹುದು ಎಂದೇ ಅಲ್ಲವೇ?

ವಿಪರ್ಯಾಸವೆಂದರೆ, ಈ ಹಿಂದೆ ೫೦ ಸಾವಿರ ರು.ವರೆಗಿನ ಸಹಕಾರಿ ವಲಯದಲ್ಲಿದ್ದ ಕೃಷಿಸಾಲವನ್ನು ಮನ್ನಾ ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೊರೆತ ಪ್ರತಿಕ್ರಿಯೆಗೆ ಹೋಲಿಸಿದರೆ ಸಹಕಾರಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ೨ಲಕ್ಷದವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಿರುವ ಕುಮಾರಸ್ವಾಮಿಯವರು ಹೇಳಿಕೊಳ್ಳುವಂತಹ ಉತ್ತಮ ಪ್ರತಿಕ್ರಿಯೆಯನ್ನೇನೂ ಕೃಷಿಕರಿಂದ, ಗ್ರಾಮೀಣ ಭಾಗದ ಜನತೆಯಿಂದ ಪಡೆದಂತೆ ಭಾಸವಾಗುತ್ತಿಲ್ಲ. ಹಾಗಾದರೆ, ಇದಕ್ಕೆ ಕಾರಣವೇನಿರಬಹುದು?

ಜೆಡಿಎಸ್‌ನ ಜಾಹಿರಾತಿನಲ್ಲಿ ನೀಡಿರುವ ವಿವರಣೆಯನ್ನು ಗಮನಿಸಿದರೆ, ಇದಕ್ಕೆಲ್ಲ ಸಾಲಮನ್ನಾ ಬಗ್ಗೆ ಮಾಧ್ಯಮಗಳು ಬಿತ್ತರಿಸಿರುವ, ಪ್ರಕಟಿಸಿರುವ ‘ದುರುದ್ದೇಶಪೂರ್ವಕ’ ವರದಿಗಳು ಕಾರಣ ಎನ್ನುವಂತಿದೆ. ಒಂದು ವೇಳೆ, ಮಾಧ್ಯಮಗಳಲ್ಲಿ ದುರುದ್ದೇಶಪೂರಿತವಾದ ವರದಿಗಳೇ ಬಂದಿವೆ ಎಂದುಕೊಂಡರೂ, ಜನತೆಯೇನು ಸಂಕಷ್ಟದಲ್ಲಿರುವ ರೈತರ ಪರವಾದ ನಿರ್ಧಾರದ ಬಗ್ಗೆ ಮೆಚ್ಚುಗೆ ಸೂಚಿಸದಷ್ಟು ಹೃದಯಹೀನರೇ? ಅದು ಹೋಗಲಿ, ಕೃಷಿಕರಿಗೂ ಕುಮಾರಸ್ವಾಮಿಯವರ ನಡೆಯ ಬಗ್ಗೆ ತಕರಾರಿದೆ ಎಂದರೆ ಅದಕ್ಕೂ ಮಾಧ್ಯಮಗಳೇ ಹೊಣೆಯೇ? ಮಾಧ್ಯಮಗಳ ಕುರಿತಾಗಿ ಜಾಹಿರಾತಿನಲ್ಲಿರುವ ಅಭಿಪ್ರಾಯವೇ, ಜೆಡಿಎಸ್‌ ವರಿಷ್ಠರ ಅಭಿಪ್ರಾಯವೂ ಆಗಿದೆ ಎಂದಾದಲ್ಲಿ, ಒಂದೋ ಜೆಡಿಎಸ್‌ನ ಹಿರಿಯ ನಾಯಕರಿಗೆ ಮಾಧ್ಯಮಗಳ ಬಗ್ಗೆ ಅಸಹನೆ ಇರಬೇಕು, ಇಲ್ಲವೇ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಮಾಧ್ಯಮಗಳು ನೆಪವಾಗಿ ಒದಗುತ್ತಿರಬೇಕು.

ಅಷ್ಟಕ್ಕೂ ಈ ಎಲ್ಲ ಸಮಸ್ಯೆಯ ಮೂಲವಿರುವುದು, ಕುಮಾರಸ್ವಾಮಿಯವರು ಚುನಾವಣಾ ಸಮಯದಲ್ಲಿ ರೈತರಿಗೆ ತೋರಿಸಿದ ‘ಸಂಪೂರ್ಣ ಕೃಷಿ ಸಾಲ ಮನ್ನಾ’ ಎನ್ನುವ ಹಿಡಿಯಲಾಗದ, ಕಟ್ಟಲಾಗದ ಬಿಸಿಲುಕುದುರೆಯಲ್ಲಿ. ಕುಮಾರಸ್ವಾಮಿಯವರಿಗೆ ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಎಲ್ಲ ವರ್ಗ, ಸಮುದಾಯಗಳನ್ನು ಭಾವುಕ ವಿಚಾರವೊಂದರ ಮೂಲಕ ಹಿಡಿದಿಡುವ ಅಗತ್ಯವಿತ್ತು. ‘ಸಂಪೂರ್ಣ ಕೃಷಿ ಸಾಲ ಮನ್ನಾ’ ಎನ್ನುವುದು ಕೃಷಿಕರಿಗೆ ಎಷ್ಟು ಅಗತ್ಯವಿತ್ತೋ, ಅದಕ್ಕಿಂತ ದುಪ್ಪಟ್ಟು ಜೆಡಿಎಸ್‌ಗೆ ಅಂತಹದ್ದೊಂದು ‘ರಾಜಕೀಯ ಕಥನ’ದ ಅಗತ್ಯವಿತ್ತು. ಪಕ್ಷವನ್ನು ಮರಳಿ ಅಧಿಕಾರದ ಹೊಸ್ತಿಲಿಗೆ ತರಬೇಕೆಂದರೆ ಅದು ದೊಡ್ಡದೊಂದು ಭರವಸೆಯನ್ನು ನೀಡುವುದು ಅನಿವಾರ್ಯವಾಗಿತ್ತು. ಒಂದು ವೇಳೆ, ಆಡಳಿತ ಪಕ್ಷವು ಪ್ರಬಲವಾದ ಆಡಳಿತ ವಿರೋಧಿ ಅಲೆ ಎದುರಿಸಿದ್ದರೆ ಕುಮಾರಸ್ವಾಮಿಯವರಿಗೆ ಇಂತಹ ಹೊರಲಾಗದ‌ ಆಶ್ವಾಸನೆಯನ್ನು ನೀಡುವ ಅಗತ್ಯ ಇರುತ್ತಿರಲಿಲ್ಲವೇನೋ. ಆದರೆ, ಆಡಳಿತ ವಿರೋಧಿ ಅಲೆ ಇಲ್ಲದೆ ಇದ್ದದ್ದು ಹಾಗೂ ರಾಜಕಾರಣದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದ್ದಿದ್ದು ಜೆಡಿಎಸ್‌ಗೆ ಒಂದು ‘ದೊಡ್ಡ ರಾಜಕೀಯ ಆಲೋಚನೆ’ ಅಥವಾ ‘ಬಿಗ್‌ ಪೊಲಿಟಿಕಲ್‌ ಐಡಿಯಾ’ವನ್ನು ಬೆನ್ನು ಹತ್ತುವಂತೆ ಮಾಡಿತು. ಈ ‘ಬಿಗ್‌ ಪೊಲಿಟಿಕಲ್‌ ಐಡಿಯಾ’ ಎಷ್ಟು ಸಶಕ್ತವಾಗಿರಬೇಕು ಎಂದು ಅದು ಭಾವಿಸಿತು ಎಂದರೆ, ಅದು ಕುಮಾರಸ್ವಾಮಿಯವರು ಈ ಹಿಂದೆ ಎದುರಿಸಿದ್ದ ವಚನಭ್ರಷ್ಟತೆಯ ಆರೋಪವನ್ನು ಹಾಗೂ ಮೋದಿ, ಸಿದ್ದರಾಮಯ್ಯನವರಂತಹ ಜನಪ್ರಿಯ ನಾಯಕರುಗಳ ವರ್ಚಸ್ಸನ್ನೂ ಮೀರಿ ಜನರನ್ನು ತಟ್ಟುವಂತಿರಬೇಕು ಎಂದು. ಅದೇ ವೇಳೆ, ತಮ್ಮ ಪಕ್ಷದ ಬಗ್ಗೆ ಕೃಷಿಕ ಸಮುದಾಯಕ್ಕೆ ಇರುವ ವಿಶೇಷವಾದ ಅಭಿಮಾನವನ್ನು ಉಳಿಸಿಕೊಳ್ಳುವ ಹಾಗೂ ಅದರ ಮೇಲೆ ರಾಜಕೀಯ ಹಿಡಿತ ಸಡಿಲವಾಗದಂತೆ ನೋಡಿಕೊಳ್ಳುವ ಅಗತ್ಯವೂ ಪಕ್ಷಕ್ಕಿತ್ತು. ‘ಸಂಪೂರ್ಣ ಕೃಷಿ ಸಾಲ ಮನ್ನಾ’ ಎನ್ನುವ ಆಲೋಚನೆಯ ಹಿಂದೆ ಇದೆಲ್ಲವೂ ಕೆಲಸ ಮಾಡಿತ್ತು.

ಆದರೆ, ಇಂತಹ ದೊಡ್ಡ ಆಶ್ವಾಸನೆಯನ್ನು ನೀಡಿದ ಹೊರತಾಗಿಯೂ ಚುನಾವಣೆಯಲ್ಲಿ ಆಗಿದ್ದೇ ಬೇರೆ. ಕುಮಾರಸ್ವಾಮಿಯವರು ನೀಡಿದ ಈ ಭರವಸೆ ನಿರೀಕ್ಷಿಸಿದಷ್ಟು ಸ್ಥಾನಗಳನ್ನು ತರದೆ ಹೋದರೂ, ಹಳೆ ಮೈಸೂರು ಭಾಗದಲ್ಲಿ ಪಕ್ಷ ತನ್ನ ನೆಲೆಯನ್ನು ಕಳೆದುಕೊಳ್ಳುವುದನ್ನು ತಪ್ಪಿಸಿತು. ಒಂದು ವೇಳೆ ಸಾಲಮನ್ನಾ ಭರವಸೆಯನ್ನೇ ನೀಡಿರಲಿಲ್ಲ ಎಂದರೆ ಪಕ್ಷ ಇಷ್ಟಾದರೂ ಸ್ಥಾನಗಳನ್ನು ಗೆಲ್ಲುವುದು ಸಾಧ್ಯವಿತ್ತೇ ಎನ್ನುವ ಪ್ರಶ್ನೆಯನ್ನು ಇಂದು ಕೇಳುತ್ತಿರುವವರು ಮಾಧ್ಯಮದವರಲ್ಲ, ರೈತರು ಎನ್ನುವುದನ್ನು ಕುಮಾರಸ್ವಾಮಿಯವರು ಮರೆಯಬಾರದು. ಪೂರ್ಣ ಕೃಷಿ ಸಾಲಮನ್ನಾಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ನಡೆಯನ್ನು ಕುಮಾರಸ್ವಾಮಿಯವರು ರಾಜಕಾರಣದ ಭಾಗವಾಗಿ ನೋಡುವುದು ತಪ್ಪಲ್ಲ. ಆದರೆ, ಅವರು ಅಲ್ಲಗಳೆಯಲಾಗದ ಅಂಶವೆಂದರೆ, ಈ ಪ್ರತಿಭಟನಾನಿರತರ ಹೊರತಾಗಿಯೂ ತಮ್ಮ ಭರವಸೆಯನ್ನೇ ನಂಬಿಕೊಂಡು ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕೃಷಿಕರು ಸಂಪೂರ್ಣ ಕೃಷಿ ಸಾಲಮನ್ನಾದ ನಿರೀಕ್ಷೆಯಲ್ಲಿದ್ದರು ಎನ್ನುವುದು.

ಹೀಗಾಗಿಯೇ, ಸಾಲಮನ್ನಾದ ಘೋಷಣೆಯ ನಂತರವೂ ರೈತರ ಆತ್ಮಹತ್ಯೆಗಳು ವರದಿಯಾಗುತ್ತಿರುವುದು ಕುಮಾರಸ್ವಾಮಿಯವರನ್ನು ಅಧೀರರನ್ನಾಗಿಸಿರುವಂತಿದೆ. ತಮ್ಮ ಘೋಷಣೆ ರೈತರಲ್ಲಿ ನಿರೀಕ್ಷಿತ ಭರವಸೆಯನ್ನು ಹುಟ್ಟಿಸಿಲ್ಲ. ಅವರನ್ನು ಋಣಭಾರದಿಂದ ಹೊರತರಲು ತನಗೆ ಸಾಧ್ಯವಾಗಿಲ್ಲ ಎನ್ನುವ ಅಂಶ ಇದಕ್ಕೆ ಕಾರಣವಿರಬಹುದು. ಇದೇ ಕಾರಣಕ್ಕೆ ಜಾಹಿರಾತಿನಲ್ಲಿ, “ರೈತರ ಸಾಲ ಮನ್ನಾ ಪ್ರಕಟಣೆಯ ನಂತರವೂ ರೈತರ ಆತ್ಮಹತ್ಯೆಯ ಪ್ರಕರಣಗಳು ವರದಿಯಾಗುತ್ತಿರುವುದು ಮುಖ್ಯಮಂತ್ರಿಗಳಿಗೆ ಆಘಾತವುಂಟು ಮಾಡಿದೆ. ಮಾಜಿ ಪ್ರಧಾನಮಂತ್ರಿಗಳು ಹಾಗೂ ರೈತರ ಬಗ್ಗೆ ಸದಾ ಚಿಂತಿಸುವ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌ ಡಿ ದೇವೇಗೌಡರ ಮಾರ್ಗದರ್ಶನದಲ್ಲಿ ರೈತಪರ ಯೋಜನೆಗಳನ್ನು ರೂಪಿಸುತ್ತಿರುವ ನಮ್ಮ ಕುಮಾರಣ್ಣನಿಗೆ ಆತ್ಮವಿಶ್ವಾಸ, ಆತ್ಮಧೈರ್ಯ ತುಂಬಬೇಕಾದುದು ನಮ್ಮೆಲ್ಲರ ಕರ್ತವ್ಯ,” ಎನ್ನಲಾಗಿದೆ. ಸಾಲಮನ್ನಾದ ಮೂಲಕ ರೈತರಿಗೆ ಆತ್ಮಸ್ಥೈರ್ಯ ತುಂಬಲು ಹೊರಟ ಕುಮಾರಸ್ವಾಮಿಯವರಿಗೇ ಈಗ ರೈತರು ಆತ್ಮಸ್ಥೈರ್ಯ ತುಂಬೇಕು ಎಂದು ಜಾಹಿರಾತಿನಲ್ಲಿ ಹೇಳುತ್ತಿರುವುದು ಧ್ವನಿಸುವುದು ಏನನ್ನು? ಕುಮಾರಸ್ವಾಮಿಯವರು ಸಂಪೂರ್ಣ ಕೃಷಿ ಸಾಲಮನ್ನಾ ಮೂಲಕ ರೈತರಿಗೆ ಸಾಂತ್ವನ ನೀಡಲು ಹೊರಟು, ಅದು ಸಾಧ್ಯವಾಗದೆ ಹಿನ್ನೆಡೆ ಅನುಭವಿಸಿದ್ದಾರೆ. ಅವರ ಈ ವಿಫಲ ಪ್ರಯತ್ನಕ್ಕೆ ಅನುಕಂಪದ ಅಗತ್ಯವಿದೆ ಎಂದು ಜಾಹಿರಾತು ಹೇಳಲು ಬಯಸಿದೆಯೇ?

ಇದನ್ನೂ ಓದಿ : ಸಂಕಲನ | ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ರಾಜ್ಯ ಬಜೆಟ್‌ನ ವಿಶ್ಲೇಷಣೆಗಳು

ಗಮನಿಸಬೇಕಾದ ಅಂಶವೆಂದರೆ, ಒಂದೊಮ್ಮೆ ರೈತರಿಗೆ ಯಾವುದೇ ನಿರೀಕ್ಷೆಗಳನ್ನು ಹುಟ್ಟಿಸದೆ ಕುಮಾರಸ್ವಾಮಿಯವರು ೨ ಲಕ್ಷ ರು.ವರೆಗಿನ ಸಾಲಮನ್ನಾ ಮಾಡಿದ್ದರೆ, ಆಗ ಕೃಷಿಕರು ಅವರನ್ನು ಹೆಚ್ಚು ಅಭಿಮಾನದಿಂದ ನೋಡುತ್ತಿದ್ದರೇನೋ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ರೈತರು ನಿರೀಕ್ಷಿಸುತ್ತಿರುವುದು ಸಂಪೂರ್ಣ ಕೃಷಿ ಸಾಲಮನ್ನಾವನ್ನು. ಕುಮಾರಸ್ವಾಮಿಯವರು ನೀಡಿದ ಆಶ್ವಾಸನೆ, ಕೊಟ್ಟ ಮಾತು ಇದೇ ಆಗಿತ್ತು. ಒಂದೊಮ್ಮೆ ಕುಮಾರಸ್ವಾಮಿಯವರು ತಮಗೆ ಬಹುಮತ ದೊರೆತಿಲ್ಲದ ಕಾರಣ ಇಂತಹ ದೊಡ್ಡದೊಂದು ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ, ಈಗ ಸದ್ಯಕ್ಕೆ ತನ್ನಿಂದ ಸಾಲಮನ್ನಾ ಮಾಡಲು ಶಕ್ಯವಿರುವುದು ಇಷ್ಟೇ ಎಂದು ಪ್ರಾಮಾಣಿಕವಾಗಿ ತಮ್ಮ ಅಸಹಾಯಕತೆಯನ್ನು ಕೃಷಿಕರಿಗೆ ತಿಳಿಸುವ ಪ್ರಯತ್ನ ಮಾಡಿದ್ದರೆ ಕೃಷಿಕರು ಅವರೆಡೆಗೆ ವಿಶ್ವಾಸವನ್ನು ತೋರುತ್ತಿದ್ದರೇನೋ. ಆದರೆ, ಕುಮಾರಸ್ವಾಮಿಯವರು ಸಾಲಮನ್ನಾನದ ಕ್ರೆಡಿಟ್‌ ತಮಗೇ ಸಲ್ಲಬೇಕು ಎಂದು ಇಟ್ಟ ಹೆಜ್ಜೆಗಳು ಇಂದು ಅವರನ್ನು ಸಮಸ್ಯೆಯ ಸುಳಿಗೆ ಸಿಲುಕಿಸಿವೆ.

ಇತ್ತ ಕೃಷಿ ಸಾಲಮನ್ನಾಗಾಗಿ ಪೆಟ್ರೋಲ್‌, ಡೀಸೆಲ್‌ಗಳ ಮೇಲೆ ಸೆಸ್‌ ಹಾಕಿರುವುದು, ವಿದ್ಯುತ್‌ ದರ ಏರಿಸಿರುವುದು ಮಧ್ಯಮ, ಕೆಳ ಮಧ್ಯಮ ವರ್ಗಗಳ ಪಾಲಿಗೆ ಖುಷಿಯ ವಿಚಾರವೇನೂ ಅಲ್ಲ. ಕುಮಾರಸ್ವಾಮಿಯವರು ಕೃಷಿ ಸಾಲಮನ್ನಾಗೆ ಹಣ ಹೊಂದಿಸಲು ಬಹುಶಃ ಬೇರೆಯ ಮಾರ್ಗಗಳಾವುದನ್ನಾದರೂ ಹುಡುಕಿಕೊಳ್ಳಬಹುದಿತ್ತೇನೋ. ತಮ್ಮ ಈ ಕ್ರಮದಿಂದಾಗಿ ಅವರು ಕೆಳ, ಮಧ್ಯಮ ವರ್ಗದ ಜನರ ಆಕ್ರೋಶಕ್ಕೂ ತುತ್ತಾಗಿದ್ದಾರೆ. ಈ ಎಲ್ಲ ಕಾರಣಕ್ಕಾಗಿಯೇ ಕೃಷಿ ಸಾಲಮನ್ನಾ ಎನ್ನುವುದು ಕುಮಾರಸ್ವಾಮಿಯವರ ಪಾಲಿಗೆ ಬಿಸಿ ತುಪ್ಪವಾಗಿರುವುದಂತೂ ಸ್ಪಷ್ಟ. ತಮ್ಮ ಈ ನಡೆ ಪಕ್ಷದ ಪಾಲಿಗೆ ದೊಡ್ಡ ರಾಜಕೀಯ ಶಕ್ತಿಯಾಗಬಲ್ಲದು ಎಂದುಕೊಂಡಿದ್ದ ಅವರಿಗೆ, ಈ ಎಲ್ಲ ಬೆಳವಣಿಗೆಗಳಿಂದಾಗಿ ನಿಧಾನವಾಗಿ ಹತಾಶೆ ಆವರಿಸುತ್ತಿರುವಂತೆ ಭಾಸವಾಗುತ್ತಿದೆ. ಇತ್ತ, ರೈತರ ಹೃದಯವನ್ನೂ ಗೆಲ್ಲಲಾಗದ, ಅತ್ತ ಮಧ್ಯಮ ವರ್ಗದವರ ವಿಶ್ವಾಸವನ್ನೂ ಉಳಿಸಿಕೊಳ್ಳಲಾಗದ ಇಬ್ಬಂದಿತನ ಅವರನ್ನು ಆವರಿಸುತ್ತಿರುವಂತೆ ಕಾಣುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More