ಯೋಗೇಂದ್ರ ಯಾದವ್‌ ಸೋದರಿ ಆಸ್ಪತ್ರೆ ಮೇಲಿನ ಐಟಿ ದಾಳಿಗೆ ಷಡ್ಯಂತ್ರ ಕಾರಣವೇ?

ಸ್ವರಾಜ್‌ ಇಂಡಿಯಾ ಪಕ್ಷದ ಸಂಸ್ಥಾಪಕ, ಹೋರಾಟಗಾರ ಯೋಗೇಂದ್ರ ಯಾದವ್ ಅವರ ಸಹೋದರಿ ಹರ್ಯಾಣದ ರೆವಾರಿಯಾದಲ್ಲಿ ನಡೆಸುತ್ತಿರುವ ಆಸ್ಪತ್ರೆ ಮೇಲೆ ಬುಧವಾರ (ಜು.೧೧) ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸ ಒದಗಿಸಿದೆ

ಸ್ವರಾಜ್‌ ಇಂಡಿಯಾ ಪಕ್ಷದ ಸಂಸ್ಥಾಪಕ, ಹೋರಾಟಗಾರ ಯೋಗೇಂದ್ರ ಯಾದವ್ ಅವರ ಸಹೋದರಿ ಹರ್ಯಾಣದ ರೆವಾರಿಯಾದಲ್ಲಿ ನಡೆಸುತ್ತಿರುವ ಆಸ್ಪತ್ರೆಯ ಮೇಲೆ ಬುಧವಾರ (ಜು.೧೧) ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ತಪಾಸಣೆ ನಡೆಸುತ್ತಿರುವುದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸ ಒದಗಿಸಿದೆ.

ರೈತರ ಬೆಳೆಗೆ ಕನಿಷ್ಠ ಬೆಂಬಲ ನೀಡಬೇಕೆನ್ನುವ ಆಗ್ರಹ ಮತ್ತು ಮದ್ಯದ ಅಂಗಡಿಗಳ ವಿರುದ್ಧ ಯೋಗೇಂದ್ರ ಯಾದವ್‌ ೯ ದಿನದ ರೈತ ಪಾದಯಾತ್ರೆ ಆರಂಭಿಸಿದ ಎರಡು ದಿನದ ಅಂತರದಲ್ಲೇ ಈ ಐಟಿ ದಾಳಿ ನಡೆದಿರುವುದು ವಿವಾದವನ್ನು ಸೃಷ್ಟಿಸಿದೆ. ರಾಜಕೀಯ ವೈರಿಗಳನ್ನು ಹತ್ತಿಕ್ಕಲು ಅಥವಾ ಮಣಿಸಲು ಐಟಿ, ಇಡಿಯಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಯೋಗೇಂದ್ರ ಯಾದವ್‌ ವಿಷಯದಲ್ಲೂ ಅದೇ ‘ತಂತ್ರ’ ಹೆಣೆದಿದೆಯೇ ಎನ್ನುವ ಅನುಮಾನ ಮೂಡಿದೆ. “ಕೇಂದ್ರ ಸರ್ಕಾರ ನನ್ನನ್ನು ಬೆದರಿಸಲು ಕುಟುಂಬವನ್ನು ಗುರಿ ಮಾಡಿದೆ,’’ ಎಂದು ಯಾದವ್ ನೇರ ಆರೋಪ ಮಾಡಿದ್ದಾರೆ.

“ದೆಹಲಿಯಿಂದ ಬಂದಿದ್ದ ನೂರಕ್ಕಿಂತ ಹೆಚ್ಚು ಮಂದಿ ಬೆಳಗ್ಗೆ ೧೧ಕ್ಕೆ ಆಸ್ಪತ್ರೆ ಮೇಲೆ ದಾಳಿ ನಡೆಸಿ,ನನ್ನ ಸಹೋದರಿ, ಸಹೋದರ ಮತ್ತು ಸೋದರಳಿಯ ಸಹಿತ ಎಲ್ಲ ವೈದ್ಯರನ್ನು ಕೋಣೆಗಳಲ್ಲಿ ಬಂಧಿಸಿದರು. ನವಜಾತ ಶಿಶುಗಳಿದ್ದ ಐಸಿಯು ಸಹಿತ ಇಡೀ ಆಸ್ಪತ್ರೆಗೆ ಬೀಗ ಮೊಹರು ಹಾಕಿದರು. ಇದು ನನ್ನನ್ನು ಬೆದರಿಸಲು ಮಾಡಿದ ತಂತ್ರ ಎನ್ನುವುದು ಸ್ಪಷ್ಟ.ಮೋದಿಜಿ ನೀವು ನನ್ನನ್ನು ಮೌನಗೊಳಿಸಲು ಸಾಧ್ಯವಿಲ್ಲ,’’ ಎಂದು ಯಾದವ್‌ ಟ್ವೀಟ್ ಮಾಡಿದರು. ಸರಣಿ ಟ್ವೀಟ್ ಮೂಲಕ ಅವರು ವ್ಯಕ್ತಪಡಿಸಿದ ಟೀಕೆ, ಆಕ್ಷೇಪಗಳ ಕೆಲವು ಅಂಶಗಳು ಹೀಗಿದ್ದವು:

  • “ದಯವಿಟ್ಟು ನನ್ನ ಮನೆಯನ್ನು ತಪಾಸಣೆ ಮಾಡಿ. ನನ್ನ ಕುಟುಂಬವನ್ನು ಯಾಕೆ ಗುರಿ ಮಾಡುತ್ತಿದ್ದೀರಿ.’’
  • "ಇದು ಕುತೂಹಲಕಾರಿ, ಕಾಕತಾಳೀಯವೇನಲ್ಲ. ೪೮ ಗಂಟೆಯೊಳಗೆ ಅವರು ಯಾವುದೇ ಸ್ಥಳವನ್ನು ಹುಡುಕಿ, ದಾಳಿ ಮಾಡಬಲ್ಲರು.ಇದು ನಿಶ್ಚಿತವಾಗಿ ತುರ್ತು ಪರಿಸ್ಥಿತಿ. ತಮ್ಮ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಗಳನ್ನು ಬಳಸಿಕೊಳ್ಳುತ್ತಿದೆ.’’
  • “ಸಹೋದರಿಯನ್ನು ಸಂಪರ್ಕಿಸುವುದು ಸಾಧ್ಯವಾಗುತ್ತಿಲ್ಲ.ಆಸ್ಪತ್ರೆಯ ಒಳ ಹೋಗಲು,ಹೊರ ಬರಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಶೋಧ ರಾತ್ರಿಯಿಡೀ ಮುಂದುವರಿಯಬಹುದು. ಅವರು ಏನನ್ನಾದರೂ ‘ಬೇಯಿಸಲು’ ಸಮಯ ತೆಗೆದುಕೊಳ್ಳುತ್ತಿರುವಂತೆ ಕಾಣುತ್ತಿದೆ.’’ಮಾತ್ರವಲ್ಲ, “ರೈತರ ವಿಷಯದಲ್ಲಿ ಪ್ರಧಾನಿ ಮೋದಿ ತುಂಬಾ ಆತಂಕಿತರಾಗಿದ್ದಾರೆ.ನಾವು ರೈತ ಧ್ವನಿಯ ಭಾಗವಾಗಿರುವುದರಿಂದ ದಾಳಿಗೆ ಗುರಿಯಾಗುತ್ತಿದ್ದೇವೆ,’’ಎಂದೂ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಯಾದವ್‌ ಟ್ವೀಟ್‌ ಗೆ ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.ಹಲವರು ಕೇಂದ್ರದ ದ್ವೇಷ ರಾಜಕಾರಣವನ್ನು ಕಟು ಮಾತುಗಳಲ್ಲಿ ಖಂಡಿಸಿದ್ದು, ಯಾದವ್‌ ಬೆಂಬಲಕ್ಕೆ ನಿಂತಿದ್ದಾರೆ. “ಕೇಂದ್ರ ಏನೇ ತಂತ್ರ ಮಾಡಿದರೂ ರೈತ ಹೋರಾಟ ನಿಲ್ಲುವುದಿಲ್ಲ,’’ಎಂದು ಯಾದವ್‌ ಸಂಗಾತಿಗಳು ಎಚ್ಚರಿಸಿದ್ದಾರೆ.
  • “ಭಾರತದ ಧೈರ್ಯಶಾಲಿ ವಿದ್ವಾಂಸ ಮತ್ತು ಹೋರಾಟಗಾರನ ಕುಟುಂಬದ ವಿರುದ್ಧ ರಾಜ್ಯಶಕ್ತಿಯನ್ನು ದುರುಪಯೋಗ ಮಾಡಿಕೊಂಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ.ಎಲ್ಲ ಪ್ರಜಾಪ್ರಭುತ್ವವಾದಿಗಳು ಇದನ್ನು ಪಕ್ಷಾತೀತವಾಗಿ ಖಂಡಿಸಬೇಕು,’’ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ಟ್ವೀಟರ್‌ ಪ್ರತಿಕ್ರಿಯೆ ನೀಡಿದ್ದಾರೆ.
  • “ಯಾದವ್‌ ದೇಶದಲ್ಲಿ ರೈತ ಚಳವಳಿಯನ್ನು ಮುನ್ನಡೆಸುವ ಮತ್ತು ಸಂಘಟಿಸುವ ಮೂಲಕ ಕೇಂದ್ರ ಸರ್ಕಾರವನ್ನು ಅಲುಗಾಡಿಸಿದ್ದಾರೆ. ಅದಕ್ಕಾಗಿ ಕೇಂದ್ರವು ಅವರ ಸಹೋದರಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂ ಮೇಲೆ ಐಟಿ ದಾಳಿ ನಡೆಸಿದೆ. ಮೋದಿಯ ಕಡು ಹಗೆತನಕ್ಕೆ ಮಿತಿಯೆ ಇಲ್ಲವಾಗಿದೆ,’’ ಎಂದು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಛೇಡಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಭ್ರಷ್ಟ ಎಂದ ಯೋಗೇಂದ್ರ ಯಾದವ್‌ ಬೆಂಬಲ ತಿರಸ್ಕರಿಸಲ್ಲ ಎಂದದ್ದು ನೈತಿಕವೇ?

ಆದರೆ,’ಆಮ್‌ ಆದ್ಮಿ ಪಕ್ಷ’ದ ಬಗ್ಗೆ ಒಲವಿರುವ ಕೆಲವರು ಯಾದವ್‌ ಅವರ ಕಾಲೆಳೆಯುವ ಅವಕಾಶವನ್ನು ತಪ್ಪಿಸಿಕೊಂಡಿಲ್ಲ. “ಆಸ್ಪತ್ರೆ ವ್ಯವಹಾರದಲ್ಲಿ ಎಲ್ಲವೂ ಸರಿ ಇದ್ದಲ್ಲಿ, ಐಟಿ ದಾಳಿ ನಡೆಸಿದ ಮಾತ್ರಕ್ಕೆ ಹೀಗೆ ಕೂಗಾಡುವುದೇಕೆ,’’ಎಂದೂ ಕೆಲವರು ಪ್ರಶ್ನಿಸಿದ್ದಾರೆ.

“ದೆಹಲಿ ಜನರನ್ನು,ಇಲ್ಲಿನ ಶಾಸಕರು, ಮಂತ್ರಿಗಳ ಕುಟುಂಬವನ್ನು ಮೋದಿ ಸರ್ಕಾರ ಪೀಡಿಸುತ್ತಿದ್ದಾಗ ಯಾದವ್‌ ಮತ್ತವರ ಕಂಪನಿ ಸಂತೋಷ ಪಡುತ್ತಿತ್ತು. ಎಲ್ಲದಕ್ಕೂ ಅರವಿಂದ ಕೇಜ್ರಿವಾಲ್ ತಪ್ಪುಗಳೇ ಕಾರಣ ಎಂದು ಅವರು ಆಪಾದಿಸುತ್ತಿದ್ದರು. ಈಗ ಅವರದೇ ಸ್ವಂತ ಕುಟುಂಬ ಮೋದಿ ಆಡಳಿತದ ರುಚಿ ಅನುಭವಿಸುವಂತಾಗಿದೆ,’’ಎಂದು ಒಬ್ಬರು ಕುಟುಕಿದ್ದಾರೆ.

ಬಿಜೆಪಿಯ ಮುಖಂಡರು ಯಾದವ್ ಆರೋಪವನ್ನು ತಿರಸ್ಕರಿಸಿದ್ದಾರೆ. “ತೆರಿಗೆ ಇಲಾಖೆ ತನ್ನ ಕೆಲಸವನ್ನು ಮಾಡಿದೆ. ದಾಳಿ ಯೋಗೇಂದ್ರ ಯಾದವ್ ಪಾದಯಾತ್ರೆಗೆ ಸಂಬಂಧಿಸಿದ್ದಲ್ಲ" ಎಂದು ಬಿಜೆಪಿ ಮುಖಂಡ ಜವಾಹರ್ ಯಾದವ್ ಪ್ರತಿಕ್ರಿಯಿಸಿದ್ದಾರೆ. ಆದರೆ, ಕೆಲವು ಕಾಂಗ್ರೆಸ್ ಮುಖಂಡರು ಯಾದವ್‌ ಬೆಂಬಲಕ್ಕೆ ನಿಂತಿದ್ದಾರೆ. “ರೆವಾರಿಯಾದಲ್ಲಿ ನಿಮ್ಮ ಕುಟುಂಬದ ಬಗ್ಗೆ ಯಾವತ್ತೂ ಒಳ್ಳೆಯದನ್ನೇ ಕೇಳಿದ್ದೇನೆ.ಇಂಥದು ಕೇಳಬಾರದಿತ್ತು,’’ ಎಂದಿದ್ದಾರೆ ಹರ್ಯಾಣ ಕಾಂಗ್ರೆಸ್ ಮುಖಂಡ ದೀಪೇಂದ್ರ ಹೂಡಾ.

ದಾಳಿಯ ಮೊದಲ ದಿನ ಆರೋಪ, ಪ್ರತ್ಯಾರೋಪಗಳು ರಾರಾಜಿಸಿದವೇ ಹೊರತು ಯಾವುದೇ ಅಧಿಕೃತ ಹೇಳಿಕೆ ಪ್ರಕಟವಾಗಲಿಲ್ಲ. ಯಾದವ್‌ ಆರಂಭಿಸಿದ ಪಾದಯಾತ್ರೆಯೇ ಆಸ್ಪತ್ರೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಲು ಕಾರಣ ಎಂದು ಆರೋಪಿಸಲಾಗಿದೆಯಾದರೂ,ಅದಷ್ಟೆ ಕಾರಣವೆಂದು ಈ ಸಮಯದಲ್ಲಿ ನಿರ್ಣಯಿಸಲಾಗದು. ಯಾದವ್‌ ಸಂಬಂಧಿಗಳು ನಡೆಸುತ್ತಿರುವ ಆಸ್ಪತ್ರೆಯು ಐಟಿ, ಇಡಿ ಸಹಿತ ಯಾವುದೇ ತನಿಖಾ ಸಂಸ್ಥೆಗಳ ತನಿಖೆಯಿಂದ ಮುಕ್ತವಾದುದೇನಲ್ಲ. ಐಟಿ ದಾಳಿ ನಡೆದ ಮಾತ್ರಕ್ಕೆ ಏನೋ ಆಗಿಬಿಡುತ್ತದೆಂದೂ ಭಾವಿಸಬೇಕಿಲ್ಲ. ಆಸ್ಪತ್ರೆಯ ಲೆಕ್ಕಾಚಾರ ಸಮರ್ಪಕವಾಗಿದ್ದರೆ ಯಾರು ಏನೇ ಷಡ್ಯಂತ್ರ ಹೆಣೆದರೂ ಏನೂ ಮಾಡಲಾಗದು. ಈ ಆಸ್ಪತ್ರೆ ವಿಷಯದಲ್ಲಿ ಏನಾಗಿದೆ ಎನ್ನುವುದು ದೆಹಲಿಯ “ಐಟಿ ಪಡೆ’’ ನಡೆಸುತ್ತಿರುವ ಜಾಲಾಡುವಿಕೆ ಮುಗಿದ ಬಳಿಕವಷ್ಟೆ ತಿಳಿಯಬೇಕು.

ತೆರಿಗೆ ವಂಚನೆ ಸಂಬಂಧ ಗಟ್ಟಿ ಸಂಶಯಗಳಿಲ್ಲದೆ ದಾಳಿ ನಡೆಸಿದ್ದರೆ ತನಿಖೆಯ ಬಳಿಕ ಐಟಿ ‘ಬರಿ ಗೈ’ಯಲ್ಲಿ ತೆರಳಬೇಕಾಗುತ್ತದೆ. ಆಗ,ಯಾದವ್‌ ಚಳವಳಿಯನ್ನು ಹತ್ತಿಕ್ಕಲಿಕ್ಕೇ ಕೇಂದ್ರ ಐಟಿಯನ್ನು ಬಳಸಿಕೊಂಡಿತೆಂದು ಹೇಳಬಹುದು. ಅದೇ,ತೆರಿಗೆ ವಂಚನೆಗೆ ಪುರಾವೆಗಳು ಸಿಕ್ಕಲ್ಲಿ ಈಗ ಹುಯಿಲೆಬ್ಬಿಸಿರುವ ಯಾದವ್ ನೈತಿಕವಾಗಿ‌ “ಬಾರೀ ಬೆಲೆ’’ಯನ್ನೇ ತೆರಬೇಕಾಗುತ್ತದೆ. ಸಂಬಂಧಿಕರ ಆಸ್ಪತ್ರೆ ಮೇಲೆ ದಾಳಿ ನಡೆಸುವ ಮೂಲಕ ಯಾದವ್‌ ಬಾಯಿ ಮುಚ್ಚಿಸಲು ಕೇಂದ್ರ ಸರ್ಕಾರ ಯತ್ನಿಸಿದ್ದರೆ ಅದು ಎಷ್ಟು ತಪ್ಪೋ, ಸಂಬಂಧಿಕರ “ಅಕ್ರಮ’’ವನ್ನು ಮನ್ನಿಸಿ, ದಾಳಿಗೆ ದ್ವೇಷ ರಾಜಕೀಯದ ಆರೋಪ ಹೊರಿಸುವುದೂ ಅಷ್ಟೇ ತಪ್ಪು. ಹಿಂದಿನ ಹಲವು “ಐಟಿ ದಾಳಿ’’ಗಳು ನಡೆದ ಸಂದರ್ಭಗಳಂತೆಯೇ ಈಗಲೂ ಕೇಂದ್ರ ಸರ್ಕಾರ ‘ದಿವ್ಯಮೌನ’ ವಹಿಸಿದೆ.ಯಾವುದೇ ಸಂಸ್ಥೆಗಳು ನೀಡುವ ಲೆಕ್ಕ-ಪ್ರತ್ರಗಳು ಎಷ್ಟೇ ಪಕ್ಕಾ ಇದ್ದರೂ, ಸೂಕ್ಷ್ಮ“ಹುಳುಕು’’ಗಳನ್ನು ಹುಡುಕಿ, ಅದನ್ನು ರಾಜಕೀಯ ದಾಳವನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಕೇಂದ್ರದ ಅದಿಕಾರಸ್ಥರು ನಿಷ್ಣಾತರೆನಿಸಿಕೊಂಡಿದ್ದಾರೆ. ಈ ಅರ್ಥದಲ್ಲಿ ನೋಡಿದರೆ,ದಾಳಿಗೆ ಪ್ರತಿಕ್ರಿಯಿಸುವಲ್ಲಿ ಯಾದವ್‌ ತುಸು ‘ಆತುರ’ ತೋರಿದ್ದಾರೆನಿಸುತ್ತೆ. ಹಲವು ಕಾಲದಿಂದ ಅವರು ಪ್ರತಿಪಾದಿಸುತ್ತಿರುವ ‘ನೈತಿಕ ಮೌಲ್ಯ’ ಈ ಘಟನೆ ಮೂಲಕ ಅವರನ್ನೇ ಪರೀಕ್ಷೆಗೆ ಒಡ್ಡಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More