ಬಿಜೆಪಿಯ ಕಾಡಿದ ರಾಮಮಂದಿರ, ಇಂದಿರಾ ಕ್ಯಾಂಟೀನ್‌ನಲ್ಲಿ ಕಾಂಗ್ರೆಸ್‌ಗೆ ಕಿಕ್‌ಬ್ಯಾಕ್‌?

ಬಿಜೆಪಿಯ ಪಾಲಿಗೆ ಭಾವನಾತ್ಮಕ ಮತ್ತು ಮತ ತಂದುಕೊಡುವ ರಾಮ ಮಂದಿರ ಹಾಗೂ ಕಾಂಗ್ರೆಸ್‌ ಪಾಲಿನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್‌ ಬುಧವಾರ ವಿಧಾನ ಪರಿಷತ್‌ ಮತ್ತು ವಿಧಾನ ಸಭೆಯಲ್ಲಿ ಚರ್ಚೆಗೆ ಈಡಾದವು. ಯಾವೆಲ್ಲ ನಾಯಕರು ಏನು ಹೇಳಿದರು?

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ರಾಜ್ಯದ ವಿವಿಧೆಡೆ ಇಂದಿರಾ ಕ್ಯಾಂಟೀನ್‌ ನಿರ್ಮಾಣದಲ್ಲಿ ಭ್ರಷ್ಟಾಚಾರ ಆರೋಪ ಕುರಿತು ಕ್ರಮವಾಗಿ ವಿಧಾನ ಪರಿಷತ್‌ ಮತ್ತು ವಿಧಾನ ಸಭೆಯಲ್ಲಿ ಬುಧವಾರ ಬಿರುಸಿನ ಚರ್ಚೆ ನಡೆಯಿತು. ವಿಧಾನ ಪರಿಷತ್‌ನಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ‘ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್‌ ನೀಡಿದ ಭರವಸೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ನಮ್ಮ ಭರವಸೆಗಳನ್ನು ಹಾಸ್ಯ, ಗೇಲಿ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯು ೨೫ ವರ್ಷಗಳ ಹಿಂದೆ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ದೇಶಾದ್ಯಂತ ಜನರಿಂದ ಹಣ ಮತ್ತು ಇಟ್ಟಿಗೆ ಸಂಗ್ರಹಿಸಿತು. ಇಟ್ಟಿಗೆಯನ್ನು ತಿಪ್ಪೆಗೆ ಎಸೆಯಲಾಗಿದೆ. ಹಣದ ಲೆಕ್ಕ ಕೊಟ್ಟಿಲ್ಲ. ಕೇಂದ್ರ ಸರ್ಕಾರದಲ್ಲಿ ಅಧಿಕಾರ ಹಿಡಿದರೂ ರಾಮ ಮಂದಿರ ನಿರ್ಮಾಣ ಭರವಸೆ ಈಡೇರಿಲ್ಲ’ ಎನ್ನುವ ಮೂಲಕ ಬಿಜೆಪಿಯ ನಾಯಕರನ್ನು ಕೆಣಕಿದರು.

ಕುಮಾರಸ್ವಾಮಿ ಅವರ ಹೇಳಿಕೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಅವರು ‘ರಾಮ ಮಂದಿರ ನಿರ್ಮಾಣ ಬಿಜೆಪಿಯ ಅಜೆಂಡಾ. ಅದನ್ನು ಮಾಡಿಯೇ ತೀರುತ್ತೇವೆ. ಪ್ರಕರಣವೂ ಕೋರ್ಟ್‌ನಲ್ಲಿರುವುದರಿಂದ ರಾಮ ಮಂದಿರ ನಿರ್ಮಾಣವಾಗಿಲ್ಲ. ಇಟ್ಟಿಗೆ ತಿಪ್ಪೆಗೆ ಎಸೆಯಲಾಗಿದೆ ಎಂಬ ಹೇಳಿಕೆಯನ್ನು ಕುಮಾರಸ್ವಾಮಿ ಅವರು ಹಿಂಪಡೆಯಬೇಕು. ಮುಖ್ಯಮಂತ್ರಿಗಳು ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಕ್ಕೂ ಮುನ್ನ ತಮ್ಮ ಪಕ್ಷ ಸಂಪೂರ್ಣ ಬಹುಮತ ಬರುವುದಿಲ್ಲ ಎಂದು ಯೋಚಿಸಬೇಕಿತ್ತಲ್ಲವೇ?’ ಎಂದು ಪ್ರಶ್ನಿಸಿದರು.

ಇದಕ್ಕೆ ಬಿಜೆಪಿಯ ಉದಾಹರಣೆಯನ್ನೇ ಅಸ್ತ್ರವಾಗಿಸಿದ ಕುಮಾರಸ್ವಾಮಿ ಅವರು ‘1984ರ ಚುನಾವಣೆಯಲ್ಲಿ ೨ ಸ್ಥಾನ ಗೆದ್ದಿದ್ದ ಬಿಜೆಪಿಗೆ ಈಗ ಬಹುಮತ ಪಡೆದು ಸರ್ಕಾರ ರಚಿಸಿದೆ. ಇದೇ ಭರವಸೆಯ ಮೇಲೆ ಕಳೆದ ಚುನಾವಣೆಯಲ್ಲಿ ೪೦ ಸ್ಥಾನ ಗೆದ್ದಿದ್ದ ಜೆಡಿಎಸ್‌ಗೆ ಈ ಬಾರಿ ಒಂದು ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಬಿಜೆಪಿಗೆ ಬಹುಮತ ಬರುತ್ತದೆ ಎಂದು ಯಾರು ನಿರೀಕ್ಷಿಸಿದ್ದರು?’ ಎನ್ನುವ ಮೂಲಕ ಬಿಜೆಪಿ ನಾಯಕರ ಬಾಯಿಗೆ ಬೀಗ ಹಾಕುವ ಯತ್ನ ನಡೆಸಿದರು. ಆದರೆ, ಕುಮಾರಸ್ವಾಮಿ ಅವರ ಮಾತನ್ನು ವಿರೋಧಿಸಿ ಬಿಜೆಪಿ ನಾಯಕರು ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಉಭಯ ಪಕ್ಷಗಳ ನಾಯಕರು ಒಟ್ಟಿಗೆ ಮಾತನಾಡಲು ಮುಂದಾಗಿದ್ದರಿಂದ ಸದನದಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಯಿತು.

ಇನ್ನು ವಿಧಾನಸಭೆಯಲ್ಲಿ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಕಡಿಮೆ ದರದಲ್ಲಿ ಉಪಾಹಾರ, ಊಟ ವಿತರಣೆ ಮಾಡುವ ‘ಇಂದಿರಾ ಕ್ಯಾಂಟೀನ್‌ ಯೋಜನೆಯಲ್ಲಿ ೧೫೦ ಕೋಟಿ ರುಪಾಯಿ ಭ್ರಷ್ಟಾಚಾರ ನಡೆದಿದೆ. ಈ ಹಣವನ್ನು ಕಿಕ್‌ಬ್ಯಾಕ್‌ ರೂಪದಲ್ಲಿ ಎಐಸಿಸಿಗೆ ನೀಡಲಾಗಿದೆ’ ಎಂದು ಬಿಜೆಪಿಯ ಶಾಸಕ ಎಸ್‌ ಎ ರಾಮದಾಸ್‌ ಅವರು ಗಂಭೀರ ಆರೋಪ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸಚಿವರಾದ ಕೃಷ್ಣಬೈರೇಗೌಡ, ಡಿ ಕೆ ಶಿವಕುಮಾರ್‌ ಹಾಗೂ ಜಮೀರ್‌ ಅಹ್ಮದ್‌ ಖಾನ್‌ ಅವರು ದಾಖಲೆ ನೀಡದೇ ನಿರಾಧಾರ ಆರೋಪ ಮಾಡಲಾಗುತ್ತಿದೆ. ಚರ್ಚೆಗೆ ಅವಕಾಶ ನೀಡಬಾರದು’ ಎಂದು ಏರುಧ್ವನಿಯಲ್ಲಿ ಹೇಳಿದರು.

೨೪೭ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಮಾಡಲು ದೆಹಲಿ ಮೂಲದ ರಿವಾನ್‌ ಸಂಸ್ಥೆಗೆ ಟೆಂಡರ್‌ ನೀಡಲಾಗಿದೆ. ಇದರಿಂದ ೧೫೦ ಕೋಟಿ ರುಪಾಯಿ ಪಡೆದು ಎಐಸಿಸಿಗೆ ೫೦ ಕೋಟಿ ರುಪಾಯಿ ಕಿಕ್‌ ಬ್ಯಾಕ್‌ ನೀಡಲಾಗಿದೆ ಎಂದು ರಾಮದಾಸ್‌ ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ವಿಧಾನಸಭೆಯಲ್ಲಿ ಬಿಜೆಪಿಯ ಉಪನಾಯಕರಾದ ಗೋವಿಂದ ಕಾರಜೋಳ ಅವರು ರಾಮದಾಸ್‌ ದಾಖಲೆ ಇಟ್ಟುಕೊಂಡು ಆರೋಪ ಮಾಡಿದ್ದಾರೆ. ಅದಕ್ಕೆ ಅವಕಾಶ ನೀಡಬೇಕು ಎಂದರು. ಇದಕ್ಕೆ ಒಪ್ಪದ ಉಪ ಸಭಾಧ್ಯಕ್ಷ‌ ಜೆ ಕೆ ಕೃಷ್ಣಾರೆಡ್ಡಿ ಅವರು ‘ನಿಯಮಾವಳಿ ಪ್ರಕಾರ ಅವಕಾಶ ಕೋರದೇ ಇರುವುದರಿಂದ ಚರ್ಚೆಗೆ ಅವಕಾಶ ನೀಡಲಾಗದು’ ಎಂದರು.

ಇದನ್ನೂ ಓದಿ : ಸಿದ್ದರಾಮಯ್ಯ ಬಜೆಟ್‌ ಗತಿಯೇನು? ಕುಮಾರಸ್ವಾಮಿ ಬಜೆಟ್ ಸಾಂವಿಧಾನಿಕವೇ?

ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್‌ ಡಿ ರೇವಣ್ಣ ಅವರು ‘೧೦ ದಿನಗಳಿಂದ ಸದನ ಸುಸೂತ್ರವಾಗಿ ನಡೆದಿದೆ. ಆಧಾರರಹಿತ ಆರೋಪ ಮಾಡಬೇಡಿ. ಗುರುವಾರ ಬಜೆಟ್‌ ಅಧಿವೇಶ ಮುಗಿಯಲಿದೆ. ವಿವಾದ ಸೃಷ್ಟಿಸಬೇಡಿ’ ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಮಾತನಾಡಿದ್ದ ಗೋವಿಂದ ಕಾರಜೋಳ ಅವರು ‘ಬಾಗಲಕೋಟೆಯ ಬಾದಾಮಿಯಿಂದ ಸಿದ್ದರಾಮಯ್ಯನವರು ಆಯ್ಕೆಯಾಗಿರುವುದು ನಮ್ಮ ಜಿಲ್ಲೆಗೆ ಶಾಪವಾಗಿ ಬಿಟ್ಟಿದೆ. ಬಜೆಟ್‌ನಲ್ಲಿ ಕುಮಾರಸ್ವಾಮಿ ಅವರು ನಮ್ಮ ಬಾಗಲಕೋಟೆ ಜಿಲ್ಲೆಗೆ ಏನನ್ನೂ ನೀಡಿಲ್ಲ. ಇದರಿಂದ ಜನರಿಗೆ ಮುಖ ತೋರಲಾರದ ಸ್ಥಿತಿ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುವಂತೆ ಹಲವು ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುವ ಮೂಲಕ ಕುಮಾರಸ್ವಾಮಿ-ಸಿದ್ದರಾಮಯ್ಯ ನಡುವಿನ ಮುಸುಗಿನ ಗುದ್ದಾಟದಲ್ಲಿ ರಾಜಕೀಯ ಲಾಭ ಎತ್ತುವ ಪ್ರಯತ್ನ ಮಾಡಿದರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More