‘ನನ್ನ ಡೆಡ್ ಬಾಡಿ ಕೂಡ ಬಿಜೆಪಿಗೆ ಹೋಗಲ್ಲ’ ಎಂದ ಮಾಜಿ ಸಚಿವ ಎಚ್‌ ಸಿ ಮಹದೇವಪ್ಪ

ಚುನಾವಣೆಯ ಸೋಲಿನ ಬಳಿಕ ಸಾರ್ವಜನಿಕ ಮತ್ತು ಪಕ್ಷದ ವೇದಿಕೆಗಳಲ್ಲಿ ಕಾಣಿಸಿಕೊಳ್ಳದೆ ಅನೇಕ ಉಹಾಪೋಹಗಳಿಗೆ ಕಾರಣವಾಗಿದ್ದ ಮಾಜಿ ಸಚಿವ ಎಚ್‌ ಸಿ ಮಹದೇವಪ್ಪ ಮೌನ ಮುರಿದಿದ್ದಾರೆ; ಸಿದ್ದರಾಮಯ್ಯ ಜೊತೆ ಸಂಬಂಧ ಹಳಿಸಿಲ್ಲ, ಬಿಜೆಪಿಗೆ ಹೋಗುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

ಚುನಾವಣೆಯ ಸೋಲಿನ ಬಳಿಕ ಯಾವುದೇ ಸಾರ್ವಜನಿಕ ಮತ್ತು ಪಕ್ಷದ ವೇದಿಕೆಗಳಲ್ಲಿ ಕಾಣಿಸಿಕೊಳ್ಳದೆ, ಪ್ರತಿಕ್ರಿಯೆಯನ್ನೂ ನೀಡದೆ ಹಲವು ಬಗೆಯ ಉಹಾಪೋಹಗಳಿಗೆ ಕಾರಣವಾಗಿದ್ದ ಮಾಜಿ ಸಚಿವ ಎಚ್‌ ಸಿ ಮಹದೇವಪ್ಪ ಕೊನೆಗೂ ಮೌನ ಮುರಿದಿದ್ದಾರೆ. “ಮೂರೂವರೆ ದಶಕದ ಸಿದ್ದರಾಮಯ್ಯ ಮತ್ತು ಮಹದೇವಪ್ಪ ಸಂಬಂಧ ಹಳಸಿದೆಯಂತೆ,’’ “ಮಹದೇವಪ್ಪ ಬಿಜೆಪಿ ಸೇರಿ, ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರದಿಂದ ಅಭ್ಯರ್ಥಿಯಾಗುತ್ತಾರಂತೆ,’’ ಎನ್ನುವ ವದಂತಿಗಳನ್ನು ಅವರು ನಿರಾಕರಿಸಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ನೀಡಿದ ಪ್ರತಿಕ್ರಿಯೆಗಳು ಹೀಗಿದ್ದವು:

  • ಯಾವುದೇ ಕಾರಣಕ್ಕೂ ಬಿಜೆಪಿ ಸೇರಲ್ಲ. ನನ್ನ ಡೆಡ್ ಬಾಡಿ ಕೂಡ ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿಗೆ ಹೋಗುತ್ತೇನೆಂದು ಕೆಲವರು ಭಾವಿಸಿದ್ದರೆ ಅದು ಅವರ ಭ್ರಮೆ.
  • ನಾನು ಕಾಂಗ್ರೆಸ್ ಮೂಲಕ ರಾಜಕೀಯ ಆರಂಭಿಸಿದವನು. ಕಾಂಗ್ರೆಸ್ ಪಕ್ಷದಲ್ಲೇ ನನ್ನ ರಾಜಕೀಯ ಅಂತ್ಯವಾಗಲಿದೆ. ಸಿದ್ಧಾಂತ ಇಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದೇನೆಯೇ ಹೊರತು, ಅಧಿಕಾರಕ್ಕಾಗಿ ಬಂದವನಲ್ಲ. ರಾಜಕೀಯ ಮರಕೋತಿ ಆಟ ಅಲ್ಲ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ.
  • ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿರುವವರು ಈ ರೀತಿಯ ಪಿತೂರಿ ಮಾಡುತ್ತಿದ್ದಾರೆ. ನನ್ನನ್ನು ಪಕ್ಷದಿಂದ ಹೊರಗೆ ಕಳುಹಿಸಿ ತಾವು ನಾಯಕರಾಗಿ ಮೆರೆಯಬೇಕೆಂದು ಬಯಸಿದ್ದಾರೆ. ಯಾರೋ ಹೇಳಿದ ಮಾತಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಸಂಘಟಿಸಿ, ಭದ್ರಪಡಿಸುತ್ತೇನೆ.
  • ನನ್ನ ಮತ್ತು ಸಿದ್ದರಾಮಯ್ಯ ನಡುವಿನ ಸಂಬಂಧ ಹಳಸಿದೆ ಎನ್ನುವುದು ಕೂಡ ಕಟ್ಟುಕತೆ. ಸಂಬಂಧ ಹಳಸಿದೆ ಎಂದು ನಾನಾಗಲೀ ಅವರಾಗಲೀ ಹೇಳಿದ್ದೀವಾ?
  • ಸಿದ್ದರಾಮಯ್ಯ ಮತ್ತು ನನಗೆ ಇಷ್ಟು ಹೀನಾಯ ಸೋಲಾಗುತ್ತದೆಂದು ನಿರೀಕ್ಷಿಸಿರಲಿಲ್ಲ. ಈ ಮೊದಲು ಎರಡು ಬಾರಿ ಸೋತಿದ್ದೇನೆ. ಆದರೆ, ಈ ಬಾರಿಯ ಸೋಲಿನ ಅಂತರ (೨೮,೦೦೦) ಚಕಿತಗೊಳಿಸಿತು. ಹಿಂದೆಂದೂ ಮಾಡದಷ್ಟು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರಕ್ಕೆ ಮಾಡಿಯೂ ಸೋತದ್ದು ನೋವು ತಂದಿತು.
  • ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಐದು ವರ್ಷ ಹಗರಣರಹಿತ ಸರ್ಕಾರ ನೀಡಿತ್ತು. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿತ್ತು. ಸಂವಿಧಾನದ ಆಶಯಗಳಂತೆ ಕಾರ್ಯ ನಿರ್ವಹಿಸಿತ್ತು. ಆಡಳಿತ ವಿರೋಧಿ ಅಲೆ ಇರಲಿಲ್ಲ. ಕಾಂಗ್ರೆಸ್ ೧೨೦ ಕ್ಷೇತ್ರಗಲ್ಲಿ ಗೆಲ್ಲುವ ವಿಶ್ವಾಸವಿತ್ತು. ಚುನಾವಣೆಗೆ ಮೂರ್ನಾಲ್ಕು ದಿನಗಳು ಬಾಕಿಯಿರುವಾಗ ಎಲ್ಲವೂ ಬುಡಮೇಲಾಯಿತು.
  • ಅಭಿವೃದ್ಧಿಯ ಮೇಲೆ ಜಾತಿ ಸವಾರಿ ಮಾಡಿತು. ಜಾತಿ ಸಮೀಕರಣ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೂಲೆಗುಂಪು ಮಾಡಿತು. ಇದು ಮನಸ್ಸಿಗೆ ತುಂಬಾ ನೋವು ಉಂಟುಮಾಡಿದೆ. ನನ್ನ ಸೋಲಿಗಿಂತಲೂ ಪಕ್ಷದ ಸೋಲು ಹೆಚ್ಚು ಆಘಾತ ತಂದಿದೆ. ಯಾರು ಜಾತಿ ರಾಜಕಾರಣ ಮಾಡಿದ್ದಾರೆ ಎಂದು ನಿಮಗೂ (ಮಾಧ್ಯಮದವರಿಗೂ) ಗೊತ್ತಿದೆ.
  • ನನ್ನ ಸೋಲಿಗೆ ಜೆಡಿಎಸ್ ಕಾರಣವಲ್ಲ. ನನ್ನ ಮಗನ ಹೆಸರು ಕ್ಷೇತ್ರಕ್ಕೆ ಕೇಳಿಬಂದಿದ್ದಕ್ಕೂ ಸೋಲಿಗೂ ಸಂಬಂಧವಿಲ್ಲ. ಬಿಜೆಪಿ ತಾನು ಗೆಲ್ಲಲಾಗದ ಕ್ಷೇತ್ರಗಳಲ್ಲಿ ತನ್ನ ಮತಗಳನ್ನು ಜೆಡಿಎಸ್‌ಗೆ ವರ್ಗಾವಣೆ ಮಾಡಿದ್ದೇ ಕಾರಣ. ರಾಷ್ಟ್ರೀಯ ಪಕ್ಷವಾಗಿ ಅದು ೨೮ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದೆ.
  • ಸೋಲಿನ ನಂತರ ದಿಗ್ಭ್ರಮೆಗೊಳಗಾಗಿದ್ದೆ. ಆಘಾತದಿಂದ ಚೇತರಿಸಿಕೊಳ್ಳಲು ಸಮಯ ಹಿಡಿಯಿತು. ಇದಲ್ಲದೆ, ಐದು ವರ್ಷ ಬಿಡುವಿಲ್ಲದೆ ಪಕ್ಷ ಹಾಗೂ ಸರ್ಕಾರದ ಕೆಲಸಗಳಲ್ಲಿ ಪಾಲ್ಗೊಂಡಿದ್ದರಿಂದ ಆರೋಗ್ಯದ ಕಡೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಆರೋಗ್ಯ ಪುನಶ್ಚೇತಕ್ಕೆ ೧೫ ದಿನ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದೆ. ಆದ್ದರಿಂದ, ಈ ಸಂದರ್ಭ ನಡೆದ ಪಕ್ಷದ ಸಭೆಗಳಲ್ಲಿ ಭಾಗವಹಿಸಲಾಗಲಿಲ್ಲ.
  • ನಾನು ಎಲ್ಲೂ ಕಾಣೆಯಾಗಿಲ್ಲ. ಬೆಂಗಳೂರು, ಮೈಸೂರು, ತಿ ನರಸೀಪುರದಲ್ಲೇ ಓಡಾಡಿಕೊಂಡಿದ್ದೇನೆ. ಬೆಂಗಳೂರಿನಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಬೇಕಿತ್ತು. ತೀವ್ರ ಜ್ವರದ ಕಾರಣ ಪಾಲ್ಗೊಳ್ಳಲಾಗಲಿಲ್ಲ.
ಇದನ್ನೂ ಓದಿ : ನಾನೇಕೆ ಸೋತೆ? | ಬಿ ಆರ್‌ ಪಾಟೀಲ್‌ | ಅತಿಯಾದ ಆತ್ಮವಿಶ್ವಾಸದಿಂದ ಹೀಗಾಯಿತು

ರಾಜಕೀಯವಾಗಿ ಎದ್ದಿರುವ ಅನೇಕ ಅನುಮಾನಗಳಿಗೆ ಮಹದೇವಪ್ಪ ಸ್ಪಷ್ಟನೆ ನೀಡುವ, ವದಂತಿಗಳನ್ನು ನಿರಾಕರಿಸುವ ಪ್ರಯತ್ನ ಮಾಡಿದರಾದರೂ,“ಎಲ್ಲವೂ ಸರಿ ಇಲ್ಲ,’’ ಎನ್ನುವುದು ಅವರ ಕೆಲವು ಮಾತಗಳಲ್ಲಿ ವ್ಯಕ್ತವಾಗದೆ ಇರಲಿಲ್ಲ. “ನಿಮ್ಮ ಸೋಲಿಗೆ ನಿಮ್ಮ ಪಕ್ಷದವರೇ ಪಿತೂರಿ ಮಾಡಿದ್ದರಂತೆ,’’ ಎನ್ನುವ ಪ್ರಶ್ನೆಗೆ, “ಇದರಲ್ಲಿ ಯಾವುದನ್ನೂ ನಾನು ತಳ್ಳಿಹಾಕುವುದಿಲ್ಲ. ಯಾರು ಈ ಕೆಲಸ ಮಾಡಿದ್ದಾರೆ ಎಂಬುದು ನಿಮಗೇ ಗೊತ್ತಿರಬೇಕಲ್ಲ?’’ ಎಂದು ಮಾರ್ಮಿಕವಾಗಿ ಮರುಪ್ರಶ್ನೆ ಹಾಕಿದರು. “ಈ ಬಗ್ಗೆ ಪಕ್ಷದ ವೇದಿಕೆಯಲ್ಲಿಯೇ ಮಾತನಾಡುತ್ತೇನೆ,” ಎಂದೂ ಸೇರಿಸಿದರು. ಆದರೆ, ಚುನಾವಣಾ ಫಲಿತಾಂಶ ಪ್ರಕಟವಾಗಿ ಎರಡು ತಿಂಗಳು ಕಳೆದರೂ ಪಕ್ಷದ ಯಾವುದೇ ಸಭೆಗಳಲ್ಲಿ ಭಾಗವಹಿಸಿಲ್ಲ. ಮೂರೂವರೆ ದಶಕಗಳ ಕಾಲ ರಾಜಕೀಯವನ್ನು ಮೀರಿದ ಸ್ನೇಹ, ವಿಶ್ವಾಸ ಹೊಂದಿದ್ದ ಸಿದ್ದರಾಮಯ್ಯ-ಮಹದೇವಪ್ಪ ಫಲಿತಾಂಶದ ಬಳಿಕ ಒಮ್ಮೆಯೂ ಮುಖ ಕೊಟ್ಟು ಮಾತನಾಡಿಲ್ಲ. ಮಹದೇವಪ್ಪ ಸುತ್ತ ಊಹಾಪೋಹಗಳು ಹಬ್ಬಲು ಇಂಥ ಅಂಶಗಳೇ ಕಾರಣ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More