ಟ್ರೋಲಿಂಗ್‌ ವಿರುದ್ಧದ ಸುಷ್ಮಾ ಸಮರವು ಭವಿಷ್ಯದ ಕೋಲಾಹಲದ ಮುನ್ಸೂಚನೆ

ಮೂಲ ಮೋದಿತ್ವದ ವಿರುದ್ಧ ಯಾರೂ ಧೈರ್ಯ ತೋರದೆ ಇದ್ದಾಗ ವಾಜಪೇಯಿ-ಆಡ್ವಾಣಿ ಯುಗಕ್ಕೆ ಸೇರಿದ ರಾಜನಾಥ್, ಗಡ್ಕರಿ ಮತ್ತು ಸುಷ್ಮಾ ಟ್ರೋಲ್‌ಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಇದು ಭವಿಷ್ಯದ ಕೋಲಾಹಲದ ಮುನ್ಸೂಚನೆ ಎಂಬ ‘ಟೆಲಿಗ್ರಾಫ್‌’ ವಿಶ್ಲೇಷಣೆಯ ಭಾವಾನುವಾದವಿದು

ಧರ್ಮನಿರಪೇಕ್ಷ ಮತ್ತು ಉದಾರವಾದಿ ನಿಲುವಿನವರನ್ನು ಹೀನ ಪದಪಳಕೆಯ ಮೂಲಕ ಗೇಲಿ ಮಾಡಲಾಗುತ್ತದೆ. ಅವರಿಗೆ ತಮ್ಮದೇ ವಿಷಕಾರಿ ಪರಿಭಾಷೆಯಲ್ಲಿ 'ದೇಶದ್ರೋಹಿಗಳು' ಎಂಬ ಹಣೆಪಟ್ಟಿ ಹಚ್ಚಿ, ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಗದ್ದಲ ಮಾಡಲಾಗುತ್ತದೆ. ಸಾಮಾಜಿಕ ಜಾಲತಾಣ ಬಳಕೆದಾರರ ಇಂಥ ಸೈನ್ಯಕ್ಕೆ ನರೇಂದ್ರ ಮೋದಿಯವರೇ ಪೋಷಕರು ಎಂದು ಬಹಳ ಹಿಂದೆಯೇ ಸಂಶಯಿಸಲಾಗಿತ್ತು. ಈ ಅನುಮಾನವನ್ನು ಪರಿಹರಿಸುವುದಕ್ಕೆ ನರೇಂದ್ರ ಮೋದಿಯವರಿಗೆ ಉತ್ತಮ ಅವಕಾಶವೂ ಇತ್ತು. ಆದರೆ, ಅವರು ಅದನ್ನು ನಿರಾಕರಿಸುವ ಬದಲಿಗೆ ದೃಢೀಕರಿಸಿದರು!

‘ಸಾಮಾಜಿಕ ಮಾಧ್ಯಮ ದಿನ’ವಾದ ಜೂ.30ರಂದು ಪ್ರಧಾನಮಂತ್ರಿಗಳು ಈ ರೀತಿ ಟ್ವೀಟ್ ಮಾಡಿದ್ದರು: “ಸಾಮಾಜಿಕ ಮಾಧ್ಯಮದ ನವನವೀನ ಬಳಕೆಗಾಗಿ ನನ್ನ ಯುವಮಿತ್ರರಿಗೆ ಅಭಿನಂದನೆ ಸಲ್ಲಿಸುವುದಕ್ಕೆ ಇಷ್ಟಪಡುತ್ತೇನೆ. ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವರ ಮುಕ್ತ ವಿಧಾನ ನಿಜಕ್ಕೂ ಮೆಚ್ಚಿಕೊಳ್ಳುವಂತಹದ್ದು. ಮುಕ್ತವಾಗಿ ಅಭಿವ್ಯಕ್ತಿಸುವುದನ್ನು, ಚರ್ಚಿಸುವುದನ್ನು ಯುವಜನತೆ ಮುಂದುವರಿಸಬೇಕು ಎಂದು ನಾನವರಲ್ಲಿ ಕೇಳಿಕೊಳ್ಳುತ್ತೇನೆ.”

ಈ ಟ್ವೀಟ್ ಮಾಡಿದ ಸಂದರ್ಭ ಇದಕ್ಕಿಂತ ಮಹತ್ವದ್ದಾಗಿರುವುದಕ್ಕೆ ಸಾಧ್ಯವಿರಲಿಲ್ಲ. ಮೋದಿಯವರು ಈ ಟ್ವೀಟ್ ಮಾಡಿದ ನಂತರದ ಕೆಲವು ದಿನಗಳಲ್ಲಿ ಹಿಂದುತ್ವದ ಬಲಪಂಥೀಯರು ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ವಿರುದ್ಧ ಟ್ರಾಲ್ ಮಾಡುತ್ತ ಮುಗಿಬಿದ್ದರು. ಇದಕ್ಕೆ ಕಾರಣ ಏನೆಂದರೆ, ಅಂತರ್ಧರ್ಮೀಯ ದಂಪತಿಗೆ ಪಾಸ್‍ಪೋರ್ಟ್ ನೀಡಲು ಲಖನೌ ಪಾಸ್‍ಪೋರ್ಟ್ ಕಚೇರಿ ನಿರಾಕರಿಸಿದಾಗ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆ ದಂಪತಿಗಳ ನೆರವಿಗೆ ಬಂದಿದ್ದು!

ತಾವು ನರೇಂದ್ರ ಮೋದಿಯವರ ಭಕ್ತರೆಂದು ಹೇಳಿಕೊಳ್ಳುವ ಈ ಟ್ರಾಲ್ ಮಂದಿ ದ್ವೇಷಪೂರಿತ ಅಪರಾಧ ಮಾಡಿದಾಗ ಅಥವಾ ದ್ವೇಷಪೂರಿತ ಭಾಷಣ ಮಾಡಿದಾಗ ನರೇಂದ್ರ ಮೋದಿಯವರು ಎಂದೂ ಅವುಗಳ ವಿರುದ್ಧ ಮಾತಾಡಿಲ್ಲ ಎಂಬುದು ನಮಗೆಲ್ಲ ಗೊತ್ತೇ ಇದೆ. ನಿಜ ಹೇಳಬೇಕೆಂದರೆ, ಅವರು ಕಾರ್ಯತಾಂತ್ರಿಕ ಚಾಣಾಕ್ಷತನದಿಂದ ಅಂತಹ ಕೃತ್ಯಗಳನ್ನು ಬೆಂಬಲಿಸಿದ್ದಾರೆ. ಹತ್ತು ತಿಂಗಳ ಹಿಂದೆ ಗೌರಿ ಲಂಕೇಶ್ ಅವರನ್ನು ಬೆಂಗಳೂರಿನಲ್ಲಿ ಅವರ ಮನೆಯ ಮುಂದೆಯೇ ಗುಂಡಿಕ್ಕಿ ಕೊಂದಾಗ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಈ ಸಾವನ್ನು ಸಂಭ್ರಮಿಸುವ ಕುತ್ಸಿತ ಅಭಿಪ್ರಾಯಗಳು ದೊಡ್ಡ ಮಟ್ಟದಲ್ಲಿ ಹರಿದಾಡಿದವು. ಹೀಗೆ ಸಂಭ್ರಮಿಸಿದವರಲ್ಲಿ ಮೋದಿಯನ್ನು ಫಾಲೋ ಮಾಡುತ್ತಿದ್ದವರೂ ಇದ್ದರು. ಗೌರಿ ಕೊಲೆಯ ವಿರುದ್ಧ ಮತ್ತು ಅವರ ಸಾವನ್ನು ಸಂಭ್ರಮಿಸಿದ ಈ ನಂಜುಕಾರಿ ಮನಸ್ಥಿತಿಯ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿರೋಧ ಭುಗಿಲೆದ್ದರೂ ಮೋದಿಯವರು ತಮ್ಮ ವಿಷಕಾರಿ ಮೌನವನ್ನು ಮುಂದುವರಿಸಿದರು; ಮಾತ್ರವಲ್ಲ, ಅಂತಹ ಟ್ರೋಲ್‍ಗಳನ್ನು 'ಅನ್‍ಫಾಲೋ' ಮಾಡುವುದಕ್ಕೂ ನಿರಾಕರಿಸಿದರು.

ಅದರೆ, ಸುಷ್ಮಾ ಸ್ವರಾಜ್ ಎಡಪಂಥೀಯ ಕಾರ್ಯಕರ್ತೆ ಆಗಿರಲಿಲ್ಲ; ಅವರು ಮೋದಿ ಕ್ಯಾಬಿನೆಟ್‍ನ ಅತ್ಯಂತ ಹಿರಿಯ ಸದಸ್ಯರಲ್ಲಿ ಒಬ್ಬರು; ಭಾರತೀಯ ಜನತಾ ಪಕ್ಷದ ಅತ್ಯುನ್ನತ ನಾಯಕರಲ್ಲಿ ಒಬ್ಬರು. ಹಾಗಾಗಿ, ತಮ್ಮ ತಂಡದ ಸದಸ್ಯರಿಗೆ ಬೆಂಬಲವಾಗಿ ನಿಲ್ಲುವುದು ನಾಯಕತ್ವದ ಮೂಲಗುಣ. ಆದರೂ, ಪ್ರಧಾನಮಂತ್ರಿಗಳಾಗಲೀ ಅಥವಾ ಬಿಜೆಪಿಯಾಗಲೀ ಸುಷ್ಮಾ ಅವರ ರಕ್ಷಣೆಗೆ ಬರಲಿಲ್ಲ. ಸುಷ್ಮಾ ಸ್ವರಾಜ್ ಅವರ ಟ್ವಿಟರ್ ಅಕೌಂಟು ಸಾವಿರಾರು ನಿಂದಾತ್ಮಕ ಟ್ವೀಟುಗಳಿಂದ ತುಂಬಿಹೋಗಿದ್ದರೂ ಮೋದಿಯವರ ಗಾಢಮೌನದಿಂದ ಪ್ರೇರಿತರಾದ ಯಾವೊಬ್ಬ ಬಿಜೆಪಿಯ ನಾಯಕನೂ ಒಂದು ವಾರಕ್ಕಿಂತ ಹೆಚ್ಚಿನ ಸಮಯ ಈ ವಿಷಯದ ಬಗ್ಗೆ ಬಹಿರಂಗವಾಗಿ ಮಾತಾಡುವ ಧೈರ್ಯ ತೋರಲಿಲ್ಲ. ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಾಲ್ ಕೂಡ ಈ ನಿಂದನೆಯ ದಾಳಿಗೆ ಬಲಿಯಾದರು; “ಇವತ್ತು ರಾತ್ರಿ ಅವಳು ಮನೆಗೆ ಬಂದಾಗ ಮುಸ್ಲೀಮರ ತುಷ್ಟೀಕರಣ ಮಾಡಬೇಡ ಅಂತ ನೀವೇಕೆ ಅವಳಿಗೆ ಹೊಡೆದು ಬುದ್ಧಿ ಹೇಳಬಾರದು?” ಎಂದೂ ಕೆಲವರು ಸುಷ್ಮಾ ಅವರ ಪತಿಯನ್ನು ಕೇಳಿದರು.

'ಸಾಮಾಜಿಕ ಮಾಧ್ಯಮದ ದಿನ’ದಂದಾದರೂ ಪ್ರಧಾನಮಂತ್ರಿಗಳು ಈ ವಿಷಕಾರಿ ಟ್ರಾಲ್‍ಗಳನ್ನು ತರಾಟೆಗೆ ತೆಗೆದುಕೊಳ್ಳಬಹುದಿತ್ತು. ಕನಿಷ್ಠಪಕ್ಷ, ಸಾಮಾಜಿಕ ಮಾಧ್ಯಮದಲ್ಲಿ ಬರೆಯುವಾಗ ಬಳಸುವ ಭಾಷೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಇನ್ನಷ್ಟು ಸೂಕ್ಷ್ಮವಾಗಿರಬೇಕು ಎಂಬ ಬುದ್ಧಿವಾದವನ್ನಾದರೂ ಹೇಳಬೇಕಿತ್ತು. ಆದರೆ, ಅವರ ಮೌನಕ್ಕಿಂತಲೂ ಹೆಚ್ಚಾಗಿ ಅವರು ಮಾಡಿದ ಟ್ವೀಟ್ ಸುಷ್ಮಾ ಅವರನ್ನು ಇನ್ನಷ್ಟು ಅವಮಾನಿಸುವುದಕ್ಕೆ ಪ್ರೇರಣೆಯಾಯಿತು; ಟ್ರೋಲ್ ಸೈನ್ಯ ಅಳವಡಿಸಿಕೊಂಡ 'ನವನವೀನ ಬಳಕೆ' ಮತ್ತು 'ಮುಕ್ತ ವಿಧಾನ'ಗಳಿಗೆ ಒಪ್ಪಿಗೆಯ ಮುದ್ರೆಯನ್ನೂ ಒತ್ತಿತು; ದ್ವೇಷಕಾರಿಕೆಗೆ ವಿಶೇಷ ಪ್ರೋತ್ಸಾಹವನ್ನೂ ನೀಡಿತು.

ಆನಂತರ ನಡೆದದ್ದು ಇನ್ನೂ ಕುತೂಹಲಕಾರಿಯಾಗಿದೆ. ಪ್ರಧಾನಮಂತ್ರಿಗಳು ಟ್ವೀಟ್ ಮಾಡಿದ ಎರಡು ದಿನಗಳ ನಂತರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಮ್ಮ ಅಧಿಕೃತ ಮೌನ ಮುರಿದು, “ಸುಷ್ಮಾ ಅವರ ಮೇಲೆ ನಡೆದ ದಾಳಿಗಳು ದುರದೃಷ್ಟಕರ,” ಎಂದರು. ಜುಲೈ 3ರಂದು ಪ್ರಮುಖ ಕ್ಯಾಬಿನೆಟ್ ಸಚಿವ ನಿತಿನ್ ಗಡ್ಕರಿಯವರೂ ರಾಜನಾಥ್ ಸಿಂಗ್ ಅವರ ಮಾತನ್ನು ಪ್ರತಿಧ್ವನಿಸಿದರು.

ಜುಲೈ 4ರಂದು, ಕಾಂಗ್ರೆಸ್ ವಕ್ತಾರರಾದ ಪ್ರಿಯಾಂಕ ಚತುರ್ವೇದಿ ಅವರ ಹತ್ತು ವರ್ಷದ ಮಗಳನ್ನು ಅತ್ಯಾಚಾರ ಮಾಡುವುದಾಗಿ ಬೆದರಿಕೆಯೊಡ್ಡಿದ ವ್ಯಕ್ತಿಯನ್ನು ಗುರುತಿಸಿ ಪ್ರಕರಣ ದಾಖಲಿಸಿ ಎಂದು ಮುಂಬೈ ಪೊಲೀಸರಿಗೆ ಹೇಳುವಂತೆ ರಾಜನಾಥ್ ಸಿಂಗ್ ಅವರು ತಮ್ಮ ಗೃಹ ಸಚಿವಾಲಯಕ್ಕೆ ನಿರ್ದೇಶನ ಕೊಟ್ಟರು. ಅದಾದ ಒಂದು ದಿನದ ನಂತರ, ಹಿಂದುತ್ವ ಪಾಳೆಯದಲ್ಲಿ ಕೋಲಾಹಲವೆಬ್ಬಿಸಿದ್ದ ಲಖನೌ ದಂಪತಿಗೆ ಪಾಸ್‍ಪೋರ್ಟ್ ನೀಡಿದ ಪ್ರಕರಣದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅಧಿಕೃತ ಹೇಳಿಕೆ ಹೊರಬಿತ್ತು. ಇದರಲ್ಲಿ, ದಂಪತಿಗೆ ಪಾಸ್‍ಪೋರ್ಟ್ ನೀಡಿದ್ದು ಅಕ್ಷರಶಃ ಸರಿಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಮರ್ಥಿಸಿಕೊಂಡಿತು.

ನೋಡುವುದಕ್ಕೆ ಇವು ಬಿಡಿ-ಬಿಡಿ ಮಂತ್ರಿಗಳ ಹತಾಶ ಪ್ರಯತ್ನಗಳಂತೆ ಕಾಡುತ್ತವೆ. ವಿವೇಚನಾ ಶಕ್ತಿ ಇರುವ ಯಾವುದೇ ರಾಜಕೀಯ ವಿಶ್ಲೇಷಕನಿಗೆ ಕಳೆದ ಕೆಲವು ದಿನಗಳಲ್ಲಿ ನಡೆದ ಬೆಳವಣಿಗೆಗಳ ನಿಜವಾದ ಮಹತ್ವ ಕಾಣುತ್ತಿರುವುದು ಪ್ರಧಾನಮಂತ್ರಿ ಮತ್ತವರ ಸೈನ್ಯದ 'ವ್ಯೂಹಾತ್ಮಕ ಮೌನ’ದಲ್ಲಿ ಅಲ್ಲ, ಬದಲಿಗೆ ಸುಷ್ಮಾ ಸ್ವರಾಜ್ ಮತ್ತು ರಾಜನಾಥ್ ಸಿಂಗ್ ಅವರು ತಮ್ಮ-ತಮ್ಮ ಸಚಿವಾಲಯದ ಮೂಲಕ ತೆಗೆದುಕೊಂಡ 'ವ್ಯೂಹಾತ್ಮಕ ಕ್ರಮ’ಗಳಲ್ಲಿ. ಟ್ರೋಲ್‍ಪರ ಸಿದ್ಧಾಂತದ ಭಾಗವಾಗಿರುವ ಮೋದಿಯವರ ಲೆಕ್ಕಾಚಾರದ ಮೌನವು ಕಠೋರ ಹಿಂದುತ್ವವಾದಿಗಳನ್ನು ಖುಷಿಯಾಗಿಡುವ ಉದ್ದೇಶ ಹೊಂದಿದ್ದರೆ, ಈ ಇಬ್ಬರು ಉನ್ನತ ಕ್ಯಾಬಿನೆಟ್ ಸಚಿವರು ತೆಗೆದುಕೊಂಡ ಕ್ರಮಗಳು ಮೋದಿಯವರ ಆ ಮೂಲ ತಳಹದಿಯನ್ನೇ ಅಲುಗಾಡಿಸುವ ಉದ್ದೇಶ ಹೊಂದಿವೆ.

ಪಾಸ್‍ಪೋರ್ಟ್ ಪ್ರಕರಣವನ್ನೇ ತೆಗೆದುಕೊಳ್ಳಿ. ಲಖನೌ ಪಾಸ್‍ಪೋರ್ಟ್ ಕಚೇರಿಯ ಅಧಿಕಾರಿ ವಿಕಾಸ್ ಮಿಶ್ರಾ ಅವರು ತಮಗೆ ಕಿರುಕುಳ ನೀಡಿದ್ದಾರೆಂದು ತನ್ವಿ ಸೇಠ್ ಮತ್ತು ಅವರ ಪತಿ ಮೊಹಮ್ಮದ್ ಅನಾಸ್ ಸಿದ್ಧಿಕಿಯವರು ಆರೋಪ ಮಾಡಿದ್ದರು. ಮುಸ್ಲಿಮನೊಂದಿಗೆ ಮದುವೆಯಾಗಿದ್ದಕ್ಕಾಗಿ, ಮದುವೆಯ ನಂತರ ಅಧಿಕೃತ ದಾಖಲೆಗಳಲ್ಲಿ ತನ್ನ ಹೆಸರನ್ನು ಬದಲಾಯಿಸದೆ ಇದ್ದುದಕ್ಕಾಗಿ ಈ ಅಧಿಕಾರಿ ಸೇಠ್ ಅವರನ್ನು ಬೈಯ್ದದ್ದಲ್ಲದೆ, ಹಿಂದೂ ಧರ್ಮಕ್ಕೆ ಮತಾಂತರವಾಗುವಂತೆ ಸಿದ್ಧಿಕಿಯವರಿಗೆ ಹೇಳಿದರು ಎಂಬುದು ಈ ದಂಪತಿಯ ಆರೋಪದ ತಿರುಳು.

ಜೂನ್ 20ರಂದು, ತನ್ವಿ ಸೇಠ್ ಅವರು ಟ್ವಿಟರ್ ಮೂಲಕ ಸುಷ್ಮಾ ಸ್ವರಾಜ್ ಅವರನ್ನು ಸಂಪರ್ಕಿಸಿದರು. ಮರುದಿನವೇ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದರು. ದಂಪತಿಗಳಿಗೆ ಪಾಸ್‍ಪೋರ್ಟ್ ನೀಡಲಾಯಿತು. ಮಿಶ್ರಾ ಅವರನ್ನು ಲಖನೌದಿಂದ ಗೋರಖ್‍ಪುರಕ್ಕೆ ವರ್ಗಾವಣೆ ಮಾಡಲಾಯಿತು.

ಟ್ವಿಟರ್ ಬಿರುಗಾಳಿ ಭುಗಿಲೆದ್ದ ಮೇಲೆ, ಆ ತೀರ್ಮಾನಕ್ಕೆ ತಾನು ಜವಾಬ್ದಾರಳಲ್ಲ ಎನ್ನುತ್ತ ಸುಷ್ಮಾ ಸ್ವರಾಜ್ ಜಾರಿಕೊಂಡಿದ್ದರು. ಕೆಲವು ನಿಂದನಾತ್ಮಕ ಟ್ವೀಟ್‍ಗಳು ಬಂದ ಮೇಲೆ ಅವರು ಜೂನ್ 24ರಂದು, “2018ರ ಜೂನ್ 17ರಿಂದ ಜೂನ್ 23ರ ತನಕ ನಾನು ಭಾರತದಿಂದ ಹೊರಗಿದ್ದೆ. ನನ್ನ ಅನುಪಸ್ಥಿತಿಯಲ್ಲಿ ಏನು ನಡೆದಿದೆ ಎಂಬುದು ನನಗೆ ಗೊತ್ತಿಲ್ಲ,” ಎಂದು ಟ್ವೀಟ್ ಮಾಡಿದ್ದರು.

ಸಚಿವರಿಂದ ಹಸಿರು ನಿಶಾನೆ ಸಿಗದ ಹೊರತು ಸಚಿವಾಲಯದ ಅಧಿಕಾರಿಗಳು ಈ ಕ್ರಮ ಕೈಗೊಂಡಿರುವ ಸಾಧ್ಯತೆ ಇಲ್ಲ. ವಿದೇಶದಲ್ಲಿರುವ ಭಾರತೀಯರು ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡು ಹತಾಶೆಯಿಂದ ಸುಷ್ಮಾ ಅವರನ್ನು ಟ್ವಿಟರ್ ಮೂಲಕ ಸಂಪರ್ಕಿಸಿದಾಗ ಅಂಥವರ ನೆರವಿಗೆ ಧಾವಿಸುವ ಮೂಲಕ ಸುಷ್ಮಾ ಪ್ರಸಿದ್ಧಿಯಾಗಿದ್ದಾರೆ. ಆದರೆ, ಈ ಪ್ರಕರಣ ಭಿನ್ನವಾದದ್ದು. ಅಂತರ್ಧರ್ಮೀಯ ವಿವಾಹವಾದ ದಂಪತಿಯ ಪರವಾಗಿ ನಿಲ್ಲುವುದು ಎಂದರೆ, ಆದಿತ್ಯನಾಥರ ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ಹೆಸರಿನಲ್ಲಿ ಗದ್ದಲವೆಬ್ಬಿಸುತ್ತಿರುವ ಬಲಪಂಥೀಯ ಸೈನ್ಯದ ವಿರುದ್ಧ ನಿಲ್ಲುವುದು ಎಂದೇ ಅರ್ಥ. ಅದು ರಾಜಕೀಯವಾಗಿ ಅಪಾಯಕಾರಿ ಹೆಜ್ಜೆ ಕೂಡ.

ಅಂತರ್ಧರ್ಮೀಯ ವಿವಾಹವಾದ ದಂಪತಿಗೆ ಪಾಸ್‍ಪೋರ್ಟ್ ನೀಡಿದ ಕ್ರಮ ಇಷ್ಟೊಂದು ಪರಿಣಾಮ ಬೀರುತ್ತದೆ ಎಂದು ಪ್ರಾಯಶಃ ಸುಷ್ಮಾ ನಿರೀಕ್ಷಿಸಿರಲಿಲ್ಲ. ಆದರೆ, ದೊಡ್ಡ ಮಟ್ಟದಲ್ಲಿ ಟ್ರಾಲ್‍ಗಳನ್ನು ನೋಡಿದ ಮೇಲೆ ಹಾಗೂ ತಮ್ಮದೇ ಪಕ್ಷವಾಗಲೀ ಅಥವಾ ಪ್ರಧಾನಮಂತ್ರಿಗಳಾಗಲೀ ಕನಿಷ್ಠ ತಮ್ಮ ಬೆಂಬಲಕ್ಕೂ ಬರದೆ, ಏಕಾಂಗಿಯಾಗಿ ಅವಮಾನಕಾರಿ ಪರಿಸ್ಥಿತಿ ಎದುರಿಸಿದ ಮೇಲಷ್ಟೇ ಸುಷ್ಮಾ ತನ್ನ ಸಚಿವಾಲಯ ತೆಗೆದುಕೊಂಡ ಕ್ರಮವನ್ನು ಗಟ್ಟಿಯಾಗಿ ಸಮರ್ಥಿಸಿಕೊಳ್ಳುವುದಕ್ಕೆ ದೃಢ ಸಂಕಲ್ಪ ಮಾಡಿದರು ಎಂದು ಕಾಣುತ್ತದೆ. ಜೂನ್ 26ರಂದು, ಪಾಸ್‍ಪೋರ್ಟ್‍ಗಾಗಿ ಸಲ್ಲಿಸಿದ ಅರ್ಜಿಯಲ್ಲಿ ಕೆಲವು ಸಮಸ್ಯೆಗಳಿರುವುದನ್ನು ಲಖನೌ ಪೋಲಿಸರು ಪತ್ತೆಹಚ್ಚಿದ್ದಾರೆಂದೂ, ಪಾಸ್‍ಪೋರ್ಟಿಗಾಗಿ ಸಲ್ಲಿಸಿದ ಅರ್ಜಿಯಲ್ಲಿರುವ ಅರ್ಜಿದಾರರ ಹೆಸರು ಮತ್ತು ವಿವಾಹ ಪ್ರಮಾಣಪತ್ರದಲ್ಲಿರುವ ಹೆಸರು ಬೇರೆ ಬೇರೆಯಾಗಿವೆ ಎಂದೂ, ಅರ್ಜಿಯಲ್ಲಿ ನಮೂದಿಸಿರುವ ವಿಳಾಸ ಮತ್ತು ಅರ್ಜಿದಾರರು ವಾಸ್ತವದಲ್ಲಿ ವಾಸವಿರುವ ವಿಳಾಸ ಎರಡೂ ಬೇರೆ ಬೇರೆಯಾಗಿವೆ ಎಂದೂ ವರದಿಗಳು ಬಂದವು. ನೀಡಿರುವ ಪಾಸ್‍ಪೋರ್ಟನ್ನು ವಾಪಸು ಪಡೆಯುವ ನಿರೀಕ್ಷೆ ಇದೆ ಎಂದು ಕೆಲವು ಮಾಧ್ಯಮಗಳು ಊಹಿಸಿದವಲ್ಲದೆ, ‘ತಮ್ಮ ಕರ್ತವ್ಯ ನಿರ್ವಹಿಸಿದ’ ಅಧಿಕಾರಿ ವಿಕಾಸ್ ಮಿಶ್ರಾ ಅವರನ್ನು ವರ್ಗಾವಣೆ ಮಾಡಿದ ಕ್ರಮವನ್ನೂ ಟೀಕಿಸಿದವು.

ಆದರೆ, ಈ ‘ತಪ್ಪು ಮಾಹಿತಿ’ಗೆ ಪ್ರತಿಯಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಜುಲೈ 5ರಂದು ವಿವರವಾದ ಹೇಳಿಕೆ ಬಿಡುಗಡೆ ಮಾಡಿದರು. 2018ರ ಜೂನ್ 1ರಿಂದ ಜಾರಿಗೆ ಬಂದಿರುವ ಹೊಸ ನಿಯಮಗಳ ಪ್ರಕಾರ, ಪಾಸ್‍ಪೋರ್ಟ್ ಅರ್ಜಿದಾರರನ್ನು ಪರಿಶೀಲಿಸುವಾಗ ಅರ್ಜಿದಾರರು ಭಾರತೀಯ ನಾಗರಿಕರಾಗಿದ್ದಾರೆಯೇ ಹಾಗೂ ಅವರ ಮೇಲೆ ಯಾವುದಾದರೂ ಅಪರಾಧ ಪ್ರಕರಣಗಳು ಇವೆಯೇ ಎಂಬ ಎರಡು ಅಂಶಗಳನ್ನಷ್ಟೇ ಪೊಲೀಸರು ಪರಿಶೀಲಿಸಬೇಕಾಗುತ್ತದೆ ಎಂದು ಈ ಹೇಳಿಕೆಯ ಮೂಲಕ ಸ್ಪಷ್ಟಪಡಿಸಿದರು. ಪಾಸ್‍ಪೋರ್ಟ್‍ಗೆ ವಿವಾಹ ಪ್ರಮಾಣಪತ್ರದ ಅವಶ್ಯಕತೆ ಇಲ್ಲ; ತನ್ವಿಯವರು ನೀಡಿರುವ ವಿಳಾಸ, ಅವರ ಆಧಾರ್ ಕಾರ್ಡಿನಲ್ಲಿರುವ ವಿಳಾಸ ಮತ್ತು ಅವರ ಬ್ಯಾಂಕ್ ಖಾತೆಯಲ್ಲಿರುವ ವಿಳಾಸ ಒಂದೇ ಆಗಿದೆ ಎಂಬುದನ್ನೂ ಅಧಿಕಾರಿಗಳು ಈ ಹೇಳಿಕೆಯ ಮೂಲಕ ಸ್ಪಷ್ಟಪಡಿಸಿದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಈ ಹೇಳಿಕೆಯು ಸಾಮಾಜಿಕ ಮಾಧ್ಯಮಗಳ ಟ್ರೋಲುಗಳಿಗೆ ಮತ್ತು ಅವುಗಳಿಂದ ಪ್ರೇರಿತವಾದ ಮಾಧ್ಯಮ ವರದಿಗಳಿಗೆ ಕುಟುಕುವ ಕ್ರಮವಾಗಿದ್ದರೆ ಪ್ರಿಯಾಂಕಾ ಚತುರ್ವೇದಿಯ ಮಗಳಿಗೆ ಬೆದರಿಕೆಯೊಡ್ಡಿದ ಟ್ರೋಲ್ ವಿರುದ್ಧ ಕ್ರಮ ಕೈಗೊಳ್ಳುವ ಗೃಹ ಸಚಿವಾಲಯದ ತೀರ್ಮಾನವು ಅದಕ್ಕಿಂತ ಹೆಚ್ಚು ಮಹತ್ವಪೂರ್ಣದ್ದಾಗಿದೆ. ಟ್ರೋಲುಗಳು ನಿರಂತರವಾಗಿ 'ಉದಾರವಾದಿ' ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದಾಗಿ ಬೆದರಿಕೆಯೊಡ್ಡುತ್ತಲೇ ಇರುತ್ತವೆ. ಆದರೆ, ಅದಕ್ಕಿಂತ ಕೆಟ್ಟ ವಿಷಯ ಏನೆಂದರೆ, ಅಂತಹ ಬೆದರಿಕೆಗಳ ವಿರುದ್ಧ ಕ್ರಮ ಜರುಗಿಸಿದ್ದು ತೀರಾ ಕಡಿಮೆ. ಆದರೆ, ಕೇಂದ್ರ ಗೃಹ ಸಚಿವಾಲಯದಿಂದ ನಿರ್ದೇಶನ ಬಂದ ಒಂದೇ ದಿನದಲ್ಲಿ ಮುಂಬೈ ಪೊಲೀಸರು, ಅತ್ಯಾಚಾರ ಬೆದರಿಕೆಯೊಡ್ಡಿದ ಗಿರೀಶ್ ಮಹೇಶ್ವರಿ ಎಂಬ 36 ವರ್ಷದ ಗುಜರಾತ್ ಮೂಲದ ವ್ಯಕ್ತಿಯನ್ನು ಬಂಧಿಸಿದರು. ಈ ಮಹೇಶ್ವರಿ ತನ್ನ ಫೇಸ್‍ಬುಕ್ ಖಾತೆಯಲ್ಲಿ ತಾನು, “ಭಾರತೀಯ ಜನತಾ ಪಕ್ಷದ ಅಕೌಂಟಿಗ್ ಅಸೋಸಿಯೇಟ್,” ಎಂದು ಹೇಳಿಕೊಂಡಿದ್ದಾನೆ. ಆದರೆ, ಬಿಜೆಪಿ ಆತ ಹೀಗೆ ಹೇಳಿಕೊಂಡಿದ್ದರ ಬಗ್ಗೆಯಾಗಲೀ ಅಥವಾ ಆತನ ಬಂಧನದ ಬಗ್ಗೆಯಾಗಲೀ ಏನೂ ಮಾತಾಡಿಲ್ಲ.

ಒಂದು ಸ್ಪಷ್ಟತೆಯಿರಲಿ; ರಾಜನಾಥ್ ಸಿಂಗ್ ಆಗಲೀ ಅಥವಾ ಸುಷ್ಮಾ ಸ್ವರಾಜ್ ಆಗಲೀ ಮಹಾ ಉದಾರವಾದಿಗಳೇನಲ್ಲ. ಅವರು ಬಂಡಾಯಗಾರರೂ ಅಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ಸಾಂವಿಧಾನಿಕ ಮೌಲ್ಯಗಳ ಮೇಲೆ ದಾಳಿಯಾದಾಗ, ಅಲ್ಪಸಂಖ್ಯಾತರ ಮೇಲೆ ಮತ್ತು ದಲಿತರ ಮೇಲೆ ದೈಹಿಕ ಹಲ್ಲೆಗಳಾದಾಗ, ಸಾಮಾಜಿಕ ಕಾರ್ಯಕರ್ತರಿಗೆ ಮತ್ತು ಉದಾರವಾದಿಗಳಿಗೆ ನಿಂದನೆಗಳು, ಬೆದರಿಕೆಗಳು ಬಂದಾಗ ಇವರಿಬ್ಬರೂ ಅವುಗಳಿಗೆ ಮೌನಸಮ್ಮತಿ ಸೂಚಿಸಿದವರೇ ಆಗಿದ್ದಾರೆ!

ಇದನ್ನೂ ಓದಿ : ಪಾಸ್‌ಪೋರ್ಟ್‌ ಪ್ರಕರಣ: ಸಚಿವೆ ಸುಷ್ಮಾ ಜೊತೆ ಬಿಜೆಪಿ ವಕ್ತಾರೆ ಸೋನಂ ಸಂಘರ್ಷ

ಅದೇ ವೇಳೆಯಲ್ಲಿ, ಅವರಿಬ್ಬರೂ ಕಠೋರ ಹಿಂದುತ್ವ ಕಾರ್ಯಸೂಚಿಯನ್ನು ರಭಸದಿಂದ ಜಾರಿಗೊಳಿಸುವುದಕ್ಕೆ ಪ್ರಯತ್ನಿಸಿದವರೂ ಅಲ್ಲ; ಮೋದಿ-ಶಾ ಜೋಡಿ ತಮ್ಮ ಟ್ರಾಲ್ ಮತ್ತು ಹಿಂಬಾಲಕ ಪಡೆಯ ನೆರವಿನಿಂದ 'ವಿರೋಧಪಕ್ಷ ಮುಕ್ತ ಭಾರತ’ ಮಾಡುವ ಗುರಿಯೊಂದಿಗೆ ಮುನ್ನುಗ್ಗುತ್ತಿದ್ದಾಗ ಇವರಿಬ್ಬರೂ ಸುಮ್ಮನೆ ಪಕ್ಕದಲ್ಲಿ ಕುಳಿತಿದ್ದರಷ್ಟೆ. ಮೂಲ ಮೋದಿತ್ವದ ವಿರುದ್ಧ ನಡೆಯಲು ಯಾರೂ ದೈರ್ಯ ತೋರದ ಈಗಿನ ಸನ್ನಿವೇಶದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮೋದಿಯವರಿಗಿಂತ ಬಹಳ ಹಿರಿಯರೂ ಹಾಗೂ ಗತಿಸಿದ ವಾಜಪೇಯಿ-ಆಡ್ವಾಣಿ ಯುಗಕ್ಕೆ ಸೇರಿದವರೂ ಆಗಿರುವ ರಾಜನಾಥ್ ಮತ್ತು ಸುಷ್ಮಾ ಅವರು ನಡೆಯುವುದಕ್ಕೆ ಧೈರ್ಯ ತೋರಿರುವುದು ಪ್ರಾಯಶಃ ಮುಂಬರಲಿರುವ ಹೊಸ ಕೋಲಾಹಲದ ಮುನ್ಸೂಚನೆಯಾಗಿದೆ.

ಒಂದು ಹಂತದಲ್ಲಿ ಮೋದಿ ಅಜೇಯರು ಎಂಬಂತಿದ್ದ ಪರಿಸ್ಥಿತಿ ಅವರ ಅಧಿಕಾರಾವಧಿಯ ಕೊನೆಯ ಹೊತ್ತಿಗೆ ಬದಲಾಗಲಿದೆ ಎಂಬುದನ್ನು ಈ ಬೆಳವಣಿಗೆಗಳು ಸೂಚಿಸುತ್ತಿವೆ. 2019ರಲ್ಲಿ ಬಿಜೆಪಿಯನ್ನು ಗೆಲುವಿನ ದಡ ಸೇರಿಸುವುದಕ್ಕೆ ಮೋದಿಗೆ ಸಾಧ್ಯವಾಗದೆ ಹೋಗಬಹುದು. ಅಂತ ಪರಿಸ್ಥಿತಿ ನಿರ್ಮಾಣವಾದರೆ, ರಾಜನಾಥ್ ಮತ್ತು ಸುಷ್ಮಾ ಹಾಗೂ ಗಡ್ಕರಿ ಕೂಡ ಅನಿರೀಕ್ಷಿತವಾಗಿ ಆವಿರ್ಭವಿಸಿದ ವಿಸ್ತೃತ ಮೈತ್ರಿಕೂಟದ ನಾಯಕರಾಗಿ ಹೊರಹೊಮ್ಮಿಬಿಡಬಹುದು. ಒಂದು ವೇಳೆ, ಮೋದಿಯವರೇ ಅಧಿಕಾರಕ್ಕೆ ಮರಳಿದರೆ, ಹೇಗಿದ್ದರೂ ಇವರೆಲ್ಲ ಮಾರ್ಗದರ್ಶಕ ಮಂಡಳಿ 2.0ಗೆ ಹೋಗುವವರಾಗಿದ್ದಾರೆ. ಈ ಹಂತದಲ್ಲೇ ಮೋದಿಯವರಿಂದ ಅಂತರ ಕಾಪಾಡಿಕೊಂಡರೆ ಅವರಿಗೆ ನಷ್ಟಕ್ಕಿಂತ ಲಾಭವೇ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಟ್ರೋಲ್ ವಿರುದ್ಧ ಸೆಟೆದು ನಿಲ್ಲುವುದು ಉತ್ತಮವಾದ ರಾಜಕೀಯ ನಡೆ ಕೂಡ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More