ಒಟ್ಟಿಗೇ ಚುನಾವಣೆ ನಡೆಸಬೇಕು ಎಂಬ ಹೊಸ ರಾಜಕೀಯ ದಾಳದ ಆತಂಕ

ವರ್ಷಾಂತ್ಯದಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ ಮತ್ತು ಮಿಜೋರಾಂ ರಾಜ್ಯ ವಿಧಾನಸಭಾ ಚುನಾವಣೆ ಮತ್ತು ೨೦೧೯ ಮೇ ಹೊತ್ತಿಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಟ್ಟಿಗೇ ಚುನಾವಣೆ ನಡೆಸುವ ಧಾವಂತ ಕಾನೂನು ಆಯೋಗ ಮತ್ತು ಮೋದಿ ಅವರಲ್ಲಿರುವುದು ಕುತೂಹಲಕರ

ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಿಗೇ ನಡೆಸುವ ಬಗ್ಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಉತ್ಸುಕವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಂತೂ, ನೋಟು ಅಮಾನ್ಯೀಕರಣ, ಜಿಎಸ್‌ಟಿ ಬಳಿಕ, ತಮ್ಮ ಆಡಳಿತದ ಹೆಗ್ಗುರುತಾಗಿ ಒಟ್ಟಿಗೆ ಚುನಾವಣೆಯ ವಿಷಯವನ್ನೂ ಛಾಪು ಒತ್ತುವ ಉಮೇದಿನಲ್ಲಿದ್ದಾರೆ. ಅದರಲ್ಲೂ, ದೇಶದ ಜನಸಾಮಾನ್ಯರನ್ನು ಗೋಳು ಹೊಯ್ದುಕೊಂಡ ನೋಟು ಅಮಾನ್ಯೀಕರಣ ವ್ಯರ್ಥ ಕಸರತ್ತು ಮತ್ತು ಜಿಎಸ್ ಟಿ ಕೂಡ ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಈಗ ‘ಒಂದು ದೇಶ, ಒಂದು ಚುನಾವಣೆ’ ಘೋಷಣೆಯ ಒಟ್ಟಿಗೆ ಚುನಾವಣೆಯೊಂದೇ ಸದ್ಯದ ಭರವಸೆಯಾಗಿ ಉಳಿದಿದೆ.

ಆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಒತ್ತಾಸೆಯಂತೆ ಭಾರತೀಯ ಕಾನೂನು ಆಯೋಗ ಒಟ್ಟಿಗೆ ಚುನಾವಣೆ ನಡೆಸುವ ಕುರಿತು ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹ ಆರಂಭಿಸಿದೆ. ರಾಜಕೀಯ ಪಕ್ಷಗಳು ಮತ್ತು ಪರಿಣಿತರ ಅಭಿಪ್ರಾಯ ಆಧರಿಸಿ, ಕಾನೂನು ಆಯೋಗ ಕಾನೂನು ತಿದ್ದುಪಡಿಯ ಅಗತ್ಯ ಮತ್ತು ಕ್ರಮಗಳ ಕುರಿತ ತನ್ನ ವರದಿ ನೀಡಲಿದೆ. ಕಾನೂನು ಆಯೋಗದ ಅವಧಿ ಆಗಸ್ಟ್ ಅಂತ್ಯದ ಹೊತ್ತಿಗೆ ಕೊನೆಯಾಗುವುದರಿಂದ ಅತ್ಯಂತ ಜರೂರಾಗಿ ಅಭಿಪ್ರಾಯ ಸಂಗ್ರಹಣೆಯ ಪ್ರಕ್ರಿಯೆ ಮುಗಿಸಿ ವರದಿ ಸಲ್ಲಿಸಬೇಕಿದೆ. ಹಾಗಾಗಿ, ಎಲ್ಲಾ ಏಳು ರಾಷ್ಟ್ರೀಯ ಪಕ್ಷಗಳು ಮತ್ತು ೫೯ ರಾಜ್ಯಮಟ್ಟದ ರಾಜಕೀಯ ಪಕ್ಷಗಳಿಗೆ ಆಯೋಗ ನೋಟೀಸ್ ನೀಡಿ, ತಮ್ಮ ಅಭಿಪ್ರಾಯವನ್ನು ಖುದ್ದಾಗಿ, ಇಲ್ಲವೇ ಪತ್ರ ಮುಖೇನ ತಿಳಿಸಲು ಕೋರಿದೆ.

ಕಳೆದ ವಾರಾಂತ್ಯದ ಹೊತ್ತಿಗೆ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆಯನ್ನೂ ನಡೆಸಲಾಗಿದ್ದು, ಇದು ಅಂತಹ ಎರಡನೇ ಪ್ರಯತ್ನವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ ಉಳಿದ ಹಲವು ಪಕ್ಷಗಳು ಒಟ್ಟಿಗೆ ಚುನಾವಣೆ ನಡೆಸುವ ಬಗೆಗಿನ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿವೆ. ಬಿಜೆಪಿ ತಾನು ಒಟ್ಟಿಗೆ ಚುನಾವಣೆ ನಡೆಸುವುದರ ಪರವಿದ್ದು, ಪಕ್ಷದ ಕಾರ್ಯಕಾರಿಣಿಯಲ್ಲೇ ಈ ಹಿಂದೆ ಈ ಬಗ್ಗೆ ಮೊದಲ ಬಾರಿಗೆ ಚರ್ಚಿಸಲಾಗಿತ್ತು. ಆ ಬಳಿಕ ಪ್ರಧಾನಿ ಮೋದಿಯವರೂ ಹಲವು ಬಾರಿ ಈ ಬಗ್ಗೆ ಅತೀವ ಒಲವು ವ್ಯಕ್ತಪಡಿಸಿದ್ದಾರೆ. ಆದರೆ, ಈ ಕುರಿತು ತನ್ನ ವಿವರ ಅಭಿಪ್ರಾಯವನ್ನು ಅಧಿಕೃತವಾಗಿ ನೀಡಲು ಕಾಲಾವಕಾಶ ಬೇಕು ಎಂದು ಆಯೋಗಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ. ಆದರೆ, ಕಾಂಗ್ರೆಸ್ ಈ ಬಗ್ಗೆ ಇನ್ನೂ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಒಟ್ಟಿಗೇ ಚುನಾವಣೆ ನಡೆಸುವ ಬಗ್ಗೆ ತನ್ನ ಮಿತ್ರಪಕ್ಷಗಳು ಮತ್ತು ಪ್ರಮುಖ ಪ್ರತಿಪಕ್ಷಗಳ ಮುಖಂಡರೊಂದಿಗೆ ಚರ್ಚಿಸಿ, ತಾನು ತೆಗೆದುಕೊಳ್ಳಬೇಕಾದ ನಿರ್ಧಾರವನ್ನು ಅಂತಿಮಗೊಳಿಸುವುದಾಗಿ ಹೇಳಿರುವ ಆ ಪಕ್ಷ, ಕಾಲಾವಕಾಶ ನೀಡುವಂತೆ ಆಯೋಗಕ್ಕೆ ಕೋರಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ ಮತ್ತು ಮಿಜೋರಾಂ ರಾಜ್ಯ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಮತ್ತು ಮುಂದಿನ ಮೇ ಹೊತ್ತಿಗೆ ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಕಾನೂನು ಆಯೋಗ ಮತ್ತು ಮೋದಿಯವರ ಈ ಒಟ್ಟಿಗೇ ಚುನಾವಣೆ ನಡೆಸುವ ಧಾವಂತ ಕುತೂಹಲ ಹುಟ್ಟಿಸಿದೆ. ಈ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಬಹುತೇಕ ಆಡಳಿತ ವಿರೋಧಿ ಅಲೆಯ ಹೊಡೆತಕ್ಕೆ ಸಿಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳು ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರಗಳು ಜನಪ್ರಿಯತೆ ಕಳೆದುಕೊಂಡಿರುವುದನ್ನು ಹೇಳಿವೆ. ಆ ಹಿನ್ನೆಲೆಯಲ್ಲಿ ಪ್ರಮುಖ ರಾಜ್ಯಗಳು ತನ್ನ ಕೈತಪ್ಪುವುದನ್ನು ತಡೆಯುವ ಉದ್ದೇಶದಿಂದ ಆ ರಾಜ್ಯಗಳ ಚುನಾವಣೆಯನ್ನು ಕೆಲವು ತಿಂಗಳ ಕಾಲ ಮುಂದೂಡಿ, ೨೦೧೯ರ ಲೋಕಸಭಾ ಚುನಾವಣೆಯೊಂದಿಗೇ ನಡೆಸಲಾಗುತ್ತದೆಯೇ? ಅಥವಾ ಈ ರಾಜ್ಯಗಳ ಚುನಾವಣೆಯ ಹೊತ್ತಿಗೇ ಲೋಕಸಭಾ ಚುನಾವಣೆಯನ್ನು ಅವಧಿಗೆ ಮುನ್ನವೇ ನಡೆಸುತ್ತಾರೆಯೇ ಎಂಬುದು ಆ ಕುತೂಹಲ.

‘ಒಂದು ದೇಶ, ಒಂದು ಚುನಾವಣೆ’ ಎಂಬ ಘೋಷಣೆ ಮೋದಿಯವರ ಮಾತಿನಲ್ಲಿ ಈಗ ಮತ್ತೆಮತ್ತೆ ಮಾರ್ದನಿಸತೊಡಗಿದೆ. ತನ್ನದೇ ಕಾರಣಗಳಿಂದಾಗಿ ಮೋದಿಯವರಷ್ಟೇ ಅವಸರದಲ್ಲಿ ಕಾನೂನ ಆಯೋಗ ಕೂಡ ಇದ್ದಂತಿದೆ. ಆದರೆ, ಬಿಜೆಪಿಯನ್ನು ಹೊರತುಪಡಿಸಿ ದೇಶದ ಉಳಿದ ಯಾವ ರಾಜಕೀಯ ಪಕ್ಷಗಳಿಗೂ ಅಂತಹ ಧಾವಂತವೇನೂ ಇದ್ದಂತಿಲ್ಲ. ಹಾಗಾಗಿ, ಕಾನೂನು ಆಯೋಗದ ಸಮಾಲೋಚನಾ ಸಭೆಗಳಿಗೆ ಹಲವು ಪಕ್ಷಗಳು ಹಾಜರಾಗಿಲ್ಲ. ಮತ್ತೆ ಕೆಲವು ಪಕ್ಷಗಳು ಪತ್ರ ಬರೆದು, ತಮ್ಮ ಅಭಿಪ್ರಾಯ ತಿಳಿಸಿದ್ದು, ಸಭೆಗೆ ಖುದ್ದು ಹಾಜರಾಗುವ ಜರೂರು ಇಲ್ಲ ಎಂದೂ ಹೇಳಿವೆ.

ಕಾಂಗ್ರೆಸ್, ಸಿಪಿಐ(ಎಂ), ಟಿಡಿಪಿ, ಎಐಎಂಐಎಂ, ಜೆಡಿಯು ಸೇರಿದಂತೆ ಕೆಲವು ಪಕ್ಷಗಳು ಒಟ್ಟಿಗೇ ಚುನಾವಣೆ ನಡೆಸುವುದು ಹಣಕಾಸು, ಸಿಬ್ಬಂದಿ ಹೊರೆಯಂತಹ ಸಂಗತಿಗಳನ್ನು ಹೊರತುಪಡಿಸಿ, ಒಟ್ಟಿಗೇ ಚುನಾವಣೆ ನಡೆಸುವುದು ಒಟ್ಟಾರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೆಟ್ಟು ಕೊಡಲಿದೆ. ರಾಷ್ಟ್ರ ಮತ್ತು ರಾಜ್ಯಮಟ್ಟದ ಚುನಾವಣಾ ವಿಷಯಗಳು ಬೇರೆಬೇರೆ ಇರುತ್ತವೆ. ಮತದಾರರ ಆದ್ಯತೆಗಳೂ ಬೇರೆ ಇರುತ್ತವೆ. ಆದರೆ, ಒಟ್ಟಿಗೇ ಚುನಾವಣೆ ನಡೆಸಿದರೆ, ಮತದಾರನ ಅಂತಹ ಆಯ್ಕೆಗಳನ್ನು ಕಿತ್ತುಕೊಂಡಂತಾಗುತ್ತದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಪ್ರಭಾವ ರಾಜ್ಯದ ಚುನಾವಣೆಗಳಲ್ಲೂ ಕೆಲಸ ಮಾಡಲು ಅವಕಾಶವಾಗುತ್ತದೆ ಮತ್ತು ಅದರಿಂದ ಮತದಾರರು ಪ್ರಭಾವಿತರಾಗುತ್ತಾರೆ. ಆ ಮೂಲಕ ರಾಜ್ಯದ ಚುನಾವಣೆಯನ್ನು ಸರ್ಕಾರಗಳು ಪ್ರಭಾವಿಸಲು ಅವಕಾಶವಾಗುತ್ತದೆ. ಮತದಾರರ ಮುಕ್ತ ಆಯ್ಕೆಯ ಹಕ್ಕನ್ನು ಪರೋಕ್ಷವಾಗಿ ಕಸಿದುಕೊಳ್ಳುವ ಈ ವ್ಯವಸ್ಥೆ ಒಟ್ಟಾರೆ ಪ್ರಜಾಪ್ರಭುತ್ವದ ಆಶಯಕ್ಕೇ ವಿರುದ್ಧ ಎಂದು ಅಭಿಪ್ರಾಯಪಟ್ಟಿವೆ.

ಆದರೆ, ಈ ಪ್ರಸ್ತಾವನೆಯನ್ನು ಬೆಂಬಲಿಸಿರುವ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ, ಎಐಎಡಿಎಂಕೆ, ಸಮಾಜವಾದಿ ಪಕ್ಷ ಮುಂತಾದ ಕೆಲವು ಪಕ್ಷಗಳು, ಪ್ರಮುಖವಾಗಿ ವರ್ಷವಿಡೀ ಒಂದಿಲ್ಲೊಂದು ಚುನಾವಣೆ ನಡೆಯುವುದರಿಂದ ಆಗುವ ನಷ್ಟ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಆಗುವ ಹಿನ್ನಡೆಯನ್ನೇ ಪ್ರಮುಖವಾಗಿ ಪ್ರಸ್ತಾಪಿಸಿವೆ. ಅಲ್ಲದೆ, ಚುನಾವಣಾ ವೆಚ್ಚದ ಹೊರೆ ಹಾಗೂ ಶಿಕ್ಷಕರು ಸೇರಿದಂತೆ ಸರ್ಕಾರಿ ಸಿಬ್ಬಂದಿಗೆ ಆಗುವ ಹೆಚ್ಚುವರಿ ಕರ್ತವ್ಯದ ಹೊರೆಯನ್ನೂ ಮುಂದಿಟ್ಟು, ಒಟ್ಟಿಗೇ ಚುನಾವಣೆ ನಡೆಸುವುದು ಒಟ್ಟಾರೆ ದೇಶದ ಪ್ರಗತಿಗೆ ಪೂರಕ ಎಂಬ ಅಭಿಪ್ರಾಯ ವ್ಯಕ್ತಪಡಿಸಿವೆ.

ಆದರೆ, ಪ್ರಸ್ತಾವನೆಯ ವಿರುದ್ಧ ಇರುವ ಟಿಡಿಪಿ ಮತ್ತು ಜೆಡಿಯು, ಈ ಹಿಂದೆ ಎನ್‌ಡಿಎ ಮೈತ್ರಿಕೂಟದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾಗ, ಈ ಪ್ರಸ್ತಾವನೆಯ ಪರವಿದ್ದವು ಮತ್ತು ಅದನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದವು ಎಂಬುದನ್ನು ವಾಸ್ತವ. ಇದೀಗ ಎನ್‌ಡಿಎಯೊಂದಿಗೆ ಸಂಬಂಧ ಹದಗೆಟ್ಟ ಬಳಿಕ ಅವುಗಳ ವರಸೆ ಬದಲಾಗಿದೆ. ಹಾಗಾಗಿ, ಈಗ ಅವರಿಗೆ ಇದು, ದುರ್ಬಲ ಮತ್ತು ಪ್ರಾದೇಶಿಕ ಪಕ್ಷಗಳನ್ನು ತುಳಿದು, ತನ್ನ ಏಕಚಕ್ರಾಧಿಪತ್ಯ ಸ್ಥಾಪಿಸುವ ಬಿಜೆಪಿಯ ತಂತ್ರಗಾರಿಕೆಯ ಭಾಗವಾಗಿ ಕಾಣುತ್ತಿದೆ. ಹಾಗೇ, ಪ್ರಸ್ತಾವನೆಯ ಪರವಿರುವ, ಸಮಾಜವಾದಿ ಪಕ್ಷ ಮತ್ತು ಎಐಎಡಿಎಂಕೆ ಪಕ್ಷಗಳು ಕೂಡ ಪ್ರಸ್ತಾವನೆಯನ್ನು ಷರತ್ತಿಗೊಳಪಟ್ಟು ಬೆಂಬಲಿಸಿವೆ. ಉಪ ಚುನಾವಣೆಗಳ ಗೆಲುವು ಮತ್ತು ಬಿಜೆಪಿ ಆದಿತ್ಯನಾಥ ಸರ್ಕಾರದ ಕುಸಿಯುತ್ತಿರುವ ಜನಪ್ರಿಯತೆಯ ಹಿನ್ನೆಲೆಯಲ್ಲಿ ಉಮೇದಿನಲ್ಲಿರುವ ಸಮಾಜವಾದಿ ಪಕ್ಷ ೨೦೧೯ರ ಲೋಕಸಭಾ ಚುನಾವಣೆಯಿಂದಲೇ ಒಟ್ಟಿಗೇ ಚುನಾವಣೆ ಪದ್ಧತಿ ಜಾರಿಗೆ ಬರಲಿ ಎಂದಿದೆ. ಆದರೆ, ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಎಐಎಡಿಎಂಕೆ ಮಾತ್ರ, ೨೦೨೨ರವರೆಗೆ ಜಾರಿ ಬೇಡ ಎಂಬ ಷರತ್ತಿನ ಮೇಲೆ ಅದು ಪ್ರಸ್ತಾವನೆಯ ಪರ ಇರುವುದಾಗಿ ಹೇಳಿದೆ.

ಆದರೆ, ಈ ವಿಷಯದಲ್ಲಿ ರಾಜಕೀಯ ಲಾಭ ನಷ್ಟದ ಈ ಅಭಿಪ್ರಾಯಗಳು ಮತ್ತು ಆತಂಕಗಳನ್ನು ಮೀರಿಯೂ ಕೆಲವು ಸಂಗತಿಗಳು ಗಂಭೀರ ಚಿಂತನೆಗೆ ಹಚ್ಚುವಂತಹವು ಇವೆ. ಆ ಪೈಕಿ ಮೊದಲನೆಯದು; ಬಹುಪಕ್ಷ ಪದ್ಧತಿಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೀಳಬಹುದಾದ ಪೆಟ್ಟು. ಸಾಮಾನ್ಯವಾಗಿ ನಮ್ಮಲ್ಲಿ ಪ್ರತಿ ರಾಜ್ಯದಲ್ಲಿಯೂ ತನ್ನದೇ ಪ್ರಭಾವ ಹೊಂದಿರುವ ರಾಜಕೀಯ ಪಕ್ಷಗಳಿವೆ. ಅದರಲ್ಲೂ ಕೆಲವು ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಸ್ಥಳೀಯ, ಪ್ರಾದೇಶಿಕ ಪಕ್ಷಗಳೇ ಹೆಚ್ಚು ಪ್ರಬಲವಾಗಿವೆ. ಇಂತಹ ಪಕ್ಷಗಳ ಪ್ರಾಬಲ್ಯಕ್ಕೆ ಪ್ರಮುಖ ಕಾರಣವೇ ಆ ಪಕ್ಷಗಳು, ರಾಷ್ಟ್ರೀಯ ಸಂಗತಿಗಳ ಬದಲಾಗಿ, ಹೆಚ್ಚು ಜನಪರವಾದ ಸ್ಥಳೀಯ ವಿಷಯಗಳನ್ನು ಗುರಿಯಾಗಿರಿಸಿಕೊಂಡು ರಾಜಕಾರಣ ಮತ್ತು ಆಡಳಿತ ನೀತಿಗಳನ್ನು ನಿರ್ಧರಿಸುತ್ತವೆ ಎಂಬುದು. ಆದರೆ, ಒಂದು ವೇಳೆ ಒಟ್ಟಿಗೇ ಚುನಾವಣೆ ಎಂಬುದು ಜಾರಿಯಾದರೆ, ಇಂತಹ ಪಕ್ಷಗಳಿಗೆ ಬುನಾದಿಯಾದ ಪ್ರಾದೇಶಿಕ ರಾಜಕಾರಣವೇ ಅಪ್ರಸ್ತುತವಾಗಲಿದೆ. ಅಂತಿಮವಾಗಿ ಅದು ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೇ ಸಂಚಕಾರ ತರಲಿದೆ ಎಂಬುದು ಈಗ ಪ್ರಮುಖವಾಗಿ ಕೇಳಬರುತ್ತಿರುವ ಆತಂಕ.

ಇದನ್ನೂ ಓದಿ : ಮುಂದಿನ ನೂರೇ ದಿನಗಳಲ್ಲಿ ಲೋಕಸಭಾ ಚುನಾವಣೆ ಬರಬಹುದೇ?

ಆ ಹಿನ್ನೆಲೆಯಲ್ಲಿ ನೀತಿ ಸಂಹಿತಿಗಳ ಜಾರಿಯಿಂದಾಗಿ ಆಗುವ ಅಭಿವೃದ್ಧಿ ಹಿನ್ನಡೆ, ವೆಚ್ಚ ಮತ್ತು ಸಿಬ್ಬಂದಿ ಹೊರೆಯಂತಹ ಸಂಗತಿಗಳನ್ನು ಮುಂದಿಟ್ಟುಕೊಂಡು, ಬಿಜೆಪಿ ತನಗೆ ದೊಡ್ಡ ಸವಾಲಾಗಿರುವ ಪ್ರಾದೇಶಿಕ ಪಕ್ಷಗಳನ್ನು ಬದಿಗೊತ್ತುವ ರಾಜಕೀಯ ತಂತ್ರವಾಗಿ ಒಟ್ಟಿಗೇ ಚುನಾವಣೆಯನ್ನು ಪ್ರಬಲವಾಗಿ ಸಮರ್ಥಿಸುತ್ತಿದೆ ಎಂಬ ಆತಂಕ ಕೂಡ ಹಲವು ರಾಜಕೀಯ ಪಕ್ಷಗಳದ್ದು. ಸದ್ಯದ ಬಿಜೆಪಿಯ ಅಧಿಕಾರದ ಹಪಾಹಪಿ ಮತ್ತು ಪ್ರತಿಪಕ್ಷಗಳನ್ನು ವ್ಯವಸ್ಥಿತವಾಗಿ ಮುಗಿಸುವ ತಂತ್ರಗಾರಿಕೆಗಳ ಹಿನ್ನೆಲೆಯಲ್ಲಿ ನೋಡಿದಾಗ, ಪ್ರತಿಪಕ್ಷಗಳ ಇಂತಹ ಆತಂಕದಲ್ಲಿ ಹುರುಳಿಲ್ಲ ಎನಿಸದಿರದು. ಹಾಗಾಗಿ, ಮುಂದಿನ ದಿನಗಳ ಕಾನೂನು ಆಯೋಗದ ಇನ್ನಷ್ಟು ಸಮಾಲೋಚನಾ ಸಭೆಗಳು ಮತ್ತು ಅದರ ಅಂತಿಮ ವರದಿ ಸದ್ಯ ಕುತೂಹಲ ಹುಟ್ಟಿಸಿದೆ.

ಆ ಹಿನ್ನೆಲೆಯಲ್ಲಿ, ‘ಅಘೋಷಿತ ತುರ್ತುಪರಿಸ್ಥಿತಿ’ ‘ಏಕಪಕ್ಷೀಯ ಆಡಳಿತದತ್ತ ಭಾರತ’, “ಕಾಂಗ್ರೆಸ್ ಮುಕ್ತ ಭಾರತ”, “ಇಡೀ ದೇಶದ ವ್ಯವಸ್ಥೆ ಇಬ್ಬರು ವ್ಯಕ್ತಿಗಳ ಕಪಿಮುಷ್ಟಿಯಲ್ಲಿದೆ”, ಎಂಬಂತಹ ಆತಂಕದ ಹೇಳಿಕೆಗಳು ಹೆಚ್ಚು ಕೇಳಿಬರುತ್ತಿರುವ ಹೊತ್ತಿನಲ್ಲಿ ರಾಷ್ಟ್ರೀಯ ಮುಖ್ಯವಾಹಿನಿಯ ಆಡಳಿತದ ದನಿಯನ್ನೇ ರಾಜ್ಯಗಳಿಗೂ ವಿಸ್ತರಿಸುವ, ಅಲ್ಲಿನ ಮತದಾರ ಮತ್ತು ಚುನಾವಣೆಗಳನ್ನು ಪ್ರಭಾವಿಸುವ ಉದ್ದೇಶವೇ ಎದ್ದುಕಾಣುತ್ತಿರುವ ಒಟ್ಟಿಗೇ ಚುನಾವಣೆಯ ಪ್ರಸ್ತಾವನೆಗೆ ರಾಜಕೀಯ ನಾಯಕತ್ವಗಳು ಅಂತಿಮವಾಗಿ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಕಾದುನೋಡಬೇಕಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More