ರಾಮಾಯಣ ಮಾಸದ ಕಾರ್ಯಕ್ರಮಗಳಿಗೆ ಬೆಂಬಲ ನೀಡಿ ಅಚ್ಚರಿಗೊಳಿಸಿದ ಸಿಪಿಐಎಂ

ರಾಮಾಯಣ ಮಾಸದಲ್ಲಿ ಸಂಸ್ಕೃತ ಪಂಡಿತರ ಗುಂಪು ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮಗಳಿಗೆ ಕೇರಳದ ಆಡಳಿತಾರೂಢ ಸಿಪಿಐಎಂ ಬೆಂಬಲ ನೀಡುತ್ತಿದೆ. ಪಕ್ಕಾ ನಿರೀಶ್ವರವಾದಿ ಪಕ್ಷದ ರಾಮಾಯಣ ಕುರಿತ ಈ ಆಸಕ್ತಿ ಬಗ್ಗೆ ‘ದಿ ಪ್ರಿಂಟ್‌’ನಲ್ಲಿ ಪ್ರಕಟವಾದ ಲೇಖನದ ಭಾವಾನುವಾದ ಇಲ್ಲಿದೆ

ಕರಾವಳಿ ರಾಜ್ಯ ಕೇರಳದಲ್ಲಿ ಇನ್ನೇನು ‘ಕರಿಕಿದಕಂ’ ಅಥವಾ ‘ರಾಮಾಯಣ ಮಾಸಂ’ ಆರಂಭವಾಗಲಿದೆ. ಮಲೆಯಾಳಿ ಪಂಚಾಂಗದ ಪ್ರಕಾರ ಇದು ವರ್ಷದ ಕೊನೆಯ ತಿಂಗಳು. ಜು.17ಕ್ಕೆ ಆರಂಭವಾಗಿ ಆ.16ಕ್ಕೆ ಕೊನೆಗೊಳ್ಳುತ್ತದೆ. ಸೂರ್ಯನು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರವೇಶಿಸುವ ಈ ಮಾಸದಲ್ಲಿ ಪಿತೃಗಳಿಗೆ ತರ್ಪಣ ನೀಡುವ ಅಥವಾ ಶ್ರಾದ್ಧ ಆಚರಿಸುವ ಕ್ರಿಯೆಗಳನ್ನು ನಡೆಸಲಾಗುತ್ತದೆ. ಜೊತೆಗೆ, ಇಡೀ ತಿಂಗಳು ಪವಿತ್ರ ಗ್ರಂಥ ರಾಮಾಯಣ ಪಾರಾಯಣದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಇದು ಒಂದು ರೀತಿ ಆಧ್ಯಾತ್ಮಿಕ ನಡೆಯ ಮೂಲಕ ಹೊಸ ವರ್ಷವನ್ನು ಸ್ವಾಗತಿಸುವ ರೀತಿ.

ಇದೇನೂ ವಿಶೇಷವಲ್ಲ, ಇದು ಪ್ರತಿವರ್ಷ ನಡೆಯುವ ಸಾಂಪ್ರದಾಯಿಕ ಆಚರಣೆ. ಆದರೆ, ಈ ಬಾರಿಯ ‘ಕರಿಕದಕಂ’ ಅಚ್ಚರಿಗೆ ಕಾರಣವಾಗಿರುವುದು ಕೇರಳದ ಆಡಳಿತಾರೂಢ ಪಕ್ಷವಾಗಿರುವ ಭಾರತೀಯ ಮಾರ್ಕ್ಸ್‌ವಾದಿ ಕಮ್ಯನಿಸ್ಟ್ (ಸಿಪಿಐಎಂ) ಪಕ್ಷದ ನಡೆ. ಸಂಸ್ಕೃತ ಪಂಡಿತರ ಒಂದು ಗುಂಪು ಮತ್ತು ಕೆಲ ಸಾಂಸ್ಕೃತಿಕ ಸಂಘಟನೆಗಳು ಈ ರಾಮಾಯಣ ಮಾಸಂನಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಸರಣಿ ಕಾರ್ಯಕ್ರಮಗಳಿಗೆ ಸಿಪಿಐ(ಎಂ) ಬೆಂಬಲ ನೀಡುತ್ತಿದೆ. ದೇವರಿಲ್ಲ ಎಂದು ಪ್ರತಿಪಾದಿಸುವ ಪಕ್ಕಾ ನಿರೀಶ್ವರವಾದಿ ಪಕ್ಷಕ್ಕೂ ರಾಮಾಯಣ ಮಾಸಂಗೂ ಎತ್ತಣದಿಂದೆತ್ತ ಸಂಬಂಧವಯ್ಯಾ ಎಂದು ಕೇಳುವಂತಾಗಿದೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಗಳ (ಆರೆಸ್ಸೆಸ್) ಧಾರ್ಮಿಕತೆ ಪ್ರಸರಣಾ ಕಾರ್ಯವನ್ನು ಪ್ರತಿರೋಧಿಸುವ ಹೆಜ್ಜೆಯಾಗಿ ಈ ಒಂದು ಪ್ರಯತ್ನ ಎಂಬುದು ಸಿಪಿಐ(ಎಂ) ಸ್ಪಷ್ಟನೆಯಾಗಿದೆ. ಆದರೆ, ಕೇರಳದಲ್ಲಿ ಬಿಜೆಪಿ ಬಲವರ್ಧನೆಯಾಗುತ್ತಿರುವ ಸಂದರ್ಭದಲ್ಲೇ ಸಿಪಿಐ(ಎಂ)ನ ನಡೆಯು ನಿರೀಶ್ವರವಾದಿ ಪಕ್ಷವು ತನ್ನ ನಿಲುವನ್ನು ಬದಲಿಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.

“ಕೋಮುವಾದದ ವಿರುದ್ಧದ ಹೋರಾಟದ ಭಾಗವಾಗಿ ಸಂಸ್ಕೃತ ಪಂಡಿತರು ಆಯೋಜಿಸುತ್ತಿರುವ ಕಾರ್ಯಕ್ರಮಗಳನ್ನು ಬೆಂಬಲಿಸಲಾಗುತ್ತಿದೆ. ಪಕ್ಷವಾಗಲೀ ಅಥವಾ ಸರ್ಕಾರವಾಗಲೀ ಅಧಿಕೃತವಾಗಿ ರಾಮಾಯಣ ಮಾಸಂ ಆಚರಿಸುವುದಿಲ್ಲ,” ಎಂಬುದಾಗಿ ಸಿಪಿಐ(ಎಂ) ರಾಜ್ಯ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ.

“ಧರ್ಮಗ್ರಂಥಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವ ಮತೀಯವಾದಿ ಶಕ್ತಿಗಳ ವಿರುದ್ಧ ಸಂಘಟಿತರಾಗಿರುವ ಸಂಸ್ಕೃತ ಪಂಡಿತರ ಸಂಘವೊಂದು ಸ್ವಯಂ ಆಸಕ್ತಿಯಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದೆ ಬಂದಿದೆ. ನಾವು ಅದಕ್ಕೆ ಬೆಂಬಲ ನೀಡುತ್ತಿದ್ದೇವಷ್ಟೆ. ಅದರಲ್ಲಿ ತಪ್ಪೇನಿದೆ? ಸಾಲದ್ದಕ್ಕೆ ಈ ಸಂಸ್ಕೃತ ಪಂಡಿತರಲ್ಲಿ ಬಹುತೇಕ ಮಂದಿ ನಮ್ಮ ಪಕ್ಷದ ಪರ ಸಹಾನುಭೂತಿ ಉಳ್ಳವರಾಗಿದ್ದಾರೆ. ಆದರೆ, ಇದು ಪಕ್ಷದ ಪ್ರಾಯೋಜಿತ ಕಾರ್ಯಕ್ರಮವಲ್ಲ,” ಎಂಬುದು ಕೇರಳದವರೇ ಆದ ಸಿಪಿಐ(ಎಂ) ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅವರು ‘ದಿ ಪ್ರಿಂಟ್’ ಜಾಲತಾಣಕ್ಕೆ ನೀಡಿರುವ ಸಮಜಾಯಿಷಿ.

“ಆರೆಸ್ಸೆಸ್ ಮತ್ತು ಬಿಜೆಪಿ ಈ ‘ರಾಮಾಯಣ ಮಾಸಂ’ ಅನ್ನು ಜನರಲ್ಲಿ ಮತೀಯ ಭಾವನೆ ಬೆಳೆಸಲು ಬಳಸಿಕೊಳ್ಳುತ್ತಿದೆ. ಅದಕ್ಕೆ ವಿರುದ್ಧವಾಗಿ ರಾಮಾಯಣವನ್ನೇ ಆಧರಿಸಿ ಕಾರ್ಯಕ್ರಮಗಳನ್ನು ಆಯೋಜಿಸಲು ಕೆಲ ಸಾಂಸ್ಕೃತಿಕ ವೇದಿಕೆಗಳು ಮತ್ತು ಪ್ರಾಜ್ಞರು ನಿರ್ಧರಿಸಿದ್ದಾರೆ. ಈ ಕಾರ್ಯವನ್ನು ಈ ಮೊದಲು ಸಹ ಮಾಡಲಾಗಿದೆ. ಮತೀಯವಾದದ ವಿರುದ್ಧ ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಹೋರಾಟದ ಅಂಗವಾಗಿ ಈ ಬಾರಿ ಸಿಪಿಐ(ಎಂ) ಅದಕ್ಕೆ ಬೆಂಬಲ ನೀಡುತ್ತಿದೆ. ಆ ಮೂಲಕ, ನಮ್ಮ ಸೈದ್ಧಾಂತಿಕ ಸಂಘರ್ಷವನ್ನು ಮತ್ತಷ್ಟು ತೀರ್ವಗೊಳಿಸುತ್ತಿದ್ದೇವೆ,” ಎಂಬುದು ಪಾಲಕ್ಕಾಡ್ ಸಂಸದರೂ ಆದ ಪಕ್ಷದ ರಾಜ್ಯ ಸಮಿತಿ ಸದಸ್ಯ ಎಂ ಬಿ ರಾಜೇಶ್ ಪ್ರತಿಪಾದನೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಮಲಯಾಳಿಗರೇಕೆ ಕೇರಳ ತಮ್ಮ ನಾಡೆನ್ನಲು ನಾಚಿಕೊಂಡರು?

“ರಾಮಾಯಣ ಮಾಸವಿಡೀ ಕಾರ್ಯಕ್ರಮ ಆಯೋಜಿಸುತ್ತಿರುವವರೆಲ್ಲರೂ ಮಾರ್ಕ್ಸ್‌ವಾದಿ ಬುದ್ಧಿಜೀವಿಗಳು. ಅದಕ್ಕೆ ನಾವು ಉತ್ತೇಜನ ನೀಡುತ್ತಿದ್ದೇವೆ. ಆದರೆ, ಇದು ಪಕ್ಷ ಅಥವಾ ಸರ್ಕಾರದ ಬ್ಯಾನರ್ ಅಡಿ ನಡೆಯುವುದಿಲ್ಲ. ಪಕ್ಷದ ನಿಲುವು ಧಾರ್ಮಿಕತೆಯೆಡೆಗೆ ವಾಲುತ್ತಿದೆ ಎಂಬ ಆರೋಪಗಳಲ್ಲಿ ಹುರುಳಿಲ್ಲ. ನಮ್ಮ ಈ ನಿಲುವಿಗೂ ಧರ್ಮಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಎಲ್ಲದಕ್ಕಿಂತ ಹೆಚ್ಚಿನದಾಗಿ ರಾಮಾಯಣ ಮತ್ತು ಮಹಾಭಾರತಕ್ಕೂ ಹಾಗೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಮುಂದಿನ ವರ್ಷ ಎದುರಾಗಲಿರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಹ ಈ ಕಾರ್ಯಕ್ಕೆ ಮುಂದಾಗಿಲ್ಲ,” ಎಂದು ಎಂ ಬಿ ರಾಜೇಶ್ ‘ದಿ ಪ್ರಿಂಟ್’ ಜಾಲತಾಣಕ್ಕೆ ಸುಧೀರ್ಘ ಪ್ರತಿಕ್ರಿಯೆ ನೀಡಿದ್ದಾರೆ.

ಹಾಗೆ ನೋಡಿದರೆ, ಸಿಪಿಐ(ಎಂ) ಧಾರ್ಮಿಕ ಆಚರಣೆಗಳೊಂದಿಗೆ ಗುರುತಿಸಿಕೊಳ್ಳಲು ಪ್ರಯುತ್ನಿಸುತ್ತಿರುವುದು ಇದು ಮೊದಲೇನಲ್ಲ. ಕೆಲ ವರ್ಷಗಳ ಹಿಂದೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಸಂಘಪರಿವಾರದ ಮೆರವಣಿಗೆಗೆ ಪ್ರತಿಯಾಗಿ ಸಿಪಿಐ(ಎಂ) ಸಹ ಪಥಸಂಚಲನ ಹಮ್ಮಿಕೊಂಡು ಜನ್ಮಾಷ್ಟಮಿ ಆಚರಿಸಿತ್ತು.

ಇಡೀ ದೇಶಾದ್ಯಂತ ನೆಲೆ ಕಂಡುಕೊಂಡಿರುವ ಬಿಜೆಪಿಗೆ ಈ ಕರಾವಳಿ ರಾಜ್ಯ ಕೇರಳ ಸವಾಲಾಗಿ ಉಳಿದಿರುವುದು ಸಿಪಿಐ(ಎಂ)ನಿಂದಾಗಿ ಮಾತ್ರ. ಆದರೆ, ಕೇರಳದಲ್ಲಿ ನಿಧಾನವಾಗಿ ಬಿಜೆಪಿ ಚಿಗುರುತ್ತಿರುವುದು ಸಿಪಿಐ(ಎಂ) ನಿದ್ದೆಗೆಡಿಸಿದೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿಯ ಓ ರಾಜಗೋಪಾಲ್ ವಿಧಾನಸಭೆ ಪ್ರವೇಶಿಸಿದ್ದಾರೆ.

ಸಿಪಿಐ(ಎಂ) ಭದ್ರನೆಲೆಯಾಗಿದ್ದ ತ್ರಿಪುರದಲ್ಲಿ ಇತ್ತೀಚೆಗಷ್ಟೇ ಮಾಣಿಕ್ ಸರ್ಕಾರ್ ಅವರ ಸರ್ಕಾರ ಪತನಗೊಂಡು ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಿದೆ. ಸಾಲದ್ದಕ್ಕೆ ಕಾಲು ಶತಮಾನದ ಕಾಲ ಕಮ್ಯುನಿಸ್ಟರ ಆಡುಂಬೋಲವಾಗಿದ್ದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ನಿಂದ ಇನ್ನಿಲ್ಲದಂತೆ ಬಗ್ಗುಬಡಿಯಲ್ಪಟ್ಟಿರುವ ಸಿಪಿಐ(ಎಂ)ಗೆ ಕೇರಳ ರಾಜ್ಯವನ್ನು ಉಳಿಸಿಕೊಳ್ಳುವುದು ಅಸ್ತಿತ್ವದ ಪ್ರಶ್ನೆಯಾಗಿದೆ.

ಈಗಿರುವ ಸಿಪಿಐ(ಎಂ)ನ ಒಂಬತ್ತು ಮಂದಿ ಸಂಸದರಲ್ಲಿ ಐವರು ಕೇರಳ ರಾಜ್ಯದಿಂದ ಆಯ್ಕೆಯಾಗಿ ಬಂದಿರುವವರು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಆದ್ದರಿಂದ, ಲೋಕಸಭಾ ಚುನಾವಣೆ ಹೊಸಿಲಲ್ಲಿರುವಾಗ ಬಿಜೆಪಿಗೆ ಒಂದು ಸಣ್ಣ ಅವಕಾಶವನ್ನೂ ಬಿಟ್ಟುಕೊಡಬಾರದೆಂಬ ಎಚ್ಚರಿಕೆಯನ್ನು ಸಿಪಿಐ(ಎಂ) ವಹಿಸುತ್ತಿರುವಂತೆ ಕಾಣುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More