ಸಿದ್ದರಾಮಯ್ಯ ಬಜೆಟ್‌ ಗತಿಯೇನು? ಕುಮಾರಸ್ವಾಮಿ ಬಜೆಟ್ ಸಾಂವಿಧಾನಿಕವೇ?

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಕುಮಾರಸ್ವಾಮಿ ಅವರ ನಡುವೆ ಬಜೆಟ್‌ಗೆ ಸಂಬಂಧಿಸಿದಂತೆ ಸಾರ್ವಜನಿಕ ಚರ್ಚೆಯೊಂದು ನಡೆದಿತ್ತು. ಇದು ವಿವಾದವಾಗಿ ತಣ್ಣಗಾಗಿರುವ ನಡೆವೆಯೇ ಕುಮಾರಸ್ವಾಮಿ ಅವರ ಹೊಸ ಬಜೆಟ್‌ ಬಗ್ಗೆ ಸಾಂವಿಧಾನಿಕ ಮಾನ್ಯತೆ ಪ್ರಶ್ನೆ ಎದ್ದಿದೆ. ಏನದು?

“ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ ಚಾಲ್ತಿಯಲ್ಲಿದೆ. ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಹೊಸ ಬಜೆಟ್‌ ಮಂಡಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಿರುವಾಗ ಸಿದ್ದರಾಮಯ್ಯ ಅವರ ಬಜೆಟ್‌ ರದ್ದಾಗಿದೆ ಎಂದು ಸದಸ್ಯರು ಅರ್ಥೈಸಿಕೊಳ್ಳಬೇಕೆ? ಇದಕ್ಕೆ ರಾಜ್ಯಪಾಲರು ಹೇಗೆ ಒಪ್ಪಿಗೆ ನೀಡಿದರು,” ಎಂದು ಬಿಜೆಪಿಯ ಚಿಕ್ಕನಾಯಕನಹಳ್ಳಿ ಶಾಸಕ ಜೆ ಸಿ ಮಾಧುಸ್ವಾಮಿ ಅವರು ಮಂಗಳವಾರ ಸದನದಲ್ಲಿ ಮೌಲ್ಯಯುತ ಪ್ರಶ್ನೆಗಳನ್ನು ಎತ್ತುವ ಮೂಲಕ ಗಂಭೀರ ಚರ್ಚೆಗೆ ನಾಂದಿ ಹಾಡಿದ್ದಾರೆ.

“ಪ್ರಸಕ್ತ ವರ್ಷ ಬಜೆಟ್‌ ಮೇಲೆ ಚರ್ಚೆ ನಡೆಸದೇ ಅಂಗೀಕಾರ ಪಡೆಯುವ ಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಿದೆ. ಇಂಥ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ನಾನು ಎಲ್ಲೂ ಕೇಳಿಲ್ಲ. ಇದೇ ಮೊದಲ ಬಾರಿಗೆ ಹೀಗಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ ಚಾಲ್ತಿಯಲ್ಲಿದೆ. ಸರ್ಕಾರ ಬದಲಾಗಿಲ್ಲ. ಒಂದೊಮ್ಮೆ ಸರ್ಕಾರ ಬದಲಾದರೂ ನಿಯಮದ ಪ್ರಕಾರ ಪೂರಕ ಅಥವಾ ಪರಿಷ್ಕೃತ ಬಜೆಟ್ ಮಂಡಿಸಬಹುದೇ ವಿನಾ ಹೊಸ ಬಜೆಟ್‌ ಮಂಡಿಸುವಂತಿಲ್ಲ. ಏಕೆಂದರೆ ಹಲವು ಕಾರ್ಯಕ್ರಮಗಳು ಪ್ರಗತಿಯಲ್ಲಿರುತ್ತವೆ. ಇದಕ್ಕೆ ಧಕ್ಕೆಯಾಗಬಾರದು ಎಂದು ಹೀಗೆ ಮಾಡಲಾಗುತ್ತದೆ,” ಎಂದು ಅವರು ಸದನಕ್ಕೆ ವಿವರಿಸಿದರು.

“ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆಯೇ ವಿನಾ ಅವರು ಅಂದಾಜು ಮತ್ತು ಪೂರೈಕೆಯ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹಾಗಾದರೆ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ಬಜೆಟ್‌ ಅನ್ನು ರದ್ದುಪಡಿಸಿದ್ದಾರೆಯೇ ಅಥವಾ ಅದರ ಪರಿಸ್ಥಿತಿಯೇನು? ಇದಕ್ಕೆ ರಾಜ್ಯಪಾಲರು ಹೇಗೆ ಒಪ್ಪಿಗೆ ನೀಡಿದರು? ಇದಕ್ಕೆ ನಿಯಮದಲ್ಲಿ ಅವಕಾಶವಿದೆಯೇ? ಎಂಬುದನ್ನು ಶೈಕ್ಷಣಿಕ ಆಸಕ್ತಿಯಿಂದ ತಿಳಿದುಕೊಳ್ಳಲು ಕೇಳುತ್ತಿದ್ದೇನೆ,” ಎಂದು ಮಾಧುಸ್ವಾಮಿ ಹೇಳಿದ್ದಾರೆ.

“ಹೊಸ ಸರ್ಕಾರ ಬಂದಾಗ ಅವರು ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಸೇರಿಸಬೇಕಾದರೆ ಪೂರಕ ಬಜೆಟ್‌ ಮಂಡಿಸಬಹುದು,” ಎಂದು ಮಾಧುಸ್ವಾಮಿ ಅವರು ಹೇಳುತ್ತಿದ್ದಂತೆ ಸಚಿವ ಯು ಟಿ ಖಾದರ್‌ ಅವರು, “ಮುಖ್ಯಮಂತ್ರಿಗಳು ಕಾಂಗ್ರೆಸ್‌ನ ಎಲ್ಲಾ ಕಾರ್ಯಕ್ರಮ ಮುಂದುವರಿಸುತ್ತೇವೆ,” ಎಂದು ಹೇಳಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ಅವರು, "ಬಜೆಟ್‌ ಹೊತ್ತಿಗೆಯನ್ನು ಸರಿಯಾಗಿ ಓದಿ. ಕುಮಾರಸ್ವಾಮಿ ಅವರು ಕಾರ್ಯಕ್ರಮ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆಯೇ ವಿನಾ ಅಂದಾಜು ಮತ್ತು ಪೂರೈಕೆ ಬಗ್ಗೆ ಪ್ರಸ್ತಾಪಿಸಿಲ್ಲ. ಇದನ್ನು ಬಿಜೆಪಿಯು ಗಂಭೀರವಾಗಿ ಪರಿಣಿಸಿದೆ. ಹೊಸ ಬಜೆಟ್‌ಗೆ ಉದಾಹರಣೆ ಅನ್ನಭಾಗ್ಯ. ಇದರಲ್ಲಿ ಅಕ್ಕಿ ನೀಡುವಿಕೆಯಲ್ಲಿ ಇಳಿಕೆ ಮಾಡಲಾಗಿದೆ. ಹೀಗಾದರೆ ಹಿಂದಿನ ಬಜೆಟ್‌ ಸ್ಥಿತಿ ಏನು? ಇಂಥ ಸಂದರ್ಭದಲ್ಲಿ ಹೊಸ ಬಜೆಟ್‌ಗೆ ಸಾಂವಿಧಾನಿಕ ಮಾನ್ಯತೆ ಇದೆಯೇ? ಇದಕ್ಕೆ ರಾಜ್ಯಪಾಲರು ಹೇಗೆ ಒಪ್ಪಿಗೆ ನೀಡಿದರು? ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸಂವಿಧಾನ ರಚನಾಕಾರರು ಊಹಿಸಿರಲು ಸಾಧ್ಯವಿಲ್ಲ. ಇದಕ್ಕಾಗಿಯೇ ಚರ್ಚೆಗೆ ಮುಂದಡಿ ಇಡಲಾಗಿದೆ,” ಎಂದರು.

“ಸದ್ಯ ಕಾನೂನು ಮತ್ತು ನಿಯಮದಲ್ಲಿ ಇದರ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಇಂಥ ಸಂದರ್ಭದಲ್ಲಿ ಸಭಾಧ್ಯಕ್ಷರು ಕೈಗೊಳ್ಳುವ ನಿರ್ಣಯವೇ ಹೊಸ ಸಂಪ್ರದಾಯವಾಗಲಿದೆ. ಇಂಥ ಸಂದಿಗ್ಧ ಪರಿಸ್ಥಿಯಲ್ಲಿ ಎಲ್ಲಿಯೂ ಬಜೆಟ್‌ ಮಂಡನೆಯಾಗಿಲ್ಲ,” ಎಂದು ಅವರು ವಿವರಿಸಿದರು.

“ರಾಜ್ಯಪಾಲರ ಭಾಷಣದಲ್ಲೂ ಸರ್ಕಾರ ಮುಂದುವರಿಯಲಿದೆ ಎಂದು ಹೇಳಲಾಗಿದೆ. ನಮ್ಮ ಪಕ್ಷವೂ ರಾಜ್ಯಪಾಲರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿದೆ. ಬಜೆಟ್‌ ಎಂಬುದು ಅಂದಾಜಿನ ಪರಿಷ್ಕರಣೆಯಾಗಬೇಕು. ಅಂದಾಜಿನ ಮೌಲ್ಯ ತಿಳಿಯಬೇಕಾದರೆ ಯಾರು, ಏತಕ್ಕಾಗಿ, ಎಷ್ಟು ಹಣ ಖರ್ಚು ಮಾಡಿದ್ದಾರೆ ಮತ್ತು ಪಡೆದಿದ್ದಾರೆ ಎಂಬುದು ಚರ್ಚೆಯಾಗಬೇಕು. ಅದಕ್ಕೆ ಹಣ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ಸದನವು ನಿರ್ಣಯಿಸುತ್ತದೆ. ಆದರೆ, ಈಗ ಅದಾಗುತ್ತಿಲ್ಲ. ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸಿ ಜುಲೈ ೩೧ರ ವರಗೆ ಲೇಖಾನುದಾನ ಪಡೆದಿದ್ದಾರೆ. ಸದ್ಯ, ಕುಮಾರಸ್ವಾಮಿ ಅವರು ಲೇಖಾನುದಾನ ಕೋರುತ್ತಿದ್ದಾರೆ. ಒಂದು ವರ್ಷದ ಬಜೆಟ್‌ ಖರ್ಚು-ವೆಚ್ಚದ ಕುರಿತು ಚರ್ಚೆಯೇ ಆಗುತ್ತಿಲ್ಲ. ಇದನ್ನು ಖಂಡಿತವಾಗಿಯೂ ರಾಜಕೀಯಕ್ಕಾಗಿ ಮಾತನಾಡುತ್ತಿಲ್ಲ,” ಎಂದು ಹೇಳಿದರು.

“ತುರ್ತು ಪರಿಸ್ಥಿತಿ ಇದ್ದಾಗ ಮಾತ್ರ ಲೇಖಾನುದಾನ ಕೋರಲಾಗುತ್ತದೆ. ಈಗ ಏತಕ್ಕಾಗಿ ಈ ರೀತಿ ಮಾಡಲಾಗುತ್ತಿದೆ. ಕಳೆದ ವರ್ಷದ ಖರ್ಚು-ವೆಚ್ಚದ ಚರ್ಚೆಯಾಗದೇ ಹೀಗೇಕೆ ಮಾಡಲಾಗುತ್ತಿದೆ. ಇಲಾಖಾವಾರು ಚರ್ಚೆಗೆ ಯಾಕೆ ಅವಕಾಶ ಮಾಡಿಕೊಡುತ್ತಿಲ್ಲ. ಸದ್ಯ ತಲೆದೋರಿರುವ ತುರ್ತಿನ ಸ್ಥಿತಿ ಯಾವುದು? ಎಂಬುದನ್ನು ಸದನಕ್ಕೆ ವಿವರಿಸದೇ ಇದ್ದರೆ ನಮ್ಮನ್ನು ಜನರು ಅಲ್ಟ್ರಾ ವೈರಸ್‌ ಎಂದು ಬ್ರಾಂಡ್‌ ಮಾಡುತ್ತಾರೆ,” ಎಂದು ಆತಂಕ ವ್ಯಕ್ತಪಡಿಸಿದರು.

“ಮುಂದಿನ ದಿನಗಳಲ್ಲಿ ಸದನದ ಬಗ್ಗೆ ಗೌರವ ಉಳಿಯುದಿಲ್ಲ. ಸದ್ಯ ಸದನದಲ್ಲಿ ನಡೆಯುತ್ತಿರುವ ಬಜೆಟ್‌ ಚರ್ಚೆಯು ಕಾನೂನುಬಾಹಿರ. ಇದೆಲ್ಲವನ್ನೂ ಮರೆತು ರಾಜ್ಯಪಾಲರು ಹೇಗೆ ಸದನ ನಡೆಸಲು ಅನುಮತಿ ನೀಡಿದರು ಎಂಬುದೇ ಅರ್ಥವಾಗುತ್ತಿಲ್ಲ. ಸಿದ್ದರಾಮಯ್ಯ ಅವರ ಬಜೆಟ್‌ ಚಾಲ್ತಿಯಲ್ಲಿದ್ದು, ಅದಕ್ಕೆ ಲೇಖಾನುದಾನ ದೊರೆತಿದೆ. ಇದರರ್ಥ ಜುಲೈ ೩೧ರೊಳಗಾಗಿ ಅದರ ಮೇಲೆ ಚರ್ಚೆಯಾಗಬೇಕಿದೆ,” ಎಂದು ಹೇಳಿದರು.

ಇದನ್ನೂ ಓದಿ : ಲ್ಯಾಪ್‌ಟಾಪ್‌ ಖರೀದಿ ಪ್ರಕರಣಕ್ಕೆ ಕ್ಲೀನ್‌ ಚಿಟ್‌ ನೀಡಿದ ವಿಶೇಷ ಸದನ ತನಿಖಾ ಸಮಿತಿ!

ಮಾಧುಸ್ವಾಮಿ ಅವರು ಎತ್ತಿದ ಪ್ರಶ್ನೆಗಳನ್ನು ಸಮರ್ಥಿಸಿ ಮಾತನಾಡಿದ ಬಿಜೆಪಿಯ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಶಾಸಕ ಜಗದೀಶ್‌ ಶೆಟ್ಟರ್‌ ಅವರು, "ಮಾಧುಸ್ವಾಮಿ ಅವರು ಪ್ರಮುಖವಾದ ಪ್ರಶ್ನೆ ಎತ್ತಿದ್ದಾರೆ. ಇದರ ಬಗ್ಗೆ ಗಂಭೀರ ಚರ್ಚೆಯಾಗಬೇಕು,” ಎಂದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಲು ಮುಂದಾದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಕುರಿತು, "ವಿತಂಡವಾದ ಮಾಡಬೇಡಿ. ಅಂದಿನ ಸ್ಥಿತಿಯೇ ಬೇರೆ, ಇಂದಿನ ಸ್ಥಿತಿಯೇ ಬೇರೆ,” ಎಂದು ಹೇಳಿದರು. ಇನ್ನು ಪ್ರತಿಪಕ್ಷದ ನಾಯಕರಾದ ಬಿ ಎಸ್‌ ಯಡಿಯೂರಪ್ಪ ಅವರು ಎಂದಿನಂತೆ ಜೆಡಿಎಸ್‌ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, "ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಬೇಕು,” ಎಂದು ಆಗ್ರಹಿಸಿದರು.

ಸದನದಲ್ಲಿ ನಗೆಯ ಅಲೆ

ಶುಭಕಾಲದಲ್ಲಿ ಬಜೆಟ್‌ ಮಂಡಿಸುವುದಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಆಸಕ್ತಿದಾಯಕ ಚರ್ಚೆ ನಡೆಯಿತು. ಶುಭ ಸಂದರ್ಭದ ಬಗ್ಗೆ ಹಲವರು ಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಆದರೆ, ಜಗದೀಶ್‌ ಶೆಟ್ಟರ್ ಅವರು, “೨೦೧೩ರಲ್ಲಿ ಮುಖ್ಯಮಂತ್ರಿಯಾಗಿ ಬಜೆಟ್‌ ಮಂಡಿಸುವಾಗಲೂ ಶುಭಸಂದರ್ಭವನ್ನು ನಿಗದಿಪಡಿಸಿದ್ದು ನಾನೇ,” ಎನ್ನುವ ಮೂಲಕ ಲೋಕೋಪಯೋಗಿ ಸಚಿವ ಎಚ್‌ ಡಿ ರೇವಣ್ಣ ಸದನದಲ್ಲಿ ನಗೆಯ ಅಲೆ ಎಬ್ಬಿಸಿದರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More