ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಆಗ್ರಹ ಹೆಚ್ಚಲು ಬಜೆಟ್ ಕಾರಣವಾಯಿತೇ?

ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ಮಂಡಿಸಿದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಉ.ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ. ಜೊತೆಗೇ, ಉ.ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕು ಎಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಟೀಕೆ ಕೇಳಿಬರುತ್ತಿದೆ. ಇದರ ಬೆನ್ನಿಗೇ, ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕು ಎಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.

ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಉತ್ತರ ಕರ್ನಾಟಕ ಜನಜಾಗೃತಿ ವೇದಿಕೆ, ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮುಂದಿಟ್ಟಿದೆ. ಹಾಗೆಯೇ, ಉತ್ತರ ಕರ್ನಾಟಕ ರೈತ ಸಂಘದ ರಾಜ್ಯ ಘಟಕ ಅಧ್ಯಕ್ಷ ಬಸವರಾಜ ಕರಿಗಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ, “ಕುಮಾರಸ್ವಾಮಿ ಅವರ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಹೀಗಾಗಿ, ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲಿದ್ದೇವೆ,” ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ, ಈ ವಿಚಾರಕ್ಕೆ ಕೆಲವು ಶಾಸಕರು ಬೆಂಬಲ ಸೂಚಿಸಿದ್ದಾರೆ. ಅವರು ನೀಡಿರುವ ಹೇಳಿಕೆಗಳು ಈ ಹೋರಾಟಕ್ಕೆ ಪ್ರೇರಣೆ ನೀಡಿವೆ. ಕೆಲವರಂತೂ ನೇರವಾಗಿಯೇ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಯನ್ನು ಬೆಂಬಲಿಸಿದ್ದಾರೆ. ಈ ವಿಷಯದಲ್ಲಿ ದನಿ ಎತ್ತಿರುವ ರಾಜಕೀಯ ನಾಯಕರು ಹಾಗೂ ಪ್ರಮುಖರು ಹೇಳಿರುವುದೇನು? ಇಲ್ಲಿದೆ ಮಾಹಿತಿ.

ಪ್ರತ್ಯೇಕ ರಾಜ್ಯ ಬೇಡಿಕೆಗೆ ಬೆಂಬಲ ಸೂಚಿಸಿದ ಶ್ರೀರಾಮುಲು

ವಿಧಾನಸಭೆಯಲ್ಲಿ ಸೋಮವಾರ ನಡೆದ ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಬಿಜೆಪಿ ಶಾಸಕ ಬಿ ಶ್ರೀರಾಮುಲು ಮಾತನಾಡುವಾಗ, “ಸಿಎಂ ಕುಮಾರಸ್ವಾಮಿ ಅವರು ಜೆಡಿಎಸ್ ಸೋತಿರುವ ಕ್ಷೇತ್ರಗಳ ಮೇಲೆ ಸೇಡು ತಿರಿಸಿಕೊಳ್ಳಲು ಬಜೆಟ್‌ ಅನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಬಿಜೆಪಿ ಗೆಲವು ಸಾಧಿಸಿದ ಕ್ಷೇತ್ರಗಳಿಗೆ ಸಮರ್ಪಕ ಯೋಜನೆ ಹಾಗೂ ಅನುದಾನ ನೀಡದೆ ನಿರ್ಲಕ್ಷಿಸಿದ್ದಾರೆ. ಹೀಗಾಗಿ, ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಯನ್ನು ಬೆಂಬಲಿಸುತ್ತಿದ್ದೇನೆ,” ಎಂದು ಹೇಳಿದ್ದಾರೆ.

ಬಹಿರಂಗ ಅಸಮಾಧಾನ ಹೊರಹಾಕಿದ ಶಾಸಕ ಎಚ್ ಕೆ ಪಾಟೀಲ್

ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ಸಿನ ಹಿರಿಯ ಶಾಸಕ ಎಚ್ ಕೆ ಪಾಟೀಲ್, "ಸಿಎಂ ಕುಮಾರಸ್ವಾಮಿ ಅವರು ಬಜೆಟ್ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತ ಬಹಿರಂಗ ಅಸಮಾಧಾನ ಹೊರಹಾಕಿದ್ದರು. “ಕುಮಾರಸ್ವಾಮಿ ಅವರ ಬಜೆಟ್‌ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಯಾವುದೇ ಯೋಜನೆಗಳಾಗಲೀ, ಸಮರ್ಪಕ ಅನುದಾನವಾಗಲೀ ಬಜೆಟ್‌ನಲ್ಲಿ ಇಲ್ಲ,” ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ಈ ಕುರಿತು ಮುಖ್ಯಮಂತ್ರಿಗಳಿಗೆ ಎಚ್ ಕೆ ಪಾಟೀಲ್ ಅವರು ಸುದೀರ್ಘ ಪತ್ರ ಕೂಡ ಬರೆದಿದ್ದರು.

ಸಂಸದ ಪ್ರಹ್ಲಾದ್ ಜೋಶಿ ಟೀಕೆ

ಸಮ್ಮಿಶ್ರ ಸರ್ಕಾರದ ಬಜೆಟ್ ವಿಚಾರವಾಗಿ ಸಂಸದ ಪ್ರಹ್ಲಾದ್ ಜೋಶಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, “ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ಹೀಗೆಯೇ ಅನ್ಯಾಯ ಮಾಡಿದ್ದರು. ಈಗ ಕುಮಾರಸ್ವಾಮಿ ಅವರು ಕೂಡ ಆ ಅನ್ಯಾಯವನ್ನು ಮುಂದುವರಿಸಿದ್ದಾರೆ,” ಎಂದು ಜೆಡಿಎಸ್ ವಿರುದ್ಧ ಅವರು ಆರೋಪಿಸಿದ್ದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದ ಶಾಸಕ ನಡಹಳ್ಳಿ

ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಕೂಡ ಕುಮಾರಸ್ವಾಮಿ ಮಂಡಿಸಿದ ಬಜೆಟ್ ವಿಚಾರವಾಗಿ ಅಸಮಾಧಾನ ಹೊರಹಾಕಿದ್ದಾರೆ. “ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಉತ್ತರ ಕರ್ನಾಟಕದ ಜನರಿಗೆ ಅನ್ಯಾಯವಾಗಿದೆ,” ಎಂದು ಹೇಳಿದ್ದರು.

ಇದನ್ನೂ ಓದಿ : ಬಜೆಟ್ ವಿಶ್ಲೇಷಣೆ | ಅಹಿಂದದಾಚೆಯ ಮತಬುಟ್ಟಿಗೂ ಕೈಹಾಕಿ ಗಮನ ಸೆಳೆದ ಎಚ್‌ಡಿಕೆ

ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟಕ್ಕೆ ಪ್ರೇರಣೆ

ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಬಗ್ಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿ ಪಿ ಲಿಂಗನಗೌಡ ಅಸಮಾಧಾನ ವ್ಯಕ್ತಪಡಿಸುತ್ತ, “ದಕ್ಷಿಣ ಕರ್ನಾಟಕಕ್ಕೆ ಹೆಚ್ಚು ಅನುಕೂಲವಾಗುವಂತೆ ಬಜೆಟ್ ಮಂಡಿಸಲಾಗಿದೆ. ಉತ್ತರ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಯಾವ ರೀತಿಯಲ್ಲೂ ನ್ಯಾಯ ಸಿಕ್ಕಿಲ್ಲ. ಪ್ರಾದೇಶಿಕ ಅಸಮಾನತೆ ಸರಿಹೋಗಲು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಗೆ ಬಲ ತುಂಬಬೇಕಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಹೋರಾಟಕ್ಕೆ ಮುಂದಾಗಬೇಕಿದೆ,” ಎನ್ನುವ ಮೂಲಕ ಈ ಹೋರಾಟದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ಪೇಜಾವರ ಶ್ರೀಗಳಿಂದ ಕೂಡ ಅಸಮಾಧಾನ

“ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗಿದ್ದು, ಇದು ವೈಯಕ್ತಿಕವಾಗಿ ನನಗೆ ಬೇಸರ ತಂದಿದೆ,” ಎಂದು ಬಾಗಲಕೋಟೆಯಲ್ಲಿ ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದು, ಉತ್ತರ ಕರ್ನಾಟಕ ರಾಜ್ಯದ ಬೇಡಿಕೆ ಇಟ್ಟವರಿಗೆ ಬಲ ನೀಡಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More