ಅನ್ನಭಾಗ್ಯ ಅಕ್ಕಿ ಕಡಿತ ಇಲ್ಲ; ಸುಸ್ತಿ ಜೊತೆಗೆ ೧ ಲಕ್ಷ ರು. ಚಾಲ್ತಿ ಸಾಲಮನ್ನಾ

ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಸಿಎಂ ಎಚ್‌ಡಿಕೆ ನಿರ್ಧರಿಸಿದ್ದಾರೆ. ಸಹಕಾರಿ ಬ್ಯಾಂಕ್‌ಗಳಲ್ಲಿ ಚಾಲ್ತಿ ಸಾಲದ ಪೈಕಿ ೧ ಲಕ್ಷ ರು. ಸಾಲಮನ್ನಾಕ್ಕೆ ಅಸ್ತು ಎಂದಿದ್ದು, ವಿದ್ಯಾರ್ಥಿಗಳ ಉಚಿತ ಬಸ್‌ಪಾಸ್‌ ಬಗ್ಗೆ ತೀರ್ಮಾನ ಕೈಗೊಳ್ಳಲಿಲ್ಲ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆಯಲ್ಲಿ ಎರಡು ಕೆ ಜೆ ಅಕ್ಕಿ ಕಡಿತ ಮಾಡಿದ್ದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ತಮ್ಮ ತೀರ್ಮಾನದಿಂದ ಹಿಂದೆ ಸರಿದಿದ್ದು, ಎಂದಿನಿಂತೆ ಏಳು ಕೆ ಜಿ ಅಕ್ಕಿ ವಿತರಿಸಲು ನಿರ್ಧರಿಸಿರುವುದಾಗಿ ಬಜೆಟ್‌ ಅಧಿವೇಶನದ ಕೊನೆಯ ದಿನವಾದ ಗುರುವಾರ ಸದನದಲ್ಲಿ ಘೋಷಿಸಿದರು. ಅನ್ನಭಾಗ್ಯದಲ್ಲಿ ಅಕ್ಕಿ ಕಡಿತಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಕುಮಾರಸ್ವಾಮಿಗೆ ಪತ್ರ ಬರೆದು ಅನ್ನಭಾಗ್ಯ ಯೋಜನೆಯೊಂದಿಗೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದೇನೆ. ಅಕ್ಕಿ ಕಡಿತ ನಿರ್ಧಾರ ವಾಪಸ್ ಪಡೆಯುವಂತೆ ಮನವಿ ಮಾಡಿದ್ದರು. ಉಪಮುಖ್ಯಮಂತ್ರಿ ಜಿ ಪರಮೇಶ್ವರ, ಕಾಂಗ್ರೆಸ್‌ನ ಹಿರಿಯ ಶಾಸಕ ಎಚ್‌ ಕೆ ಪಾಟೀಲ್ ಸೇರಿದಂತೆ ಹಲವರು ಅಕ್ಕಿ ಕಡಿತ ಮಾಡುವ ಕುಮಾರಸ್ವಾಮಿ ಅವರ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಈಗ ಘೋಷಿಸಿರುವ ಸಾಲಮನ್ನಾದಿಂದ ರೈತರಿಗೆ ಅನುಕೂಲವಾಗುವಿದಿಲ್ಲ ಎಂಬ ರೈತರ ತೀವ್ರ ಅಸಮಾಧಾನವನ್ನು ಗಮನದಲ್ಲಿಟ್ಟುಕೊಂಡು ಕೃಷಿಕರು ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದಿರುವ ಚಾಲ್ತಿ ಸಾಲದಲ್ಲಿ ೧ ಲಕ್ಷ ರುಪಾಯಿ ವರೆಗೆ ಸಾಲಮನ್ನಾ ಮಾಡುವ ಹೊಸ ಪ್ರಸ್ತಾವವನ್ನು ಕುಮಾರಸ್ವಾಮಿ ಅವರು ಪ್ರಕಟಿಸಿದ್ದಾರೆ. ಇದರಿಂದ ಎಷ್ಟು ರೈತರಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಎಷ್ಟು ವೆಚ್ಚವಾಗಲಿದೆ ಎಂಬುದನ್ನು ಅವರು ವಿವರಿಸಲಿಲ್ಲ. ಈಗಾಗಲೇ ೩೪ ಸಾವಿರ ಕೋಟಿ ರುಪಾಯಿ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿರುವ ಕುಮಾರಸ್ವಾಮಿ ಅವರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಸರ್ಕಾರವು ಬ್ಯಾಂಕ್‌ಗಳಿಗೆ ಭದ್ರತೆ ಒದಗಿಸಲಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಅವರಿಗೆ ಸಾಲಮುಕ್ತ ಸರ್ಟಿಫಿಕೇಟ್‌ ದೊರೆತು, ಮತ್ತೆ ಬೆಳೆಸಾಲ ಪಡೆಯಲು ಅನುಕೂಲವಾಗುತ್ತದೆ. ಇನ್ನೊಂದು ವಾರದಲ್ಲಿ ಸಾಲದ ಸಂಪೂರ್ಣ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು ಎಂದು ಹೇಳಿದರು. ಆಗಸ್ಟ್‌ನಲ್ಲಿ ಮಹದಾಯಿ ನದಿ ನೀರಿಗೆ ಸಂಬಂಧಿಸಿದಂತೆ ನ್ಯಾಯಾಧೀಕರಣ ಕೈಗೊಳ್ಳುವ ತೀರ್ಪಿಗೆ ಪೂರಕವಾಗಿ ನದಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಸಂಬಂಧ ಕ್ರಮಕೈಗೊಳ್ಳಲಾಗುವುದು ಎಂದರು. ಕಾಂಗ್ರೆಸ್‌ ಶಾಸಕ ಎಚ್‌ ಕೆ ಪಾಟೀಲ್‌ ಅವರು ಮಹದಾಯಿ ನದಿ ನೀರು ಬಳಕೆ ಯೋಜನೆಗೆ ೨೦೦ ಕೋಟಿ ರುಪಾಯಿ ಮೀಸಲಿಡುವಂತೆ ಆಗ್ರಹಿಸಿದರು.

ಮತ್ತೊಂದು ಕಡೆ ಸಿದ್ದರಾಮಯ್ಯ ಅವರು ಫೆಬ್ರುವರಿಯಲ್ಲಿ ಮಂಡಿಸಿದ್ದ ಬಜೆಟ್ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವುದಾಗಿ ಘೋಷಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಸ್ಪಷ್ಟ ತೀರ್ಮಾನ ಪ್ರಕಟಿಸಲಿಲ್ಲ. ಇನ್ನು ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡುವಂತೆ ಸ್ಪೀಕರ್‌ ಕೆ ಆರ್‌‌ ರಮೇಶ್‌ ಕುಮಾರ್‌ ಮಾಡಿದ ಸಲಹೆಗೆ ಕುಮಾರಸ್ವಾಮಿ ಅವರು ಪರಿಶೀಲನೆ ನಡೆಸುವ ಭರವಸೆ ನೀಡಿದರು.

ಇದಕ್ಕೂ ಮುನ್ನ ರೈತರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಹಾಗೂ ಪ್ರತಿಪಕ್ಷದ ನಾಯಕ ಬಿ ಎಸ್‌ ಯಡಿಯೂರಪ್ಪ ನಡುವೆ ವಾಗ್ವಾದ ನಡೆಯಿತು. ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಎಷ್ಟು ಕೋಟಿ ರುಪಾಯಿ ಸಾಲಮನ್ನಾ ಮಾಡಲಾಗುತ್ತದೆ. ಇದರಿಂದ ಎಷ್ಟು ರೈತರಿಗೆ ಅನುಕೂಲವಾಗಲಿದೆ ಎಂಬುದರ ವಿವರ ನೀಡಬೇಕು. ಸ್ತ್ರೀಶಕ್ತಿ ಸಂಘಗಳು, ನೇಕಾರರು ಮತ್ತು ಮೀನುಗಾರರ ಸಾಲಮನ್ನಾ ಮಾಡಬೇಕು ಎಂದು ಯಡಿಯೂರಪ್ಪ ಸರ್ಕಾರವನ್ನು ಆಗ್ರಹಿಸಿದರು. ಆದರೆ, ಕುಮಾರಸ್ವಾಮಿ ಅವರು ಇದಕ್ಕೆ ಯಾವುದೇ ಉತ್ತರ ನೀಡಲಿಲ್ಲ. ಇದನ್ನು ವಿರೋಧಿಸಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು. ಪ್ರತಿಪಕ್ಷದ ಅನುಪಸ್ಥಿತಿಯಲ್ಲೇ ಹಲವು ವಿಧೇಯಕಗಳಿಗೆ ಸದನದಲ್ಲಿ ಒಪ್ಪಿಗೆ ಪಡೆಯಲಾಯಿತು. ಸದನದಲ್ಲಿನ ಕೇಳಿಬಂದ ಪ್ರಮುಖ ವಿಚಾರಗಳು ಇಂತಿವೆ.

ಇದನ್ನೂ ಓದಿ : ಸಿದ್ದರಾಮಯ್ಯ ಬಜೆಟ್‌ ಗತಿಯೇನು? ಕುಮಾರಸ್ವಾಮಿ ಬಜೆಟ್ ಸಾಂವಿಧಾನಿಕವೇ?
  • ಒಕ್ಕಲಿಗ ಸಮುದಾಯದವರಿಗೆ ಮಾತ್ರ ಹೆಚ್ಚು ಸಾಲಮನ್ನಾ ಆಗಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ನಿರಾಕರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಇದು ಆಧಾರವಿಲ್ಲದ ಆರೋಪ ಎಂದರು. ಬೆಳಗಾವಿ ವಲಯದಲ್ಲಿ ೯,೫೦೧ ಕೋಟಿ ರುಪಾಯಿ, ಬೆಂಗಳೂರು ವಲಯದಲ್ಲಿ ೬,೩೦೦ ಕೋಟಿ ರುಪಾಯಿ, ಕಲಬುರ್ಗಿ ವಲಯದಲ್ಲಿ ೫,೦೬೩ ಕೋಟಿ ರುಪಾಯಿ, ಮೈಸೂರು ವಲಯದಲ್ಲಿ ೬,೭೬೦ ಕೋಟಿ ಸಾಲಮನ್ನಾ ಮಾಡಲಾಗುತ್ತಿದೆ. ಇದರ ಜೊತೆಗೆ ಜಿಲ್ಲಾವಾರು ಸಾಲಮನ್ನಾವಾಗುತ್ತಿರುವ ಹಣದ ವಿವರ ನೀಡಿದ ಸಿಎಂ ಕುಮಾರಸ್ವಾಮಿ.
  • ವಿದ್ಯುತ್‌ ತೆರಿಗೆಯನ್ನು ಶೇ.೬ರಿಂದ ೯ಕ್ಕೆ ಏರಿಕೆ ಮಾಡಿರುವುದರಿಂದ ೧೮೮ ಕೋಟಿ ರುಪಾಯಿ ಸಂಗ್ರಹವಾಗಲಿದೆ. ಜನರು ಅಂದಾಜು ಪ್ರತಿ ತಿಂಗಳು ೧೦ ರುಪಾಯಿ ಹೆಚ್ಚಿಗೆ ಬಿಲ್‌ ಪಾವತಿ ಮಾಡುತ್ತಾರೆ. ಸಾಲಮನ್ನಾ ಹಾಗೂ ಇತರೆ ಬಾಬತ್ತಿಗೆ ಹಣ ಹೊಂದಿಸಲು ಶೇ.೦.೫ರಷ್ಟು ತೆರಿಗೆ ಹೆಚ್ಚಿಸಲಾಗಿದೆ.
  • ಸಹಕಾರಿ ಬ್ಯಾಂಕ್‌ಗಳಲ್ಲಿ ೧೦,೦೯೭ ಕೋಟಿ‌ ಚಾಲ್ತಿ ಸಾಲ ಬಾಕಿ ಇದ್ದು, ರೈತರ ಒಂದು ಲಕ್ಷದವರೆಗಿನ ಸಾಲಮನ್ನಾ. ೨೦೧೯ರ ಮಾರ್ಚ್‌ ೩೧ರ ವರೆಗಿನ ಲೇಖಾನುದಾನಕ್ಕೆ ಒಪ್ಪಿಗೆ.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More